ಗತಿ

ಬೆಳಕಿನ ಗತಿಯಲ್ಲಿ ಕಾಲ ಚಲಿಸೋವಾಗ ಕಿಟಕಿಯಿಂದ ತಲೆ ಹೊರ ಹಾಕಿ ನೋಡಿದೆ. ಹೊರಗೆ ನನ್ನದೇ ರೂಪಿನ ವ್ಯಕ್ತಿಗಳು ನಿಂತಿದ್ದರು. ಶೈಶವ್ಯದ ನಾನುಗಳೂ, ಬಾಲ್ಯ, ಯೌವನದ ನಾನುಗಳೂ ನನ್ನ ಗುರುತೇ ಇರದಂತೆ ನನ್ನನ್ನೇ ದಿಟ್ಟಿಸುತ್ತಿದ್ದರು!
ನೆನಪಿಲ್ಲ, ಆ ನಾನುಗಳ ಕಣ್ಣಲ್ಲಿದ್ದ ಖುಷಿ ಈಗಿನ ನನ್ನಲ್ಲಿ ಮೊದಲೆಂದೂ ಇದ್ದ ನೆನಪಿಲ್ಲ. ನನಗೇನೂ ಆ ಖುಷಿಯ ಆಸೆಯಿಲ್ಲವೆಂದಲ್ಲ, ಆ ನಾನುಗಳ ಖುಷಿ ನನ್ನ ಹೊಟ್ಟೆ ಉರಿಸುತ್ತಿಲ್ಲವೆಂದೂ ಅಲ್ಲ. ಈ ನಾನೆಂಬ ಪ್ರಬುದ್ದನಿಗೆ ಕಾಲದ ಲೆಕ್ಕಾಚಾರದಲ್ಲಿ ಕೂಡಿಸುವುದಿದೆ ಹೊರತು ಕಳೆಯುವುದಿಲ್ಲ ಎಂಬ ಜ್ಞಾನವಿದೆ.
ಈಗಿನ ನನಗೆ ಆಮಿಷಗಳಿವೆ, ಜವಾಬ್ದಾರಿಗಳೆಂಬ ನೆಪಗಳಿವೆ.
ಹೊರಗಿಂದ ನನ್ನವೇ ನಾನುಗಳು ಕೈಬೀಸಿ ಟಾಟಾ ಮಾಡ್ತಿದ್ರೆ ಕಾಲನ ಬಸ್ಸು ವೇಗವಾಗಿ ಚಲಿಸುತ್ತಿತ್ತು...
ಹೊಟ್ಟೆಯುರಿ ಹೆಚ್ಚಾಗಿ ಕಿಟಕಿಗಳನ್ನು ಮುಚ್ಚಿದೆ. ಕಾಲ ನಿಂತಂತಾಯ್ತು...

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ