ವ್ರತ

ಊರ ಹಬ್ಬದಲಿ ಕೆಂಡದ ಮೇಲೆ ನಡೆಯುತ್ತಿದ್ದವಳ ಮನಸ್ಸಲ್ಲೇನಿತ್ತು? ಗಂಡನ ಅನುಮಾನಗಳಿಗೆ ಪೂರಕವೆಂಬಂತೆ ಗಂಡನ ಗೆಳೆಯ ನಡೆದುಕೊಂಡು ತಾನು ಮನೆ ಬಿಟ್ಟು ತವರಿಗೆ ಬಂದದ್ದು ಇನ್ನೂ ಜನರ ಬಾಯಲ್ಲೇ ಇದೆ. ಅವರ ಬಾಯಲ್ಲಿನ ಕಥೆಗೆ ತಾನು ನಾಯಕಿಯೋ ಖಳನಾಯಕಿಯೋ ಒಂದೂ ಗೊತ್ತಿಲ್ಲ. ಎಲ್ಲ ಬಂದು ಕನಿಕರದ ಮಾತಾಡುವವರೇ!
ತಾನೇನು ಸೀತೆಯಲ್ಲ, ಆದರೆ ಪಾತಿವ್ರತ್ಯದಲ್ಲಿ ಯಾವ ಸಾದ್ವಿಗು ಕಡಿಮೆಯಲ್ಲ. ಆದರೆ ಯಾರಿಗೆ ಗೊತ್ತಿದೆ! ತನಗೆ ತಾನೇ ಒಡ್ಡಿಕೊಂಡ ಅಗ್ನಿ ಪರೀಕ್ಷೆ, ತನಗಾಗಿ ಗೆಲ್ಲಲೇ ಬೇಕು.
ನಡೆದಳು. ಇನ್ನೇನು ಆಚೆ ತುದಿ ತಲುಪಿದಳೇನೋ...ಉಹ್ಞೂಂ, ಅವಳಿಗೆ ಏನನ್ನಿಸಿತೋ ವಾಪಸ್ಸಾದಳು! ಯಾರನ್ನ ನಂಬಿಸಲು ಈ ಅಗ್ನಿಪರೀಕ್ಷೆ? ಯಾರಿಗೂ ಸಮರ್ಥನೆ ಕೊಡಬೇಕಿಲ್ಲ.
ಊರ ಮಂದಿಯ ಬಾಯಲ್ಲಿ ಈಗ ಆಕೆ ವಿಲನ್ನು...

Comments