Posts

Showing posts from February, 2016

ಹಂಡ್ಗೆಡುಕ

            ಮಕ್ಕಳಿಗೆಲ್ಲಾ ಕೈತುಂಬ ಕೆಲಸ. ಅದ್ಯಾಕೋ ಊರ ಕಡೆಯ ಸೆಳೆತ ಜಾಸ್ತಿಯಾಗಿತ್ತು,ಇತ್ತೀಚೆಗೆ. ಇತ್ತೀಚೆಗೆ ಅಂದ್ರೆ ಮೊನ್ನೆಯಿಂದ, ಹೊತ್ತು ಖಾಲೀ ಮಲಗಿದ್ದಾಗ ಎಚ್ಚರಿಸಿ ಕಂಡ ಆ ಚಿತ್ರದಿಂದ.      ಜಾಸ್ತಿ ದಿನ ತಡೆದುಕೊಳ್ಳೋಕೆ ಆಗಲಿಲ್ಲ. ಬಿಟ್ಟು ಬಂದಿದ್ದ ಅದೇ ಹಳೆ ಊರಿಗೆ, ರಂಗನಾಥ ಎ.ಎಸ್. ಎಂಬ ಹೆಸರಿನ ಎಸ್ ಅಕ್ಷರದ ಹುಟ್ಟಿಗೆ ಕಾರಣವಾದ ಊರಿಗೆ, ಸಣ್ಣಳ್ಳಿಗೆ ಬಂದೇಬಿಟ್ಟಿದ್ದ. ಹಳೇಮನೆ, ತೋಟ ನೋಡಿಕೊಳ್ಳುತ್ತಿದ್ದ ಅಣ್ಣನ ಮಗ ರಾಮು ಇವನು ಬಂದ ದಿನವೇ ಮನೆ ಖಾಲಿ ಮಾಡಿಕೊಡುತ್ತಿದ್ದನೇನೋ, ಒಬ್ಬಂಟಿ ಇವನಿಗಾದರೂ ಹೊತ್ತು ಕಳೆಯಬೇಕಲ್ಲ! ಬೇಡ ಅಂದಿದ್ದ. ಇಲ್ಲ, ಇಲ್ಲೇ ಇರು ಅಂದಿದ್ದ.          ರಾಮನಿಗೆ ಒಬ್ಬಳು ಹೆಂಡತಿ, ಸುಗುಣೆ,ಸುಶೀಲೆ, ಸಾಧ್ವಿ ಅಂತೆಲ್ಲ ಕರೆಯಲಾಗದಿದ್ದರೂ ಗಂಡನ ಚಿಕ್ಕಪ್ಪ ಮರಳಿ ಬಂದನೆಂದು ಗಂಡನ ಬಳಿ ' ಜಮೀನನ್ನು ಇಷ್ಟು ವರ್ಷ ನೋಡಿಕೊಂಡಿರಿ, ಈಗ ಬಿಟ್ಟುಬಿಡುವಿರಾ' ಎಂದೆಲ್ಲಾ ಕೂಗಾಡಿ ತಲೆಕೆಡಿಸುವಷ್ಟು ನಾಗರಿಕ ಹೆಣ್ಣಲ್ಲ. ಹೆಸರು ನನಗೆ ನೆನಪಿಲ್ಲ, ರಂಗನಾಥ ಅದೇನೋ ಹೆಸರು ಅಂದಿದ್ದ ಅಂತಷ್ಟೇ ಗೊತ್ತು. ಈ ಶ್ರೀ ಮತ್ತು ಶ್ರೀಮತಿ ರಾಮರಿಗೆ ಒಬ್ಬ ಮಗ, ಶರತನೋ ಭರತನೋ ಯಾರೋ ಒಬ್ಬ. ತಾಲೂಕು ಕೇಂದ್ರದ ಯಾವುದೋ ಕಾಲೇಜಿನಲ್ಲಿ ಮಾಸ್ತರನಂತೆ, ಊರು ದೂರವಾದ್ದರಿಂದ ಅಲ್ಲೇ ಬಾಡಿಗೆ ರೂಮಿನಲ್ಲಿ ಉಳಿಯುತ್ತಾನಂತೆ.           ಒಂದೆರಡು ದಿನ ತೋಟವನ್ನೆಲ್ಲಾ ತಿರುಗಿ ಪರಿಚಯಿಸಿಕೊಂಡದ್ದಾಯ್ತು.