Posts

Showing posts from April, 2018

ಮುಳ್ಳಂದಿ ಅಂಬು ಮತ್ತು ಎಂಟು ತಿಂಗಳು

“ಇಲ್ಲಿಯ ಅಡಿಕೆಗೊನೆಗಳಿಗೆ ಚೌಡೇಶ್ವರಿಯ ಕಾವಲಿದೆ. ತೋಟದ ತುದಿಯ ವಾಟೆಮಟ್ಟಿಗೆ ಹೊಕ್ಕಿದ ಹೆಂಗಸರಿಗೆ ಯಾವ ಕಾವಲೂ ಇಲ್ಲ." ಹೀಗೆ ಎರಡು ವಾಕ್ಯಗಳನ್ನು ಓದಿಸುತ್ತಿತ್ತು ಆ ತಂತಿ ಬೇಲಿಯ ಅಂಚಿನ ಅಡಿಕೆ ಮರಕ್ಕೆ ತೂಗುಬಿಟ್ಟಿದ್ದ ಒಂದು ಚದರಡಿಯ ಬೋರ್ಡು. ರಾಮ ಎದುರುಸಿರು ಬಿಟ್ಟುಕೊಂಡು ಬಂದಾಗ ವಿಷಯದ ಗಾಂಭೀರ್ಯತೆ ಇಷ್ಟಿರಬಹುದು ಎಂಬ ನಿರೀಕ್ಷೆಯಿದ್ದಿರಲಿಲ್ಲ. ಒಂದು ಉದ್ದನೆಯ ಉಸಿರ ಒಳಗೆಳೆದು ಬಿಟ್ಟ ಮಂಜ್ನಾಥ ಹೆಗಡೆ. ಹಿಂದೆಯೇ “ಅದ್ರಜ್ಜಿಕುಟಾ" ಎಂಬ ಉದ್ಗಾರ, ತುಸು ಕೋಪದಿಂದೆಂಬಂತೆ. ‘ಗಂಗಾ...’ ಸೊಪ್ಪಿನ ಬೆಟ್ಟದಲ್ಲಿ ರಾಮನ ಕೂಗು ಮೊಳಗಿದಾಗ ಕರೆಯ ಉದ್ದೇಶ ಸ್ಪಷ್ಟವಾಗಿತ್ತು. ಉದ್ದ ತೋಳಿನ ಗಂಡಸರ ಅಂಗಿ, ಸೊಂಟಕ್ಕೊಂದು ಸವಕಲು ಟುವಾಲು ಸುತ್ತುಕೊಂಡಿದ್ದ ಕಪ್ಪುಗಂಗಳ ಗಂಗಾ ನೀರಿನ ಉಗ್ಗ ಇಟ್ಟಿದ್ದ ಹೊನ್ನೆಮರದ ಬುಡದತ್ತ ಹೊಂಟಳು. ಮರದ ಹೆಣೆಗಳ ಜೊತೆ ಕತ್ತಿಗಳ ಗುದ್ದಾಟದ ಸದ್ದು ಆಲಿಸಿ, ಹಿಂಬಾಲಿಸಿ ರಾಮ ಬೆಟ್ಟ ತಲುಪಿದ್ದ. “ಹಗೀರ್ ಮನಿ ಕೆಲ್ಸನೂ ಸಾಕು, ಕಿತ್ರಾಬಿದ್ ಓಡೂದೂ ಸಾಕು", ರಾಮ ಗೊಣಗಿಕೊಂಡ. “ಎಂತಕ್ಕೆ ಕರ್ದೆ?" ಗಂಗಾಳ ನೇರ ಪ್ರಶ್ನೆ, ಹಾಯಗದ ಎಲೆಗೆ ಬಳಿದಿದ್ದ ಬೆಲ್ಲವ ಖಾಲಿ ಮಾಡುತ್ತಾ ಹೊರಬಂತು. “ಮಂಜ್ನಾತೆಗ್ಡ್ರು ಕರೀತವ್ರೆ, ಬ್ಯಾಗ್ ಬರೂಕಂದ್ರು", ರಾಮ ಬಂದ ಕೆಲಸ ಮುಗಿಸಿದ. “ಈಗಾಗೂದಿಲ್ಲಾ, ಭಟ್ರ್ ಸೊಪ್ ಕಡಿಬೋಕು" ಅಂದು ಗಂಡಾಳುಗಳು ಮರಹತ್ತಿ ಕಡಿದು ಕೆಡಗಿದ್ದ ಭಾ