Posts

Showing posts from August, 2017

ವೇದಕ್ಕಳ ಶವಯಾತ್ರೆ

ಗನಾಕೆ ಮಳೆ ಹೊಯ್ಯುತ್ತಿದ್ದ ಒಂದು ಬೆಳಿಗ್ಗೆ ವೇದಕ್ಕ ಸತ್ತು ಹೋದಳು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ತಾಸು ಘಳಿಗೆಯಲ್ಲಿ ಮೊದಲ ಸಲ ಅತ್ತಿದ್ದ ವೇದಕ್ಕ, ಎಪ್ಪತ್ತೊಂದನೇ ಸ್ವಾತಂತ್ರ್ಯೋತ್ಸವಕ್ಕೆ ಸ್ವತಂತ್ರಳಾದಳು. ಅಲ್ಲಿಗೆ ನಮ್ಮೂರ ಎರಡು ತಲೆಮಾರುಗಳ ಕೊಂಡಿಯೊಂದು ಕಳಚಿಬಿತ್ತು.     ವೇದಕ್ಕ ಸ್ವರ್ಗಸ್ಥಳಾಗಿದ್ದನ್ನು ಈ ರೀತಿ ಹೇಳಬೇಕೇ? ಹೀಗೊಂದು ಪ್ರಶ್ನೆಯನ್ನು ನೀವು ಕೇಳಬಹುದು, ಅದಕ್ಕೆ ನೀವೂ ಸ್ವತಂತ್ರರು ಕೂಡ. ವೇದಕ್ಕ ಅನ್ನೋ ವ್ಯಕ್ತಿತ್ವ ಭಾರತದಷ್ಟೇ ವಿಶಾಲವಾದದ್ದು, ಅಷ್ಟೇ ವೈವಿಧ್ಯಮಯವೂ ಹೌದು. ಸ್ವತಂತ್ರ ಭಾರತದ ಆಗುಹೋಗುಗಳ ಜೀವಂತ ಚಿತ್ರಣವಾದವಳು ಈಗಿಲ್ಲ.     ವೇದಕ್ಕ ಹುಟ್ಟಿದಾಗ ಆಕೆಯೂ ಎಲ್ಲರಂತೇ ಇದ್ದಳು. ಅಂದರೆ ಗೂನು ಬೆನ್ನಿರದ, ಎರಡು ಬೇರೆ ಬೇರೆ ದಿಕ್ಕನ್ನು ತೋರಿಸುವ ಕಂಗಳಿರದ, ಸಪೂರ ದೇಹ ಹೊಂದಿರದ ನಾರ್ಮಲ್ ಮಗುವಿಗೆ ವೇದಾ ಎಂಬ ಚೆಂದನೆಯ ಹೆಸರಿಟ್ಟರು. ಆದರೆ ಹೆಸರಿನಷ್ಟೇ ಚೆನ್ನಾಗಿ ಬೆಳೆಯಬೇಕಿದ್ದ ಮಗುವಿಗೆ ವರ್ಷ ತುಂಬುವುದರೊಳಗೆ ಪೋಲಿಯೋ ಹತ್ತಿಕೊಂಡಿತು. ಆ ಭಾರಕ್ಕೆ ಡೊಂಕ ಕಾಲು, ಗೂನು ಬೆನ್ನುಳ್ಳ ವಿಕಾರ ವೇದಕ್ಕನನ್ನು ರೂಪಿಸಿದ್ದು ಹೌದು. ಹತ್ತನ್ನೆರಡು ಮಕ್ಕಳನ್ನು ಸಾಕಬೇಕಿದ್ದ ವೇದಕ್ಕನ ಅಮ್ಮ, ‘ಸುಬ್ಬಜ್ಜಿ’ ಎಷ್ಟು ಆರೈಕೆ ಮಾಡಿಯಾಳು? ವೇದಕ್ಕನ ನಂತರ ಮತ್ತೂ ಹುಟ್ಟುತ್ತಲೇ ಉಳಿದ ಮಕ್ಕಳನ್ನು ಚೆನ್ನಾಗಿ ಸಾಕುವಲ್ಲಿ ಸುಬ್ಬಜ್ಜಿ ವ್ಯಸ್ತಳಾದಳು.     ಬಿಪಿಎಲ್ ಕಾರ್ಡನ್ನು ಯಾವುದೇ ಒತ್ತಡ, ಲ