Posts

Showing posts from October, 2018

ನಾಯಿಮಳ್ಳ

ಮೊದಲು ನಾಯಿ ಮಳ್ಳ ಬಂದ. ಹೆಗಲಿಗೊಂದು ಜೋಳಿಗೆ, ಅದರಲ್ಲೊಂದು ನಾಯಿಮರಿ. ನರಪೇತಲ ನಾಯಿಯೊಂದು ಅವನ ಹಿಂದೆ. ಅದರ ಸಂಗಾತಿ ಮತ್ತೊಂದು ನಾಯಿ; ಕತ್ತಿಗೆ ಕಟ್ಟಿಸಿಕೊಂಡಿದ್ದ ಒಂದಂಗುಲ ದಪ್ಪದ ಸರಪಳಿಯ ಮತ್ತೊಂದು ತುದಿ ನಾಯಿಮಳ್ಳನ ಕೈಯಲ್ಲಿತ್ತು. "ಒಂದ್ ಕೆಂಪೀ ಹೆಣ್ ಕುನ್ನಿ ಒಂದ್ ಹೆಂಗ್ಸಿನ ಸಂತಿಗೆ ಬಂದಿತ್ತು. ಹೊಳೆ ಬುಡ್ಕೆ ಕಂಡಿತ್ತು. ಅದ್ಯಾರ್ ನಾಯೀನ್ರಾ? " ಅಂತ ಕೇಳಿದಾಗ ಅದು ಮಡಿವಾಳರ ಕೇರಿ ಚಂದ್ರನದ್ದೆಂದೂ, ಅವನ ಹೆಂಡತಿ ತಾರಾಳೊಟ್ಟಿಗೆ ಗದ್ದೆ ಕಡೆ ಬಂದಿತ್ತೆಂದೂ ಹೇಳಿದೆ. "ಚಂದ್ರನ ಮನೆ ಎಲ್ಲಿ?" ಎಂದು ಕೇಳಿದ್ದ. ಹಿಂಗೇ ಬೆಟ್ಟದ ಕೆಳಗೆ ಹಾವು ಹರಿದಂತೆ ಹೋಗಿರೋ ಕಾಲುಹಾದಿಯಲ್ಲಿ ನೆಟ್ಟಗೆ ಹೋದಾಗ ಸಿಗೋ ಮೂರನೇ ಮನೆಯೆಂದು ಹೇಳಿ ನನ್ನ ಬೈಕನ್ನು ತೊಳೆಯೋ ಕೆಲಸ ಮುಂದುವರಿಸಿದ್ದೆ.      ಮಾರನೇ ದಿನ ವಾಪಸ್ಸು ಕೆಲಸಕ್ಕೆ ಹಾಜರಿರಬೇಕಿತ್ತು. ಸಂಜೆ ಮನೆಗೆ ಬರೋವರೆಗೆ ದನಗಳಿಗೆ ತಿನ್ನಲು ಬೇಕಲ್ಲ, ಹೊಳೆಬದಿಯ ಹಾಳು ಗದ್ದೆಗೆ ಹೋಗಿ ಹಸಿ ಹುಲ್ಲು ಸವರುತ್ತಿದ್ದೆ. ಹುಲ್ಲು ಸವರುತ್ತಿದ್ದವನಿಗೆ ಈ ನಾಯಿ ಮಳ್ಳನದ್ದೇ ಯೋಚನೆ. ಭಯಂಕರ ಲವಲವಿಕೆಯ ಮನುಷ್ಯ. ಅದ್ಯಾಕೆ ಈ ಮಳ್ಳ ಮಳ್ಳನಾದನೋ ಗೊತ್ತಿಲ್ಲ, ಗೊತ್ತು ಮಾಡಿಕೊಳ್ಳುವ ಜರೂರತ್ತು ಇದೆ ಅನ್ನಿಸಿತು. ನಾನೂ ಶರತ್‌ಚಂದ್ರರ ದೇವದಾಸ್ ಓದಿದ್ದೆ. ಪಾರೋ ಸಿಗದೇ ನಾಯಿಗಳನ್ನೇ ಪತ್ನಿಯರಂತೆ ಸಾಕೋ ಕ್ಯಾರೆಕ್ಟರ್ರು ಪರಿಚಯವಿತ್ತು. ನಮ್ಮೂರಿನಲ್ಲೇ ತನಗೆ ನಟಿ ಮಂಜು