ವೇದಕ್ಕಳ ಶವಯಾತ್ರೆ

ಗನಾಕೆ ಮಳೆ ಹೊಯ್ಯುತ್ತಿದ್ದ ಒಂದು ಬೆಳಿಗ್ಗೆ ವೇದಕ್ಕ ಸತ್ತು ಹೋದಳು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ತಾಸು ಘಳಿಗೆಯಲ್ಲಿ ಮೊದಲ ಸಲ ಅತ್ತಿದ್ದ ವೇದಕ್ಕ, ಎಪ್ಪತ್ತೊಂದನೇ ಸ್ವಾತಂತ್ರ್ಯೋತ್ಸವಕ್ಕೆ ಸ್ವತಂತ್ರಳಾದಳು. ಅಲ್ಲಿಗೆ ನಮ್ಮೂರ ಎರಡು ತಲೆಮಾರುಗಳ ಕೊಂಡಿಯೊಂದು ಕಳಚಿಬಿತ್ತು.
    ವೇದಕ್ಕ ಸ್ವರ್ಗಸ್ಥಳಾಗಿದ್ದನ್ನು ಈ ರೀತಿ ಹೇಳಬೇಕೇ? ಹೀಗೊಂದು ಪ್ರಶ್ನೆಯನ್ನು ನೀವು ಕೇಳಬಹುದು, ಅದಕ್ಕೆ ನೀವೂ ಸ್ವತಂತ್ರರು ಕೂಡ. ವೇದಕ್ಕ ಅನ್ನೋ ವ್ಯಕ್ತಿತ್ವ ಭಾರತದಷ್ಟೇ ವಿಶಾಲವಾದದ್ದು, ಅಷ್ಟೇ ವೈವಿಧ್ಯಮಯವೂ ಹೌದು. ಸ್ವತಂತ್ರ ಭಾರತದ ಆಗುಹೋಗುಗಳ ಜೀವಂತ ಚಿತ್ರಣವಾದವಳು ಈಗಿಲ್ಲ.
    ವೇದಕ್ಕ ಹುಟ್ಟಿದಾಗ ಆಕೆಯೂ ಎಲ್ಲರಂತೇ ಇದ್ದಳು. ಅಂದರೆ ಗೂನು ಬೆನ್ನಿರದ, ಎರಡು ಬೇರೆ ಬೇರೆ ದಿಕ್ಕನ್ನು ತೋರಿಸುವ ಕಂಗಳಿರದ, ಸಪೂರ ದೇಹ ಹೊಂದಿರದ ನಾರ್ಮಲ್ ಮಗುವಿಗೆ ವೇದಾ ಎಂಬ ಚೆಂದನೆಯ ಹೆಸರಿಟ್ಟರು. ಆದರೆ ಹೆಸರಿನಷ್ಟೇ ಚೆನ್ನಾಗಿ ಬೆಳೆಯಬೇಕಿದ್ದ ಮಗುವಿಗೆ ವರ್ಷ ತುಂಬುವುದರೊಳಗೆ ಪೋಲಿಯೋ ಹತ್ತಿಕೊಂಡಿತು. ಆ ಭಾರಕ್ಕೆ ಡೊಂಕ ಕಾಲು, ಗೂನು ಬೆನ್ನುಳ್ಳ ವಿಕಾರ ವೇದಕ್ಕನನ್ನು ರೂಪಿಸಿದ್ದು ಹೌದು. ಹತ್ತನ್ನೆರಡು ಮಕ್ಕಳನ್ನು ಸಾಕಬೇಕಿದ್ದ ವೇದಕ್ಕನ ಅಮ್ಮ, ‘ಸುಬ್ಬಜ್ಜಿ’ ಎಷ್ಟು ಆರೈಕೆ ಮಾಡಿಯಾಳು? ವೇದಕ್ಕನ ನಂತರ ಮತ್ತೂ ಹುಟ್ಟುತ್ತಲೇ ಉಳಿದ ಮಕ್ಕಳನ್ನು ಚೆನ್ನಾಗಿ ಸಾಕುವಲ್ಲಿ ಸುಬ್ಬಜ್ಜಿ ವ್ಯಸ್ತಳಾದಳು.
    ಬಿಪಿಎಲ್ ಕಾರ್ಡನ್ನು ಯಾವುದೇ ಒತ್ತಡ, ಲಂಚ ಕೊಡದೇ, ಸ್ವಸಾಮರ್ಥ್ಯದಿಂದ ಗಿಟ್ಟಿಸಿದ್ದ ವೇದಕ್ಕನ ಕುಟುಂಬಕ್ಕೆ ಮೊದಲ ಆಘಾತ ಯಜಮಾನ ಮಾಣಿಬಾವ ಸತ್ತಿದ್ದು. ಅಷ್ಟೊತ್ತಿಗೆ ಗಂಡು ಮಕ್ಕಳು ತಕ್ಕಮಟ್ಟಿಗೆ ದೊಡ್ಡವರಾಗಿದ್ದರೂ ಅವರಲ್ಲಿನ ದಾಯಾದಿತನದಿಂದ ಮನೆ ಹಿಸೆಯಾಯಿತು. ಇರುವ ಅಧ ಎಕರೆ ಜಮೀನನ್ನು ಹಂಚಿಕೊಳ್ಳುವಲ್ಲಿ ಜಗಳವಾದರೂ, ಅಷ್ಟೇನೂ ಸಾವು ನೋವಿರದೇ ಹಿಸೆ ಪಂಚಾಯತಿಗೆ ಮುಗಿದಿತ್ತು ಎಂಬುದೇ ಆಶ್ಚರ್ಯ. ಮಕ್ಕಳೆಲ್ಲರ (ವೇದಕ್ಕಳನ್ನು ಹೊರತುಪಡಿಸಿ) ಮದುವೆಯಾದಮೇಲೆ ಸುಬ್ಬಜ್ಜಿಯೂ ಪರಮಾತ್ಮನ ಪಾದ ಸೇರಿದ್ದರಿಂದ ಕಿರಿ ತಮ್ಮನ ಕುಟುಂಬದ ಜವಾಬ್ದಾರಿ ವೇದಕ್ಕನ ಗೂನು ಬೆನ್ನಿಗೇ ಬಿತ್ತು. ಹಿಸೆಯಾಗಿ ದಕ್ಕಿದ ಹತ್ತು ಗುಂಟೆ ಅಡಿಕೆ ತೋಟ, ಎರಡು ಅಣೆ ಮಂಜಾಣವನ್ನು ಸರಿಯಾಗಿ ನೋಡಿಕೊಂಡಿದ್ದು ವೇದಕ್ಕಳೇ. ಚೊಂಬು ಹಿಡಿದುಕೊಂಡು ಬೆಟ್ಟಕ್ಕೆ ಹೋಗುವುದನ್ನ ಇಡೀ ಊರಿಗೆ ಮೊದಲನೆಯವಳಾಗಿ ಽಕ್ಕರಿಸಿದ್ದು ವೇದಕ್ಕ. ಹಿಂಗಿದ್ದ ವೇದಕ್ಕಳಿಗೆ ವರ ಹುಡುಕುವುದು ಕಷ್ಟವಾಗಿರಲಿಲ್ಲ, ಬಂದ ಒಂದೆರಡು ಗಂಡುಗಳನ್ನು ವರದಕ್ಷಿಣೆ ನಿರಾಕರಿಸಿ ಹೊರ ಹಾಕಿದ್ದು ವೇದಕ್ಕನ ಗಟ್ಟಿತನಕ್ಕೆ ಉದಾಹರಣೆಯಾಗಿತ್ತು. ವೇದಕ್ಕ ಅಂದರೆ ಊರವರ ಕಣ್ಣಿಗೆ ಗೂನು ಬೆನ್ನಿನ ವಿಕಾರ ಹೆಣ್ಣಾಗಿದ್ದರೂ ಆಕೆಯ ಮಾತಿಗೆ ಊರಲ್ಲಿ ಒಂದು ತೂಕವಿತ್ತು. ಅವಳ ಬದುಕನ್ನ ಬರೆಯುತ್ತ ಕುಳಿತರೆ ಪ್ರತಿ ದಿನವೂ ಒಂದು ಕಥೆಯೇ!
     ಈಗೊಂದೆರಡು ಚುನಾವಣೆಗಳ ಹಿಂದಿನ ಮಾತದು. ಮತ ಕೇಳಲು ಬಂದ ಮುಖಂಡರೆಲ್ಲರಿಗೂ ಬೆವರಿಳಿಸಿದ್ದ ವೇದಕ್ಕ ಬರೀ ಎರಡನೇ ಇಯತ್ತೆಗೇ ಮಾಸ್ತರರ ಹುಚ್ಚಾಟಕ್ಕೆ ಬೈದು ಶಾಲೆ ಬಿಟ್ಟವಳೆಂದರೆ ಯಾರು ನಂಬುತ್ತಾರೆ? ಆ ಚುನಾವಣೆಯ ಬಳಿಕ ನಮ್ಮೂರ ರಸ್ತೆ ಕಡಿ ಹೊದ್ದು ಮಲಗಿತೆಂದರೆ ಅದಕ್ಕೆ ಯಾವ ಶಾಸಕನೂ ಕಾರಣನಲ್ಲ, ವೇದಕ್ಕಳ ಮಾತು ಆ ತೆರನಾದ ಬದಲಾವಣೆ ತಂದಿತ್ತು.
ಇಂತಿಪ್ಪ ವೇದಕ್ಕಳ ಅಂತ್ಯವೂ ವೇದನಾಮಯವೇ. ವಯಸ್ಸು ಇಳಿದಂತೆ ವೇದಕ್ಕ ಮನೆಯಲ್ಲಿ ಮೂಲೆಗುಂಪಾದಳು. ತಂಗಿಯರ ನಿರ್ಲಕ್ಷ್ಯ, ತಮ್ಮಂದಿರ ಹಠ, ನಾದನಿಯರ ಕೊಂಕು ಸಹಿಸಿಕೊಂಡು ಅವಳಾದರೂ ಹೇಗೆ ಬದುಕಿದ್ದಳೋ ಮಹರಾಯ್ತಿ. ಮೈಸುಡುವ ಜ್ವರ ಬಂದು ಮಲಗಿದರೂ ಮಾತನಾಡಿಸುವವರಿಲ್ಲ. ಈಗೊಂದು ತಿಂಗಳ ಹಿಂದೆ ಭಯಂಕರ ಜೀರ್ಣವಾಗಿದ್ದ
ವೇದಕ್ಕ ಹಾಸಿಗೆ ಹಿಡಿದಿದ್ದಳು, ಆಸ್ಪತ್ರೆಯನ್ನೂ ಕಾಣದ ಪುಣ್ಯವಂತೆ ಸತ್ತಳು.
***
     ನಮ್ಮೂರಲ್ಲಿ ಎರಡು ಭಾಗ, ಒಂದು ಹೊಳೆ ಈಚೆಗಿನದು; ಹೊಳೆಯಾಚೆಗಿನದು. ಆ ಭಯಂಕರ ಮಳೆಗೆ ಮಧ್ಯದ ಹೊಳೆ ತುಂಬಿ ಹರಿಯುತ್ತಿತ್ತು. ಬೇಸಿಗೆಯಲ್ಲಿ ಆರಾಮಾಗಿ ದಾಟಬಹುದಾದ ಹೊಳೆಗೆ ನಾಲ್ಕು ಜನ ಒಟ್ಟಿಗೇ ದಾಟಲು ಬ್ರಿಜ್ ಎಂಬುದಿಲ್ಲ. ಒಂದು ಕಾಲು ಸಂಕವಿದೆಯಾದರೂ ಹೆಣವೇ ಎದ್ದು, ಸಂಕವೇರಿ ದಾಟಬೇಕೇ ಹೊರತು ಅದನ್ನು ಹೊತ್ತು ನಾಲ್ಕು ಮಂದಿ ಒಟ್ಟಿಗೇ ಸಾಗಲು ಅಸಾಧ್ಯ. ಹೊಳೆಯೀಚಿನ ಮನೆಯ ವೇದಕ್ಕನ ಶವವನ್ನು ಹೊಳೆಯಾಚೆಗಿನ ಸ್ಮಶಾನಕ್ಕೆ ಹೊರುವುದು ದೊಡ್ಡ ಸಮಸ್ಯೆಯಾಯಿತು. ಬಿದಿರು ಮೋಟಾರಿನ ಮೇಲೆ ವೇದಕ್ಕ ಮಲಗಿದ್ದಷ್ಟೇ ಬಂತು, ಮನೆಯಂಗಳದ ಚಪ್ಪರದಡಿಯಿಂದ ಎದ್ದು ಹೊರಡಲೇ ಇಲ್ಲ.
     ಶಿರಸಿ ಬದಿಯಿಂದ ಬಂದ ಗಾಡಿಗಳೂ ಹೊಳೆ ದಾಟದಂತಾಗಿ ಹೊಳೆಯಾಚೆಗಿನ ದಂಡೆ ಪಾರ್ಕಿಂಗ್ ಜಾಗವಾಯ್ತು. ಸಂಸ್ಕಾರ ಸಾಗಿಸಬೇಕಾದ ಭಟ್ಟರೂ ಗಾಡಿಯಿಟ್ಟು, ಸಂಕದ ಮೇಲೆ ಹೆಜ್ಜೆ ಲೆಕ್ಕ ಮಾಡಿ ಹೊಳೆ ದಾಟಿ ಹೋದರು.
     ಹೊಳೆಯೀಚೆ ಕುಂಟೆ ಕಡಿದು ಹೊರಲಾಗದೆಂದು ಊರವರೆಲ್ಲ ಹೊಳೆಯಾಚೆಗಿನ ಬೆಟ್ಟದಲ್ಲಿ ಮತ್ತಿಮರ ಕಡಿದರು. ಮತ್ತೆ ಯಾರು ಹೊಳೆ ದಾಟುತ್ತಾರೆಂದು ಹೆಣಕ್ಕಾಗಿ ಅಲ್ಲೇ ಕಾದು ಕುಳಿತರು.
     ಹೊಳೆ ಇಳಿಯಲಿ ಎಂದು ಭಟ್ಟರೂ ಸೇರಿದಂತೆ ಊರವರೆಲ್ಲ ಕಾದರು. ಮಳೆ ಮತ್ತೂ ಹೆಚ್ಚಿ ಹೊಳೆ ಏರಿತೇ ಹೊರತು ಹೆಣಕ್ಕೆ ಮುಕ್ತಿ ಸಿಗಲಿಲ್ಲ.
ರಾತ್ರಿಯಾಯ್ತು, ಭಟ್ಟರು ಹೋದರು. ಮಳೆ ಮಾತ್ರ ನಿಲ್ಲಲಿಲ್ಲ. ರಾತ್ರಿ ಕಳೆದ ಮೇಲೆ ಬೆಳಗು ನಿಲ್ಲುತ್ತದೆಯೇ? ಊಹ್ಞೂಂ, ಮಳೆ ಮಾತ್ರ ನಿಲ್ಲಲಿಲ್ಲ. ಹೆಣವನ್ನು ಇಲ್ಲೇ ಸುಡುವುದೆಂದು ತೀರ್ಮಾನಿಸಲಾಯ್ತು. ವೇದಕ್ಕನ ಮನೆಯ ಮಂಜಾಣದಲ್ಲಿ ಸುಡಲು ಸಹೋದರರ ತಕರಾರಿ. ಇರುವ ಎರಡಾಣೆ ಜಾಗವನ್ನೂ ಹಾಳು ಮಾಡಿಕೊಳ್ಳಲು, ಇಲ್ಲದ ವೇದಕ್ಕನ ಶವಸಂಸ್ಕಾರಕ್ಕೆ ಬಳಸಲು ಅವರಾದರೂ ಹೇಗೆ ಒಪ್ಪುತ್ತಾರೆ! ಹೊಳೆಯೀಚೆಗೆ ಅದ್ಯಾರದೋ ಬೆಟ್ಟದ ಮೂಲೆಯೊಂದರಲ್ಲಿ ಜಾಗ ಹುಡುಕಿ, ಮರ ಕಡಿಯಲು ಕೊಡಲಿ ಹುಡುಕುವುದರೊಳಗೆ ಮತ್ತೆ ರಾತ್ರಿಯಾಗಿತ್ತು. ಜಗುಲಿಯಲ್ಲೇ ಶವಯಾತ್ರೆ ವಿಶ್ರಾಂತವಾಗಿತ್ತು.
     ಬಹುಶಃ ವೇದಕ್ಕನಿಗೂ ತಾಳ್ಮೆಯ ಮಿತಿ ಮೀರಿತ್ತೇನೋ. ಸಂಸ್ಕಾರವಾಗದೇ ಕಂಗಾಲಾಗಿದ್ದ ಹೆಣ ಬೆಳಿಗ್ಗೆ ಹೊತ್ತಿಗೆ ಮಾಯವಾಗಿತ್ತು. ಹುಡುಕಿದರು, ಸಿಗಲಿಲ್ಲ ಎಂದು ಕೈಬಿಟ್ಟರು.
    ಎರಡು ದಿನದ ನಂತರ...ಟಿವಿಯಲ್ಲಿ ವೇದಕ್ಕ ಕಾಣಿಸಿಕೊಂಡಿದ್ದಳು! ನಾಲ್ಕು ಮೈಕುಗಳ ಮುಂದೆ ವೇದಕ್ಕಳ ಆರ್ಭಟ! ರೋಡು ಬೇಕೆಂದು, ಬ್ರಿಜ್ಜು ಬೇಕೆಂದು ಹಠ ಹಿಡಿದು ಮಂತ್ರಿಯ ಮನೆ ಬಾಗಿಲೆದುರು ಸತ್ಯಾಗ್ರಹಕ್ಕೆ ಕೂತಿದ್ದಳು! ಟಿ.ವಿ. ಚಾನಲ್ಲುಗಳು ಐದು ನಿಮಿಷ ತೋರಿಸಿ, ಸಿಗದ ಟಿ.ಆರ್.ಪಿ. ದೆಸೆಯಿಂದ ಬೇರೆ ಸುದ್ದಿ ಬಿತ್ತರಿಸುವ ಗ್ಯಾಪಲ್ಲಿ ದರ್ಶನ ನೀಡಿದ್ದ ವೇದಕ್ಕ ಮುಂದೇನಾದಳು ಎಂಬುದು ತಿಳಿದಿಲ್ಲ. ಬಹುಶಃ ಅದ್ಯಾವತ್ತೋ ಸತ್ತ ಅವಳ ಜೀವಂತ ದನಿ ಈ ಕ್ರಿಯೆಯಿಂದ ಸಾಯಲ್ಪಟ್ಟಿರುವವರ ಕಿವಿಗೆ ಅಪ್ಪಳಿಸಿದ್ದು ಸುಳ್ಳು. ಬದುಕಿರುವ ನಮ್ಮ-ನಿಮ್ಮಂಥವರ ದ್ವನಿಯನ್ನೇ ಅಡಗಿಸುವ ತಾಕತ್ತಿರುವ ಆ ದೊಡ್ಡ ಮಂದಿಗೆ ಇವಳದ್ಯಾವ ಲೆಕ್ಕ!
     ಸತ್ತು ವಾರವೇ ಕಳೆದಿದ್ದ ವೇದಕ್ಕ ಟಿ.ವಿ.ಯಲ್ಲಿ ಕಾಣಿಸಿಕೊಂಡಿದ್ದು ಹೇಗೆಂಬುದೂ ನನಗೆ ಗೊತ್ತಿಲ್ಲ. ಆದರೆ ಊರವರಿಗೆ ಆಕೆ ಬಂದದ್ದು, ಅರಚಿದ್ದು ಯಾವುದೂ ತಿಳಿದಿಲ್ಲವೆಂದಮೇಲೆ ನಾನೇ ಅವರಿಗಿಂತ ಅಡ್ಡಿಲ್ಲ. ಅಲ್ಲವೇ?

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ