ಪೆನ್ಶನ್

ಪೆಂಚನ್ನು ಬರದೇ ಎರಡು ತಿಂಗಳಾಗಿತ್ತು. ಹೆಂಡತಿ ಸಕ್ಕರೆ ಡಬ್ಬದಲಿ ಅಡಗಿಸಿಟ್ಟ ದುಡ್ಡಿನಲಿ ಅದೆಂಗೋ ಇಷ್ಟು ದಿನ ಬದುಕ ದೂಡಿದ್ದಾಯ್ತು, ನಾಳೆಯ ಗತಿಯೇನು? ಪಟ್ಟಣದ ಕಛೇರಿಗೇ ಹೋಗಿ ಕೇಳೋಣ, ಕೊಟ್ಟೇ ಕೊಡುತ್ತಾರೆಂಬ ನಂಬಿಕೆಯ ಮೇಲೇ ಉಳಿದಿದ್ದ ಇಪ್ಪತ್ತು ರೂಪಾಯಿಗಳನ್ನು ಜೇಬಿಗೆ ಸೇರಿಸಿ ಹೊರಟಿದ್ದ.
ಅದೃಷ್ಠ ಯಾರದೋ ಹೆಸರಲ್ಲಿತ್ತು, ಒಟ್ಟಿನಲ್ಲಿ ಭಯಂಕರ ಅಪಘಾತ ಇಂವ ಹೊಂಟಿದ್ದ ಬಸ್ಸಿಗಾಯ್ತು. ಒಂದತ್ತು ಮಂದಿಗೆ ಎರಡೆರಡು ಟಿಕೇಟು ಸಿಕ್ಕಿತ್ತು, ಒಂದು ಕಂಡಕ್ಟರ್ ಕೊಟ್ಟದ್ದಾದ್ರೆ ಮತ್ತೊಂದು ದೇವರದ್ದು.
ಜೀವ ಹೋದವರಿಗೆ ಪರಿಹಾರ, ಗಾಯಗೊಂಡು ಬದುಕಿದವರಿಗೆ ಬಹುಮಾನ. ಇಂವ ಪಾಪ ಮಾಡಿದ್ದನೇನೋ ಕನಿಷ್ಠ ಆಸ್ಪತ್ರೆಯ ಬಾಳೇಹಣ್ಣೂ ಸಿಗಲಿಲ್ಲ.
ಸಂಜೆ ಹೊತ್ತಿಗೆ ನೆಡೆದು ಮನೆ ಸೇರಿದವನಿಗೆ ಪೆಂಚನ್ನು ಕಛೇರಿಗೂ ಹೋಗಲಾರದೇ, ಕಿಸೆಯಲ್ಲಿದ್ದ-ಈಗ ಖಾಲಿಯಾದ ಇಪ್ಪತ್ತು ರೂಪಾಯಿಯೂ ಉಳಿಸಿಕೊಳ್ಳಲಾಗದ ದುಃಖ.
ಹೆಂಡತಿಯ ಸಕ್ಕರೆ ಡಬ್ಬವೂ ಖಾಲಿ ಮುಖ ಮಾಡಿ ಸ್ವಾಗತಿಸಿತು...

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ