ಕುಡುಕ ಮಂಜನ ಪ್ರೇಮ ಕಥನ



“ನೀನೆಲ್ಲೋ ನೀಲೇಕಣಿಯ ರಸ್ತೆಯಂಥವಳಿರಬೇಕು,

ನಿನ್ನ ಹಾದು ಹೋದಾಗೆಲ್ಲ 

ಆಲ್ಟೋ ಕಾರಿನಂಥ 

ನನ್ನ ಹೃದಯದಲ್ಲಿ ಧಡಕಿಯಾಗುತ್ತದೆ"

‘ಅಣಾ, ಈಗಿನ್ ಕವಿ ಹೇಳ್ಕಳೋರೆಲ್ಲ ಇನ್ನೂ ಅದೇ ಮುಗಿಲು, ಕಡಲು, ಮನಸು ಹೇಳೆಲ್ಲಾ ಬರ್ಕತ್ತಿದ್ರೆ ಯಾರಿಗ್ ಪುಸ್ತಕ ತಕಂಡ್ ಓದ್ಬಕು ಕಾಣ್ತೇತಿ’ ಅನ್ನುತ್ತ ಮೇಲಿನಂತೆ ತನ್ನ ಆಧುನಿಕ ಉಪಮೆಯನ್ನು ಹೇಳಿದ್ದ ಮಂಜ ಸಿಗದೇ ನಾಲ್ಕೈದು ವರ್ಷಗಳಾಗಿದ್ವು. ಹೋದ ತಿಂಗಳು ಅವನ ದರ್ಶನವಾಗಿದ್ದು ಅನಿರೀಕ್ಷಿತವೂ, ಆಘಾತಕರವೂ ಆಗಿತ್ತು.

ನಾನು ಮೂವತ್ನಾಲ್ಕರ ಪ್ರಾಯದಲ್ಲಿದ್ದಾಗ ಮಂಜನಿನ್ನೂ ಹೈಸ್ಕೂಲಿಗೆ ಹೋಗುತ್ತಿದ್ದ ಹುಡುಗ. ಅವನ ತಂದೆ ವಾರಕ್ಕೊಮ್ಮೆಯಾದ್ರೂ ಪೇಟೆಗೆ ಹೋಗಲೆಂದು ನನ್ನ ಗಾಡಿಯನ್ನೇ ಕಾದು ನಿಂತಿರುತ್ತಿದ್ದ ಆತ್ಮೀಯ. ಮೆರವಣಿಗೆಯ ಮಕ್ಕಳಂತೆಯೇ ಹತ್ತಿರ ಶಾಲೆಯಿಲ್ಲದೆ ಭಟ್ರಕೇರಿಯ ಹೈಸ್ಕೂಲಿಗೆ ಹೋಗುವ ಅನಿವಾರ್ಯತೆ ನಾಲ್ಕಳ್ಳಿಯ ಗೌಡ್ರಕೇರಿ ಮಂಜನಿಗೂ ಇತ್ತು. ಓದಲು ಚುರುಕಾಗಿದ್ದನಷ್ಟೇ ಅಲ್ಲದೆ ಸಾಹಿತ್ಯದಲ್ಲಿ ಅದೆಂಥದೋ ಆಸಕ್ತಿಯಿದ್ದಂತೆ ಕಾಣುತ್ತಿದ್ದ. ಶನಿವಾರವೋ, ರವಿವಾರವೋ ಅವರೂರ ಕೆರೆಯ ಸಮೀಪ ನಾನು ಪಕ್ಷಿ ವೀಕ್ಷಣೆಗೆ ಹೋದಾಗೆಲ್ಲ ಸಿಗುತ್ತಿದ್ದ ಮಂಜ ಬುಲ್‌ಬುಲ್ ಹಕ್ಕಿಯ ಗೂಡೆಲ್ಲಿದೆ, ಸುಟ್ರಾನಕ್ಕಿ ಮೊಟ್ಟೆ ಎಲ್ಲಿಟ್ಟಿದೆ ಎಂಬೆಲ್ಲ ಪ್ರಶ್ನೆ ಕೇಳುತ್ತ ಸೊಕಾಶ ಪುಸ್ತಕಗಳ ವಿಷಯಕ್ಕೆ ಬರುತ್ತಿದ್ದ. ಆ ಹೊತ್ತಿಗಾಗಲೇ ತೇಜಸ್ವಿ, ಬೆಳಗೆರೆ ಮೊದಲಾದವರ ಆಸಕ್ತಿ ಕೆರಳಿಸುವ ಲಘು ಸಾಹಿತ್ಯವನ್ನೆಲ್ಲ ಓದಿದ್ದವನಿಗೆ ಸ್ವಪ್ನ ಸಾರಸ್ವತ, ಕೇಂದ್ರ ವೃತ್ತಾಂತ, ಹುಚ್ಚು ಮನಸ್ಸಿನ ಹತ್ತು ಮುಖಗಳು ಮೊದಲಾದ ಪುಸ್ತಕಗಳನ್ನು ಕೈಗಿಟ್ಟು ನಾನೇ ತಪ್ಪು ಮಾಡಿದೆನೇನೋ ಎಂಬಷ್ಟು ಗಂಭೀರ ಸಂಭಾಷಣೆ ಶುರುವಾಗಿದ್ದು ಪರಿಚಯವಾದ ಆರೇಳು ತಿಂಗಳ ನಂತರ. ನಿಧಾನವಾಗಿ ಡಬಲ್ ಅಂಟಾಂಡ್ರೆ, ಸಿಲೆಬಲ್ ರೈಮ್, ರೈಮ್ ಸ್ಕೀಮ್, ಮೆಟಾಫರ್, ಲಿರಿಕಲ್ ಸ್ಟೋರಿ ಟೆಲ್ಲಿಂಗ್, ಅಲ್ಲಿಟರೇಶನ್ ಎಂದೆಲ್ಲ ತಲೆ ತಿನ್ನಲು ಶುರು ಮಾಡಿದ್ದ. ಹಿಪ್‌ಹಾಪ್ ಕಲ್ಚರು ಮಂಜನಿಗೆ ಅದೆಷ್ಟು ಬೇಗ ಆಪ್ತವಾಯ್ತೆಂದ್ರೆ, ಮಾತೆತ್ತಿದರೆ ಕನ್ನಡದಲ್ಲಿ ರೈಮ್ ಸ್ಕೀಮೇ ಸರಿಯಾಗೋದಿಲ್ಲ ಎಂದು ಭಾಷೆಯ ಬಗ್ಗೆಯೇ ಕಂಪ್ಲೇಂಟು ಮಾಡುತ್ತಿದ್ದ. ಆಗಲೇ ನವ್ಯಕವಿಗಳ ಪದ್ಯ ರಚನೆಯ ಬಗ್ಗೆ ಕೋಪ ಬರಲು ಶುರುವಾಗಿದ್ದು.

ಅದಾದಮೇಲೆ ಕೆಲಸದ ನಿಮಿತ್ತ ನಾನು ಊರು ಬಿಡಬೇಕಾಯ್ತು. ಕೆಳ ಮಧ್ಯಮ ವರ್ಗದ ಮಕ್ಕಳಿಗೆ ಇನ್ನೂ ಐಶಾರಾಮ್ಯವಾಗಿದ್ದ ಮೊಬೈಲು ಮಂಜನನ್ನು ಹೊಂದಿರದಿದ್ದರಿಂದ ನಮ್ಮ ಸಂಪರ್ಕವೂ ಕಡಿತಗೊಂಡಿತ್ತು. ಯಾವತ್ತೋ ಊರಿಗೆ ಬಂದಾಗ, ಮಂಜನೂ ಓದನ್ನು ಬಿಟ್ಟು ಘಟ್ಟದ ಕೆಳಗೆ ಬೋಟಿಗೆ ಹೋದನೆಂದೂ, ಮಳೆಗಾಲ ಶುರುವಾದಮೇಲೆ ಮರಳಬಹುದೆಂದೂ ಮಾಹಿತಿ ಸಿಕ್ಕಿತೇ ಹೊರತು ಅವನ ದರ್ಶನವಾಗಿರಲಿಲ್ಲ.

ನಾಲ್ಕು ವರ್ಷಗಳ ಕ್ಯಾಲೆಂಡರು ಬಚ್ಚಲೊಲೆಯ ಬೆಂಕಿ ಹೊತ್ತಿಸಿ ಖಾಲಿಯಾದಮೇಲೆ ಮತ್ತೆ ನಾನು ಊರಿಗೆ ಮರಳಿದ್ದೆ. ಅಷ್ಟೊತ್ತಿಗೆ ಮಂಜನೆಂಬ ವ್ಯಕ್ತಿ ಮರೆತೇ ಹೋಗಿದ್ದ.

ಮಂಜನನ್ನು ಮತ್ತೆ ನೋಡಿದ್ದು ನಾನು ಊರಿಗೆ ಮರಳಿದ ನಾಲ್ಕೈದು ತಿಂಗಳುಗಳ ನಂತರ, ವೈಶಾಖದ ಶಾಖ ಹೆಚ್ಚಾಗಿ ಮಲೆನಾಡಿನಲ್ಲಿ ಮಾರುತದ ಒತ್ತಡ ಕಡಿಮೆಯಾಗಿ ಸಂಜೆ ಹೊತ್ತಿಗೆ ಗುಡುಗುತ್ತಿದ್ದ ಹೊತ್ತಲ್ಲಿ.

ಆವತ್ತೊಂದು ಸಂಜೆ ಮಳೆ ಬಿದ್ದು ನಿಂತಿತ್ತು. ಪೇಟೆಯ ಬಸ್‌ಸ್ಟ್ಯಾಂಡ್ ಹತ್ತಿರದ ನೈಟ್ ಕ್ಯಾಂಟೀನಿನ ಎದುರಿನ ರಸ್ತೆ ಗುಂಡಿಗಳಲ್ಲಿ ನೀರು ನಿಂತು ಹೆಡ್‌ಲೈಟು ಬೆಳಕು ಕುಣಿಯುತ್ತಿತ್ತು. ಚರಂಡಿಯ ನೀರು ಮಳೆ ನೀರಿನೊಂದಿಗೆ ಬೆರೆತು ಅಸಹ್ಯ ವಾಸನೆಯೊಂದು ಹಬ್ಬಿ ಪೇಟೆಯೆಂದರೆ ಇದೇ ಎಂದು ಘೋಷಿಸುತ್ತಿದ್ದವು. ಯಾರದೋ ಬಾಯಿ ಸೇರಿ ಹೊಟ್ಟೆಯಲ್ಲಿ ಉರಿಯುತ್ತಿರುವ ಎಣ್ಣೆಯ ವಾಸನೆ ಆ ಸಂಜೆಗೆ ವಿಚಿತ್ರ ದಣಿವುಂಟುಮಾಡಿರಬಹುದೆಂದು ನಾನು ಭಾವಿಸಿದ್ದೆ.

ಆಗ ದೂರದಿಂದ ಇಂಜಿನು ಸೀಜಾದ ಪಲ್ಸರ್ ಬೈಕಿನ ಗದ್ದಲ ಕೇಳಿಸಿತು.

ನೀಲಿ ಬಣ್ಣದ ಪಲ್ಸರ್ ೨೨೦ ಬಂದು ಅಂಗಡಿಯ ಮುಂದಿನ ರಸ್ತೆ ಗುಂಡಿಯನ್ನು ತುಂಬಿ ನಿಂತಿತು. ಬೈಕಿನಿಂದ ಇಳಿದವನನ್ನು ಮೊದಲ ಕ್ಷಣ ಗುರುತಿಸಲಾಗಲಿಲ್ಲ. ಕಿವಿಯನ್ನು ಮುಚ್ಚಿ, ಕಣ್ಣುಗಳನ್ನು ಮರೆಮಾಡುವತ್ತ ಶ್ರಮಿಸುತ್ತಿದ್ದ ಕೂದಲು, ಅದೇ ಮರೆಯಿಂದ ಹೊರಬಿದ್ದ ಕಣ್ಣುಗಳ ಕೆಳಗೆ ಕತ್ತಲನ್ನೂ ನಾಚಿಸುವ ಕಪ್ಪು ವಲಯ, ಇಲಿ ಹೆರೆದು ಬಿಟ್ಟಂತೆ ಅರೆಬೆಳೆದ ಗಡ್ಡ, ಆದರೆ ನಗುವಿನೊಳಗೆ ಹಳೆಯ ಚುರುಕು ಇವನು ಮಂಜನಿರಬಹುದೆಂದು ಹೇಳುತ್ತಿದ್ದವು. ನನಗೆ ಹೆಚ್ಚು ಶ್ರಮ ಕೊಡಬಾರದೆಂದೇ ಮಾತನಾಡಿದ ಧ್ವನಿಯು,

“ಅಣಾ, ಗುರ‍್ತ್ ಸಿಕ್ತಾ?" ಎಂದು ತಾನೇ ಮಂಜನೆಂದು ಖಚಿತಪಡಿಸಿತ್ತು.

ಒಂದು ಕ್ಷಣ ನನಗೆ ಹದಿನೈದು ವರ್ಷದ ಹುಡುಗನ ಮುಖವೇ ನೆನಪಾಯಿತು. ಕೆರೆಯ ದಡದಲ್ಲಿ ನಿಂತು “ಸುಟ್ರಾನಕ್ಕಿ ಮೊಟ್ಟೆ ಎಲ್ಲಿಡುತ್ತೆ?" ಎಂದು ಕೇಳುತ್ತಿದ್ದ ಹುಡುಗ.

“ಎಂತದೋ ಮಂಜಾ ಇದು?" ಎಂದು ಕೇಳಿದೆ.

ಅವನು ನಕ್ಕ.

“ಲೈಫು ಅಣಾ, ಕವಿತೆ ಖಾಲಿಯಾದ್ಮೇಲೆ ಹೆಂಡದಂಗಡೀನೇ ಕಾವ್ಯ" ಎಂದ, ನಾನು ನಗಲಿಲ್ಲ.

ಆ ಸಂಜೆ ಹೆಚ್ಚು ಮಾತನಾಡದೆ, ನಾಳೆ ಸಿಗ್ತೆ ಎಂದು ಹೇಳಿ ಹೊರಟುಬಿಟ್ಟೆ. ಬೆಳಿಗ್ಗೆ ಕೆಲಸಕ್ಕೆ ಹೊರಟ ಊರ ಹುಡುಗರ ತಂಡ ನಮ್ಮ ಅಂಗಳದೆದುರು ಪಾಸ್ ಆಗುವಾಗ ಥಟ್ಟನೆ ಮಂಜನ ನೆನಪಾಗಿ ತಡೆದೆ. ಆ ಮಂಜ ಎಂತಕ್ಕೆ ಹಾಂಗಾಗನ್ರ? ಎಂದು ಪ್ರಶ್ನಿಸಿದೆ. ಅವನ ಬಗ್ಗೆ ಅವರೆಲ್ಲ ಮಿಶ್ರ ಸ್ವರದಲ್ಲಿ ಹೇಳಿದ್ದು ಒಂದೊಂದಾಗಿ ನನ್ನೊಳಗೆ ಜಮೆಯಾಗತೊಡಗಿದವು.

“ಅಣ್ಣಾ, ಮಂಜ ಫುಲ್ ಹಾಳಾಗಿಬಿಟ್ಟ."

“ಗಾಂಜಾ ಸೇದುತ್ತಾನೆ."

“ಘಟ್ಟದ ಕೆಳಗೆ ಬೋಟಿಗೆ ಹೋದಾಗಲೇ ಕಲಿತಿದ್ದಾನೆ."

“ಹುಡುಗಿಯರ ಚಟ ಜಾಸ್ತಿ."

“ರಾತ್ರಿ ಬೈಕ್ ಹೊಡೀತಾ ಊರು ತಿರ್ಗ್ತಾನೆ, ಹಿಂದ್ಬದಿಗೆ ಯಾರೋ ನೂರ್ ರೂಪಾಯಿಯವ್ಳು"

“ಆ ಹುಡುಗಿ ಬಂದೋದ್ಮೇಲೆ ಹಿಂಗಾದ" ಅಂದ ಮತ್ತೊಬ್ಬ.

ಕೊನೆಯ ಮಾತು ನನ್ನ ಗಮನ ಸೆಳೆಯಿತು.

“ಯಾವ ಹುಡುಗಿ?"

“ಮೆರವಣಿಗೆಯ ಕಡೆ ಒಬ್ಬಳು. ಕಾಲೇಜಿಗೆ ಹೋಗ್ತಿದ್ದಳು. ಅವಳಿಗೋಸ್ಕರ ಫುಲ್ ಹುಚ್ಚಾಗಿದ್ದ ಅಂತಾರೆ... ಇದಾ ಅವಸ್ಥೆ ಎಂದು ನನ್ನೊಳಗೆ ಖೇದ ತುಂಬತೊಡಗಿತು. 

ಆ ರಾತ್ರಿ ಕಾರ್ತಿಕ ಮಾಸದ ಕೊನೆಯ ವಾರ. ನಾನು ಪೇಟೆ ಕೆಲಸ ಮುಗಿಸಿಕೊಂಡು ಊರಿಗೆ ಹೊಂಟಾಗಲೇ ರಾತ್ರಿ ಹನ್ನೊಂದೂವರೆ. ರಸ್ತೆಯ ಎರಡೂ ಬದಿಯ ಕಾಡು ಇಬ್ಬನಿಯಿಂದ ಒದ್ದೆಯಾಗಿತ್ತು. ಬೈಕಿನ ಹೆಡ್‌ಲೈಟ್ ಬೀಳುವಷ್ಟು ಜಾಗದಲ್ಲಿ ಮಾತ್ರ ಜಗತ್ತು ಬಾಕಿಯಿದ್ದಂಗೆ ಅನಿಸುತ್ತಿತ್ತು.

ಸೂಳೆಕೆರೆಯ ಹತ್ತಿರ ರಸ್ತೆಬದಿಯಲ್ಲಿ ಪಲ್ಸರ್ ಬೈಕ್ ನಿಂತಿತ್ತು, ಬಣ್ಣ ನೋಡಿಯೇ ಇದು ಕುಡುಕ ಮಂಜನದ್ದು ಎಂಬುದು ಖಾತ್ರಿಯಾಗಿತ್ತು.

“ಅಂವ ಸೂಳೆಕೆರೆ ಕಾಡೊಳ್ಗೆ ಅಟ್ಟ ಮಾಡ್ಕಂಡಿದಾ" ಎಂದು ಪರಮ ಹೇಳಿದ್ದು ನೆನಪಾಯ್ತು. ಸವೆದ ಕಾಲುಹಾದಿಯನ್ನೇ ಅನುಸರಿಸಿ ಕಾಡಿನೊಳಗೆ ಸ್ವಲ್ಪ ದೂರ ನಡೆದೆ. ಒದ್ದೆ  ಎಲೆಗಳ ಮೇಲೆ ಕಾಲಿಟ್ಟ ಶಬ್ದವೂ ದೊಡ್ಡಕೆ ಕೇಳಿಸುವಷ್ಟು ನೀರವ. ಸ್ವಲ್ಪ ಒಳಗೆ ಒಂದು ಸೋಗೆಮಾಳ ಕಂಡಿತು. ಒಳಗೆ ಮಂದ ಬೆಳಕು. ಮಂಜನ ಧ್ವನಿ ಕೇಳಿಸಿತು.

“ಇವತ್ಯಾರ ಸಂತಿಗೆ ಹೋಗಿದ್ಯೇ..." ಎಂಬ ಸಾಲಿನ ಮುಂದೆ ದೇಹ ಮಾರಿ ಬದುಕುವ ವೃತ್ತಿಸೂಚಕ ಶಬ್ದವಿತ್ತು.

“ನೀ ದೊಡ್ಡ ದೇವತೆನಾ? ನಿನ್ನಂಥವ್ರನ್ನ ನಾನು ತುಂಬ ನೋಡಿದ್ದೀನಿ. "

ಮಧ್ಯೆ ಮಧ್ಯೆ ಹೆಣ್ಣಿನ ಅಳುವಿನ ಶಬ್ದ.

“ಫೋನ್ ತಗೋಂಡು ಮಾತಾಡೋವಾಗ ಪ್ರೀತಿ? ಈಗ ಮದುವೆ ಮಾತು ಬಂದಾಕ್ಷಣ ಮನೆ ಗೌರವ!"

ಮಂಜನ ಧ್ವನಿಯಲ್ಲಿ ಕುಡಿತ ಮಾತ್ರವಲ್ಲ, ಒಡೆದುಹೋದ ಹೃದಯದ ಚೂರೊಂದು ಹೊಕ್ಕಿದಂತಿತ್ತು. ಆದರೆ ಆತನ ಶಬ್ದ ಬಳಕೆ? ಅಸಭ್ಯ, ಅಸಹ್ಯ.

 ನಾನು ಒಳಗೆ ಹೋದೆ. ಅವನು ತಿರುಗಿ ನೋಡಿ ಪೆಚ್ಚುನಗೆ ನಕ್ಕ.

“ಅಯ್ಯೋ ಬನ್ನಿ ಅಣಾ, ನಂದೂ ಒಂದು ಪೊಯೆಟ್ರಿ ಸೆಷನ್ ನಡೀತಾ ಅದೆ."

“ಎಂಥ ಹೊಲ್ಸಾ ಇದು ಮಂಜಾ?" ಎಂದೆ.

“ಲವ್ ಸ್ಟೋರಿ ಅಣಾ" ಎಂದನವನು. “ಆದ್ರೆ ಕ್ಲೈಮ್ಯಾಕ್ಸೇ ಸರಿಯಾಗಿ ಸಿಗ್ತಿಲ್ಲ" ಎಂದು ಮುಂದುವರಿಸಿದ್ದ.

“ಮೊದಲು ಆ ಹುಡುಗಿಗೆ ಬಯ್ಯೋದ್ ನಿಲ್ಲಿಸು" ಎಂದೆ.

ಅವನು ನಗುತ್ತಲೇ, “ಅಣಾ, ಪ್ರೀತಿಲಿ ಗೌರವ ಇರೋದಿಲ್ಲ. ಓನರ್‌ಶಿಪ್ ಮಾತ್ರ ಇರುತ್ತೆ."

“ಕುಡಿದಿದಿಯಾ?"

“ಸ್ವಲ್ಪ."

“ಗಾಂಜಾ?"

ಅವನು ಉತ್ತರಿಸಲಿಲ್ಲ.

ನಾನು ಗಟ್ಟಿಯಾಗಿ ಹೇಳಿದ್ದೆ, “ಹೆಣ್ಣುಮಕ್ಕಳಿಗೆ ಈ ತರ ಬೈಯೋದು ದೊಡ್ಡತನ ಅಲ್ಲ. ಇನ್ನೊಂದ್ಸಲ ಹಂಗಿದ್ ಮಾತು ಕೇಳಿದ್ರೆ ಇಲ್ಲೇ ಹುಗ್ದಾಕ್ತೆ"

ಅವನು ಕ್ಷಣ ಮೌನವಾಗಿದ್ದ.

ಆಮೇಲೆ ನಿಧಾನವಾಗಿ, ಅಳುವವನಂತೆ “ಅಣಾ, ಅವಳು ನನ್ನತ್ರ, ನಿನ್ನ ಕವಿತೆ ಕೇಳಿದ್ರೆ ಮಳೆ ಬರೋ ನಮ್ನಿ ಆಗ್ತದೆ ಅಂದಿದ್ಳು" ಎಂದ.

ನಾನು ಏನೂ ಮಾತಾಡಲಿಲ್ಲ.

“ನಾನ್ ನಂಬಿಬಿಟ್ಟೆ"

ಅವನು ನಗಲು ಯತ್ನಿಸಿದ. ಆದರೆ ಕಣ್ಣಲ್ಲಿ ನೀರು ತುಂಬಿತ್ತು.

“ಅವಳಿಗೋಸ್ಕರ ನಾನ್ ಟಿಶರ‍್ಟ್ ಬಿಟ್ಟು ಉದ್ದ ತೋಳಿನ ಅಂಗಿ ತಗೊಂಡೆ. ಪರ್ಫ್ಯೂಮ್ ಹಾಕ್ಕೊಂಡೆ. ಕಾಲೇಜ್ ಮುಂದೆ ಗಂಟೆಗಟ್ಟಲೆ ನಿಂತೆ. ಅವಳು ಮಾತಾಡಿದ ಪ್ರತೀ ಮಾತನ್ನೂ ನೋಟ್ ಮಾಡ್ಕೊಂಡೆ; ಯಾವತ್ತೋ ನನ್ನ ಕಥೇನ ಪಿಚ್ಚರ್ ಮಾಡ್ಬೇಕು ಅಂದ್ಕೊಂಡಿದ್ದೆ, ಹ್ಯಾಪಿ ಎಂಡಿಂಗಿಂದು"

“ಆಮೇಲೆ?"

“ಆಮೇಲೆ ಅವಳಪ್ಪ ಬ್ಯಾಂಕ್ ಕೆಲಸದ ಹುಡುಗನ ಜೊತೆ ಮದುವೆ ಫಿಕ್ಸ್ ಮಾಡಿದ್ರು. ಅದೂ ಫರ‍್ಮನೆಂಟಲ್ಲ, ಬಂದೋರಿಗೆ ಚೆಕ್ ಬರ‍್ಕೊಡೋ ನೌಕರಿ. ಹೆಸ್ರಿಗೆ ಬ್ಯಾಂಕಲ್ಲಿ ನೌಕರಿ."

ಮಿಂಚುಹುಳಗಳ ಬೆಳಕಿಗೆ ಕಾಂಪಿಟೇಶನ್ನು ಕೊಡೋ ಲೆಕ್ಕದಲ್ಲಿ ಅವನು ಸಿಗರೇಟು ಬೆಳಗಿಸಿದ.

“ಕೊನೆಯ ದಿನ ಏನ್ ಹೇಳಿದ್ಲು ಗೊತ್ತಾ ಸಾರ್?"

ಅವನು ನನ್ನತ್ತ ನೋಡಿದ.

“ನಿಂಗೆ ನನ್ಗಿಂತ ಒಳ್ಳೆ ಹುಡ್ಗಿ ಸಿಗ್ತ್ಳು ಅಂದ್ಳಾ?" ಎಂದ ನನ್ನ ದನಿಯಲ್ಲಿ ನಿನ್ನ ಪ್ರಾಯವನ್ನು ನಾನೂ ದಾಟಿ ಬಂದಿದ್ದೇನೆಂಬ ಸಂದೇಶವಿತ್ತು. ಅದು ಅವನಿಗೂ ಗೊತ್ತಾಯಿತೇನೋ, ಮಾತಿನ ಬದಲು ಕಣ್ಣಲ್ಲಿ ನೀರು ಹೊರಬಂದಿತ್ತು.

ಹೊರಗೆ ಇಬ್ಬನಿಯು ಮಾಳದ ಮಾಡನ್ನು ಒದ್ದೆ ಮಾಡಿದ್ದವು, ಒಜ್ಜೆ ಮಾಡಿದ್ದವು. “ಸರಿ, ಮನೆಗೆ ಹೋಗು," ಎಂದು ನಾನು ಹೊರನಡೆದೆ.

ಆದರೆ ಹಿಂದೆ ಮತ್ತೆ ಅವನ ಧ್ವನಿ ಕೇಳಿಸಿತು. ಅವನು ಫೋನ್ ತೆಗೆದು ಯಾರಿಗೋ ಕರೆ ಮಾಡಿದ್ದ.

“ನೀನು ಈಗ ಯಾರ ಜೊತೆ ಮಲಗಿದ್ರೂ ನನಗೇನು? ಆದ್ರೂ ನಾಟಕ ಮಾಡ್ಬೇಡ!"

ಮತ್ತೆ ಅಸಭ್ಯ ಬೈಗುಳ. ನನ್ನ ತಲೆ ಸುತ್ತಿತು. ಹಿಂದಿರುಗಿ ಒಳಗೆ ಹೋಗಿ ಪಕ್ಕದಲ್ಲಿದ್ದ ಹಿಡಿಕುಂಟೆಯಿಂದ ಬೆನ್ನಿಗೆ ಪಟಕ್ಕನೆ ಎರಡು ಬಿಟ್ಟೆ.

ಮಂಜ ಬೆಚ್ಚಿಬಿದ್ದ.

“ಹೆಣ್ಣುಮಕ್ಕಳಿಗೆ ಗೌರವ ಕೊಡೋದು ಕಲ್ತ್ಕ ಮೊದ್ಲು!" ಎಂದು ಚೀರಿದ್ದೆ.

ಅವನ ಕಣ್ಣುಗಳಲ್ಲಿ ಆ ಕ್ಷಣ ಕೋಪ ಇರಲಿಲ್ಲ. ಅವಮಾನ ಮಾತ್ರ ಇತ್ತು.

ಮಾರನೇ ದಿನ ಸೂಳೆಕೆರೆಯ ನಾಲ್ಕು ರಸ್ತೆ ಕೂಡುವಲ್ಲಿ ಜನರ ಮುಂದೆ ಅವನು ಕೂಗಿದ್ದ, “ಅವ್ರಿಗೇ ಅವಳ ಜೊತೆ ಸಂಬಂಧ ಇದೆ! ಅದಕ್ಕೆ ನಿನ್ನೆ ಹೀರೋ ಆಗ್ಬಂದಿದ್ರು!"

ಜನ ನಕ್ಕರು. “ಕುಡ್ಕಂಗೆ ಮಳ್ಳೂ ಹಿಡ್ದದ್ಯಕು" ಎಂದು ಎಲ್ಲರೂ ನಿರ್ಲಕ್ಷ್ಯಿಸಿದ್ದರು.

ಆದರೆ ಆ ದಿನದ ನಂತರ ಮಂಜ ಇನ್ನೂ ಕೆಳಕ್ಕೆ ಇಳಿಯತೊಡಗಿದ್ದ. ಒಮ್ಮೆ ಜಾತ್ರೆಯಲ್ಲಿ ಸಿಕ್ಕ. ಮುಖ ಉಬ್ಬಿಕೊಂಡಿತ್ತು. ಕಣ್ಣು ಮತ್ತಷ್ಟು ಒಳಗೆ ಹೋಗಿತ್ತು. ನಾನು ಮಾತಾಡಿಸೋಕೆ ಹೋಗಲಿಲ್ಲ.

ಅವನಾಗೇ “ಅಣಾ ಹೆಂಡ ಬಿಟ್ಟಿದೆ ಈಗ" ಎಂದ.

ನಾನು ನಂಬಲಿಲ್ಲ.

“ಖರೆವಾಗ್ಲೂವಾ ಅಣಾ, ಈಗ ಕವಳ ಹಾಕೋಕೂ ದುಡ್ಡಿಲ್ಲ."

“ಕೆಲಸ?"

“ಬೋಟಿಗೂ ಹೋಗಿಲ್ಲ ಈಗಿತ್ಲಾಗೆ. ಅಲ್ಲೋದ್ರೆ ಮತ್ತೆ ಚಟ ಹೇಕೊಡ್ತ್ರು" ಅಂದ.

“ಅಮ್ಮ ಮಾತ್ರ ಮಾತಾಡ್ತಾಳೆ. ಅಪ್ಪಂಗೆ ನಾನು ಕಂಪ್ಯೂಟರ್ ಕಲ್ತು ನೌಕರಿ ಮಾಡ್ಬೇಕು ಅಂತಿತ್ತು. ನನ್ ಸಂತಿಗೆ ಹೋದ್ರೆ ತಮ್ನೂ ಹಾಳಾಗ್ತಾ ಅಂತ ಅವ್ನೂ ಮಾತಾಡುಕ್ ಬಿಡೂದಿಲ್ಲ"

ಆಮೇಲೆ ನಿಧಾನವಾಗಿ, “ಐವತ್ತು ರೂಪಾಯಿ ಇದ್ರೆ ಕೊಡಿ ಅಣಾ" ಎಂದ.

“ಕೊಟ್ರೆ ಮತ್ತೆ ಕುಡೀತೆ."

“ಇಲ್ಲ ಅಣಾ, ಇಪ್ಪತ್ ರೂಪಾಯಿ ವಿಮಲ್ ತಗೊಂಡು ಹೊಟ್ಟೆಗೆ ಏನಾದ್ರೂ ತಿಂತೀನಿ."


“ಬಾ ನಾನೇ ಕೊಡಿಸ್ತೆ ಎಂತದು ಹೇಳಿ" ಎಂದೆ. “ನಾನು ಕಡಿಗೆ ಎಂತಾರೂ ತಿಂತೆ, ಈಗ ತಿಂದ್ರೆ ಕಡಿಗೆ ಮತ್ತೆ ಹಸಿವಾಗ್ತದೆ" ಎಂದು ಸಬೂಬು ಹೇಳಿದ್ದು ಇದು ಪಕ್ಕಾ ಅಬಕಾರಿ ಸುಂಕ ವಸೂಲಿ ಕ್ರಮ ಎಂಬುದರ ಅರಿವು ಮೂಡಿಸಿತ್ತು.

ನಾನು ಕೊಡಲಿಲ್ಲ. ಅವನು ನನ್ನ ಹಿಂದೆ ಬರತೊಡಗಿದ.

ಅವನ ಕಣ್ಣುಗಳಲ್ಲಿ ನೀರು ತುಂಬಿತು. “ನಾನು ಸತ್ತೋಗ್ತೀನಿ" ಎಂದ.

ಸಾಯ್ಲತ್ಲಾಗೆ ಎಂದು ಜೇಬಿನಿಂದ ಐವತ್ತು ರೂಪಾಯಿ ತೆಗೆದು ಕೊಟ್ಟೆ.

ಅದೇ ಕೊನೆಯ ಸಂಭಾಷಣೆ. ಮಾರನೇ ದಿನ ಬೆಳಗ್ಗೆ ಊರಲ್ಲಿ ಸುದ್ದಿ ಹರಡಿತ್ತು, ಕುಡುಕ ಮಂಜ ಸತ್ತೋದ್ನಂತೆ ಎಂದು.

ರಾತ್ರಿ ಮತ್ತೆ ಹೆಂಡ ಕುಡಿದಿದ್ದನಂತೆ. ಈಗಾಗಲೇ ಲಿವರ್ ಹಾಳಾಗಿತ್ತಂತೆ. ಹೆಚ್ಚು ಕುಡಿದ ಪರಿಣಾಮ ಉಸಿರು ನಿಂತಿತಂತೆ.


ಕೆಲ ದಿನ ನಿದ್ರೆ ಸರಿಯಾಗಿ ಬರಲಿಲ್ಲ. ನಾನು ಐವತ್ತು ರೂಪಾಯಿ ಕೊಡದೆ ಇದ್ದಿದ್ದರೆ ಬದುಕುತ್ತಿದ್ದನಾ? ಗೊತ್ತಿಲ್ಲ. ಸಾಹಿತ್ಯ ಪರಿಚಯಿಸದಿದ್ದರೆ ನಾನು ಈ ಗಿಲ್ಟಿನಿಂದ ಬಚಾವಾಗುತ್ತಿದ್ದೆನಾ? ಗೊತ್ತಿಲ್ಲ. ಹುಡುಕಿದ ಯಾವ ಉತ್ತರವೂ ನೆಮ್ಮದಿಯನ್ನು ಹುಡುಕಿಕೊಟ್ಟಿಲ್ಲ. ಕೆಲವೊಮ್ಮೆ ಸೂಳೆಕೆರೆಯ ದಡದಲ್ಲಿ ಮಂಜ ನಿಂತಂತೆ ಭಾಸವಾಗುತ್ತಿತ್ತು.

ಅಂದೊಮ್ಮೆ ಬುಲ್‌ಬುಲ್ ಹಕ್ಕಿಯ ಗೂಡು ಹುಡುಕುತ್ತಿದ್ದ ಹುಡುಗ, ಕನ್ನಡದಲ್ಲಿ ರೈಮ್ ಸ್ಕೀಮ್ ಸರಿಯಾಗೋದಿಲ್ಲ ಎಂದು ಭಾಷೆಯನ್ನೇ ಪ್ರಶ್ನಿಸುತ್ತಿದ್ದ ಹುಡುಗ, ಆಲ್ಟೋ ಕಾರಿನಂಥ ನನ್ನ ಹೃದಯದಲ್ಲಿ ಧಡಕಿಯಾಗುತ್ತದೆ" ಎಂದು ಹೇಳಿ ನಗಿಸಿದ್ದ ಹುಡುಗ ಈಗ ನೀಲೇಕಣಿಯ ಕಾಂಕ್ರೀಟು ರೋಡಲ್ಲಿ ತನ್ನ ಪಲ್ಸರ್ ಟೂಟ್ವೆಂಟಿಯನ್ನು ಓಡಿಸುತ್ತಿಲ್ಲ. ನೈಟ್ ಕ್ಯಾಂಟೀನಿನೆದುರಿನ ಹೊಂಡಕ್ಕೆ ಬೈಕ್ ಟೈರ್ ತುಂಬುತ್ತಿಲ್ಲ.  ಮಳೆ ಬರುವಂಥನಿಸುವ ಪದ್ಯ ಬರೆಯುವವ ಈಗಿಲ್ಲ. ವಿಫಲ ಪ್ರೇಮಕ್ಕೆ ಕುಡುಕನಾಗುವುದಿದ್ದರೆ ನಾನೂ ಐದಾರು ಸಲ ಸಾಯುತ್ತಿದ್ದೆ ಎಂಬ ಧೈರ‍್ಯದ ಮಾತು ಹೇಳುವುದಕ್ಕೂ ಮೊದಲೇ ಹೋಗಿಬಿಟ್ಟ. 

ಸಾಯ್ಲಿ ಬಿಡಿ, ಈಗ ಅದೆಲ್ಲಾ ಯಾಕೆ? ನನಗೂ ಮಂಜ ಮರೆತುಹೋಗಿದ್ದಾನೆ. ಆದರೆ ಮಂಜನಂತೆ ಮತ್ಯಾರೂ ಮರೆತುಹೋಗುವಂತಾಗದಿರಲಿ.

Comments

Popular posts from this blog

ಒಂದು ಭಾನುವಾರದ ಕತೆ

ಪದ್ಯದಂಗಡಿ ಮತ್ತು ಅಕ್ಷರ ಮಾರಾಟ