ವಿರಹ

ಹೊರಗೆ ಸುರಿದ ಮಳೆ ನೀರು ತಲೆಯೊಳಗೆ ಹೊಕ್ಕಿ ಮೆದುಳನ್ನು ತೋಯಿಸಿದಂತೆ ಅನ್ನಿಸುತ್ತಿತ್ತು. ಯೋಚಿಸಲು ಬೇಕಾದಷ್ಟಿತ್ತು, ಯಾವುದನ್ನು ಮೊದಲು ಯೋಚಿಸೋದು ಅಂತ ಒಂದಷ್ಟು ಚೀಟಿಗಳನ್ನು ಬರೆದು ಆರಿಸಿಬಿಡಲಾ?
ಮನೆಯ ಬಲಬಾಗದ ಗೋಡೆ ಕುಸಿದ ಮಾರನೇ ದಿನವೇ ಅವಳೇನೋ ಹೊರಟೇ ಹೋದಳು, ಬಾಣಂತನದ ಖರ್ಚು ಉಳಿಯಿತೆಂದು ಸಮಾಧಾನ ಪಟ್ಟರೆ ಜನ ಏನಂದುಕೊಂಡಾರು? ಅಷ್ಟಕ್ಕೂ ಅವಳಿದ್ದಾಗ ಸಮಾಧಾನವಿತ್ತೇ? ಈ ಮಾತನ್ನು ಯಾರೂ ಕೇಳುವುದಿಲ್ಲ, ಖಾಸಾ ನನ್ನ ತಾಯಿಯೇ ಕೇಳಲಾರಳು! 
ನಾಳೆಯಾದರೂ ಒಡೆದ ಹಂಚುಗಳನ್ನು ಬದಲಿಸಬೇಕು. ಮತ್ತೆ ಮಳೆ ಬಂದಾಗ ನನ್ನ ಹಾಸಿಗೆಯಾದರೂ ಒಣಗಿರಬೇಕು! ಎಷ್ಟು ಹಂಚುಗಳು ಹೋಗಿರಬಹುದು? ಹೆಚ್ಚೆಂದರೆ ಒಂದೈವತ್ತು? ಅಷ್ಟೇ, ಒಟ್ಟೂ ಇನ್ನೂರಿದ್ದೀತಾ ಹಂಚುಗಳು?
ಛೇ, ಅವಳಿದ್ದಿದ್ದರೆ ಎಲ್ಲಾ ಲೆಕ್ಕಗಳಿಗೂ ಉತ್ತರ ಸಿಕ್ಕುತ್ತಿತ್ತೇನೋ. ಹಸುವಿನ ಹಾಲನ್ನು ಯಾರ ಬಳಿ ಕರೆಯಿಸಲಿ? ಅದಕ್ಕೆ ಹುಲ್ಲು ಮಾಡುವುದು ಹೇಗೆ? ಒಂದು ದಿನವೂ ಆಕೆ ಇದನ್ನೆಲ್ಲಾ ನನ್ನ ಬಳಿ ಮಾಡಿಸಿಲ್ಲ, ಮುಂದೊಂದು ದಿನ ನಾನು ಪರದಾಡಲೆಂದೇ ಆಗಿರಬೇಕು!
ಹೆರಿಗೆಗೆ ತವರಿಗೆ ಹೋದ ಹೆಂಡತಿಯ ನೆನಪು ಕೆಟ್ಟದಾಗಿ ಬರುತ್ತಿತ್ತು ಶಂಕರಣ್ಣನಿಗೆ...

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ