ಹಲ್ಬಾಣ ೨೬

ಆಕೆ ನಗುವುದಿಲ್ಲ.
ಆಕೆಯದು ಸುಂದರ
ದಂತಪಂಕ್ತಿಗಳೇ,
ಒಂಚೂರೂ ಮುಂದೆ ಬಂದಿಲ್ಲ,
ಆದರಾಕೆ ನಗುವುದಿಲ್ಲ!
ಪೋಲಿ ಜೋಕುಗಳಿಗಾಕೆ
ಉರಿಯುವುದಿಲ್ಲ,
ಸಭ್ಯ ಕಾಮಿಡಿ ಆಕೆಯನು
ನಗಿಸುವುದಿಲ್ಲ!
ಆಕೆಯದು ಸದಾ ಗಾಂಭೀರ್ಯ,
ಆಕೆ ನಗುವುದಿಲ್ಲ.
ಇನಿಯನ ಓಲೈಕೆಗೆ
ಮುಗುಳ್ನಗೆಯಿಲ್ಲ,
ಗೆಳತಿಯ ಚೇಷ್ಟೆಗೂ
ಪ್ರತಿ ನಗುವಿಲ್ಲ!
ಹಾಸವದು ಅಪಥ್ಯ,
ಹಾಸ್ಯಕಾಕೆ ನೇಪಥ್ಯ
ಆಕೆ ನಗುವುದಿಲ್ಲ.
ಭಾರ ಹೃದಯದಿ ಕೂತು
ಕಂಬನಿಯಿತ್ತಿದ್ದಾಳೆ,
ದುಃಖಗಳ ಖಾತೆಗೆ
ನಗುವ ಜಮೆಯಿಲ್ಲ,
ಅಶ್ರುಗಳ ತೂಕಕ್ಕೆ
ತುಟಿಗಳು ಜೋತು ಬಿದ್ದಿಲ್ಲ.
ಆಕೆ ನಗುವುದಿಲ್ಲ.
ಆಕೆಯದು ಭಾವನೆಗೆ
ಬೇಲಿ ಕಟ್ಟಿದ ಬದುಕಲ್ಲ,
ಕಷ್ಟಗಳು ಆಕೆಯ
ನಗುವ ತಿಂದಿವೆಯಷ್ಟೇ.
ಯಾರದೋ ಮಾತಿಗೆ
ಅವಳೇಕೆ ನಗಬೇಕು?
ಅವಳ ಜೊತೆಗೂಡಿ
ಅತ್ತವರು ಯಾರು?
ಬಿದ್ದರೂ ನಗುವ
ಜನರಿರುವ ಜಗದಲ್ಲಿ
ಆಕೆಯೇ ನನಗಿಷ್ಟ,
ಆಕೆ ನಗುವುದಿಲ್ಲ...

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ