ಹಲ್ಬಾಣ ೨೭

ಒಂದೇ ಮಳೆಗೆ ಅದು
ಮಳೆಗಾಲವಾಗುವುದಿಲ್ಲ,
ನಾ ಬರೆವುದು
ಕವನವಾಗುವುದಿಲ್ಲ,
ಅದು ಹಲ್ಬಾಣವಷ್ಟೇ.
ಪ್ರಾಸವಿಲ್ಲ, ತ್ರಾಸವಿಲ್ಲ
ಅರ್ಥವಿಲ್ಲ ಹಲುಬುವಿಕೆಗೆ,
ಎಲ್ಲಿಂದಲೋ ಆಕೆ
ಬರುವಳು,
ನಗುವಳು,
ಅಳುವಳು.
ಸಾಲುಗಳ ಮಧ್ಯೆ ಸೇರಿ
ಪ್ರೀತಿಯಾಗುವಳು,
ಆದರೆ ನಾ ಬರೆಯುವುದು
ಕವನವಾಗುವುದಿಲ್ಲ
ಅದು ಬರಿಯ ಹಲ್ಬಾಣವಷ್ಟೇ.
ಯಾವುದೋ ಬೀದಿ
ತುದಿಯಲಿ,
ನಾಲ್ಕು ಮೂಲೆಯ
ಸಂಧಿಯಲಿ ಕುಳಿತು
ಬೀಡಿ ಹೊಗೆಯಲಿ
ಬೆರೆತು, ಬೆವೆತು
ಗೀಚಿಬಿಡಬಹುದು,
ಕೂಗಬಹುದು, ಕಿರುಚಬಹುದು
ಚಿರವಿರಹಿಯ ಹಲ್ಬಾಣಕೆ
ಅರ್ಥವಿಲ್ಲ,
ಅಲ್ಲೆಲ್ಲೋ ರೋಧನೆಯ
ನೆರಳಿದೆ, ಅದು ನರಳಿದೆ
ಸಾಲಿನಲಿ ಸೇರಿ
ಉದ್ದವಾಗುವುದು.
ಆದರೆ, ನಾ ಬರೆವುದು
ಕವನವಾಗುವುದಿಲ್ಲ
ಅದು ಬರಿಯ ಹಲ್ಬಾಣವಷ್ಟೇ.
ಅವಳೆಂಬ ಆಕೆ
ಬೆನ್ನ ತೋರಿಸಬಹುದು,
ನೆರಿಗೆಯ ಗರಿಯಲ್ಲಿ
ಸಿಲುಕಿರಬಹುದು ಕನಸು.
ಉಸಿರು ಬರಬಹುದು
ಸತ್ತ ನೆನಪಿಗೂ,
ವಿರಹದ ಅಮಲಲೂ
ಇಳಿಯಬಹುದು
ಆಕೆ ಹಲ್ಬಾಣವಾದಾಗ
ಅಲ್ಲೇ ಏರಬಹುದು ಗಗನವ.
ಆದರೆ, ನಾ ಬರೆವುದು
ಕವನವಾಗುವುದಿಲ್ಲ,
ಅದು ಬರೀ ಹಲ್ಬಾಣವಷ್ಟೇ.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ