ಅಸಂಭಾವನೆ

      “ಶಿರ್ಸಿ ಪ್ಯಾಟೆ ಊದ್ದಕೆ ಬೆಳೆದ ಕಾಲವದು. ಅತ್ತ ಇಸಳೂರನ್ನು ದಾಟಿ, ಇತ್ತ ಅಮ್ಮೀನಳ್ಳಿ ದಾಟಿ, ಆಕಡೆ ಬನವಾಸಿಯನ್ನೂ ತನ್ನೊಳಗೆ ಸೇರಿಸಿಕೊಂಡು ಬ್ರಹನ್ನಗರಿಯಾಗುವತ್ತ ತಯಾರಾಗಿತ್ತು." ಹಿಂಗೆ ಹೇಳುತ್ತಿದ್ದಂತೇ, ನಾನು ನೋಡಿದ್ದೇನೆ ಶಿರಸೀನ, ಅಷ್ಟೆಲ್ಲಾ ದೊಡ್ಡ ಇಲ್ಲ ಸುಳ್ ಹೇಳ್ಬೇಡ. ಇದೊಂದು ಸ್ವಪ್ನವೋ, ಕಲ್ಪನೆಯೋ ಎಂಥದೋ ಒಂದೆಂದು ಹೇಳಿದಳು ಸಾನ್ವಿ.
        ಸಾನ್ವಿ, ಹುಟ್ಟಿದ್ದು ಬೆಂಗಳೂರಿನಲ್ಲಿದ್ದ ಅಜ್ಜಿ ಮನೆಯಲ್ಲಿ. ಬೆಳೆದಿದ್ದು ಲಂಡನ್ನಿನ ‘ಸಿಟಿ ಆಫ್ ಲಂಡನ್ ಸ್ಕೂಲ್ ಫಾರ್ ಗರ್ಲ್ಸ್’ ಅನ್ನೋ ಈಷ್ಟುದ್ದದ ಹೆಸರುಳ್ಳ ಶಾಲೆಯಲ್ಲಿ.  ಭಾರತೀಯ ಸಂಸ್ಕಾರಗಳನ್ನು ಮೆಮೊರಿ ಕಾರ್ಡಿನಲ್ಲಿ ಫೀಡ್ ಮಾಡಿದರೆ ಹೆಂಗಿರಬಹುದು? ಸಾನ್ವಿ ಹಂಗೇ ಇದ್ದಳು. ಕನ್ನಡ ಗೊತ್ತು, ಇಂಗ್ಲೀಷಿನಂತೇ!
ಹನ್ನೆರಡನೇ ಇಯತ್ತೆ ಮುಗಿಸಿ ಬಂದವಳಿಗೆ ಅದ್ಯಾಕೆ ‘ಇಂಡಿಯನ್ ಇಕಾನಮಿ’ ಬಗ್ಗೆ ಅಧ್ಯಯನ ಮಾಡಬೇಕೆಂದು ಅನಿಸಿತ್ತೋ, ಗೊತ್ತಿಲ್ಲ.
       “ಅಜ್ಜೀ, ಕಥೆ ಹೇಳೆ" ಇಷ್ಟು ದೊಡ್ಡವಳಾದರೂ ಅಜ್ಜಿಯ ಬಾಯಲ್ಲಿ ಕತೆ ಕೇಳುವ ಹುಚ್ಚು. ಕಾಗಕ್ಕ ಗುಬ್ಬಕ್ಕನ ಕತೆ ಹೇಳಿದರೆ ಅಜ್ಜಿಗೆ ಲಂಡನ್ನಿಂದ ತಂದ ಚಾಕ್ಲೇಟಿಲ್ಲ. ಮತ್ತೆಂತ ಕತೆ ಬೇಕು? ಹ್ಞೂಂ, ಸಿಂಡ್ರೆಲ್ಲಾಳ ಕನ್ನಡ ವರ್ಷನ್ನಾದರೆ ಪರವಾಗಿಲ್ಲ ಅಂತ ಪರೋಕ್ಷ ನಿಬಂಧನೆಯೂ ಇತ್ತು.
“ಈಗ ಒಪ್ಕೋ, ಶಿರಸಿ ಬೆಂಗ್ಳೂರಿಗಿಂತಾ ದೊಡ್ ಸಿಟಿ, ಆಯ್ತಾ?" ಅಜ್ಜಿಯ ಷರತ್ತು.
“ಹ್ಞೂಂ, ವಾಟೆವರ್" ಬಾಯಿ ಓರೆ ಮಾಡಿ ಸಮ್ಮತಿಸಿದಳು ಸಾನ್ವಿ.
“ಶಿರ್ಸಿ ಪೇಟೆಯ ಅದ್ಯಾವ್ದೋ ಮೂಲೆಯಲ್ಲಿ ಆ ಮನೆ..." ಅಜ್ಜಿಯ ಕತೆ ಶುರುವಾಯ್ತು.
***
       ಸನ್ ೨೦೧೩, ಘಟ್ಟದ ಕೆಳಗಿನಿಂದ ಸಂಭಾವನೆ ಭಟ್ಟರು ಬರೋದಾಗಿ ವಾಟ್ಸಪ್ಪಲ್ಲಿ ಮೆಸೇಜು ಬಂದಿತ್ತು. ಈಗೆಲ್ಲಾ ಹಂಗೇ, ಬರೋದಕ್ಕಿಂತ ಮುಂಚೆ ಹೇಳಿದರೆ ಮಾತ್ರ ಮಧ್ಯಾಹ್ನದ ಊಟ. ಇಲ್ಲವಾದಲ್ಲಿ ಅದ್ಯಾವತ್ತೋ ತಂದಿಟ್ಟ ಗುಂಡಗಿನ ಶರೀರದ ಬಿಸ್ಕತ್ತಿನ ನಾಲ್ಕೈದು ಶವಗಳು ಬಟ್ಟಲಲ್ಲಿ ವಿರಮಿಸುತ್ತಿದ್ದವು. ಬಂದ ಅತಿಥಿಯೋ ಆ ಹೆಣಗಳ ಜೊತೆ ಬೆರಳಲ್ಲಿ ಆಟವಾಡಿ, ಜೊತೆಯಲ್ಲಿಟ್ಟ ಚಾ ಎಂಬ ದ್ರವವನ್ನು ಸೊರ್ರನೆ ಹೀರಿ ಟಣಕ್ಕನೆ ಟೇಬಲ್ಲಿನ ಮೇಲಿಟ್ಟರೆ ಹೊರಡಲಿಕ್ಕಾಯಿತು.
ಇದೆಲ್ಲಾ ಕಾಲನ ಆಟವೆಂದೂ, ಬಂದ ಮೇಲೆ ಊಟ ಮಾಡಿಕೊಂಡು ಹೋಗದಿದ್ದರೆ ಬಿಡಿಯವೆಂದೂ ಇತ್ತೀಚೆಗೆ ತಮ್ಮ ಆಗಮನದ ಕುರಿತು ಮುಂಚೆಯೇ ತಿಳಿಸುವ ಪದ್ಧತಿ ರೂಢಿಗೆ ಬಂದಿತ್ತು. ಸಂಭಾವನೆ ಭಟ್ಟರಿಗೂ, ಗಂಗಮ್ಮಳಿಗೂ ಅಂಥದೇನೂ ಔಪಚಾರಿಕತೆ ಇಲ್ಲವಾಗಿತ್ತಾದರೂ, ಅಭ್ಯಾಸಬಲವೆಂಬಂತೆ ಈ ಮೆಸೇಜೂ ಬಂದಿತ್ತು.
         ಅಜಮಾಸು ಹನ್ನೆರಡು ಗಂಟೆಗೆಲ್ಲಾ ಶಿರಸಿ ಪೇಟೆಯ ಹೃದಯಭಾಗವಾದ ಗಡಿಹಳ್ಳಿಯ ಮನೆಯ ಬಾಗಿಲ ಗಂಟೆ ಕೂಗಿಕೊಂಡಿತ್ತು. ಬಾಗಿಲು ತೆರೆದರೆ ಸತ್ನಾಣ ಭಟ್ಟರ ಮುಖ, ಗಂಗಮ್ಮಳ ಮುಖ ಎದುರುಬದುರಾಗಿದ್ದವು. ಸುಕ್ಕು ಬಿದ್ದ ಮಧ್ಯವಯಸ್ಕ ಮುಖಗಳ ನೆರಿಗಗಳಡಿ ಹುದುಗಿದ್ದ ನೆನಪುಗಳು ಹೊರಬಿದ್ದವು...
***
       ಕಾಲಿಗೆ ಚಪ್ಪಲಿಯನ್ನೂ ತೊಡದೇ ಘಟ್ಟ ಹತ್ತುವುದು ಬಡತನದ ಪ್ರತಿಮೆಯಾ ಅಥವಾ ಸಾಧುತನದ ಉಪಮೆಯಾ? ಹಿಂಗಿದ್ದೊಂದು ಪ್ರಶ್ನೆ ಆ ಅನಾಮಿಕ ಸಂಭಾವನೆ ಭಟ್ಟರನ್ನು ನೋಡಿ ಹುಟ್ಟಿದ್ದು. ಅಮ್ಮ ರಜೆಯಾಗಿರದಿದ್ದರೆ ಬಾವಿಗೆ ಹಗ್ಗ ಬಿಟ್ಟು, ಮಡಿ ನೀರು ಸೇದಿ, ಅದರಲ್ಲೊಂದು ತಂಬಿಗೆ ನೀರನ್ನು ಭಟ್ಟರ ಮುಂದಿಟ್ಟು, ಅವರ ಬರಿಗಾಲಿಗೆ ಹಣೆಯಿಡುವ ಪ್ರಸಂಗ ಬರುತ್ತಿತ್ತಾ? ಹಂಗೆ ಹಣೆ ತಾಕಿಸುವಾಗ ಭಕ್ತಿಯೋ, ಗೌರವವೋ ಏನೋ ಒಂದೆಂದು ಹೆಸರಿಡಬಹುದಾದ ಭಾವನೆ ಹಣೆಯ ಮುಂದೆ ಹಾದು ಹೋಗಿದ್ದು ಅನುಭವಕ್ಕೆ ಬಂದಿತ್ತು.
        ಹೊರಗೆ ಭಯಂಕರ ಮಳೆ. ಹೊಡಚಲ ಮೇಲೆ ಅಪ್ಪ ಕಂಬಳಿಯನ್ನು ಹರಗಿಟ್ಟಿದ್ದನಾದರೂ, ಅಡಿಗೆ ಬೆಂಕಿಯಿಲ್ಲ. ಭಟ್ಟರ ಪಾದವೂ ಬೆಂಕಿಯನ್ನು ಕಾಣಬೇಕೆಂದು ಬಯಸಿತ್ತು. ಈ ಪುಣ್ಯ ಕೆಲಸವೂ ನನ್ನದೇ ಹೊಗೆ ಕೊಳವೆಗೆ ಬಂದು ಕುಂತಿತ್ತು.
“ಹೆಂಗೆ, ಘಟ್ಟದ ಕೆಳ್ಗೆ ಮಳೆ ಜೋರಾ?" ಆಗಷ್ಟೇ ಮಾಡಿಗೆ ಹೊಗೆ ತಾಗಿತ್ತು, ಅಪ್ಪ ಭಟ್ಟರೊಟ್ಟಿಗೆ ಮಾತಿನ ಶಾಖ ಹಂಚಿಕೊಳ್ಳಲು ಶುರು ಮಾಡಿದ್ದ.
“ಹ್ಞೂಂ" ಭಟ್ಟರದು ಮಿತಭಾಷೆ.
“ಈಸಲದ ಸೊಪ್ಕಂಬ್ಳಿ ಸರಿ ಇಲ್ಯ್ರಾ, ಅಣ್ನ ಮಳೆಗೇ ಲಡ್ ಹತ್ತೋತು ಸಾಯ್ಲಿ. ನಿಮ್ ಬದಿಗೆ ಚಲೋ ಕಂಬ್ಳಿ ಬಂಜ ಎಂತದನ ಅಲ್ದ?" ಅಪ್ಪನ ಪ್ರಶ್ನೆ ಮಜಾ ಅನ್ನಿಸಿದ್ದು ನನಗೊಬ್ಬಳಿಗೇ ಇರಬಹುದು.
    ಅಷ್ಟೊತ್ತಿಗೆ ಅಮ್ಮನಿಗೆ ಅದೇನು ನೆನಪಾಯಿತೋ, ಹೇಡಿಗೆಯ ತುದಿಯಿಂದ ಬುಲಾವು ಬಂತು.
      ಮತ್ತೆ ಭಟ್ಟರ ದರ್ಶನವಾಗಿದ್ದು ಊಟಕ್ಕೆ ಕುಳಿತಾಗಲೇ. ಅಪ್ಪನ ಉದ್ದುದ್ದ ಪ್ರಶ್ನೆಗಳು, ಭಟ್ಟರ ಗಿಡ್ಡನೆಯ ಉತ್ತರಗಳು ಕಿವಿಗೆ ಮುತ್ತುತ್ತಿದ್ದವು. ಸಣ್ಣಕ್ಕಿಯ ಪಾಯಸ ನಾನೇ ಮಾಡಿದ್ದರೂ ಅಪ್ಪ ಹೊಗಳಿದ್ದು ಮಾತ್ರ ನನಗೆ ಹೇಳಿಕೊಟ್ಟ ಅವನ ಹೆಂಡತಿಯನ್ನ! ಪಾಯಸಕ್ಕೆ ತುಪ್ಪ ಬಡಿಸುವಾಗ ಪ್ರಮಾದವಾಗಿತ್ತು, ಪ್ರಮೋದವಾಗಿತ್ತು. ಭಟ್ಟರ ಆಳ ಕಂಗಳಲ್ಲಿ ನನ್ನ ಬಿಂಬ ಕಂಡಿತ್ತು, ಕುಂಕುಮದ ಬೊಟ್ಟು ಬಲಹುಬ್ಬಿನೆಡೆ ವಾಲಿದ್ದು ಕಾಣುವಷ್ಟು ಸುಟ ಚಿತ್ರಣ. ಅಂತಃಶುದ್ಧಿಯಿದ್ದವರ ಕಣ್ಣುಗಳಷ್ಟೇ ಈ ಸಟಿಕದೋಪಾದಿಯ ಪ್ರತಿಫಲನ ನೀಡುತ್ತವಂತೆ. ಅಯ್ಯೋ, ಅದೆಷ್ಟು ಚಮಚ ತುಪ್ಪ ಬಡಿಸಿದೆ? ಅಪ್ಪ ಬೈದ, “ಭಟ್ರಿಗೆ ಇನ್ನೊಂದ್ ನಾಲ್ಕ್ ಹುಟ್ಟು ಪಾಯ್ಸ ಹಾಕು. ತುಪ್ಪ ಹೆಚ್ಚಾಗೋತಕು" ಪಾಯಸ ಬಡಿಸುವಂತೆ ಹೇಳಿದನೋ ಅಥವಾ ತುಪ್ಪ ಜಾಸ್ತಿ ಹೊಯ್ದಿದ್ದಕ್ಕೆ ಬೈದನೋ ಗೊತ್ತಾಗಲಿಲ್ಲ. ಭಟ್ಟರು ಪಾಯಸವನ್ನಂತೂ ಮತ್ತೆ ಹಾಕಿಸಿಕೊಳ್ಳಲಿಲ್ಲ...
“ಅಜ್ಜೀ, ಮುಂದೆ?" ಸಾನ್ವಿ ಪ್ರಶ್ನಿಸದಿದ್ದರೆ ಕತೆಯ ದಿಕ್ಕು ಮತ್ತೆಲ್ಲಿ ಹೋಗುತ್ತಿತ್ತೋ!
“ಭಟ್ರಿಗೆ ಮತ್ತೆ ಗಂಗಜ್ಜಿಗೆ ಲವ್ವಾಯ್ತು, ಮದ್ವೆ ಆಯ್ತಾ?" ಸಾನ್ವಿಯ ಮತ್ತೊಂದು ಪ್ರಶ್ನೆ.
“ಊಹ್ಞೂಂ, ಭಟ್ಟರಿಗೆ ಮೊದಲೇ ಮದುವೆಯಾಗಿತ್ತು. ಆದ್ರೆ ಗಂಗಾಳ ಮೇಲೂ ಪ್ರೀತಿ ಹುಟ್ಟಿತ್ತು. ವಿವಾಹಿತ ಪುರುಷನೊಟ್ಟಿಗೆ ಪ್ರೀತಿ ಸಲ್ಲ ಎಂದು ಗಂಗಾಳೇ ಅವನಿಂದ ದೂರವಾದಳು. ಆದ್ರೆ ಕುಟುಂಬಗಳ ನಡುವಿನ ವ್ಯವಹಾರ ಮಾತ್ರ ಅವಿಚ್ಛಿನ್ನವಾಗಿತ್ತು." ಉತ್ತರಿಸಿದಳಾವೃದ್ಧೆ.
“ಮತ್ತೆ ೨೦೩೭ನೇ ಇಸವಿಯ ಕಥೆಯೇನು?" ಸಾನ್ವಿಗೆ ಇವತ್ಯಾಕೋ ಈ ಕಥೆ ಸಿಂಡ್ರೆಲಾಳ ಸ್ಟೋರಿಗಿಂತ ಇಷ್ಟವಾಗಿತ್ತು.
ಅಜ್ಜಿ ಮುಂದುವರಿದಳು...
***
“ಅರಾಮಿದ್ಯನೆ?" ಚುಟುಕು ಪ್ರಶ್ನೆ. ಮೆತ್ತಗಿನ ಸೋಫಾ ಬೆನ್ನ ಹುರಿಯನ್ನು ವಕ್ರವಾಗಿಸಿದರೂ ನೇರವಾಗಿತ್ತು ಮಾತು.
“ಹ್ಞೂಂ, ನೀವು?" ಪ್ರಶ್ನೆ ಪತ್ರಿಕೆಯ ‘ಒಂದು ಪದ, ಒಂದು ವಾಕ್ಯದಲ್ಲಿ ಉತ್ತರಿಸಿ’ ವಿಭಾಗದ ಪ್ರಶ್ನೋತ್ತರಗಳು ಸೌಖ್ಯ ವಿಚಾರಣೆಯಲ್ಲಿ ನಿರತವಾಗಿದ್ದವು.
“ಮಕ್ಕ?"
“ಮಗ ನ್ಯೂಜೆರ್ಸಿ, ಸ್ವಂತ ಕಂಪನಿ. ಮಗ್ಳು ಲಂಡನಲ್ಲಿ ಸೆಟ್ಲ್ ಆಜು. ಅವು ಹೋದಾಗ ಮೊಮ್ಮಕ್ಕನೂ ಬಂದಿದ್ದ, ಹನ್ನಂದ್ ದಿನ ಉಳ್ಕಂಡಿದ್ದ..." ಹೀಗನ್ಬುವಾಗ ಅದೆಂಥದೋ ಬೆಳಕು ಕಣ್ಣಲ್ಲಿ. “ನಿಮ್ ಮಗ?" ಮರುಪ್ರಶ್ನೆ.
“ದೆಲ್ಲಿ, ಎಂತೋ ಸೈಂಟಿಸ್ಟಡಾ..."
    ಸಂಭಾವನೆ ಭಟ್ಟರು ಊಟ ಮಾಡಿ ಹೊಂಟರೆ ಮತ್ತೆ ಗಂಗಕ್ಕ ಒಬ್ಬಂಟಿ. ಮೊದಲೆಲ್ಲಾ ಎರಡು ಬೊಗಸೆ ಅಡಿಕೆ ಪಡೆಯುತ್ತಿದ್ದ ಭಟ್ಟರಿಗೆ ಕೊಡಲು ಈಗ ಅಡಿಕೆಯಿಲ್ಲ, ತೋಟವಿದ್ದರಲ್ಲವೇ! ಭಟ್ಟರು ಹೊರಟರೆ ಓರೆಯಾಗದ ಬಾಗಿಲಿಗೆ ಗಂಗಕ್ಕ ಜೋತು ಬಿದ್ದಿದ್ದಳು.
***
“ಅಜ್ಜೀ, ಕಥೆ ಮುಗತ್ತಾ? ಗಂಗಜ್ಜಿ ಎಂತ ಆದ್ಳು ಆಮೇಲೆ? ಭಟ್ಟರ ಕಥೆ ಏನು?"
“ಗಂಗಜ್ಜಿ ಬೆಂಗಳೂರಿಗೆ ಶಿಫ್ಟಾಗಿ ಈಗ ಬಹಳ ವರ್ಷಗಳಾದ್ವು. ಭಟ್ಟರ ಭೆಟ್ಟಿಯಿಲ್ಲ. ಕಥೆ ಮುಗೀತು, ಈಗಾದ್ರೂ ಮಲ್ಗು ಮಾರಾಯ್ತಿ..." ಅಜ್ಜಿಯ ಕಣ್ಣು ಒದ್ದೆಯಾಗಿದ್ದರ ಅರಿವು ಸಾನ್ವಿಗಿಲ್ಲ.

Comments

smita said…
ಸುಪರ್ ಶರತಾ

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ