ಆಗಸದ ತೂತು | ಸಂಚಿಕೆ ೫ - ಅನ್ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ

 ರಾಯಲ್ ಹೆರಿಟೇಜಿನ ಮೂರನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ಗಡ್ಡ ಕೆರೆಯುತ್ತಿದ್ದೆ. ಬಿಯಾಸ್ ನದಿ ತಣ್ಣಗೆ ಹರಿಯುತ್ತಿದೆ ಅಂತನಿಸಿ ಮೈ ಜುಂ ಅಂದಿತ್ತು. ನಮ್ಮ ಹೊಟೆಲಿನ ಕೆಳಭಾಗದಲ್ಲಿ, ಕುಲ್ಲುವಿನವರೆಗೂ ರಿವರ್ ರ‌್ಯಾಫ್ಟಿಂಗಿನ ದಂಧೆ ನಡೆಯುತ್ತದೆ. ಗೋಪುಟ್ಟ ಬೆಳಿಗ್ಗೆಯೇ ರ‌್ಯಾಫ್ಟಿಂಗಿಗೆ ತೆರಳಿದ್ದ. ಸಾವಿರಾರು ರೂಪಾಯಿ ಕೊಟ್ಟು ಆ ಚಳಿಯಲ್ಲಿ ದೋಣಿಯಲ್ಲಿ ಹೋಗೋದೇನಿದೆ? ಓಡಾಡಲು ರಸ್ತೆ ಸಂಪರ್ಕವಿದೆ, ರೈಲಿವೆ, ವಿಮಾನಗಳೂ ಹಾರುತ್ತವೆ. ಈ ಕಾಲದಲ್ಲಿ ದೋಣಿಯಲ್ಲಿ ಓಡಾಡುವ ಅವಶ್ಯಕತೆಯೇನಿದೆ? ಹೀಗೆ ನಿರಾಕರಿಸಿ ರೂಮಲ್ಲೇ ಉಳಿದವನಿಗೆ ಹೊತ್ತು ಹೋಗುತ್ತಿರಲಿಲ್ಲ. ಬಾಲ್ಕನಿಯಲ್ಲಿ ನಿಂತು ಜಗತ್ತನ್ನು ನೋಡುವ ಪ್ರಯತ್ನ ಮಾಡುತ್ತಿದ್ದೆ.


ಗೋಪುಟ್ಟ ರ‌್ಯಾಫ್ಟಿಂಗಿಗೆ ಹೋದವ ವಾಪಸ್ಸು ಬಂದಿದ್ದು ನಾಲ್ಕೈದು ಮಂದಿಯ ಗುಂಪಿನೊಟ್ಟಿಗೆ. ಎಲ್ಲರೂ ಗೋಪುಟ್ಟನನ್ನು ಹಿಂಬಾಲಿಸಿದಂತೆ, ಆತ ಎಲ್ಲರಿಗೂ ನಾಯಕನೇನೋ ಎಂಬಂತೆ ಭಾಸವಾಗುವಂತೆ ಆ ಗುಂಪು ಹೊಟೆಲ್‌ನತ್ತ ಬರುತ್ತಿತ್ತು. ಮೂವರು ಹೆಣ್ಣುಮಕ್ಕಳು, ಪ್ರಾಯ ಅಜಮಾಸು ಇಪ್ಪತ್ಮೂರು-ಇಪ್ಪತ್ನಾಲ್ಕಿರಬಹುದು. ಮತ್ತೊಬ್ಬ ೧೯೭೫-೮೦ರ ಕಾಲದ ಹಿಪ್ಪಿಯಂತಿದ್ದ ಯುವಕ. ಬಿಯಾಸ್ ನದಿಯ ಬದಿಯಿಂದ ಹೊಟೆಲ್ ಇದ್ದ ಬದಿಗೆ ರಸ್ತೆ ದಾಟುವಾಗ ಅಡ್ಡ ಬಂದ ಟೂರಿಸ್ಟರ ಗಾಡಿಯೊಂದನ್ನು ಗೋಪುಟ್ಟನ ಸಹಚರರು ಏರಿ, ಮನಾಲಿಯತ್ತ ಹೋದರು. ಬಹುಶಃ ಅವರ ವಾಸ್ತವ್ಯ ಅಲ್ಲೇ ಇತ್ತೇನೋ, ಗೊತ್ತಿಲ್ಲ.

ಕೋಣೆಗೆ ಬರುತ್ತಿದ್ದವನ ಬಾಯಿ ದೇವಾನಂದನ ಯಾವುದೋ ಹಾಡನ್ನು ಸೀಟಿ ಹೊಡೆಯುತ್ತಿತ್ತು. ಖುಷಿಯಾಗಿದ್ದ ಭೂಪ ನನ್ನನ್ನು ಬಾಲ್ಕನಿಯಲ್ಲಿ ಕಂಡವನೇ, "ನೀ ಬರ್ಬೇಕಾಗಿತ್ತು ಮಾರಾಯ, ಎಂತ ಮಸ್ತಾಗಿತ್ತು ಗೊತ್ತಾ? ಮೈಸೂರ್ ಪಾಕು, ಗುಲ್ಕನ್ನು, ಜಾಮೂನು, ದಿಲ್ ಪಸಂದ್ ಪರಿಚಯ ಮಾಡಿಸ್ತಿದ್ದೆ ನಿಂಗೆ" ಅಂದ.
"ಎಂತ ನಮ್ ಕಡೆ ಸ್ವೀಟಂಗ್ಡಿ ಇತ್ತಾ ಅಲ್ಲಿ?" ಅಂತಂದೆ.
"ಅಲ್ವಾ, ನನ್ ಹೊಸಾ ದೋಸ್ತ್ರು ಅವ್ರೆಲ್ಲ. ಒನಮ್ನಿ ನಿನ್ನಂಗೇ ನನ್ ಫ್ಯಾಮಿಲಿ ಅವ್ರು. ನಂಗೆ ಅಂದ್ರೆ ಜೀವ ಬೇಕಾರೂ ಕೊಡ್ತ್ರು" ಅಂದ ಗೋಪುಟ್ಟನಿಗೆ ನಾನು ಅವನಿಗಾಗಿ ಜೀವ ಬೇಕಾದ್ರೂ ಕೊಡ್ತೆ ಅಂತಂದೋರು ಯಾವ ಬೋಳಿಮಕ್ಳು ಅಂತ ಕೇಳಬೇಕೆನಿಸಿತ್ತು. ಆದ್ರೆ "ಓಹೋ, ಮಸ್ತಲ. ಈಗೆಲ್ಲ ಅಂತ ದೋಸ್ತ್ರು ಸಿಗೂದು ಅಪ್ರೂಪ ಬಿಡು" ಅಂದು ಸುಮ್ಮನಾದೆ.

"ಸಿಕ್ಕಾಪಟೆ ಕೋಲ್ಡ್ ಇತ್ತು ನೀರು. ಆ ಮಳ್ ಗುಲ್ಕನ್ನು ನನ್ನೂ ಹಿಡ್ಕಂಡು ನೀರಿಗೆ ಗುಪ್ಪಾರಿತ್ತು. (ಜಿಗಿದಿದ್ದಳು) ಒಳ್ಳೆ ಐಸ್ ವಾಟರ್ ಇದ್ದಂಗಿತ್ತು ನೋಡು. ಪಟಕ್ನೆ ಮಿಂದ್ಕ ಬರ್ತೆ, ಬಿಸಿ ನೀರ್ ಬರ್ತುಂಟು ಅಲ್ವಾ?" ಅಂದು ಪ್ರತಿಕ್ರಿಯೆಗೂ ಕಾಯದೆ ಬಚ್ಚಲ ಒಳಹೊಕ್ಕ.
ಇವನ ಸೈಕಾಲಜಿಯನ್ನೇ ತಿಳಿಯಲಾಗದೆ ಮತ್ತೊಂದು ಸೊಪ್ಪು ತುಂಬಿದ ಸಿಗರೇಟು ಹಚ್ಚಿದೆ. ನಿಧಾನಕ್ಕೆ ಒಂದೊಂದೇ ಅರಿವಾದಂತೆ ಅನಿಸತೊಡಗಿತು.

ಬಹುಶಃ ಇವ ಆವತ್ತು ಬಿದ್ದದ್ದು ನಿಜವಿರಬಹುದು‌. ಯಾವುದೋ ಆಕೃತಿ ಕಾಣಿಸಿಕೊಂಡಿದ್ದು, ಆಗಸಕ್ಕೆ ತೂತು ಬೀಳತ್ತೆ ಅಂದಿದ್ದು, ಹೆಂಗಸರ ಸ್ತನಗಳಿಂದ ರಕ್ತ ಒಸರಿದ್ದು ಎಲ್ಲವೂ ಇವನ ಮಾರ್ಫಿನ್ ಅಮಲಲ್ಲಿ ಹುಟ್ಟಿಕೊಂಡ ಕಲ್ಪನೆಯಾಗಿದ್ದಿರಬಹುದು‌. ಅದನ್ನೇ ವಾಸ್ತವ ಎಂದು ನಂಬಿಕೊಂಡಿರಬಹುದೆ? ಪಕ್ಕಾ ಗೊತ್ತಿಲ್ಲ. ಅವನನ್ನೇ ಕೇಳೋಣವೆ? ಪ್ರತಿಕ್ರಿಯೆ ಹೇಗಿರಬಹುದು? ಬೇಡ ಅನಿಸಿ ಸುಮ್ಮನಾದೆ. ಪ್ರವಾಸ ಮುಗಿಸಿ ಮನೆಗೆ ಹೋದರೆ ಸಾಕು ಅನಿಸುವಂತಿತ್ತು ಇವನ ಸಹವಾಸ.

ಸ್ನಾನ ಮುಗಿಸಿ ಗೋಪುಟ್ಟ ಹೊರಬಂದಾಗ ಮಧ್ಯಾಹ್ನ ಒಂದೂಮೂವತ್ತು‌. ಹೊಟೆಲಿನ ಗ್ರೌಂಡ್ ಫ್ಲೋರಲ್ಲಿದ್ದ ಡೈನಿಂಗು ಹಾಲಿಗೆ ಬೇಗ ಹೋಗದಿದ್ದರೆ ಉಳಿದ ರೂಮಿಗರು ನಮಗೆ ಬೇಕಾದ ಆಲೂಪರಾಟ, ದಾಲುಗಳನ್ನು ಖಾಲಿ ಮಾಡುವುದು ಪಕ್ಕಾ ಆಗಿತ್ತು‌. ಗೋಪುಟ್ಟ ಅದೆಷ್ಟೇ ಮಳ್ಳನಾದರೂ ನಾನ್‌ವೆಜ್ ತಿನ್ನುವವನಲ್ಲ. ಯಾಕೆ ಅಂತ ಕೇಳಿದ್ದಕ್ಕೆ ದೊಡ್ಡ ಫಿಲಾಸಫಿಯನ್ನೇ ಒದರಿದ್ದ. "ಯಾವುದರಿಂದ ಕಡಿಮೆ ಹಾನಿಯಾಗುತ್ತದೋ ಅದನ್ನು ತಿನ್ನಬೇಕು. ಪ್ರಾಣಿಗಳನ್ನ ಕಡಿದುನೋಡು, ಅವುಗಳ ಕಿರುಚಾಟ, ಆಕ್ರಂದನ ನಿನ್ನ ಕಣ್ಣಲ್ಲಿ ನೀರು ತರಿಸೋದಿಲ್ಲವೆ? ಅದೇ ಒಬ್ಬ ಕಟುಕ ತಾನು ಸಾಯಿಸೋ ಪ್ರಾಣಿಗಾಗಿ ಒಂದೇ ಒಂದು ಹನಿ ಕಣ್ಣೀರು ಸುರಿಸೋದಿಲ್ಲ. ಅಷ್ಟು ನಿರ್ಭಾವುಕನನ್ನಾಗಿ ಅವನನ್ನು ಬದಲಾಯಿಸಿದ್ದು ಯಾರು? ನಾನ್‌ವೆಜ್ ತಿನ್ನೋ ಮನುಷ್ಯ ಪ್ರಾಣಿಗಳೇ. ಬೇರೆಯವರ ಭಾವುಕತೆಯನ್ನೇ ನಾಶಮಾಡುವ ಮಾಂಸಾಹಾರ ತಿಂದು ಯಾರಾದ್ರೂ ಉದ್ದಾರ ಆಗ್ತಾರಾ? ಅದೇ ಬಟಾಟೆ ಬೆಳೆಯೋನು, ಅಕ್ಕಿ ಬೆಳೆಯೋನು ಕಟಾವು ಮಾಡಿ ನಿರ್ಭಾವುಕರಾಗಿದ್ದನ್ನ ನೋಡಿದೀಯಾ? ಅವರ ಮುಖದಲ್ಲಿ ಖುಷಿಯಿರತ್ತೆ. ಇಡೀ ದೇಶಕ್ಕೆ ಊಟ ಹಾಕಿದ ಸಂತೃಪ್ತಿಯಿರತ್ತೆ. ಮೇಲಿಂದ ಸಸ್ಯಗಳನ್ನ ಸಾಯಿಸೋದಿಲ್ಲ, ಅವಕ್ಕೆ ಮತ್ತೆ ಜನ್ಮ ನೀಡ್ತಾರೆ ರೈತರು. ಕಂಪೇರಿಟಿವ್ಲಿ ಕಮ್ಮಿ ಸಾವು-ನೋವುಗಳ ಜವಾಬ್ದಾರವಾಗೋ ಸಸ್ಯಾಹಾರ ತಿಂದ್ರಷ್ಟೇ ಒಳ್ಳೇದಾಗೋದು. ಇಲಗದಿದ್ರೆ ಆಗಸಕ್ಕೆ ತೂತಾಗ್ತದೆ, ಸರ್ವನಾಶವಾಗ್ತದೆ" ಅಂದಿದ್ದ ಗೋಪುಟ್ಟ. ಅವನ ಸಿದ್ಧಾಂತಕ್ಕೂ, ಆತನಿಗೂ ಇರುವ ಕಾಂಟ್ರ್ಯಾಸ್ಟು ನಿಮಗರ್ಥವಾಗ್ಬೇಕು ಅಂದ್ರೆ ಗೋಪುಟ್ಟನ ಕತೆ ಪೂರ್ತಿ ತಿಳಿಬೇಕು ನೀವು.

ಆವತ್ತು ಹೊಟೆಲಿನ ಬಫೆ ಸವಿಯದೇ ಮನಾಲಿಯಲ್ಲಿದ್ದ ಸೌತ್ ಇಂಡಿಯನ್ ರೆಸ್ಟಾರೆಂಟಿಗೆ ಹೋಗೋದು ಅಂತ ತೀರ್ಮಾನವಾಯ್ತು. ಇಬ್ಬರೇ ಇರೋದ್ರಿಂದ ನನ್ನ ಬೈಕನ್ನು ಹೊಟೆಲಿನಲ್ಲೇ ಬಿಟ್ಟು ಅವನ ಹಿಮಾಲಯವನ್ನೇರಿ ಮನಾಲಿಗೆ ಸಾಗಿದೆವು.

ನಾವು ಹೋಗುವಷ್ಟರಲ್ಲಾಗಲೇ ಗೋಪುಟ್ಟನ ಸ್ವೀಟಂಗಡಿ ಐಟಮ್ಮುಗಳು ಅಲ್ಲಿದ್ವು. ಎಲ್ಲರ ಗಾಗಲ್ಲುಗಳೂ ಒಂದೇ ಥರ ಕಂಡವು, ಅವರೆಲ್ಲರ ಮನಸ್ಸಿನಂತೆ. ಇವ ರೆಸ್ಟಾರೆಂಟಿನೊಳಕ್ಕೆ ಕಾಲಿಡುತ್ತಿದ್ದಂತೆ ನಾಲ್ವರೂ ಮುತ್ತಿನ ಮಳೆಗೈದು ಸ್ವಾಗತಿಸಿದರು. ಹ್ಞೂಂ, ಆ ದಿಲ್‌ಪಸಂದ್ ಯುವಕನೂ ಕೂಡ. ಅದನ್ನೆಲ್ಲ ನೋಡಿ "ಆಧುನಿಕ ಭಾರತದ ಹಿಪ್ಪಿ ಕಲ್ಚರಿನ ಪಿತಾಮಹ" ಅಂತನಿಸಿದ್ದು ಸುಳ್ಳಲ್ಲ.
ಟೇಬಲ್ಲಿಗೆ ಸುತ್ತುವರೆದ ನಾನು, ಗೋಪುಟ್ಟ ಮತ್ತವನ ಸಂಗಡಿಗರನ್ನು ರೆಸ್ಟಾರೆಂಟಿನ ಮಾಲಿಕ ಯಾವ ಕ್ಷಣದಲ್ಲಾದರೂ ಹೊರಹಾಕಬಹುದು ಅಂದುಕೊಂಡು ಬಟರ್ ಪಾವ್ ಬಾಜಿ, ಎರಡು ಎಕ್ಸ್ಟ್ರಾ ಪಾವ್ ಆರ್ಡರ್ ಮಾಡಿದೆ ನಾನು. ಸ್ವೀಟಂಗಡಿ ಗ್ಯಾಂಗು (ಗೋಪುಟ್ಟನೂ ಸೇರಿ) ಎಂಟು ಬಟರ್ ನಾನ್, ಎರಡು ಕಾಜು ಮಸಾಲಾ ಮಾಡುವಂತೆ ಆರ್ಡರ್ ಕೊಟ್ಟರು. ನಿರೀಕ್ಷೆಯಂತೆ ಪಾವ್ ಬಾಜಿ ಬೇಗ ಬಂತು. ತಿನ್ನುತ್ತಲೇ ಸ್ವೀಟಂಗಡಿಯವರ ಸಂಭಾಷಣೆ ಗಮನಿಸುತ್ತಿದ್ದೆ. ಹೊಸ ಪ್ರೇಮಿಗಳ ಸ್ವೀಟ್ ನಥಿಂಗುಗಳಷ್ಟೇ ಗಂಭೀರ ಮಾತುಗಳನ್ನು ಕೇಳಿ ಕಿವಿಗಳಿಂದ ರಕ್ತ ಬರೋದೊಂದು ಬಾಕಿಯಿತ್ತು. ಒಂದು ಗಳಿಗೆಯಲ್ಲಿ ಮಾತಿನ ದಿಕ್ಕು ಬೇರೆಯಾಯ್ತು, ಥ್ಯಾಂಕ್ಸ್ ಟು ಮೈಸೂರ್ ಪಾಕು.

"ಆಗಸಕ್ಕೆ ತೂತು ಬೀಳೋದಕ್ಕೆ ಇನ್ನೂ ಎಷ್ಟ್ ಟೈಮಿದೆ?" ಕೇಳಿದ್ದಳು ಮೈಸೂರ್ ಪಾಕು.
"ಇನ್ನೊಂದೆರ್ಡ್ ವರ್ಷ ಬೇಕಾಗ್ಬೋದು. ಮನುಷ್ಯರ ಪಾಪದ ಕೊಡ ತುಂಬ್ತಾ ಬಂದಿದೆ." ಅಂದ ಗೋಪುಟ್ಟ.

"ಅದು ಹೆಂಗ್ ಗೊತ್ತಾಗತ್ತೆ ನಮ್ಗೆ?" ದಿಲ್ ಪಸಂದನ ಪ್ರಶ್ನೆ.

"ಮೊದ್ಲು ದಕ್ಷಿಣ ಭಾರತದಲ್ಲಿ ಪ್ರಳಯವಾಗತ್ತೆ. ಮೇಘಸ್ಫೋಟ, ಅತಿವೃಷ್ಟಿ, ಭೂಕುಸಿತ, ಭೂಕಂಪ ಎಲ್ಲಾ ಶುರುವಾಗತ್ತೆ. ಅರ್ಧ ಸಂಖ್ಯೆ ಮನುಷ್ಯರ ಹೆಣಗಳು ನೀರಿನ ಮೇಲೆ, ಮತ್ತರ್ಧ ಮಂದಿಯ ಹೆಣ ಭೂಮಿಯ ಅಡಿಗೆ ಸೇರತ್ವೆ. ಎಲ್ಲರೂ ಸತ್ಮೇಲೆ ಹೆಣಗಳನ್ನ ಒಟ್ಮಾಡ್ಕೊಳೋಕೆ ಆ ದೇವಿ ಬರ್ತಾಳೆ, ನಂಗೆ ಉತ್ತರಕ್ಕೆ ಹೋಗು ಅಂದೋಳು. ಅವ್ಳು ಭೂಮಿಗೆ ಬರೋಕೆ ದಾರಿ ಬಿಡತ್ತೆ ಆಕಾಶ. ಅದೇ ಆಗಸದ ತೂತು. ಇದನ್ನೆಲ್ಲ ಮೊದ್ಲೇ ರಿಹರ್ಸಲ್ ಮಾಡ್ಕೊಂಡಿದಾರೆ. ನಮ್ಮೂರಲ್ಲಿ ಗುಡ್ಡ ಕುಸ್ದಿದ್ದು ಮತ್ಹೆಂಗೆ ಅಂದ್ಕೊಂಡ್ರಿ? ಆವತ್ತು ನಮ್ಮೂರಿನವ್ರೆಲ್ಲ ಸತ್ತು ನಾನಷ್ಟೇ ಉಳ್ಕೊಂಡಿದ್ದು ಪವಾಡ ಅಲ್ಲ, ಆಯ್ಕೆ. ನಾನು ಪಾಪ ಮಾಡ್ದಿರೋದನ್ನ ನೋಡಿ ಆ ದೇವೀನೇ ನನ್ನ ಬದ್ಕ್ಸಿದ್ದು‌. ಈ ಪ್ರಕ್ರಿಯೆ ಎಲ್ಲ ಮುಗಿಯೋವರ್ಗೆ ನಾನು ಹಿಂಗಿರ್ತೀನಿ. ಅದಾದ್ಮೇಲೆ ಭೂಮಿಯಲ್ಲಿ ಮತ್ತೆ ಮನುಷ್ಯರ ಸಂತತಿ ಬೆಳ್ಸೋದು, ಎಲ್ರಿಗೂ ಪಾಪ-ಪುಣ್ಯಗಳ ಬಗ್ಗೆ ವಿವೇಚನೆ ಹುಟ್ಸೋ ಜವಾಬ್ದಾರೀನ ನಂಗೆ ಕೊಡ್ತಾಳೆ ದೇವಿ. ನೀವು ನನ್ ಜೊತೆ ಇರೋತನ್ಕ ಏನೂ ಆಗಲ್ಲ ನಿಮ್ಗೆ. ನೀವೆಲ್ಲ ನಾನು ಆಯ್ಕೆ ಮಾಡಿರೋ ಕಾರ್ಯಕರ್ತರು." ಅಂತ ಗೋಪುಟ್ಟ ಹೇಳೋ ಹೊತ್ತಿಗೆ ನನ್ನ ಪಾವ್ ಬಾಜಿ ಖಾಲಿಯಾಗಿತ್ತು. ಅವರ ಆರ್ಡರ್ ಇನ್ನೂ ಬಂದಿರಲಿಲ್ಲ. ಈ ದೇವಮಾನವರ ಸಂಭಾಷಣೆ ಕೇಳೋ ಪುಣ್ಯವಂತ ನಾನಲ್ಲ ಅಂತನಿಸಿ, "ಇಲ್ಲೇ ಓಲ್ಡ್ ಮನಾಲಿಗೆ ಹೋಗ್ಬರ್ತೀನಿ, ಸೊಪ್ಪು ಖಾಲಿಯಾಗಿದೆ. ಕೀ ಕೊಡ್ತೀಯಾ?" ಅಂದು ಗೋಪುಟ್ಟನ ಹಿಮಾಲಯ ಏರಿ ಹೊರಟೆ. ತಾಸು ಬಿಟ್ಟು ರೆಸ್ಟಾರೆಂಟಿಗೆ ಬಂದಾಗ ಯಾರೂ ಇರ್ಲಿಲ್ಲ.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ