Posts

Showing posts from 2026

ಕುಡುಕ ಮಂಜನ ಪ್ರೇಮ ಕಥನ

Image
“ನೀನೆಲ್ಲೋ ನೀಲೇಕಣಿಯ ರಸ್ತೆಯಂಥವಳಿರಬೇಕು, ನಿನ್ನ ಹಾದು ಹೋದಾಗೆಲ್ಲ  ಆಲ್ಟೋ ಕಾರಿನಂಥ  ನನ್ನ ಹೃದಯದಲ್ಲಿ ಧಡಕಿಯಾಗುತ್ತದೆ" ‘ಅಣಾ, ಈಗಿನ್ ಕವಿ ಹೇಳ್ಕಳೋರೆಲ್ಲ ಇನ್ನೂ ಅದೇ ಮುಗಿಲು, ಕಡಲು, ಮನಸು ಹೇಳೆಲ್ಲಾ ಬರ್ಕತ್ತಿದ್ರೆ ಯಾರಿಗ್ ಪುಸ್ತಕ ತಕಂಡ್ ಓದ್ಬಕು ಕಾಣ್ತೇತಿ’ ಅನ್ನುತ್ತ ಮೇಲಿನಂತೆ ತನ್ನ ಆಧುನಿಕ ಉಪಮೆಯನ್ನು ಹೇಳಿದ್ದ ಮಂಜ ಸಿಗದೇ ನಾಲ್ಕೈದು ವರ್ಷಗಳಾಗಿದ್ವು. ಹೋದ ತಿಂಗಳು ಅವನ ದರ್ಶನವಾಗಿದ್ದು ಅನಿರೀಕ್ಷಿತವೂ, ಆಘಾತಕರವೂ ಆಗಿತ್ತು. ನಾನು ಮೂವತ್ನಾಲ್ಕರ ಪ್ರಾಯದಲ್ಲಿದ್ದಾಗ ಮಂಜನಿನ್ನೂ ಹೈಸ್ಕೂಲಿಗೆ ಹೋಗುತ್ತಿದ್ದ ಹುಡುಗ. ಅವನ ತಂದೆ ವಾರಕ್ಕೊಮ್ಮೆಯಾದ್ರೂ ಪೇಟೆಗೆ ಹೋಗಲೆಂದು ನನ್ನ ಗಾಡಿಯನ್ನೇ ಕಾದು ನಿಂತಿರುತ್ತಿದ್ದ ಆತ್ಮೀಯ. ಮೆರವಣಿಗೆಯ ಮಕ್ಕಳಂತೆಯೇ ಹತ್ತಿರ ಶಾಲೆಯಿಲ್ಲದೆ ಭಟ್ರಕೇರಿಯ ಹೈಸ್ಕೂಲಿಗೆ ಹೋಗುವ ಅನಿವಾರ್ಯತೆ ನಾಲ್ಕಳ್ಳಿಯ ಗೌಡ್ರಕೇರಿ ಮಂಜನಿಗೂ ಇತ್ತು. ಓದಲು ಚುರುಕಾಗಿದ್ದನಷ್ಟೇ ಅಲ್ಲದೆ ಸಾಹಿತ್ಯದಲ್ಲಿ ಅದೆಂಥದೋ ಆಸಕ್ತಿಯಿದ್ದಂತೆ ಕಾಣುತ್ತಿದ್ದ. ಶನಿವಾರವೋ, ರವಿವಾರವೋ ಅವರೂರ ಕೆರೆಯ ಸಮೀಪ ನಾನು ಪಕ್ಷಿ ವೀಕ್ಷಣೆಗೆ ಹೋದಾಗೆಲ್ಲ ಸಿಗುತ್ತಿದ್ದ ಮಂಜ ಬುಲ್‌ಬುಲ್ ಹಕ್ಕಿಯ ಗೂಡೆಲ್ಲಿದೆ, ಸುಟ್ರಾನಕ್ಕಿ ಮೊಟ್ಟೆ ಎಲ್ಲಿಟ್ಟಿದೆ ಎಂಬೆಲ್ಲ ಪ್ರಶ್ನೆ ಕೇಳುತ್ತ ಸೊಕಾಶ ಪುಸ್ತಕಗಳ ವಿಷಯಕ್ಕೆ ಬರುತ್ತಿದ್ದ. ಆ ಹೊತ್ತಿಗಾಗಲೇ ತೇಜಸ್ವಿ, ಬೆಳಗೆರೆ ಮೊದಲಾದವರ ಆಸಕ್ತಿ ಕೆರಳಿಸುವ ಲಘು ಸಾಹಿತ್ಯವನ್ನೆಲ...