ಹಾದಿ ಹಲ್ಬಾಣ

ಆ ಹಾದಿ ಹೊಂಟಿತ್ತು...
ಘಟ್ಟಗಳನ್ನು ಹತ್ತಿ,
ಏರು ಮುಗಿದೊಡೆ ಇಳಿದು
ಹಾದಿ ಹೊಂಟಿತ್ತು.
ಆ ಊರ ನೋಡಲು ತವಕ,
ಅದೆಷ್ಟು ಮನೆಗಳ ದಾಟಿತ್ತು?
ಬಂಡೆಗಳ ಬಳಿ ತಿರುವಿ,
ಬಯಲಲಿ ನೆಟ್ಟಗಾಗಿ
ಅಂತೂ ಹಾದಿ ಹೊಂಟಿತ್ತು.
ಈ ಊರ ಬಿಡುವಾಗ
ಗುಂಪಂತೆ ಇತ್ತು,
ನಡುವಲಿ ಕವಲು
ಅದೆಷ್ಟು ಹಡೆದಿತ್ತು?
ಗಿಡಮರಗಳ ಮೇಲೇರಿ
ಲತೆಗಳ ಅಡಿಮಾಡಿ
ಆ ಹಾದಿ ಹೊಂಟಿತ್ತು.
ಅನಂತ ಗುರಿ ಹಿಡಿದು
ಜಡ ಹರಿದ ದೇಹದಿ
ಅದೆಷ್ಟು ಪಾದಗಳ ಗುರುತಿತ್ತು?
ಗುಡಿ ದೇವರ ಹಿಂದಿಕ್ಕಿ
ಕಾಡುಗಳ ಒಳಹೊಕ್ಕಿ
ಹಾದಿ ಹೊಂಟಿತ್ತು.
ದಾಹವಾದೆಡೆಯೆಲ್ಲ
ನದಿ ನದಗಳ ಹಾರಿ
ಸಾಗರವ ಕಂಡೊಡನೆ
ಅದೇಕೆ ಬಳುಕಿತ್ತು?
ಹಸಿವಾಗದ ಅರಸ
ಹೊಟ್ಟೆ ತುಂಬದ ಅಸುರ
ಬಿರುದುಗಳ ಬಯಕೆಗೆ
ಹಾದಿ ಹೊಂಟಿತ್ತು.
ಸುಸ್ತಾಗದ ಪಯಣಕೆ
ಜೊತೆಗಾರನ ಬಯಸದೆ
ಆ ಹಾದಿಯ ಪಯಣ
ಎತ್ತ ಸಾಗಿತ್ತು?
ನಮ್ಮೂರ ತಲುಪಿತು,
ಅವಳೂರ ದಾಟಿತು,
ಹಾದಿ ಧೂತನ ನೆರವು
ಯಾರಿಗೋ ಬೇಕಿತ್ತು,
ಆ ಹಾದಿ ಹೊಂಟಿತ್ತು!

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ