ಪ್ರೆಷ್ಕಥೆ

ದೀಪದ ಬುಡದಲ್ಲಿ
ನೆರಳ ನಾಗರದಾಟ
ಹೊಗೆ ತಿರುವುಗಳಲಿ
ಪತಂಗಕೆ ಅಪಘಾತ
ನಾಲ್ಕು ಸಾಲಿಗೇ
ಮುಗಿಯಬೇಕಿದ ಕವನ
ಹೊಗೆಗುಂಟ ಹರಿದಿದೆ,
ವಾಚನದ ಸಮಯದಲಿ
ಕತ್ತಲೆಯು ಕವೆದಿದೆ.
ಅವಳೇಕೆ ಕೇಳಲಿಲ್ಲ
ನಾ ಬರೆದ ಕವಿತೆಯ?
ಕಿವಿಯೊಳಗೆ ಬೆಳಕು
ಸಾಲದೇನೋ,
ಅಲ್ಲೂ ಜ್ಯೋತಿಯ
ಕೊರತೆಯಿದೆ.
ಆ ಕಂಬದಲಿ ಯಾರಿದ್ದಾರೆ?
ಪ್ರಹ್ಲಾದ ಹೇಳಿದಂತೆ
ಅಲ್ಲಿ ದೇವರಿರಲೂಬಹುದು
ಆದರೆ ಇಲ್ಲಿ ಕತ್ತಲೆಯಿದೆ
ಕಾಣದ ದೇವರ ಹುಡುಕಲಾರೆ.
ಒಂದು ಕತ್ತಲೆಯ ರಾತ್ರಿ
ಹೊಸದೇ ಈ ಜಗಕೆ,
ಬೆಳ್ಳನೆಯ ವಿದ್ಯುದೀಪ
ಮಶಿ ಹಿಡಿದಂತಾಗಿದೆ.
ಮಾತನಾಡದೇ ಕುಳಿತ
ರೇಡಿಯೋಗೂ ಬಾಯಿ ಬರಬಹುದಿತ್ತು,
ಸಂಜೆ ಹೊತ್ತಲಿ
ಪ್ರದೇಶ ಸಮಾಚಾರ
ಕೇಳಬಹುದಿತ್ತು.
ಗಾಳಿ ಹಾಡು
ಅರ್ಥವಾಗುತ್ತಿಲ್ಲ,
ಅದಾವ ರಾಗವೋ
ಮರಗಳ ತಲೆ ತೂಗದೇ
ನಿಲ್ಲುತ್ತಿಲ್ಲ!
ಹೊತ್ತಿಗೆಯ ಹೊರೆ
ಸೆರೆ ಕುಡಿದಂತೆ ಮಲಗಿದೆ,
ಹಾಳೆಗಳ ನಡುವೆ
ಓದಿನ ಗುರುತು ಅಡಗಿದೆ.
ಇಂದು ನನ್ನ ಕೋಣೆಯಲಿ
ಇಷ್ಟೆಲ್ಲಾ ಕಾಣುತಿದೆ,
ಕಾರಣ, ಸುತ್ತ ಕತ್ತಲೆಯಿದೆ!
ಸೋರದ ತಾರಸಿಯ ಮಾಡಲ್ಲಿ
ಹನಿಗಳ ಶಬ್ಧ
ಹಿಂದೆಂದೂ ಇರಲಿಲ್ಲ,
ಮಳೆಜಿರಲೆಯ ಸಂಗೀತ
ಆಲಿಸಿಯೇ ಇರಲಿಲ್ಲ.
ಬೆಳಕಿರದ ಸಂಜೆಯಲಿ
ಹೊಸ ಜಗದ ಅನುಭವ,
ಎಂದಿಗೂ ಇರಲಿ ಈ
ವಿದ್ಯುದಾಭಾವ

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ