ಜಮೀನು, ಕೊಡದಲ್ಲ

“ಮುಂದಿನ ವರ್ಷ ಇಷ್ಟೊತ್ತಿಗೆ ಪ್ಯಾಟೆ ನಮ್ಮೂರ್ ಹೊಳೆ ಬ್ಯಾಲೆ ತನ್ಕ ಬರ್ತು ನೋಡು" ಅಂದ ಮಾಬ್ಲಪ್ಪಚ್ಚಿಯ ಮುಖದಲ್ಲಿ ಅದೆಂಥ ಕಾನ್ಫಿಡೆನ್ಸ್ ಇತ್ತಂದ್ರೆ ಯಾವುದಾದ್ರೂ ಟಿವಿಯವ್ರು ನೋಡಿದ್ರೆ ಮಾರನೇ ದಿನದಿಂದ ಬೆಳಿಗ್ಗೆಯ ಭವಿಷ್ಯ ಹೇಳುವ ಸ್ಲಾಟಿನಲ್ಲಿ ಇವನನ್ನೇ ತೋರಿಸುತ್ತಿದ್ದರೇನೋ.

ಇಪ್ಪತ್ತು ಮನೆಯ ಕೇರಿಯಲ್ಲಿ ಉಳಿದಿರೋ ಐವತ್ತು ಮಂದಿಯಲ್ಲಿ ಮೂವರು ಮಾತ್ರ ಮೂವತ್ತರ ಒಳಹೊರಗಿನ ಪ್ರಾಯದವರು ಅಂದ್ರೆ ನಂಬ್ಲೇಬೇಕು ನೀವು. ಮೆರವಣಿಗೆ ಊರು ಇಂಥ ಹಲವು ಊರುಗಳಿಗೆ ಉದಾಹರಣೆಯಷ್ಟೇ, ವೃದ್ಧಾಶ್ರಮವಾದ ಊರುಗಳಿಗೆ ಮಾದರಿಯೊಂದಿದ್ದರೆ ಅದು ಮೆರವಣಿಗೆ. ಬೆಂಗಳೂರನ್ನು ಉದ್ಧರಿಸುವವರನ್ನು ಉತ್ಪಾದಿಸುವ ಕಾರ್ಖಾನೆಗಳ ಪೈಕಿ ಇದೂ ಒಂದಾಗಿತ್ತು. ಊರ ಎರಡು ಗಡಿಗಳನ್ನು ಎರಡು ಹಳ್ಳಗಳು ಬೇರೆ ಊರುಗಳಿಂದ ಪ್ರತ್ಯೇಕಿಸಿದ್ದರೆ, ಮತ್ತೆರಡು ಬದಿಯಲ್ಲಿ ಪಶ್ಚಿಮ ಘಟ್ಟದ ಸಾಲು. ಮೂವತ್ತು-ನಲ್ವತ್ತು ವರ್ಷಗಳ ಹಿಂದೆ ತೋಟಕ್ಕೆ ಬಿಟ್ಟ ಬೆಟ್ಟಗಳು ಬಯಲಾಗಿದ್ದು ಬಿಟ್ಟರೆ ಹೆಚ್ಚಿನ ಗುಡ್ಡಗಳು ಹರಿದ್ವರ್ಣದಲ್ಲಿ ಕತ್ತಲನ್ನು ಹೊದ್ದಿದ್ದವು. ಸಂಪರ್ಕಕ್ಕೆಂದು ಸರಿಯಾದ ರಸ್ತೆಯೂ ಇರದ ಊರಿಗೆ ಕೋಟಿ ರೂಪಾಯಿ ವೆಚ್ಚದ ಸೇತುವೆ ನಿರ್ಮಾಣಗೊಳ್ಳುತ್ತಿತ್ತು, ಅದಕ್ಕಾಗಿನ ಹೋರಾಟವೂ ಒಂದು ಕತೆಯೇ.

“ನಂಗ ಪ್ರಾಯದಲ್ಲಿದ್ದಾಗ ಬ್ರಿಜ್ ಮಾಡ್ಕೊಡಿ ಅಂದಿದ್ಯ. ಆವಾಗ ಊರಲ್ಲಿರ ಅಷ್ಟೂ ಮೂಲೆಲ್ಲೂ ಜಮೀನ್ ಮಾಡ ಉಮೇದಿ. ಅರ್ವತ್ ಆದ್ಮೇಲೆ ಬ್ರಿಜ್ ಆತು.ಈಗ ಪ್ರಾಯದ್ ಪ್ವಾರ್ಗನೂ ಊರಲ್ಲಿಲ್ಲೆ.ಕರ್ಡದ್ ಬ್ಯಾಣಕ್ಕೆ ಹೋಗಿ ಕರ್ಡ ಕಡ್ಯಲೆ ನಂಗ್ಳತ್ರ ಅಟಾಪಿಲ್ಲೆ. ಈ ಬ್ರಿಜ್ಜು ಒನಮ್ನಿ ಹಲ್ಲಿಲ್ಲಗಿದ್ದಾಗ ಸಿಕ್ಕಿದ್ ವಟಾಣಿ ಕಾಳಾತು ನೋಡು" ಅಂತ ಸಂಭಾಷಣೆ ಶುರು ಮಾಡಿದ್ದು ವಿನಾಯ್ಕಣ್ಣ. ಅದಕ್ಕೆ ಸ ಗುಟ್ಟಿದ್ದು ಮಾಬ್ಲಪ್ಪಚ್ಚಿ.

“ಸುಡ್ಗಾಡ್ ಕರ್ಡ ಕಡ್ದು ತ್ವಾಟಕ್ ಮುಚ್ಚನ ಅಂದ್ರೆ ಆಳ್ ಪಗಾರಾದ್ರೂ ಸ್ವಲ್ಪಿದ್ದನಾ? ಮೊನ್ನೆ ದೇವುನತ್ರ ಕರ್ಡ ತಂದಾಕಾ ಅಂದಿ, ಹೊರಿಗೆ ನಾನೂರ್ ಅಂದಾ. ಯಮ್ಮನೆ ಕರ್ಡ ಕಡ್ಯಲೆ ಆಳು ತಗಂಡಿದ್ದು, ಹೊರೆ ಲೆಕ್ಕಕ್ ಹೋದ್ರೆ ನಾನೂರೈವತ್ ಆಗೋಗ್ತನ. ಕಡ್ಸದ್ಕಿಂತ ತಗಂಡ್ರೇ ಸೋವಿ ಆಗ್ತು ನೋಡು" ಅಂದ ಮಾಬ್ಲಪ್ಪಚ್ಚಿ, ಕೊನೆ ಕೊಯ್ಲಿಗೆ ತಾನು ಗುದ್ದಾಡಿದ ವ್ಯಥೆಯನ್ನೂ ಹೇಳಲು ಶುರು ಮಾಡಿದ. “ಕೊನೆ ಕೊಯ್ಯಲೆ ಗೌಡ ಮೂರ್ ಆಳ್ ಬಂದಾ. ಅಡ್ಕೆ ಸೊಲ್ಯಲೆ ಜನ ಸಿಗ್ದೇ ಹಂಗೋಹಿಂಗೋ ಮನೆವೇ ಸುಲ್ದಾಕ್ದ್ಯ. ಇನ್ನೂ ಐದಾಳ್ ಕೊನೆ ಕೊಯ್ಯದಿತ್ತು, ಗೌಡ ಬಂಜ್ನಿಲ್ಲೆ. “ಸತ್ತೋಗ್ಲಿ ಇವು" ಹೇಳ್ತಾ ಗೋವಿಂದ ಸೊಸೈಟಿಗೆ ಹೋಗಿ ಎಂಬತ್ ಸಾವ್ರ ಕೊಟ್ಟು ದೋಟಿ ತಂದಿ ಹೇಳಾತು.ಅದ್ರಲ್ಲಾರೂ ಕೊಯ್ಯವು ಬೇಕಲಿ?! ನಾಲ್ಕ್ ದಿನ ಹುಡ್ಕಿ ಒಂದ್ ಗೌಡನ ಹಿಡ್ಕ ಬಂದಿ. ತೆರಿ ಅಡ್ಕೆ ಹೆಕ್ಕಲೆ ಜನ ಇಲ್ಲೆ, ಯಮ್ಮನೆ ಮಾಣಿ ಹತ್ರ ನಾಕ್ ದಿನ ಬಂದೋಗು ಅಂದ್ರೆ "ಅಪಾ ಆಳಿಗೆ ಮತ್ತೊಂದ್ನೂರ್ ಜಾಸ್ತಿ ಕೊಡ್ತಿ ಹೇಳು. ಎಷ್ಟಾಗ್ತು ಹೇಳಿ ಯಾನೇ ಕೊಡ್ತಿ. ನಾ ಬಂದೋಪದ್ಕಿಂತ ಅದೇ ಸೋವಿ ಆಗ್ತು" ಅಂದ್ಬುಟಾ. ಅಷ್ಟ್ ದುಡ್ ಕೊಡ್ತಿ ಅಂದ್ರೂ ಬರವು ಬೇಕಲಿ? ಈಗ ಆಳ್ಗಕ್ಕೂ ಮೈ ಬಗ್ತಿಲ್ಲೆ.ಕಡಿಗಂತೂ ನಾಲ್ಕ್ ದಿನ ಕೂಡಿ ಆನೇ ತೆರಿಯಡ್ಕೆ ಹೆಕ್ಕಂಡಿ. ಹದ್ನೈದ್ ದಿನ ಸೊಂಟ ನೆಟ್ಗ್ ಮಾಡಲೆ ಆಜಿಲ್ಲೆ ಸಾಯ್ಲಿ" ಎಂದು ಮಾ?ಪ್ಪಚ್ಚಿ ಹೇಳುತ್ತಿದ್ರೆ ಫಲಗುತ್ತಿಗೆ ಕೊಟ್ಟ ನಾನೇ ವಾಸಿ ಎಂ? ಸಮಾಧಾನವಾಯ್ತು.

ಅಷ್ಟರಲ್ಲಿ ವಿನಾಯ್ಕಣ್ಣ, "ಮುಂದಕ್ಕೂ ಹಿಂಗೇ ಆದ್ರೆ ಜಮೀನು ಕೊಟ್ಟಿಕ್ಕೆ ಪ್ಯಾಟೆಲ್ ಮನೆ ತಗಂಡ್ ಕುತ್ಕತ್ತಿ ನಾನು. ಇರ ಎಂಟ್ಹತ್ ವರ್ಷಾರೂ ತಲೆಬಿಶಿ ಇಲ್ದೇ ಬದ್ಕಲಾಗ್ತು. ಜಮೀನ್ ಮಾರಿದ್ ದುಡ್ಡಲ್ಲಿ ಎಫ್ಡಿ‌ ಇಟ್ರೆ ಬಡ್ಡಿ ದುಡ್ಡು ಸಾಕು ಯಂಗೆ, ಯನ್ ಹೆಂಡ್ತಿಗೆ" ಅಂದಾಗ ಮಾಬ್ಲಪ್ಪಚ್ಚಿ ಹೇಳಿದ್ದೇ ಶುರುವಿನಲ್ಲಿ ಹೇಳಿದ ಅರ್ಬನ್ ಸ್ಟ್ರೆಚಿಂಗ್ ವಿಷಯ.

ಗಾಂಧಿಯೂ ಹೇಳಿದ್ದನಂತೆ, ಗ್ರಾಮೀಣ ಭಾರತವೂ ನಗರಗಳಂತೆ ಸೌಲಭ್ಯ ಹೊಂದಿದಾಗ ನಿಜವಾದ ಪ್ರಗತಿಯಾದಂತೆ ಅಂತೇನೋ.ಭಾರತದ ಪ್ರಗತಿ ಅದೆಷ್ಟು ವೇಗವಾಗಿದೆ ಅಂದ್ರೆ ಗ್ರಾಮೀಣ ಭಾರತ ನಗರಗಳ ಸೌಲಭ್ಯಗಳನ್ನ ಪಡೆಯೋದಷ್ಟೇ ಅಲ್ಲ, ನಗರಗಳಾಗಿಯೇ ಬದಲಾಗುತ್ತಿವೆ.ಥೇಟು ಹಳೆ ನೋಕಿಯಾ ಮೊಬೈಲಿನಲ್ಲಿ ಬರುತ್ತಿದ್ದ ಹಾವಿನ ಆಟದಂತೇ, ತನ್ನ ಸುತ್ತಲಿನ ಹಳ್ಳಿಗಳನ್ನೆಲ್ಲ ನುಂಗಿ ನಗರ ಬೆಳೆಯುತ್ತದೆ. ಮೊದಲಿಗೆ ಪೇಟೆ ತಮ್ಮೂರ ಹತ್ತಿರ ಬಂದ ಖುಷಿ. ಆಮೇಲೆ ತಾವೇ ನಗರವಾದ ಹೆಮ್ಮೆ. ಅದಾದಮೇಲಿನ ಆಲಸ್ಯ, ಏಕತಾನತೆ, ಸ್ವಾತಂತ್ರ್ಯ ಹರಣ, ಕೊರತೆಗಳ ಯಾದಿ ಯಾರ ಗಮನಕ್ಕೂ ಬರದೆ ತಲೆಮಾರೊಂದು ಮುಗಿದು ಹೋಗುತ್ತದೆ. ಹೊಸ ತಲೆಮಾರು ಹಳ್ಳಿಗಳಿಂದ ದೂರವೇ ಉಳಿದು, ದೂರದಲ್ಲಿರೋ ಯಾವುದೋ ಹಳ್ಳಿ ವೃದ್ಧಾಶ್ರಮವಾಯ್ತೆಂದು ಹೀಯಾಳಿಸುತ್ತದೆ. ಇತಿಹಾಸದ ಖಬರೇ ಇಲ್ಲದ ನಿರ್ವೀರ್ಯ ಸಮಾಜವೊಂದರ ನಿರ್ಮಾಣಕ್ಕೆ ಪ್ರಜಾಪ್ರಭುತ್ವದ ಮುಖವಾಡ ಹೊತ್ತ ಅಭಿವೃದ್ಧಿ ಪರ ಸರ್ಕಾರವೊಂದು ನಗರ ನಿರ್ಮಾಣದ ಜಾಹೀರಾತಿನಲ್ಲಿ ನಗುತ್ತದೆ. ನಾವೂ ನಗುತ್ತೇವೆ, ಭಾವನೆಗಳನ್ನು ಅನುಭವಿಸದೇ ತೋರ್ಪಡಿಸುವ ನಕಲಿತನ ನಮ್ಮೊಳಗೆ ಮೂಡಿ ಅದ್ಯಾವುದೋ ಕಾಲವಾಯ್ತಲ್ಲ! ನೋಡಿ, ಕತೆ ಹೇಳಲು ಬಂದವ ನನ್ನದೇ ಯೋಚನೆಯಲ್ಲಿ ಬಿದ್ದೆ. ಈ ಕತೆ ವಿನಾಯ್ಕಣ್ಣನದು, ಮಾಬ್ಲಪ್ಪಚ್ಚಿಯದು.

ವಿನಾಯ್ಕಣ್ಣ ತೀರಾ ಹತ್ತೆಕರೆ ಬಾಗಯಾತದ ಜಮೀನ್ದಾರನಲ್ಲ. ತನ್ನ ತಂದೆಯ ಕಾಲದಲ್ಲಿದ್ದ ಮೂವತ್ತೈದು ಗುಂಟೆ ಗದ್ದೆಗೇ ಅಡಿಕೆ ಸಸಿಗಳನ್ನು ನೆಟ್ಟು ತೋಟವೆಂದು ಕರೆದ. ಆ ಅಡಿಕೆ ಸಸಿಗಳು ಫಲ ಹೊತ್ತುಕೊಂಡು ನಿಜವಾಗಿಯೂ ತೋಟವಾಗಿ ಗುರ‍್ತಿಸಿಕೊಳ್ಳುವ ಹೊತ್ತಿಗೆ ವಿನಾಯ್ಕಣ್ಣನ ಮೊದಲ ಮಗಳ ಮದುವೆಯಾಗಿತ್ತು, ಮತ್ತೊಬ್ಬಳು ಮಗಳು ಬೆಂಗಳೂರಿನ ಯಾವುದೋ ಕಂಪನಿಯಲ್ಲಿ ಆರಂಕಿಯ ಮಾಸಿಕ ಸಂಬಳ ಪಡೆಯುವ ನೌಕರಸ್ಥಳಾಗಿದ್ದಳು. ಅವರಿಬ್ರ ನಡುವೆ ಹುಟ್ಟಿದ್ದ ಮಗ ತಾನು ಕಲಿತಿದ್ದು ಎಷ್ಟು ಎಂಬ ಲೆಕ್ಕವೇ ಮರೆತುಹೋಗುವಷ್ಟು ಕಲಿತು ಜರ್ಮನಿಯೋ, ಮತ್ತೆಂತದೋ ದೇಶದ ಕಾಯಂ ನಿವಾಸಿಯಾಗಿ ಬದಲಾಗಿದ್ದ.ಇಷ್ಟೂ ಉದ್ಧಾರಕ್ಕೆ ಕಾರಣವಾಗಿದ್ದು ವಿನಾಯ್ಕಣ್ಣನ ಸ್ವಂತ ದುಡಿಮೆಯೇ ಹೊರತು ಮತ್ತೇನಲ್ಲ. ಜನರೆಲ್ಲ ವಿನಾಯ್ಕಣ್ಣನ ಮಕ್ಕಳ ಸಂಬಳ ಕೇಳಿ ವಿನಾಯ್ಕಣ್ಣ ನಗರವಾಸಿಯಾಗುತ್ತಾನೆಂದು ಊಹಿಸಿದರೂ ಆತ ಮಾತ್ರ ಮೆರವಣಿಗೆಯಲ್ಲೇ ತನ್ನ ಬದುಕನ್ನು  ಕಳೆವ ನಿರ್ಧಾರ ಕೈಗೊಂಡಿದ್ದ. ಕೇಳಿದಾಗೆಲ್ಲ ತಾನು ಯಾವುದೋ ಇಯತ್ತೆಯಲ್ಲಿ ಓದುತ್ತಿದ್ದಾಗ ಕಲಿತಿದ್ದ “ದಾರಿದ್ರ್ಯಮಲ್ತೆ ಆ ನಾಗರಿಕ ಜೀವನಂ ಈ ವನ್ಯ ಸಂಸ್ಕೃತಿಯ ಮುಂದೆ? " ಎಂಬ ಕುವೆಂಪು ವಾಕ್ಯವನ್ನು ಕ್ವೋಟ್ ಮಾಡುತ್ತಿದ್ದ.

ಇಂತಿಪ್ಪ ವಿನಾಯ್ಕಣ್ಣನಿಗೂ, ಕೃಷಿ ಮಾಡಿಕೊಂಡು ಬದುಕೋಕಾಗ್ತದಾ? ಅನ್ನೋ ಪ್ರಶ್ನೆ ಮೂಡಿದ್ದು ಈಗೊಂದು ವಾರದ ಹಿಂದಂತೆ. ಅದನ್ನ ನನಗೆ ಹೇಳಿದ್ದು ಅವನೇ! ತನ್ನೆದುರೇ ಕಳೆದ ಎರಡೂವರೆ ತಲೆಮಾರುಗಳಲ್ಲಿ ಯಾವತ್ತೂ ಕೂಲಿಗಳಿಗೆ ಮುಂಗಡ ಕೊಟ್ಟೂ ಕೆಲಸವಾಗದೇ ಉಳಿದಿದ್ದು ಇಲ್ಲವಾಗಿತ್ತು. ಈಗ ತಾನೇ ಕೊಟ್ಟ ಹತ್ತು ಸಾವಿರದ ಮುಂಗಡವನ್ನೂ ನಿರ್ಲಕ್ಷ್ಯಿಸಿ ಆಳುಮಗ ಕೆಲಸಕ್ಕೆ ಬಾರದೇ ತೋಟ ಹಾಳುಬೀಳುತ್ತಿರುವುದು ವಿನಾಯ್ಕಣ್ಣನಿಗೆ ತಲೆಬೇನೆಯಾಗಿತ್ತು.ತನ್ನದೇ ಪರಿಶ್ರಮದಿಂದ ತಲೆಯಿತ್ತಿದ ತೋಟವನ್ನು ತನಗೇ ನೋಡಿಕೊಳ್ಳಲು ಆಗುತ್ತಿಲ್ಲವೆಂಬ ಕೊರಗೂ ಅವನಲ್ಲಿದ್ದಿತ್ತು. ಮೊನ್ನೆ ಬ್ರಿಜ್ ಬಳಿ ನಡೆದ ಮಾಬ್ಲಣ್ಣನೊಟ್ಟಿಗಿನ ಸಂಭಾಷಣೆಯಲ್ಲಿ ಸೊಕಾಗಿ ಹೇಳಿದ್ದ, ಪೇಟೆಯಲ್ಲಿ ಮನೆ ಮಾಡುವ ಸಂಗತಿ ಅಳವಡಿಕೆಗೂ ಸೂಕ್ತ ಎಬ ನಿರ್ಧಾರಕ್ಕೆ ಬಂದಿದ್ದ ವಿನಾಯ್ಕಣ್ಣ.

ತಲೆಯೊಳಗೆ ಹೊಕ್ಕ ವಿಚಾರ ಕಾರ್ಯರೂಪಕ್ಕೆ ಬರಲು ಎರಡು ದಿನವೂ ಹಿಡಿಯಲಿಲ್ಲ. ಯಾರದೋ ಜೊತೆ ಹರಟುವಾಗ ಹೇಳಿದ್ದ ಜಮೀನು ಮಾರುವ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದ ಯಾರೋ ಒಬ್ಬ ನಾಲ್ಕು ದಿನಗಳೊಳಗಾಗಿ ಗಿರಾಕಿಯನ್ನೂ ಕರೆತಂದಿದ್ದ. ಅರ್ಧ ಎಕರೆ ಹಳೆತೋಟ ಹಾಗೂ ತೋಟವಾಗಿ ಮಾರ್ಪಾಡಾಗಿದ್ದ ಮೂವತ್ತೈದು ಗುಂಟೆ ಗದ್ದೆಯನ್ನು ಸೇರಿ ನಾಲ್ಕು ಕೋಟಿಗೆ ಕೊಳ್ಳುವುದಾಗಿ ಗಿರಾಕಿ ಘೋಷಿಸಿದಾಗ, ಎಲಾ ಇವನಾ! ವರ್ಷಕ್ಕೆ ಅಬ್ಬಬ್ಬಾ ಅಂದರೆ ಹತ್ತು ಲಕ್ಷ ರೂಪಾಯಿ ದುಡಿಮೆಯ ತೋಟಕ್ಕೆ ಈ ದರ ಕೊಟ್ಟು ಖರೀದಿ ಮಾಡಿದರೆ ದಿವಾಳಿ ಎದ್ದೋಗೋದಿಲ್ವಾ! ಎಂದು ಮನಸ್ಸಿನಲ್ಲೇ ಉದ್ಗರಿಸಿದರೂ ಮಾರಾಟಕ್ಕೆ ಒಪ್ಪಿಗೆಯನ್ನೂ ಕೊಡದೆ, ದರವನ್ನೂ ತಿರಸ್ಕರಿಸದೇ, “ಮಕ್ಕಳ ಬಳಿ ಕೇಳಿ ನೋಡ್ತೆ, ನಿಮ್ಮ ನಂಬರ್ ಕೊಟ್ಟು ಹೋಗಿ ಆಯ್ತಾ" ಎಂದು ಅಟ್ಟದ ಕಂಬದ ತುದಿಯನ್ನು ನೋಡಿದ. ಗಿರಾಕಿ ನಂಬರ್ ನೀಡಿ, ನಾ ಕೇಳಿದ್ದಕ್ಕಿಂತ ಜಾಸ್ತಿ ಯಾರೂ ಕೇಳೋದಿಲ್ಲ, ಯೋಚ್ನೆ ಮಾಡಿ ಎಂದು ಹೇಳಿ ನಡೆದಿದ್ದ.

ಆವತ್ತು ಸಂಜೆಯೇ ನಾಲ್ಕೂವರೆ ತಾಸು ಹಿಂದಿದ್ದ ಜರ್ಮನಿಯ ನಿವಾಸಿ ಮಗನಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದೂ ಆಯ್ತು. ಮಗ ಮಹಾಶಯ, "ಅರ್ಜೆಂಟ್ ಮಾಡಡಾ ಅಪಾ, ಮುಂದಿನ್ವಾರ ಯನ್ಕೆ ದೋಸ್ತನ ಮದ್ವೆ ಇದ್ದು, ಬೆಂಗ್ಳೂರಿಗೆ ಬರ್ತಿಪ್ಪೆ. ಹಂಗೇ ಊರಿಗೂ ಬಂದ್ ಹೋವ್ತೆ" ಎಂದಿದ್ದ.

ಕೊಟ್ಟ ಮಾತಿಗೆ ತಪ್ಪದ ಸತ್ಯಹರಿಶ್ಚಂದ್ರನ ಮೊಮ್ಮಗ (ವಿನಾಯ್ಕಣ್ಣನ ಅಪ್ಪನ ಹೆಸರು ಹರಿಶ್ಚಂದ್ರ ಅಂತಾಗಿದ್ದರೂ ಆತ ಸತ್ಯವನ್ನೇ ನುಡಿಯುತ್ತಿದ್ದನೇ ಎಂದು ಕೇಳಿದರೆ ನನ್ನಿಂದ ಉತ್ತರ ಗೊತ್ತಿಲ್ಲ ಎಂದೇ ಬರುತ್ತದೆ!)ಅಜಮಾಸು ಏಳನೇ ದಿನಕ್ಕೆ ಮೆರವಣಿಗೆಯಲ್ಲಿದ್ದ. ಅಪ್ಪನಿಗಾಗಿ ಬೆಂಗಳೂರಿನಿಂದ ಒಂದು ಕಾರನ್ನೂ ತಂದು ಮೊದಲ ದಿನ ಅಲ್ಲಿಲ್ಲಿ ತಿರುಗಾಡಿದ್ದಷ್ಟೇ ಬಂತು, ಜಮೀನು ಮಾರಾಟದ ಸುದ್ದಿಯೇ ಈರ್ವರ ನಡುವಲ್ಲಿ ಬರಲಿಲ್ಲ. ಆದರೆ ವಿನಾಯ್ಕಣ್ಣ ಹೇಳಿಕೇಳಿ ಹರಿಶ್ಚಂದ್ರನ ಮಗನಲ್ಲವೇ! ಮಾರನೇ ದಿನ ಬೆಳಿಗ್ಗೆ ಆಸ್ರಿ ಕುಡಿದಾಗುವ ಹೊತ್ತಿಗೆಲ್ಲ ಗಿರಾಕಿ ಅಂಗಳಕ್ಕೆ ಬಂದು, “ಹೆಗ್ಡೇರೆ, ಮಗ ಬಂದು ಮಾತಾಡ್ತಾ ಅಂದಿದ್ರಲ್ರ; ಕರೀರಿ ನೋಡ್ವಾ"

ಅಂದಂಗೆ ನೋಡಿ, ವಿನಾಯ್ಕಣ್ಣನ ಮಗನ ಹೆಸರೇ ಹೇಳದೆ ಕತೆ ಹೇಳುತ್ತಿದ್ದೆ ಇಷ್ಟೊತ್ತು! ನಾಮಕರಣದ ದಿನ ಆತನ ಹೆಸರು ಹರಿಶ್ಚಂದ್ರನೆಂದು ಘೋಷಣೆಯಾಗಿತ್ತಾದರೂ ಶಾಲೆಯಲ್ಲಿ 'ಹರಿ... ಹರಿ’ ಎಂದು  ಉಳಿದ ಮಕ್ಕಳ ಬಾಯಲ್ಲಿ ಹರಿಸಿಕೊಳ್ಳಬಾರದೆಂದು ಹರಿಶ್ಚಂದ್ರನ ತಾಯಿ ಕಾಳಜಿಯಿಂದ ಗಣಪತಿಯ ನಾಮಗಳಲ್ಲೊಂದಾದ ಅಚಿಂತ್ಯ ಎಂದು ಮರುನಾಮಕರಣ ಮಾಡಿದ್ದಳು. ಒಂದು ನಮೂನೆಯಲ್ಲಿ ಅಪ್ಪನ ಹೆಸರನ್ನೇ ಮಗನಿಗಿಟ್ಟಿದ್ದರೂ ಹೊಸ ಫ್ಯಾಷನ್ನಿನ ಹೆಸರು ಎಲ್ಲರಿಗೂ ಇಷ್ಟವೇ ಆಗಿತ್ತು.ಅಷ್ಟಕ್ಕೂ ಹೆಸರಿಂದ ಆಗೋದಾದರೂ ಏನಿದೆ ಅಲ್ವೇ? ಗುಲಾಬಿಯನ್ನು ಮೈಸೂರ್ಪಾ‌ಕ್ ಎಂದು ಕರೆದ ಮಾತ್ರಕ್ಕೆ ಸಿಹಿಯಾದೀತೇ? ಹಂಗಾಗಿ ನಾವು ಈ ಉಪಕತೆಗಳನ್ನೆಲ್ಲ ನಿರ್ಲಕ್ಷ್ಯಿಸಿ ಕತೆಯ ಕಗ್ಗೆ ಮಾತಾಡೋಣ ಬನ್ನಿ.

ಅಚಿಂತ್ಯ ಜಗುಲಿಯನ್ನು ದಾಟಿ ಕಲ್ಲು ಹಾಸಿದ್ದ ಅಂಗಳಕ್ಕೆ ಇಳಿವ ಮುನ್ನ ರೂಢಿಯೆಂಬಂತೆ ಚಪ್ಪಲಿಯನ್ನು ಧರಿಸುತ್ತಿದ್ದಾಗ ಗಿರಾಕಿ ಗಸಕ್ಕನೆ ನಕ್ಕಿದ್ದ. ಫಾರಂ ಕೋಳಿಯೆದುರು ಕಂಟ್ರಿ ಮೊಟ್ಟೆಯ ವ್ಯಾಪಾರದ ಬಗ್ಗೆ ಮಾತಾಡಿದರೆ ಲಾಭ ಯಾರಿಗೆ ಎಂಬ ಆಲೋಚನೆ ಮೂಡಿತೋ ಏನೋ, ಗೊತ್ತಿಲ್ಲ. ಅಚಿಂತ್ಯ ಬಂದವನೇ, “ರೇಟ್ ಎಷ್ಟು ಮಾತಾಡ್ತೀರಿ?"ಎಂದು ವಿಷಯಕ್ಕೆ ಬಂದಿದ್ದ. “ನಿಮಪ್ನತ್ರ ಮಾತಾಡಿದೆ, ನಾಲ್ಕ್ ಕೋಟಿ ನಮ್ ರೇಟು. ಇನ್ನೂ ಕಮ್ಮಿಗೆ ಕೊಡದಾರೆ ಹೇಳಿ; ಇದ್ಕೂ  ಒಂದ್ ರೂಪಾಯಿನೂ ಜಾಸ್ತಿ ಆಗೂದಿಲ್ಲ" ಎಂದು ಗಿರಾಕಿ ಹೇಳಿದಾಗ ಅಚಿಂತ್ಯ, “ದುಡ್ಡಿನ್ ಮೂಲ ಯಾವ್ದು?"ಎಂದು ಮುಖದಲ್ಲಿ ಕುತೂಹಲವನ್ನೂ, ಕೋಪವನ್ನೂ ಮಿಶ್ರಣಗೊಳಿಸಿದ ಭಾವ ಪ್ರಕಟಿಸಿ ಪ್ರಶ್ನಿಸಿದ್ದ. ಈ ಪ್ರಶ್ನೆಯನ್ನು ನಿರೀಕ್ಷಿಸಿಯೂ ಇರದಿದ್ದ ಗಿರಾಕಿಯ ಮುಖದಿಂದ ಎಣ್ಣೆಯ ಬಿಂದುಗಳಷ್ಟು ಸಾಂದ್ರವಾದ ಬೆವರ ಹನಿಗಳು ಗೋಚರಿಸಿದ್ದವು. “ಜಮೀನು ಬೇಡವಾದ ನಿಮಗೆ ಬೇಕಾಗಿದ್ದು ಹಣ. ಅದನ್ನು ಕೊಡುವ ಗಿರಾಕಿಯ ಆದಾಯದ ಮೂಲದ ಚಿಂತೆಯೇಕೆ?"ಎಂದು ಲಡಾಯ ಕಾಯುವವನಂತೆ ಮಾತಾಡಿದ್ದ.

“ನಮ್ ಜಮೀನಿನ ರೇಟು ಕಡೀಗೆ ಮಾತಾಡು. ನಿಂದ್ ಒಟ್ಟೂ ಜಮೀನು ಎಷ್ಟುಂಟು?ನೂರೆಕ್ರೆ?ಸಾವ್ರ? ಎಷ್ಟಿದ್ರೂ ನಾ ತಗಳ್ತೆ, ಒಂದ್ ರೇಟ್ ಹೇಳು ನೋಡ್ವಾ. ಅಷ್ಟೂ ವೈಟ್ ಮನಿ ಕೊಡ್ತೆ.ಅಷ್ಟೂ ದುಡ್ಡು ಎಲ್ಲಿಂದ ಬಂತು ಹೇಳಿ ಲೆಕ್ಕ ಕೊಡ್ತೆ. ಮಾರಾಟ ಮಾಡವ್ನಾ?"ಎಂದು ರೊಚ್ಚಿಗೆದ್ದು ಅಚಿಂತ್ಯ ಪ್ರಶ್ನಿಸಿದಾಗ ವಿನಾಯ್ಕಣ್ಣನೂ ಸೇರಿ ಅಲ್ಲಿದ್ದವರ ಮೊಗದಲ್ಲಿ ಒಂಥರಾ ಭಯ ಮೂಡಿತ್ತು. ಗಿರಾಕಿ ಮಾತಾಡಲಿಲ್ಲ. ಅಲ್ಲಿ ನಿಲ್ಲಲೂ ಇಲ್ಲ. ಗೇಟು ತೆರೆದುಕೊಂಡು ತನ್ನ ಕಾರಿನತ್ತ ಹೋಗುತ್ತಿದ್ದವನನ್ನು ಅಚಿಂತ್ಯ ಕರೆದು, "ಗೇಟ್ ಹಾಕಿಕ್ಕೆ ಹೋಗು" ಎಂದು ತಣ್ಣನೆಯ ಧ್ವನಿಯಲ್ಲಿ ಹೇಳಿದ್ದ.ಇವನಿಗದೆಲ್ಲಿಂದ ಈ ದಿಮಾಕು ಬಂತೆಂದು ವಿನಾಯ್ಕಣ್ಣನೂ ಕ್ಷಣಕಾಲ ಕಂಗಾಲಾದ.

ಯಾವುದೋ ಸೊಸೈಟಿಯ ಹೆಸರಲ್ಲಿ ಜಮೀನು ಖರೀದಿ ಮಾಡಿ ಆ ಸೊಸೈಟಿ ಮೆಂಬರ‍್ಸಿಗೆ ಮೋಸ ಮಾಡೋದಲ್ದೇ ಜಮೀನ್ ರೇಟೆಲ್ಲಾ ಏರ‍್ಸಿ ಖರೆವಾಗ್ಲೂ ಜಮೀನು ಬೇಕಾದವ್ಕೆ ಜಮೀನು ಸಿಗ್ದಿದ್ದಂಗೆ ಮಾಡೋ ಈ ಬೇನಾಮಿ ಜನ್ರತ್ರೆಲ್ಲಾ ವ್ಯವಾರ ಮಾಡೋದಲ್ಲ ಎಂಬರ್ಥದಲ್ಲಿ ಇಂಗ್ಲೀಷಿನಲ್ಲಿ ಏನೋ ಗೊಣಗಿದ ಅಚಿಂತ್ಯ ತನ್ನ ಅಪ್ಪನತ್ತ ತಿರುಗಿ, "ಆಳ್ಗೋ ಸಿಗ್ದಿದ್ರೆ ಬಯ್ಲ್‌ಸೀಮಿಂದ ಜನ್ರ ತರ‍್ಸನ. ಇನ್ ನೀ ಗುದ್ದಾಡೋ ಹೇಳಿಲ್ಲೆ, ನಾ ನೋಡ್ಕತ್ತೆ ಜಮೀನ" ಎಂದು ಅಲ್ಲೇ ನ್ಯಾಲೆಗೆ ನೇತಾಕಿದ್ದಅಂಗವಸ್ತ್ರವನ್ನು ಹೆಗಲಿಗೆ ಹಾಕಿಕೊಂಡು, ಆಗಷ್ಟೇ ಗಿರಾಕಿ ಹಾಕಿ ಹೋಗಿದ್ದ ಗೇಟನ್ನು ತೆರೆದು ಬೆಟ್ಟದತ್ತ ಹೊರಟ ಅಚಿಂತ್ಯನನ್ನೇ ನೋಡುತ್ತ ವಿನಾಯ್ಕಣ್ಣನಿಗೆ ತಾನು ಶಾಲೆಯಲ್ಲಿ ಓದಿದ್ದ ಕುವೆಂಪು ಅವರ ಸಾಲುಗಳು ನೆನಪಾದವು,

"ಗಾಳಿ, ಬೆಳಕು, ಅರಣ್ಯ, ಆಕಾಶ, ಸೂರ‍್ಯ, ಚಂದ್ರ, ಹಕ್ಕಿ, ಚುಕ್ಕಿ ಮೊದಲಾದವುಗಳ ಸಂಗಸಹವಾಸವಿಲ್ಲದವನ ಓದಿನ ಮೊಟ್ಟೆಯಿಂದ ಗೂಬೆ ಮೂಡಬಹುದು; ಕೋಗಿಲೆ ಎಂದಿಗೂ ಹಾಡಲಾರದು."

ಪ್ರಕೃತಿಯ ಸಹವಾಸವಿಲ್ಲದ ಬಾಲ್ಯವೊಂದು ಅಚಿಂತ್ಯನಿಗೆ ದೊರಕಿಬಿಟ್ಟಿದ್ದರೆ ಆತನ ಓದಿನ ಮೊಟ್ಟೆಯಿಂದ ಗೂಬೆಯೋ ಅಥವಾ ಅಂಥದೇ ಎಂತದೋ ಹೊರಬರುತ್ತಿತ್ತೇನೋ. ಪೇಟೆಯ ಯಾವುದೋ ಕಾನ್ವೆಂಟಿಗೆ ಮಕ್ಕಳನ್ನು ಹಾಕುತ್ತಿದ್ದ (!) ಕಾಲ ಹೋಗಿ ಅಂತಾರಾಷ್ಟ್ರೀಯ ಪಠ್ಯಕ್ರಮ ಓದದಿದ್ದರೆ ಭವಿಷ್ಯವೇ ಇಲ್ಲವೇನೋ ಎಂಬಂತೆ, ಮಕ್ಕಳನ್ನು ನಿರಾಶ್ರಿತರನ್ನಾಗಿಸಿ ದೂರದ ರೆಸಿಡೆನ್ಶಿಯಲ್ ಸ್ಕೂಲುಗಳಿಗೆ ಮಕ್ಕಳನ್ನು ದೂಡುತ್ತಿರುವ ಪಾಲಕರ ಭವಿಷ್ಯದ ಚಿಂತೆಯನ್ನು ಹೊತ್ತುಕೊಂಡು ಓಡಾಡುವ ಅನಿವಾರ್ಯತೆ ತನಗಿಲ್ಲವೆಂದು ವಿನಾಯ್ಕಣ್ಣ ನಿಶ್ಚಿಂತನಾದ. ಹಳ್ಳಿಗಳನ್ನು ಅಭಿವೃದ್ಧಿ ಗೊಳಿಸುತ್ತೇವೆಂದು ಬಡಾಯಿ ಕೊಚ್ಚಿಕೊಳ್ಳುತ್ತ ನಗರಗಳನ್ನಾಗಿ ಪರಿವರ್ತಿಸುತ್ತಿರುವವರ ಮಧ್ಯೆ ತನ್ನ ಮಗ ಅಪವಾದವೆಂಬ ಹೆಮ್ಮೆಯೂ ವಿನಾಯ್ಕಣ್ಣನಿಗಿತ್ತು.ಅಟ್ಟದ ನೆರಳಿನಲ್ಲಿ ಕುಳಿತು ದೀರ್ಘವಾಗಿ ಎಳೆದ ಶ್ವಾಸ ಸ್ವಚ್ಛ ಗಾಳಿಯನ್ನು ಹೊತ್ತು ತಂದಿತ್ತು.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...