ಜಯಣ್ಣನ ಡಿವೈನ್ ಲವ್ವು



ಜಯಣ್ಣ ಮದುವೆ ಆಗ್ತಾನಂತೆ ಅಂದಾಗ ಊರವರಿಗೆ ಅವನ ಮದುವೆಗಿಂತಾ ಅವನನ್ನೊಪ್ಪಿದ ಹುಡುಗಿಯ ಬಗ್ಗೆಯೇ ಹೆಚ್ಚು ಕುತೂಹಲವಿತ್ತು. ಬ್ರಾಹ್ಮಣ ಕನ್ಯೆಯ ಮಾತಿರಲಿ, ಲಿಂಗಾಯತರ ಹುಡುಗಿಯಾಗಿದ್ದರೂ ಒಪ್ಪದೇ ಇರುವಷ್ಟು ಕ್ವಾಲಿಟಿಗಳಿದ್ದ ಜಯಣ್ಣನಿಗೆ ಮದುವೆ ಫಿಕ್ಸಾಗಿದ್ದು ಊರ ಹಲವರ ಹುಬ್ಬಿಗೆ ದಬ್ಬೆ ಕಟ್ಟಬೇಕೆಂಬ ಪ್ರಸಂಗ ತಂದೊಡ್ಡಿತ್ತು.
ಮದುವೆಗೆ ಎರಡು ದಿನವಿರ್ತಾ ಕೇರಿ ಕರೆಯಲು ಬಂದಾತ ನಮ್ಮನೆಯ ತೋಟದ ಕಾಲುವೆಯಲ್ಲಿ ಅಡಗಿ ಕುಳಿತವರಂತೆ ಮಲಗಿದ್ದ. ಸಂಜೆ ಕಾಲೇಜಿಂದ ಬಂದವ ಜಂಬುನೇರಳೆ ಹಣ್ಣಿನ ದೆಸೆಯಿಂದ ತೋಟಕ್ಕೆ ಹೋದ ನನಗೆ ಇವನ ಕಿಸೆಯಿಂದ ಹೊರಗಿಣುಕುತ್ತಿದ್ದ ಬೀಡಿ ಕಟ್ಟನ್ನು ಸೆಳೆಯುವಾಸೆ. ಎಷ್ಟೇ ಟೈಟಾಗಿದ್ದರೂ ಬೀಡಿ ಕಟ್ಟೆಂಬ ಆಸ್ತಿಯನ್ನ ಆತ ಬಿಟ್ಟಾನೇ? ಅದೊಂದು ಭಯದಿಂದ ನೆಟ್ಟಗೆ ಜಂಬುನೇರಳೆಯ ಮರದ ಬುಡಕ್ಕೇ ಹೊರಟೆ.
ನನಗೆ ಗೊತ್ತಿಲ್ಲ, ಆದರೂ ಸುದ್ದಿಯಿದೆ. ಜಯಣ್ಣನ ಮದುವೆಯ ರಾತ್ರಿಯೇ ಊರ ಹೊರಗಿನ ಸುಬ್ಬಿಯ ಮನೆಯಲ್ಲಿ ಈತ ಹೊರಳಾಡುತ್ತಿದ್ದನಂತೆ! ಹೊಸ ಹೆಂಡತಿಯನ್ನ ಬಿಟ್ಟು ಅಲ್ಲಿ ಹೋಗಿದ್ದನೆಂದರೆ ಅವನದದೆಂಥಾ ಡಿವೈನ್ ಲವ್ವಿರಬೇಕು ಅಂದುಕೊಂಡಿದ್ದು ಆಗಷ್ಟೇ ಶೇಕ್ಸ್‌ಪಿಯರ್ ನ ಬಲ್ಲವನಾಗಿದ್ದ ನಾನೊಬ್ಬನೇ ಇರಬೇಕು.
ಈ ಜಯಣ್ಣ ಆಗಷ್ಟೇ ಊರೊಳಗೆ ತಿರುಗಬಹುದೆಂಬ ಒಪ್ಪಿಗೆ ಪಡೆದು ವರ್ಷವಾಗಿತ್ತು. ಮದುವೆಗೂ ಮುನ್ನ ಭಯಾನಕ ಕಳ್ಳನೆಂಬ ಖ್ಯಾತಿಯನ್ನೂ ಪಡೆದಿದ್ದನಷ್ಟೇ ಅಲ್ಲ, ಗಡಿಪಾರೆಂಬ ಪ್ರಶಸ್ತಿಯನ್ನೂ ಗಿಟ್ಟಿಸಿದ್ದ ಪರಮ ಸಭ್ಯ. ಇಂಥವನಿಗೆ ಮದುವೆ ಅಂದಾಗ ಊರ ಮಂದಿ ಮಾತನಾಡಿಕೊಂಡದ್ದು ಹೊಟ್ಟೆಕಿಚ್ಚಿನಿಂದಲೇ ಅನ್ನುವ ಭಾವ ನಿಮ್ಮಲ್ಲೂ ಹುಟ್ಟೀತು. ಎರಡೆಕರೆ ಅಡಿಕೆ ತೋಟವಿದ್ದು, ತಕ್ಕಮಟ್ಟಿಗೆ ಸೌಲಭ್ಯವಂತರಾದ ಅದೆಷ್ಟು ನಿರ್ವಿವಾಹಿತರು ನಿಮ್ಮಲ್ಲಿಲ್ಲ! ಅಂದಹಾಗೇ ನಿಮ್ಮಲ್ಲಿರದ, ಬಹುಅಪೇಕ್ಷಿತ ಗುಣವೊಂದಿತ್ತು ಜಯಣ್ಣನಲ್ಲಿ, ಆತ ಕೊನೆಗೌಡನೂ ಹೌದು! ಅದೇ, ನೀವೂ ಗೌರವ ಕೊಡಹತ್ತಿರಲ್ಲವೇ ಕೊನೆಗೌಡನೆಂದಾಕ್ಷಣ!
ಮೊದಲೆಲ್ಲಾ ಕದಿಯಲೋಸುಗ ಮರಹತ್ತುವುದ ಕಲಿತ ಜಯಣ್ಣನಿಗೆ ಅದನ್ನೊಂದು ಉದ್ಯೋಗವಾಗಿ ನೀಡಿದ್ದು ತುದಿಮನೆಯ ಶಣ್ಣಪ್ಪ ಹೆಗಡೆಯವರು. ಕಳ್ಳತನದ ಚಟವನ್ನು ಬಿಡಿಸಲೆಂದೇ ಆ ಕೆಲಸ ನೀಡಿದೆ ಅನ್ನೋದು ಅವರ ಸಮಜಾಯಿಷಿಯಾಗಿದ್ದರೂ ಇವ ಎರಡು ಕ್ವಾರ್ಟರ್ ಎಣ್ಣೆಗೆ ಒಂದಾಳು ಕೆಲಸ ಮಾಡಿದರೆ ಇತರೆ ಕೊನೆಗೌಡರ ಆಳು ಪಗಾರು ಅದಾಗಲೇ ನಾನೂರು ರೂಪಾಯಿ ತಲುಪಿತ್ತು ಅಂಬೋದು ಅದರ ಅಂತರಾರ್ಥ.
ಓಹ್, ಜಯಣ್ಣನ ಮದುವೆಯ ಸುದ್ದಿ ಹೇಳದೇ ಬಾಕೀದೆಲ್ಲವನ್ನೂ ಹೇಳುತ್ತಿದ್ದೇನೆ ನೋಡಿ! ಮದುವೆ ಭರ್ಜರಿಯಾಗೇ ನಡೆದು ಊರವರೆಲ್ಲಾ ತೇಗಿದ್ದಾಯ್ತು. ಮಾರನೇ ದಿನವೇ ಸಟ್ಟಮುಂಡಿ ಮನೆಯಲ್ಲಿ ಹೆಣ್ಣಿನ ಕಡೆಯವರ ಗಲಾಟೆ. ಮದುವೆ ಮಾಣಿ ರಾತ್ರಿಯೆಲ್ಲಾ ಹೋದದ್ದೆಲ್ಲಿ? ಅದೆಂಗೋ ಗಲಾಟೆ ತಣ್ಣಗಾಯಿತು. ಸೆಖೆಗಾಲವಾದ್ದರಿಂದ ಮಜ್ಜಿಗೆ ತಂಬುಳಿ ಕುಡಿದ ಹೆಣ್ಣಿನ ಕಡೆಯವರು ಹೊಗಳಿಕೆಯನ್ನೂ ನೀಡಿ ಹೊರಟರು.
ಮದುವರಯಾಗಿ ಒಂದು ವಾರ ಕಳೆದಿತ್ತೋ ಇಲ್ಲವೋ. ಕಣದಲ್ಲಿ ಬೆಳೆಹುಲ್ಲ ಹೊರೆ ಕಟ್ಟುತ್ತಿದ್ದ ನನ್ನೆದುರೇ ಜಯಣ್ಣನ ಧರ್ಮಪತ್ನಿ ಸೀತೆ ಕೈಯಲ್ಲಿ ಸದಗತ್ತಿ ಹಿಡಿದು ಓಡುತ್ತಿದ್ದಳು. ಬಹುಶಃ ಸೊಪ್ಪು ಕಡಿಯುವ ಕತ್ತಿ ಭಾರವೆನ್ನಿಸಿತ್ತೇನೋ. ನಾನೆಂದೂ ಕೇಳಿರದ, ಕನ್ನಡವೆಂದೇ ಗುರುತಿಸಬಹುದಾದ ಬೈಗುಳಗಳು ಊರ ದೊಡ್ಡ ಜನರ ಹೆಸರಿನೊಟ್ಟಿಗೇ ಕೇಳಿಸಿದ್ದರಿಂದ ನಾನೂ ಅವಳ ಓಟಕ್ಕೆ ಪ್ರತಿಸ್ಪರ್ಧಿಯಾದೆ.
ಪಂಚಾಯತಿ ನಡೆಯಿತು. ಮನೆಗೆ ಬೆಂಕಿಯಿಟ್ಟು ಮಾಯವಾದ ಜಯಣ್ಣನನ್ನು ಹುಡುಕಲು ಸುಬ್ಬಿಯ ಮನೆ ಕಡೆಗೆ ದಂಡು ಹೊರಟಿತು. ಎದುರಿಗೆ ಸದಗತ್ತಿ ಸೀತೆ, ಅವಳ ಹಿಂದೆ ಪಂಚರು. ಈ ಗಲಾಟೆ ಹೇಗಿದ್ದರೂ ಸಂಜೆಯೊಳಗೆ ಮುಗಿಯುವುದಲ್ಲ ಅಂದುಕೊಂಡು ಕಣದೆಡೆಗೆ ಹೋದೆ.
ಮನೆಗೆ ಬೆಂಕಿಯಿಟ್ಟು ಊರಿಗೇ ಕಿಚ್ಚು ಹಚ್ಚಿದ್ದ ಮಹಾರಾಯ ಮಾಬ್ಲಣ್ಣನ ಬಣವೆಗೆ ಬೆನ್ನುಕೊಟ್ಟು ಬೀಡಿ ಹಚ್ಚಲಾಗದೇ ಒದ್ದಾಡುತ್ತಿದ್ದ. ಅವನನ್ನು ಹಿಡಿದುಕೊಡಬೇಕೆಂಬ ಉತ್ಸಾಹಕ್ಕಿಂತ ಮುವತ್ತೊಂದು ಮಾರ್ಕಿನ ಬೀಡಿ ಹೇಗಿರುತ್ತದೆಂದು ನೋಡುವ ತವಕ ನನ್ನದು. ತಡಿ ಮಾರಾಯಾ, ನಾ ಹಚ್ಚಿಕೊಡ್ತೆ ಅಂದು ತುಟಿಗೆ ಬೀಡಿ ಅಂಟಿಸಿದೆ. ಮೇ ತಿಂಗಳ ಗಾಳಿಗೆ ಬೆಂಕಿಕಡ್ಡಿ ಬೇಗನೇ ಸಾಯುತ್ತಿದ್ದರೂ ಪ್ರಾಯದ ಹುರುಪೇ ಬೆಂಕಿ ಹತ್ತಿಸಿತ್ತು.
ಬೀಡಿ ಸೇದಿದ್ದು ಯಾರಿಗೂ ಹೇಳಬಾರದೆಂಬ ನನ್ನ ಷರತ್ತು ಮತ್ತು ಅವ ಅಲ್ಲಿದ್ದಾನೆಂದು ಹೇಳಬಾರದೆಂಬ ಅವನ ಷರತ್ತು ಇಬ್ಬರಲ್ಲೂ ಒಪ್ಪಂದ ಮೂಡಿಸಿತ್ತು.
ಹುಲ್ಲುಹೊರೆ ಕೊಟ್ಟಿಗೆಯನ್ನ ಮುಟ್ಟಿತ್ತೋ ಇಲ್ಲವೋ, ಕಣದೆಡೆಯಿಂದ ಹೊಗೆ ಎದ್ದಿತ್ತು. ಮಾಬ್ಲಣ್ಣನ ಬಣವೆಗೆ ಬೆಂಕಿ ಹತ್ತಿಸಿದ್ದು ಯಾರೆಂಬ ಯೋಚನೆಯೂ ನನ್ನಲ್ಲಿರಲಿಲ್ಲ.
ಇತ್ತ ಸುಬ್ಬಿ ಮನೆಯೆಡೆ ಹೋಗಿದ್ದ ಗುಂಪೂ ಕೊಡ, ಬಕೇಟುಗಳೊಡನೆ ಉಳಿದ ಬಣವೆಗಳನ್ನಾದರೂ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿತ್ತು. ಮಾಬ್ಲಣ್ಣನ ಬಣವೆಯ ಬುಡದಲ್ಲಿ ಇದ್ದ ಬೀಡಿ ಕಟ್ಟನ್ನು ಎತ್ತಿಕೊಳ್ಳಬೇಕಾದರೆ ಕಂಡವು, ಎರಡು ಜೊತೆ ಕಾಲುಗಳು ಉರಿಯೊಳಗೆ ಮಲಗಿದ್ದವು. ಹಿಂದೆಯೇ ಬ್ರಹ್ಮಕಪಾಲಗಳೆರಡು ಹೊಟ್ಟಿದ ಶಬ್ದ. ಊರಮಂದಿ ಇತ್ತ ತಿರಗುವಾಗ ನನ್ನ ಕೈಗಳದೇಕೋ ಬೀಡಿಕಟ್ಟನ್ನು ಭೂಮಿಗೊಪ್ಪಿಸಿದ್ದವು

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ