ಆಗಸದ ತೂತು | ಸಂಚಿಕೆ ೭ - ಹೊಳೆ ಬ್ಯಾಲೆ (೨)

 ಓದುವ ಮುನ್ನ: ಈ ಸಂಚಿಕೆಯಲ್ಲಿ ಕೆಲ ಆಘಾತಕಾರಿ ವಿವರಣೆಗಳು ಮಾನಸಿಕವಾಗಿ ನೋವುಂಟುಮಾಡಬಹುದಾಗಿದೆ. ನೀವು ಭಾವುಕ ಜೀವಿಯಾಗಿದ್ದರೆ, ಹೃದಯ ಸಂಬಂಧೀ ಕಾಯಿಲೆಯುಳ್ಳವರಾಗಿದ್ದರೆ ಅಥವಾ ಬೇಗನೆ ಪ್ರಭಾವಕ್ಕೊಳಗಾಗುವ ಮನಸ್ಥಿತಿಯವರಾಗಿದ್ದರೆ ಖಂಡಿತ ಓದಬೇಡಿ. ಯಾರೇ ಓದಿದರೂ ಅದರಿಂದಾಗುವ ಪರಿಣಾಮಗಳಿಗೆ ನೀವೇ ಜವಾಬ್ದಾರರು ಹೊರತು ಬರೆಹಗಾರರಲ್ಲ.

ದಯವಿಟ್ಟು ಓದಬೇಡಿ.

































೨೦೨೧, ಅಕ್ಟೋಬರ್ ೧೪. ಆಫೀಸಿಗೆ ಹೋದರೂ ಕೆಲಸ ಮಾಡಲು ಉಮೇದಿಯಿಲ್ಲದೆ ಛೇಂಬರಿನಲ್ಲಿ ಕುಂತಿದ್ದೆ. ಮಧ್ಯಾಹ್ನ ಮೂರು ಗಂಟೆಯಿರಬಹುದು, ಗೆಳೆಯ, ಬಾಸು ಪ್ರಣವ್ ಬಂದು, "ಕರ್ನಾಟಕದ ಯಾವ್ದೋ ಎಸ್‌ಪಿ ಆಫೀಸಿಂದ ಕಾಲ್ ಬಂದಿತ್ತು. ನಿನ್ ಜೊತೆ ಮಾತಾಡ್ಬೇಕಂತೆ. ನೀನು ಹೊರ್ಗಡೆ ಹೋಗಿದೀಯಾ ಅಂತದೆ. You need to call him back" ಅಂತಂದು ಒಂದು ಚೀಟಿ ಕೈಗಿತ್ತ. ಕರ್ನಾಟಕದ ಲ್ಯಾಂಡ್‌ಲೈನ್ ನಂಬರದು, ಬೆಂಗಳೂರಿನ ಕೋಡ್ ಇತ್ತು.

ಹದಿಮೂರು ಹೆಣಗಳ ಬಗ್ಗೆಯೇ ಆಗಿರ್ಬೇಕು. ಆದ್ರೆ ನಂಗೇನು ಸಂಬಂಧ? ಅಂತೊಂದು ಪ್ರಶ್ನೆ ಮೂಡಿದರೂ ಮಾಹಿತಿಯ ಕೊರತೆ ನಂಗೂ ಇದ್ದಿದ್ದರಿಂದ ಕಾಲು ಬಂದಿದ್ದ ನಂಬರನ್ನು ಮೊಬೈಲಿನಲ್ಲಿ ಡಯಲ್ ಮಾಡಿದೆ. ಛೇಂಬರಿನ ಅಷ್ಟೂ ಬಾಗಿಲು, ಕರ್ಟನ್ನುಗಳು ಮುಚ್ಚಿರುವುದನ್ನು ಖಾತರಿಪಡಿಸಿಕೊಂಡು ಟೇಬಲ್ಲಿಗೆ ಒರಗಿ ನಿಂತುಕೊಂಡೆ. ಅರ್ಧ ರಿಂಗಿಂಗ್ ಟೈಮು ಮುಗಿದಮೇಲೆ ಯಾವುದೋ ಆಪರೇಟರ್ ಕಾಲು ರಿಸೀವಿಸಿದ. ನೇರವಾಗಿ ಎಸ್‌ಪಿಯವರೇ ಲೈನಿಗೆ ಬಂದು ಮಾತಾಡಿದಾಗ ವಿಷಯ ತಕ್ಕಮಟ್ಟಿಗೆ ಅರಿವಾಯಿತು.

"ನಾನು ಪ್ರಜ್ವಲ್ ನಾಯಕ್, ಸೆಂಟ್ರಲ್ ಕ್ರೈಂ ಬ್ರ್ಯಾಂಚ್ ಹೊಮಿಸೈಡ್ ಯುನಿಟ್ ಎಸ್‌ಪಿ. ಭಟ್ರೇರಿ ಹತ್ಯಾಕಾಂಡದ ಬಗ್ಗೆ ನಿಮ್ಮ‌ಜೊತೆ ಮಾತನಾಡೋದಿತ್ತು‌. ಬೆಂಗಳೂರಿಗೆ ಬರೋಕಾಗತ್ತಾ?" ಅಂತ ಪ್ರಶ್ನಿಸಿದ್ರು.
"ಹ್ಞೂಂ ಸರ್, ಖಂಡಿತ ಬರ್ತೀನಿ" ಅಂತಷ್ಟೇ ಉತ್ತರಿಸಿದ್ದೆ. ಸಂಭಾಷಣೆಗೆ ನಾನಿನ್ನೂ ಸಿದ್ಧನಾಗಿರ್ಲಿಲ್ಲ. ಅದು ಅವರಿಗೂ ಅರ್ಥವಾದಂತಿತ್ತು. ಹೆಚ್ಚೇನೂ ಮಾತನಾಡದೇ ಕರೆ ಕಡಿತಗೊಳಿಸಲಾಯ್ತು.

ಸರಿ, ನಿಮಿಗಿನ್ನೂ ಭಟ್ರೇರಿಯಲ್ಲಿ ಏನು ನಡೆದಿದೆ ಅಂತ ಹೇಳಿಲ್ಲ ಅಲ್ವಾ? ಕೇಳುವಂಥವರಾಗಿ.

ಅಕ್ಟೋಬರ್ ೧೩, ೨೦೨೧; ಅಂದರೆ ನನಗೆ ಬೆಂಗಳೂರಿನಿಂದ ಕರೆ ಬರೋ‌ ಮುನ್ನಾದಿನ ಬೆಳಗ್ಗೆ ಕೊವಿಡ್ ವ್ಯಾಕ್ಸಿನೇಶನ್ ಗಣತಿಗೆ ಭಟ್ರೇರಿಗೆ ಹೋಗಿದ್ದ ಆಶಾ ಕಾರ್ಯಕರ್ತೆ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ಭಟ್ರೇರಿ ಕೆರೆಯಲ್ಲಿ ಆರೇಳು ಹೆಣಗಳು ತೇಲುತ್ತಿರುವುದಾಗಿಯೂ, ಅವರೆಲ್ಲರೂ ಅಲ್ಲಿಯ ನಿವಾಸಿಗಳಂತೇ ಕಾಣುತ್ತಿದ್ದಾರಂತಲೂ ತಿಳಿಸಿದ್ದಳು. ಪೊಲೀಸರು ತೆರಳಿದಾಗ ಆರು ಶವಗಳು ಕೆರೆಯಲ್ಲಿ ಸಿಕ್ಕವು. ಎಲ್ಲರ ಗುರುತು ಪತ್ತೆ ಮಾಡಿದಾಗ ಅವರು ಭಟ್ರೇರಿ ನಿವಾಸಿಗಳೇ ಎಂದು ಖಚಿತವಾಗಿತ್ತು. ಊರು ಸಂಪೂರ್ಣ ಖಾಲಿಯಾಗಿತ್ತು. ವಿವಿಧ ಊರುಗಳಿಗೆ ಉದ್ಯೋಗ ವಲಸೆ ಹೋದ ಮಂದಿಯನ್ನು ಹೊರತುಪಡಿಸಿ ಇನ್ನೂ ಆರು ವಯಸ್ಕ, ಒಂದು ಏಳು ತಿಂಗಳ ಹಿಳ್ಳೆ ನಾಪತ್ತೆಯಾಗಿದ್ದರು.

ಸಿಕ್ಕ ಆರು ಶವಗಳಲ್ಲಿ ಮೂರು ವಯಸ್ಕ ಪುರುಷರದ್ದು, ಮೂರು ವಯಸ್ಕ ಮಹಿಳೆಯರದ್ದು. ಅಷ್ಟೂ ಮಂದಿ ಶವವಾಗಲು ಕತ್ತು ಸೀಳಿದ್ದೇ ಕಾರಣ. ಮಣಿಕಟ್ಟುಗಳ ಬುಡದಲ್ಲಿ ಹಗ್ಗ ಬಿಗಿದಂಥ ಗುರುತು ಎಲ್ಲರಲ್ಲೂ ಸಾಮಾನ್ಯವಾಗಿತ್ತು. ದೇಹದ ಉಳಿದ ಭಾಗಗಳಲ್ಲಿ ರಕ್ಷಣಾತ್ಮಕ ಗಾಯದ ಗುರುತುಗಳೂ ಇಲ್ಲವಾಗಿದ್ದವು. ಮೂರು ಗಂಡು-ಮೂರು ಹೆಣ್ಣು ಶವಗಳು ಒಂದೇ ಊರಿನವಾಗಿದ್ದರೂ ಪತಿ-ಪತ್ನಿಯರಲ್ಲ. ಒಬ್ಬ ಯುವಕ, ಒಬ್ಬಳು ಯುವತಿ ಅವಿವಾಹಿತರು, ಉಳಿದ ನಾಲ್ವರ ಪತಿ ಅಥವಾ ಪತ್ನಿಯರು ನಾಪತ್ತೆಯಾದವರ ಯಾದಿಯಲ್ಲಿದ್ದರು. ಅವಿವಾಹಿತ ಯುವತಿಯ ಮಗು ಕೂಡ ನಾಪತ್ತೆಯಾದವರ ಪಟ್ಟಿಯಲ್ಲಿತ್ತು! ಫೊರೆನ್ಸಿಕ್‌ನವರ ಪ್ರಕಾರ ಟೈಂ ಆಫ್ ಡೆಥ್ ಹಿಂದಿನ ರಾತ್ರಿ ಸುಮಾರು ೨ ಗಂಟೆಯಿಂದ ೨:೪೫ರ ಆಸುಪಾಸು. ಯಾರ ಶ್ವಾಸಕೋಶದಲ್ಲೂ ನೀರು ಇಲ್ಲದ ಕಾರಣ ಕೊಲೆ ಮಾಡಿದ ನಂತರ ಶವಗಳನ್ನು ನೀರಿಗೆಸೆಯಲಾಗಿತ್ತು. ಸಾವಿಗೆ ಕಾರಣ? ಶ್ವಾಸನಾಳ ಕತ್ತರಿಸಲ್ಪಟ್ಟಿದ್ದರಿಂದ ದೇಹಕ್ಕೆ ಆಮ್ಲಜನಕದ ಕೊರತೆಯಾಗಿದ್ದು. ಎರಡು ಪ್ರತ್ಯೇಕ ಮನೆಗಳ ನಿವಾಸಿಗಳನ್ನು ಒಂದೇ ಕೋಣೆಯಲ್ಲಿ ಕೊಲ್ಲಲಾಗಿದೆಯೆಂಬ ಪುರಾವೆ ನೀಡಿದ್ದು ದೊಡ್ಡ ಭಟ್ರ ಮನೆಯ ಗರಾಜಿನಲ್ಲಿ ಕಂಡ ರಕ್ತದ ಹರಿವು. ಹನ್ನೆರಡು ಸಣ್ಣ ನದಿಗಳು ಸೇರಿ ಒಂದು ದೊಡ್ಡ ನದಿ ಹರಿದಂತೆ ಹನ್ನೆರಡು ವಿವಿಧ ರಕ್ತದ ಮೂಲಗಳನ್ನು ಸಾಲಾಗಿ ಗುರುತಿಸಬಹುದಾಗಿತ್ತು. ಅದರರ್ಥ ಇನ್ನೂ ಆರು ಶವಗಳನ್ನು ಪತ್ತೆ ಹಚ್ಚಬೇಕಿತ್ತು!

ಊರಿನ ಸುತ್ತಮುತ್ತಲೂ ಶವಗಳನ್ನು ಹುಡುಕಲು ಕಾರ್ಯಾಚರಣೆ ನಡೆಸಲಾಯ್ತು. ಮೊದಲು ಸಿಕ್ಕಿದ್ದು ಮಗುವಿನ ಶವ. ಬೇಸಿಗೆಯಲ್ಲಿ ತೋಟಕ್ಕೆಂದು ಸೊಪ್ಪು ಕಡಿದಿದ್ದ, ಗುಡ್ಡೆಯ ತಲೆ ಮೇಲೆ ಇದ್ದ ಏಕೈಕ ಎತ್ತರದ, ಆಗಷ್ಟೇ ಚಿಗುರೆಲೆಗಳನ್ನು ಹೊದ್ದು ನಿಂತಿದ್ದ ಹೊನ್ನೆಮರದ ಪಶ್ಚಿಮಾಭಿಮುಖವಾಗಿ ಬೆಳೆದುನಿಂತಿದ್ದ ಟೊಂಗೆಗೆ ಸೊಪ್ಪಿನ ಹಗ್ಗದ ಕುಣಿಕೆ ಬಿಗಿದು ಮಗುವನ್ನು ನೇತುಬಿಡಲಾಗಿತ್ತು‌. ಕಾಸ್ ಆಫ್ ಡೆಥ್? ಶ್ವಾಸನಾಳವನ್ನು ಕೊಯ್ದಿದ್ದು. ಆದರೆ ಮಗುವಿನ ಕತ್ತನ್ನು ದೊಡ್ಡ ಭಟ್ರ ಮನೆಯಲ್ಲಾಗಲಿ, ಹೊನ್ನೆ ಮರದ ಬುಡದಲ್ಲಾಗಲಿ ಕೊಯ್ದಿರಲಿಲ್ಲ. ಹತ್ಯೆಯ ಜಾಗ ತಿಳಿದಿದ್ದು ಮತ್ತೆ ಆರು ಶವಗಳು ಸಿಕ್ಕಾಗ.

ಭಟ್ರೇರಿ ಮತ್ತು ಭಟ್ರಕುಳಿ ಊರಿನ ಮಧ್ಯೆ ಎರಡೂ ಊರುಗಳ ಜಂಟಿ ಸ್ಮಶಾನವೊಂದಿದೆ ಎಂಬ ನೆನಪು ನಿಮಗಿದೆಯೇ? ಉಳಿದ ಶವಗಳು ಸಿಕ್ಕಿದ್ದು ಅಲ್ಲೇ. ಕಾಲುಗಳು ಮೇಲೆ ಕಾಣುವಂತೆ ಆರೂ ಶವಗಳನ್ನು ಹುಗಿಯಲಾಗಿತ್ತು. ಸಾವಿಗೆ ಕಾರಣ ಉಳಿದೆಲ್ಲ‌ಶವಗಳಂತೆ; ಶ್ವಾಸನಾಳ ಕೊಯ್ಯಲ್ಪಟ್ಟಿದ್ದು.

ಅಲ್ಲಿಗೆ ಭಟ್ರೇರಿ ಅಷ್ಟೂ ನಿವಾಸಿಗಳ ಪತ್ತೆ ಕಾರ್ಯ ಮುಗಿದಿತ್ತು. ಆದರೆ ಜೀವರಹಿತವಾಗಿ. ಅಷ್ಟರ ಸಾವಿನ ರೀತಿಯೂ ಒಂದೇ ಆಗಿತ್ತು. ಕೊಲೆಗಳ ಮೊಟಿವ್?

ಅಷ್ಟರ ಶ್ವಾಸಕೋಶದಲ್ಲೂ ಕ್ಲೊರೊಫಾರ್ಮ್ ಅಂಶಗಳಿದ್ದವು. ಎಲ್ಲರ ಖಬರು ತಪ್ಪಿಸಿ, ಸಾಲಾಗಿ ಕುಳ್ಳಿರಿಸಿ, ಕೈ-ಕಾಲುಗಳನ್ನು ಬಿಗಿದು ಕುತ್ತಿಗೆ ಕೊಯ್ದಿರುವುದು ಸ್ಪಷ್ಟವಾಗಿತ್ತು. ಆರು ಮಂದಿಯನ್ನು ನೀರಿಗೆಸೆದಿದ್ದರೆ ಮತ್ತಾರು ಮಂದಿಯನ್ನು ಹುಗಿಯಲಾಗಿತ್ತು. ಮಗುವನ್ನು ಸಾಯಿಸಿ ತೂಗುಬಿಟ್ಟ ಪೈಶಾಚಿಕ ಕೃತ್ಯದ ಹಿಂದೆ ಮಾಟ-ಮಂತ್ರ, ಬಲಿ ನೀಡಿದ ಸಾಧ್ಯತೆಗಳನ್ನು ಪರಿಗಣಿಸಲಾಯ್ತು. ಊರಿಗೆ ಊರನ್ನೇ ಬಲಿಕೊಡುವ ಅಮಾನವೀಯ ಕೈಂಕರ್ಯ ಯಾವ ವಾಮಾಚಾರದ ಭಾಗವೆಂದು ಕಂಡುಹಿಡಿಯಲಾಗಲಿಲ್ಲ.

ಇಡೀ ದೇಶದಲ್ಲಿ ಹಿಂದೆಂದೂ ನಡೆದಿರದ ಘೋರ ಕೃತ್ಯವನ್ನು ಸಿಬಿಐಗೆ ಒಪ್ಪಿಸಬೇಕೆಂಬ ಒತ್ತಡ ಹೆಚ್ಚಿತ್ತು. ಪ್ರಾಥಮಿಕ ತನಿಖೆಯನ್ನು ಸ್ಥಳೀಯ ಪೊಲೀಸರಿಂದ ಸಿಸಿಬಿಗೆ ವರ್ಗಾಯಿಸಲಾಯಿತು. ಸ್ಥಳೀಯರ ವಿಚಾರಣೆಯ ನಂತರ ಗೋಪುಟ್ಟ ಮತ್ತು ಆತನ ಸಹಚರರು ತಿಂಗಳ ಹಿಂದೆ ಭಟ್ರಕುಳಿಗೆ ಬಂದು ವಾಸ್ತವ್ಯ ಹೂಡಿದ್ದರೆಂದು, ಆತನ ಆಗಮನ ಹಾಗೂ ವಾಸ್ತವ್ಯಕ್ಕೆ ದೊಡ್ಡ ಭಟ್ರು ವಿರೋಧಿಸಿದ್ದರೆಂದು, ನಿನ್ನೆ ಸಂಜೆಯವರೆಗೂ ಅವರನ್ನು ನೋಡಿದ್ದೇವೆಂದೂ ತಿಳಿಸಿದ ತಕ್ಷಣ ಪೊಲೀಸರಿಗೆ ಭಟ್ರೇರಿ ಹತ್ಯಾಕಾಂಡದ ಆರೋಪಿಯ ಚಿತ್ರಣ ಸಿಕ್ಕಿತ್ತು. ಮತ್ತೂ ಒಂದು ಆಘಾತಕಾರಿ ವಿಷಯವೆಂದರೆ,

ಕೆರೆಯಲ್ಲಿ ಸಿಕ್ಕ ಅವಿವಾಹಿತ ಮಹಿಳೆ ದೊಡ್ಡ ಭಟ್ರ ಮಗಳು ವಿಮಲಾ. ಆ ಮಗುವಿನ ಅಘೋಷಿತ ತಂದೆ ಗೋಪುಟ್ಟ!

ಅಷ್ಟಕ್ಕೂ ಈ ಘಟನೆಗೂ, ನನಗೂ ಇರುವ ಸಂಬಂಧವಾದ್ರೂ ಏನು? ಪೊಲೀಸರು ನನ್ನನ್ನು ಕರೆಸಿಕೊಳ್ಳುತ್ತಿರುವುದಾದರೂ ಏಕೆ? Am I one of their suspects? ಗೊತ್ತಿಲ್ಲ.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ