ನಗು

ಅಕ್ಕ ಇತ್ತೀಚೆಗೇಕೋ ಮೊಬೈಲ್ ನೋಡಿಕೊಂಡು ಒಬ್ಬಳೇ ನಗಾಡುತ್ತಾಳೆ. ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಳ್ಳೋದು ಜಾಸ್ತಿಯಾಗಿದೆ. ಏನಿರಬಹುದು ಅವಳ ನಗುವಿನ ಹಿಂದೆ?
ಅಶ್ವಥ್ ಅಕ್ಕನ ನಗುವಿನ ಕಾರಣ ಹುಡುಕಿದ್ದ. ಅಕ್ಕ ಯಾರದೋ ಪ್ರೀತಿಯಲ್ಲಿ ಬಿದ್ದಿದ್ದಾಳೆ! ಅಪ್ಪನಿಗೆ ಹೇಳಿ ಬಿಡಿಸೋದಾ? ಇಲ್ಲ, ನಾನು ದೊಡ್ಡವನಾಗಿದ್ದೇನೆ, ಇಷ್ಟು ಚಿಕ್ಕ ವಿಷಯವನ್ನ ಅಪ್ಪನ ಬಳಿ ಒಯ್ದರೆ ಸುಮ್ಮನೇ ರಗಳೆ ಅಂದುಕೊಂಡು ಅಕ್ಕ ಒಬ್ಬಳೆ ಇರುವಾಗ ಚೆನ್ನಾಗಿ ಬೈದ. ಅಕ್ಕ ಅತ್ತಳು, ಅಳು ಗಂಡಸರ ಅಹಂಕಾರ ಹೆಚ್ಚಿಸುತ್ತೆ, ಆಫೀಮಿನ ಅಮಲಿನಂತೆ. ಅವನಿಗೆ ತನ್ನ ಗಂಡಸ್ತನದ ಮೇಲೆ ಹೆಮ್ಮೆಯೆನಿಸಿತು.
ಆಕೆ ತನ್ನ ಇನಿಯನಿಗೆ ತನ್ನನ್ನು ಮರೆತುಬಿಡುವಂತೆ ಮೆಸೇಜಿಸಿ ಬಾಕಿ ಇದ್ದ ಅಳುವನ್ನು ಮುಗಿಸಲು ಯತ್ನಿಸಿದಳು.
ಅವಳ ಇನಿಯನೋ ಭಯಂಕರ ನೈತಿಕತೆಯ ಮನುಷ್ಯ, ಅವಳಿಗೇ ಇಷ್ಟವಿರದ ಮೇಲೆ ಬಲವಂತವೇಕೆ ಎಂದು ಸುಮ್ಮನಾದ. ಗಂಡಸಾದವನು ಪ್ರೀತಿಯನ್ನು ಅಪೇಕ್ಷಿಸುತ್ತಾನೆ, ಕೊಂಡುಕೊಳ್ಳುವುದಿಲ್ಲವಂತೆ...

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ