ನಿಸ್ತಂತು

ಊಹ್ಞೂಂ, ಇಂದ್ರಿಯಗಳು ನಿವೃತ್ತಿ ಪಡೆದಿವೆಯೇನೋ. ಸ್ಪರ್ಷವಿಲ್ಲ, ಗಂಧವಿಲ್ಲ, ದೃಷ್ಟಿಯಿಲ್ಲ, ಶ್ರವಣವಿಲ್ಲ. ಏಕ್ದಂ ಸತ್ತಂತೆ, ಅನುಭವವೇ ಇರದ ಸ್ಥಿತಿಗೆ ಸಾವೆನ್ನಬಹುದೇ? ಸ್ಪಷ್ಟತೆಯಿಲ್ಲ.
ಸೂರ್ಯನನ್ನು ತಿವಿದು ಇನ್ನಷ್ಟು ದೂರ ತಳ್ಳುತ್ತೇವೆ ಎಂಬಂತೆ ನೆಟ್ಟಗೆ ನಿಂತಿದ್ದ ಅಡಿಕೆ ಮರಗಳ ಕಾಲು ಅದೆಷ್ಟು ಉದ್ದ? ಬೆನ್ನಿಗೆ ದೊಣ್ಣೆ ಕೊಟ್ಟು ನೂಕಿದಷ್ಟೇ ಯಾಂತ್ರಿಕವಾಗಿ ಎದ್ದ ರಾಮಣ್ಣ. ಕೊಯ್ದಿಟ್ಟ ಬಾಳೆಕೊನೆಗಳನ್ನು ನಾನೇ ಹೊರಬೇಕು! ಮಗ ಇದ್ದಿದ್ದರೆ? ಅವನನ್ನು ಅಷ್ಟು ದೂರ ಕಳಿಸಿದವ ನಾನೇ ಅಲ್ಲವೇ? ನಾಲ್ಕೈದು ವರ್ಷಗಳ ಅವನ ಸಾಂಗತ್ಯ, ಅದೂ ಮುಪ್ಪು ಹತ್ತುವ ಕಾಲದ ಸಾಮಿಪ್ಯ ಇಷ್ಟೊಂದು ಅವಲಂಬಿಯನ್ನಾಗಿ ಮಾಡಿಬಿಟ್ಟಿತಾ? ಪ್ರಶ್ನೆಗಳು ಹುಟ್ಟಿದಷ್ಟು ಸರಳವಾಗಿ ಇತ್ತೀಚೆಗೆ ಉತ್ತರಗಳು ಹೊಳೆಯುತ್ತಿಲ್ಲ, ಇದೇ ಅಲ್ಲವೇ ಮುಪ್ಪೆಂದರೆ? ಊಹ್ಞೂಂ, ಈಗೀಗ ಬದುಕೇ ಬರೀ ಸ್ವಗತವಾಗಿತ್ತು ರಾಮಣ್ಣನ ಪಾಲಿಗೆ.
ಬಾಳೆಗೊನೆಗಳನ್ನು ಮಂಗಗಳಿಗೆ ತಿನಿಸನ್ನಾಗಿ ಬಿಡುವುದು ಮೊದಲಿಂದಲೂ ಆಗಿಬರದ ರಾಮಣ್ಣ ತಾನೇ ತೋಟಕ್ಕೆ ಬಂದಿದ್ದ. ಬೆಳಗಿನ ಹೊತ್ತಿನ ಸುಸ್ತಿಗೆ ದಶಕಗಳ ಹಿಂದೆ ಅಂಟಿಕೊಂಡ ಡಯಾಬಿಟೀಸು ಕಾರಣವಾಗಿರಬಹುದು. ಹೆಂಡತಿ ಸತ್ತಮೇಲೆ ಇಡೀ ಮನೆಗೆ ಒಂದೇ ದೇಹ. ಆಗಾಗ ಆಳುಗಳು ಬರುತ್ತಿದ್ದರಾದರೂ ನಿರಂತರ ಕೆಲಸವಾಗಲೀ, ಕರೆದಾಗ ಬರುವ ಸೌಜನ್ಯವಾಗಲೀ ಈಗ ಉಳಿದಿಲ್ಲ. ಒಟ್ಟಿನಲ್ಲಿ ಎಲ್ಲ ಮನೆಗಳಂತೆ ಇದೂ ಒಂದು ಮನೆ. ಮಕ್ಕಳಿಲ್ಲವೇ? ಮಲೆನಾಡ ಎಲ್ಲ ಮನೆಗಳಂತೇ, ಮಕ್ಕಳೆಲ್ಲ ಕಲಿತು ಹೊರ ಹೋಗಿದ್ದಾರೆ. ದುಡಿಯಲು, ಸಂಪಾದಿಸಲು, ವಿದ್ಯೆಗೆ ಅರ್ಹತೆಯನ್ನು ಒದಗಿಸಿಕೊಟ್ಟ ಕೂಲಿ ಮಾಡಲು. ಆದರೆ ರಾಮಣ್ಣನದು ಕೊಂಚ ವಿಭಿನ್ನ ಕಥೆ. ಹಿರಿಯ ಮಗ ಬೆಂಗಳೂರನ್ನು ಹೊಕ್ಕಿದ್ದು ಕಿರಿಯವ ಇಲ್ಲೇ ಇರುತ್ತಾನೆಂಬ ನಂಬಿಕೆಗೆ. ಕಿರಿಯವ ಪೇಟೆ ಹೊಕ್ಕಿದ್ದು ರಾಮಣ್ಣನ ಒತ್ತಾಯಕ್ಕೆ, “ದುಡ್ಡು ಮಾಡು" ಅನ್ನೋ ಅಪ್ಪನ ಪ್ರತಿ ಹೊತ್ತಿನ ಮಾತಿಗೆ.
***
ಅವಳು ಹೇಳಿದ್ದು ಖರೆಯಿರಬಹುದೇ? ಶಿರಸಿ ಇನ್ನೊಂದಿಷ್ಟು ವರ್ಷಗಳ ನಂತರ ಬಯಲುಸೀಮೆಯಾದೀತೇ? ಅಪ್ಪನ ಒತ್ತಾಯಕ್ಕೆಲ್ಲಾ ಮನೆ ಬಿಡದಿರುವಷ್ಟು ಗಟ್ಟಿ ಮನಸ್ಸಿನ ನಾನು ಮನೆ ಬಿಟ್ಟು ಬೆಂಗಳೂರು ಸೇರಿದ್ದು ಹೆಂಡತಿಯ ಒತ್ತಾಯಕ್ಕಿರಬಹುದೇ? ಅಥವಾ ಅವಳ ಮಾತುಗಳಂತೆ ಶಿರಸಿಯ ಭವಿಷ್ಯದ ಕಠೋರತೆಯ ಅರಿವಾಗಿ ಬಿಟ್ಟಿದ್ದೇ? ಮತ್ತಷ್ಟು ಸ್ವಗತಗಳು ಖಾಲಿ ಹೊತ್ತಲ್ಲಿ ಬರೋದುಂಟು. ಹೆಂಡತಿ ಕನವರಿಕೆಯೊಟ್ಟಿಗೆ ಮಗ್ಗಲು ಬದಲಾಯಿಸಿದರೂ ನಿದ್ದೆ ಮಾತ್ರ ಹತ್ತುತ್ತಿಲ್ಲ.
ಹಳೆ ಪ್ರೀತಿ, ಹುಟ್ಟಿದೂರಿನ ಎತ್ತರದ ಬೆಟ್ಟಗಳು, ಹಸಿರು ಗದ್ದೆ ಬಯಲು, ತಂಪು ತೋಟದ ಸಾಲು, ಮಳೆಗಾಲದ ಕೆಂಪು ನೀರಿನ ಹೊಳೆ, ಇತ್ಯಾದಿ ಸಾರ್ವಜನಿಕ ಕನಸುಗಳನ್ನು ಬೆಂಗಳೂರೆಂಬ ಎತ್ತರದ ಅಪಾರ್ಟ್‌ಮೆಂಟುಗಳು, ಚೊಕ್ಕ ಬಡಾವಣೆಗಳು, ಉದ್ದನೆಯ ಟ್ರಾಫಿಕ್ಕು ಸಾಲು, ಅಲ್ಲಲ್ಲಿ ಮಾರಾಟಕ್ಕಿದೆ ಎಂಬ ಬೋರ್ಡ್ ನೆಡಲಾದ ಖಾಲಿ ಸೈಟುಗಳು, ಆಗಾಗ ಉಕ್ಕಿ ಹರಿಯೋ ರಾಜಗಾಲುವೆ, ಇತ್ಯಾದಿಗಳೊಟ್ಟಿಗೆ ಹೊಂದಿಸಿ ಬರೆಯಲಾಗಿದೆ, ಬದುಕು ಅಷ್ಟೇನೂ ಬದಲಾಗಿಲ್ಲ ಎಂಬ ಸಮಾಧಾನದ ವಿಕ್ರಮನ ನಂಬಿಕೆ ಇತ್ತೀಚೆಗೆ ಗೊಂದಲವೋ, ಬೇಸರವೋ ಏನೋ ಒಂದಾಗಿ ಬದಲಾಗಿತ್ತು. ಹೀಗಿರುವ ಪಟ್ಟಣದ ಜೀವನ ಅವಶ್ಯಕತೆಯಾಗಿ ಬದಲಾಗಿದ್ದು ತಿಳಿಯುವುದರೊಳಗೆ ಕರೆ ಬಂದಿತ್ತು, ಊರಿಂದ!
***
ಬಾಳೆಗೊನೆ ಕೊಳ್ಳುವ ಸಾಬ ಬರೋದು ನಾಳೆ ಮಧ್ಯಾಹ್ನ ಎಂಬ ನೆನಪಿನೊಂದಿಗೆ, ಈಗೇ ಕೊಯ್ದರೆ ಹಣ್ಣಾದೀತು ಎಂಬ ನೆಪ ರಾಮಣ್ಣನ ಅಸಹಾಯಕತೆಯನ್ನು ಬೆಂಬಲಿಸಿತ್ತು. ತಿರುಗುತ್ತಿದ್ದ ಯೋಚನೆಗಳುಳ್ಳ ಭಾರ ತಲೆ ಹೊತ್ತು ಮನೆ ಕಡೆ ಹೆಜ್ಜೆ ಹಾಕಿದ್ದ. ತೋಟದ ತುದಿಯ ಪೂಲು ದಾಟುವುದರೊಳಗೆ ತಲೆ ಹೊಳೆಗೆ ಬಿದ್ದತು, ದೇಹದೊಟ್ಟಿಗೆ.
ಅದ್ಯಾರ ಪುಣ್ಯವೋ, ಮಳೆ ಅಷ್ಟೇನೂ ನಿಯತ್ತಾಗಿ ಬರದಿದ್ದುದರಿಂದ ಹೊಳೆಯಲ್ಲಿ ಅಷ್ಟೊಂದು ನೀರಿರಲಿಲ್ಲ. ರಾಮಣ್ಣ ಅದೇನು ಪಾಪ ಮಾಡಿದ್ದನೋ ಏನೋ, ಕೂಗು ಕೇಳಿ ಬರುವಷ್ಟು ಸಮೀಪದಲ್ಲಿ ಮನೆಗಳೂ ಇರಲಿಲ್ಲ, ಜನರೂ ಇರಲಿಲ್ಲ. ಅಂತೂ ಕೆಲಸ ಬಿಟ್ಟ ರತ್ನಾ ಸಂಕ ದಾಟುವಾಗ ಹೆಗಡೇರನ್ನ ನೋಡಿ ಗಂಡನನ್ನ ಕರೆದಳು. ವರ್ಷಕ್ಕೊಮ್ಮೆ ಗದ್ದೆ ನಾಟಿಗೂ ಕೆಲಸಕ್ಕೆ ಕರೆಯಲ್ಪಡದ ರತ್ನಾಳ ಆ ಸಹಾಯ ರಾಮಣ್ಣನ ಕಣ್ಣು ತೆರೆಸಿತ್ತು. ಜಗತ್ತಿನಲ್ಲಿ ಮಾನವೀಯತೆ ಇನ್ನೂ ಇದೆ ಎಂಬ ಭಾವನೆ ಹುಟ್ಟಿದ್ದು ಆಗಲೇ!
ಅಷ್ಟೇನೂ ದೊಡ್ಡ ಪೆಟ್ಟಾಗಿರದ, ಸುಧಾರಿಸಿಕೊಳ್ಳಲು ಕೆಲ ತಿಂಗಳೇ ಬೇಕಾಗಿದ್ದ ರಾಮಣ್ಣನನ್ನು ನೋಡಲು, ಮಾತನಾಡಿಸಿಕೊಂಡು ಹೋಗಲು ಬಂದಿದ್ದು ವಿಕ್ರಮ್ ಮಾತ್ರ. ಆಗಷ್ಟೇ ದಸರಾ ರಜಾ ಮುಗಿದಿತ್ತು ಎಂಬ ಕಾರಣ ಮೊಮ್ಮಗಳನ್ನು ನೋಡಲು ರಾಮಣ್ಣನಿಗಿದ್ದ ಕಾತರವನ್ನು ಕೊಂದು ಹಾಕಿತ್ತು.
***
ಈವತ್ತಿಗೆ ಎರಡು ದಿನವಾಯ್ತು ಊರಿಗೆ ಬಂದು. ಅಪ್ಪನ ಆರೈಕೆಯ ಹೊಣೆ ಆತನ ಸೊಸೆಯ ಅನುಪಸ್ಥಿತಿಯಲ್ಲಿ ರತ್ನಾಳೇ ಮಾಡುತ್ತಿದ್ದಾಳೆ. ನುರಿತ ನರ್ಸ್ ಒಬ್ಬಳ ನೇಮಕ ಮಾಡಿಕೊಳ್ಳಬಹುದಿತ್ತಾದರೂ ಹೆಂಡತಿ ಲೆಕ್ಕ ಕೇಳಿದರೆ? ಕೊಂಕು ಇದ್ದದ್ದೇ. ಸ್ವಂತ ಮಾವ ಹಾಸಿಗೆ ಹಿಡಿದಿದ್ದರೂ ಮಗಳ ಸ್ಕೂಲು ತಪ್ಪೋಗತ್ತೆ ಅಂತ  ನೆಪ ಹೇಳಿದ ಅವಳಿಗದೆಷ್ಟು ಕೊಬ್ಬಿರಬೇಡ! ರತ್ನಾಳೇ ಅದೆಷ್ಟೋ ಪಾಲು ವಾಸಿ, ದುಡ್ಡಿಗೇ ಕೆಲಸ ಮಾಡಿದರೂ ತೋರಿಕೆಯ ವಾತ್ಸಲ್ಯವಿಲ್ಲ. ಸಂಬಂಧಗಳು ಕೃತಕವಾಗುತ್ತಿವೆಯೇ? ನೆನಪಿನಲ್ಲುಳಿದಿದ್ದ ಬಿಕ್ಕೆ ಗುಡ್ಡ ತಿರುಗುವಾಗ ವಿಕ್ರಮನ ತಲೆಯಲ್ಲಿ ಯೋಚನೆಗಳ ಮೆರವಣಿಗೆ.
ಆಕೆ ಹೇಳಿದ್ದು ಹೌದು, ಶಿರಸಿಯೂ ಬಯಲುಸೀಮೆಯಾಗುತ್ತಿದೆ. ಮಳೆ ಆಗಾಗ ಬರುತ್ತದಾದ್ರೂ ಬಂದಷ್ಟೇ ತುರ್ತಾಗಿ ಮಾಯವಾಗುತ್ತಿದೆ. ಹೊಳೆಯ ತಳದಲ್ಲಿ ಬೆಳ್ಳಿ ತಿಕ್ಲಿಯ ಮೀನು ಓಡಾಡೋದು ಸುಸ್ಪಷ್ಟವಾಗಿ ಗೋಚರಿಸುತ್ತಿದೆ.  ಇದ್ಯಾಕೆ ಹೀಗೆ? ಅವಳ ನೆನಪು ಹಿಂದೆಯೇ ಬಂತು, ಥೇಟು ಮಳೆಯಂತೇ ಮಾಯವಾಯ್ತು. ಬಾಂಧವ್ಯ ಪೇಟೆವಾಸಿಗಳ ಸರಕಲ್ಲ.
***
ಮಗ ಬಂದಿದ್ದು ಹೌದಾದ್ರೂ ಅಷ್ಟೇನು ಗಮ್ಮತ್ತಿನ ಮಾತಿಲ್ಲ. ಸಂಭಾಷಣೆಗೊಂದು ವಿಷಯ ಬೇಕಲ್ಲವೇ? ಒಪ್ಪದ ಮಗನನ್ನು ಪೇಟೆಗೆ ಕಳುಹಿಸಿದ್ದರ ಪಶ್ಚಾತಾಪ ಈಗೀಗ ಕೆಂಡದಂತೆ ಸುಡೋದುಂಟು. ಈ ರತ್ನಾಳಿಗಾದರೂ ವಯಸ್ಸೆಷ್ಟು? ವಿಕ್ರಮ ಶಾಲೆಗೆ ಹೋಗುತ್ತಿದ್ದಾಗ ಅವನ ಕೊಡೆ ದಂಟು ಮುರಿದಳೆಂದು ನಾನೇ ತಪರಾಕಿ ಕೊಟ್ಟಿದ್ದೆನಲ್ಲವೇ? ಅವನಿಗೆ ನೆನಪಿದೆಯೋ ಇಲ್ಲವೋ, ಇವಳಿಗೆ ನೆನಪಿದ್ದರೆ ನನ್ನ ಸೇವೆ ಮಾಡುತ್ತಿದ್ದಳೇ? ಊಹ್ಞೂಂ.
ಮಗ ಎದುರಾದರೆ ಮಾತನಾಡಲು ಕೋಳು ಕಂಬದಲ್ಲಾದರೂ ಏನಾದರು ಸಿಗಬಹುದೇನೋ ಎಂಬಂತೆ ಮೇಲೆ ನೋಡೋದೇಕೆ? ಮಾತನಾಡಲು ವಿಷಯಕ್ಕೇ ಬರ! ಅದೆಷ್ಟು ನಿರ್ಭಾವುಕನಾಗಿಬಿಟ್ಟೆ! ಒಬ್ಬಂಟಿ ಬದುಕು ಹಿಂಗಿದ್ದೊಂದು ಜೀವನ ಶೈಲಿಗೆ ಒಗ್ಗಿಕೊಂಡಿದೆಯಾ? ತೀರಾ ಮಾತನಾಡದಿರುವಷ್ಟು?
***
ರತ್ನಾ...ಅಪ್ಪ-ಮಗನ ಮಧ್ಯದ ತಂತು, ಲಿಂಕು, ಸಂಕ. ಸಂಕದಿಂದ ಬಿದ್ದ ರಾಮಣ್ಣ ಎದ್ದ, ತಿಂಗಳೊಪ್ಪತ್ತಿಗೆಲ್ಲಾ ಹುಷಾರಾದ. ಮುರಿದ ಕೈಗೆ ರಾಡು ಬಂದಿತ್ತು, ಚಳಿಗಾಲದೊಟ್ಟಿಗೆ. ಕೈ ಎತ್ತಿದರೆ ಜುಂ ಅನ್ನುತ್ತಿತ್ತು, ರತ್ನಾಳೇ ಕೈಯಾಗಿದ್ದಳು. ವಿಕ್ರಮ ಯಾವತ್ತೂ ತಲೆ ಎತ್ತಿ ನೋಡಿದ್ದಿಲ್ಲ. ಮೊದಮೊದಲು ಮಾತೂ ಕಮ್ಮಿಯೇ. ಮಳೆ ನಿಂತ ಮಾರನೇ ದಿನವೇ ರತ್ನಾಳ ನಾದಿನಿ ತೋಟದ ಕಳೆ ತೆಗೆಯಲು ಗುತ್ತಿಗೆ ಪಡೆದಳು. ಒಂದು ವಾರಕ್ಕೆ ವಿಕ್ರಮ ಮತ್ತೆ ಹಳ್ಳಿಗನಾಗಿ ಬದಲಾಗಿದ್ದ. ಅಂಡುಗೊಕ್ಕೆ, ತಲೆಗೊಂದು ಟೊಪ್ಪಿ, ಹೆಗಲಿಗೊಂದು ಟುವಾಲು. ಆಗಾಗ ಹೆಂಡತಿಯ ಕರೆ-ಕರಕರೆ.
ಆವತ್ತೊಂದಿನ ಸಂಜೆ, ತೋಟದ ತುದಿಯ ತೆಂಗಿನ ಮರಕ್ಕೆ ಮಂಗಗಳ ಗುಂಪೊಂದು ದಾಳಿ ಮಾಡಿದ್ದವು. ಶಬ್ದ ಕೇಳಿ ಏರ್ ಗನ್ ಓಯ್ದು ಅವನ್ನೆಲ್ಲಾ ಓಡಿಸಿದ್ದಾಯ್ತು. ಮಂಗಗಳು ಎಸೆದ ಜೀವಂತ ತೆಂಗಿನಕಾಯಿಗಳನ್ನು ಆಯ್ದುಕೊಳ್ಳುವ ಭರದಲ್ಲಿ ಕಂಡಿತ್ತದು...ನೀರವಳೆಯಲ್ಲಿ ಮಲಗಿದ್ದ ರತ್ನಾ...ರತ್ನಾಳ ದೇಹ!
ಪೋಸ್ಟ್ ಮಾರ್ಟಮ್ಮು ಮಾಡಲಾಗಿ ರತ್ನಾಳ ದೇಹಕ್ಕೆ ಸಾಯುವಷ್ಟು ಪ್ರಮಾಣದ ಬುಟೆಕ್ಸು ಔಷಽ ಹೊಕ್ಕಿತ್ತೆಂಬುದು ಖಾತ್ರಿಯಾಗಿತ್ತು. ಕಾಕತಾಳೀಯವೋ ಎಂಬಂತೆ ಕೊಟ್ಟಿಗೆಯಲ್ಲಿ ನೊರಜು ಜಾಸ್ತಿಯಾಗಿ ಅವುಗಳ ಸಾಮೂಹಿಕ ಹತ್ಯೆಗೆಂದು ವಾರದ ಹಿಂದಷ್ಟೇ ತಂದಿರಿಸಿದ್ದ ಬುಟೆಕ್ಸ್ ಬಾಟಲಿಯ ಕೆಂಪು ಟೊಪ್ಪಿಯನ್ನು ಬಿಟ್ಟರೆ ಮತ್ಯಾವ ಶೇಷವೂ ರಾಮಣ್ಣನ ಮನೆಯಲ್ಲಿರಲಿಲ್ಲ.
ಗುಮಾನಿ, ವದಂತಿಗಳ ಬಾಯಿ ಆಗಾಗ ರತ್ನಾಳ ಹೆಸರನ್ನು ರಾಮಣ್ಣನ ಜೊತೆಗೂ, ವಿಕ್ರಮನ ಜೊತೆಗೂ ಸಂಬಂಧ ಕಲ್ಪಿಸಿದವು. ದುಡುದುಳಿಸಿದ್ದ ಸ್ವಲ್ಪ ಹಣವನ್ನು ಪೊಲೀಸರ ಜೇಬಿಗಿಳಿಸಿ  ರತ್ನಾಳದ್ದು ಆತ್ಮಹತ್ಯೆ ಎಂದು ಬರೆಸಲು ವಿಕ್ರಮ ಯಶಸ್ವಿಯಾಗಿದ್ದ!
***

ಮತ್ತದೇ ಮೌನ, ಸತ್ತ ರತ್ನಾಳ ಜೊತೆ ಮಾತುಗಳ ಶ್ರದ್ಧಾಂಜಲಿ. ಉಳಿದ ನೆನಪುಗಳನ್ನು ಬ್ಯಾಗಿಗೆ ತುಂಬಿಕೊಂಡು ವಿಕ್ರಮ ಬೆಂಗಳೂರಿಗೆ ಹೊರಡಲು ಸಜ್ಜಾದ. ರಾತ್ರಿ ಊಟದ ಹೊತ್ತಿಗೆ ‘ನಾಳೆ ಬೆಂಗಳೂರಿಗೆ ಹೋಗ್ತೆ, ಅಂಜಲಿ ಫೋನ್ ಮಾಡಿದ್ಳು, ಸ್ವಪ್ನಾಗೆ ಹುಷಾರಿಲ್ವಂತೆ...’ ಅಪ್ಪನಿಗೆ ತಿಳಿಸುವ ಕರ್ತವ್ಯ ಪಾಲಿಸಿದ್ದನಷ್ಟೇ. ನೆಪವೊಂದು ಸಿಕ್ಕಿತ್ತು.

ಸರಿ, ಮತ್ತೆ ಬಿದ್ರೆ ಫೋನ್ ಮಾಡಲ್ಲ ಬಿಡು’ ಅಂದಿದ್ದ ರಾಮಣ್ಣ. ಮುಖದಲ್ಲೊಂದು ನಿರ್ಲಿಪ್ತ ಭಾವನೆ; ತಂದುಕೊಂಡಿದ್ದೋ ಅಥವಾ ಹಾಗೇ ಇತ್ತೋ ಎಂಬುದನ್ನು ಗುರುತಿಸಲಾಗಲಿಲ್ಲ.
ಬೆಳಿಗ್ಗೆ ಹೊರಟಾಗ ಜಗುಲಿಯಲ್ಲಿದ್ದ ಟಿವಿಯ ಮುಂದೆ ಅಪ್ಪನಿರಬಹುದೆಂಬ ಭಾವ. ನಿಂತ, ಟಿವಿ ಮಾತನಾಡುತ್ತಿದ್ದಾದರೂ ಅಪ್ಪ ಕಾಣಲಿಲ್ಲ. ಖಾಲಿ ಟ್ಯಾಂಕಿಗೆ ನೀರು ಬಿಡಲು ಹೋಗಿರಬಹುದೆಂದು ಹಿತ್ತಲ ಕಡೆ ಹೋಗಿ ನೋಡಿದ. ಆದರೆ ಅಲ್ಲೂ ಇಲ್ಲ!
***
ಊಹ್ಞೂಂ, ಇಂದ್ರಿಯಗಳು ನಿವೃತ್ತಿ ಪಡೆದಿವೆಯೇನೋ. ಸ್ಪರ್ಷವಿಲ್ಲ, ಗಂಧವಿಲ್ಲ, ದೃಷ್ಟಿಯಿಲ್ಲ, ಶ್ರವಣವಿಲ್ಲ. ಏಕ್ದಂ ಸತ್ತಂತೆ, ಅನುಭವವೇ ಇರದ ಸ್ಥಿತಿಗೆ ಸಾವನ್ನಬಹುದೇ?
ಸೂರ್ಯನನ್ನು ತಿವಿದು ಇನ್ನಷ್ಟು ದೂರ ತಳ್ಳುತ್ತೇವೆ ಎಂಬಂತೆ ನೆಟ್ಟಗೆ ನಿಂತಿದ್ದ ಅಡಿಕೆ ಮರಗಳ ಕಾಲು ಅದೆಷ್ಟು ಉದ್ದ? ಬೆನ್ನಿಗೆ ದೊಣ್ಣೆ ಕೊಟ್ಟು ತಳ್ಳಿದಷ್ಟೇ ಯಾಂತ್ರಿಕವಾಗಿ ಎದ್ದ. ಕೊಯ್ದಿಟ್ಟ ಬಾಳೆಕೊನೆಗಳನ್ನು ನಾನೇ ಹೊರಬೇಕು! ಮಗ ಇದ್ದಿದ್ದರೆ? ಅವನನ್ನು ಅಷ್ಟು ದೂರ ಕಳಿಸಿದವ ನಾನೇ ಅಲ್ಲವೇ? ನಾಲ್ಕೈದು ವರ್ಷಗಳ ಅವನ ಸಾಂಗತ್ಯ, ಅದೂ ಮುಪ್ಪು ಹತ್ತುವ ಸಂಧಿಕಾಲದ ಜೊತೆ ಇಷ್ಟೊಂದು ಅವಲಂಬಿಯನ್ನಾಗಿ ಮಾಡಿಬಿಟ್ಟಿತಾ? ಪ್ರಶ್ನೆಗಳು ಹುಟ್ಟಿದಷ್ಟು ಸರಳವಾಗಿ ಇತ್ತೀಚೆಗೆ ಉತ್ತರಗಳು ಹೊಳೆಯುತ್ತಿಲ್ಲ, ಇದೇ ಅಲ್ಲವೇ ಮುಪ್ಪೆಂದರೆ? ಊಹ್ಞೂಂ, ಈಗೀಗ ಬದುಕೇ ಬರೀ ಸ್ವಗತವಾಗಿತ್ತು ರಾಮಣ್ಣನ ಪಾಲಿಗೆ.
ವಿಕ್ರಮ ತೋಟಕ್ಕೆ ಬಂದ, ಕೈಯಲ್ಲಿ ತುಂಬಲ್ಪಟ್ಟ ಬ್ಯಾಗು. ರಾಮಣ್ಣ ನಿಧಾನವಾಗಿ ಎದ್ದ, ಅಡಿಕೆ ಮರಗಳು ಮತ್ತಷ್ಟು ಎತ್ತರವಾದಂತೆ, ಈಬಾರಿ ಕೊನೆಕೊಯ್ಲು ಅಸಾಧ್ಯವೇನೋ ಅನಿಸಿಬಿಟ್ಟಿತ್ತು. ‘ಹೊಂಟ್ಯಾ?’ ಅದೇ ನಿರ್ಲಿಪ್ತ ದನಿಯಲ್ಲಿ ಕೇಳಿದ.
‘ಹ್ಞೂಂ’ ಮತ್ತದೇ ಚುಟುಕು ಪ್ರತಿಕ್ರಿಯೆ.
‘ಸರಿ, ಹುಷಾರಾಗಿ ಹೋಗ್ಬಾ. ಅಂಜಲಿ ಮತ್ತೆ ಸ್ವಪ್ನಾರನ್ನ ಸರಿಯಾಗಿ ನೋಡ್ಕೋ’ ಅಂದ ರಾಮಣ್ಣ.
‘ನಡಿ, ಮನೆಗೋಗೋಣ. ಮತ್ತೆ ಸಂಕದಿಂದ ಬಿದ್ರೆ ನೋಡೋಕೆ...’ ರತ್ನಾಳ ನೆನಪಾಗಿ ಮಾತು ಮುಂದೆ ಸರಿಯಲಿಲ್ಲ, ನೆನಪಿನಷ್ಟು ವೇಗವಾಗಿ.
ಇಬ್ಬರೂ ಹೊಂಟರು. ಅದೇ ಹೊತ್ತಿಗೆ ತೋಟದ ತುದಿಗೆ ಮಂಗಗಳ ಗೌಜು  ಕೇಳಿತ್ತು. ಬೆಳೆದ ಬಾಳೆಗೊನೆಯೊಂದಕ್ಕೆ ಮಂಗಗಳ ಗುಂಪು ಮುತ್ತಿಗೆ ಹಾಕಿದ್ದಾವೇನೋ ಎಂದು ರಾಮಣ್ಣ ಆಕಡೆ ಹೊಂಟ. ಅಪ್ಪ ಹೋದ ವೇಗ ನೋಡಿ ವಿಕ್ರಮನೂ ಹಿಂದೆಯೇ ಹೆಜ್ಜೆ ಹಾಕಿದ.
ಪೂರ್ತಿ ಬೆಳೆದ ಮಿಟ್ಗಾ ಮಂಗಗಳ ಹೊಟ್ಟೆ ತುಂಬಿಸಿತ್ತು. ರಾಮಣ್ಣ ದೊಣ್ಣೆ ಬೀಸಿದ, ಒಮ್ಮೆ ಗುರುಗುಟ್ಟಿ ಜಿಗಿದವು... ಮರಿಯೊಂದು ಬಿತ್ತು, ದೊಡ್ಡ ಮಂಗವೊಂದು ರಾಮಣ್ಣ, ವಿಕ್ರಮರಿಗೆ ಹೆದರದೇ ಬಂದು ಮರಿಯನ್ನು ಹೊತ್ತುಕೊಂಡು ಮತ್ತೆ ಮರ ಏರಿತು. ಮತ್ಯಾವುದಾದರೂ ಬಾಳೆಗೊನೆನೆ ಮಂಗಗಳ ಹೊಟ್ಟೆ ಸೇರಿದೆಯೋ ಎಂಬುದನ್ನು ನೋಡಲು ವಿಕ್ರಮ ತೋಟದ ತುದಿಗೆ ಹೋದ.
ರತ್ನಾಳ ದೇಹ ತೇಲುತ್ತಿದ್ದ ಹೊಳೆಯನ್ನು ನೋಡುವ ಮನಸ್ಸಾಗಿದ್ದಕ್ಕೆ ಕಾರಣವಿಲ್ಲವೇನೋ. ಕೊನೇಬಾರಿಯೆಂಬಂತೆ ಹೋದ. ವೆಂಕಟು! ತೋಟದ ಅಚ್ಚೇದಿಂಬದ ಮಟ್ಟಿಯಲ್ಲಿ ಅದೇನನ್ನೋ ಹುಡುಕುತ್ತಿದ್ದವ ಅದ್ಯಾಕೆ ಓಡಿದನೋ, ವಿಕ್ರಮನನ್ನು ನೋಡಿ! ವೆಂಕಟುವಿನ ಪರಿಚಯ ನಿಮಗಿಲ್ಲ ಅಲ್ಲವೇ? ರತ್ನಾಳೆಂಬ ತಂತುವಿನ ಗಂಡ... ವಿಕ್ರಮ ಬೆನ್ನಟ್ಟಿ ಹೋದ. ಸಿಗಲಿಲ್ಲ.
***
ಮನೆಗೆ ಹೋಗಿ ಬೆವರು ಅಂಟಿದ್ದ ಅಂಗಿ ಬಿಚ್ಚಿ ಮತ್ತೆ ತಯಾರಾಗುವ ಅವಸ್ಥೆ ವಿಕ್ರಮನದ್ದು. ಮೆರವಣಿಗೆ ಅನ್ನೋ ಒಂದೂರಿನ ಜೊತೆಗೆ ನಂಟು ಕಳೆದುಕೊಂಡು ಮತ್ತೆ ಬೆಂಗಳೂರಿಗೆ ಹೊಂಟಿದ್ದ. ಅಪ್ಪ ಎಂದಿನತೆ ಟಿವಿ ಹಚ್ಚಿಕೊಂಡು ಕುಂತಿದ್ದ. ಬರುತ್ತೇನೆಂದು ಹೇಳುವಾಗ ಕಣ್ಣುಗಳು ಅದ್ಯಾಕೆ ತುಂಬಿ ಬಂದಿದ್ದವೋ ಗೊತ್ತಿಲ್ಲ. ಮಂಗನ ಮರಿ ಬಿದ್ದರೂ ಎತ್ತಿಕೊಳ್ಳಲು ದೊಡ್ಡ ಮಂಗ ಬಂದಿಲ್ಲ. ಬಂದಿದ್ದು ಪೊಲೀಸರು!
‘ವೆಂಕಟುವನ್ನ ಕಂಡಿದ್ದೀರಾ?’ ಪ್ರಶ್ನೆ ಎದುರಾಗಿತ್ತು. ವಿಕ್ರಮ ತಾನು ಕಂಡ ದೃಶ್ಯವನ್ನು ವಿವರಿಸಿದ್ದ. ವೆಂಕಟುವೇ ರತ್ನಾಳನ್ನು ಕೊಂದಿದ್ದಾಗ್ಯೂ, ರಾಮಣ್ಣನ ತೋಟದ ಕಳೆ ತೆಗೆಯಲು ಬಂದಿದ್ದ ರತ್ನಾಳ ನಾದಿನಿ-ವೆಂಕಟುವಿನ ನಡುವೆ ಹೇಳಲಾಗದ ಎಂಥದೋ ಒಂದು ಇತ್ತೆಂದೂ, ಮಧ್ಯಾಹ್ನ ಚಾ ತೆಗೆದುಕೊಂಡು ಹೋಗಿದ್ದ ರತ್ನಾಳಿಗೆ ಗೊತ್ತಾಗಿರಬಹುದು; ಕದ್ದ ಬುಟೆಕ್ಸ್ ಕುಡಿಸಿ ಕೊಲ್ಲಲಾಗಿದೆಯೆಂದೂ ವಿವರಿಸಲಾಯ್ತು. ಇದೆಲ್ಲಾ ತಿಳಿದಿದ್ದು ವೆಂಕಟುವಿನ ಮತ್ತೊಬ್ಬಳು ಚಿರಾಸ್ತಿಯಿಂದ!
ಎಲ್ಲಾ ಗೊಂದಲಗಳು ಮುಗಿಯುವ ಹೊತ್ತಿಗೆ ಅಂಜಲಿಯಿಂದ ಫೋನ್ ಬಂದಿತ್ತು. ತವರಿಗೆ ಬಂದಿದ್ದೇನೆಂದೂ, ಕರೆದೊಯ್ಯುವ ಸಾಹಸ ಮಾಡಬೇಡಿರೆಂದು...                                                                                  


Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ