ಮೆಡಿಸಿನ್ ಮಾಫಿಯಾ

ನಿನ್ನೆಗೆ ನಾನು ಪತ್ರಿಕೋದ್ಯಮಕ್ಕೆ ಬಂದು ಒಂದು ವರ್ಷವಾಯ್ತು. ಒಂದೇ ವರ್ಷಕ್ಕೆ ಭಯಂಕರ ಬೇಜಾರು ಬಂದ ಈ ಫೀಲ್ಡು ಅತ್ಯಂತ ಕೆಟ್ಟ ಫೀಲ್ಡು ಅಂದ್ಕೊಂಡಿದ್ದೆ. ಆಗ  ಈ ವಿಷಯಗಳ ಅರಿವಾಯ್ತು. ನೇರವಾಗಿ ವಿಷಯಕ್ಕೆ ಬರ್ತೀನಿ. ಇವತ್ತು ಹೇಳಿದ್ದಕ್ಕಿಂತ ಜಾಸ್ತಿ ನಾಳೆ ಹೇಳಬಹುದು ನಾನು. ಇದೊಂಥರ trailer.
    ಸರ್ಕಾರ ಜೆನರಿಕ್ ಮೆಡಿಸಿನ್ ಬಗ್ಗೆ ಅಷ್ಟೆಲ್ಲಾ ಸೀರಿಯಸ್ಸಾಗಿ ಕಾನೂನನ್ನ ತಂದ್ರೂ, ಜೆನರಿಕ್ ಮಳಿಗೆಗಳನ್ನೇ ತೆರೆದ್ರೂ ಈ ಮೆಡಿಸಿನ್ ಮಾಫಿಯಾಕ್ಕೆ ಬ್ರೇಕ್ ಹಾಕೋದು ಕಷ್ಟವೇ.
    ಈಗ ಮಳೆಗಾಲ ಶುರ್ವಾಗಿದೆ. ನೆಗಡಿ, ಜ್ವರ ಮನೆಯಲ್ಲಿ ಒಬ್ಬರಿಗಾದ್ರೂ ಕಾಟ ಕೊಡೋದು ಸಾಮಾನ್ಯ. ಹೆಲ್ಥ್ ಬಗ್ಗೆ ತುಂಬಾನೇ ಕಾಳಜಿ ಇರೋ ಜನ ಆಸ್ಪತ್ರೆಗಳಿಗೆ ಹೋಗ್ತಾರೆ. ಸಧ್ಯಕ್ಕೆ ಇವರನ್ನ ಬಿಟ್ಟು ಮತ್ತೊಂದು ಟೈಪ್ ಮಂದಿಯ ಬಗ್ಗೆ ಯೋಚಿಸೋಣ. ಇವ್ರು ಮೆಡಿಕಲ್ ಶಾಫಿಗೆ ಹೋಗಿ nicip ಅಥ್ವಾ crocine ಅನ್ನೋ ಮಾತ್ರೆಗಳನ್ನ ತೆಗುದುಕೊಳ್ತಾರೆ. ಹತ್ತು ಮಾತ್ರೆಗಳ nicip cold strip ಒಂದಕ್ಕೆ ೩೩ ರೂ. ಎಂ.ಆರ್.ಪಿ. ಇರತ್ತೆ. ಮೆಡಿಕಲ್ ಷಾಪ್ ಮನುಷ್ಯ ಅದನ್ನ ಇಪ್ಪತ್ತೇ ರೂಪಾಯಿಗೆ ಮಾರುತ್ತಾನೆ. ಎಷ್ಟು ಒಳ್ಳೆಯವ ಅಲ್ವಾ?
     ಮಳೆಗಾಲ, ಉಗುರು ಕೀಲು ಆಗತ್ತೆ, ಅದಕ್ಕೆಲ್ಲಾ ಡಾಕ್ಟರ್ ಬಳಿ ಹೋಗೋದುಂಟಾ? ಪರಿಚಯದ ಮೆಡಿಕಲ್ ರೆಪ್ ಒಬ್ಬನ ಬಳಿ 'ಬೇಗ ಗುಣ ಆಗ್ಬೇಕು ಮಾರಾಯಾ, ಕಂಡಾಪಟ್ಟೆ ಉರಿ' ಅಂತೀರಾ. ಅವ ಶಿಫಾರಸು ಮಾಡೋದು fucidic acid ಅನ್ನೋದರ ಕಾಂಬಿನೇಶನ್ನಿನ ಆಯಿಂಟ್ಮೆಂಟ್ ಒಂದನ್ನ. ಅದು ಅವನ ಬಳಿಯೇ ಸಿಗುತ್ತೆ, ೮೦ ರೂ. ಎಂ.ಆರ್.ಪಿ.ಯ ಮುಲಾಮಿಗೆ ಆತ ತೆಗೆದುಕೊಳ್ಳೋದು ಬರೀ ಎಪ್ಪತ್ತೈದು ರೂ. ಮಾತ್ರ. ನಿಮ್ಮ ಪರಿಚಯದವನಾದ್ದರಿಂದ ಅಷ್ಟೇ. ಎರಡು ಬಾರಿ ಹಚ್ಚುವಷ್ಟರಲ್ಲಿ ಉಗುರು ಕೀಲು ಮಾಯವಾಗಿರತ್ತೆ!
ಈ ಉಗುರು ಕೀಲಿನ ಬಗ್ಗೆ ಜನಕ್ಕೆ ಅದೆಷ್ಟು ಕಾಳಜಿ ಅಂದ್ರೆ, ಅಲ್ಲೆಲ್ಲೋ ದೂಳು, ಕೆಸರು ಹೊಕ್ಕಿ ಮತ್ತೇನೋ ಆಗತ್ತೆ ಅಂತ ಹತ್ತು ರೂ.ಗೆ ಸಿಗೋ ಹೈಡ್ರೋಜನ್ ಫೆರಾಕ್ಸೈಡನ್ನ ಕಿಸೆಯಲ್ಲೇ ಇಟ್ಟುಕೊಂಡು ಓಡಾಡುತ್ತಾರೆ; ಆ ಸಣ್ಣ ಗಾಯಕ್ಕೆ ದಿನವಿಡೀ ಬಿಟ್ಟುಕೊಂಡು ನೊರೆ ಬರೋದನ್ನ ಎಂಜಾಯ್ ಮಾಡ್ತಾರೆ. ಅದೊಂಥರಾ ಮಜ, ಬೇಗ addict ಆಗುವ ಚಟ ಅದೊಂದು. ಖಂಡಿತ್ತಾ ಒಳ್ಳೇದಲ್ಲ. ಈ ಹೈಡ್ರೋಜನ್ ಫೆರಾಕ್ಸೈಡು ಥೇಟ್ ನೀರಿನಂತೇ; h2o2 ಅಂದ್ರೆ ಹೈಡ್ರೋಜನ್ನಿನ ಹಾಗೂ ಆಕ್ಸಿಜನ್ನಿನ ತಲಾ ಎರಡೆರಡು ಅಣುಗಳ ಸಂಯುಕ್ತ. ಉಗುರಿನ ಸುತ್ತ ಸಿಕ್ಕಿಕೊಳ್ಳೋ dust particles ಜೊತೆ ಈ ಆಮ್ಲಜನಕದ ಎರಡು ಅಣುಗಳು ಕಿತ್ತಾಡಿಕೊಂಡು ಮೇಲೆ ತರತ್ವೆ‌, ಜೊತೆಗೇ dead cells ಮತ್ತೆ ಚರ್ಮದ ಪುಡಿಗಳನ್ನೂ ಕಿತ್ತುಕೊಂಡು ಬರತ್ವೆ. ಇದನ್ನ ಹಸಿ ಗಾಯದ ಮೇಲೆ ಬಿಟ್ರೆ? ಜುಂ ಅನ್ನೋ ಫೀಲಿಂಗಿನ ಜೊತೆಗೇ ಗಾಯವನ್ನ ಮತ್ತೂ ದೊಡ್ಡದಾಗಿ ಮಾಡತ್ವೆ. ಆಗ ಗಾಯ ಮಾಯೋಕೆ ಈ fucidic acid ಬೇಕೇಬೇಕು. ಖಾಲಿ b.com ಮಾಡಿರೋ ಮೆಡಿಕಲ್ ರೆಪ್ ಒಬ್ಬ ಮೊದಲಿಗೆ ಹೈಡ್ರೋಜನ್ ಫೆರಾಕ್ಸೈಡ್ ರೆಫರ್ ಮಾಡಿ ಗುಣ ಆಗಲಿಲ್ಲ ಅಂದ್ರೆ ಬೇರೆ ಔಷಧಿ ಇದೆ ಅಂತಾನೆ.
     ಮೇಲೆ ಹೇಳಿರೋ nicip cold tablet ಹೋಲ್ ಸೇಲ್ ಔಷಧ ಮಳಿಗೆಯಿಂದ ರಿಟೇಲರ್ ಕೈಗೆ ಸಿಗೋದು ಎಂಟು ರೂ/ ಸ್ಟ್ರಿಪ್. ಅದನ್ನ ಆತ ಇಪ್ಪತ್ತೇ ರೂ.ಗೆ (ಎಂ.ಆರ್.ಪಿ. ೩೩ ರೂ.!) ಮಾರಿದರೂ ಪ್ರತಿ ಮಾತ್ರೆಗೆ ಒಂದು ರೂ.ಗಿಂತ ಜಾಸ್ತಿ ದುಡಿಯುತ್ತಾನೆ! ಹಂಗೇ ಆ fucidic acid ಕಾಂಬಿನೇಶನ್ನಿನ ಆಯಿಂಟ್ಮೆಂಟಿನ ಹೋಲ್ಸೆಲ್ ಬೆಲೆ ಹದಿನಾಲ್ಕು ರೂ. ಅದನ್ನ ಔಷಧ ಮಳಿಗೆಯಲ್ಲಿ ಮಾರೋದು ೭೯ ರೂ.ಗೆ! (ಇದೇ ಕಾಂಬಿನೇಶನ್ನಿನ cipla ಉತ್ಪನ್ನ ಸ್ವಲ್ಪ ದುಬಾರಿ, ೫೪ ರೂ. ಹೋಲ್ಸೇಲ್ ಬೆಲೆಯಿದೆ ಬಹುಶಃ)
ಇದು ಆಸ್ಪತ್ರೆಗೆ ಹೋಗದೇ ರೋಗನಿಧಾನ ಮಾಡಿಕೊಳ್ಳುವವರು ಪಸೆ ಬೀಳುವ ರೀತಿಯಾದ್ರೆ ಈ ಹೆಲ್ಥ್ ಕಾನ್ಷಿಯಸ್ ಮಂದಿಯದು ಸುತ್ತಿಬಳಸಿ ರಾಡಿ ಮಾಡಿಕೊಳ್ಳುವ ಜಾತಿ. ಇಲ್ಲಿ ಎರಡು ಬಗೆಯ ಮಂದಿ, ದುಡ್ಡಿಗಿಂತಾ ಆರೋಗ್ಯ ಮುಖ್ಯ ಅಂತ ಖಾಸಗಿ ಆಸ್ಪತ್ರೆಗೆ ಹೋಗೋರು ಮತ್ತೆ ಖರ್ಚು ಕಮ್ಮಿ ಅಂತ ಸರ್ಕಾರಿ ಆಸ್ಪತ್ರೆಗೆ ಹೋಗೋ ಬಡ-ಮಧ್ಯಮ ವರ್ಗದವರು. ಮೊದಲಿಗೆ ಮೊದಲ ಉಪಜಾತಿಯವರ ಪರಿಸ್ಥಿತಿಯನ್ನ ತಿಳಿಯೋಣ‌.
ಜ್ವರ ಅಂತ ಖಾಸಗಿ ಆಸ್ಪತ್ರೆಗೆ ಒಂದೈವತ್ತು ರೂ. ದ ಚೀಟಿ ಮಾಡಿಸಿ, ಸೀಸನ್ನಾದ್ದರಿಂದ ಒಂದೊಪ್ಪತ್ತು ಕ್ಯೂದಲ್ಲಿ ಕಾದ ನಂತರ ವೈದ್ಯರಿಗೆ ನಾಲಿಗೆ, ಹಲ್ಲು, ಹಾರ್ಟ್ ಬೀಟುಗಳ ಪರಿಚಯ ಮಾಡಿಸಿ ಮತ್ತೊಂದಿಷ್ಟು ಹಣ ಕೊಟ್ಟು ಅವರ ಆಟೋಗ್ರಾಫ್ ಉಳ್ಳ ಔಷಧಿ ಚೀಟಿಯನ್ನ ಕಿಸೆಗೆ ಹಾಕಿ ಬರುತ್ತಾರೆ. ಔಷಧಿ ಅಂಗಡಿಯವ ಆ ಪರಿಚಿತ ಬರಹ ಓದಿ ಯಾವುದೋ ಒಂದು ಬ್ರ್ಯಾಂಡ್ನ paracetamol 250 mg ಮಾತ್ರೆಯನ್ನ ಕೊಡುತ್ತಾನೆ. ಅದೇ ಕಾಂಬಿನೇಶನ್ನಿನ ಜೆನರಿಕ್ ಮಾತ್ರೆಯ ಹತ್ತು ಮಾತ್ರೆಗಳ ಸ್ಟ್ರಿಪ್ ಬೆಲೆ ಮೂರೇ ರೂಪಾಯಿಗೆ ಲಭ್ಯವಿದ್ದರೂ ಆತ ಕೊಡೋ ಬ್ರ್ಯಾಂಡೆಡ್ ಮಾತ್ರೆಗೆ ಹತ್ತಿಪ್ಪತ್ತು ರೂ. ಕೊಟ್ಟು ಬಂದುಬಿಡುತ್ತಾರೆ. ವಾಸಿಯಾಗದಿದ್ದರೆ ಇದೇ ಕ್ರಿಯಾಸರಪಣಿ ಪುನರಾವರ್ತಿತವಾಗತ್ತೆ, ಒಂದು ಬದಲಾವಣೆ; ಮುಂದಿನ ಬಾರಿ 500 mg ತಾಖತ್ತಿನ paracetamol ಕಾಂಬಿನೇಶನ್ನಿನ ಮಾತ್ರೆ ಬರೆಯಲಾಗುತ್ತೆ. ಅಷ್ಟಾದರೂ ಜ್ವರ ವಾಸಿಯಾಗದಿದ್ದರೆ blood test, urine test ಮಾಡಿ, ಯಾವುದೋ ಗಂಭೀರ ಖಾಯಿಲೆಯ ಮೇಲೆ ಆರೋಪ ಹೊರಿಸಿ ನಿಮ್ಮನ್ನ ವಾರದ ಮಟ್ಟಿಗೆ admit ಮಾಡಿಕೊಂಡು ಪ್ರಯೋಗ ಮಾಡಲಾಗುತ್ತದೆ.
      ಅದೆಷ್ಟು ಔಷಧ ಕಂಪನಿಗಳಿವೆ ಅಂತ ಪರೀಕ್ಷಿಸೋ ಉಮೇದಿಯಿದ್ದರೆ, ನಿಮ್ಮ ಏರಿಯಾದ ಎಲ್ಲಾ ವೈದ್ಯರ ಬಳಿಬ ಜ್ವರ ಹೊತ್ತು ಹೋಗಿ. ಪ್ರತಿ ವೈದ್ಯ ಬರೆದ ಚೀಟಿಗೆ ಬದಲಾಗಿ ಬೇರೆ ಬೇರೆ ಕಂಪನಿಯ paracetamol ಮಾತ್ರೆಗಳು ನಿಮ್ಮ ಬೊಗಸೆಯಲ್ಲಿರತ್ವೆ!
     ಓಹ್, ಮತ್ತೊಂದು ಉಪಜಾತಿಯವರನ್ನ ಮರೆತೇಬಿಟ್ಟೆವು ನೋಡಿ! ಸರ್ಕಾರಿ ಆಸ್ಪತ್ರೆಯ ಜ್ವರದ ರೋಗಿಗೆ ಕೊಡೋದು ಅಲ್ಲೇ ಸ್ಟಾಕ್ ಇದ್ದರೆ paracetamol plane; ಪುಕ್ಕಟೆಯಾಗಿ. ಇಲ್ಲವಾದಲ್ಲಿ ಆಸ್ಪತ್ರೆಯ ಎದುರಿಗಿರೋ ಔಷಧ ಅಂಗಡಿಯವನಿಗೆ ಕಾಂಬಿನೇಶನ್ನು ಬರೆದಿರೋ ಚೀಟಿಯನ್ನ ನೀವು ಹಸ್ತಾಂತರಿಸಬೇಕಾಗುತ್ತದೆ. ಅಲ್ಲಿ ನೀವು ನೀಡಬೇಕಾದ ಹಣ ಅಂಗಡಿಯವನ ಮಾನವೀಯತೆ ಮತ್ತೆ ವೈದ್ಯನ ಕಮೀಷನ್ ಮೇಲೆ ಅವಲಂಬಿತವಾಗಿರತ್ತೆ.
      ಇಲ್ಲಿ ಯಾವೊಬ್ಬ ವೈದ್ಯನನ್ನಾಗಲಿ, ಔಷಧ ಮಳಿಗೆಯವನನ್ನಾಗಲೀ ನಾನು ದೂಷಿಸುತ್ತಿಲ್ಲ.‌ ಲಾಭ ಗಳಿಕೆಗೆಂದೇ ವ್ಯಾಪಾರ ಮಾಡುವುದೆಂಬ ಅರಿವಿದೆ ನನಗೆ. ಆದರೆ, ಮೂಲ ಬೆಲೆಯ ನೂರು ಪಟ್ಟು ಪೀಕುವಷ್ಟು, ಅನ್ಯಾಯದ ಲಾಭಕ್ಕಾಗಿ ಬಾಯಿ ತೆರೆದು ಕಾಯುವುದೂ ತಪ್ಪಲ್ಲವೇ? ಆರೋಗ್ಯ ಕ್ಷೇತ್ರ ಎಲ್ಲರ ಅವಶ್ಯಕತೆಯ ಸೇವಾ ವಲಯ. ಹಣದ ಜೊತೆ ರೋಗಿಯ ಪರಿಸ್ಥಿತಿಯ ಅರಿವೂ ಇರಬೇಕು ಅಲ್ಲವೇ? ನನ್ನ ಪರಿಚಿತರೊಬ್ಬರು ಸಗಟು ಔಷಧ ಮಳಿಗೆಯಲ್ಲಿ ಕೆಲಸ ಮಾಡುತ್ತಾರೆ. ಅವರೇ ಹೇಳುವಂತೆ ಮೆಡಿಕಲ್ ಫೀಲ್ಡು ಅತ್ಯಂತ ಕೆಟ್ಟ ಫೀಲ್ಡ್. ಅವರು ಹತ್ತು ರೂ. ಗೆ ಮಾರಿದ್ದ ಮಾತ್ರೆಯನ್ನ ಅವರ ತಂದೆಯೋ, ತಮ್ಮನೋ ಅಥವಾ ಮತ್ಯಾರೋ ಆತ್ಮೀಯರು ರಿಟೇಲ್ ಅಂಗಡಿಯಿಂದ ಎಪ್ಪತ್ತು ರೂ. ಕೊಟ್ಟು ಖರೀದಿಸಿದರೆ ಹೆಂಗಾಗಬೇಡ!
     ,ಇನ್ನು ಈ ವೈದ್ಯರೂ ಅಷ್ಟೇ, ಬರೀ ಔಷಧದ ಕಾಂಬಿನೇಷನ್ ಬರೆದರೆ ಸಾಕಲ್ಲವೇ? ಬ್ರ್ಯಾಂಡ್ ಔಷಧವನ್ನೇ ಬರೆಯೋಕೆ ಅದೆಷ್ಟು ಕಮೀಷನ್ ಕೊಡಬಹುದು! ತಮ್ಮ cut ಪಡೆಯೋಕೆ ಬಡ ರೋಗಿಯ ಜೇಬಿಗೆ ಕತ್ತರಿ ಹಾಕೋ ವೈದ್ಯರ ವೃತ್ತಿಯನ್ನ ಅದೆಂಗೆ ಗೌರವದಿಂದ ಕಾಣೋದು!
ಪ್ರತಿಯೊಂದು ಔಷಧ ಕಂಪನಿಯೂ ತನ್ನ ಪ್ರಾಡಕ್ಟಿನ value ಸೇರಿಸೋದು ತನ್ನ brand name ಲೆಕ್ಕ ಹಾಕಿದಮೇಲೇ! ಎಂ.ಆರ್.ಪಿ. ಸೀಲು ಬಿದ್ದ ಮೇಲೆ ಔಷಧ ಉತ್ಪಾದನೆಯಾದ ಕಾರ್ಖಾನೆಯ ಎದುರಿನ ಔಷಧಿ ಮಳಿಗೆಯವನೂ ಎಂ.ಆರ್.ಪಿ. ಬೆಲೆಗೆ ಮಾರಿದರೂ ಅದು ಅಕ್ರಮವಲ್ಲ. ಉತ್ಪಾದನಾ ವೆಚ್ಚದ ಮೇಲೆ ನಾಲ್ಕೈದು ಪರ್ಸೆಂಟ್ ಲಾಭ ಹೊಡೆಯುವುದು ತಪ್ಪಲ್ಲ, ಆದರೆ ಆ ಲಾಭದ ಮೊತ್ತ ನೈಜ ಬೆಲೆಯ ಎರಡರಷ್ಟು, ಮೂರರಷ್ಟು ಬೆಳೆದರೆ ಅಕ್ಷಮ್ಯ.
    ಯಾವ ಮೆಡಿಕಲ್ ರೆಪ್ ಕೂಡ ಕೆಮಿಸ್ಟ್ರಿ ಓದಿರೋದಿಲ್ಲ. ಬರಿ ಬಿ.ಕಾಂ. ಆದರೂ ಸಾಕು, ಆತ ಔಷಧಗಳ ಬಗ್ಗೆ ಪಾಂಡಿತ್ಯ ಗಳಿಸಿಕೊಂಡುಬಿಡುತ್ತಾನೆ! ಆತ ವೈದ್ಯರಿಗೂ ಔಷಧಿಗಳ ಬಗ್ಗೆ ಸಲಹೆ ಕೊಡಬಲ್ಲ! ಬಹುಶಃ ಇದು ಭಾರತದಲ್ಲಿ ಮಾತ್ರ ಸಾಧ್ಯವೇನೋ.
      ಸರ್ಕಾರ ದೇಶದ ಮೂಲೆಮೂಲೆಯಲ್ಲೂ ಜೆನರಿಕ್ ಮಳಿಗೆಗಳನ್ನ ತೆರೆಯಬೇಕಿದೆ. ವೈದ್ಯರು ಔಷಧದ ಕಾಂಬಿನೇಶನ್ ಅಷ್ಟೇ ಬರೆಯುವಂತೆ ಕಟ್ಟುನಿಟ್ಟಾದ ಕಾನೂನನ್ನ ತರಬೇಕಿದೆ. ಅದಕ್ಕಿಂತ ಹೆಚ್ಚಾಗಿ ನಮ್ಮ ಮಂದಿ ಔಷಧಗಳ ಬಗ್ಗೆ ಸಾಕ್ಷರರಾಗಬೇಕಿದೆ.

*ಇಲ್ಲಿ ಬರೆದದ್ದು ಉದಾಹರಣೆಗಳಷ್ಟೇ, ಇದಕ್ಕೂ ದೊಡ್ಡ ಮಾಫಿಯಾ ಔಷಧ ವಲಯದಲ್ಲಿದೆ.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ