ಒಂದು ಭಾನುವಾರದ ಕತೆ

ಇಷ್ಟಿಷ್ಟೇ ಬದುಕುವ ಜೀವಕ್ಕೂ ಭವಿಷ್ಯದ ತೂಕ ಹೇರಿಬಿಡುವ ಜಗತ್ತಿಗೆ ಬಯ್ಯುತ್ತಲೇ ಭಾನುವಾರವೊಂದನ್ನು ಸ್ವಾಗತಿಸಲಾಯ್ತು. ಆವತ್ತೇ ಮೊದಲ ಬಾರಿ ಭಾನುವಾರವನ್ನು ನೋಡಿದ್ದೆಂದಲ್ಲ, ಪ್ರತಿ ರವಿವಾರವೂ ರವಿವಾರದಂತೆಯೇ ಜಿಗುಪ್ಸೆದಾಯಕ ದಿನ. ಆದರೂ ಆವತ್ತಿನ ಆದಿತ್ಯವಾರ ಬರೀ ದಿನದರ್ಶಿಕೆಯ ಮೇಲೆ ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡದ್ದಲ್ಲ, ಮಾಸಾರಂಭದ ಸೂತಕದಂತೆ ಭಾಸವಾಗುತ್ತಿತ್ತು. ಆ ಭಾನುವಾರ ಅದ್ಯಾಕೆ ಭಾನುವಾರವಾಯ್ತು? ಗೊತ್ತಿಲ್ಲ!
ಕಳೆದ ಸೋಮವಾರವಷ್ಟೇ ಮಲಗಿದ್ದೆನೇನೋ ಎಂದನಿಸಿ, ಭಾನುವಾರದ ಗಾಢ ಇಬ್ಬನಿಯನ್ನು ಕಿಟಕಿಯ ಈ ಬದಿಯಿಂದಲೇ ಗುರುತಿಸಿ ಚಾದರವನ್ನು ಕಣ್ಣ ಮೇಲೆ ಎಳೆದುಕೊಳ್ಳುತ್ತಿದ್ದಂತೆಯೇ ಮೊಬೈಲು ಟಿಣ್‌ಟಿಣಿಕ್ ಎಂದು ಹಲುಬಿ ತನ್ನ ನಿತ್ಯಕರ್ಮವನ್ನು ಶುರುಮಾಡಿದಾಗಿನ್ನೂ ಬೆಳಿಗ್ಗೆ ಆರು ಗಂಟೆ. ಇದೊಂದು ನೋಟಿಫಿಕೇಶನ್ನು ನೋಡಿಯೇ ಮುಂದಿನ ನಿದ್ರೆಯನ್ನು ಕಾಣೋಣವೆಂದು ಟೇಬಲ್ಲಿನ ಮೇಲೆ ಮಲಗಿದ್ದ ಮೊಬೈಲನ್ನು ಕೈಗೆತ್ತಿಕೊಂಡೆ. ಯಾವುದೋ ಗ್ರುಪ್‌ನಲ್ಲಿ ಬಂದ “ದರೋಡೆಕೋರರು, ನಾನು ಮತ್ತು ಇಗರ್ಜಿ" ಎಂಬ ದಪ್ಪಕ್ಷರದ ತಲೆ ಬರೆಹವಿದ್ದ ಮೆಸೇಜೊಂದನ್ನು ನೋಡಿ ಒಳ್ಳೆ ಕತೆಯಿದ್ದಂಗಿದೆ, ಓದಿಕೊಂಡೇ ವರಗೋದು ಬೆಸ್ಟು ಅಂತನಿಸಿ ಓದೋಕೆ ಶುರು ಮಾಡಿದೆ. ಒಳ್ಳೆ ಮಜಾ ಇತ್ತು ಕತೆ. ರಾತ್ರಿ ಹೊತ್ತು ಹೊಂಡಾ ಡಿಯೋ ಗಾಡಿಯನ್ನ ಓಡಿಸುತ್ತಿದ್ದ ಒಬ್ಬನ ಬಳಿ ನಾಲ್ವರು ಬಂದು ಅಡ್ರೆಸ್ ಕೇಳಿದ್ದಾಗ್ಯೂ,ಅಡ್ರೆಸ್ ಹೇಳಿ ಮುಂದೆ ಹೋದವನ ಬೆನ್ನತ್ತಿ ಬಂದವರು ಎಂಬತ್ತು ಮೈಲಿ ಸ್ಪೀಡಿನಲ್ಲಿದ್ದ ಡಿಯೋದ ಚಾವಿ ಕಿತ್ತುಕೊಂಡು ಹಣ ಕೇಳಿದ್ದಾಗ್ಯೂ, ಅವರ ಕೈಗೆ ಸಿಗದೇ ಡಿಯೋ ಓಡಿಸುತ್ತಿದ್ದ ವ್ಯಕ್ತಿ ಇಗರ್ಜಿಯೊಂದರತ್ತ ಗಾಡಿ ತಿರುಗಿಸಿ ಹೇಗೆ ರೋಚಕವಾಗಿ ಪಾರಾದ ಎಂಬುದನ್ನೆಲ್ಲ ಓದಿ, ‘ಮಸ್ತ್ ಕತೆ ಕೊಚ್ಚಿದ್ದಾ’ ಅಂದುಕೊಂಡು ಹೊದಕಲನ್ನು ಮತ್ತೆ ಕಣ್ಣಿನತ್ತ ಎಳೆದುಕೊಂಡೆ.
ಆಸರಿ ಕುಡಿಯಲೆಂದು ಒಂಬತ್ತು ಗಂಟೆಗೆ ಎಚ್ಚರಿಸುವ ಹೊತ್ತಿಗೆಲ್ಲ ವಾಟ್ಸಪ್ಪು ತನ್ನ ಒಳಗೆಲ್ಲ ಬರೀ ರಸ್ತೆ ಸುಲಿಗೆಯದ್ದೇ ಸುದ್ದಿ ತುಂಬಿಕೊಂಡಿತ್ತು. ಅರೇ! ಬೆಳಿಗ್ಗೆ ಓದಿದ್ದು ಕತೆಯಲ್ಲ, ಸತ್ಯ ಘಟನೆಯ ವಿಜೃಂಭಿತ ಕಥಾನಕ ಎಂಬುದು ಅರಿವಾಗುವಷ್ಟರಲ್ಲಿ  ಹೆಂಡತಿಯೂ, ತಾಯಿಯೂ ಒಕ್ಕೊರಲ ದನಿ ಹೊರಡಿಸಿ, ರಾತ್ರಿ ಬರುವಾಗ ಹುಷಾರಿ ಎಂದು ಎಚ್ಚರಿಸಿಯಾಗಿತ್ತು. ಶನಿವಾರ ರಾತ್ರಿ ತಾಲೂಕಿನ ಹಲವೆಡೆ ಬೈಕ್ ಸವಾರರನ್ನು ಅಡ್ಡಾಕಿ ದುಡ್ಡು ದೋಚಿದ ಘಟನೆಗಳು ವರದಿಯಾಗಿದ್ದವಲ್ಲದೆ ಪೊಲೀಸ್ ಇಲಾಖೆಯೂ ಹಲವು ತಂಡಗಳನ್ನು ರಚಿಸಿಕೊಂಡು ತಾಲೂಕಿನ ಉದ್ದಗಲವನ್ನು ಜಾಲಾಡುವ ಭರವಸೆ ನೀಡಿಯಾಗಿತ್ತು. ಇನ್ನೆಂಥ ಭಯ ಬಿಡು ಅನ್ನುತ್ತಲೇ ಇರುವ ಒಂದು ಭಾನುವಾರದ ಸದುಪಯೋಗಕ್ಕಾಗಿ ಊರು ಬಿಟ್ಟು ಪೇಟೆಗೆ ತೆರಳುವ ಮನಸ್ಸಾಗಿದ್ದು ಕಾಕತಾಳೀಯವಿರಬಹುದು, ಪಕ್ಕಾ ಗೊತ್ತಿಲ್ಲ.
ಬೆಳಗಿನ ಮೊದಲ ಶೋ ಪಿಚ್ಚರ್ರು ನೋಡುವ ಆಸೆಯಿತ್ತಾದ್ರೂ ಅದಾಗಲೇ ಬ್ಲ್ಯಾಕ್‌ನಲ್ಲೂ ಟಿಕೆಟ್ ಸಿಗುವ ಹೊತ್ತು ಮುಗಿದಿದ್ದರಿಂದ ಆಗಷ್ಟೇ ಇನ್ಸ್ಟಾಗ್ರಾಮು, ಫೇಸ್ಬುಕ್ ರೀಲ್ಸ್‌ಗಳಲ್ಲಿ ಟ್ರೆಂಡ್ ಸೃಷ್ಟಿಸಿದ್ದ  ಹೊಸ ರಸ್ತೆ ಹಾಗೂ ಅದರ ಲೈಟು ಕಂಬಗಳನ್ನು ಪರಿಶೀಲಿಸೋಣವೆಂದು ನಗರ ಸಂಚಾರವೇ ಸೂಕ್ತವೆಂದು ಹೊರಟೆ. ಆರೇಳು ರಸ್ತೆ ಸರ್ಕಲ್ ದಾಟಿ ಹಳೇ ಹೊಸ ಬಸ್ ನಿಲ್ದಾಣದತ್ತ ಹೊಂಟರೆ ಒಂದು ಕಡೆಯಿಂದ ಸಾಲು ಹಿಡಿದು ಬರುತ್ತಿದ್ದ ಅತಿಕ್ರಮಣ ಜಾಗ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದವರ ಗುಂಪು ಹಳೆ ಟಾಯರ್ ಒಂದನ್ನು ಹೊತ್ತು ತರುತ್ತಿದ್ದರೆ ಮತ್ತೊಂದು ಬದಿಯಿಂದ ತಮಗೊಂದು ಹೊಸ ಜಿಲ್ಲೆ ಬೇಕೆಂದು ಕೂಗುತ್ತಿದ್ದವರ ಗುಂಪು ಬರುತ್ತಿತ್ತು. ಅತಿಕ್ರಮಣ ಜಾಗವನ್ನೆಲ್ಲ ಮಂಜೂರು ಮಾಡಿಸಿದರೆ ಇಂದು ಜಿಲ್ಲೆ ಕೇಳುತ್ತಿರುವವರು ಹೊಸ ರಾಜ್ಯಕ್ಕಾಗಿ ಆಗ್ರಹಿಸುವರೇನೋ ಎಂಬ ಮಳ್ಳು ಯೋಚನೆ ಬಂದು ನಾನಷ್ಟೇ ನಕ್ಕಿದ್ದು ಯಾರಿಗೂ ಕಾಣಿಸಲಿಲ್ಲವೇನೋ, ಬಚಾವಾದೆ. ಈ ದಾರಿಯ ಅಜ್ಜಿಕುಟಾ, ಯಾವ ರಸ್ತೆಗೂ ಇದು ನನ್ನನ್ನು ತಲುಪಿಸೋದು ಡೌಟು ಎಂದು ಬಯ್ಯುತ್ತಾ ವಾಪಸ್ಸು ಬಂದು ಅಡ್ಡದಾರಿ ಹಿಡಿದೆ, ಎಲ್ಲರಂತೆ.
ಭಾನುವಾರವೆಂಬ ಭಾನುವಾರವೊಂದರ ಅಸಲಿಯತ್ತು ನಿಮಗೆ ಗೊತ್ತಾಗಬೇಕಾದರೆ ನಮ್ಮ ಪೇಟೆಯ ಈ ಅಡ್ಡದಾರಿಗಳಲ್ಲೊಮ್ಮೆ ತಿರುಗಬೇಕು. ವಾರದ ಉಳಿದಷ್ಟೂ ದಿನಗಳಲ್ಲಿ ಇರುವೆಗೂ ನಡೆದಾಡಲು ಜಾಗ ಕೊಡದ ರಸ್ತೆ ತನ್ನ ಕಪ್ಪು ಮೈ ಹರಡಿ ನಿದ್ರಿಸುವುದನ್ನು ನೋಡಲಾಗದವರಂತೆ ಆಗೊಮ್ಮೆ-ಈಗೊಮ್ಮೆ ವಾಹನ ಚಲಾಯಿಸುವವರ ಹುಳುಕು ಕೂಡ ಭಾನುವಾರವಷ್ಟೇ ಅರಿವಿಗೆ ಬರೋದು. ಅಂಥದ್ದೊಂದು ದಾರಿಯಲ್ಲಿ ಹೋಗುವಾಗಲೇ ಕೆಂಪು ಮಂಗನಟೊಪ್ಪಿಯನ್ನು (ಮಂಗನಟೊಪ್ಪಿಯ ಬಣ್ಣ ಕೆಂಪಾಗಿತ್ತೇ ಹೊರತು ಕೆಂಪು ಮಂಗ ಬಹುಷಃ ಎಲ್ಲೂ ಇರಲಿಕ್ಕಿಲ್ಲ!)ಹಣೆವರೆಗೂ ಎಳೆದುಕೊಂಡವನೊಬ್ಬ ತನ್ನ ಹಳೇ ಡಿಸ್ಕವರ್ ಬೈಕನ್ನು ನಿಲ್ಲಿಸಿಕೊಂಡಿದ್ದ. ಅವನ ಬದಿಗೊಬ್ಬವ ಇದ್ದ, ಅತ್ತ ಕರಿಯದೂ ಅಲ್ಲದ; ನೀಲಿಯದೂ ಅಲ್ಲದ ನಮೂನೆಯ ಮಂಗನಟೊಪ್ಪಿಯ ಒಡೆಯನಾತ. ಹನ್ನೆರಡು ಗಂಟೆಯ ಮುಂಜಾನೆಯಲ್ಲಿ ಇವರ‍್ಯಾರಪ್ಪಾ ಮಂಗನಟೊಪ್ಪಿ ಗಿರಾಕಿಗಳು ಎಂಬ ಕುಹಕ, ಕುತೂಹಲದಿಂದ ಅವರತ್ತ ನೋಡಿದರೆ ಇಬ್ಬರೂ ಮುಖ ತಿರುಗಿಸಿಕೊಳ್ಳೋದಾ! ನಾನೆಂತ ಇವರಿಗೆ ಹುಡುಗಿ ಹುಡುಕಿ ಮದುವೆ ಮಾಡಿಸುತ್ತೇನೇನೋ ಎಂಬಂಥ ನಾಚಿಕೆಯಾಕೆ!? ತಥ್ ತೇರಿಕಿ ಎಂದು ಗಾಡಿಯನ್ನು ನಿರ್ಜನ ರಸ್ತೆಯ ಮತ್ತೂ ಆಳಕ್ಕೆ ನುಗ್ಗಿಸಿದೆ.
ಮುಂದೆಂದೋ, ಯಾರಿಗೋಸ್ಕರವೋ ನಡೆಯಲಿದ್ದ ಸನ್ಮಾನವೊಂದಕ್ಕೆ ಶುಭ ಕೋರಿ ಅವಿಭಜಿತ ಜಿಲ್ಲೆಯ ಮುಖಂಡರೆಲ್ಲ ತಮ್ಮ ಫೊಟೋಗಳೊಂದಿಗೆ ಪ್ರಕಟಿಸಿದ್ದ ಶುಭಾಶಯ ಫಲಕಗಳನ್ನು ರಸ್ತೆ ಬದಿ ನಿಲ್ಲಿಸುವ ತಯಾರಿಯಲ್ಲಿ ಯಾರೋ ನಾಲ್ಕೈದು ದ್ವಿತೀಯದರ್ಜೆ ನಾಗರಿಕರು ನಿರತರಾಗಿದ್ದರು. ನಮ್ಮೂರ ಹೊಳೆಗೆ ಬ್ರಿಜ್ ಕಟ್ಟುವ ಕಾಯಕಕ್ಕೆ ಬಂದ ವಲಸೆ ಕಾರ್ಮಿಕರಿಗೆ ದಿನಕ್ಕೆ ಸಾವಿರ ರೂ. ಕೂಲಿಯಂತೆ, ಇವರಿಗೆಷ್ಟಿರಬಹುದು? ಕೇಳೋಣವೆಂದುಕೊಂಡರೂ, ಹೊಡೆತ ತಿನ್ನದೇ ಯಾವುದಾದರೂ ಹೊಟೆಲ್‌ನಲ್ಲಿ ಅನ್ನವನ್ನೇ ತಿಂದು ಸುರಳೀತ ಮನೆಗೆ ಹೋಗುವ ಅಚಲ ಧೈರ್ಯದೊಂದಿಗೆ ಮುಂದೆ ಸಾಗಿದೆ. ಅಂತೂ ಹೊಸದಾಗಿ ನೆಟ್ಟಿದ್ದ ಲೈಟು ಕಂಬಗಳನ್ನು, ಬಿಳೀ ಬಣ್ಣವನ್ನು ಸೀರೆ ಬಾರ್ಡರಿನಂತೆ ಬಳಿದುಕೊಂಡಿದ್ದ ರಸ್ತೆಯನ್ನೂ ವೀಕ್ಷಿಸುವ ಹೊತ್ತಿಗೆ ಹಸಿವಾದಂತಾಗಿತ್ತು. ಆದರೂ ಅಬ್ಬಬ್ಬಾ ಅಂದರೂ ಹತ್ತು ಲಕ್ಷ ಜನಸಂಖ್ಯೆ ಇರದ ತಾಲೂಕಿನ ಕೇಂದ್ರ ಪೇಟೆಯಲ್ಲಿ ರಾತ್ರಿ ಓಡಾಡುವ ನೂರೈವತ್ತು ಮಂದಿಗಾಗಿ ಇಷ್ಟೆಲ್ಲಾ ದೀಪ ಬೇಕಿತ್ತೇ ಎಂಬ ಎಡಬಿಡಂಗಿ ಮನಸ್ಸನ್ನು ಸುಮ್ಮನಿರಿಸಲು ರಾತ್ರಿ ಅದೊಂದು ಘಟನೆ ನಡೆಯಬೇಕಾಯ್ತು ನೋಡಿ. ಅದೇನಪಾ ಅಂದ್ರೆ... ಕಡಿಗ್ ಹೇಳ್ತೆ ತಡೀರಿ.
ಹಿಂಗೆ ನಗರ ಸಂಚಾರ ಮಾಡಿಕೊಂಡು ನಗರದ ಅಚ್ಚಹೊಸ ರೆಸ್ಟಾರೆಂಟಿನಲ್ಲಿ ದುಬಾರಿ ಊಟ ಮಾಡಿ ಹೊತ್ತು ಹೋಗದೆ ಅದೇ ಹೊಟೆಲಿನ ಲಾಂಜಿನಲ್ಲಿ ಕುಂತವನಿಗೆ ಅತ್ತಿತ್ತ ಕುಂತವರ ಗಾಸಿಪ್ಪುಗಳು ಭಾರೀ ಮಜ ಕೊಡುತ್ತಿದ್ದವು. ಆಗಲೇ ಹೇಳಿದ ಸನ್ಮಾನ ಕಾರ್ಯಕ್ರಮಕ್ಕೆ ಸೊಸೈಟಿಯ ಮಂದಿ, ಪಂಚಾಯತಗಳ ಜನಪ್ರತಿನಿಧಿಗಳೆಲ್ಲ ಯಥಾನುಶಕ್ತಿ ದೇಣಿಗೆ ನೀಡಿದ್ದಾರೆಂದು ಯಾರೋ ಹೇಳಿದರೆ, ಮತ್ಯಾರೋ ಒಬ್ಬ ಇದು ಪಕ್ಕಾ ಆ ಮಹಾನುಭಾವರ ರಿಟೈರ್‌ಮೆಂಟ್ ಪಾರ್ಟಿ ಎಂದು ಘೋಷಿಸುತ್ತಿದ್ದ. ಇನ್ಯಾರೋ ಹದಾ ವಯಸ್ಸಾದ ತರುಣ ತನ್ನ ಬೇನಾಮಿ ರಿಯಲ್ ಎಸ್ಟೇಟಿಗೆ ಈ ಜಿಲ್ಲಾ ವಿಭಜನೆಯಿಂದ ಹೇಗೆ ಲಾಭವೆಂದೂ, ಅತಿಕ್ರಮಣದ ಜಮೀನುಗಳು ಸಕ್ರಮವಾದರೆ ತಾನು ಐನೂರು ಎಕರೆ ಒಡೆಯನೆಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಅಸಲಿಗೆ ವಾಣಿಜ್ಯ ಬೆಳೆಗಳ ಕೃಷಿಯಿಂದಲೇ ತಡೆದುಕೊಂಡಿರುವ ಆರ್ಥಿಕತೆಯ ಈ ತಾಲೂಕನ್ನು ಯಾವ ಖುಷಿಗೆ ಒಡೆಯುತ್ತಾರೋ, ಅರಣ್ಯದಿಂದಲೇ ಹೆಸರಾದ ಜಿಲ್ಲೆಯ ಅತಿಕ್ರಮಿತ ಜಾಗಗಳನ್ನು ಮಾಲಕಿ ಜಮೀನೆಂದು ಘೋಷಿಸಿದರೆ ಸಿಗುವ ರಾಜಕೀಯ ಲಾಭ ಸೂಕ್ಷ್ಮ ಪರಿಸರದ ಮೇಲೆ ಅದೆಂಥ ಪರಿಣಾಮ ಬೀರಬಹುದೋ ಎಂಬ ಯೋಚನೆ ಕಂಗಾಲು ಮಾಡಿದರೂ ಭಾನುವಾರವೂ ಮಜ ಕೊಡುವ ಸಂಭಾಷಣೆಗಳಾಗಿದ್ದವವು. ಸ್ವಲ್ಪ ಹೊತ್ತು ಮೊಬೈಲು ಪೆಲ್ಟಿ ಬೇಜಾರು ಬಂದಿತ್ತು. ಅಷ್ಟೊತ್ತಿಗೆ ಗೆಳೆಯರು ಎಂದೇ ಜನ ಭಾವಿಸುವ ಫೇಸ್ಬುಕ್ ಲಿಸ್ಟಿನಲ್ಲಿರುವ ಮಂದಿ ಹೊಗಳುತ್ತಿದ್ದ ಚಲನಚಿತ್ರವೊಂದು ಪೇಟೆಯ ಏಕೈಕ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದೆಯೆಂದೂ, ನಾನು ಪೇಟೆಗೆ ಬರಲು ಮುಖ್ಯ ಕಾರಣವೇ ಅದೆಂದೂ ನೆನಪಾಗಿ ಬ್ಲ್ಯಾಕಲ್ಲಿ ಟಿಕೆಟು ಪಡೆಯಲು ಹೊರಟೆ.
ಗಾಡಿಗೆ ಹೆಲ್ಮೆಟ್ಟು ಜೋತಾಕಿ ಬೈಕಿನ ಸ್ಟ್ಯಾಂಡು ನೆಲಕ್ಕೂರುವ ಮೊದಲೇ ಪಾರ್ಕಿಂಗಿಗೆ ಇಪ್ಪತ್ತು ಎನ್ನುತ್ತ ಒಬ್ಬ ಬಂದ. ಪರ್ಸಿಂದ ನೋಟು ತೆಗೆಯುತ್ತಲೇ, ‘ಎಂತ ಒಳ್ಳೆ ಉಂಟಾ ಪಿಚ್ಚರ್ರು?' ಎಂದು ಮಾತು ತೆಗದೆ. ‘ಭಾರಿ ಛಲೋ ಅದ್ಯಂತೆ, ಕೊರೊನಾ ಬಂದ್ಮೇಲೆ ಇದೇಯಾ ನೋಡಿ ಒಳ್ಳೆ ದುಡ್ಮಾಡ್ಕೊಟ್ಟಿದ್ದು’ ಎನ್ನುತ್ತ ಬಾಲ್ಕನಿಯ ಟಿಕೇಟಿನ ಕಟ್ಟನ್ನೂ ಅವನೇ ತೆಗೆದ, “ಅಲ್ಲಿ ಖಾಲಿ ಆಗದೆ, ಇಲ್ಲೇ ತಗಳಿ" ಎನ್ನುವಾಗ ಅವನ ಕೈ ಚಿತ್ರಮಂದಿರದ ಒಂದು ಮೂಲೆಯಲ್ಲಿದ್ದ ಮಾರುದ್ದದ ಕ್ಯೂ ಹಾಗೂ ನನ್ನ ಪರ್ಸಿನಲ್ಲಿದ್ದ ಇನ್ನೂರರ ನೋಟನ್ನೂ ತೋರಿಸಿತ್ತು. ಅವನ ಧೈರ್ಯದ ಅರ್ಧದಷ್ಟಾದರೂ ನನಗಿದ್ದಿದ್ದರೆ ಎಂದುಕೊಳ್ಳುವಾಗಲೇ, ಮದುವೆಯಾಗಿದ್ದರೂ ಒಬ್ಬನೇ ಪೇಟೆಗೆ ಬಂದ ನನ್ನ ಧೈರ್ಯವೇ ಹೆಚ್ಚಿನದು ಎಂದು ನಗು ಬಂತು.
ಭಯಂಕರ ಛಲೋ ಉಂಟು ಅನ್ನುವಂತಿಲ್ಲದ, ಆದರೆ ಇನ್ನೂರು ರೂಪಾಯಿ ಹೊಗೆ ಅನ್ನುವಂತೆಯೂ ಇಲ್ಲದ ಚಲನಚಿತ್ರವನ್ನು ನೋಡಿ ಹೊರಬಂದಾಗ ಸಂಜೆ ಏಳು ಗಂಟೆ. ಒಂದು ಹದಾ ಕಲ್ಕತ್ತಾ ಪಾನು ಜಡಿದು ಗಾಡಿ ಹತ್ತಿ ಹೊರಡುವುದೆಂದು ತೀರ್ಮಾನವಾಯ್ತು. ಪಾನಂಗಡಿಯಲ್ಲೊಂದಿಷ್ಟು ಕತೆ ಹೊಡೆದು ಹೊರಡುವಷ್ಟರಲ್ಲಿ ಹದಾ ಕಪ್ಪೂ ಆಗಿತ್ತು.
ಬೆಳಕಷ್ಟೆ ಕಮ್ಮಿಯಿರುವ ಹೆದ್ದಾರಿಯಲ್ಲಿ ಎಂಬತ್ತರಲ್ಲಿ ಹೋದ ನಾನು ನಮ್ಮೂರಿಗೆ ಕರೆದೊಯ್ಯುವ ರಸ್ತೆಗೆ ತಿರುಗಿದ ಮೇಲೆ ಕೂ ಹೊಡೆದರೆ ತಿರುಗಿ ಕೂ ಹೊಡೆಯಲೂ ಜನರಿರರು. ಅಂಥ ನಿರ್ಜನ ಮಾರ್ಗದಲ್ಲಿ ಭಾನುವಾರವೂ ವಾಸ್ತವ್ಯ ಹೂಡಿದ್ದರಿಂದ ಚೂರು ಭಯ ತುಂಬಾ ಸಾಮಾನ್ಯವೆಂದೇ ನಾನು ನಂಬಿದ್ದೇನೆ. ಅದು ಬಿಟ್ಟರೆ ಹೆಂಡತಿಗೂ ಹೆದರದ ಗಂಡು ನಾನು, ಬಿಡಿ. ಹಂಗೇ ಎಂಬತ್ತರಲ್ಲಿ ಹೋಗುತ್ತಿದ್ದವನಿಗೆ ಯಾರೋ ಇಬ್ಬರು ಬೈಕ್ ರಿಪೇರಿ ಮಾಡುತ್ತ ರಸ್ತೆಯಲ್ಲಿ ನಿಂತಂತೆ ಕಾಣಿಸಿತು. ಆದರೆ ಇಲ್ಲ ಬಿಡಿ, ಯಾವುದೋ ಬೆಕ್ಕಿನಂಥ ಪ್ರಾಣಿ ಕಣ್ಣು ಕೊಟ್ಟಿದ್ದದು. ಹಂಗೇ ಮತ್ತೊಂಚೂರು ಮುಂದೆ ಹೋದರೆ ನೇರ ರಸ್ತೆಗೆ ಒಂದು ತಿರುವು, ಅದರ ಬೆನ್ನಿಗೇ ಘಟ್ಟವೊಂದು ಸಾಚಿಕೊಂಡು ನಿಂತಂಥ ರಸ್ತೆ. ಆ ಘಟ್ಟದ ತಲೆಗೆ ಯಾರೋ ಪೆಟ್ಟು ಕೊಟ್ಟಂತೆ ಮತ್ತೊಂದು ತಿರುವಿತ್ತು. ಅಲ್ಲಿಯೇ ಈ ಹೆಲ್ಮೆಟ್ಟನ್ನೂ ಹಾಕದೇ ಜೀವದ ಮೇಲೆ ಕಾಳಜಿಯಿಲ್ಲದವರಂತೆ ಗಾಡಿ ಹೊಡೆಯುತ್ತಿದ್ದ ಇಬ್ಬರು ಕಾಣಿಸಿದ್ದು. ತೀರಾ ವೇಗವಾಗಿಲ್ಲದ ಅವರು ಆಗಷ್ಟೇ ಘಟ್ಟ ಹತ್ತಿ ಉಸಿರು ತೆಗೆದುಕೊಳ್ಳುತ್ತಿದ್ದ ನನ್ನ ಗಾಡಿಯನ್ನು ನೋಡಿ ಕೈ ಮಾಡಿದ್ದು. ಎಂಥದೋ ಗಂಭೀರ ಸಮಸ್ಯೆ ಇದ್ದಂತನಿಸಿ ಗಾಡಿಯ ವೇಗವನ್ನು ತಗ್ಗಿಸಿದೆ. ಅದೇ ಕೆಂಪು ಮಂಗನ ಟೊಪ್ಪಿಯವ (ಮಂಗನಟೊಪ್ಪಿಯ ಬಣ್ಣ ಕೆಂಪಾಗಿತ್ತೇ ಹೊರತು ಕೆಂಪು ಮಂಗ ಬಹುಷಃ ಎಲ್ಲೂ ಇರಲಿಕ್ಕಿಲ್ಲ!), ಮತ್ತು ಕರೀ ನಮ್ನಿ ನೀಲಿ ಮಂಗನಟೊಪ್ಪಿಯವ ಸೇರಿ ಹೊರಟಿದ್ದ ಡಿಸ್ಕವರ್ ನಮೂನೆಯ ಬೈಕ್ ಗುರುತು ಸಿಕ್ಕಿತ್ತು. ಸಟಕ್ಕನೆ ಇವರೇ ಕಳ್ಳರಿರಬಹುದೇ? ಎಂದು ಯೋಚಿಸುವಷ್ಟರಲ್ಲಿ ಅವರೇ ಒಂದು ಅಡಿ ಉದ್ದದ ಚಾಕು ತೆಗೆದು ಕನ್ಫರ್ಮು ಮಾಡಿದ್ದಕ್ಕಾಯ್ತು, ಇಲ್ಲವಾದರೆ ಅವರೇ ಕಳ್ಳರಿರಬಹುದಾ ಎಂಬ ಗೊಂದಲ ನಿವಾರಣೆಯಾಗದೇ ಉಳಿದುಬಿಡುತ್ತಿತ್ತು! ಕಾಯಮ್ಮು ಸಂಚಾರಿಯಾದ ನನಗೇ ಈ ಅಪರಿಚಿತ ಕಳ್ಳರು ಚಾಕು ತೋರಿಸಿದರೆ ಬಿಟ್ಟೇನಾ? ಕಡಿಯೆದ್ದ ಹಾಳು ರಸ್ತೆಯಲ್ಲಿ ಹಂಗೇ ದೂಳೆಬ್ಬಿಸಿ ಗಾಡಿಯ ವೇಗ ಹೆಚ್ಚಿಸಿದೆ. ನಾನೋದಿದ್ದ ವಾಟ್ಸಪ್ ಮೆಸೇಜಿನಲ್ಲಿದ್ದಂತೆ ಎಂಬತ್ತರಲ್ಲಿ ಬಂದು ಗಾಡಿ ಚಾವಿ ತೆಗೆವ ಸಾಹಸ ಮಾಡಲಿಲ್ಲ! ಇನ್ನೇನು ನಮ್ಮೂರನ್ನು ಸಂಪರ್ಕಿಸುವ ಒಳದಾರಿಯ ಬಳಿ ಬಂದೆ ಎನ್ನುವಷ್ಟರಲ್ಲಿ ಮೋಟುದ್ದದ ಮೊಲವೊಂದು ಎಲ್ಲಿಂದ ಬಂತೋ ಏನೋ, ನಾನು ತಪ್ಪಿಸಿಕೊಂಡೆ. ಕಳ್ಳರ ಗಾಡಿಯಡಿ ಸಿಲುಕಿ ಮೊಲ ಸತ್ತಿತ್ತು. ಹದಾ ಜೋರಿದ್ದ ಕಳ್ಳರ ಗಾಡಿಯೂ ಬಿದ್ದಿತ್ತು.
ಮಾರನೇ ದಿನ ಸ್ಥಳೀಯ ಪತ್ರಿಕೆಯಲ್ಲಿ ಬಂದ ಸುದ್ದಿ, ‘ಪೊಲೀಸರ ಸಿನಿಮೀಯ ಕಾರ್ಯಾಚರಣೆ: ದರೋಡೆಕೋರರ ಬಂಧನ’

Comments

Popular posts from this blog

ವಿದಾಯ...

ಜಮೀನು, ಕೊಡದಲ್ಲ