ಹಾದಿಹೊಕ

ಆತ ದಾರಿತಪ್ಪುತ್ತಾನೆ,
ಗಮ್ಯ ತಿಳಿದಿರದ
ಹಾದಿಹೋಕ
ಹಲಬುತ್ತಾನೆ.
ಕಡುಗತ್ತಲೆಯಲಿ
ಬೆಳಕಬೀರದ
ಮಿಣುಕು ಹುಳಕಾತ
ಬೈಯುತ್ತಾನೆ,
ದೂರ ನಿಂತು ನಗುವ
ನಕ್ಷತ್ರದ ಮುಖಕೆ ಉಗಿಯುತ್ತಾನೆ,
ಮುಖ ಒರೆಸಿಕೊಳ್ಳುತ್ತಾನೆ.
ದಾರಿ ತಪ್ಪಿದ ಹಾದಿಹೋಕ
ಹಲಬುತ್ತಾನೆ.
ಮಾರು ನಡೆಯುವ
ಮೂರು ತಿರುವುಗಳ ಬಳಿ ನಿಂತು
ಕಡ್ಡಿ ಗೀರುತ್ತಾನೆ,
ಬೀಡಿ ಹಚ್ಚುತ್ತಾನೆ.
ದಾರೀಯಲಿ ಹೋಗದೇ
ಮೇಲೆ ಹಾರುವ ಹೊಗೆಗೆ
ಶಾಪವೆಸೆಯುತ್ತಾನೆ,
ಆರಿ ಹೋಗುವ ಬೀಡಿಯನು
ತುದಿಗಾಲಲಿ ತುಳಿಯುತ್ತಾನೆ.
ದಾರಿ ತಪ್ಪಿದ ಹಾದಿಹೋಕ
ಹಲಬುತ್ತಾನೆ.
ಬೆಳಕ ಕಂಡೊಡನೆ
ನಿಲ್ಲುತ್ತಾನೆ,
ಕತ್ತಲೆಯ ರಾತ್ರಿಯಲಿ
ಕಾಲ ಬೀಸುತ್ತಾನೆ.
ದಾರಿ ತಪ್ಪುತ್ತಾನೆ,
ಗಮ್ಯ ತಿಳಿಯದ ಹಾದಿಹೋಕ
ಹಲಬುತ್ತಾನೆ.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ