ವಿದಾಯ...


ಅಧೂರಿ ಆಂಸ್ ಚೋಡ್‌ಕೆ
ಅಧೂರಿ ಪ್ಯಾಸ್ ಚೋಡ್‌ಕೆ
ಮೇ ರೋಜ್ ಯೂಹೀಂ ಜಾವೂಂಗಿ
ತೋ ಕಿಸ್ ತರಹ್ ನಿಭಾವೋಗೆ
ಯೇ ಜಿಂದಗೀಕಿ ರಾಹ್ ಮೇಂ
ಜವಾಂ ದಿಲೋಂಕಿ ಚಾಹ್ ಮೇಂ
ಕಯೀಂ ಮಕಾಮ್ ಆಯೆಂಗೆ
ಜೋ ಹಮ್ ಕೊ ಆಜಮಾಯೇಂಗೆ
ಬೂರಾ ನಾ ಮಾನೋ ಬಾತ್‌ಕಾ
ಯೇ ಪ್ಯಾರ್ ಹೆ ಗಿಲಾ ನಹೀಂ...
ಅಭೀ ನಾ ಜಾವೋ ಚೋಡ್ ಕರ್
ಕೆ ದಿಲ್ ಅಭೀ ಭರಾ ನಹೀಂ...

ಇಂಥದ್ದೊಂದು ಅಗ್ದಿ ಇಷ್ಟವಾಗೋ ಹಾಡು ಕನ್ನಡದಲ್ಲಿ ಅದ್ಯಾಕೆ ಕೇಳಿಲ್ಲವೋ ನಾನು. ಇಷ್ಟು ಆಪ್ತವಾಗುವ ಭಾವನೆ, ಶಬ್ದಗಳು ಬರೀ ನನಗಾಗೇ ಬರೆದದ್ದಾ ಅನಿಸುವಷ್ಟು ಹತ್ತಿರವಾಗಿವೆ..
ಅವಳನ್ನ ಮೊದಲಬಾರಿ ಭೆಟ್ಟಿಯಾದಗಲೂ ಅಷ್ಟೇ ಅಲ್ಲವೆ? ಮೊದಲ ಬಾರಿ ಮಾತ್ರವಲ್ಲ, ಪ್ರತಿಬಾರಿಯೂ ಹೋಗ್ಬೇಡ ಅಂತ ಗೋಗರೆದು ಮಳ್ಳಾ ಅಂತ ಬೈಸ್ಕೊಳೋದು ಖಾಯಮ್ಮಾಗಿತ್ತು. ಅಷ್ಟು ಅಮಲು ಅವಳಲ್ಲಿತ್ತಾ ಅಥವಾ ನಮ್ಮ ಪ್ರೇಮದಲ್ಲಿತ್ತಾ? ಗೊತ್ತಿಲ್ಲ. ನಾವು ಭೆಟ್ಟಿಯಾದ ಮುನಿಸಿಪಾಲ್ಟಿ ಲೈಬ್ರರಿಯ ಬಾಗಿಲೂ ದಿಕ್ಕುತಪ್ಪಿದೆ ಈಗ‌. ಅಲ್ಲಿಗೆ ಪ್ರತಿಬಾರಿ ಹೋದಾಗ್ಲೂ ಗೋಣಿ ಚೀಲದಲ್ಲಿ ತುಂಬಿ ತರುವಷ್ಟು ನೆನಪುಗಳಿರತ್ವೆ. ಊರಿಗೆ ಹೋದಾಗೆಲ್ಲ ಆ ಫ್ರೆಶ್ಶು ನೆನಪುಗಳಿಗಾಗಿ ಗ್ರಂಥಾಲಯ ಹೊಕ್ಕುವ ಮನಸ್ಸಾಗತ್ತೆ.

ಯೇ ಜಿಂದಗೀಕಿ ರಾಹ್ ಮೆ, ಕಯೀಂ ಮಕಾಮ್ ಆಯೆಂಗೆ...
ಮತ್ತವಳ ಸಂಪರ್ಕ ಬೆಳ್ಯತ್ತೆ ಅಂತಾಗ್ಲಿ, ಅಷ್ಟೇ ಆತ್ಮೀಯತೆಯಿಂದ ಮಾತಾಡ್ತೇನೆ ಅಂತಾಗ್ಲೀ ಊಹೆಯೂ ಇರ್ಲಿಲ್ಲ. Love can happen twice ಅನ್ನೋದು ಹಳೆ ಅನುಭವ. With the same person ಅನ್ನೋದು ನನ್ನ ಮಟ್ಟಿಗೆ ಹೊಸದು. ಗೆಳೆಯನ ದೆಸೆಯಿಂದ, ಹುಟ್ಟುಹಬ್ಬಕ್ಕೆ ವಿಷ್ ಮಾಡೋ ನೆಪದಲ್ಲಿ ಅವಳ ಜೊತೆ ಮಾತುಕತೆಯೇನೋ‌ ಶುರುವಾಯ್ತು. ಆದ್ರೆ ಆವತ್ತಿಗಷ್ಟೇ ಸೀಮಿತವಾಗಿರಬೇಕಾದದ್ದು ನಿಲ್ಲಲಿಲ್ಲ. ಮುಗ್ಧ ಅವಳು, ಪೆದ್ದ ನಾನು; ಮಾತನಾಡಿದ್ವಿ, ಮುಗಿಯದಷ್ಟು ಮಾತುಗಳಿದ್ವು, ಮಾತನಾಡಿದ್ವಿ. ಆದ್ರೆ ಬರೀ ಸ್ನೇಹಿತರಾಗಿರೋಣ ಎಂಬ ಪೂರ್ವನಿರ್ಧಾರಿತ ಒಪ್ಪಂದದೊಂದಿಗೆ..

ಬೂರಾ ನಾ ಮಾನೋ ಬಾತ್ ಕಾ...
ಅಗ್ದಿ ಗಾಢ ಪ್ರೀತಿಯನ್ನ ನೀವು ಅನುಭವಿಸಿದ್ದೀರಾ? ಹಲವರಿಗೆ ಆ ಭ್ರಮೆಯಂತೂ ಇದ್ದಿರಬಹುದು ಬಿಡಿ. ನಾವೂ ಗಾಢ ಪ್ರೀತಿಯ ಭ್ರಮೆಯಲ್ಲಿ ಇದ್ದವರೇ! ಅದೇ ಭ್ರಮೆಯ ಉತ್ತುಂಗದಲ್ಲಿ ಇದ್ದಾಗಲೇ ಬ್ರೇಕಪ್ ಮಾಡಿಕೊಂಡ್ವಿ. ಅದೇ ವಿರಹದಲ್ಲಿ ಬರೆಯೋದು ಶುರುವಾಯ್ತು. ವಿರಹದ ಬರಹಗಳು ಅದ್ಯಾಕೆ ಯುವಕರಿಗೆ ಇಷ್ಟವೋ ಗೊತ್ತಿಲ್ಲ, ಬರೆದದ್ದು ಜನರನ್ನ ತಲುಪಿದ್ವು. ಸ್ವಲ್ಪ ಅಹಂಕಾರ ಬೆಳೆಯುವಷ್ಟು ಹೆಸರು ಬಂತು. ಪ್ರೀತಿ ನಿಮ್ಮನ್ನ ಬದಲಾಯಸಿಬಿಡತ್ತೆ. ಹೇಗಾದರೂ ಸರಿ, ಬದಲಾವಣೆಗೆ ಪ್ರೀತಿಯೊಂದು ನೆಪವಾಗಿಬಿಡಬಹುದು. ಯಾರೋ ಕುಡುಕನಾಗ್ತಾನೆ, ಮತ್ಯಾರೋ ದೇವದಾಸನೆಂಬ ಕ್ಯಾರೆಕ್ಟರ್ ಆಗಿಬಿಡ್ತಾನೆ, ಇನ್ಯಾರೋ ದೊಡ್ಡ ಕವಿಯಾಗಬಹುದು, ನಟನಾಗಬಹುದು, ಬಿಜಿನೆಸ್ ಮೇಲೆ ಸಿಕ್ಕಾಪಟ್ಟೆ ಅನಿಸುವಷ್ಟು ತಲ್ಲೀನತೆ ಬಂದುಬಿಡಬಹುದು. Workaholic ಬುದ್ಧಿ ಬೆಳೆಯೋದೆ ಅಪ್ಪಟ ಪ್ರೀತಿ ಭಗ್ನವಾದಾಗ!
ಅವಳಿಂದ ದೂರವಾಗಿ ವರ್ಷವಾದಮೇಲೆ ಮತ್ತೊಬ್ಬಳೊಟ್ಟಿಗೆ ಪ್ರೀತಿ ಹುಟ್ಟಿತಾ, ನಿಮ್ಮ ಕ್ರಿಯೇಟಿವಿಟಿಗೆ ಸವತಿ ಬಂದಂತೇ ಲೆಕ್ಕ. ಇವಳನ್ನಾದ್ರೂ ಉಳಿಸಿಕೊಳ್ಳಬೇಕು ಅನ್ನೋ ಹುಚ್ವು ಹಟಕ್ಕೆ ಬಿದ್ದು, ಇಡೀ ದಿನ ಅವಳ ಓಲೈಕೆಯಲ್ಲೇ ಕಳೆದುಬಿಡಬಹುದು. ನಂಗೂ ಮತ್ತೆ ಲವ್ವಾಗಿತ್ತು. ನಾನೂ ಅಷ್ಟೇ, ಬರೆಯೋದು ಬಿಟ್ಟೆ. ಒಂದೂವರೆ ವರ್ಷದ ನಂತರ ಬ್ರೇಕಪ್ ಆಗೋ ಹೊತ್ತಿಗೆ ಮೊದಲೆಲ್ಲ ಬರೆದದ್ದು ನಾನೇ ಹೌದಾ ಅನಿಸುವಷ್ಟು ಹಾಳಾಗಿಬಿಟ್ಟಿದ್ದೆ. ಮತ್ತೆ ಅಕ್ಷರಗಳು ಹುಟ್ಟಲು ಅವಳೇ ಬರಬೇಕಾಯ್ತು. ಆ ಸಾಂಗತ್ಯಕ್ಕೆ, ಆತ್ಮೀಯತೆಗೆ ಪ್ರೀತಿಯ ಬದಲು ಸ್ನೇಹದ ನಾಮಕರಣವಾಗಿತ್ತು ಅಷ್ಟೇ. ಹೆಸರು ಬದಲಾದಂತೆ ಭಾವನೆ ಬದಲಾದೀತಾ? ತಪ್ಪು ತಿಳಿಯಬೇಡ, ಇದು ಪ್ರೀತಿಯೇ ಅಂತ ಹೇಳುವಷ್ಟು ಗಟ್ಟಿತನ ಉಳಿದಿರಲಿಲ್ಲ, ಅಭದ್ರತೆ..

ಮೇ ರೋಜ್ ಯೂಹೀಂ ಜಾವೂಂಗಿ, ತೋ ಕಿಸ್ ತರಹ್ ನಿಭಾವೋಗೆ...
ಒಪ್ಪಂದ, ಅಭದ್ರತೆ, ಪ್ರೀತಿ, ಸ್ನೇಹ ಎಲ್ಲ ಗೊಂದಲಗಳ ಮಧ್ಯೆ ಉಳಿದುಬಿಡಬಹುದಿತ್ತು. ಉಳ್ದಿದ್ರೆ ಎಲ್ರಂತೇ ನಾನೂ ಆಗ್ರಿದ್ದೆ ಅನ್ನೋ ವಿಶಿಷ್ಟವಾಗಿರೋ ಕಾಂಪ್ಲೆಕ್ಸ್... ಮನುಷ್ಯನಿಗೆ ಎಷ್ಟೆಲ್ಲಾ ಮಾನಸಿಕ ತೊಂದರೆಗಳು ಇರ್ಬೋದು ಅಂತ ಲೆಕ್ಕ ಹಾಕೋಕೆ ನನ್ನನ್ನ ಮಾಡೆಲ್ ಆಗಿ ತಗೊಳ್ಬೋದು! ಹೀಗೆ ಮಾಡಿದ್ರೆ ಮುಂದೆ ಗಿಲ್ಟ್ ಕಾಡ್ಬೋದಾ, ಹೀಗೆ ಮಾಡಿದ್ರೆ ತೀರಾ ಮೇನ್‌ಸ್ಟ್ರೀಮ್ ಆಗ್ಬಿಡತ್ತೆ, ಹೀಗೆ ಅಂದ್ರೆ ಅವ್ರಿಗೆ ಬೇಜಾರಾಗ್ಬೋದು, ಇಷ್ಟು ಸಾಫ್ಟ್ ಆಗಿದ್ರೆ ಬದ್ಕೋಕಾಗತ್ತಾ, ಯಪ್ಪಾ... ಮುಗೀದಿರ್ವಷ್ಟು ಮಾನಸಿಕ ಅಸ್ವಾಸ್ಥ್ಯಗಳಿವೆ ನಮ್ಮಲ್ಲಿ. ಅದರಲ್ಲೊಂದು ಎಲ್ಲರಂತೇ ಆಗೋ ಭಯ. ಪ್ರೀತಿಯನ್ನ ಹೇಳಿದ್ರೆ ಬಿಟ್ಟೋಗ್ತಾರೆ ಅನ್ನೋ ಭಯ. ಅಟ್ಲೀಸ್ಟ್ ಸ್ನೇಹದ ಹೆಸರಲ್ಲಾದ್ರೂ ಸಾಮೀಪ್ಯವನ್ನ ಅನುಭವಿಸುವಷ್ಟು ಹೊಂದಾಣಿಕೆಯ ವ್ಯಕ್ತಿತ್ವ ಹುಟ್ಟಿಕೊಂಡುಬಿಡತ್ತೆ! ಯಾವ್ದೋ ಭಾವನೆಗೆ ಯಾವ್ದೋ ಹೆಸ್ರಿಟ್ಟು ಕೊರಗೋ ಮಿಸ್ಟರ್ ಅಡ್ಜೆಸ್ಟೆಬಲ್ ನಾನಲ್ಲ ಅನ್ನೋ ಅಹಂಕಾರವಿತ್ತು. ನಾನು ಬದಲಾದೆ.
ರಿಲೇಶನ್ಶಿಪ್ಪುಗಳು ಎಷ್ಟು ಮಜ ಗೊತ್ತಾ? ಚಾ ಕುಡ್ಯೋಕೆ ಜೊತೇಲಿ ಇಂಥವ್ರೇ ಇದ್ರೆ ಚೆಂದ ಅಂದ್ಕೊಳ್ಳೋ ನಾವು, ಇವರ ಕವನ ಮತ್ಯಾರದೋ ಕವನಕ್ಕಿಂತ ಚೆಂದ ಅಂದ್ಕೊಳ್ಳೋ ನಾವು, ಇವಳ ನಗು ಹಳೆಯವಳ ನಗುವಿಗಿಂತ ಚೆಂದ ಅಂದ್ಕೊಳ್ಳೋ ನಾವು ಎಲ್ಲ ಕ್ವಾಲಿಟಿಯನ್ನೂ ಒಬ್ಬರಲ್ಲೇ ನಿರೀಕ್ಷಿಸಿ, ನಿರೀಕ್ಷೆಗಳಿಗೆಲ್ಲ ಪ್ರೀತಿಯ ಟ್ಯಾಗ್ ಜೋತುಬಿಡ್ತೀವಿ. ನಮ್ಮ ನಿರೀಕ್ಷೆಗಳನ್ನ ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ತೀವಿ. ಆದ್ರೆ ಎಷ್ಟು ದಿನ? ಭೂಮಿಗೂ ಧಾರಣಾ ಸಾಮರ್ಥ್ಯ ಮೀರಿ ಭಾರ ತಡ್ಕೊಳೋಕಾಗಲ್ಲ, ಇನ್ನು ನಮ್ಮತ್ರ ಆಗತ್ತಾ? ಒಂದಲ್ಲಾ ಒಂದಿನ ಬ್ರೇಕಪ್ ಆಗೇ ಆಗತ್ತೆ.
ಜಾಸ್ತಿ ಕೊರೆದೆ ಅನ್ಸತ್ತೆ. ನನ್ ಕತೆಗೆ ಬಂದೆ ಈಗ ನೋಡಿ. ಒಂದಿನ ಹಿಂಗೇ ಮೆಸೇಜು ಹಾಕಿದೆ ಅವ್ಳಿಗೆ. ನಿನ್ನ ಮದ್ವೇಗೆ ಕರಿಬೇಡ, ಬೇಜಾರಾಗತ್ತೆ ಅಂತ. ಅವಳು ನೋಡಿದ್ಳು, ಎರಡು ನಿಮ್ಷ ಟೈಪಿಂಗ್ ಅಂತ ಬಂತು, ಮೆಸೇಜು ಮಾತ್ರ ಬರ್ಲಿಲ್ಲ. ಅರ್ಧ ಗಂಟೆ ಬಿಟ್ಟು ಬಂದ ಮೆಸೇಜು, "ನಂಗೆ ಈಗ್ಲೂ ಗಿಲ್ಟ್ ಕಾಡ್ತಿದೆ, ನಿಂಗೆ ಮೋಸ ಮಾಡಿದ್ನಾ ಅಂತ" ಎಂದು ಓದಿಸಿಕೊಂಡಿತ್ತು.
"ಊಹ್ಞೂಂ" ಅಂದೆ.
ಸ್ಬಲ್ಪ ಹೊತ್ತು ಅವಳ ಆಗಿನ ಪರಿಸ್ಥಿತಿ ಹೇಗಿತ್ತು ಅಂತ ನೆನಪು ಮಾಡಿಕೊಂಡೆ. ಅವಳ ಸ್ಥಿತಿ ನನಗಿದ್ದಿದ್ರೆ ಏನು ಮಾಡಬಹುದಿತ್ತು? ಅವಳ ಇಲ್ಲದ ಅಮ್ಮನ ಕನಸು, ಓದಬೇಕಾದ ಅನಿವಾರ್ಯತೆ, ಅವಲಂಬಿತ ಜೀವನ... ಊಹ್ಞೂಂ, ಒಂದು ಚೂರೇ ಚೂರು ತಪ್ಪು ಅವಳದ್ದಿರ್ಲಿಲ್ಲ. ಮತ್ತೆ ಮೆಸೇಜಿಸಿದೆ,
"You were right. ಅದು ಇಬ್ರೂ ಸೇರಿ ತಗೊಂಡ ತೀರ್ಮಾನ. ಬ್ರೇಕಪ್ ಅಂದ್ರೆ ಬ್ರೇಕಪ್, ಮೂವ್ ಆನ್ ಅಷ್ಟೇ. ಎಲ್ಲೋ ಮೂಲೇಲಿ ನೀನು ಸಿಕ್ಕಿದ್ರೆ ಚೆನ್ನಾಗಿತ್ತು ಅಂತ ಇದೆ. ಆದ್ರೆ ಅದು ಅಸಾಧ್ಯ." I was damn sure, ಅವಳಿಗೆ ಅದೆಷ್ಟು ಗಿಲ್ಟ್ ಕಾಡ್ತಿತ್ತೇನೋ. ಬ್ರೇಕಪ್ ಆದ್ಮೇಲೆ ಎಲ್ಲಾ ಹುಡ್ಗೀರಂಗೇ ನಾನೂ ಮೋಸಗಾರ್ತಿ ಆದ್ನಾ? ಹೆಣ್ಣುಕುಲಕ್ಕೆ ಅಂಟಿರೋ ಮೋಸದ ಅನ್ವರ್ಥಕಕ್ಕೆ ನಾನೂ ಕೊಡುಗೆ ಕೊಟ್ನಾ ಅಂತ ಅದೆಷ್ಟು ವರ್ಷ ಆಕೆ ಕೊರಗಿರ್ಬೋದು! ಅದಕ್ಕೆಲ್ಲ ಮುಕ್ತಿ ಯಾವಾಗ ಸಿಗ್ಬೋದು? ಗೊತ್ತಿಲ್ಲ. ಯಾರೂ ಭಾವನೆಯ ವಿಷ್ಯದಲ್ಲಿ ವಂಚನೆ ಮಾಡಲ್ಲ ಅಲ್ವಾ? ಬೇರೆಯವರ ಭಾವನೆಗೆ ವಂಚನೆಯಾಗತ್ತೆ ಅಂತ ಸುಮ್ನಿದ್ರೆ ಅವ್ರ ಭಾವನೆಗೆ ವಂಚನೆ ಆಗಲ್ವಾ? ರಾತ್ರಿ ಮಲಗುವಾಗೆಲ್ಲ ನಿಮ್ಮದೇ ಆತ್ಮ ವಂಚಕ ಅಂತ ಅಲಾರ್ಮ್ ಹೊಡ್ಕೊಳ್ತಿದ್ರೆ ನಿದ್ರೆ ಬರತ್ತಾ? ಊಹ್ಞೂಂ. ಪ್ರೀತಿ ಅನ್ನೋದು ಹೊಂದಾಣಿಕೆ ಮಾತ್ರವಲ್ಲ, ವಂಚನೆ ಕೂಡ. ಒಂದೋ ಬೇರೆಯವರನ್ನ ವಂಚಿಸ್ಬೇಕು, ಇಲ್ದಿದ್ರೆ ನಿಮಗೆ ನೀವೇ ದ್ರೋಹ ಮಾಡ್ಕೊಳ್ಬೇಕು. I was right, she was right. ಯಾರಿಗೂ ಮೋಸ ಆಗ್ದಿದ್ದಾಗ ಆ ಹೊರೆ ಯಾಕೆ ಬೇಕು? ಕಳಚಿ ಬಿಸಾಕಿದೆ ಅಷ್ಟೇ.


ಅಧೂರಿ ಆಂಸ್ ಚೋಡ್‌ಕೆ, ಅಧೂರಿ ಪ್ಯಾಸ್ ಚೋಡ್‌ಕೆ...
Can love happen twice, with the same person? ಊಹ್ಞೂಂ, ಮೊದಲು ಹೇಳಿದ್ದರ ಪಕ್ಕಾ ವಿರುದ್ಧವಿದು. ನಮಗೆಲ್ಲ ಸಾಂಗತ್ಯ ಬೇಕು, ನಮ್ಮನ್ನ ಯಾರಾದ್ರೂ ರಾಜನ ಥರ, ರಾಣಿ ಥರ ನೋಡ್ಕೊಳ್ಬೇಕು- ಕೇರ್ ಮಾಡ್ಬೇಕು. ಅಗ್ದಿ ಮುಗ್ಧತೆಯಿದು. ಆದ್ರೆ ಇದಕ್ಕಿಂತ ದೊಡ್ಡ ಕ್ರೈಂ ಕೂಡ ಇಲ್ಲ. ಈ ಸಮಾಜ ಸೃಷ್ಟಿಸಿರೋ mass hallucination, ಈ ಪ್ರೀತಿ ಅನ್ನೋದು. ನಮ್ಮ ಸಾಂಗತ್ಯದ ಬಯಕೆಯನ್ನ ಈ ಭ್ರಮೆ ಬಳಸಿಕೊಳ್ಳತ್ತೆ. ಅಪ್ಪ, ಅಮ್ಮ, ದೋಸ್ತರು ಇತ್ಯಾದಿಗಳನ್ನ ನಾವು ಆಯ್ಕೆ ಮಾಡ್ಕೊಳಲ್ಲ. ಆದ್ರೆ ಸಂಗಾತಿಯನ್ನ ಆಯ್ಕೆ ಮಾಡ್ಕೊಳ್ತೀವಿ! ಅದು ನಿಷ್ಕಲ್ಮಶವಾಗಿದ್ರೆ ಆಯ್ಕೆ ಎಲ್ಲಿಂದ ಬಂತು? Love is bad option to be happy. ಮೊದಲನೇ ಆಯ್ಕೆಯಲ್ಲೇ ನಾನು ತಪ್ಪಿದ್ದೆ, ಇನ್ನು ಮತ್ತೊಂದ್ಸಲ ಅದೇ ವ್ಯಕ್ತಿಯ ಜೊತೆ ಪ್ರೀತಿ ಹುಟ್ಟತ್ತೆ ಅಂತ ಹೇಳಿದ್ರೆ ಪ್ರೀತಿಯನ್ನೋ ಸಮೂಹ ಸನ್ನಿಯ ಬೆಳವಣಿಗೆಗೆ ನಾನೂ ಸಹಾಯ ಮಾಡ್ದಂಗಲ್ವಾ?
ಆದ್ರೂ ಈ ಭ್ರಮೆಯಲ್ಲಿ ಬದುಕೋ ಮಜಾನೇ ಬೇರೆ. ಅದೊಂದು ಕಾವ್ಯ. ಅದರ ಅನುಭವ ಎಲ್ರಿಗೂ ಸಿಗ್ಬೇಕು. ಆದ್ರೆ ಅದರ ದಾಸರಾಗ್ಬಾರ್ದು. ಲೈಫಲ್ಲಿ ಎಲ್ಲಾ ಚಟಗಳನ್ನೂ ಮಾಡಿ, ಪ್ರೀತಿಯನ್ನ ಹುಷಾರಾಗಿ ಮಾಡಿ.

ಯೇ ಪ್ಯಾರ್ ಹೇ ಗಿಲಾ ನಹೀಂ...
ಅಪೂರ್ಣ ಕತೆಯೊಂದನ್ನ ಹೇಳಿದೆ. ಪಾತ್ರಗಳಿಲ್ಲ, ಕತೆಯೂ ಇಲ್ಲ ಅನ್ನೋ ಥರದ್ದು. ಆದ್ರೆ ಇದರಲ್ಲಿ ಏನೋ ಇದೆ, ನಾನಿದೀನಿ, ಅವ್ಳಿದಾಳೆ, ಪ್ರೀತಿಯಿದೆ ಕೊನೆಗೆ ಉಳ್ಯೋದು ನಿಮ್ಮನ್ಮ ನೀವೆಷ್ಟು ಪ್ರೀತಿಸ್ತೀರಿ ಅನ್ನೋದಷ್ಟೇ. ಸಾಂಗತ್ಯ ಎಲ್ಲರಿಗೂ ಬೇಕು. ಹಾಗಂತ ಕಂಫರ್ಟ್ ಫೀಲ್ ಆಗ್ದಿರೋ, ಖುಷಿ ಸಿಗ್ದಿರೋ ರಿಲೇಶನ್ಶಿಪ್ ಇಟ್ಕೊಂಡು ಏನ್ ಮಾಡೋದು ಅಲ್ವಾ? ನಮ್ಮಿಬ್ರ ನಡುವೆ ಪ್ರೀತಿಯಿಲ್ಲ, ಸ್ನೇಹಕ್ಕಿಂತ ಜಾಸ್ತಿಯಾದದ್ದು ಏನೋ ಇದ್ದಿರ್ಬೋದು. ಯಾವುದು ಪ್ರೀತಿ, ಯಾವುದು ಸ್ನೇಹ ಅನ್ನೋ ಕ್ಲಾರಿಟಿ ಸಿಕ್ರೆ ನೀವು ಮೆಚ್ಯೂರ್ ಆಗ್ಬಿಟ್ಟಿದೀರಿ ಅಂತಾನೇ ಅರ್ಥ. ನಾನು ಪ್ರಬುದ್ಧ ಮನ್ಷ ಅಂತ ಹೇಳ್ಕೊಂಡಾಗ... ಆಹಾ..!

Be happy, better be single.

Comments

Popular posts from this blog

ಒಂದು ಭಾನುವಾರದ ಕತೆ

ಜಮೀನು, ಕೊಡದಲ್ಲ