Posts

Showing posts from 2017

ಸೌಂಡು

ಎದೆಯ ಕದವ ಯಾರೋ ಬಡಿದಂತೆ ಸೌಂಡು. ಯಾರಿದ್ದೀರಾ ಎಂಬ ದನಿ, ಮತ್ತೆ ಬಡಿದಂತೇ ಸೌಂಡು. ಬಾಗಿಲಲಿ ನಿಂತವರಾರು? ಅದು ಅವಳೇ ಇರಬೇಕು, ಅಷ್ಟುದ್ದ ಕೇಶ ಯಾರಿಗಿದೆ! ಮತ್ತೆ ಸೌಂಡು. ಇಲ್ಲೇನು ಕೆಲಸ? ಕನಸ ಕೊಲೆ ಮಾಡಿದ ಸಾಕ್ಷಿ ನಾಷಕೆ ಬಂದಳೇ, ಕೊಲೆ ಮಾಡಿದ ಸಂತೋಷ ಕೂಟಕೋ? ಮತ್ತೆ ಸೌಂಡು, ಟಕ್ ಟಕ್... ಚಿಲಕ ತೆಗೆದ ಶಬ್ಧ, ಒಳಗೇ ಬಂದಳು! ಟಕ್ ಟಕ್ ಚಪ್ಪಲಿಯ ಸದ್ದು, ಚಪ್ಪಲಿ ಬಿಚ್ಚಿಟ್ಟು ಬಾ ಅನ್ನಲೇ? ಅಂದರೆ ಆಹ್ವಾನ ಕೊಟ್ಟಂತೆ! ಟಕ್ ಟಕ್ ಸೌಂಡು ಅರೆ ಶಬ್ಧ ಮಾಯ! ಎದೆಯ ಮಾಂಸಲದಲ್ಲಿ ಚಪ್ಪಲಿಯ ಮುಳ್ಳು ಚುಚ್ಚಿರಬೇಕು! ನನ್ನದೇ ಎದೆ, ಆದರೂ ನೋವಿಲ್ಲ! ಎದೆಯ ಜಗುಲಿಯಲ್ಲಿ ಸೌಂಡು, ಕೊಲೆಯ ಕಲೆ ಅಳಿಸಿದ ಸೌಂಡು, ನೆನಪು ಸಾಕ್ಷಿ ನಾಷಕ, ಬದುಕ ವಿನಾಷಕ! ಪ್ರೀತಿ ವಿದೂಷಕ.

ಬೆಂಗ್ಳೂರು

"ಇದು ಬೆಂಗ್ಳೂರು ಅಪ್ಪಾ, ಇಲ್ಲಿ ಉತ್ಪಾದನೆಯಷ್ಟೇ ಆಗುತ್ತೆ ಸೃಷ್ಠಿಯಲ್ಲ" ಅಣ್ಣನ ಮದುವೆಯಾಗಿ ಮೂರುವರ್ಷವೇ ಕಳೆದರೂ ಮಕ್ಕಳಾಗದ್ದರ ಬಗ್ಗೆ ಅಪ್ಪನ ಜಿಜ್ಞಾಸೆಗೆ ಅಣ್ಣನ ಉತ್ತರ ಸೂಚ್ಯವಾಗಿ ಪೇಟೆಯ ಬದುಕಿನೆಡೆಗಿನ ತಾತ್ಸಾರವನ್ನು ಸೂಚಿಸುತ್ತಿತ್ತು. ಅಣ್ಣ ಮಾಡಿದ ಮ್ಯಾನೇಜ್ಮೆಂಟ್ ಮಾಸ್ಟರ್ ಪದವಿಗೆ ದಿನಕ್ಕೆ ಬರೀ ಹದಿನಾರು ಘಂಟೆಗಳಷ್ಟೇ ಕೆಲಸಮಾಡುವ ನೌಕರಿ ಸಿಕ್ಕಿತ್ತು ಅನ್ನೋದು ಇತಿಹಾಸ. ಅಣ್ಣನಿಗೋ ಮನೆಕಡೆ ತೋಟಗಳ ಮಧ್ಯೆ ಬದುಕೋದೇ ಇಷ್ಟವಾಗಿತ್ತು. ಆದರೆ ಅಪ್ಪನಿಗೋ ತನ್ನ ಮಗ ತಿಂಗಳಿಗೆ ಐದಂಕಿಯ ಸಂಬಳ ಪಡೆಯುವ ಉದ್ಯೋಗಿ ಎಂಬ ಜಂಭವೇ ಇಷ್ಟವಾಗಿತ್ತು. ಅವನಿಷ್ಟದಂತೇ ಎಂ.ಬಿ.ಎ ಮುಗಿಸಿ ಬೆಂಗಳೂರೆಂಬ ಬದುಕ ಕಾರ್ಖಾನೆಯಲ್ಲಿ ಪ್ರತಿಷ್ಠಾಪಿತನಾದ. ಅಪ್ಪನಿಗೂ ವಯಸ್ಸಾಯಿತು, ಸಮಯ ಕಳೆದಂತೆ ಆಸೆಗಳು ಬದಲಾಗುತ್ತವಂತೆ, ಈಗ ಅಪ್ಪನಿಗೆ ಮೊಮ್ಮಕ್ಕಳ ಬಳಿ ತನ್ನ ಮೀಸೆ ಎಳೆಸಿಕೊಳ್ಳೋ ಹಂಬಲ. ಇತಿಹಾಸ ಆಸೆಗಳಂತೆ ಬದಲಾಗುವುದಿಲ್ಲ ಎಂಬ ಅನುಭವ ಅಪ್ಪನಲ್ಲಿ ನಿರಾಸೆ ಮೂಡಿಸಿದೆ. ಒಂದು ಪಡೆಬೇಕೆದರೆ ಒಂದನ್ನು ಕಳೆದುಕೊಳ್ಳಲೇಬೇಕು ಅಲ್ವಾ...

ಮಾಯಾ!

ಅವಳು ಇದ್ದಕ್ಕಿದ್ದಂಕೇ ಮಾಯವಾದವಳು, ಇದ್ದಕ್ಕಿದ್ದಂತೇ ಪ್ರತ್ಯಕ್ಷವಾದವಳು! ಅವಳಾಗೇ ಬಿಟ್ಟು ಹೋದಾಗ ಅಯ್ಯೋ ಹೋದಳಲ್ಲಾ ಎಂಬ ನೋವಿಗಿಂತಾ ಎಲ್ಲಿ ಹೋದಳು ಅನ್ನೋ ಚಿಂತೇನೇ ಜಾಸ್ತಿಯಾಗಿತ್ತು. ಅವಳು ವಾಪಸ್ಸು ಬಂದಾಗ ಎರಡು ಸುಧೀರ್ಘ ವಸಂತಗಳು ಉರುಳಿದ್ದವು. ಆ ವಸಂತಗಳಲ್ಲಿ ಅದೆಷ್ಟೋ ಘಟನೆಗಳ ನಡುವೆ ಅವಳ ನೆನಪು ವಿಶ್ರಾಂತಿ ತೆಗೆದುಕೊಂಡಿತ್ತು. ಈಬಾರಿ ಅವಳ ಕಥೆ ಕೇಳುವ ಮನಸ್ಸು ನನ್ನದಾಗಿರ್ಲಿಲ್ಲ. ಬದುಕು ಅವಳ ಪಾವಿತ್ರ್ಯವನ್ನು ಶಂಕಿಸಿತ್ತು. ಒಳ್ಳೆಯತನ ಅನ್ನೋದು ತೀರಾ ಆಪ್ತರಿಗೆ ಅಪಥ್ಯ. ಅವಳು ಜಗತ್ತಿನ ಎಲ್ಲಾ ಒಳ್ಳೆಯತನವನ್ನ ನನ್ನಲ್ಲಿ ನಿರೀಕ್ಷಿಸಿ ಎದುರಿಗೆ ನಿಂತದ್ದು ಕಾಣುತ್ತಿತ್ತು. ನನ್ನೆಲ್ಲಾ ಪ್ರಶ್ನೆಗಳನ್ನು ಮಾನವೀಯತೆಯ ಮುಖವಾಡದಲ್ಲಿ ಅಡಗಿಸಿಟ್ಟು ಅವಳನ್ನು ಸ್ವಾಗತಿಸಿದೆ.ಎಂದಿಗೂ ಆ ಎರಡು ವರ್ಷದ ಅವಳ ಬದುಕನ್ನು ಪ್ರಶ್ನಿಸಲೇ ಇಲ್ಲ...

ರಿಪ್ಲೈ

ಅನಾಮತ್ತು ನೂರೈವತ್ತು ಬಾರಿ ಮೆಸೇಜಿಸಿದ್ರೂ ಆಕಡೆಯಿಂದ ರಿಪ್ಲೈ ಬರದಿರೋದ ನೋಡಿ ಅವಳ ಮನೆ ಕಡೆಯೇ ಹೊರಟ. ಎರಡು ದಿನಗಳಿಂದ ಪತ್ತೆಯೇ ಇಲ್ರಾ ಏನು ಕಥೆ ಎಂದು ದಬಾಯಿಸಿ ತನಗೆ ಅವಳ ಮೇಲಿರೋ ಮಮಕಾರವನ್ನ ಷೋ ಮಾಡಬೇಕು, ಅದನ್ನು ಕಂಡು ಆಕೆ ಇವನ ಪ್ರೀತಿಯಲ್ಲಿ ಮುಳುಗಬೇಕು ಅನ್ನೋ ಆಸೆ ಆತನದ್ದಾಗಿತ್ತು ಅನ್ಸುತ್ತೆ. ಮದ್ಯ ದಾರಿಯಲ್ಲೇ ಆಕೆ ಸಿಕ್ಕಿಬಿಟ್ಲು! "ನಂಗೇಕೆ ರಿಪ್ಲೈ ಮಾಡ್ತಿಲ್ಯಾ? ಏನಾದ್ರೂ ತಪ್ಪಾಯ್ತಾ?" ಅಂತಾ ಕೇಳಿಯೂಬಿಟ್ಟ. "ಬಾ ಪೋಲಿಸ್ ಸ್ಟೇಷನ್ನಿಗೆ ಹೋಗೋಣ" ಅಂದ್ಲು. ಇದೇನಪ್ಪಾ ಗ್ರಹಚಾರ, ಯಾರಾದ್ರೂ ಮಾಡ್ಬಾರ್ದನ್ನ ಮಾಡ್ಬಿಟ್ರಾ? ಮೊದಲೇ ಬೆಂಗ್ಳೂರು ಅತ್ಯಾಚಾರದ ನಗರವಾಗೋಗಿದೆ. ಪುಣ್ಯ ಇನ್ನೂ ಪ್ರಪೋಸ್ ಮಾಡಿಲ್ಲ, ಬೇರೆ ಯಾರ್ನಾದ್ರೂ ಹುಡ್ಕೊಳ್ಬೇಕು ಅಂತ ಯೋಚನೆ ಮಾಡೋ ಹೊತ್ತಿಗೆ ಪೋಲಿಸ್ ಸ್ಟೇಷನ್ ಹತ್ತಿರ ಬಂದಿತ್ತು. ಆಕೆ ಒಳಗೆ ಹೋದೋಳೇ ಒಬ್ಬ ಕಾನ್ಸ್ಟೇಬಲ್ ಹತ್ರಾ ಅಂದ್ಲು, "ಸಾರ್ ನನ್ನ ಮೊಬೇಲ್ ಸಿಕ್ತು ಅಂತಾ ಹಾಸ್ಟೇಲಿಗೆ ಫೋನ್ ಬಂದಿತ್ತು..."

ಕಾಗದದ ಕಟ್ಟು!

ಅದು ಹೇಗೆ ಕದ್ದಿದ್ದನೋ ಪುಣ್ಯಾತ್ಮ ಅಷ್ಟು ಹಣಗಳನ್ನು. ಕದಿಯೋ ಅಬ್ಬರದಲ್ಲೋ, ಅಷ್ಟೋಂದ್ ಹಣ ಕಂಡ ಖುಷಿಯಲ್ಲೋ ಏನೋ ಹಣ ಎಣಿಸದೇ ಒಂದು ಅಮೇರಿಕನ್ ಟೂರಿಸ್ಟರ್ ಬ್ಯಾಗಿನ ತುಂಬ ತುಂಬಿಟ್ಟಿದ್ದ. ಅದೇ ಊರಲ್ಲಿದ್ರೆ ಸಿಕ್ಕಾಕೊಂಡ್ ಬೀಳ್ತೀನಿ ಅಂತ ಊರು ಬಿಟ್ಟ. ರೈಲಿನಲ್ಲಿ ಹೊರಟಿದ್ದಾಗ ಕನಸಲ್ಲಿ ಪೋಲೀಸರು ಬಂದಂತಾಗಿ ಎದ್ದು ಓಡಿತ್ತಿರೋ ರೈಲಿನಿಂದ ಜಿಗಿದೇ ಬಿಟ್ಟ! ಬಿದ್ದವನು ಸತ್ತನೋ ಬದುಕಿದನೋ ಗೊತ್ತಿಲ್ಲ. ಅವನು ಬಿದ್ದದ್ದನ್ನ ಕಂಡ ವ್ಯಕ್ತಿ ಏಕೆ ಹಾಗೆ ಮಾಡಿದನೋ ಗೊತ್ತಿಲ್ಲ, ಮೊದಲು ಬ್ಯಾಗ್ ಬಿಚ್ಚಿ ನೋಡಿದವ ರೈಲಿನಿಂದ ಬಿದ್ದವನ ಮತ್ತೆ ನೋಡದೇ ಅಲ್ಲಿಂದ ಪರಾರಿಯಾದ. ಆಗಲೇ ಕತ್ತಲಾಗಿತ್ತು, ಓಡುತ್ತಿರೋನು ತಡವರೆಸಿ ಬಿದ್ದ. ಬಿದ್ದವನು ಏನಾದನೋ ಗೊತ್ತಿಲ್ಲ, ಮತ್ತೆ ಏಳಲಿಲ್ಲ! ಆ ಬ್ಯಾಗ್ ಒಬ್ಬ ಕುಡಿದು ಧರೆಗುರುಳಿದ್ದವನ ಮೇಲೆ ಬಿತ್ತು. ಏನಪ್ಪಾ ಇದು ಅಂತ ನೋಡಿದರೆ ಬ್ಯಾಗ್ ತುಂಬಾ ಜೊಡಿಸಿಟ್ಟ ಕಾಗದದ ಕಟ್ಟುಗಳು( ಹಣ ) 'ಎಂತಾ ಛಳಿ' ಅನ್ನುತ್ತಾ ಕಾಗದಕ್ಕೆ ಬೆಂಕಿ ಹಚ್ಛಾ ಛಳಿಯಿಂದ ಬಚಾವಾದ!!

ನಗು

ಅಕ್ಕ ಇತ್ತೀಚೆಗೇಕೋ ಮೊಬೈಲ್ ನೋಡಿಕೊಂಡು ಒಬ್ಬಳೇ ನಗಾಡುತ್ತಾಳೆ. ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಳ್ಳೋದು ಜಾಸ್ತಿಯಾಗಿದೆ. ಏನಿರಬಹುದು ಅವಳ ನಗುವಿನ ಹಿಂದೆ? ಅಶ್ವಥ್ ಅಕ್ಕನ ನಗುವಿನ ಕಾರಣ ಹುಡುಕಿದ್ದ. ಅಕ್ಕ ಯಾರದೋ ಪ್ರೀತಿಯಲ್ಲಿ ಬಿದ್ದಿದ್ದಾಳೆ! ಅಪ್ಪನಿಗೆ ಹೇಳಿ ಬಿಡಿಸೋದಾ? ಇಲ್ಲ, ನಾನು ದೊಡ್ಡವನಾಗಿದ್ದೇನೆ, ಇಷ್ಟು ಚಿಕ್ಕ ವಿಷಯವನ್ನ ಅಪ್ಪನ ಬಳಿ ಒಯ್ದರೆ ಸುಮ್ಮನೇ ರಗಳೆ ಅಂದುಕೊಂಡು ಅಕ್ಕ ಒಬ್ಬಳೆ ಇರುವಾಗ ಚೆನ್ನಾಗಿ ಬೈದ. ಅಕ್ಕ ಅತ್ತಳು, ಅಳು ಗಂಡಸರ ಅಹಂಕಾರ ಹೆಚ್ಚಿಸುತ್ತೆ, ಆಫೀಮಿನ ಅಮಲಿನಂತೆ. ಅವನಿಗೆ ತನ್ನ ಗಂಡಸ್ತನದ ಮೇಲೆ ಹೆಮ್ಮೆಯೆನಿಸಿತು. ಆಕೆ ತನ್ನ ಇನಿಯನಿಗೆ ತನ್ನನ್ನು ಮರೆತುಬಿಡುವಂತೆ ಮೆಸೇಜಿಸಿ ಬಾಕಿ ಇದ್ದ ಅಳುವನ್ನು ಮುಗಿಸಲು ಯತ್ನಿಸಿದಳು. ಅವಳ ಇನಿಯನೋ ಭಯಂಕರ ನೈತಿಕತೆಯ ಮನುಷ್ಯ, ಅವಳಿಗೇ ಇಷ್ಟವಿರದ ಮೇಲೆ ಬಲವಂತವೇಕೆ ಎಂದು ಸುಮ್ಮನಾದ. ಗಂಡಸಾದವನು ಪ್ರೀತಿಯನ್ನು ಅಪೇಕ್ಷಿಸುತ್ತಾನೆ, ಕೊಂಡುಕೊಳ್ಳುವುದಿಲ್ಲವಂತೆ...

ವಿರಹ

ಹೊರಗೆ ಸುರಿದ ಮಳೆ ನೀರು ತಲೆಯೊಳಗೆ ಹೊಕ್ಕಿ ಮೆದುಳನ್ನು ತೋಯಿಸಿದಂತೆ ಅನ್ನಿಸುತ್ತಿತ್ತು. ಯೋಚಿಸಲು ಬೇಕಾದಷ್ಟಿತ್ತು, ಯಾವುದನ್ನು ಮೊದಲು ಯೋಚಿಸೋದು ಅಂತ ಒಂದಷ್ಟು ಚೀಟಿಗಳನ್ನು ಬರೆದು ಆರಿಸಿಬಿಡಲಾ? ಮನೆಯ ಬಲಬಾಗದ ಗೋಡೆ ಕುಸಿದ ಮಾರನೇ ದಿನವೇ ಅವಳೇನೋ ಹೊರಟೇ ಹೋದಳು, ಬಾಣಂತನದ ಖರ್ಚು ಉಳಿಯಿತೆಂದು ಸಮಾಧಾನ ಪಟ್ಟರೆ ಜನ ಏನಂದುಕೊಂಡಾರು? ಅಷ್ಟಕ್ಕೂ ಅವಳಿದ್ದಾಗ ಸಮಾಧಾನವಿತ್ತೇ? ಈ ಮಾತನ್ನು ಯಾರೂ ಕೇಳುವುದಿಲ್ಲ, ಖಾಸಾ ನನ್ನ ತಾಯಿಯೇ ಕೇಳಲಾರಳು!  ನಾಳೆಯಾದರೂ ಒಡೆದ ಹಂಚುಗಳನ್ನು ಬದಲಿಸಬೇಕು. ಮತ್ತೆ ಮಳೆ ಬಂದಾಗ ನನ್ನ ಹಾಸಿಗೆಯಾದರೂ ಒಣಗಿರಬೇಕು! ಎಷ್ಟು ಹಂಚುಗಳು ಹೋಗಿರಬಹುದು? ಹೆಚ ್ಚೆಂದರೆ ಒಂದೈವತ್ತು? ಅಷ್ಟೇ, ಒಟ್ಟೂ ಇನ್ನೂರಿದ್ದೀತಾ ಹಂಚುಗಳು? ಛೇ, ಅವಳಿದ್ದಿದ್ದರೆ ಎಲ್ಲಾ ಲೆಕ್ಕಗಳಿಗೂ ಉತ್ತರ ಸಿಕ್ಕುತ್ತಿತ್ತೇನೋ. ಹಸುವಿನ ಹಾಲನ್ನು ಯಾರ ಬಳಿ ಕರೆಯಿಸಲಿ? ಅದಕ್ಕೆ ಹುಲ್ಲು ಮಾಡುವುದು ಹೇಗೆ? ಒಂದು ದಿನವೂ ಆಕೆ ಇದನ್ನೆಲ್ಲಾ ನನ್ನ ಬಳಿ ಮಾಡಿಸಿಲ್ಲ, ಮುಂದೊಂದು ದಿನ ನಾನು ಪರದಾಡಲೆಂದೇ ಆಗಿರಬೇಕು! ಹೆರಿಗೆಗೆ ತವರಿಗೆ ಹೋದ ಹೆಂಡತಿಯ ನೆನಪು ಕೆಟ್ಟದಾಗಿ ಬರುತ್ತಿತ್ತು ಶಂಕರಣ್ಣನಿಗೆ...

ಗಡಿಯಾರ...

ಅದು ಹಳೇಕಾಲದ ಗಡಿಯಾರ, ಹತ್ತು ಬಾರಿ ಬಡಿದು ಸುಮ್ಮನೇ ತನ್ನ ಕಾಲುಗಳನ್ನ ಮುಂದಿಡುತ್ತಿತ್ತು. ಅದಕ್ಕೆ ಸ್ಪಷ್ಟವಾಗಿಯಲ್ಲದಿದ್ದರೂ ಅವನು ಬರೆಯುತ್ತಿದ್ದುದು ಕಾಣುತ್ತಿತ್ತು. ಪೆನ್ನು ಕಾಗದದ ವೈರಿಯೇನೋ ಎಂಬಂತೆ ಕಾಗದದ ಎದೆಯ ಮೇಲೆ ತನ್ನ ಘಾತ ನೆಡೆಸುತ್ತಿತ್ತು. ಅದಕ್ಕೂ ಅನುಭವವಿದೆ, ಆಗಾಗ ಆತ ಅದನ್ನು ಉಪಯೋಗಿಸಿ ಏನೇನೋ ಗೀಚುವುದುಂಟು. ಅವನ ಕನ್ನಡಕ ಕಾಗದವನ್ನೇ ದಿಟ್ಟಿಸುತ್ತಿದೆ. ಸ್ನಾನ ಮಾಡುವಾಗ ಮಾತ್ರ ಅವನಿಂದ ಅಗಲುತ್ತದೆಯಷ್ಟೇ. ಕನಸುಗಳನ್ನು ಬರಿಗಣ್ಣಿಂದ ನೋಡಲೆಂದೇ ನಿದ್ರಿಸುವಾಗ ಅದನ್ನು ತೆಗೆದಿಡೋದುಂಟು. ವಿದ್ಯುತ್ ದೀಪ ಇದಕ್ಕೆಲ್ಲಾ ತಾನೇ ಕಾರಣನೆಂಬ ಅಹಂಕಾರದಿಂದ ಕಣ್ಣು ತೆರೆದುಕ ೊಂಡೇ ಇದೆ. ಮತ್ತೆ ಬೆಳಗಾಗುವವರೆಗೂ ತಾನೇ ಸೂರ್ಯನೆಂಬ ಹೆಮ್ಮೆಯದಕೆ. ಆತನಿಗೆ ಅದೆಲ್ಲಾ ಗೊತ್ತು, ಅವುಗಳ ನಿರ್ಜೀವದೆಡೆಗೆ ಆತನಿಗೆ ನಂಬಿಕೆಯಿದೆ. ತಾನು ಬರೆದದ್ದನ್ನ ಅವು ಯಾರಿಗೂ ಹೇಳಲಾರವು. ಆ ಕಾಗದವನ್ನೊಂದು ಬಿಟ್ಟು. ನಿರ್ಜೀವ ಪಾತ್ರಗಳು ಮಾತನಾಡಿದ್ದನ್ನ ನಾನು ಕೇಳಿದ್ದೇನೆ. ಅವೇ ನನಗೆ ಆತನ ಕಥೆ ಹೇಳಿದ್ದು. ಅವನೊಬ್ಬ ಕಥೆಗಾರ. ಕಥೆಗಳನ್ನುಬರೆದ. ಆ ಕಥೆಗಳನ್ನೇ ನಾನು ಹೇಳುವುದು. ಅವನಿದ್ದಿದ್ದರೆ ಕಥೆಗಳೇ ಇರುತ್ತಿರಲಿಲ್ಲ!

ಪ್ರತಿಕಾರ

Image
ಅವನಿಗೆ ಒಂದಷ್ಟು ಬ್ರೇಕಪ್ಪುಗಳಾಗಿದ್ವು. ಅವನ ಗಡ್ಡದ ಹೇರ್ ಸ್ಟೈಲ್ ನೋಡಿದವರ ಮನಸ್ಸಲ್ಲಿ ಆ ಯೋಚನೆ ದೃಢವಾಗ್ತಿತ್ತು. ಹಿಂಗೇ ನಮ್ಮ ನಿಮ್ಮಂಗೇ ಸಾಮಾಜಿಕ ಜಾಲತಾಣದಲ್ಲಿ (  :/  ) ಸಕ್ರಿಯನಾಗಿದ್ದವನಿಗೆ ಹೊಸತಾಗಿ ಪರಿಚಯವಾದ ಹುಡುಗಿಯರು ಕೇಳೋ ಪ್ರಶ್ನೆ ಹಳೆ ಹುಡುಗಿಯ ಹೆಸರೇನು? ಅವನೇನೋ ಉತ್ತರ ಹೇಳುತ್ತಿದ್ದ ಬಿಡಿ ಅವನಿಗೇನು! *** ಆವತ್ತೊಂದಿನ ಬಂದ ಸುಂದರಿಯೊಬ್ಬಳ ಮೆಸೇಜು ನಿದ್ದೆ ಕೆಡಿಸಿತ್ತು. ಅದೇ ಹೆಸರು, ಹಳೆ ಹುಡುಗಿಯದು! ಆಕೆ ಕೇಳಿದ್ದು, ಯಾವೂರು ಎನು ಕೆಲಸ? ಇವನೇನೋ ನಿಜ ನುಡಿದ. ಮತ್ತೆ ಪ್ರಶ್ನೆ, ಯಾರನ್ನಾದರೂ ಪ್ರೀತಿಸುತ್ತಿದ್ದೀರಾ? ಇವನೆಂದ, ಅಂತಾ ದುರಂತ ನೆನಪಿಲ್ಲ. ಪ್ರಶ್ನೆಗೆ ವಿರಾಮವೆಲ್ಲಿ ಹೊಸ ಪರಿಚಯ! ಪ್ರೇಮ ವೈಫಲ್ಯವೇ? ಅಂದಂಗೆ ಇವನಿಗೊಂದು ಆಸೆಯಿತ್ತಂತೆ, ಬಿಟ್ಟು ಹೋದವಳಿಗೆ ಅವಮಾನ ಮಾಡಬೇಕೆಂದು, ಅವಳ ಮುಖ ಕಂಡರಾಗದವನಿಗೆ ಮಾತನಾಡುವ ಮುಖವಿಲ್ಲ. ಈಕೆಗಂದ, "ತಂಗೀ ನನಗೆ ಮದುವೆಯಾಗಿದೆ." ಪ್ರತೀಕಾರ ಸಮಾನ ಹೆಸರಿನ ಮೇಲೆ...

ಭ್ರಮೆ...

ಅವನು ಆವತ್ತು ಕೇಳಿದ್ದ ಪ್ರಶ್ನೆ ದಂಗು ಬಡಿಸಿತ್ತು. "ಒಂದು ವೇಳೆ ನಾನು ನಿಜವಾಗಿಯೂ ಇಲ್ಲದಿದ್ರೆ? ನನ್ನ ಜೊತೆ ನೀನಾಡಿದ ಮಾತು, ನನ್ನ ಫೋಟೋ, ವಿಡಿಯೋ ಚಾಟಿನ ಸಂವಹನ, ನಮ್ಮಿಬ್ಬರ ದೂರವಾಣಿ ಕರೆಗಳು...ಎಲ್ಲಾ ಬರೀ ನಿನ್ನ ಕಲ್ಪನೆಗಳಾಗಿದ್ರೆ?" ಇದಕ್ಕೆಂತಾ ಉತ್ತರ ಹೇಳೋದು? ತಮಾಷೆಯೆಂದು ನಕ್ಕು ಸುಮ್ಮನಾಗೋದಾ? ಅಥವಾ ನಿಜವೆಂದು ನಂಬೋದಾ? ಹುಚ್ಚು ನನಗಾ? ಅವನಿಗಾ ಹುಚ್ಚು? ಅಷ್ಟಕ್ಕೂ ನಮ್ಮ ಜೊತೆ ಮಾತನಾಡೋರು ನಿಜವಾಗಿಯೂ ಬದುಕಿರುತ್ತಾರಾ, ಹೇಗೆ ಕಂಡುಹಿಡಿಯೋದು? ಅವಳ ಯೋಚನೆ ನಿಮಗೆ ಅರ್ಥವಾಗಲಿಕ್ಕಿಲ್ಲ. ಅವಳ ಸನ್ನಿವೇಶದ ಒಳ ಹೊಕ್ಕದ ಹೊರತು!! ಭ್ರಮೆ... ಅವಳಿಗೆ ಮಾನಸಿಕ ಖಿನ್ನತೆ, ಖಂಡಿತಾ ಹುಚ್ಚಲ್ಲ. ಅವಳೇ ಒಂದು ಫೇಸ್ಬುಕ್ ಖಾತೆ ತೆರೆದು ಅವಳ ಗೆಳೆಯನ ಹೆಸರಿಟ್ಟಿದ್ದಳು. ಕಲ್ಪನೆಯ ಗೆಳೆಯ! ಅದರಿಂದ ತನಗೇ ಮೆಸೇಜಿಸಿಕೊಂಡು ಅವನೇ ಮೆಸೇಜಿಸಿದಂತೆ ಖುಷಿ ಪಡುತ್ತಿದ್ದಳು. ಇವಳ ಖಾಯಿಲೆ ದಿನೇ ದಿನೇ ಹೆಚ್ಚಿತ್ತು. ಇವಳ ನಡುವಳಿಕೆಯ ಬಗ್ಗೆ ಅನುಮಾನ ಬಂದಮೇಲೆ ಆಕೆಯ ತಂದೆ ತಾಯಿಯರು ಒಬ್ಬ ಮಾನಸಿಕ ತಜ್ಞನ ಮೊರೆ ಹೋದರು. ಆ ಸುಳ್ಳೇ ಅಕೌಂಟಿನ ಪಾಸ್ವರ್ಡನ್ನು ಸಂಪಾದಿಸಿ ಆಕೆಗೆ ಅವಳ ಭ್ರಮೆಯ ಇನಿಯನ ಮೇಲೆ ಅಭಿಪ್ರಾಯ ಬದಲಾಗುವಂತೆ ಮಾಡಲಾಯಿತು. ಕೊನೆ ಬಾರಿಗೆಂಬಂತೆ ಮೇಲಿನ ಮೆಸೇಜ್ ಕಳಿಸಲಾಯಿತು... ಈಗ ಆ ಅಕೌಂಟು ಯಾರಿಂದಲೂ ಉಪಯೋಗವಾಗುತ್ತಿಲ್ಲ.

ಸಾಕ್ಷಾತ್ಕಾರ

ದೇವರು ಎಲ್ಲಿದ್ದಾನೆ? ಹುಡುಕದೆಯೇ ಹಿರಣ್ಯಕಶ್ಯಪುವಿಗೆ ಕಂಡನಂತೆ! ಅದೂ ಯಾವುದೋ ಭಕ್ತ ಬರೆದ ಕಥೆಯಲ್ಲವೇ? ಬರೆದವರೆಲ್ಲ ಕಥಾನಾಯಕನನ್ನು ದೇವರೆಂದೋ, ದೇವರೇ ನಾಯಕನೆಂದೋ ಬರ ೆದಿರುತ್ತಾರೆ ಬಿಡಿ. ನಾನು ಯಾರೋ ಬರೆದಿಟ್ಟ ಕಥೆಯ ನಾಯಕನ ಹುಡುಕಾಟದಲ್ಲಿಲ್ಲ, ಆ ಶಕ್ತಿಯನ್ನು ಹುಡುಕುತ್ತಿದ್ದೇನೆ. ಆ ಮಹಾಶಕ್ತಿ ಇಂತಹ ಶುಭ್ರ ಹಿಮಾಲಯದಲ್ಲಿರದೇ ಮತ್ತೆಲ್ಲಿರುತ್ತಾನೆ? ಇಲ್ಲ, ಇಲ್ಲಿಯೂ ಆ ಚೇತನವಿಲ್ಲ! ಇದು ಬರೀ ಬೆಳಕಿನ ಜಾಗ, ಬರೀ ಚಳಿಯ ಜಾಗ ಇಲ್ಲಿ ಹಸಿರೂ ಚಿಗುರುವುದಿಲ್ಲ ಇನ್ನೆಂತಹ ಚೇತನವಿದ್ದೀತು! ಪರಮಾರ್ಥ ಕಾಣಲು ಹೋದವ ಮರಳಿ ಬಂದ. ಬಂದವನಿಗೆ ಎಲ್ಲ ಕೇಳಿದರು,ಸಾಕ್ಷಾತ್ಕಾರವಾಯಿತಾ? ಇವನೇನಂದ? "ನಿಮ್ಮ ದೇವರು ಸಿಕ್ಕಿದ್ದ, ನನ್ನ ಕಂಡು ಕೈಮುಗಿದು ಹುಡುಕಿ ಕಾಟಕೊಡಬೇಡಿ ಏನೇ ಆದರೂ ನಾನಿರುವೆ...ಅಂದ"

ಪಾರಿವಾಳ...

ಆವತ್ತು ಬರೆಯುತ್ತಿದ್ದೆ. ತೆರೆದ ಕಿಟಕಿಯಿಂದ ಹಾರಿ ಬಂದ ಪಾರಿವಾಳ ತಿರುಗುತ್ತಿದ್ದ ಗಾಳಿಪಂಕಕ್ಕೆ ಡಿಕ್ಕಿ ಹೊಡೆದಿತ್ತು. ಗಾಳಿಯಲ್ಲಿ ಎರಡು ಸುತ್ತು ತಿರಗಿ ಕಿಟಕಿ ಪರದೆಯ ಗೂಟಕ್ಕೆ ತಗುಲಿಕೊಂಡಿತು. ಎದೆಯಿಂದ ರಕ್ತ ಇಳಿಯುತ್ತಿತ್ತು, ನಲ್ಲಿಯ ನೀರು ಬಿಟ್ಟಂತೇ! ನಾ ಬರೆಯುತ್ತಿದ್ದ ಕಾಗದಕ್ಕೂ ರಕ್ತ ಬಡೆದಿತ್ತು. ಯಾವತ್ತಾದರೂ ಕೆಂಪನೆಯ ದ್ರವ ಅರೆ ಜೀವದ ಜೀವಿಯಿಂದ ಇಳಿಯುತ್ತಿದ್ದದ್ದನ್ನ ನೋಡಿದ್ದೀರಾ? ಮೂರ್ಛೆ ಹೋಗಬೇಕಿತ್ತು ನಾನು, ಆದರೆ ನನಗೆ ಯಾವ ಭಾವನೆಯೂ ಹುಟ್ಟಲಿಲ್ಲ. ಅದೇ ನೆತ್ತರ ಹಾಳೆಯ ಮೇಲೆ ಬರೆದೆ. ಬರೆದದ್ದು ಆ ಪಾರಿವಾಳದಂತೇ ಛಂದವಾಗಿತ್ತು. ಪ್ರಕಟಕರು ನನ್ನ ಲೇಖನ ನೋಡಿ ಅಂದರು, ಇನ್ನು ಹೀಗೆಯೇ ಬರೆಯಿರಿ. ಓದುಗರೂ ಅಂದರು ನೀವು ಬರೆದದ್ದು ಇಷ್ಟವಾಯಿತು. ಈಗ ನಾ ಬರೆಯುವಾಗ ಮೇಲೆ ಅರೆಜೀವದ ಪಾರಿವಾಳ ತೂಗುತ್ತಿರುತ್ತೆ, ಎದೆಯಿಂದ ನೆತ್ತರ ನಲ್ಲಿ ತೆರೆದ ಪಾರಿವಾಳ...

ಇರುವೆ...

ನನ್ನ ಸುತ್ತಮುತ್ತಲೂ ಅವಳ ನೆನಪಿನ ಮುತ್ತಿಗೆ ಚೀರಿ ಹೇಳುತಿವೆ ಮೆತ್ತಗೆ, ನಾನಿರುವೆ ಇಲ್ಲೇ... ಬೆತ್ತಲೆ ಎದೆಯ ರೋಮಗಳ ಸಂದಿಯಲ್ಲಿ ಅವಳ ಕೈಬೆರಳ ಅಚ್ಚು ಅಚ್ಚಳಿಯದೇ ಉಳಿದಿವೆ ಕೂಗಿ ಹೇಳುತಿವೆ ನಾನಿರುವೆ ಇಲ್ಲೇ ಬೆರಳ ತುದಿಯಲಿ ಅವಳ ಮುಂಗುರುಳ ಸವರಿದ್ದೆ ಮುಂಬೆರಳ ಕೂಗಾಟ ನಾನಿರುವೆ ಇಲ್ಲೇ ಅವಳುಸಿರು ತಾಕಿದ ಭುಜದಲ್ಲಿ ಜ್ವರ ಬಿಸಿಯೇರಿ ಉಸುರುತಿದೆ ನಾನಿರುವೆ ಇಲ್ಲೇ... ಅಗೋಚರ ಶಬ್ಧಕ್ಕೆ ನಯನಗಳ ಹುಡುಕಾಟ ಸದ್ದುಗಳ ಹುಡುಗಾಟ, ನೆನಪುಗಳ ಚೀರಾಟ ನಾ ಇರುವೆ...

ವ್ರತ

ಊರ ಹಬ್ಬದಲಿ ಕೆಂಡದ ಮೇಲೆ ನಡೆಯುತ್ತಿದ್ದವಳ ಮನಸ್ಸಲ್ಲೇನಿತ್ತು? ಗಂಡನ ಅನುಮಾನಗಳಿಗೆ ಪೂರಕವೆಂಬಂತೆ ಗಂಡನ ಗೆಳೆಯ ನಡೆದುಕೊಂಡು ತಾನು ಮನೆ ಬಿಟ್ಟು ತವರಿಗೆ ಬಂದದ್ದು ಇನ್ನೂ ಜನರ ಬಾಯಲ್ಲೇ ಇದೆ. ಅವರ ಬಾಯಲ್ಲಿನ ಕಥೆಗೆ ತಾನು ನಾಯಕಿಯೋ ಖಳನಾಯಕಿಯೋ ಒಂದೂ ಗೊತ್ತಿಲ್ಲ. ಎಲ್ಲ ಬಂದು ಕನಿಕರದ ಮಾತಾಡುವವರೇ! ತಾನೇನು ಸೀತೆಯಲ್ಲ, ಆದರೆ ಪಾತಿವ್ರತ್ಯದಲ್ಲಿ ಯಾವ ಸಾದ್ವಿಗು ಕಡಿಮೆಯಲ್ಲ. ಆದರೆ ಯಾರಿಗೆ ಗೊತ್ತಿದೆ! ತನಗೆ ತಾನೇ ಒಡ್ಡಿಕೊಂಡ ಅಗ್ನಿ ಪರೀಕ್ಷೆ, ತನಗಾಗಿ ಗೆಲ್ಲಲೇ ಬೇಕು. ನಡೆದಳು. ಇನ್ನೇನು ಆಚೆ ತುದಿ ತಲುಪಿದಳೇನೋ...ಉಹ್ಞೂಂ, ಅವಳಿಗೆ ಏನನ್ನಿಸಿತೋ ವಾಪಸ್ಸಾದಳು! ಯಾರನ ್ನ ನಂಬಿಸಲು ಈ ಅಗ್ನಿಪರೀಕ್ಷೆ? ಯಾರಿಗೂ ಸಮರ್ಥನೆ ಕೊಡಬೇಕಿಲ್ಲ. ಊರ ಮಂದಿಯ ಬಾಯಲ್ಲಿ ಈಗ ಆಕೆ ವಿಲನ್ನು...

ಗತಿ

ಬೆಳಕಿನ ಗತಿಯಲ್ಲಿ ಕಾಲ ಚಲಿಸೋವಾಗ ಕಿಟಕಿಯಿಂದ ತಲೆ ಹೊರ ಹಾಕಿ ನೋಡಿದೆ. ಹೊರಗೆ ನನ್ನದೇ ರೂಪಿನ ವ್ಯಕ್ತಿಗಳು ನಿಂತಿದ್ದರು. ಶೈಶವ್ಯದ ನಾನುಗಳೂ, ಬಾಲ್ಯ, ಯೌವನದ ನಾನುಗಳೂ ನನ್ನ ಗುರುತೇ ಇರದಂತೆ ನನ್ನನ್ನೇ ದಿಟ್ಟಿಸುತ್ತಿದ್ದರು! ನೆನಪಿಲ್ಲ, ಆ ನಾನುಗಳ ಕಣ್ಣಲ್ಲಿದ್ದ ಖುಷಿ ಈಗಿನ ನನ್ನಲ್ಲಿ ಮೊದಲೆಂದೂ ಇದ್ದ ನೆನಪಿಲ್ಲ. ನನಗೇನೂ ಆ ಖುಷಿಯ ಆಸೆಯಿಲ್ಲವೆಂದಲ್ಲ, ಆ ನಾನುಗಳ ಖುಷಿ ನನ್ನ ಹೊಟ್ಟೆ ಉರಿಸುತ್ತಿಲ್ಲವೆಂದೂ ಅಲ್ಲ. ಈ ನಾನೆಂಬ ಪ್ರಬುದ್ದನಿಗೆ ಕಾಲದ ಲೆಕ್ಕಾಚಾರದಲ್ಲಿ ಕೂಡಿಸುವುದಿದೆ ಹೊರತು ಕಳೆಯುವುದಿಲ್ಲ ಎಂಬ ಜ್ಞಾನವಿದೆ. ಈಗಿನ ನನಗೆ ಆಮಿಷಗಳಿವೆ, ಜವಾಬ್ದಾರಿಗಳೆಂಬ ನೆಪಗಳಿವೆ. ಹೊ ರಗಿಂದ ನನ್ನವೇ ನಾನುಗಳು ಕೈಬೀಸಿ ಟಾಟಾ ಮಾಡ್ತಿದ್ರೆ ಕಾಲನ ಬಸ್ಸು ವೇಗವಾಗಿ ಚಲಿಸುತ್ತಿತ್ತು... ಹೊಟ್ಟೆಯುರಿ ಹೆಚ್ಚಾಗಿ ಕಿಟಕಿಗಳನ್ನು ಮುಚ್ಚಿದೆ. ಕಾಲ ನಿಂತಂತಾಯ್ತು...

ಪೆನ್ಶನ್

ಪೆಂಚನ್ನು ಬರದೇ ಎರಡು ತಿಂಗಳಾಗಿತ್ತು. ಹೆಂಡತಿ ಸಕ್ಕರೆ ಡಬ್ಬದಲಿ ಅಡಗಿಸಿಟ್ಟ ದುಡ್ಡಿನಲಿ ಅದೆಂಗೋ ಇಷ್ಟು ದಿನ ಬದುಕ ದೂಡಿದ್ದಾಯ್ತು, ನಾಳೆಯ ಗತಿಯೇನು? ಪಟ್ಟಣದ ಕಛೇರಿಗೇ ಹೋಗಿ ಕೇಳೋಣ, ಕೊಟ್ಟೇ ಕೊಡುತ್ತಾರೆಂಬ ನಂಬಿಕೆಯ ಮೇಲೇ ಉಳಿದಿದ್ದ ಇಪ್ಪತ್ತು ರೂಪಾಯಿಗಳನ್ನು ಜೇಬಿಗೆ ಸೇರಿಸಿ ಹೊರಟಿದ್ದ. ಅದೃಷ್ಠ ಯಾರದೋ ಹೆಸರಲ್ಲಿತ್ತು, ಒಟ್ಟಿನಲ್ಲಿ ಭಯಂಕರ ಅಪಘಾತ ಇಂವ ಹೊಂಟಿದ್ದ ಬಸ್ಸಿಗಾಯ್ತು. ಒಂದತ್ತು ಮಂದಿಗೆ ಎರಡೆರಡು ಟಿಕೇಟು ಸಿಕ್ಕಿತ್ತು, ಒಂದು ಕಂಡಕ್ಟರ್ ಕೊಟ್ಟದ್ದಾದ್ರೆ ಮತ್ತೊಂದು ದೇವರದ್ದು. ಜೀವ ಹೋದವರಿಗೆ ಪರಿಹಾರ, ಗಾಯಗೊಂಡು ಬದುಕಿದವರಿಗೆ ಬಹುಮಾನ. ಇಂವ ಪಾಪ ಮಾಡಿದ್ದನೇನೋ  ಕನಿಷ್ಠ ಆಸ್ಪತ್ರೆಯ ಬಾಳೇಹಣ್ಣೂ ಸಿಗಲಿಲ್ಲ. ಸಂಜೆ ಹೊತ್ತಿಗೆ ನೆಡೆದು ಮನೆ ಸೇರಿದವನಿಗೆ ಪೆಂಚನ್ನು ಕಛೇರಿಗೂ ಹೋಗಲಾರದೇ, ಕಿಸೆಯಲ್ಲಿದ್ದ-ಈಗ ಖಾಲಿಯಾದ ಇಪ್ಪತ್ತು ರೂಪಾಯಿಯೂ ಉಳಿಸಿಕೊಳ್ಳಲಾಗದ ದುಃಖ. ಹೆಂಡತಿಯ ಸಕ್ಕರೆ ಡಬ್ಬವೂ ಖಾಲಿ ಮುಖ ಮಾಡಿ ಸ್ವಾಗತಿಸಿತು...

ಬೀಡಿ

Image
ಅವಂಗೆ ಅದೊಂದು ಹವ್ಯಾಸ. ಬೀಡಿ ಎಳೆಯೋದು. ಹವ್ಯಾಸ, ಚಟ, ಚಟ, ಹವ್ಯಾಸ...ಅದು ಚಟ ಅಲ್ಲ ಹವ್ಯಾಸಾನೇ ಬಿಡಿ. ಬೀಡಿ ಎಳೆದಂತೆ ಗಾತ್ರ ಚಿಕ್ಕದಾಯ್ತು. ಬದುಕೂ. ಎಳೆದಂತೆ ಹೊಸ ಕನಸುಗಳ ಸುರುಳಿ ಕರಗಿ ಗಾಳಿಯಲ್ಲಿ ಲೀನವಾಗ್ತಿದ್ದದ್ದನ್ನ ನೋಡಿ ನಕ್ಕಿದ್ದ. ಥೂ ಎಂತಾ ಫಿಲಾಸಪಿ  :/ ಅವಂಗೆ ಅದೊಂದು ಹವ್ಯಾಸ. ಬೀಡಿ ಎಳೆಯೋದು. ಹವ್ಯಾಸ,ಚಟ,ಚಟ,ಹವ್ಯಾಸ...ಅದು ಹವ್ಯಾಸಾನೇ. ಸುರುಳಿ ಕರಗಿದಂತೆ ಕನಸೂ ಕರಗುತ್ತಿತ್ತು. ತಲೆಬಿಸಿ. ಎಲ್ಲರಿಗೂ ಆಗುವಂತೆ ಇವಂಗೂ ವಯಸ್ಸಾಗಿತ್ತು. ಎಲ್ಲರಿಗೂ ಆಗುವಂತೆ ಮದುವೆಯೊಂದನ್ನು ಬಿಟ್ಟು. ವಿದ್ಯೆಯಿಲ್ಲ. ಬುದ್ದಿಯಿದೆ, ಅರವತ್ತೂ ಚಿಲ್ಲರೆ ವರ್ಷ ದಡ್ಡನಾಗಿ ಅನಾಥನಾಗಿ ಬದುಕುತ್ತಿದ್ನಾ? ಥೂ ಕೊರೆತ. ಅವಂಗೆ ಅದೊಂದು ಹವ್ಯಾಸ. ಬೀಡಿ ಎಳೆಯೋದು. ಹವ್ಯಾಸ,ಚಟ,ಚಟ,ಹವ್ಯಾಸ...ಅದು ಹವ್ಯಾಸವೇ ಬಿಡಿ. ಮೊದಲು ಕೆಲಸಕ್ಕಿದ್ದ ಮನೆಯವರು ಮನೆ ಮಾರಿ ಹೋಗಾಯ್ತು. ಮುಂದೆ? ದಿಕ್ಕಿಲ್ಲದ ತನ್ನ ಈ ವಯಸ್ಸಲ್ಲಿ ಕೆಲಸಕ್ಕಿಟ್ಟುಕೊಳ್ಳೋರು ಯಾರು? ತಾನೊಮ್ಮೆ ಸತ್ತರೆ? ಅವಂಗೆ ಅದೊಂದು ಹವ್ಯಾಸ...ಬೀಡಿ ಬೀದಿಯಲಿ ಬಿದ್ದಿತ್ತು.

ನಕ್ಕಳಾಕೆ ನನ್ನತ್ತ

ಆಕೆ ನಕ್ಕಳು, ನನ್ನತ್ತ? ಬಹುಶಃ ನನ್ನ ನೋಡಿ. ಎಡಗಾಲ ಚಪ್ಪಲಿಯಡಿ ಎಂತದೋ ಕಿರಿಕಿರಿ, ಆಪರಿ ನೋಟಕ್ಕೆ ಅಂಗುಷ್ಠದ ತುದಿ ಸುಟ್ಟಂತೆ ಉರಿ. ಚೂರು ಎಡಕ್ಕೆ ಜರಗು ಬಲಕ್ಕೆ ಬಗ್ಗು, ಎದುರಿದ್ದವಳ ಪಿಸುಮಾತು. ನಕ್ಕಳವಳು ನನ್ನತ್ತ? ಎಲ್ಲೋ ಎಡ ಎದೆಯಲ್ಲೊಂದು ಸೆಳೆತ, ಝಳಕು. ಪಳಕಿಸುವ ನಗೆ ಮಾಟ ತುಳುಕಿಸಿತು ಬಳಸಿ ಹಿಂದಿಂದ. ನಕ್ಕಳೇನೋ ನನ್ನತ್ತ. ನಾಗವೇಣಿಯ ತುದಿ ಹಾರಿತ್ತು, ಚೀರಿತ್ತು ಮೌನದಿ, ಸೋಕದಿರು ನನ್ನ ತಾಕಿದರೆ ಎಡವುವುದು ಹಾಳು ಯೌವನ. ನಕ್ಕಳಾಕೆ ನನ್ನತ್ತ. ಪರದೆಯಾಚೆಗಿನ ಆಕೆ ತುಂಬು ಮಾಟದ ಕೊಂಕು, ಕುಕ್ಕಿದಂತೆ ಏನೇನೋ. ಘಮದ ಅಮಲಿನ ದಾಸ್ಯದಲಿ ನಾನು, ಅರ್ಧ ನಿಂತಂತೆ. ನಕ್ಕಳಾಕೆ ನನ್ನತ್ತ.

ಕಥೆ

ಕಥೆಗಾರ ಕಥೆಯನ್ನ ಸೃಷ್ಠಿ ಮಾಡ್ತಾನೆ ಅಂತಾನೇ ಅವನಿಗೆ ಗರ್ವವಿತ್ತು. ಆದ್ರೆ ಕಥೆಯೇ ಕಥೆಗಾರನ ಮೂಲಕ ಬರೆಸಿಕೊಳ್ಳತ್ತೆ ಅಂತ ಅವನಿಗೆ ಗೊತ್ತಾಗಿದ್ದು ಆವತ್ತೇ. ಅಷ್ಟಕ್ಕೂ ಆವತ್ತೇನಾಯ್ತು? ಎಂದಿನ ಭಾನುವಾರದಂತೇ ಆವತ್ತೂ ಆಲಸ್ಯದಿಂದ ಎದ್ದ. ಹೆಂಡತಿಯ ಬೆನ್ನನ್ನು ಹುಡುಕೋನಂತೇ ಹಾಸಿಗೆಯ ಮೈಮೇಲೆ ಕೈ ಹರಿದಾಡುತ್ತಿರೋವಾಗ್ಲೇ ಕುಕ್ಕರ್ರು ಕೂಗಿತು. ಅದಾಗಲೇ ಲೇಜಿ ಸಂಡೆಯ ಸ್ಪೆಷಲ್ ಚಿತ್ರಾನ್ನ ಕೂಗುತ್ತಿದೆ ಅಂತ ಗೊತ್ತಾಯ್ತು. ಮುಖದಲ್ಲಿ ನೀರು ತೊಳೆದಂತೆ ನೀರನ್ನ ಚಿಮುಕಿಸಿಕೊಂಡ. ಟೇಬಲ್ಲಿನ ಬಳಿ ಬಂದು ಚಿತ್ರಾನ್ನಕ್ಕಾಗಿ ಹುಡುಕಾಡಿದ. ಕುಕ್ಕರ್ರು ಹನ್ನೊಂದೊಂದ್ಲ ಮಗ್ಗಿ ಹೇಳುತ್ತಿತ್ತು. ಅಡುಗೆ ಮನೆಯ ಬಾಗಿಲು ಹುಡುಕಿಕೊಂಡು ಹೋದ. ಹೆಂಡತಿ ಅಲ್ಲೇ ಮಲಗಿದ್ದಂತೆ ಅನ್ನಿಸಿತು. ಒದ್ದೆ ಕೂದಲು ಆಹ್ವಾನಿಸಿತು. ಛೇ, ಆಗಲೇ ಬಾಗಿಲು ಬೆಲ್ಲಾಯ್ತು. ಹಿಂದೇ 'ಪಪ್ಪಾ, ಕುಕ್ಕರ್ ಆಫ್ ಮಾಡ್ಬಾರ್ದಾ ಅನ್ನ ಸೀದೋಯ್ತೇನೋ...'ಅಂತಾ ಹದಿನೆಂಟರ ಮಗಳು ಬಂದಳು. ಆವತ್ತೇ ಮೊದಲೇನೋ, ಹತ್ತು ವರ್ಷದಿಂದೀಚೆ ಹೆಂಡತಿ ನೆನಪಾದದ್ದು. ಬಾಗಿಲ ತಲೆ ಮೇಲಿದ್ದ ಹೆಂಡತಿಯ ಫೋಟೋ ನೋಡುತ್ತ ನಿಂತ ಅಪ್ಪನ ಬದಿ ಜಾಗ ಮಾಡಿಕೊಂಡು ಅಡುಗೆ ಮನೆಯತ್ತ ನಡೆದಳು ಪುತ್ರಿ.

ರಂಗು...

Image
ಇವತ್ತವಳ ಹುಟ್ಟುಹಬ್ಬವಾ? ಅವಳನ್ನ ನೋಡಿಯಷ್ಟೇ ಪರಿಚಯ, ಎದುರಾದಾಗ ಮುಗುಳ್ನಗೆಯ ಗೆಳೆತನ. ಖುಷಿಯಾದಾಗೆಲ್ಲಾ ಬಿಳಿ ಬಣ್ಣದ ಅನಾರ್ಕಲಿ ತೊಡುತ್ತಾಳೋ ಇಲ್ಲಾ ಬಿಳಿಯ ಅನಾರ್ಕಲಿ ತೊಟ್ಟಾಗ ಖುಷಿಯಾಗಿರುತ್ತಾಳೋ ಗೊತ್ತಿಲ್ಲ! ಇವತ್ತು ಅವೆರಡನ್ನೂ ಹೊತ್ತು ಎದುರಾದವಳ ನೋಡಿ ಬೆನ್ನಿನಡಿಯಿಂದ ಎಂತದೋ ಹೊಕ್ಕಂತಾಯ್ತು. ಉಹೂಂ, ಅವಳ ನಗುವನ್ನ ನೋಡಿಯೋ,ಬಿಳಿ ಬಟ್ಟೆ ನೋಡಿಯೋ ಗೊತ್ತಿಲ್ಲ, ಎದುರಾದವಳ ಮೈಮೇಲೆ ಕೆಂಪೆರಚುವ ಮನಸ್ಸಾಯ್ತು. ನಗು ಹೊತ್ತು ಹೇಳಿಯೇ ಬಿಟ್ಟೆ, 'ಹ್ಯಾಪಿ ಹೋಲಿ.' ಅವಳೊಂದಿಗಿನ ಮೊದಲ ಸಂಭಾಷಣೆ. ಆಕೆ ಮಾತನಾಡಲಿಲ್ಲ. ಮುಷ್ಠಿಯೊಳಗಿನ ಕೆಂಪು ನನ್ನ ಕೆನ್ನೆ ಸವರಿತ್ತ ಷ್ಟೇ. ಹಿಂದೇ ಅವಳ ನದಿಹಾಸ  <3  ನಾನೂ ನಕ್ಕು ಕೆಂಪು ಬಳಿದೆ.  :)  ಆಮೇಲೆ ಹಸಿರು, ಹಳದಿ, ನೀಲಿ...ಇಬ್ಬರ ಕಣ್ಣಲ್ಲೂ ಗುಲಾಬಿಯ ಬಣ್ಣ ನಗುತ್ತಿತ್ತು. ಕೊನೆಗೂ ಮಾತನಾಡಿದಳು, "ಎಲ್ಲಿ ಪೊಟ್ಯಾಷಿಯಂ ಪರಮಾಂಗನೇಟಿನ ಆ ನೇರಳೆಯ ರಂಗು?" ನಮ್ಮಿಬ್ಬರ ನಗೆಯೂ ಒಂದಾಗಿ ಘಾಟು ಬಂತು.

ಅರೆಪ್ರಜ್ಞ

ಪೋಲಿ ಪದ್ಯದ ಮೊದಲ ಸಾಲಿನ ನಡುವ ಪದ ಕಣ್ಣು ಹೊಡೆದಂತೆ ಅವಳು! ಕಾಲ್ಬೆರಳ ತುದಿಯಲಿ ರಂಗೋಲಿ ಇಟ್ಟಳಾ? ತುಟಿಕಚ್ಚಿ ಕರೆದಳಾ ನನ್ನೆಸರ? ಉಸಿರು ಸಿಲುಕಿದೆ ನೀಲಿ ನೆರಿಗೆಯ ಲಂಗದಲೆಲ್ಲೋ! ಬಿಚ್ಚಿಟ್ಟು ಬದುಕಿಸು, ಸುತ್ತಿಟ್ಟು ಸಾಯಿಸು, ಅಮಲಿನಲಿ ಎಲ್ಲಾ ಚೆಂದ ಹೇಳಿಬಿಡು ಏನ್ಮಾಡ್ತೆ? ಮಾತ ಕೇಳದ ಬೆರಳುಗಳಿಗೆ ದಾರಿ ತೋರಿಸು, ತೋಳ ಕಡೆಯಿಂದ ಮುಕ್ತಿ ಕೊಡಿಸು. ಪೋಲಿ ಪದ್ಯದ ಕೊನೆಯ ಸಾಲಿನ ನಡುವ ಪದ, ಹಿಂಗೂದಲ ಬೆವರ ಘಮಕೆ ಅರೆಪ್ರಜ್ಞ ನಾನಾ?

ಕೊಲೆ...

"he was my brother...ನನ್ ಅಣ್ಣ. ದಿನಕ್ಕೆರಡು ಬಾರಿ ಮಾತ್ರ ನಾವು meet ಆಗ್ತಿದ್ದದು. There was always 3 fts distance, we do look at each ather only infront of dining table! ಮಾತು ಕಡಿಮೇನೆ. ಅಪ್ಪ ತುಂಬಾನೇ ನಿಷ್ಠುರ ಮನುಷ್ಯ. ಅಣ್ಣ ಅಷ್ಟೇ ಭಾವಜೀವಿ. ಅವನ ಗೆಳೆಯರು ಅಂತಾರೆ, ಚೆನ್ನಾಗಿ ಬರೀತಿದ್ನಂತೆ. unfortunatly i just came to know. ತಿಂಡಿ ತಿನ್ನೋವಾಗ್ಲೋ, ರಾತ್ರಿ ಊಟ ಮಾಡೋವಾಗ್ಲೋ ಕಾಣೋನು, ಆಗಲೂ ಅಪ್ಪನ ಮೀಸೆಯಡಿ ಅವನ ಮಾತು ಸಾಯ್ತಿದ್ವು. ಆದ್ರೆ ಒಮ್ಮೊಮ್ಮೆ ಅಪ್ಪನಂಥ ಅಪ್ಪನಿಗೇ ಎದುರುತ್ತರ ಕೊಟ್ಟು ಎದ್ದು ನಡೆಯುತ್ತಿದ್ದ! ಅವನು ಅಣ್ಣನೆಂಬ ಸಂಬಂಧ ದಾಚೆ ಎಂದೂ ಪರಿಚಿತನಲ್ಲ. ಪರಿಚಯವಿತ್ತೇ ಹೊರತು ನಮ್ಮಿಬ್ಬರ ಮಧ್ಯೆ ಆತ್ಮೀಯತೆಯೇ ಇರ್ಲಿಲ್ಲ. I never knew he had a story,a failed love story. Never thought he could kill himself...he was my brother,ನನ್ ಅಣ್ಣ..." ತಂಗಿಯ ಹೇಳಿಕೆಯಲ್ಲಿ ಎಲ್ಲೂ ತಂದೆಯ ಕೊಲೆಯ ಬಗ್ಗೆ ಮಾತಿರಲಿಲ್ಲ.

ಬಸ್ಕತೆ

ನಗುವಿಗೆ ಅಡ್ಡ ಕೈಯಿಟ್ಟು ನಕ್ಕಳು, ಕೆಂಪು ಪ್ರೇಮಿನ ಸುಲೋಚನದೊಡತಿ! ರೇಷ್ಮೆಗೂದಲ ಹೆರಳ ಹಿಂದೆತ್ತಿ ಕಟ್ಟಿಹಳು ಪಕ್ಕದಲಿರುವಾಕೆಯ ಚೇಷ್ಟೆ ನಗುವೇಕೋ ನಿಂತಿಲ್ಲ! ಸಂಜೆ ಬಸ್ಸನಲಿ ಇರುವೊಬ್ಬ ಚೆಲುವೆ, ಎತ್ತರದ ನಿಲುವು ತಾಮ್ರ ಬಣ್ಣದ ತೊಗಲು. ಮುಗ್ಧ ಮಗುವಲ್ಲ ಅಮಲ ಚೆಲುವು ಕಂಗೆಟ್ಟು ನೋಡುತಿಹೆ, ನಿಂತಿಲ್ಲ ನಗುವಿನ್ನೂ!! ಜೋಳಿಗೆಯ ಕಂಡಕ್ಟರ ತ್ರಾಸಭರಿತ ನೋಟ, ಚಿಲ್ಲರೆಗಾಗಿ ಕೂಸ ಹುಡುಕಾಟ, ಕಿಟಕಿದಾಟಿದ ಗಾಳಿಗೆ ಮುಂಗುರುಳ ಜೊತೆಯಾಟ. ಕುಂತಲ್ಲೇ ನೋಡಿದೆ ಒಂಟೆಕತ್ತಲಿ ಅತ್ತ, ಅಲ್ಲೆ ಬದಿಯಲಿ ಎನ್ನ ಸೋದರಿಯ ಆಸನ ತಿರುಗಿ ನೋಡಿದಳು ತಂಗಿ ನನ್ನತ್ತ... ಮುಗುಳ್ನಗೆಯನಿತ್ತು ತಿರುಗಿದೆ ಗೆಳೆಯನತ್ತ, ಚೆಲುವೆಯಿಳಿದಳು ಬಸ್ಸ, ಕತ್ತಲೆಯಲಿ ಕರಗಿ, ಕೊನೆಗೊಮ್ಮೆ ತಿರುಗಿ 

ಸತ್ಕತೆ

ಈ ಭಯಂಕರ ಟ್ರಾಫಿಕ್ಕಲ್ಲಿ ಬೈಕ್ ಹೋಡೆಯೋಕೋಗಿ ಬಿದ್ದಿರೋದ್ಕಿಂತಾ ಅಷ್ಟು ದೂರದಿಂದ ಫೋನ್ ಮಾಡಿ ತನ್ನ ಆಯುರ್ವೇದದ ಔಷಧಿಗಳು, ಆ ಔಷಧ ಸಿಗದೇ ಇದ್ರೆ ಅಂತ ಅದರ ಪರ್ಯಾಯ ಔಷಧಗಳನ್ನ ಹೇಳುತ್ತಿರೋ ಅಮ್ಮನ ಮಾತುಗಳೇ ಹೆಚ್ಚು ನೋವುಂಟು ಮಾಡುತ್ತಿದ್ವು. ಕರೆಯನ್ನ ಕಟ್ ಮಾಡೋಹಂಗಿಲ್ಲ, ಮತ್ತೊಂದು ಕಡೆ ಹುಡುಗಿಯ ಫೋನ್. ಅವಳೂ ಅಷ್ಟೇ, ಅವಳಮ್ಮ ಹೇಳಿದ ಔಷಧಗಳ ವಿನಿಮಯ ಮಾಡ್ಕೊಳೋಕೇ ಕರೆ ಮಾಡ್ತಿರೋದು, ಡೌಟೇ ಇರ್ಲಿಲ್ಲ. ಇಷ್ಟಗಲ ಮೊಬೈಲಿದ್ರೂ ಬ್ಯಾಟರಿ ನಿಲ್ಲಲ್ಲ. ಅಮ್ಮನ ಔಷಧದ ವಿವರ ಅರ್ಧ ಆಗುವಷ್ಟರಲ್ಲೇ ಬ್ಯಾಟರಿ ಕೂಗಿಕೊಂಡು ಆತ್ಮಹತ್ಯೆ ಮಾಡಿಕೊಂಡದ್ದು ಖುಷಿ ಕೊಟ್ಟಿತ್ತು. ಮಡಚಿ ಕಟ್ಟಿದ್ದ  ಎಡಗೈ ನೋಯುತ್ತಿತ್ತು. ತಂಪು ಗಾಳಿಗೋಸ್ಕರ ಬಾಲ್ಕನಿಯ ಕಿಟಕಿ ತೆರೆದೆ. ಯಾರೋ ಹಿಂದಿನಿಂದ ತಳ್ಳಿದಂತಾಯ್ತು. ಅಷ್ಟೇ ನೆನಪಿರೋದು. ಈಗ ಇದೆಂತದೋ ದೀಪವಾಗ್ಲೀ, ಸೂರ್ಯನಾಗ್ಲೀ ಇಲ್ದೇ ಇದ್ರೂ ಬೆಳಕಿರೋ ಜಾಗದಲ್ಲಿದೀನಿ. ಎದುರುಗಡೆ ಟಿವಿಯಿದೆ, ಅರೇ ಇದು ನಮ್ಮನೆ!! ಇದೆಂತದು! ನ್ಯೂಸಲ್ಲಿ ನನ್ನ ಮುಖವಿದೆ! ಸೌಂಡು ದೊಡ್ಡ ಮಾಡಿ ಕೇಳಿದೆ... "ಎರಡು ದಿನಗಳ ಹಿಂದೆ ಅಪಘಾತವಾಗಿ ನಂತರ ಆತ್ಮಹತ್ಯೆಗೆ ಯತ್ನಿಸಿದ್ದ ಟೆಕ್ಕಿ ಸಾವು" ಹೌದು, ನನ್ನನ್ನ ಬಾಲ್ಕನಿಯಿಂದ ತಳ್ಳಿದ್ದು ಅವಳೇ...ಆವತ್ತು ನನ್ ಬೈಕಿಗೆ ಅಡ್ಡ ಬಂದವಳು...

ಉಸಿರು

ಅವನ ಹೆಸರು ಯಾರಿಗೂ ತಿಳಿದೇ ಇಲ್ಲ ಅನ್ನೋ ಮಟ್ಟಿಗೆ 'ಮೂಕ' ಅನ್ನೋ ಅನ್ವರ್ಥ ಪ್ರಸಿದ್ಧವಾಗಿತ್ತು. ಆದರೆ ಅವನೇನು ಭಯಂಕರ ಫೇಮಸ್ ವ್ಯಕ್ತಿಯೇನಲ್ಲ. ಶಹನಾಯಿಯವನ ಜೊತೆ ಶೃತಿ ಊದುವುದೇ ಅವನ ಜನ್ಮ ಕಾಯಕ. ಅರವತ್ತರ ವಯಸ್ಸಿನವನಿಗೆ ನಲವತ್ತೆಂಟರ ಅನುಭವ ಶೃತಿ ಊದುವುದರಲ್ಲಿ. ಮೂಗತನವೇ ಅವನ ಕೌಶಲ್ಯ. ಶಹನಾಯಿಯವನ ವಾದ್ಯ ಕ್ರಾಂತಿಗೆ ಶೃತಿ ಪೆಟ್ಟಿಗೆ ಆಗಮಿಸಿದ ಮೇಲೆ ಇವನ ಕೌಶಲ್ಯ ಕಾಣೆಯಾಗಿತ್ತು. ಬರೋಬ್ಬರಿ ಹತ್ತು ನಿಮಿಷಕ್ಕಿಂತ ಜಾಸ್ತಿ ಧಮ್ಮು ಕಟ್ತಿದ್ದೋನು ಎರಡು ನಿಮಿಷಕ್ಕೆಲ್ಲಾ ಉಸಿರು ಬಿಡತೊಡಗಿದ. ಕೆಲಸ ಕಡಿಮೆಯಾದಂತೆ ಆದಾಯ ಕಡಿಮೆ ಆಗುತ್ತಾ ಬಂತು. ಒಂದು ದಿನ ಅವನ ಅಲ್ಪ ಆದಾಯವೂ ನ ಿಂತು ಹೋಯ್ತು. ಬದುಕೋಕೆ ಆಹಾರ ಬೇಕು, ಆಹಾರ ಪುಗಸಟ್ಟೆ ಬರತ್ಯೇ? ದುಡಿಮೆಯೇ ಇಲ್ಲದೇ ಬದುಕೋದು ಹೆಂಗೆ? ಮೂಗ ತನ್ನ ಕೌಶಲ್ಯವನ್ನು ಮರಳಿ ಪಡೆಯೋ ಪ್ರಯತ್ನ ಮಾಡಿದ. ಉಸಿರು ಕಟ್ಟಿ ಕುಳಿತ...

ಸಿಗರೇಟು

ಅಂವಂಗೆ ಸಿಗರೇಟು ಸೇದೋದು ಬರೀ ಚಟಕ್ಕಿಂತಾ ಜಾಸ್ತಿ ಅನ್ನುವಂಥದ್ದು. ದಿನಕ್ಕೆ ಎಷ್ಟು ಉರಿದು ಸಾಯುತ್ತಿದ್ವು ಅನ್ನೋ ಲೆಕ್ಕ ನನ್ನ ಬಳಿಯಂತೂ ಇಲ್ಲ. ಎಲ್ಲರಂತೇ ಅದೊಂದು ಚಟವಿಲ್ದಿದ್ರೆ ಭಾರಿ ಒಳ್ಳೆ ಮನ್ಷಾ ಅಂವ. ಅಂಥಾ ಅವಂಗೆ ಒಂದು ಲವ್ ಸ್ಟೋರಿಯಿತ್ತು, ಮಾಮೂಲಿ ಕಥೆಯಲ್ಲ ಅನ್ನೋದು ನನ್ ನಂಬಿಕೆ. ಪ್ರತಿಬಾರಿ ಹೊಗೆ ಬಿಟ್ಟಾಗಲೂ ಆ ಹೊಗೆ ಒಂದು ಹುಡುಗಿಯ ಆಕಾರ ಪಡೆಯೋದು. ಶ್ವೇತ ಸುಂದರಿ! ಬಹುಶಃ ಆ ಸುಂದರಿಯ ಸಾನಿಧ್ಯಕ್ಕಾಗೇ ಅವನು ಸಿಗರೇಟು ಸೇದ್ತಿದ್ನೇನೋ. ಸುಂದರಿಯ ಸಹವಾಸದಿಂದ ಮಾತಿಗಿಂತ ಅವನ ಬಾಯಿಯಿಂದ ಹೊಗೆಯೇ ಹೊರಹೊಮ್ಮುತ್ತಿತ್ತು. ಅವನ ಪ್ರೇಮ ಅದ್ಯಾವ ಉತ್ಕಟತೆಗೆ ಹೋಯ್ತೆಂದ ್ರೆ, ಒಂದು ದಿನ ಆ ಸುಂದರಿಯ ಅಪ್ಪುಗೆ ಬಯಸಿದ. ಅವಳೂ ತೆಕ್ಕೆಗೆ ಎಳೆದುಕೊಂಡಳು. ಪಲ್ಲಂಗಕ್ಕೆ ಬರಸೆಳೆದಳು. ಮೈಥುನದ ಶಾಖಕ್ಕೆ ಉಸಿರು ಬಿಸಿಯಾಯ್ತು. ಅಮಲು ಕತ್ತಲಾಯ್ತು. ಎದ್ದು ನೋಡಿದ, ತಡಕಾಡಿದ, ಇಲ್ಲ..ಸುಂದರಿ ಅಲ್ಲಿಲ್ಲ! ದೇವರ ಮನೆಯತ್ತ ನೆಡೆದ ಆಕೆಯ ಹುಡುಕುತ್ತ. ಅಲ್ಲೊಂದು ಹಣತೆಯಿತ್ತು. ಅದೇಕೋ ಆ ಸುಂದರಿಯ ಘಮ ಇವನ ಮೂಗಿಗೆ ಸೋಕಿತು. ಹಣತೆ ಆರಿತು, ಕಪ್ಪನೆಯ ಹೊಗೆ ಬಂತು. ಅದೇ ಸುಂದರಿ! ನೀಲಕನ್ಯೆ...

ಆಕೆ

ನೆರೆಮನೆಯಲ್ಲೂ ಹುಡುಗಿಯಿಹಳು, ಆದರಾಕೆ ಪದ್ಯವಾಗುವುದಿಲ್ಲ, ಆಕೆ ಸುಂದರಿಯಲ್ಲ. ಸಂಪಿಗೆಯ ನಾಸಿಕವಿಲ್ಲ, ತೊಂಡೆ ತುಟಿಗಳಿಲ್ಲ. ಮುಂಗುರುಳು ತಿರುವಿಲ್ಲ, ಹುಬ್ಬಿನಲಿ ಬಿಲ್ಲಿಲ್ಲ ಆಕೆ ಪದ್ಯವಾಗುವುದಿಲ್ಲ. ನಗುವಿನಲಿ ನೀರ ಸಪ್ಪಳವಿರದಾಕೆ ನೀಳಕೇಶಕೆ ಮೊಲ್ಲೆ ಮುಡಿದಿಲ್ಲ, ಅತ್ತರಿನ ಘಮ ಕಂಡಿಲ್ಲ ಆಕೆಯದು ದಂತವರ್ಣವಲ್ಲ, ಆಕೆ ಪದ್ಯವಾಗುವುದಿಲ್ಲ. ಯಾರದೋ ಸ್ವಪ್ನಕೆ ಆಕೆ ರಾಣಿಯಾಗಿಲ್ಲ, ಕನವರಿಕೆಗಳಿಗೆ ಪ್ರೇಮಿಯಾಗಿಲ್ಲ. ದುಂಬಿಗಳಿಗಾಕೆ ಪುಷ್ಪವಾಗಿಲ್ಲ, ರಂಗು ಮಾತುಗಳ ರಂಗೋಲಿಯಾಗಿಲ್ಲ ಆಕೆ ಪದ್ಯವಾಗಿಲ್ಲ. ಹತ್ತು ಹುಡುಗಿಯರಲಿ ಎದ್ದು ಕಾಣದವಳು, ನೆರಮನೆಯ ಅಂಗಳದಿ ಹೂವ ಕೀಳದವಳು, ಜಾತ್ರೆಪೇಟೆಯಲಾಕೆ ಗೊಂಬೆಯಲ್ಲ. ಹೆಣ್ಣಾಕೆ ಎಲ್ಲರಂತೇ, ಆಸೆಗಳಿರಬಹುದು ಸಾವಿರ ಕನಸುಗಳೂ ಇರಬಹುದು, ರಸಿಕ ಕವಿಗೆ ಕಾಣದವಳು ಅದಕೇ, ಆಕೆ ಪದ್ಯವಾಗಿಲ್ಲ.

ಹಲ್ಬಾಣ ೨೬

ಆಕೆ ನಗುವುದಿಲ್ಲ. ಆಕೆಯದು ಸುಂದರ ದಂತಪಂಕ್ತಿಗಳೇ, ಒಂಚೂರೂ ಮುಂದೆ ಬಂದಿಲ್ಲ, ಆದರಾಕೆ ನಗುವುದಿಲ್ಲ! ಪೋಲಿ ಜೋಕುಗಳಿಗಾಕೆ ಉರಿಯುವುದಿಲ್ಲ, ಸಭ್ಯ ಕಾಮಿಡಿ ಆಕೆಯನು ನಗಿಸುವುದಿಲ್ಲ! ಆಕೆಯದು ಸದಾ ಗಾಂಭೀರ್ಯ, ಆಕೆ ನಗುವುದಿಲ್ಲ. ಇನಿಯನ ಓಲೈಕೆಗೆ ಮುಗುಳ್ನಗೆಯಿಲ್ಲ, ಗೆಳತಿಯ ಚೇಷ್ಟೆಗೂ ಪ್ರತಿ ನಗುವಿಲ್ಲ! ಹಾಸವದು ಅಪಥ್ಯ, ಹಾಸ್ಯಕಾಕೆ ನೇಪಥ್ಯ ಆಕೆ ನಗುವುದಿಲ್ಲ. ಭಾರ ಹೃದಯದಿ ಕೂತು ಕಂಬನಿಯಿತ್ತಿದ್ದಾಳೆ, ದುಃಖಗಳ ಖಾತೆಗೆ ನಗುವ ಜಮೆಯಿಲ್ಲ, ಅಶ್ರುಗಳ ತೂಕಕ್ಕೆ ತುಟಿಗಳು ಜೋತು ಬಿದ್ದಿಲ್ಲ. ಆಕೆ ನಗುವುದಿಲ್ಲ. ಆಕೆಯದು ಭಾವನೆಗೆ ಬೇಲಿ ಕಟ್ಟಿದ ಬದುಕಲ್ಲ, ಕಷ್ಟಗಳು ಆಕೆಯ ನಗುವ ತಿಂದಿವೆಯಷ್ಟೇ. ಯಾರದೋ ಮಾತಿಗೆ ಅವಳೇಕೆ ನಗಬೇಕು? ಅವಳ ಜೊತೆಗೂಡಿ ಅತ್ತವರು ಯಾರು? ಬಿದ್ದರೂ ನಗುವ ಜನರಿರುವ ಜಗದಲ್ಲಿ ಆಕೆಯೇ ನನಗಿಷ್ಟ, ಆಕೆ ನಗುವುದಿಲ್ಲ...

ಹಲ್ಬಾಣ ೨೭

ಒಂದೇ ಮಳೆಗೆ ಅದು ಮಳೆಗಾಲವಾಗುವುದಿಲ್ಲ, ನಾ ಬರೆವುದು ಕವನವಾಗುವುದಿಲ್ಲ, ಅದು ಹಲ್ಬಾಣವಷ್ಟೇ. ಪ್ರಾಸವಿಲ್ಲ, ತ್ರಾಸವಿಲ್ಲ ಅರ್ಥವಿಲ್ಲ ಹಲುಬುವಿಕೆಗೆ, ಎಲ್ಲಿಂದಲೋ ಆಕೆ ಬರುವಳು, ನಗುವಳು, ಅಳುವಳು. ಸಾಲುಗಳ ಮಧ್ಯೆ ಸೇರಿ ಪ್ರೀತಿಯಾಗುವಳು, ಆದರೆ ನಾ ಬರೆಯುವುದು ಕವನವಾಗುವುದಿಲ್ಲ ಅದು ಬರಿಯ ಹಲ್ಬಾಣವಷ್ಟೇ. ಯಾವುದೋ ಬೀದಿ ತುದಿಯಲಿ, ನಾಲ್ಕು ಮೂಲೆಯ ಸಂಧಿಯಲಿ ಕುಳಿತು ಬೀಡಿ ಹೊಗೆಯಲಿ ಬೆರೆತು, ಬೆವೆತು ಗೀಚಿಬಿಡಬಹುದು, ಕೂಗಬಹುದು, ಕಿರುಚಬಹುದು ಚಿರವಿರಹಿಯ ಹಲ್ಬಾಣಕೆ ಅರ್ಥವಿಲ್ಲ, ಅಲ್ಲೆಲ್ಲೋ ರೋಧನೆಯ ನೆರಳಿದೆ, ಅದು ನರಳಿದೆ ಸಾಲಿನಲಿ ಸೇರಿ ಉದ್ದವಾಗುವುದು. ಆದರೆ, ನಾ ಬರೆವುದು ಕವನವಾಗುವುದಿಲ್ಲ ಅದು ಬರಿಯ ಹಲ್ಬಾಣವಷ್ಟೇ. ಅವಳೆಂಬ ಆಕೆ ಬೆನ್ನ ತೋರಿಸಬಹುದು, ನೆರಿಗೆಯ ಗರಿಯಲ್ಲಿ ಸಿಲುಕಿರಬಹುದು ಕನಸು. ಉಸಿರು ಬರಬಹುದು ಸತ್ತ ನೆನಪಿಗೂ, ವಿರಹದ ಅಮಲಲೂ ಇಳಿಯಬಹುದು ಆಕೆ ಹಲ್ಬಾಣವಾದಾಗ ಅಲ್ಲೇ ಏರಬಹುದು ಗಗನವ. ಆದರೆ, ನಾ ಬರೆವುದು ಕವನವಾಗುವುದಿಲ್ಲ, ಅದು ಬರೀ ಹಲ್ಬಾಣವಷ್ಟೇ.

ಹಲ್ಬಾಣ ೨೮

Image
ಹವಳದಧರದ ಹುಡುಗಿ ಹಲ್ಬಾಣವ ಮೆಚ್ಚಿದಳು! ಒಳಪೆಟ್ಟಿಗೆಗೆ ಬಂದು ಪಂಥವನಿತ್ತಳು, ಹಲುಬೆಂದಳು ಅವಳ ಬಗ್ಗೆ. ಅಪರಿಚಿತೆಯ ಪಂಥಾಹ್ವಾನ ಒಪ್ಪಿಬಿಡಲೆ? ಹರಿದ ಚಾದರದ ಚಪಲ ಹೂಂ ಅಂತು ಒಳಗೆ, ನಾಲ್ಕು ಸಾಲಲಿ ಹಲುಬಿದೆ ಅವಳ ಬಗೆಗೆ. ಸುಕುಮಾರಿ ಚರಿತೆ ಗೊತ್ತಿಲ್ಲ ನನಗೆ, ಸುಕೋಮಲ ಚಂಚಲೆಗೆ ಮರುಳಾದೆ ಕೊನೆಗೆ. ನೋಡದೆಯ ಎಡ ಎದೆಯ ಕೋಣೆಯ ಒಡೆದವಳ ಸಾಯುವಾ ಮೊದೆಲೆ ಆಗಲೇ ಮದುವೆ? ಕೌಮಾರ್ಯ ಕಾಡಿಹುದು, ಪ್ರೇಮವದು ಮೂಡಿಹುದು! ಮೂರುಗಂಟಿಗೇ ಬದುಕ ಮುಗಿಸಿಬಿಡಲೆ? ಚದುರೆ ಚಂಚಲೆ ನಕ್ಕಳು ಒಡನೆ, ಅತಿಯಾಯ್ತು ಹಲ್ಬಾಣ ಸುಮ್ಮನಿರು ಮಗನೇ  :/ ಆಗಲೇ ಆಗಿರುವೆ ಒಂದನೇ ಮದುವೆ, ಹಳೆ ಗೆಳೆಯ ಕಾದಿಹನು ದೂಸರಾ ಛಾನ್ಸಿಗೆ, ಹೊಸಗಂಡ ಬಿಡನು, ಸಂಬಳವ ತಂದಿಹನು ದುಡಿ ಮೊದಲು ಜಾಸ್ತಿ ಮೂರನೇ ಅವಕಾಶ ನಿನಗೇ ಕೊಡುವೆ  ;) ಸಹವಾಸ ಸಾಕೆಂದು ಸುಮ್ಮನಾಗದೆ ನಾನು ಕೇಳಿದೆನು ಅವಳ ಮೂರನೆಯ ಮದುವೆ ಎಂದು? ಎಂದು  :( ಉತ್ತರವ ಹೇಳದೇ ಒದ್ದಂತೆ ಮಾಡಿದಳು, ಬ್ಲಾಕಿಸಿಯೆ ಬಿಟ್ಟಳು ಕೊನೆಗೊಮ್ಮೆ ನನ್ನ  :'( ಚಿರವಿರಹಕೆ ಹೊಸ ನೆನಪು ಸೇರ್ಪಡೆಯಾಯ್ತೆಂದು ಖುಷಿಯಾಗಿ ಗೀಚಿದೆ ಹಲ್ಬಾಣ ಮತ್ತೊಂದು 

ಹಾದಿಹೊಕ

ಆತ ದಾರಿತಪ್ಪುತ್ತಾನೆ, ಗಮ್ಯ ತಿಳಿದಿರದ ಹಾದಿಹೋಕ ಹಲಬುತ್ತಾನೆ. ಕಡುಗತ್ತಲೆಯಲಿ ಬೆಳಕಬೀರದ ಮಿಣುಕು ಹುಳಕಾತ ಬೈಯುತ್ತಾನೆ, ದೂರ ನಿಂತು ನಗುವ ನಕ್ಷತ್ರದ ಮುಖಕೆ ಉಗಿಯುತ್ತಾನೆ, ಮುಖ ಒರೆಸಿಕೊಳ್ಳುತ್ತಾನೆ. ದಾರಿ ತಪ್ಪಿದ ಹಾದಿಹೋಕ ಹಲಬುತ್ತಾನೆ. ಮಾರು ನಡೆಯುವ ಮೂರು ತಿರುವುಗಳ ಬಳಿ ನಿಂತು ಕಡ್ಡಿ ಗೀರುತ್ತಾನೆ, ಬೀಡಿ ಹಚ್ಚುತ್ತಾನೆ. ದಾರೀಯಲಿ ಹೋಗದೇ ಮೇಲೆ ಹಾರುವ ಹೊಗೆಗೆ ಶಾಪವೆಸೆಯುತ್ತಾನೆ, ಆರಿ ಹೋಗುವ ಬೀಡಿಯನು ತುದಿಗಾಲಲಿ ತುಳಿಯುತ್ತಾನೆ. ದಾರಿ ತಪ್ಪಿದ ಹಾದಿಹೋಕ ಹಲಬುತ್ತಾನೆ. ಬೆಳಕ ಕಂಡೊಡನೆ ನಿಲ್ಲುತ್ತಾನೆ, ಕತ್ತಲೆಯ ರಾತ್ರಿಯಲಿ ಕಾಲ ಬೀಸುತ್ತಾನೆ. ದಾರಿ ತಪ್ಪುತ್ತಾನೆ, ಗಮ್ಯ ತಿಳಿಯದ ಹಾದಿಹೋಕ ಹಲಬುತ್ತಾನೆ.

ಪ್ರೆಷ್ಕಥೆ

ದೀಪದ ಬುಡದಲ್ಲಿ ನೆರಳ ನಾಗರದಾಟ ಹೊಗೆ ತಿರುವುಗಳಲಿ ಪತಂಗಕೆ ಅಪಘಾತ ನಾಲ್ಕು ಸಾಲಿಗೇ ಮುಗಿಯಬೇಕಿದ ಕವನ ಹೊಗೆಗುಂಟ ಹರಿದಿದೆ, ವಾಚನದ ಸಮಯದಲಿ ಕತ್ತಲೆಯು ಕವೆದಿದೆ. ಅವಳೇಕೆ ಕೇಳಲಿಲ್ಲ ನಾ ಬರೆದ ಕವಿತೆಯ? ಕಿವಿಯೊಳಗೆ ಬೆಳಕು ಸಾಲದೇನೋ, ಅಲ್ಲೂ ಜ್ಯೋತಿಯ ಕೊರತೆಯಿದೆ. ಆ ಕಂಬದಲಿ ಯಾರಿದ್ದಾರೆ? ಪ್ರಹ್ಲಾದ ಹೇಳಿದಂತೆ ಅಲ್ಲಿ ದೇವರಿರಲೂಬಹುದು ಆದರೆ ಇಲ್ಲಿ ಕತ್ತಲೆಯಿದೆ ಕಾಣದ ದೇವರ ಹುಡುಕಲಾರೆ. ಒಂದು ಕತ್ತಲೆಯ ರಾತ್ರಿ ಹೊಸದೇ ಈ ಜಗಕೆ, ಬೆಳ್ಳನೆಯ ವಿದ್ಯುದೀಪ ಮಶಿ ಹಿಡಿದಂತಾಗಿದೆ. ಮಾತನಾಡದೇ ಕುಳಿತ ರೇಡಿಯೋಗೂ ಬಾಯಿ ಬರಬಹುದಿತ್ತು, ಸಂಜೆ ಹೊತ್ತಲಿ ಪ್ರದೇಶ ಸಮಾಚಾರ ಕೇಳಬಹುದಿತ್ತು. ಗಾಳಿ ಹಾಡು ಅರ್ಥವಾಗುತ್ತಿಲ್ಲ, ಅದಾವ ರಾಗವೋ ಮರಗಳ ತಲೆ ತೂಗದೇ ನಿಲ್ಲುತ್ತಿಲ್ಲ! ಹೊತ್ತಿಗೆಯ ಹೊರೆ ಸೆರೆ ಕುಡಿದಂತೆ ಮಲಗಿದೆ, ಹಾಳೆಗಳ ನಡುವೆ ಓದಿನ ಗುರುತು ಅಡಗಿದೆ. ಇಂದು ನನ್ನ ಕೋಣೆಯಲಿ ಇಷ್ಟೆಲ್ಲಾ ಕಾಣುತಿದೆ, ಕಾರಣ, ಸುತ್ತ ಕತ್ತಲೆಯಿದೆ! ಸೋರದ ತಾರಸಿಯ ಮಾಡಲ್ಲಿ ಹನಿಗಳ ಶಬ್ಧ ಹಿಂದೆಂದೂ ಇರಲಿಲ್ಲ, ಮಳೆಜಿರಲೆಯ ಸಂಗೀತ ಆಲಿಸಿಯೇ ಇರಲಿಲ್ಲ. ಬೆಳಕಿರದ ಸಂಜೆಯಲಿ ಹೊಸ ಜಗದ ಅನುಭವ, ಎಂದಿಗೂ ಇರಲಿ ಈ ವಿದ್ಯುದಾಭಾವ

ಹಾದಿ ಹಲ್ಬಾಣ

ಆ ಹಾದಿ ಹೊಂಟಿತ್ತು... ಘಟ್ಟಗಳನ್ನು ಹತ್ತಿ, ಏರು ಮುಗಿದೊಡೆ ಇಳಿದು ಹಾದಿ ಹೊಂಟಿತ್ತು. ಆ ಊರ ನೋಡಲು ತವಕ, ಅದೆಷ್ಟು ಮನೆಗಳ ದಾಟಿತ್ತು? ಬಂಡೆಗಳ ಬಳಿ ತಿರುವಿ, ಬಯಲಲಿ ನೆಟ್ಟಗಾಗಿ ಅಂತೂ ಹಾದಿ ಹೊಂಟಿತ್ತು. ಈ ಊರ ಬಿಡುವಾಗ ಗುಂಪಂತೆ ಇತ್ತು, ನಡುವಲಿ ಕವಲು ಅದೆಷ್ಟು ಹಡೆದಿತ್ತು? ಗಿಡಮರಗಳ ಮೇಲೇರಿ ಲತೆಗಳ ಅಡಿಮಾಡಿ ಆ ಹಾದಿ ಹೊಂಟಿತ್ತು. ಅನಂತ ಗುರಿ ಹಿಡಿದು ಜಡ ಹರಿದ ದೇಹದಿ ಅದೆಷ್ಟು ಪಾದಗಳ ಗುರುತಿತ್ತು? ಗುಡಿ ದೇವರ ಹಿಂದಿಕ್ಕಿ ಕಾಡುಗಳ ಒಳಹೊಕ್ಕಿ ಹಾದಿ ಹೊಂಟಿತ್ತು. ದಾಹವಾದೆಡೆಯೆಲ್ಲ ನದಿ ನದಗಳ ಹಾರಿ ಸಾಗರವ ಕಂಡೊಡನೆ ಅದೇಕೆ ಬಳುಕಿತ್ತು? ಹಸಿವಾಗದ ಅರಸ ಹೊಟ್ಟೆ ತುಂಬದ ಅಸುರ ಬಿರುದುಗಳ ಬಯಕೆಗೆ ಹಾದಿ ಹೊಂಟಿತ್ತು. ಸುಸ್ತಾಗದ ಪಯಣಕೆ ಜೊತೆಗಾರನ ಬಯಸದೆ ಆ ಹಾದಿಯ ಪಯಣ ಎತ್ತ ಸಾಗಿತ್ತು? ನಮ್ಮೂರ ತಲುಪಿತು, ಅವಳೂರ ದಾಟಿತು, ಹಾದಿ ಧೂತನ ನೆರವು ಯಾರಿಗೋ ಬೇಕಿತ್ತು, ಆ ಹಾದಿ ಹೊಂಟಿತ್ತು!

ನಿಸ್ತಂತು

Image
ಊಹ್ಞೂಂ, ಇಂದ್ರಿಯಗಳು ನಿವೃತ್ತಿ ಪಡೆದಿವೆಯೇನೋ. ಸ್ಪರ್ಷವಿಲ್ಲ, ಗಂಧವಿಲ್ಲ, ದೃಷ್ಟಿಯಿಲ್ಲ, ಶ್ರವಣವಿಲ್ಲ. ಏಕ್ದಂ ಸತ್ತಂತೆ, ಅನುಭವವೇ ಇರದ ಸ್ಥಿತಿಗೆ ಸಾವೆನ್ನಬಹುದೇ? ಸ್ಪಷ್ಟತೆಯಿಲ್ಲ. ಸೂರ್ಯನನ್ನು ತಿವಿದು ಇನ್ನಷ್ಟು ದೂರ ತಳ್ಳುತ್ತೇವೆ ಎಂಬಂತೆ ನೆಟ್ಟಗೆ ನಿಂತಿದ್ದ ಅಡಿಕೆ ಮರಗಳ ಕಾಲು ಅದೆಷ್ಟು ಉದ್ದ? ಬೆನ್ನಿಗೆ ದೊಣ್ಣೆ ಕೊಟ್ಟು ನೂಕಿದಷ್ಟೇ ಯಾಂತ್ರಿಕವಾಗಿ ಎದ್ದ ರಾಮಣ್ಣ. ಕೊಯ್ದಿಟ್ಟ ಬಾಳೆಕೊನೆಗಳನ್ನು ನಾನೇ ಹೊರಬೇಕು! ಮಗ ಇದ್ದಿದ್ದರೆ? ಅವನನ್ನು ಅಷ್ಟು ದೂರ ಕಳಿಸಿದವ ನಾನೇ ಅಲ್ಲವೇ? ನಾಲ್ಕೈದು ವರ್ಷಗಳ ಅವನ ಸಾಂಗತ್ಯ, ಅದೂ ಮುಪ್ಪು ಹತ್ತುವ ಕಾಲದ ಸಾಮಿಪ್ಯ ಇಷ್ಟೊಂದು ಅವಲಂಬಿಯನ್ನಾಗಿ ಮಾಡಿಬಿಟ್ಟಿತಾ? ಪ್ರಶ್ನೆಗಳು ಹುಟ್ಟಿದಷ್ಟು ಸರಳವಾಗಿ ಇತ್ತೀಚೆಗೆ ಉತ್ತರಗಳು ಹೊಳೆಯುತ್ತಿಲ್ಲ, ಇದೇ ಅಲ್ಲವೇ ಮುಪ್ಪೆಂದರೆ? ಊಹ್ಞೂಂ, ಈಗೀಗ ಬದುಕೇ ಬರೀ ಸ್ವಗತವಾಗಿತ್ತು ರಾಮಣ್ಣನ ಪಾಲಿಗೆ. ಬಾಳೆಗೊನೆಗಳನ್ನು ಮಂಗಗಳಿಗೆ ತಿನಿಸನ್ನಾಗಿ ಬಿಡುವುದು ಮೊದಲಿಂದಲೂ ಆಗಿಬರದ ರಾಮಣ್ಣ ತಾನೇ ತೋಟಕ್ಕೆ ಬಂದಿದ್ದ. ಬೆಳಗಿನ ಹೊತ್ತಿನ ಸುಸ್ತಿಗೆ ದಶಕಗಳ ಹಿಂದೆ ಅಂಟಿಕೊಂಡ ಡಯಾಬಿಟೀಸು ಕಾರಣವಾಗಿರಬಹುದು. ಹೆಂಡತಿ ಸತ್ತಮೇಲೆ ಇಡೀ ಮನೆಗೆ ಒಂದೇ ದೇಹ. ಆಗಾಗ ಆಳುಗಳು ಬರುತ್ತಿದ್ದರಾದರೂ ನಿರಂತರ ಕೆಲಸವಾಗಲೀ, ಕರೆದಾಗ ಬರುವ ಸೌಜನ್ಯವಾಗಲೀ ಈಗ ಉಳಿದಿಲ್ಲ. ಒಟ್ಟಿನಲ್ಲಿ ಎಲ್ಲ ಮನೆಗಳಂತೆ ಇದೂ ಒಂದು ಮನೆ. ಮಕ್ಕಳಿಲ್ಲವೇ? ಮಲೆನಾಡ ಎಲ್ಲ ಮನೆಗಳಂತೇ,

ಅಸಂಭಾವನೆ

Image
      “ಶಿರ್ಸಿ ಪ್ಯಾಟೆ ಊದ್ದಕೆ ಬೆಳೆದ ಕಾಲವದು. ಅತ್ತ ಇಸಳೂರನ್ನು ದಾಟಿ, ಇತ್ತ ಅಮ್ಮೀನಳ್ಳಿ ದಾಟಿ, ಆಕಡೆ ಬನವಾಸಿಯನ್ನೂ ತನ್ನೊಳಗೆ ಸೇರಿಸಿಕೊಂಡು ಬ್ರಹನ್ನಗರಿಯಾಗುವತ್ತ ತಯಾರಾಗಿತ್ತು." ಹಿಂಗೆ ಹೇಳುತ್ತಿದ್ದಂತೇ, ನಾನು ನೋಡಿದ್ದೇನೆ ಶಿರಸೀನ, ಅಷ್ಟೆಲ್ಲಾ ದೊಡ್ಡ ಇಲ್ಲ ಸುಳ್ ಹೇಳ್ಬೇಡ. ಇದೊಂದು ಸ್ವಪ್ನವೋ, ಕಲ್ಪನೆಯೋ ಎಂಥದೋ ಒಂದೆಂದು ಹೇಳಿದಳು ಸಾನ್ವಿ.         ಸಾನ್ವಿ, ಹುಟ್ಟಿದ್ದು ಬೆಂಗಳೂರಿನಲ್ಲಿದ್ದ ಅಜ್ಜಿ ಮನೆಯಲ್ಲಿ. ಬೆಳೆದಿದ್ದು ಲಂಡನ್ನಿನ ‘ಸಿಟಿ ಆಫ್ ಲಂಡನ್ ಸ್ಕೂಲ್ ಫಾರ್ ಗರ್ಲ್ಸ್’ ಅನ್ನೋ ಈಷ್ಟುದ್ದದ ಹೆಸರುಳ್ಳ ಶಾಲೆಯಲ್ಲಿ.  ಭಾರತೀಯ ಸಂಸ್ಕಾರಗಳನ್ನು ಮೆಮೊರಿ ಕಾರ್ಡಿನಲ್ಲಿ ಫೀಡ್ ಮಾಡಿದರೆ ಹೆಂಗಿರಬಹುದು? ಸಾನ್ವಿ ಹಂಗೇ ಇದ್ದಳು. ಕನ್ನಡ ಗೊತ್ತು, ಇಂಗ್ಲೀಷಿನಂತೇ! ಹನ್ನೆರಡನೇ ಇಯತ್ತೆ ಮುಗಿಸಿ ಬಂದವಳಿಗೆ ಅದ್ಯಾಕೆ ‘ಇಂಡಿಯನ್ ಇಕಾನಮಿ’ ಬಗ್ಗೆ ಅಧ್ಯಯನ ಮಾಡಬೇಕೆಂದು ಅನಿಸಿತ್ತೋ, ಗೊತ್ತಿಲ್ಲ.        “ಅಜ್ಜೀ, ಕಥೆ ಹೇಳೆ" ಇಷ್ಟು ದೊಡ್ಡವಳಾದರೂ ಅಜ್ಜಿಯ ಬಾಯಲ್ಲಿ ಕತೆ ಕೇಳುವ ಹುಚ್ಚು. ಕಾಗಕ್ಕ ಗುಬ್ಬಕ್ಕನ ಕತೆ ಹೇಳಿದರೆ ಅಜ್ಜಿಗೆ ಲಂಡನ್ನಿಂದ ತಂದ ಚಾಕ್ಲೇಟಿಲ್ಲ. ಮತ್ತೆಂತ ಕತೆ ಬೇಕು? ಹ್ಞೂಂ, ಸಿಂಡ್ರೆಲ್ಲಾಳ ಕನ್ನಡ ವರ್ಷನ್ನಾದರೆ ಪರವಾಗಿಲ್ಲ ಅಂತ ಪರೋಕ್ಷ ನಿಬಂಧನೆಯೂ ಇತ್ತು. “ಈಗ ಒಪ್ಕೋ, ಶಿರಸಿ ಬೆಂಗ್ಳೂರಿಗಿಂತಾ ದೊಡ್ ಸಿಟಿ, ಆಯ್ತಾ?" ಅಜ್ಜಿಯ ಷರತ್ತು. “ಹ್ಞೂಂ, ವಾಟೆ

ವೇದಕ್ಕಳ ಶವಯಾತ್ರೆ

ಗನಾಕೆ ಮಳೆ ಹೊಯ್ಯುತ್ತಿದ್ದ ಒಂದು ಬೆಳಿಗ್ಗೆ ವೇದಕ್ಕ ಸತ್ತು ಹೋದಳು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ತಾಸು ಘಳಿಗೆಯಲ್ಲಿ ಮೊದಲ ಸಲ ಅತ್ತಿದ್ದ ವೇದಕ್ಕ, ಎಪ್ಪತ್ತೊಂದನೇ ಸ್ವಾತಂತ್ರ್ಯೋತ್ಸವಕ್ಕೆ ಸ್ವತಂತ್ರಳಾದಳು. ಅಲ್ಲಿಗೆ ನಮ್ಮೂರ ಎರಡು ತಲೆಮಾರುಗಳ ಕೊಂಡಿಯೊಂದು ಕಳಚಿಬಿತ್ತು.     ವೇದಕ್ಕ ಸ್ವರ್ಗಸ್ಥಳಾಗಿದ್ದನ್ನು ಈ ರೀತಿ ಹೇಳಬೇಕೇ? ಹೀಗೊಂದು ಪ್ರಶ್ನೆಯನ್ನು ನೀವು ಕೇಳಬಹುದು, ಅದಕ್ಕೆ ನೀವೂ ಸ್ವತಂತ್ರರು ಕೂಡ. ವೇದಕ್ಕ ಅನ್ನೋ ವ್ಯಕ್ತಿತ್ವ ಭಾರತದಷ್ಟೇ ವಿಶಾಲವಾದದ್ದು, ಅಷ್ಟೇ ವೈವಿಧ್ಯಮಯವೂ ಹೌದು. ಸ್ವತಂತ್ರ ಭಾರತದ ಆಗುಹೋಗುಗಳ ಜೀವಂತ ಚಿತ್ರಣವಾದವಳು ಈಗಿಲ್ಲ.     ವೇದಕ್ಕ ಹುಟ್ಟಿದಾಗ ಆಕೆಯೂ ಎಲ್ಲರಂತೇ ಇದ್ದಳು. ಅಂದರೆ ಗೂನು ಬೆನ್ನಿರದ, ಎರಡು ಬೇರೆ ಬೇರೆ ದಿಕ್ಕನ್ನು ತೋರಿಸುವ ಕಂಗಳಿರದ, ಸಪೂರ ದೇಹ ಹೊಂದಿರದ ನಾರ್ಮಲ್ ಮಗುವಿಗೆ ವೇದಾ ಎಂಬ ಚೆಂದನೆಯ ಹೆಸರಿಟ್ಟರು. ಆದರೆ ಹೆಸರಿನಷ್ಟೇ ಚೆನ್ನಾಗಿ ಬೆಳೆಯಬೇಕಿದ್ದ ಮಗುವಿಗೆ ವರ್ಷ ತುಂಬುವುದರೊಳಗೆ ಪೋಲಿಯೋ ಹತ್ತಿಕೊಂಡಿತು. ಆ ಭಾರಕ್ಕೆ ಡೊಂಕ ಕಾಲು, ಗೂನು ಬೆನ್ನುಳ್ಳ ವಿಕಾರ ವೇದಕ್ಕನನ್ನು ರೂಪಿಸಿದ್ದು ಹೌದು. ಹತ್ತನ್ನೆರಡು ಮಕ್ಕಳನ್ನು ಸಾಕಬೇಕಿದ್ದ ವೇದಕ್ಕನ ಅಮ್ಮ, ‘ಸುಬ್ಬಜ್ಜಿ’ ಎಷ್ಟು ಆರೈಕೆ ಮಾಡಿಯಾಳು? ವೇದಕ್ಕನ ನಂತರ ಮತ್ತೂ ಹುಟ್ಟುತ್ತಲೇ ಉಳಿದ ಮಕ್ಕಳನ್ನು ಚೆನ್ನಾಗಿ ಸಾಕುವಲ್ಲಿ ಸುಬ್ಬಜ್ಜಿ ವ್ಯಸ್ತಳಾದಳು.     ಬಿಪಿಎಲ್ ಕಾರ್ಡನ್ನು ಯಾವುದೇ ಒತ್ತಡ, ಲ

ಸಿಕ್ಕಳಾ ಹುಡುಗಿ?

''ತಮಾ, ಎದ್ಕಳ..." ಬಾಗಿಲಿಗೆ ಕೈ ತಾಗಿದ ಸದ್ದಂತಿತ್ತು, ಅಪ್ಪ ಬಾಗಿಲು ಬಡಿದದ್ದು. ಅವನಿಗೆ ಗೊತ್ತು, ನಿದ್ರೆ ಹಾಳಾದಾಗ ನನಗೆಷ್ಟು ಕೋಪ ಬರುತ್ತದೆಂದು. ದೂರದಲೆಲ್ಲೋ ದನಿ ಕೇಳಿದಂತಾದರೂ ಪೂರ್ತಿಯಾಗಿ ಈ ಲೋಕಕ್ಕೆ ಬಂದಿರಲಿಲ್ಲ ನಾನು. ''ಬಯಲುಸೀಮಿಂದ ಹುಡ್ಗಿ ಹೊತ್ಕ ಬಂಜ್ವಡಾ ಯಾರೋವಾ, ಹುಡ್ಕಲೆ ಪೊಲೀಸ್ರು ಬಂಜ" ಅನ್ನೋ ಮಾತು ಎರಡನೇ ಬಾರಿ ಕೇಳುವುದರೊಳಗೆ ಕಾಲುಗಳು ಬಾಗಿಲತ್ತ ಒಯ್ದಿದ್ದವು, ಕೈಗಳು ಚಿಲಕ ತೆರೆದಿದ್ದವು. ಅದೆಷ್ಟು ಬೇಗ ಬಾಗಿಲತ್ತ ಸಾಗಿದ್ದೆನೋ ಅಷ್ಟೇ ಬೇಗ ಮತ್ತೆ ಚಾದರ ಹೊದ್ದು ಮಲಗಿದ್ದೆ. "ಹೋಗ್ತಾ ಬಾಗ್ಲ್ ಎರ್ಸಿಕ್ಕೆ ಹೋಗಿ" ಅಂತೊಂಚೂರು ದೊಡ್ಡಕೇ ಕೂಗಿದ್ದೆ, ಅದೊಂಥರ ಅಲವರಿಕೆ ದನಿಯಲ್ಲಿ. ನನ್ನ ಕೋಣೆಯೆಂದರೆ ಅದೊಂದು ಥರ ಗೋದಾಮಿದ್ದಂತೇ. ಏಣಿ, ಹಗ್ಗ, ಬುಟ್ಟಿ, ಚೂಳಿ, ಸುತ್ತಿಗೆ, ವೈರು, ಸ್ಕ್ರ್ಯೂ ಡ್ರೈವರು, ಟೆಸ್ಟರು, ಮೊಳೆ ಮುಂತಾದ ವಸ್ತುಗಳ ಜೊತೆಗೆ ಗುಪ್ಪೆ ಹೊಡೆದಿಟ್ಟ ಕವಳದ ಕೊಟ್ಟೆಯ ರಾಶಿ. ಕವಳ ಅಂದ್ರೆ ಸಾಂಪ್ರದಾಯಿಕ ಎಲೆ-ಅಡಿಕೆ-ಸುಣ್ಣಗಳ ಮಿಶ್ರಣವಲ್ಲ, ಪಕ್ಕಾ ಎರಡು ಚೀಟಿಗಳಲ್ಲಿ ಸಿಗೋ ಗುಟಖಾ ಕೊಟ್ಟೆಯೇ. ಪ್ರಾಯದ ಹವ್ಯಕ ಹುಡುಗನ ಮನೆಯಲ್ಲಿ ಮತ್ತೇನು ನಿರೀಕ್ಷೆಯಿರಬೇಕು! ಅದಿರ್ಲಿ, ಕೆಲಸ ಮುಗಿಸಿ ಮನೆಗೆ ಬರಲು ಹನ್ನೆರಡು ಗಂಟೆಯಾದರೂ, ಮಲಗೋ ರೂಢಿಯಿರೋದು ಎರಡು ಗಂಟೆಗೇ ಅಂದಾಕ್ಷಣ ಮತ್ತೇನೋ ಉನ್ನತ ದರ್ಜೆಯ ಚಟಗಳಿವೆ ಅಂತಲ್ಲ; ಮೊಬೈಲು ನಿದ್ರಿಸಬಿ

ಮೆಡಿಸಿನ್ ಮಾಫಿಯಾ

Image
ನಿನ್ನೆಗೆ ನಾನು ಪತ್ರಿಕೋದ್ಯಮಕ್ಕೆ ಬಂದು ಒಂದು ವರ್ಷವಾಯ್ತು. ಒಂದೇ ವರ್ಷಕ್ಕೆ ಭಯಂಕರ ಬೇಜಾರು ಬಂದ ಈ ಫೀಲ್ಡು ಅತ್ಯಂತ ಕೆಟ್ಟ ಫೀಲ್ಡು ಅಂದ್ಕೊಂಡಿದ್ದೆ. ಆಗ  ಈ ವಿಷಯಗಳ ಅರಿವಾಯ್ತು. ನೇರವಾಗಿ ವಿಷಯಕ್ಕೆ ಬರ್ತೀನಿ. ಇವತ್ತು ಹೇಳಿದ್ದಕ್ಕಿಂತ ಜಾಸ್ತಿ ನಾಳೆ ಹೇಳಬಹುದು ನಾನು. ಇದೊಂಥರ trailer.     ಸರ್ಕಾರ ಜೆನರಿಕ್ ಮೆಡಿಸಿನ್ ಬಗ್ಗೆ ಅಷ್ಟೆಲ್ಲಾ ಸೀರಿಯಸ್ಸಾಗಿ ಕಾನೂನನ್ನ ತಂದ್ರೂ, ಜೆನರಿಕ್ ಮಳಿಗೆಗಳನ್ನೇ ತೆರೆದ್ರೂ ಈ ಮೆಡಿಸಿನ್ ಮಾಫಿಯಾಕ್ಕೆ ಬ್ರೇಕ್ ಹಾಕೋದು ಕಷ್ಟವೇ.     ಈಗ ಮಳೆಗಾಲ ಶುರ್ವಾಗಿದೆ. ನೆಗಡಿ, ಜ್ವರ ಮನೆಯಲ್ಲಿ ಒಬ್ಬರಿಗಾದ್ರೂ ಕಾಟ ಕೊಡೋದು ಸಾಮಾನ್ಯ. ಹೆಲ್ಥ್ ಬಗ್ಗೆ ತುಂಬಾನೇ ಕಾಳಜಿ ಇರೋ ಜನ ಆಸ್ಪತ್ರೆಗಳಿಗೆ ಹೋಗ್ತಾರೆ. ಸಧ್ಯಕ್ಕೆ ಇವರನ್ನ ಬಿಟ್ಟು ಮತ್ತೊಂದು ಟೈಪ್ ಮಂದಿಯ ಬಗ್ಗೆ ಯೋಚಿಸೋಣ. ಇವ್ರು ಮೆಡಿಕಲ್ ಶಾಫಿಗೆ ಹೋಗಿ nicip ಅಥ್ವಾ crocine ಅನ್ನೋ ಮಾತ್ರೆಗಳನ್ನ ತೆಗುದುಕೊಳ್ತಾರೆ. ಹತ್ತು ಮಾತ್ರೆಗಳ nicip cold strip ಒಂದಕ್ಕೆ ೩೩ ರೂ. ಎಂ.ಆರ್.ಪಿ. ಇರತ್ತೆ. ಮೆಡಿಕಲ್ ಷಾಪ್ ಮನುಷ್ಯ ಅದನ್ನ ಇಪ್ಪತ್ತೇ ರೂಪಾಯಿಗೆ ಮಾರುತ್ತಾನೆ. ಎಷ್ಟು ಒಳ್ಳೆಯವ ಅಲ್ವಾ?      ಮಳೆಗಾಲ, ಉಗುರು ಕೀಲು ಆಗತ್ತೆ, ಅದಕ್ಕೆಲ್ಲಾ ಡಾಕ್ಟರ್ ಬಳಿ ಹೋಗೋದುಂಟಾ? ಪರಿಚಯದ ಮೆಡಿಕಲ್ ರೆಪ್ ಒಬ್ಬನ ಬಳಿ 'ಬೇಗ ಗುಣ ಆಗ್ಬೇಕು ಮಾರಾಯಾ, ಕಂಡಾಪಟ್ಟೆ ಉರಿ' ಅಂತೀರಾ. ಅವ ಶಿಫಾರಸು ಮಾಡೋದು fucidic acid ಅನ್ನೋ

ಜಯಣ್ಣನ ಡಿವೈನ್ ಲವ್ವು

Image
ಜಯಣ್ಣ ಮದುವೆ ಆಗ್ತಾನಂತೆ ಅಂದಾಗ ಊರವರಿಗೆ ಅವನ ಮದುವೆಗಿಂತಾ ಅವನನ್ನೊಪ್ಪಿದ ಹುಡುಗಿಯ ಬಗ್ಗೆಯೇ ಹೆಚ್ಚು ಕುತೂಹಲವಿತ್ತು. ಬ್ರಾಹ್ಮಣ ಕನ್ಯೆಯ ಮಾತಿರಲಿ, ಲಿಂಗಾಯತರ ಹುಡುಗಿಯಾಗಿದ್ದರೂ ಒಪ್ಪದೇ ಇರುವಷ್ಟು ಕ್ವಾಲಿಟಿಗಳಿದ್ದ ಜಯಣ್ಣನಿಗೆ ಮದುವೆ ಫಿಕ್ಸಾಗಿದ್ದು ಊರ ಹಲವರ ಹುಬ್ಬಿಗೆ ದಬ್ಬೆ ಕಟ್ಟಬೇಕೆಂಬ ಪ್ರಸಂಗ ತಂದೊಡ್ಡಿತ್ತು. ಮದುವೆಗೆ ಎರಡು ದಿನವಿರ್ತಾ ಕೇರಿ ಕರೆಯಲು ಬಂದಾತ ನಮ್ಮನೆಯ ತೋಟದ ಕಾಲುವೆಯಲ್ಲಿ ಅಡಗಿ ಕುಳಿತವರಂತೆ ಮಲಗಿದ್ದ. ಸಂಜೆ ಕಾಲೇಜಿಂದ ಬಂದವ ಜಂಬುನೇರಳೆ ಹಣ್ಣಿನ ದೆಸೆಯಿಂದ ತೋಟಕ್ಕೆ ಹೋದ ನನಗೆ ಇವನ ಕಿಸೆಯಿಂದ ಹೊರಗಿಣುಕುತ್ತಿದ್ದ ಬೀಡಿ ಕಟ್ಟನ್ನು ಸೆಳೆಯುವಾಸೆ. ಎಷ್ಟೇ ಟೈಟಾಗಿದ್ದರೂ ಬೀಡಿ ಕಟ್ಟೆಂಬ ಆಸ್ತಿಯನ್ನ ಆತ ಬಿಟ್ಟಾನೇ? ಅದೊಂದು ಭಯದಿಂದ ನೆಟ್ಟಗೆ ಜಂಬುನೇರಳೆಯ ಮರದ ಬುಡಕ್ಕೇ ಹೊರಟೆ. ನನಗೆ ಗೊತ್ತಿಲ್ಲ, ಆದರೂ ಸುದ್ದಿಯಿದೆ. ಜಯಣ್ಣನ ಮದುವೆಯ ರಾತ್ರಿಯೇ ಊರ ಹೊರಗಿನ ಸುಬ್ಬಿಯ ಮನೆಯಲ್ಲಿ ಈತ ಹೊರಳಾಡುತ್ತಿದ್ದನಂತೆ! ಹೊಸ ಹೆಂಡತಿಯನ್ನ ಬಿಟ್ಟು ಅಲ್ಲಿ ಹೋಗಿದ್ದನೆಂದರೆ ಅವನದದೆಂಥಾ ಡಿವೈನ್ ಲವ್ವಿರಬೇಕು ಅಂದುಕೊಂಡಿದ್ದು ಆಗಷ್ಟೇ ಶೇಕ್ಸ್‌ಪಿಯರ್ ನ ಬಲ್ಲವನಾಗಿದ್ದ ನಾನೊಬ್ಬನೇ ಇರಬೇಕು. ಈ ಜಯಣ್ಣ ಆಗಷ್ಟೇ ಊರೊಳಗೆ ತಿರುಗಬಹುದೆಂಬ ಒಪ್ಪಿಗೆ ಪಡೆದು ವರ್ಷವಾಗಿತ್ತು. ಮದುವೆಗೂ ಮುನ್ನ ಭಯಾನಕ ಕಳ್ಳನೆಂಬ ಖ್ಯಾತಿಯನ್ನೂ ಪಡೆದಿದ್ದನಷ್ಟೇ ಅಲ್ಲ, ಗಡಿಪಾರೆಂಬ ಪ್ರಶಸ್ತಿಯನ್ನೂ ಗಿಟ್ಟಿಸಿದ್ದ ಪರಮ ಸಭ್ಯ