ಆಕೆ

ನೆರೆಮನೆಯಲ್ಲೂ
ಹುಡುಗಿಯಿಹಳು,
ಆದರಾಕೆ ಪದ್ಯವಾಗುವುದಿಲ್ಲ,
ಆಕೆ ಸುಂದರಿಯಲ್ಲ.
ಸಂಪಿಗೆಯ ನಾಸಿಕವಿಲ್ಲ,
ತೊಂಡೆ ತುಟಿಗಳಿಲ್ಲ.
ಮುಂಗುರುಳು ತಿರುವಿಲ್ಲ,
ಹುಬ್ಬಿನಲಿ ಬಿಲ್ಲಿಲ್ಲ
ಆಕೆ ಪದ್ಯವಾಗುವುದಿಲ್ಲ.
ನಗುವಿನಲಿ ನೀರ
ಸಪ್ಪಳವಿರದಾಕೆ
ನೀಳಕೇಶಕೆ
ಮೊಲ್ಲೆ ಮುಡಿದಿಲ್ಲ,
ಅತ್ತರಿನ ಘಮ ಕಂಡಿಲ್ಲ
ಆಕೆಯದು ದಂತವರ್ಣವಲ್ಲ,
ಆಕೆ ಪದ್ಯವಾಗುವುದಿಲ್ಲ.
ಯಾರದೋ ಸ್ವಪ್ನಕೆ
ಆಕೆ ರಾಣಿಯಾಗಿಲ್ಲ,
ಕನವರಿಕೆಗಳಿಗೆ
ಪ್ರೇಮಿಯಾಗಿಲ್ಲ.
ದುಂಬಿಗಳಿಗಾಕೆ ಪುಷ್ಪವಾಗಿಲ್ಲ,
ರಂಗು ಮಾತುಗಳ
ರಂಗೋಲಿಯಾಗಿಲ್ಲ
ಆಕೆ ಪದ್ಯವಾಗಿಲ್ಲ.
ಹತ್ತು ಹುಡುಗಿಯರಲಿ
ಎದ್ದು ಕಾಣದವಳು,
ನೆರಮನೆಯ ಅಂಗಳದಿ
ಹೂವ ಕೀಳದವಳು,
ಜಾತ್ರೆಪೇಟೆಯಲಾಕೆ
ಗೊಂಬೆಯಲ್ಲ.
ಹೆಣ್ಣಾಕೆ ಎಲ್ಲರಂತೇ,
ಆಸೆಗಳಿರಬಹುದು
ಸಾವಿರ ಕನಸುಗಳೂ ಇರಬಹುದು,
ರಸಿಕ ಕವಿಗೆ ಕಾಣದವಳು
ಅದಕೇ,
ಆಕೆ ಪದ್ಯವಾಗಿಲ್ಲ.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ