ಸಿಕ್ಕಳಾ ಹುಡುಗಿ?

''ತಮಾ, ಎದ್ಕಳ..." ಬಾಗಿಲಿಗೆ ಕೈ ತಾಗಿದ ಸದ್ದಂತಿತ್ತು, ಅಪ್ಪ ಬಾಗಿಲು ಬಡಿದದ್ದು. ಅವನಿಗೆ ಗೊತ್ತು, ನಿದ್ರೆ ಹಾಳಾದಾಗ ನನಗೆಷ್ಟು ಕೋಪ ಬರುತ್ತದೆಂದು. ದೂರದಲೆಲ್ಲೋ ದನಿ ಕೇಳಿದಂತಾದರೂ ಪೂರ್ತಿಯಾಗಿ ಈ ಲೋಕಕ್ಕೆ ಬಂದಿರಲಿಲ್ಲ ನಾನು.
''ಬಯಲುಸೀಮಿಂದ ಹುಡ್ಗಿ ಹೊತ್ಕ ಬಂಜ್ವಡಾ ಯಾರೋವಾ, ಹುಡ್ಕಲೆ ಪೊಲೀಸ್ರು ಬಂಜ" ಅನ್ನೋ ಮಾತು ಎರಡನೇ ಬಾರಿ ಕೇಳುವುದರೊಳಗೆ ಕಾಲುಗಳು ಬಾಗಿಲತ್ತ ಒಯ್ದಿದ್ದವು, ಕೈಗಳು ಚಿಲಕ ತೆರೆದಿದ್ದವು.
ಅದೆಷ್ಟು ಬೇಗ ಬಾಗಿಲತ್ತ ಸಾಗಿದ್ದೆನೋ ಅಷ್ಟೇ ಬೇಗ ಮತ್ತೆ ಚಾದರ ಹೊದ್ದು ಮಲಗಿದ್ದೆ. "ಹೋಗ್ತಾ ಬಾಗ್ಲ್ ಎರ್ಸಿಕ್ಕೆ ಹೋಗಿ" ಅಂತೊಂಚೂರು ದೊಡ್ಡಕೇ ಕೂಗಿದ್ದೆ, ಅದೊಂಥರ ಅಲವರಿಕೆ ದನಿಯಲ್ಲಿ.
ನನ್ನ ಕೋಣೆಯೆಂದರೆ ಅದೊಂದು ಥರ ಗೋದಾಮಿದ್ದಂತೇ. ಏಣಿ, ಹಗ್ಗ, ಬುಟ್ಟಿ, ಚೂಳಿ, ಸುತ್ತಿಗೆ, ವೈರು, ಸ್ಕ್ರ್ಯೂ ಡ್ರೈವರು, ಟೆಸ್ಟರು, ಮೊಳೆ ಮುಂತಾದ ವಸ್ತುಗಳ ಜೊತೆಗೆ ಗುಪ್ಪೆ ಹೊಡೆದಿಟ್ಟ ಕವಳದ ಕೊಟ್ಟೆಯ ರಾಶಿ. ಕವಳ ಅಂದ್ರೆ ಸಾಂಪ್ರದಾಯಿಕ ಎಲೆ-ಅಡಿಕೆ-ಸುಣ್ಣಗಳ ಮಿಶ್ರಣವಲ್ಲ, ಪಕ್ಕಾ ಎರಡು ಚೀಟಿಗಳಲ್ಲಿ ಸಿಗೋ ಗುಟಖಾ ಕೊಟ್ಟೆಯೇ. ಪ್ರಾಯದ ಹವ್ಯಕ ಹುಡುಗನ ಮನೆಯಲ್ಲಿ ಮತ್ತೇನು ನಿರೀಕ್ಷೆಯಿರಬೇಕು! ಅದಿರ್ಲಿ, ಕೆಲಸ ಮುಗಿಸಿ ಮನೆಗೆ ಬರಲು ಹನ್ನೆರಡು ಗಂಟೆಯಾದರೂ, ಮಲಗೋ ರೂಢಿಯಿರೋದು ಎರಡು ಗಂಟೆಗೇ ಅಂದಾಕ್ಷಣ ಮತ್ತೇನೋ ಉನ್ನತ ದರ್ಜೆಯ ಚಟಗಳಿವೆ ಅಂತಲ್ಲ; ಮೊಬೈಲು ನಿದ್ರಿಸಬಿಡುವುದಿಲ್ಲ. ಇಷ್ಟು ಸ್ಪಷ್ಟನೆಯ ಅವಶ್ಯಕತೆಯಿತ್ತಾ ಅಂತ ಕೇಳಬಹುದು ನೀವು. ಅರೆ! ಇನ್ನೂ ಅವಿವಾಹಿತ ಮಾರಾಯ್ರೆ, ಜನ ಅಪಾರ್ಥ ಮಾಡಿಕೊಂಡರೆ ಅಪ್ಪನ ಆಸೆ ಏನಾಗಬೇಕು!
ಸರಿ, ನಿಮಗೆ ಕಥೆ ಬೇಕಲ್ಲ, ಹೇಳುತ್ತೇನೆ ಇರಿ. ಅಂಥಾ ಉಗ್ರಾಣೋಪಾದಿಯ ಕೋಣೆಯಲ್ಲಿ ಮಾರಿಗೊಂದು ಹೋಲ್ಡರನ್ನು ನೇತಾಕಿರೋದು ನಿಮಗೆ ಕಾಣಬಹುದು, ಗಮನಿಸಿದರೆ. ಹಾಗೇ ನಿಮ್ಮ ದೃಷ್ಟಿ ಸರಿಯಾಗಿದ್ದಲ್ಲಿ ಆ ಹೋಲ್ಡರುಗಳಿಗೆ ಬಲ್ಬು ಸಿಕ್ಕಿಸದಿರುವುದೂ ಕಾಣಬಹುದು. ಈ ಬೆಳಕು ಅಂದ್ರೆ ನನಗೆ ಮೊದಲಿಂದಲೂ ಅಷ್ಟಕ್ಕಷ್ಟೇ. ಅದಕ್ಕಾಗೇ ಕತ್ತಲೆಯೊಟ್ಟಿಗಿನ ಆಪ್ತತೆಯ ಬೆಳವಣಿಗೆಗೆ ಇದ್ದಷ್ಟೂ ಬಲ್ಬುಗಳನ್ನು ಮನೆ ಹಿಂದಿನ ಹೊಳೆಯಲ್ಲಿ ತೇಲಿ ಬಿಟ್ಟಿದ್ದೇನೆ ಅಷ್ಟೇ.
ಅರೆ! ಕಥೆ ಹೇಳು ಮಾರಾಯಾ, ಕಥೆ ಕೊಚ್ಚಿದ್ದು ಸಾಕು ಅಂದಿರಾ? ನಿಮಗೆ ನಾನು ಯಾರೆಂದೇ ತಿಳಿಯದಿದ್ದರೆ ಕಥೆಯನ್ನು ಅರ್ಥ ಮಾಡಿಕೊಳ್ಳಲಾರಿರೆಂದು ಇಷ್ಟು ಪೀಠಿಕೆ ಹಾಕಿದೆನಷ್ಟೇ. ನಿಮಗೂ ಬೇಸರವಾಗಿರಲಾರದು ಬಿಡಿ. ಹಿಂಗೆ ಅದೆಲ್ಲಿಂದಲೋ, ಯಾರೋ ಓಡಿಸಿಕೊಂಡು ಬಂದ ಯುವತಿಯನ್ನು ನನ್ನ ಕೋಣೆಯಲ್ಲಿ ಬಚ್ಚಿಡಲಾಗಿದೆಯೆಂದು, ನಾನು ಅಲ್ಲಿ ನಿದ್ರಿಸುತ್ತಿದ್ದೇನೆಂದು ಭಾವಿಸಿ ಹುಡುಕುತ್ತಿರುವವರ ಮೇಲೆ ಕೋಪವಿತ್ತು. ಅಲ್ಲಾ, ಪ್ರಾಯಕ್ಕೆ ಬಂದ ಯುವಕ ಹಿಂಗೆ ನಿದ್ದೆ ಮಾಡುತ್ತಿದ್ದಾನೆಂದಮೇಲೆ ಅಲ್ಲೊಂದು ಹುಡುಗಿ ಅವಿತಿರಲು ಸಾಧ್ಯವೇ? ಇವರದೆಷ್ಟು ದಡ್ಡರೋ ಎಂದು ಕಣ್ಣ ತುದಿಯಲ್ಲೇ ಅವರ ಓಡಾಟ ಗಮನಿಸುತ್ತಿದ್ದೆ.
ಹುಡುಕಾಟಕ್ಕೆ ಕೋಣೆ ಹೊಕ್ಕವರು ಮೂರು ಮಂದಿ. ಮೂವರಲ್ಲಿ ಇಬ್ಬರು ಮೂವತ್ತು ದಾಟಿದವರು, ಮತ್ತೊಬ್ಬ ಯುವಕ; ನನ್ನಷ್ಟೇ ಪ್ರಾಯದವನು. ಒಬ್ಬನ ಮೀಸೆ ಕೆಂಪೇಗೌಡ ಚಿತ್ರದ ಸುದೀಪನ ಕಾಪಿಯಾಗಿತ್ತು. ಮತ್ತಿಬ್ಬರು ಒಂದೂ ಗಾಯ ಮಾಡಿಕೊಳ್ಳದೇ ನೀಟಾಗಿ ಶೇವ್ ಮಾಡಿಕೊಂಡಿದ್ದರು. ಉದ್ದಕೆ ಕೋಣೆ ಅಲೆದು ಹೊರಟರೇ ಹೊರತು, ಮೇಲಿನ ಮೆತ್ತನ್ನಾಗಲಿ, ಮಂಚದ ಅಡಿಗಾಗಲೀ ಹುಡುಕದೇ ಹೊರಟ ಅವರ ಬುದ್ಧಿಮತ್ತೆಗೆ ನಗು ಬಂತಾದರೂ ಚಾದರಡಿಗೆ ಸುಮ್ಮನೇ ಹುದುಗಿಕೊಂಡೆ.
ಅಪ್ಪ ಬಾಗಿಲನ್ನು ಮರೆಮಾಡಿ ಹೋದ. ಮತ್ತೆ ಎಚ್ಚರವಾದದ್ದು ಹನ್ನೆರಡು ಗಂಟೆಗೆ.
ಆವತ್ತು ಅಂಥದೇನೂ ವಿಶೇಷ ಘಟಿಸಲಿಲ್ಲ. ನಮ್ಮ ಮನೆ ಮತ್ತು ಚಿಕ್ಕ್ಕಪ್ಪನ ಮನೆ ತಪಾಸಣೆ ಮಾಡಿ ಹುಡುಗಿ ಹುಡುಕಬಂದವರು ಹೋದರಂತೆ. ಅಪ್ಪ ಅಂದಂತೆ ಅವರ ಜೊತೆ ನಮಗೆ ಹಿಂದೊಮ್ಮೆ ಹುಲ್ಲು ಮಾರಿದ್ದ ಯುವಕನಿದ್ದನಂತೆ. ಅವನೇ ಅಪಹರಣಕಾರ ಎಂದು ಆತನಿಗೆ ಬಿದ್ದ ಒದೆಗಳ ಗಂಭೀರತೆ ಹಾಗೂ ಅವನ ಅಳುಮೊಗದಿಂದ ತಿಳಿಯಿತು ಎಂದು ಅಪ್ಪ ಅಂದಿದ್ದ. ``ಸರಿ ಜೊತೆಗೆ ಪೊಲೀಸರು ಬಂದಿದ್ದರೋ?" ನಾನು ದೊಡ್ಡ ಪತ್ರಕರ್ತ ಎಂಬುದನ್ನು ಅಪ್ಪನ ಮುಂದೆಯೂ ಸಾಬೀತು ಮಾಡುವಂತೆ ಕೇಳಿದ್ದೆ. ಒಬ್ಬ ಖಾಕಿ ಬಟ್ಟೆಯವ ಬಂದಿದ್ದನೆಂದೂ, ಯಾವ ಗ್ರೇಡಿನ ಮನುಷ್ಯ ಎಂಬುದು ಗೊತ್ತಿಲ್ಲವೆಂದೂ ಹೇಳಿ ಊಟ ಮುಗಿಸಿ ಎದ್ದಿದ್ದ. (ನಾವು ಊಟಕ್ಕೆ ಕುಳಿತಾಗಿನ ಮಾತುಕತೆ ಅದು ಎಂಬುದನ್ನು ನಿಮಗೆ ತಿಳಿಸಲು ಈ ವಾಕ್ಯ ಸೇರಿಸಿದೆ ಎಂದು ತಿಳಿಯಬೇಡಿ, ನಾನೂ ಮನುಷ್ಯನೇ!)
ಅದಾಗಿ ಒಂದು ವಾರವಾದರೂ ಅಪಹರಣಕ್ಕೊಳಗಾದ ಯುವತಿಯ ಬಗ್ಗೆ ಯಾವ ಮಾಹಿತಿಯೂ ಬರಲಿಲ್ಲ. ಅದಿರಲಿ, ನನಗೆ ನೆನಪೂ ಇರಲಿಲ್ಲ ಈ ಘಟನೆಯದ್ದು. ಆದರೆ, ಅದೊಂದು ರಾತ್ರಿ ಹಂಗೆಲ್ಲಾ ಆಗದಿದ್ದರೆ.
ಅಂದು ಕೆಲಸ ಮುಗಿಯಲು ಸ್ವಲ್ಪ ತಡವಾಗಿತ್ತು, ಹನ್ನೊಂದೂವರೆ ಗಂಟೆ. ಗಾಡಿಗೆ ಎಣ್ಣೆ ಹಾಕಿಸಿ, ಕವಳ ಕಟ್ಟಿಸಿಕೊಂಡು ಪೇಟೆ ಬಿಡುವ ಹೊತ್ತಿಗೆ ಹನ್ನೆರಡು. ಹಂಗೇ ಮಧ್ಯದಲ್ಲೊಂದು ಕಡೆ ಕವಳ ಖಾಲಿಯಾಗುವವರೆಗೆ ನಿಂತು  ಮೊಬೈಲು ನೋಡುವ ಚಾಳಿಯಿದೆ ನಂಗೆ. ಆವತ್ತು ನಿಂತಾಗ ಅವನೊಬ್ಬ ಬಂದಿದ್ದ. ಸ್ವಲ್ಪ ಡ್ರಾಪ್ ಬೇಕು ಅಂದವನ ಬೈಕ್ ಹತ್ತಿಸಿಕೊಂಡಿದ್ದೆ...
***
ಲೇಖನವೊಂದನ್ನು ಬರೆಯುವ ಜರೂರತ್ತಿತ್ತು. ಕುಂತೆ. ಊಹ್ಞೂಂ, ಇನ್ನೊಂದು ಸಾಲನ್ನೂ ಬರೆಯೋಕಾಗಲ್ಲ...ಪೆನ್ನನ್ನ ಮಲಗಿಸೋಕೆ ಇದೊಂದೇ ಕಾರಣವಿತ್ತು. ಶಿವಗಂಗಾ ಫಾಲ್ಸನ್ನ ಇಳಿದು ಹತ್ತಿದಷ್ಟು ಸುಸ್ತು ತಲೆಯೊಳಗಿತ್ತು.
ನಾನೇನು ಬೇಕಂತಲೇ ಅವನನ್ನ ಅರ್ಧ ದಾರಿಯಲ್ಲಿ ಇಳಿಸಿಬಂದಿರಲಿಲ್ಲ; ನಾನೂ ನನ್ನ ಗಾಡಿಯ ಜೊತೆ ಬೀಳಬಹುದಾದಷ್ಟು ಕುಡಿದಿದ್ದ ಆತ. ಆದರೆ, ಅರ್ಧ ರಾತ್ರಿಯಲ್ಲಿ ಹಾಗೆ ಖಬರೇ ಇಲ್ಲದ, ಹಣ್ಣು ಗಡ್ಡದ ಮನುಷ್ಯನನ್ನು `ಇಲ್ಲಿಂದ ನಡ್ಕೊಂಡೋಗು' ಅನ್ನುವಷ್ಟು ನಿರ್ಭಾವುಕ `ನಾಗರಿಕ' ನಾನಾದೆನೆಂಬ ಅರಿವು ಬಂದದ್ದು ಚಾದರ ನನ್ನ ಕತ್ತನ್ನು ದಾಟಿ ಮೇಲೇರಲು ಮುಷ್ಕರ ನಡೆಸಿದಾಗಲೇ.
ತಡೆಯೋಕಾಗದೇ ಎದ್ದೆ. ಮೊಬೈಲಿನ ಬ್ಯಾಟರಿ 35% ಎಂದು ಸ್ಕ್ರೀನ್ ಮೇಲೆ ಕಾಣುತ್ತಿತ್ತು. ಹಂಗೇ ಬದಿಗೆ 2.13 ಎ.ಎಮ್. ಎಂಬ ದಪ್ಪಕ್ಷರಗಳು ಎಚ್ಚರಿಸಿದ್ದವಾ? ಗೊತ್ತಿಲ್ಲ.
ಅವನನ್ನ ಹುಡುಕಿ ಹೊರಟೆ, ಅವನ ಬಿಟ್ಟ ಜಾಗಕ್ಕೆ. ಅವನ ಎಣ್ಣೆ ಧಾರಣಾ ಸಾಮಥ್ರ್ಯ ಮಿಕ್ಕಿದ್ದರಿಂದ ಅವನಲ್ಲೇ ಬಿದ್ದಿರಬಹುದೆಂಬ ನಂಬಿಕೆ ನನ್ನದು. ಹೋದಾಗ ಅಲ್ಲಿಲ್ಲ! ಸತ್ತ ಇವ ಅಂದುಕೊಂಡು ವಾಪಸ್ ಹೊರಟೆ.
ಭಯಂಕರ ಮಳೆ, ಅಮಾವಾಸ್ಯೆ ಬೇರೆ. ಕನ್ನಡಕದ ಮಂದಿಯ ಕಷ್ಟ ಈ ಮಳೆಗಾಲದಲ್ಲಿ ಅಸಹ್ಯ. ಮಳೆಗೆ ಸುಲೋಚನದೊಳಭಾಗಕ್ಕೆ ಮಂಜುಕವಿಯುತ್ತಿತ್ತು, ಆಗಾಗ ಒರೆಸಿಕೊಳ್ಳದಿದ್ದರೆ ಹಾದಿ ಮಬ್ಬಾಗುತ್ತಿತ್ತು. ಮುಕ್ಕಾಲು ಭಾಗ ಹಾದಿ ಟಾರನ್ನು ಹೊದ್ದು ಬೆಚ್ಚಗಿದ್ದರೂ ಮನೆ ಹತ್ತಿರವಾದಂತೆ ಅರಲು ಮಣ್ಣು, ಗಾಲಿ ಜಾರುತ್ತದೆಯೋ, ಗಾಡಿ ಹಾರುತ್ತಿದೆಯೋ ಒಂದಕ್ಕೂ ಸ್ಪಷ್ಟನೆ ಸಿಗದಿರುವಷ್ಟು ಬೆತ್ತಲೆ ರಸ್ತೆಯದು. ಹಗೂರ ಹೊರಟವನಿಗೆ ಓಮಿನಿಯೊಂದರ ಕಾಲುಗಳು ಅರಲಲ್ಲಿ ಹುಗಿದದ್ದೂ; ಗಾಡಿಯೊಳಗಿರಬೇಕಿದ್ದ ಮಂದಿ ಓಮಿನಿಯನ್ನು ಅಂಗಾತ ಎತ್ತುವ ಪ್ರಯಾಸದಲ್ಲಿ ನಿರತರಾಗಿದ್ದರು. ನಾನೂ ಬಹಳ ಜನಾನುರಾಗಿ, ಕುಡುಕನಿಗೇ ಸಹಾಯ ಮಾಡಲು ನಡು ರಾತ್ರಿ ಎದ್ದು ಬಂದವ ನಾನು, ಸುಮ್ಮನಿರಲಾದೀತೇ! ರಸ್ತೆ ಬದಿಯಿದ್ದ ಚಿಕ್ಕ ಕಲ್ಲುಗಳನ್ನೆಲ್ಲಾ ಆಯ್ದು ಕಾರಿನ ಟಯರುಗಳಡಿ ಸಿಕ್ಕಿಸಿದೆ. ಶ್ರಮದಾನದ ಅಂತಿಮ ಘಟ್ಟದಲ್ಲಿ ಅಂತೂ ಕಾರು ಗಟ್ಟಿ ನೆಲದ ಮೇಲೆ ನಿಂತಿತ್ತು.
ಆಗಲೇ ಅವರ ಮುಖ ನೋಡಿದ್ದು ನೋಡಿ. ``ಅರೆ, ಇನ್ನೂ ಹುಡುಗಿ ಸಿಕ್ಕಿಲ್ಲವಾ?" ಅಚಾನಕ್ಕಾಗಿ ಪ್ರಶ್ನೆಯೊಂದನ್ನು ನನ್ನ ಅಪ್ಪಣೆಯಿರದೇ ಬಾಯಿ ಉದ್ಗರಿಸಿತ್ತು. ಅವರ ಗುಟ್ಟು ಅದೇನಿತ್ತೋ, ಯಾವ ಪಾಪ ಕರ್ಮಗಳಲ್ಲೂ ಭಾಗಿಯಾಗದೇ ಕಾಲು ಶತಮಾನ ಕಳೆದಿದ್ದ ನನ್ನ ತಲೆಯ ಮೇಲೆ ದೊಡ್ಡ ಸದ್ದಿನೊಂದಿಗೆ ದೊಣ್ಣೆಯೊಂದು ಗುದ್ದಾಡಿತ್ತು. ಕನ್ನಡಕ ಫುಲ್ ಕೆಂಪು! ಕಾರು ಅರ್ಜೆಂಟಲ್ಲಿ ಚಾಲೂ ಆದದ್ದು, ಹೆಡ್ ಲೈಟ್ ಬೆಳಕು ನನ್ನ ಕನ್ನಡಕಕ್ಕೆ ಗುದ್ದಿದ್ದು ನನ್ನ ಅರಿವಿಗೆ ಬಂದಿತ್ತು. ಮತ್ತೊಂದು ದೊಡ್ಡ ಸದ್ದು ಅದ್ಯಾಕೆ ಬಂತೋ ಗೊತ್ತಿಲ್ಲ, ಹಿಂದೆಯೇ ಒಂದಿಷ್ಟು ಜನರ ಕೂಗು ಕೇಳಿತ್ತು.
ನಾನು ಎದ್ದಿದ್ದು ಮಾರನೇ ದಿನ ಬೆಳಿಗ್ಗೆಯೇ ಇರಬೇಕು. ಅದು ಮಾರನೇ ದಿನ ಎಂಬುದರ ಬಗ್ಗೆ ಖಚಿತ ಮಾಹಿತಿ ನನಗಿಲ್ಲ, ವಾರಗಟ್ಟಲೇ ನಿದ್ರಿಸಿದ ಅನುಭವವಿತ್ತು. ಹುಡುಗಿ ಸಿಕ್ಕಿದಳಂತಾ? ಎಂದು ಅಪ್ಪನಿಗೆ ಕೇಳಿದ ನಾನು ಅದೆಷ್ಟು ಮುಗ್ಧ ಎಂದು ನೀವೇ ಲೆಕ್ಕ ಹಾಕಿ! ಅಪ್ಪ ಏನೋ ಹೇಳುವುದರಲ್ಲಿದ್ದ, ಅಷ್ಟರಲ್ಲಿ ನನ್ನ ಪರಿಚಿತ ಪಿಎಸ್‍ಐ ಬಂದು ಕಳ್ಳರನ್ನು ಹಿಡಿಯಲು ಸಹಕರಿಸಿದ್ದಕ್ಕೆ ಧನ್ಯವಾದ ಅಂದಾಗ ಪೆದ್ದ ನಗು ನಕ್ಕಿದ್ದೆ ನಾನು. ಖಾಲಿ ಪುಕ್ಕಟೆ ಸಹಾಯ ಮಾಡಲು ಹೋಗಿ ಏಟೂ ತಿಂದು ಹೀರೋ ಆದ ಫೀಲಿಂಗು ನಿಮಗ್ಯಾವತ್ತಾದರೂ ಆಗಿದ್ದಿದೆಯಾ? ನನಗಾದದ್ದು ಆವತ್ತೇ ನೋಡಿ.
ಅಷ್ಟಕ್ಕೂ ಆ ಓಮಿನಿಯ ಮನುಷ್ಯರು ಹುಡುಗಿ ಹುಡುಕಬಂದವರ ಸೋಗಿನಲ್ಲಿ ಊರ ಎಲ್ಲ ಮನೆಯನ್ನೂ ನೋಡಿಕೊಂಡು ಬಂದಿದ್ದರಂತೆ. ಮಳೆಗಾಲದಲ್ಲಿ ಬೆಚ್ಚಗೆ ಹೊದ್ದು ಮಲಗುವ ಊರ ಮಂದಿಗೆ ಕಳ್ಳರು ಮನೆ ಹೊಕ್ಕಿದ ಪರಿಜ್ಞಾನವಾದರೂ ಹೇಗೆ ಬರಬೇಕು? ಒಂದೊಳ್ಳೇ ಅಮಾವಾಸ್ಯೆಯಂದು ನಾಗಪತಿ ಹೆಗಡೆಯವರ ಮನೆಗೆ ಕನ್ನ ಹಾಕಿದ್ದಾಯ್ತು. ಅಡ್ಡಿಯಾದದ್ದು ಹಾಳು ರಸ್ತೆ. ನನ್ನ ಸಹಾಯದಿಂದ ಕಾರನ್ನು ಎತ್ತಿದ್ದರಾದರೂ, ಸಹಾಯ ಮಾಡಿದ ದೇವರಂಥಾ ಮನುಷ್ಯನ ಮೇಲೆ ಹಲ್ಲೆ ಮಾಡಿದರೆ ಮೇಲಿರುವವ ಸುಮ್ಮನಿರುತ್ತಾನೆಯೇ!? ಅದ್ಯಾರೋ ಬೇಟೆಗೆ ಬಂದ ಮುಠ್ಠಾಳರ್ಯಾರೋ ಹಂದಿಗೆ ಗುರಿ ಇಡದೇ ಕಾರಿನ ಗಾಜಿಗೆ ಗುಂಡು ಹೊಡೆದಿದ್ದ. ಅದ್ಯಾವ ಪ್ರಾಣಿ ಕಣ್ಣು ಕೊಟ್ಟಂತಾಯ್ತೋ. ಪಾಪ ಕಳ್ಳರು.
ಆದ್ರೆ, ಓಡಬಹುದಾಗಿದ್ದ ಅವರನ್ನು ತಡೆದಿದ್ಯಾರು? ನನ್ನ ಮನೆಗೆ ತಲುಪಿಸಿದವರ್ಯಾರು? ಅದೇ ಆ ಕುಡುಕ...ನಮ್ಮ ಸಹಾಯವೇ ಸಮಯಕ್ಕಾಗುವುದು. ಅಲ್ಲವೇ?

Comments

Unknown said…
ಚಲೊ ಅದೆ..
Unknown said…
ಚಲೊ ಅದೆ..
Anaamadheya said…
Ninna lekhana oduke eno ontara khushi

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ