ಪದ್ಯದಂಗಡಿ ಮತ್ತು ಅಕ್ಷರ ಮಾರಾಟ

ಪದ್ಯದಂಗಡಿ, ಹೇಗೆ ಶುರುವಾಯ್ತು, ಯಾವಾಗ ಶುರುವಾಯ್ತು, ಯಾರಿಂದ ಶುರುವಾಯ್ತು..? ಹಿಂಗಿದ್ದೊಂದು ಪ್ರಶ್ನೆ ನಿಮ್ಮಲ್ಲನೇಕರಲ್ಲಿ ಮೂಡಿರಬಹುದು.  ballistic missile ಅವರಂತೂ ದೀರ್ಘ ಬರೆಹವೊಂದನ್ನೇ ಬರೆದುಬಿಟ್ಟಿದ್ದಾರೆ. We are not supposed to hide our identity. ಸ್ವಲ್ಪವಾದರೂ ಬೆಂಬಲಿಗರು ಸಿಗಲಿ, ಆಮೇಲೆ ನಮ್ಮ ವಿವರಗಳನ್ನ ಬಹಿರಂಗಪಡಿಸೋಣ ಅಂತಲೇ ಸುಮ್ಮನಿದ್ದೆವು. ಅಷ್ಟರಲ್ಲಿ ಏನೇನೋ ಚರ್ಚೆಗಳು ನಡೆದವು, ಏಕಮುಖ ಜಗಳಗಳೂ ನಡೆದವು. ಪದ್ಯದಂಗಡಿಯ ಓನರ್ರುಗಳು ಯಾರಂತ ತಿಳಿಯೋ ಮೊದಲೇ ಪದ್ಯದಂಗಡಿಯ ಭಾಗವೊಂದು ದೂರವಾಯ್ತು. ಹೊಸದೊಂದು ಶುರುವಾದಂತೆ ಪರ-ವಿರೋಧ ಚರ್ಚೆಗಳು ಸಾಮಾನ್ಯ. Unconventional ಅಥವಾ ಅಸಾಂಪ್ರದಾಯಿಕ ಯೋಚನೆಗಳಿಗೆ ಪರ ವಹಿಸುವವರಿಗಿಂತ ವಿರೋಧಿಗಳ ಸಂಖ್ಯೆ ಬೇಗ ಬೆಳೆಯುತ್ತದೆ. ಸದಾ ಎತ್ತಿನಗಾಡಿಯನ್ನೇ ಅವಲಂಬಿಸಿ ಪ್ರಯಾಣ ಮಾಡುತ್ತಿದ್ದವರಿಗೆ ಏಕ್ದಂ ಉಗಿಬಂಡಿ ಕಂಡು ಭಯ ಹುಟ್ಟಲಿಲ್ಲವೇ? ಹಾಗೇ ಪದ್ಯದಂಗಡಿಯ ಅಸಾಂಪ್ರದಾಯಿಕ (ಕ್ರಾಂತಿಕರಿ ಅನ್ನಲಾರೆ, ಕಾರಣ ಮುಂದಿದೆ) ಬರೆವಣಿಗೆ ಮಾರಾಟಗಾರರನ್ನು ಕಂಡು ಬರೀ ಪುಸ್ತಕಗಳಿಗಷ್ಟೇ ಒಗ್ಗಿಕೊಂಡಿದ್ದ, ಹೆಚ್ಚೆಂದರೆ ಬ್ಲಾಗುಗಳಲ್ಲಿ ಪುಕ್ಕಟೆಯಾಗಿ ದೊರಕುತ್ತಿದ್ದ 'ಪ್ರವರ್ಧಮಾನ'ಕ್ಕೆ ಬರುತ್ತಿರುವ ಬರೆಹಗಳಗೆ ಒಗ್ಗಿಕೊಂಡಿದ್ದ ಮನಸ್ಸುಗಳು ಬಂಡೆದ್ದವು. ಇದು ನಮಗೂ ಗೊತ್ತಿತ್ತು. ಪ್ರತಿರೋಧಗಳು ಸ್ವಲ್ಪವಾದರೂ ಚರ್ಚಿಸುವ ಮನಸ್ಥಿತಿಯವರಿಂದ ಬರಬಹುದೆಂಬ ನಿರೀಕ್ಷೆಯಿದ್ದ ನಮಗೆ ಮೊದಲ ದಿನ ಅಂದುಕೊಂಡಂತೇ ಇತ್ತು. ಕೆಲವರು ಬರೀ ಹೆಸರು ತಿಳಿಯಲಷ್ಟೇ ಕೆಣಕುವವರಂತೆ ಪೋಸ್ಟುಗಳನ್ನ ಹಾಕಿದರು, ಮತ್ತಷ್ಟು ಮಂದಿ ನಮ್ಮ ಇನ್ಬಾಕ್ಸಿಗೆ ಬಂದು ಇದು ಅಕ್ಷರ ಹಾದರವಲ್ಲವೇ ಅಂತ ಚರ್ಚಿಸಿದರು. ಇವಕ್ಕೆಲ್ಲ ನಾವು ಮೊದಲೇ ಸಿದ್ಧರಾಗಿದ್ದೆವು; ಇದು ಅಕ್ಷರ ಹಾದರವಾಗಲಿಕ್ಕಿಲ್ಲ ಎಂಬುದರ ಬಗ್ಗೆ ಸ್ಪಷ್ಟತೆಯಿದ್ದೇ ಪೇಜನ್ನು ತೆರೆದಿದ್ದು. ಹೀಗೆ ಚರ್ಚೆಗೆ ಬಂದವರಲ್ಲಿ ಬಹುತೇಕರು ನಾವು ಮಾಡುತ್ತಿರುವುದು ಸರಿಯಲ್ಲ ಎಂದು ಮೊದಲೇ ನಿರ್ಧರಿತರಾಗಿದ್ದರಿಂದ 'ಏನ್ ಬೇಕಾದ್ರೂ ಮಾಡ್ಕೊಂಡ್ ಸಾಯ್ರಪಾ' ಅನ್ನೋ ಅರ್ಥದಲ್ಲಿ ಮಾತನಾಡಿ ಮುಂದೆ ವಾದಿಸಲಾರದೇ ಹೋದರು. ಮತ್ತೆ ಕೆಲವರು ನಮ್ಮ ದೃಷ್ಟಿಕೋನದಿಂದಲೂ ಯೋಚಿಸಿ ಇದು ತಪ್ಪಾಗಲಿಕ್ಕಿಲ್ಲ ಎಂದು ಬೆಂಬಲಿಸಿದರು. ಇವರದ್ದು ಒಂದು ಕ್ಯಾಟಗರಿ. ಬೌದ್ಧಿಕವಾಗಿ ಸಮರ್ಥರು ಅನ್ನೋ ಗೌರವ ಇವರ ಮೇಲಿದೆ.
ಆದ್ರೆ, ಎರಡನೇ ದಿನ ಮತ್ತೊಂದು ಕ್ಯಾಟಗರಿಯ ಜನರ ಪರಿಚಯವಾಯಿತು. ಅವರು ನಿಮ್ಮ ಮಾತನ್ನು ಕೇಳಲಾರರು. ನೀವು bioದಲ್ಲಿ ಮೊದಲ ಕನ್ನಡ ಪದ್ಯ ಮಾರಾಟಗಾರು ಅಂತ ಹಾಕ್ಕೊಂಡಿದೀರಿ, ಕನ್ನಡ ಪದ್ಯವನ್ನು ಹೇಗ್ ಮಾರ್ತೀರಿ? ಎಂಬ ಪ್ರಶ್ನೆಯ ಹಿಂದೆ-ಮುಂದೆ ತಮ್ಮದೇ ಹೆಸರೇನೋ ಎಂಬಂತೆ ಸೂ.ಮಗ, ಬೋ.ಮಗ ಎಂಬ ಪದಗಳ ಸೇರಿಸಿ ಮಾತನಾಡಿದ್ರು. ತಾಳ್ಮೆಯಿದ್ದಷ್ಟು ವಿವರಣೆ ನೀಡಲಾಯ್ತು. ನಮ್ಮ ಕೆಲ ಕನ್ನಡ ಪದಗಳ ಅರ್ಥವಾಗದೇ ಮತ್ತಷ್ಟು ಬೈದು ಅದ್ಹೇಗೆ ನಡೆಸ್ತೀರಿ ನೋಡ್ತೇವೆ ಅಂತ ಹೇಳಿ ಮಾಯವಾದ್ರು. ಹೀಗೆ ಒಬ್ಬನೋ, ಇಬ್ಬರೋ ಬಂದಿದ್ದರೆ ಎಲ್ಲ ಸುರಳೀತ ಇರ್ತಿತ್ತೇನೋ. ಒಬ್ಬರ ಪೋಸ್ಟ್ ನೋಡಿ ಮತ್ತೊಬ್ಬರು ಬಂದ್ರು. ಹಿಂಗೇ ಗುಂಪಾಗಿ ಬಂದು ದಾಳಿಯಿಟ್ಟಾಗ ಎಂತ ಮಾಡೋದು? ಎಲ್ಲರಿಗೂ ನಮ್ಮ ಯೋಚನೆಯನ್ನು ತೆರೆದಿಡುವ ಪ್ರಯತ್ನ ಮಾಡಿದ್ದೇ ತಪ್ಪಾಯ್ತೇನೋ ಅನಿಸಿತು. ಕೆಲವರು ಪದ್ಯದಂಗಡಿಯನ್ನ ತೊರೆಯುವಂತಾಯ್ತು.
ಇರ್ಲಿ, ಇದು ಹೇಗೆ ಶುರ್ವಾಯ್ತು ಅಂತ ಹೇಳೋಕೆ ಹೊರಟಿದ್ದೆ. ಹಿಂಗೇ ಹೊತ್ತುಹೋಗದೇ ಕುಂತ ವ್ಯಕ್ತಿಯೊಬ್ಬನಿಗೆ ಹಿಂಗೆ ಮಾಡುವ ಆಲೋಚನೆ ಬಂತು. ಸಮಾನಮನಸ್ಕರ ಜೊತೆ ಸೇರಿ ಮಾತನಾಡಿದಾಗ ಪದ್ಯದಂಗಡಿ ಶುರುವಾಯ್ತು. ಆ ವ್ಯಕ್ತಿಗೂ, ಪದ್ಯದಂಗಡಿಗೂ ಈಗ ಸಂಬಂಧ ಇರದಿರೋ ಕಾರಣಕ್ಕೆ ಅವರ ಹೆಸರನ್ನ ಹೇಳಲಾರೆ. ಶುರುಮಾಡೋ ಮೊದಲು ಅಕ್ಷರ ಹಾದರದ ಆರೋಪ ಬರಬಹುದೇ ಅನ್ನೋ ಆಲೋಚನೆ ಬಂದಿತ್ತು, ಸಾಕಷ್ಟು ಯೋಚಿಸಿ ಶುರುವಾದದ್ದು ಈ ಪದ್ಯದಂಗಡಿ.
ನೀವು ಹಸುವೊಂದನ್ನ ಸಾಕಿದ್ದೀರಿ ಅಂತ ಅಂದುಕೊಳ್ಳೋಣ. ಅಗ್ದಿ ಮಾನವತಾವಾದಿ, ಪ್ರಾಣಿಪ್ರೇಮಿಯಾಗಿದ್ದರೆ ಹಸುವನ್ನ ಸಾಕುತ್ತಿರಲಿಲ್ಲ ಅಲ್ಲವೇ? ಪಕ್ಕಾ ಹಾಲಿಗೆ, ಗೊಬ್ಬರಕ್ಕೆ ಹಸುವನ್ನ ಸಾಕುತ್ತೀರಿ. ಹಸುವಿನ ಹಾಲು ಉತ್ಪತ್ತಿಯಾಗೋದು ಕರುವಿಗೆ ಅಂತ, ಅದನ್ಯಾಕೆ ನಾವು ಉಪಯೋಗಿಸೋದು ಅಂತ ಪೂರ್ತಿ ಹಾಲನ್ನು ಕರುವಿಗೇ ಬಿಡುತ್ತೀರಾ? ಖಂಡಿತ ಇಲ್ಲ. ಕರುವಿಗೆ ಸಾಕಷ್ಟು ಕುಡಿದಾದಮೇಲೆ ಹಾಲನ್ನ ಹಿಂಡಿ ನೀವು ಬಳಸುತ್ತೀರಿ. ಕತೆ ಇನ್ನೂ ಉದ್ದವಿದೆ, ಸದ್ಯಕ್ಕೆ ಇದನ್ನ ನಾನು ಹೇಳ್ತಿರೋ ವಿಷಯಕ್ಕೆ ಕೂಡಿಸೋಣ. ಮನುಷ್ಯ ಸಂವಹನವನ್ನ ಕಲಿತ, ಬಳಸಿದ. ಹಸುವನ್ನು ಸಾಕಿದಂತೆ. ಭಾಷೆಯನ್ನು ಬಳಸಿದ; ಸಂಜ್ಞೆಗಳಿಗಿಂತ ಭಿನ್ನವಿತ್ತದು. ಥೇಟು ಹಸುವಿನ ಹಾಲಿನಂತೆ. ಹೀಗೆ ಹಾಲಿನಂಥ ಭಾಷೆಯನ್ನ ಮಾತಿಗೆ ತಕ್ಕಷ್ಟು ಬಳಸಿದ. ಅದೇ ಭಾಷೆಯನ್ನ ಸುಂದರವಾಗಿ ಬಳಸಿದ; ಕಾವ್ಯದಂತಾಯ್ತು. ಕರು ಕುಡಿದು ಮಿಕ್ಕ ಹಾಲನ್ನ ತನಗಾಗಿ ಬಳಸಿದಂತೆ. ಇಲ್ಲಿಯವರೆಗೂ ಹಾಲು ಮತ್ತು ಭಾಷೆಯ ಬಳಕೆ; ಸಾಹಿತ್ಯದ ಬಳಕೆ ಶ್ರೇಷ್ಠ, ನಿರ್ವಿಕಾರವೇ ಆಗಿತ್ತು. ಆಮೇಲೆ ಹಾಲು ತನಗೆ ಸಾಕು, ಮತ್ಯಾರಿಗಾದರೂ ಕೊಡೋಣ ಅನಿಸುತ್ತದೆ. ಸಾಹಿತ್ಯದ ಖುಷಿ ಮತ್ತೊಬ್ಬರಿಗೂ ಸಿಗಲಿ ಎಂದು ಹಂಚಿಕೊಂಡ. ಹಾಲಿನ ಬೇಡಿಕೆ ಹೆಚ್ಚುತ್ತದೆ; ಸಾಹಿತ್ಯ ಕಲೆಗಿಂತ ಮತ್ತೊಬ್ಬರನ್ನು ತೃಪ್ತಿ ಪಡಿಸಲು ಬಳಕೆಯಾಯ್ತು. ಸಾಹಿತ್ಯಕ್ಕೆ ಆಶ್ರಯದಾತರೂ ಬಂದರು. ರಾಜರನ್ನು ತೃಪ್ತಿಪಡಿಸಲು ಕೃತಿಗಳ ರಚನೆಯಾಯ್ತು. ಹಾಲನ್ನು ಹಂಚೋ ಬದಲು ಡೈರಿಗೆ ಕೊಟ್ಟರೆ ಹಣ ಮಾಡಬಹುದು ಅನಿಸಿತು; ರಾಜಾಶ್ರಯದ ನಂತರ ಸಾಹಿತ್ಯದಿಂದ ಜೀವನ ನಿರ್ವಹಣೆ ಕಷ್ಟವಾಗಿ ಕೃತಿಗಳ ಮಾರಾಟವೂ ಶುರುವಾಯ್ತು. ಇಷ್ಟೊತ್ತಿಗೆ ಹಸು ಸಾಕಿದ ನೀವೂ, ಸಾಹಿತಿಯೂ ಲೋಭಿಯಾಗಿ ಬದಲಾವಣೆಗೊಂಡಿದ್ದಾಯ್ತು. ಭಾವನೆಯ ಮಾರಾಟ ಅಂತ ಆರೋಪ ಮಾಡಿದ್ದವರಿಗೆ ಉತ್ತರಿಸುತ್ತೇನೆ, ಕವನದಂಥದ್ದನ್ನು ಬರೆದು ಸೋಶಿಯಲ್ ಮಿಡಿಯಾಗಳಲ್ಲಿ ಪ್ರದರ್ಶಿಸುತ್ತೀರಲ್ಲ; ನಿಮ್ಮ ಭಾವನೆ ಸಾರ್ವಜನಿಕವಾದದ್ದು ನಿಮ್ಮ‌ ಸಾಚಾತನವೇ? ಅದು ಹಾದರವೇ, ಸೂಳೆಗೆ ಹಣದ ಹಂಗಾದರೂ ಇರುತ್ತದೆ. ಗರತಿಯ ಗೌರವ ಅಪೇಕ್ಷಿಸುತ್ತಾ ಭಾವನೆಗಳನ್ನು ಸಾರ್ವಜನಿಕವಾಗಿಸುವ ನಿಮಗೆ ಪದ್ಯದಂಗಡಿಯನ್ನು ವಿರೋಧಿಸುವ ನೈತಿಕತೆಯಿದೆಯೇ? ಉತ್ತರ ನನಗೆ ಬೇಡ ಬಿಡಿ. ಮೂಲ ವಿಚಾರಕ್ಕೆ ಬರೋಣ. ಹಾಲನ್ನು ಡೈರಿಗೆ ಕೊಟ್ಟರೆ ಲಾಭ ಕಮ್ಮಿ ಅಂತ ಗಿಣ್ಣು, ಪೇಡೆ, ಮೊಸರು, ಮಜ್ಜಿಗೆ ಅಂತೆಲ್ಲ ಉಪ ಉತ್ಪನ್ನಗಳನ್ನು ಮಾಡಿ ಮಾರುತ್ತೀರಿ. ಹೀಗೇ ಸಣ್ಣ ಸಣ್ಣ ಉತ್ಪನ್ನಗಳನ್ನಾಗಿ ಮಾರಿದರೆ ಅದನ್ನು ಅಕ್ಷರ ಹಾದರ ಅನ್ನಬಹುದೇ? ಈಹಿಂದೆಯೂ ಹೇಳಿದ್ದೆವು, ಯಾವಾಗ ಒಂದೇ ಕೃತಿಯನ್ನು ಸಾವಿರ ಮಂದಿಗೆ ಮಾರಲು ಬರೆಹಗಾರರು ಸಿದ್ಧರಾದರೋ ಆವತ್ತೇ ಈಗ ನೀವು ಹೇಳುತ್ತಿರುವ ಅಕ್ಷರ ಹಾದರ ಶುರುವಾಗಿದೆ. (ವೈಯಕ್ತಿಕವಾಗಿ ಈ ಅಕ್ಷರ ಹಾದರ ಅನ್ನೋ ಪದದ ವಿರೋಧಿ ನಾನು. ದ್ರೋಹವಿಲ್ಲದ ಯಾವ ಸಂಬಂಧವೂ ಹಾದರವಲ್ಲ. ಅಂತೆಯೇ ಯಾರನ್ನೂ ನಂಬಿಸಿ ಮೋಸ ಮಾಡದ ಬರೆಹಗಳು ಅಕ್ಷರ ಹಾದರ ಆಗುವುದಿಲ್ಲ) ಪದ್ಯದಂಗಡಿಯ ಪ್ರಯತ್ನ ಇಷ್ಟೇ, ಎಲ್ಲರಿಗೂ ತನ್ನ ಆತ್ಮೀಯರಿಗೆ ಕಾವ್ಯಾತ್ಮಕವಾಗಿ ಶುಭ ಕೋರಬೇಕು, ಕಾವ್ಯಾತ್ಮಕ ಅಡಿಬರಹಗಳನ್ನು ನೀಡಬೇಕು ಎಂಬ ಆಸೆಯಿರಬಹುದು. ಕೆಲವರಿಗೆ ಅಂಥ ಸಾಮರ್ಥ್ಯವೂ ಇರುತ್ತದೆ ಬಿಡಿ. ಹಲವರಿಗೆ ಬರೆಹದ ಕಲೆ ಸಿದ್ಧಿಸಿರುವುದಿಲ್ಲ. ಮತ್ತೂ ಕೆಲವರಿಗೆ ತಾನೂ ಬರೆಯಬಹುದಾ ಅನ್ನೋ ಅಪನಂಬಿಕೆ. ಅಂಥವರಿಗೆ ನಾವು ಸಹಾಯ ಮಾಡುತ್ತೇವಷ್ಟೇ. ಅದಕ್ಕಾಗಿ ಹಣ ಪಡೆಯುತ್ತೇವೆ. ಇಲ್ಲಿ ಅಕ್ಷರ ಹಾದರದ ಮಾತೆಲ್ಲಿ ಬಂತು? ಯಾರೋ ಹೇಳಿದ ಇಂಥ ಅನರ್ಥದ ಶಬ್ದ ಹಲವರ ಯೋಚನೆಯಾಗಿ ಬದಲಾಗಿದೆ.
ಸಂಜಯ ಉಪ್ಪಿನ್ ಅವರ ಪ್ರಶ್ನೆಗೆ ವೈಯಕ್ತಿಕವಾಗಿ ಉತ್ತರಿಸಬೇಕು ಅಂದುಕೊಂಡಿದ್ದೆ. ಅದನ್ನು ಎಷ್ಟು ಜನ ನೋಡಿದ್ದಾರೋ, ಹಂಚಿಕೊಂಡಿದ್ದಾರೋ ಗೊತ್ತಿಲ್ಲ. ಪ್ರಶ್ನೆ ಸಾರ್ವಜನಿಕವಾಗಿ ಕೇಳಿದ್ದರಿಂದ ಸಾರ್ವಜನಿಕವಾಗಿಯೇ ಉತ್ತರಿಸುತ್ತೇನೆ. ಇನ್ನೊಬ್ಬರ ಭಾವನೆಯನ್ನು ಅಕ್ಷರ ರೂಪಕ್ಕಿಳಿಸಿ ಅದನ್ನು ಅವರಿಗೇ ಮಾರುವುದಕ್ಕೆ ಏನೆನ್ನುವುದು? ಅನ್ನೋ ಅರ್ಥದಲ್ಲಿ ಅವರ ಪ್ರಶ್ನೆಯಿತ್ತು. ಒಬ್ಬರ ಭಾವನೆಯನ್ನು ಅವರೇ ಅಕ್ಷರ ರೂಪಕ್ಕಿಳಿಸಿ ಬಳಸಿಕೊಳ್ಳುವುದಿದ್ದರೆ, ಅದು ಎಲ್ಲರಿಗೂ ಸಾಧ್ಯವಿದ್ದರೆ ಪದ್ಯದಂಗಡಿಯ ಅಸ್ತಿತ್ವವೇ ಇರುತ್ತಿರಲಿಲ್ಲ. ಅವರ ಭಾವನೆಯನ್ನ ಅಕ್ಷರ ರೂಪಕ್ಕಿಳಿಸಲು ನಾವು ಕೂಲಿ ತೆಗೆದುಕೊಳ್ಳಬಹುದೇ ಹೊರತು ಅದು ಮಾರಾಟವಲ್ಲ. ಇಲ್ಲಿ ಕೊಳ್ಳುಬಾಕತನವೂ ಇಲ್ಲ, ಮಾರಾಟಬಾಕತನವೂ ಇಲ್ಲ. ಮತ್ತೊಂದಿಷ್ಟು ಮಂದಿ, ಹಣ ಮಾಡಲು ಬೇರೆ ದಾರಿ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದೇ ಮಾತನ್ನು ಸಿನಿಮಾಗಳಿಗೆ ಹಾಡು ಬರೆದುಕೊಡುವವರಿಗೆ, ಸಂಭಾಷಣೆ ಬರೆದುಕೊಡುವವರಿಗೆ, ಕತೆ-ಕಾದಂಬರಿ-ಕವಿತೆಗಳನ್ನು ಪ್ರಕಟಿಸುವವರಿಗೆ ಕೇಳುವ ಧೈರ್ಯವಿದೆಯೇ? ನಾವು ಎಲ್ಲಾ ಪ್ರಶ್ನೆಗೆ ಉತ್ತರಿಸುತ್ತಿದ್ದೇವೆ ಎಂಬುದರ ಅರ್ಥ ನಾವು ನಿರುದ್ಯೋಗಿಗಳೆಂದಲ್ಲ, ಹಣಗಳಿಕೆಯೇ ನಮ್ಮ ಗುರಿ ಅಂತಲೂ ಅಲ್ಲ. ಅಷ್ಟಕ್ಕೂ ಎಲ್ಲರಿಗೂ ಉತ್ತರಿಸುವ ಅವಶ್ಯಕತೆ ನಮಗಿರಲಿಲ್ಲ. ವಿರೋಧಕ್ಕೂ ಕಾರಣವಿರುತ್ತದೆ, ಸಕಾರಣ ವಿರೋಧಗಳನ್ನು ಕಡೆಗಣಿಸಬಾರದು, ಅಪಾರ್ಥಗಳಿಂದಾಗಿ ನಾವು ಬಳಲಬಾರದೆಂಬ ಉದ್ದೇಶದಿಂದ ಪ್ರತಿಯೊಬ್ಬರಿಗೂ ಉತ್ತರಿಸಿದ್ದೇವೆ. ಇನ್ನುಮೇಲೂ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ.
ನಿಮಗೆ ತಿಳಿದಿದೆಯೋ ಇಲ್ಲವೋ, ಇಂಗ್ಲಿಷ್ ಬರೆಹಗಾರರಿಗಾಗಿ ಇಂಥ ಎಷ್ಟೋ ಫ್ರೀಲ್ಯಾನ್ಸ್ ಕಂಪನಿಗಳಿವೆ. ನಾವೆಲ್ಲ ಅಂಗಡಿಗಳಲ್ಲಿ ಕೊಳ್ಳುತ್ತೇವಲ್ಲ 'ಗ್ರೀಟಿಂಗ್ ಕಾರ್ಡು'ಗಳು? ಅವುಗಳ ಮೇಲಿನ ಬರೆಹ ರಚಿಸಲು ಒಬ್ಬ ಕವಿಗೆ ಒಂದು ಕವಿತೆಗೆ ೧೦ ಅಮೇರಿಕನ್ ಡಾಲರ್‌ನಿಂದ ೩೦೦ ಡಾಲರ್‌ನಷ್ಟು ಪಾವತಿಸುವ ಕಂಪನಿಗಳಿವೆ. Why English poets are not poor? ಇಂಥವೇ ಹಲವು ಕಾರಣಗಳಿವೆ ಬಿಡಿ. ನಮ್ಮದು ಮಾತ್ರ ಅದೇ ಅನಿವಾರ್ಯವಲ್ಲದ ಮಡಿವಂತಿಕೆ, ಪ್ರಗತಿವಿರೋಧಿ ಭಾಷಾಪ್ರೇಮ, ಹೊಸತನ್ನು ಸ್ವೀಕರಿಸಲಾಗದ ಸಾಂಪ್ರಾದಾಯಿಕ ಯೋಚನೆ.
ಇಲ್ಲಿ ಯಾರನ್ನೂ ವೈಯಕ್ತಿಕವಾಗಿ ದೂರುತ್ತಿಲ್ಲ, ನಾವು ಬೆಳೆದಿರುವ ಸಮಾಜವೇ ಹಾಗಿದೆ. ನಮ್ಮ ಮಂದಿ ಎಷ್ಟು ಸಂಪ್ರದಾಯ ಪಲಿಸ್ತಾರೆ ಅಂದ್ರೆ, ಪಕ್ಕದಮನೆ ಹುಡುಗ ಸಣ್ಣಕೆ ಕ್ರಾಪ್ ಬಿಟ್ಟರೆ, 'ಅವ್ನ ನೋಡಿ ಕಲ್ತ್ಕೋ' ಎಂಬ ಮಾತು, ಏರಿಯಾದ ಮತ್ತೊಂದು ಮನೆಯ ಹುಡುಗಿ ಎಂಜಿನಿಯರಿಂಗ್ ಓದ್ತಿದ್ರೆ, 'ನೀನೂ ಅವಳಂತೇ ಎಂಜಿನಿಯರಿಂಗ್ ಓದು' ಅಂತ ಉಪದೇಶ. ಇವೇ ಸಂದರ್ಭಾನುಸಾರ ಒತ್ತಾಯಗಳಾಗತ್ವೆ. ನಾವು ಮಾತ್ರ ಯಾವತ್ತೂ ಅವುಗಳನ್ನ ವಿರೋಧಿಸೋದಿಲ್ಲ. ನಮ್ಮ ಆಸೆಯಂತೆ ಬದುಕೋ ಸಂಪ್ರದಾಯವನ್ನ ಕಲಿಸಿಲ್ಲವಲ್ಲ! ನಿಮ್ಮಣ್ಣನ ಓರಿಗೆಯ ಯಾರೋ ಕವಿಯಾಗಿದ್ರೆ, 'ಅವನಂತೆ ಕವಿ ಆಗು' ಅಂತ ಯಾವ ಅಪ್ಪ ಅಮ್ಮನೂ ಹೇಳೋದಿಲ್ಲ. ಯಾಕಂದ್ರೆ ಕವಿಯಾದ್ರೆ ಶ್ರೀಮಂತರಾಗೋಕೆ ಆಗೋದಿಲ್ಲ!  ಸಾಹಿತ್ಯವನ್ನ ಮಾರ್ಬಾರ್ದು, ಭಾಷೆ ಉಳೀಬೇಕು ಆದ್ರೆ ಅದಕ್ಕೆ ಪ್ರೋತ್ಸಾಹ ಕೊಡೋದಾಗ್ಲಿ, ಕವಿಗಳಿಗೂ ಜೀವನ ನಡೆಸೋಕೆ ಕಾಸು ಬೇಕು ಅನ್ನೋ ಯೋಚನೆಯಾಗ್ಲಿ ನಮ್ಮಲ್ಲಿ ಹುಟ್ಟೋದಿಲ್ಲ. ಯಾರೋ ಅಂಥ ಪ್ರಯತ್ನ ಮಾಡಿದರೆ ಈಟಿ ತಗೊಂಡು ಬರ್ತೀರಿ; ಮಾತಿನ ಈಟಿ, ಅಕ್ಷರ ಹಾದರದ ಈಟಿ. ಚುಚ್ಚೋ ಮುನ್ನ ಯೋಚಿಸಿ, ನೀವು ತಿವಿದರೆ ನೋವಾಗೋದು ನಿಮ್ಗೇ!
ಸಾಹಿತ್ಯ ಯಾವತ್ತೂ ನಿಂತ ನೀರಲ್ಲ. (ಹೀಗೊಂದು ಫಿಲ್ಮೀ ಡೈಲಾಗು ಬೇಕಿತ್ತು) ಸತತ ರೂಪಾಂತರಕ್ಕೆ ಎಲ್ಲ ಭಾಷೆಯ ಸಾಹಿತ್ಯವೂ ತೆರೆದುಕೊಂಡಿದೆ. ಮೊನ್ನೆ ಒಬ್ರು ಮೆಸೇಜ್ ಮಾಡಿ ಹೇಳಿದ್ರು, ಮಾಸ್ತಿಯವ್ರು ಸಣ್ಣ ಕತೆ ಬರೆಯೋಕೆ ಶುರು ಮಾಡಿದಾಗ "ಬಂತು ನೋಡು ಸಣ್ಣ ಕತ್ತೆ" ಅಂತ ಲೇವಡಿ ಮಾಡ್ತಿದ್ರಂತೆ. ಹಂಗೇ ಈಗ ಪದ್ಯದಂಗಡಿಯನ್ನ ಹೀಯಾಳಿಸ್ತಿದಾರೆ. ಹೆದರಬೇಡಿ, ಅಂಗಡಿ ಮುಚ್ಚಬೇಡಿ ಅಂದ್ರು. ಪುಸ್ತಕ ಪ್ರಕಟವಾಗೋ ಮುನ್ನ ಇದ್ದ ಸಾಹಿತ್ಯದ ಮೂರ್ತ ರೂಪಕ್ಕೂ ಈಗಿನದಕ್ಕೂ ವ್ಯತ್ಯಾಸವಿದೆ. ಈಗಂತೂ ಪುಸ್ತಕಗಳ ಸಂಖ್ಯೆಯೂ ಕಮ್ಮಿ, ಏನಿದ್ರೂ ಫೇಸ್ಬುಕ್ ಬರಹಗಳ ಉಮೇದಿಯ ಕಾಲ. ಹೀಗೆ ಬೇರೆ ಬೇರೆ ರೀತಿಯಲ್ಲಿ ಸಾಹಿತ್ಯ ತನ್ನನ್ನು ಓದಿಸ್ಕೊಳ್ತಿದೆ. ಪದ್ಯದಂಗಡಿ ಅವೇ ಕವನ ಸಂಕಲನಗಳ, ಕಥಾ ಸಂಕಲನಗಳ ಬಿಡಿ ರೂಪವಾಗಿರಬಹುದು. ಮುಂದೆ ಇದಕ್ಕಿಂತಲೂ ಸಣ್ಣ ಭಾಗಗಳಲ್ಲಿ ನಿಮ್ಮಿಂದ ಓದಿಸಿಕೊಳ್ಳಬಹುದು, ಗೊತ್ತಿಲ್ಲ. ಅವಶ್ಯಕತೆ ಇದ್ದವರಿಗೆ ಮಾತ್ರ ಪದ್ಯದಂಗಡಿ. ವಿಮರ್ಶೆ ಮಾಡುವವರಿಗಲ್ಲ.

ಪದ್ಯದಂಗಡಿ ಕೇವಲ ಒಂದು ಪ್ರಯೋಗ. ಇದಕ್ಕೆ ಸಿಗುವ ಸ್ಪಂದನೆ, ಪ್ರತಿರೋಧ ಎಲ್ಲವನ್ನೂ ಸ್ವೀಕರಿಸಿ, ಗಣನೆಗೆ ತೆಗೆದುಕೊಂಡು ಪದ್ಯದಂಗಡಿಯೆಂಬ ಯೋಚನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತೇವೆ. ಇಷ್ಟು ನಂಬಿಕೆಯನ್ನು, ಸ್ಥೈರ್ಯವನ್ನು ತುಂಬಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.

ಕೊನೆ ಮಾತು: ಇನ್ನು ಈ ಲೇಖನದ ಬಗ್ಗೆಯೂ ಚರ್ಚೆ ಆಗಬಹುದು. ಒಂದಿಷ್ಟನ್ನು ಬೇಕಂತಲೇ ಹೇಳಿಲ್ಲ. ಮತ್ತೊಂದಿಷ್ಟನ್ನು ಹೇಳಲು ಮರೆತಿರಬಹುದು. ಅಂಥ ತಲೆ ಹಾಳಾಗುವ ಪ್ರಶ್ನೆಯಿದ್ದರೆ ನನ್ನನ್ನು ಸಂಪರ್ಕಿಸಬಹುದು. ನನ್ನ ಸಮರ್ಥನೆಗಳು ಸದಾ ತಯಾರಿರುತ್ತವೆ; ನೀವು ಒಪ್ಪಲೇಬೇಕೆಂದಿಲ್ಲ.

ಸಾಹಿತ್ಯದ ವಿವಿಧ ಮಜಲುಗಳ ಪೂರಕ ಓದಿಗೆ: https://consciouseyes.blogspot.com/2019/09/blog-post.html

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ