ಆಗಸದ ತೂತು | ಸಂಚಿಕೆ ೬ - ಅಂತ್ಯಕ್ಕೊಂದು ಮುನ್ನುಡಿ

 "ನಂಬಿಕೆಗೆ ಎರಡು ವಿಧ. ಪಾಸಿಬಿಲಿಟಿಗಳನ್ನು ನೋಡಿ ನಂಬೋದು. ನೀನಂದ ಕತೆಗೆ ಸಾಧ್ಯತೆಗಳಿವೆ. ನಿಜವಾಗಿರಲೂಬಹುದು. ಆದ್ರೆ ಸುಳ್ಳಾಗಿರುವ ಸಾಧ್ಯತೆ ಕೂಡ ಇದೆ. ಹಾಗಂತ ನೀನ್ನನ್ನು ಜಜ್ ಮಾಡಿ, ನೀನು ಸುಳ್ಳುಗಾರ ಅಂತನ್ನೋ ಯಾವ ಉದ್ದೇಶ ಕೂಡ ನಂಗಿಲ್ಲ. ನೀನಂದ ಕತೆಯ ಫಸ್ಟ್ ಹ್ಯಾಂಡ್ ಸೋರ್ಸ್ ನೀನೇ, ನೀನದನ್ನು ನಂಬುವ ಆಯ್ಕೆ ನಿಂದು‌. ನಂಬಿಕೆಯ ಎರಡನೇ ವಿಧ ಯಾವ್ದು ಗೊತ್ತಾ? ಪುರಾವೆಗಳಿರೋ ವಿಷಯವನ್ನ ನಂಬೋದು. ಅದು ರ‌್ಯಾಶನಲ್ ಮನಸ್ಥಿತಿಯ ಆಯ್ಕೆ. ನಿಮ್ಮೂರಲ್ಲಿ ಮಹಿಳೆಯರ ಸ್ತನದಿಂದ ರಕ್ತ ಬರ್ತಿತ್ತು, ಯಾವ್ದೋ ದೇವಿ ನಿಂಗೆ ಕಾಣಿಸಿ ಆಗಸಕ್ಕೆ ತೂತು ಬೀಳತ್ತೆ ಅಂದ್ಳು, ಉತ್ತರಕ್ಕೆ ಹೋಗು ಅಂದ್ಳು ಅನ್ನೋದಕ್ಕೆಲ್ಲ ಪುರಾವೆ ಕೊಡು, ಖಂಡಿತ ನಂಬ್ತೀನಿ; ನಿನ್ನ ಕಾರ್ಯಕರ್ತರಲ್ಲೊಬ್ಬನಾಗ್ತೀನಿ. ನೀನೇ ಅದಕ್ಕೆ ಸಾಕ್ಷಿ ಅಂತದ್ರೆ ನಾನು ನಂಬೋದಕ್ಕಾಗಲ್ಲ, ನೀನು ಮಾರ್ಫಿನ್ನಿನ ಅಮಲಲ್ಲಿದ್ದಾಗ ಕಂಡ ಹಲ್ಯೂಸಿನೇಶನ್ ಅದಾಗಿರ್ಬೋದು ಅಥ್ವಾ ನೀನು ಖಬರಿಲ್ಲದೇ ಮಲ್ಗಿದ್ದಾಗ ಯಾರೋ ಹೇಳಿದ ಕತೆಯಾಗಿರ್ಬೋದು. I am more rational than you ever can think." ಅನ್ನೋದು ನನ್ನ ಕಡೆಯ ಮಾತಾಗಿತ್ತು ಗೋಪುಟ್ಟನಿಗೆ‌. "Go and fu*k yourself in hell like South India" ಅಂದಿದ್ದು ಗೋಪುಟ್ಟ ನನ್ನೊಂದಿಗಾಡಿದ ಕೊನೆಯ ಮಾತು.

ಇಷ್ಟೆಲ್ಲ ಮಾತುಕತೆಯಾಗಿದ್ದು ಯಾವ ಖುಷಿಗೆ ಅಂತ ನಿಮಗೆ ಕುತೂಹಲವಿರಬಹುದು. ಎಲ್ಲವನ್ನೂ ವಿವರವಾಗಿ ಹೇಳ್ತೇನೆ ತಡೀರಿ.
-----------------------------------------***------------------------------------------

ಸೌಥ್‌ಇಂಡಿಯನ್ ರೆಸ್ಟಾರೆಂಟಿನಿಂದ ಮಾಯವಾಗಿದ್ದ ಗೋಪುಟ್ಟ ನಮ್ಮ ಹೊಟೆಲ್ ರೂಮಿನಲ್ಲಿರಬಹುದು ಅಂದುಕೊಂಡಿದ್ದ ನನ್ನ ನಿರೀಕ್ಷೆ ಸುಳ್ಳಾಗಿತ್ತು. ರೂಮಿನ ಚಾವಿ ಅವನ ಬಳಿಯೇ ಇದ್ದುದರಿಂದ ನಾನು ನೆಟ್ಟಗೆ ಮಾರ್ಕೆಟಿಗೆ ಹೋಗಿ ಕಾಲಹರಣ ಮಾಡೋದೊಂದೇ ಆಯ್ಕೆಯಾಗಿತ್ತು. ಆದರೆ ಇಷ್ಟವಿರಲಿಲ್ಲ. ರೋಹ್ಟಂಗ್ ಪಾಸ್ ಕಡೆ ತೆರಳುವ ದಾರಿಗೆ; ಬಿಯಾಸ್ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯನ್ನು ದಾಟಿ ಎಡಕ್ಕೆ ಸಾಗಿಸುವ ರಸ್ತೆಯನ್ನು ಸ್ವಲ್ಪವೇ ದೂರ ಕ್ರಮಿಸಿದ ಮೇಲೆ ಒಂದು ಕ್ಲಬ್ ಇತ್ತು‌. ಎಂಟ್ರೆನ್ಸಿಗೇ ಕಟ್ಟಿದ್ದ 18+ ಬೋರ್ಡು ಮೊದಲೇ ಕುತೂಹಲ ಹುಟ್ಟಿಸಿತ್ತಾದರೂ ಒಳಹೊಕ್ಕಿರಲಿಲ್ಲ. ಅದಕ್ಕೆ ಮೊದಲ ಕಾರಣ ಗೋಪುಟ್ಟನ ಕ್ಯಾರೆಕ್ಟರಿನ ಬಗ್ಗೆ ಇದ್ದ ಆಸಕ್ತಿ ನನ್ನನ್ನು ಅವನಿಂದ ಬೇರೆಯಾಗಲು ಬಿಟ್ಟಿರದಿದ್ದುದು. ಈಗ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಆಸೆಯಾಗಿತ್ತು. ಅದಾಗಲೇ ರಾತ್ರಿ ಎಂಟೊಂಬತ್ತು ಗಂಟೆಯಾಗಿತ್ತೇನೋ. ಸೀದಾ ಹೋದೆ. ಒಳಗೆ ಅಂಥದ್ದೇನು ಭಯಂಕರ ಇರಲಿಲ್ಲ. ಆಲ್ಕೊಹಾಲ್ ಬಾರ್, ಹುಕ್ಕಾ ಬಾರ್ ಹಾಗೂ ಹುಕರ್ಸ್‌ಗಳಿಂದ ತುಂಬಿದ್ದ ಕ್ಲಬ್ಬಿನ ಖಾಲಿ ಜಾಗಗಳಲ್ಲಿ ಪೂಲ್ ಟೆಬಲ್‌ಗಳು, ಇಸ್ಪೀಟು ಟೇಬಲ್‌ಗಳು ತುಂಬಿದ್ದವು. ಉಳಿದ ವಾತಾವರಣವೆಲ್ಲ ಹೊಗೆಗೆ ಮೀಸಲಿಡಲಾಗಿತ್ತು. ಮತ್ತೂ ಆಶ್ಚರ್ಯದ ಸಂಗತಿಯೆಂದರೆ ರೆಸ್ಟಾರಂಟಿನಲ್ಲಿ ಕೆಳೆದುಹೋಗಿದ್ದ ಸ್ವೀಟಂಗಡಿಯ ತಿನಿಸುಗಳು ಬಾಲ್ಕನಿಯಲ್ಲಿ ದುಂಡುಮೇಜಿನ ಸಭೆ ನಡೆಸುತ್ತಿದ್ದ ದೃಶ್ಯ.
ಆಗಷ್ಟೇ ಹದಿನೇಳು-ಹದಿನೆಂಟು ದಾಟಿರಬಹುದಾದ, ಗೋಕರ್ಣದಿಂದ ತಪ್ಪಿಸಿಕೊಂಡುಬಂದ ಹಿಪ್ಪಿಯಂಥ, ನೋಡಲು ಮುದ್ದಾಗಿದ್ದ ಯುವತಿಯೊಟ್ಟಿಗೆ ಕುಳಿತು ಮಾತಾಡುತ್ತಿದ್ದ ಸ್ವೀಟಂಗಡಿಯ ಐಟಮ್ಮುಗಳು, ಸ್ವೀಟಂಗಡಿಯ ಮಾಲಕ ಗೋಪುಟ್ಟ ರಿಕ್ರ್ಯೂಟ್‌ಮೆಂಟ್ ನಡೆಸುತ್ತಿದ್ದಂತೆ ಕಂಡುಬರುತ್ತಿತ್ತು. ರೇಷ್ಮೆ ಎಳೆಗಳಂಥ ಅರೆಗೆಂಪು ಕೂದಲುಳ್ಳ, ಕಣ್ಣುಗಳ ಮಧ್ಯೆ ಮೂಗನ್ನು ಪ್ರತ್ಯೇಕಿಸುವ ತೀರಾ ಚಿಕ್ಕದಾದ ಉಬ್ಬುಗಳುಳ್ಳ, ಹಣೆಗಂಟಿಸಿದ ಸ್ಟಿಕ್ಕರ್ರಿಗೆ ಛಂದ ಒದಗಿಸುವ ಬಣ್ಣವುಳ್ಳ, ಸಪೂರ ಮೈಕಟ್ಟಾದರೂ ಬೇಕಾದಲ್ಲೆಲ್ಲ ಬೇಕಾದಷ್ಟು ಮಾಂಸ ಹೊಂದಿದ್ದ ಯುವತಿ ಹೆಚ್ಚು ಶ್ರಮವಿಲ್ಲದೇ ನಟಿಯಾಗಬಲ್ಲವಳಂತಿದ್ದಳು. ಒಂದೇ ಥರದ ಕನ್ನಡಕವುಳ್ಳ, ಲೂಸುಲೂಸು ಅಂಗಿ ತೊಟ್ಟ ಐವರು ಪ್ರತಿರೂಪಿ ಕ್ಲೌನುಗಳ ಮಧ್ಯೆ ಅವಳಿಗೇನು ಕೆಲಸವೆಂಬುದೇ ಬಗೆಹರಿಯುತ್ತಿರಲಿಲ್ಲ.
ಸೊಕಾಶ ಬಾಲ್ಕನಿಯನ್ನು ಸಂಪರ್ಕಿಸುವ ಪೈನ್‌ವುಡ್ ಮೆಟ್ಟಿಲುಗಳನ್ನೇರಿ ಇವರಿದ್ದಲ್ಲಿ ಹೋದೆ. ತೀರಾ ಹತ್ತಿರ ಹೋಗುವ ಮೊದಲೇ ಇವರ ಸಂಭಾಷಣೆ ಕಿವಿಗೆ ಬಿದ್ದಿತ್ತು. ಗೋಪುಟ್ಟನ ಮಾತು, ಮೊದಲೆಲ್ಲೋ ಕೇಳಿದಂಥನಿಸುವ ಮಾತು...

"ನೋಡು, ಬೆಳಕೇ ಸಾಗುತ್ತಿದೆಯೇನೋ ಅನಿಸುವ ಆ ರಸ್ತೆಗಳನ್ನ ನೋಡು. ಯಾರದೋ ಬೆನ್ನು ಹುರಿಯಮೇಲೆ ಬಾಯಲ್ಲಿ ಬ್ಯಾಟರಿ ಹಿಡಿದ ಇರುವೆಗಳು ಹೊಂಟಂತಿದೆ ಅಲ್ವೇ? ಸ್ಟ್ರೆಸ್ಸು. ಗುರಿಯತ್ತ ಒಯ್ಯುತ್ತವೆ ಅನ್ನೋ ಭ್ರಮೆಯಲ್ಲೇ ಅದೆಷ್ಟು ಜನ ಆ ರಸ್ತೆಗಳ ಮೇಲೆ ಹೋಗ್ತಿದಾರೆ! ಯಾರಿಗೂ ಗೊತ್ತಿಲ್ಲ, ಆ ರಸ್ತೆಗಳು ಎಲ್ಲಿಗೆ ಕರೆದೊಯ್ತವೆ ಅಂತ. ರಸ್ತೆಗಳಿಗೆ ತುದಿಯಿರಬಹುದಾ? ನಂಗಂತೂ ಗೊತ್ತಿಲ್ಲ. ಒಂದು ರಸ್ತೆ ಮುಗಿದಂತೆ ಮತ್ತೊಂದು ಶುರು. ಈ ರಸ್ತೆಗೆ ಆ ರಸ್ತೆ ಜಾಯಿಂಟು, ಆ ರಸ್ತೆಗೆ ಮತ್ತೊಂದು. ರಸ್ತೆಯೆಲ್ಲಾ ಖಾಲಿಯಾದ್ಮೇಲೆ ನೀರು. ಆ ನೀರಲ್ಲಿ ಹೋಗೋಕೆ ಮತ್ತೊಂದು ರಸ್ತೆ, ಜಲಮಾರ್ಗ! ಎಲ್ಲಾ ರಸ್ತೆಗಳೂ ಗುರಿ ಕಡೆ ಕರ್ಕೊಂಡೋಗ್ತವೆ ಅಂತ ನಮ್ಮನ್ನ ಈ ಸಮಾಜ ನಂಬಿಸತ್ತೆ, ನಾವು ನಂಬ್ತೇವೆ, ಓಡ್ತೇವೆ. ಸುಸ್ತಾದ್ರೂ ನಿಲ್ಬಾರ್ದು, ದಾರೀಲಿ ಯಾರಾದ್ರೂ ಸುಸ್ತಾಗಿ ಬಿದ್ರೆ ಎತ್ತೋಕೆ ಹೋಗ್ಬಾರ್ದು; ಹೋದ್ರೆ ನಾವು ಸೋತೋಗ್ತೀವಿ ಅಷ್ಟೇ. ನಾವು ಸೋಲ್ಬಾರ್ದು. ಆದ್ರೆ ನಾವು ಯಾವ್ ಆಟ ಆಡ್ತಿದೀವಿ? ಜೀವನ? ಜೀವನ ಅಂದ್ರೆ ಆಟಾನಾ? ಯಾರನ್ನ ಸೋಲಿಸೋಕೆ ಬದ್ಕ್ತಿದೀವಿ? ಯಾರತ್ರಾನೂ ಈ ಪ್ರಶ್ನೆಗೆ ಉತ್ರ ಇಲ್ಲ. ಇಡೀ ಜಗತ್ತು ಜೀವನ ಅನ್ನೋದನ್ನ ಉಲ್ಟಾ ನೋಡ್ತಿದೆ. ಅಷ್ಟೂ ಜನ್ರು ಪಾಪ ಮಾಡ್ತಿದಾರೆ. ಪಾಪ ಹೆಚ್ಚಾದಂತೆ ಆಗಸಕ್ಕೆ ತೂತು ಬೀಳ್ತದೆ. ನೀನಿನ್ನೂ ಚಿಕ್ಕೋಳು. ಆಗಸಕ್ಕೆ ತೂತು ಬಿದ್ದು ಸಾಯೋವಷ್ಟು ಪಾಪ ಮಾಡಿಲ್ಲ. ಆಗಸದ ತೂತಿಂದ ಬಚಾವಾಗ್ಬೇಕು ಅಂದ್ರೆ ನನ್ ಜೊತೆ ಬಾ. ನಿಂಗೆ ನಿಜ್ವಾದ ಜೀವನ ಅಂದ್ರೆ ಏನು ಅಂತ ತೋರಿಸ್ತೀನಿ" ಅಂತಿದ್ದ.

ಸ್ವೀಟಂಗಡಿಯ ತಿನಿಸುಗಳು ಇವನ ಮಾತು ಮುಗಿಯೋಕೇ ಕಾಯ್ತಿದ್ರು. ಹೆಂಗೆ ಗೋಪುಟ್ಟನ ಊರಲ್ಲಿ ಆಗಸಕ್ಕೆ ತೂತು ಬಿತ್ತು, ಇವ್ನೊಬ್ನೇ ಹೆಂಗೆ ಬಚಾವಾದ, ಇವ್ನಿಗೆ ದೇವಿ ಕಂಡಿದ್ದು ಎಲ್ಲಾ ಹೇಳಿ ಇವ ದೇವಧೂತ, ಆಗಸದ ತೂತಿನ ಬಗ್ಗೆ ಜನ್ರನ್ನ ಎಚ್ಚರಿಸ್ತಿದಾನೆ ಅನ್ನೋದನ್ನ ವಿವರವಾಗಿ ಹೇಳಿದ್ರು. ನಾನು ನೋಡ್ತಾನೇ ಇದ್ದೆ, ಕೇಳ್ತಾನೇ ಇದ್ದೆ. ಬಹುಶಃ ನನ್ನ ಮಿದುಳಿನ ಅಷ್ಟೂ ಯೋಚನಾ ಶಕ್ತಿ ಸತ್ತುಹೋಗಿತ್ತು. ಪ್ರತಿಕ್ರಿಯಿಸಲಿಲ್ಲ, ಹಂದಾಡಲಿಲ್ಲ.

ಹೊಸ ಹುಡುಗಿ ತನ್ನ ಹ್ಯಾಂಡ್ ಬ್ಯಾಗಿನಿಂದ ಒಂದಷ್ಟು ಮಾತ್ರೆ ಡಬ್ಬಿಗಳನ್ನು ತೆಗೆದು ಗೋಪುಟ್ಟನ ಮುಂದಿಟ್ಟಳು. ಹೆಚ್ಚು ಮಾತಿಲ್ಲ. ಬಹುಶಃ ಅವಳ ಆ ಕ್ರಿಯೆಯೇ ಅವಳ ಸಮರ್ಪಣೆಯಿರಬಹುದು, ಗೊತ್ತಿಲ್ಲ.

ಅಲ್ಲಿ ಬಹಳ ಹೊತ್ತು ಇರಲಿಕ್ಕಾಗಲಿಲ್ಲ. ಹುಕ್ಕಾಗಳ ಅವಿರತ ಬಳಕೆಯ ಹೊಗೆಗಿಂತ ಹೆಚ್ಚು ಕಾಡಿದ್ದು ಗೋಪುಟ್ಟನ 'ಫ್ಯಾಮಿಲಿ ಬಿಲ್ಡಿಂಗ್ ಪ್ರೋಗ್ರಾಮು'. ಗೋಪುಟ್ಟನ ಟೇಬಲ್ ಬಳಿ ಹೋಗಿ ಅವನ ಹಿಮಾಲಯದ ಚಾವಿ ಕೊಟ್ಟು, ರೂಮಿನ ಚಾವಿ ಪಡೆದು ಕ್ಯಾಬ್ ಹಿಡಿದು ಹೊಟೆಲಿಗೆ ಬಂದುಬಿಟ್ಟೆ. ಗೋಪುಟ್ಟ ಬೆಳಗಿನ ಎಷ್ಟನೆಯದೋ ಜಾವಕ್ಕೆ ರೂಮಿಗೆ ಬಂದಿರಬಹುದು, ಸರಿಯಾಗಿ ಖಬರಿರಲಿಲ್ಲ ನನಗೆ.

ಬೆಳಿಗ್ಗೆ ಎದ್ದವನೇ ಬ್ಯಾಗ್ ಪ್ಯಾಕ್ ಮಾಡುತ್ತಿದ್ದೆ. ಹಳೆ ಹುಡುಗಿ ಕೊಟ್ಟಿದ್ದ ಲೈಟರೊಂದನ್ನು ಬಿಟ್ಟು ಉಳಿದೆಲ್ಲವೂ ಸಿಕ್ಕಂತಿತ್ತು. ಬಹುಶಃ ಗೋಪುಟ್ಟನ ಸರಕುಗಳಲ್ಲಿ ಸಿಲುಕಿರಬಹುದೆಂದು ಇನ್ನೂ ಮಲಗಿದ್ದ ಅವನನ್ನು ಬಡಿದೆಬ್ಬಿಸಿದೆ.

"ಮಲಗಿದ್ದ ಘಟಸರ್ಪವನ್ನು ಮತ್ತೆ ಬಡಿದೆಬ್ಬಿಸಿದೆಯಾ" ಎನ್ನುತ್ತ ತನ್ನ ಒಣಾ ಕಾಮಿಡಿಯೊಂದಿಗೆ ಮಾತು ಶುರು ಮಾಡಿದ್ದ. ನಂಗೆ ಅವನ‌ ಹಾಸ್ಯದಲ್ಲಾಗಲಿ, ಮಾತಿನಲ್ಲಾಗಲಿ ಯಾವುದೇ ಆಸಕ್ತಿ ಉಳಿದಿರಲಿಲ್ಲ.

"ನನ್ನ ಲೈಟರೊಂದು ನಿನ್ನತ್ರ ಇದ್ದಿರ್ಬೇಕು, ಕೊಡ್ತೀಯಾ?" ಅಂತ ನೇರವಾಗಿ ವಿಷಯಕ್ಕೆ ಬಂದೆ.

ಮೊದಲು, "ನಿನ್ ಸಾಮಾನ್ ನಾನ್ಯಾಕ್ ಇಟ್ಕೊಳ್ತೀನಿ ಬ್ರೋ" ಅಂತ ಸಾಧ್ಯತೆಯನ್ನು ತಿರಸ್ಕರಿಸಿದ.

"ನೀನ್ ಇಟ್ಕೊಂಡಿದೀಯಾ ಅಂತಲ್ಲ, ಒಂದು ತಿಂಗ್ಳಾಯ್ತು ಒಟ್ಟಿಗೇ ಇದ್ದು, ಎಲ್ಲೋ ಮಿಕ್ಸ್ ಆಗಿರ್ಬೋದು. ನಿನ್ನತ್ರ ಇಲ್ಲ ಅಂತ ಕನ್ಫರ್ಮ್ ಆದ್ರೆ ಬೇರೆ ಕಡೆ ಹುಡ್ಕೋಕಾಗತ್ತೆ" ಅಂದೆ.

ರಾತ್ರಿ ತೊಟ್ಟು ಮಂಚದ ಬದಿ ಬಿಸಾಕಿದ್ದ ಅಂಗಿ-ಪ್ಯಾಂಟುಗಳ ಜೋಬನ್ನೆಲ್ಲ ತಡಕಾಡಿದ. ಅವನ ಕಾಖಿ ನಿಲುವಂಗಿಯ ಒಳಜೇಬಲ್ಲಿತ್ತು. ಅದನ್ನೆತ್ತಿ ತೋರಿಸುತ್ತ, "ಇದು ನೀ ನಂಗೆ ಗಿಫ್ಟ್ ಕೊಟ್ಟಿದ್ದಲ್ವಾ?" ಎಂದು ಪ್ರಶ್ನಿಸಿದ್ದ.

ಕೋಪ ಅದೆಲ್ಲಿತ್ತೋ, "You're not my fucking girlfriend so that I keep gifting you. ಅದು ನಂಗೆ ಯಾರೋ ಕೊಟ್ಟಿದ್ದು. ನಿಂಗೆ ಗಿಫ್ಟ್ ಕೊಟ್ಟಿಲ್ಲ. ವಾಪಸ್ ಕೊಡು, ನನಗಿನ್ನು ಚೆನ್ನೈಗೆ ಹೋಗ್ಬೇಕು" ಅಂತ ಸ್ವಲ್ಪ ದೊಡ್ಡದನಿಯಲ್ಲೇ ಹೇಳಿದೆ.

ಅವನ ಮುಖ ಏಕ್ದಂ ನಿರ್ಲಿಪ್ತವಾಯ್ತು. "ಸಾರಿ, ನಿನ್ನೆ ಡ್ರ್ಯಾಫ್ಟಿಂಗ್ ಹೋಗ್ವಾಗ ಚಳಿ ಆಗತ್ತೆ, ಸಿಗ್ರೇಟ್ ಸೇದೋಕೆ ಬೇಕಾಗತ್ತೆ ಅಂತ ತಗೊಂಡಿದ್ದೆ. ಅಷ್ಟಕ್ಕೂ ನೀನಿಂಗೆ ಆಫೆಂಡ್ ಆಗ್ತಿರೋದ್ಯಾಕೆ? ಬ್ಯಾಗ್ ಪ್ಯಾಕ್ ಮಾಡ್ಕೊಂಡು ಚೆನ್ನೈಗೆ ಯಾಕ್ ಹೋಗ್ತಿದೀಯಾ?", ಪ್ರಶ್ನಿಸಿದ ಗೋಪುಟ್ಟ.

"ಫ್ರೆಂಡಿನ ಹೊಸ ಮಿಡಿಯಾ ಹೌಸಿನ ಕಾಂಟೆಂಟ್ ಕ್ರಿಯೇಟರ್ಸ್‌ಗೆ ಟ್ರೇನಿಂಗ್ ಬೇಕಂತೆ. ಕೊಡೋಕೆ ಹೊರ್ಟಿದೀನಿ." ಅಂದು ಲೈಟರನ್ನು ಬ್ಯಾಗಿನ ಹೊರ ಖಾನೆಗೆ ಸೇರಿಸಿದೆ.

"You never told me about yourself! ನೀನು ಜರ್ನಲಿಸ್ಟಾ?" ಅಂತ ಪ್ರಶ್ನಿಸಿದ.

"ಅಲ್ಲ, ನಾನು vlogger ಅಷ್ಟೇ. ನನ್ ವೆಬ್‌ಸೈಟನ್ನ ೨೩ ಲಕ್ಷ ಮಂದಿ ಸಬ್‌ಸ್ಕ್ರೈಬ್ ಮಾಡ್ಕೊಂಡು ನೋಡ್ತಾರಷ್ಟೇ. Sometimes I do social commentory too. But not a journalist" ಅಂದೆ.

"ಅಂದ್ರೆ ನಾವು ಇಲ್ಲಿದ್ದಿದ್ದು, ಮಾತಾಡಿದ್ದು ಎಲ್ಲ ರೆಕಾರ್ಡ್ ಮಾಡ್ಕೊಂಡಿದೀಯಾ? ಸೈಟಲ್ಲಿ ಪಬ್ಲಿಶ್ ಮಾಡ್ತೀಯಾ?" ಅಂತ ಕೇಳ್ದ.

"ಇಲ್ಲ. ನಾನಿಲ್ಲಿಗೆ ಬಂದಿದ್ದು ಪರ್ಸನಲ್ ಸ್ಪೇಸ್ ಬೇಕು ಅಂತ. ಒಂದು ಡಿಎಸ್‌ಎಲ್‌ಆರ್ ಬಿಟ್ಟು ಏನೂ ತಂದಿಲ್ಲ. ತಂದಿದ್ರೆ ನೀನು ಒಳ್ಳೆ ಕಾಂಟೆಂಟ್ ಆಗ್ತಿದ್ದೆ" ಅಂದೆ.

"ಬ್ರೋ, ನಿನ್ನತ್ರ ಆಡಿಯನ್ಸ್ ಇದಾರೆ, ಆಗಸಕ್ಕೆ ತೂತು ಬೀಳತ್ತೆ ಅಂತ ಅವ್ರಿಗೆಲ್ಲ ಹೇಳ್ಬೋದು. ಇಪ್ಪತ್ ಲಕ್ಷ ಜನ ಉಳೀತಾರೆ. ರೆಕಾರ್ಡ್ ಮಾಡೋಣ್ವಾ?" ಅಂತಂದ ಅವನ ಮಾತು ನನ್ನ ಮತ್ತಷ್ಟು ಟ್ರಿಗರ್ ಮಾಡಿತ್ತು.

"ನಿನ್ ಹುಚ್ಚು ಭ್ರಮೆಗಳನ್ನ ಇಪ್ಪತ್ತು ಲಕ್ಷ ಜನಕ್ಕೆ ನಾನ್ ಹೇಳಿದ್ರೆ ನೀನಷ್ಟೇ ಅಲ್ಲ, ನನ್ನನ್ನೂ ಹುಚ್ಚ ಅಂತ ಇಗ್ನೋರ್ ಮಾಡ್ತಾರೆ. My source of income will be fucked up even if I mention your name you moron. How dare you to ask me to feature in my videos? ನಿನ್ ಕಾರ್ಯಕರ್ತರಿದ್ದಾರಲ್ವಾ ನಿನ್ನ ದೈವತ್ವವನ್ನ ಪ್ರಚಾರ ಮಾಡೋಕೆ? ಹೋಗ್ ಹಡ್ಸ್ಕೋ ಅವ್ರ ಜೊತೆ" ಅನ್ನೋ ಹೊತ್ತಿಗೆ ನನ್ನಿಡೀ ಶರೀರದಲ್ಲಿದ್ದ ರಕ್ತವೆಲ್ಲ ಮುಖದತ್ತ ಬಂದು ಶೇಖರಣೆಯಾದಂತನಿಸಿತ್ತು.

"ಅವೆಲ್ಲ ನನ್ನ ಕಲ್ಪನೆಯಲ್ಲ. ಇಷ್ಟು ದಿವ್ಸ ನನ್ ಜೊತೇಲಿದೀಯಾ, ನಾನು ಸುಳ್ ಹೇಳೋನ್ ಥರ ಕಾಣ್ತೀನಾ ನಿನ್ಗೆ? ಜೀವ್ನ ಏನು ಅನ್ನೋದ್ ಗೊತ್ತಿಲ್ದೇ ಫೇಕ್ ಲೈಫ್.ಸ್ಟೈಲ್ ತೋರ್ಸಿ ಅಮಾಯಕ ಜನ್ರ ದುಡ್ಡು ಹೊಡ್ಯೋ ನಿನ್ಗೇನ್ ಗೊತ್ತು ನನ್ ಬಗ್ಗೆ‌. ಟ್ರೇನಿಂಗ್ ಕೊಡ್ತಾನಂತೆ ಇವ್ನು, ಅದೇನ್ ಹೇಳ್ಕೊಡ್ತೀಯೋ ಏನೋ." ಅಂದಾಗ ಅವನ ಮುಖವೂ ಸಿಟ್ಟಿಂದ ಕೆಂಪಗಾಗಿತ್ತು.

ಮತ್ತೇನಾಯ್ತು? ಈ ಸಂಚಿಕೆಯ ಶುರೂದಲ್ಲಿದ್ದ ಮಾತುಗಳನ್ನ ಓದ್ಕೊಂಡ್ರೆ ಗೊತ್ತಾಗತ್ತೆ ನಿಮ್ಗೆ. ರಾಯಲ್ ಹೆರಿಟೇಜಿನಿಂದ ಚೆಕ್‌ಔಟ್ ಮಾಡಿಕೊಂಡು ನನ್ನ ಗಾಡಿಯೇರಿ ಚೆನ್ನೈ ಕಡೆ ಹೊರಟೆ.

ಆರೇಳು ತಿಂಗಳು ಗೋಪುಟ್ಟನ ಸುದ್ದಿ-ಗದ್ದಲವಿರಲಿಲ್ಲ. ಹಂಗಿದ್ದೊಂದು ಕ್ಯಾರೆಕ್ಟರನ್ನು ಭೆಟ್ಟಿಯಾಗಿದ್ದೆ ಅನ್ನೋದೇ ಬಹುತೇಕ ಮರೆತುಹೋಗಿತ್ತು. ಆವತ್ತೊಂದಿನ ಟಿವಿ ನೋಡುವವರೆಗೂ ಅವನ ಫುಲ್ ಪೊಟೆನ್ಶಿಯಲ್ಲಿನ ಅರಿವಾಗಿರಲಿಲ್ಲ. ಮಾರನೇ ದಿನದ ಪತ್ರಿಕೆಗಳ ಹೆಡ್ಲೈನು ಹೀಗಿತ್ತು...

"ಭಟ್ರೇರಿಯ ಸರ್ವನಾಶ"

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ