ಆಗಸದ ತೂತು | ಸಂಚಿಕೆ ೯ - ಅನಿಶ್ಚಿತ

 ಅಕ್ಟೋಬರ್ ಹದಿನೈದು, ಮಧ್ಯಾಹ್ನ ೪:೧೦.

ಪೊಲೀಸರೇ ಸಿದ್ಧಪಡಿಸಿದ್ದ ಪ್ರಶ್ನಾವಳಿಗಳ ಪ್ರತಿ, ಪೆನ್ನು ಪಡೆದು ಇಂಟರಾಗೇಶನ್ ಕೋಣೆಯೊಳಗೆ ಹೋದೆ. ಜೊತೆಯಲ್ಲಿ ಕಟ್ಟುಮಸ್ತಾದ ಮೈಕಟ್ಟಿನ ಪಿಎಸ್‌ಐ ಸಾಹೇಬರು. ಅಂಗಿ ಮೇಲಿನ ಹೆಸರ ಪಟ್ಟಿ ಶ್ರೀನಿವಾಸ ರಾಯುಡು ಎಂದು ಓದಿಸಿಕೊಳ್ಳುತ್ತಿತ್ತು.

ಗೋಪುಟ್ಟ ನಗುತ್ತಿದ್ದ. ಕೈಗಳು ಟೇಬಲ್ಲಿಗೆ ಬಂಧಿಸಲ್ಪಟ್ಟಿದ್ದವು. ಗುಂಗುರು ಕೂದಲು ಮತ್ತೂ ಉದ್ದ ಬೆಳೆದಿದ್ದವು, ಗಡ್ಡ-ಮೀಸೆಗಳು ಎರಡು ದಿನಗಳ ಹಿಂದಷ್ಟೇ ಕ್ಲೀನ್ ಶೇವಿಗೆ ಒಡ್ಡಿಕೊಂಡಿದ್ದ ಗುರುತಾಗಿ ಸುಟ್ಟ ಗೋಧಿ ಬಣ್ಣದ ಮುಖದ ಮೇಲೆ ಕಪ್ಪು ಚುಕ್ಕೆಗಳಂತೆ ಬೆಳೆದಿದ್ದವು. ಅದೇ ಮಾಸಲು ನಿಲುವಂಗಿ, ಧೂಳು ಮೆತ್ತಿದಂಥ ಜೀನ್ಸು ಪ್ಯಾಂಟು ತೊಟ್ಟಿದ್ದವ ನಾನು ಕೋಣೆಯೊಳಗೆ ಹೊಕ್ಕಾಗ ನಕ್ಕು 'ಮಾದಾ ಫಕಾ' ಎನ್ನುತ್ತಾ ತಬ್ಬಿಕೊಳ್ಳಲು ಎದ್ದ, ಕೈಗಳನ್ನು ಬಂಧಿಸಿದ್ದ ಸರಪಳಿ ಅದಕ್ಕಾಸ್ಪದ ಕೊಡಲಿಲ್ಲ. ಆಗಲೇ ಅವನ ಮುಖದಲ್ಲಿ ಸಿಡುಕಿನಂಥ ಭಾವವೊಂದು ಕಾಣಿಸಿ ಮರೆಯಾಯ್ತು, ಮಿಲಿ ಸೆಕೆಂಡುಗಳ ಲೆಕ್ಕದಲ್ಲಿ.

"ಹೆಂಗಿದೀರಾ ಮಿಸ್ಟರ್ ವ್ಲಾಗರ್? Or should I call you wannabe vlogger?" ಎಂದು ಹಂಗಿಸಿದ. ನಾನು ಸುಳ್ಳು ಹೇಳಿದ್ದು ಅವನಿಗೆ ಗೊತ್ತಾಗಿದೆ ಅನ್ನೋದು ಪೊಲೀಸರಿಗೆ ಅವ ನೀಡಿದ್ದ ನನ್ನ ವಿಳಾಸ, ಫೋನ್ ನಂಬರುಗಳಿಂದ ಮೊದಲೇ ತಿಳಿದಿತ್ತು.

"ಫೈನ್, ಚೆನ್ನಾಗಿದೀನಿ. ನೀನು ಹೆಂಗಿದೀಯಾ ಅಂತ ಕೇಳೋಕೋಗಲ್ಲ; ಗೊತ್ತಾಗ್ತಾ ಇದೆ." ಅಂದು, "confessionಗೆ ರೆಡಿಯಾಗಿದ್ದೀಯಾ?" ಅಂತ ಕೇಳ್ದೆ.

"ನಾನು ಮಾಡ್ದೇ ಇರೋ ಕೃತ್ಯವನ್ನ ನಾನ್ಯಾಕ್ ಕನ್ಫೆಸ್ ಮಾಡ್ಕೊಳ್ಲಿ?" ಗೋಪುಟ್ಟ ಪ್ರಶ್ನೆಯನ್ನೇ ಉತ್ತರವಾಗಿ ಕೊಟ್ಟ.

"ಮತ್ಯಾಕೆ ನನ್ನನ್ನ ಬರೋಕೇಳಿದ್ದು? ಇಲ್ಲಿರೋರಿಗೆ, ನಂಗೆ ಕೆಲ್ಸ ಇಲ್ಲ ಅಂದ್ಕೊಂಡ್ಯಾ?" ಮತ್ತೆ ನನ್ನ ಪ್ರಶ್ನೆ.

"ಇವ್ರು ಹೆಂಗಿದ್ರೂ ಹದಿಮೂರು ಕೊಲೆ ಮಾಡಿದ ಆರೋಪ ಹೇರಿ ನನ್ನ ಗಲ್ಲಿಗೇರಿಸ್ತಾರೆ‌. ಅವ್ರಿಗೊಂದು ಬಲಿಪಶು ಬೇಕು. ಸಾಯೋ ಮೊದ್ಲು ಮೋಸ್ಟ್ ಫೇಮಸ್ ವ್ಲಾಗರ್‌ಗೆ ಒಂದು ಇಂಟರ್ವ್ಯೂ ಕೊಡ್ವಾ ಅಂತ ಕರ್ಸ್ದೆ ನಿನ್ನ" ಅಂತ ಮತ್ತೆ ಕುಟುಕಿದ.

ನಂಗೆ ತಡೆಯೋಕಾಗ್ಲಿಲ್ಲ. ಎದ್ದು ಕೊಠಡಿಯಿಂದ ಎದ್ದು ಹೊಂಟೆ. ಗ್ಲಾಸಿನ ಪರದೆಯ ಹಿಂದಿದ್ದ ಎಸ್‌ಪಿ ಪ್ರಜ್ವಲ್ ನಾನು ಹೊರಬಂದಿದ್ದನ್ನು ನೋಡಿ ನಗುತ್ತಾ, "ಬನ್ನಿ ಒಂದು ಚಾ ಕುಡಿದು ಬರೋಣ" ಅನ್ನುತ್ತಾ ಕೆಫೆಟೆರಿಯಾಕ್ಕೆ ಕರೆದೊಯ್ದರು.

"ಒಂದೇ ರಾತ್ರಿ ಹದಿಮೂರು ಕೊಲೆ ಮಾಡಿರೋ ಗೋಪುಟ್ಟನಿಗೆ ಗೊತ್ತು, ತನ್ನನ್ನ ಹಿಡಿಯೋಕೆ ಇಡೀ ದೇಶದ ಪೊಲೀಸ್ರು ಕಾಯ್ತಿದ್ರು ಅಂತ. ಅವನ ಕನ್ಫೆಶನ್ ಪಡೆಯೋಕೆ ಇರೋ ಅಷ್ಟೂ ಮಾರ್ಗಗಳನ್ನ ಬಳಸ್ತೇವೆ ಅಂತಾನೂ ಗೊತ್ತು ಅವ್ನಿಗೆ. ಇಡೀ ದೇಶಕ್ಕೇ ಫೇಮಸ್ ಆಗಿರೋ ಸೆಲಿಬ್ರಿಟಿ ಅವ್ನು. ಪ್ರಧಾನಮಂತ್ರಿ ಯಾರು ಅಂತ ಕೇಳಿದ್ರೆ ಗೊತ್ತಿಲ್ಲ ಅನ್ನೋರಿಗೂ ಭಟ್ರೇರಿ ಕೊಲೆಗಳ ಬಗ್ಗೆ ಗೊತ್ತಿದೆ. ನೀವೀಗ ಪ್ರಶ್ನೆ ಮಾಡ್ತಿರೋದು ಕೊಲೆಗಾರನನ್ನಲ್ಲ, ಒಬ್ಬ ಸೆಲಿಬ್ರಿಟಿಯನ್ನ. ಅವ್ನ ಅಹಂಕಾರವನ್ನ ಇಳ್ಸಿ, ಬೇಕಿದ್ರೆ ಪರ್ಸನಲ್ ಆಗಿ. ಅವ್ನು ಬ್ರೇಕ್ ಆದ್ಮೇಲೆ ನಮ್ಗೆ ಏನು ಬೇಕೋ ಅದನ್ನ ಹೇಳ್ತಾನೆ. ಈಗ ನಡ್ದಿದ್ದನ್ನ ಪರ್ಸನಲ್ ಆಗಿ ತಗೊಳ್ಬೇಡಿ" ಅಂತಂದ ಅವರ ಮಾತು ನನ್ನನ್ನೂ ಕುಕ್ಕಿತ್ತು.

ಆ ರೂಮಿಗೆ ಎಂಟರಾಗಿ ಹ್ಯಮಿಲಿಯೇಟ್ ಆಗೋ ಮೊದ್ಲು ನಂಗೇನು ಕಮ್ಮಿ ಅಹಂಕಾರವಿತ್ತಾ? ಪೊಲೀಸರಿಂದ್ಲೂ ಆಗ್ದಿರೋ ಕೆಲ್ಸ ಮಾಡೋಕೆ ಹೊಂಟೋನು ನಾನು. ಅಷ್ಟು ಅಹಂಕಾರ ಹೊತ್ತುಕೊಂಡು ಇಂಟರಾಗೇಶನ್ ರೂಮಿಗೆ ಹೋಗಿದ್ದವನ ಅಹಂಕಾರಕ್ಕೆ ಸೂಜಿ ಚುಚ್ಚಿದ್ದ ಗೋಪುಟ್ಟ. ಈಸಲ ಕೋಣೆಯೊಳಕ್ಕೆ ಹೊಕ್ಕಾಗ ನನ್ನ ಬದಲು ಅವನ ಬಗ್ಗೆ ಯೋಚಿಸ್ತಿದ್ದೆ.

"ಭೂಕುಸಿತ ಆಗಿ ಊರಿಗೂರೇ ಸ್ಮಶಾನವಾಗಿದ್ರೂ ಭಟ್ರೇರಿಯವ್ರು ನಿನ್ನ ಬಗ್ಗೆ ಸಿಂಪಥಿ ತೋರಿಸ್ಲಿಲ್ಲ. ನಿನ್ನನ್ನ ತಮ್ಮ ಮನೆಗೆ ಕರ್ಕೊಂಡೋದ ಸೋದರ ಮಾವಂದಿರೂ ನಿಂಗೆ ಅಟೆನ್ಶನ್ ಕೊಡ್ದೇ ತಮ್ಮ ಕೆಲ್ಸಗಳಲ್ಲಿ ತೊಡಗಿಕೊಂಡಿದ್ರು. ಆಲ್ರೆಡಿ ತಂಗಿಯನ್ನ, ಬಾವನನ್ನ ಕಳ್ಕೊಂಡೋರಿಗೆ ಭಟ್ರಕುಳಿ ನಾಶವಾಗಿದ್ದು ದೊಡ್ಡ ವಿಷಯವಾಗಿರ್ಲಿಲ್ಲ. ಅಲ್ಲಿ ನಿನ್ನ ಅಸ್ತಿತ್ವವಿರ್ಲಿಲ್ಲ. ಸಣ್ಣ ಅಟೆನ್ಶನ್ನು ಸಿಕ್ಕರೂ ಸಾಕಾಗಿತ್ತು ನಿನ್ಗೆ. ಆ ಅಟೆನ್ಶನ್ನಿಗೋಸ್ಕರ ಆ ಸಣ್ಣ ಮಗುವಿಗೆ ಬೈಗುಳ ಹೇಳ್ಕೊಟ್ಟೆ. ನೀನು ನಿರೀಕ್ಷಿಸಿದ್ದ ಅಟೆನ್ಶನ್ ನಿಂಗೆ ಸಿಕ್ತು. ಆದ್ರೆ ಮನೆಯಲ್ಲಿ ಜಾಗ ಕಳ್ಕೊಂಡೆ. ಭಟ್ರಕುಳಿಗೆ ಹೋಗಿ ಬಿಡಾರ ಹೂಡಿದೆ. ಭಟ್ರೇರಿಯವ್ರು ನಿಂಗೆ ಬೇಕಾದಷ್ಟು ಗೌರವ ಕೊಟ್ರು, ಸ್ವಂತ ಊರಿನವ್ರಂತೆ ನೋಡ್ಕೊಂಡ್ರು. ಆದ್ರೆ ನಿಂಗೆ ಈಗ ಮತ್ತಷ್ಟು ಬೇಕಿತ್ತು. Sexually frustrate ಆಗಿದ್ದ ನೀನು ವಿಮಲಾಳನ್ನು ಬಲೆಗೆ ಬೀಳಿಸ್ಕೊಂಡೆ. ಒಂದು ಕೆಲಸವನ್ನೂ ಹೊಂದಿದ್ದ, ನೈಸರ್ಗಿಕ ವಿಕೋಪದ ನೆಪದಲ್ಲಿ ಸಾಕಷ್ಟು ದುಡ್ಡು, ಜಮೀನನ್ನೂ ಹೊಂದಿದ್ದ; ಯಾರೂ ಗತಿಯಿಲ್ಲದೆ ಸ್ವಲ್ಪವೇ ಶ್ರಮದಿಂದ ನಿಯಂತ್ರಣಕ್ಕೆ ಸಿಕ್ಕಬಹುದಾಗಿದ್ದ ನಿನಗೆ ವಿಮಲಾಳನ್ನು ಧಾರೆಯೆರೆಯೋಕೆ ಮನೆಯವರೂ ಸಿದ್ಧರಿದ್ರು. ಆದ್ರೆ ಯಾವಾಗ ಅವರು ನಿನ್ನನ್ನ ಕಂಟ್ರೋಲ್ ಮಾಡೋಕೆ ಶುರು ಮಾಡಿದ್ರೋ ಆಗ ನಿಂಗೆ ಅರಿವಾಗೋಯ್ತು. ವಿಮಲಾಳನ್ನು ಬಿಟ್ಟು ಉಳಿದೋರಿಂದ ಅಂತರ ಕಾಯ್ಕೊಂಡೆ. ವಿಮಲಾಳಿಗೆ ಪ್ರೀತಿ ಕೊಡೋ ಬದ್ಲು ನಿಂಗೆ ಸುಲಭವಾಗಿ ಸಿಗ್ತಿದ್ದ ನಿದ್ರೆ ಮಾತ್ರೆಗಳನ್ನ ಕೊಟ್ಟೆ. ರೇಪಿಸ್ಟ್ ಅನ್ನೋ ಪಟ್ಟ ಸಿಕ್ಕಾಗ ಬೇಡದಿದ್ದ ಅಟೆನ್ಶನ್ ಸಿಕ್ತು. "ಆಗಸದ ತೂತು" ಅನ್ನೋ ಸುಳ್ಳು ಕತೆಯನ್ನ ಸೃಷ್ಟಿಸಿದೆ. ದೇವಧೂತ ಅನ್ನೋ ಪಟ್ಟ ಕಟ್ಟಿಕೊಂಡೆ. ನಿಂಗೆ ಬೇಲಾದ ಸಾಹಚರ್ಯ ಸಿಕ್ತು. ನೀನು ಹೇಳಿದಂತೆ ಕೇಳೋ ಜನ್ರು ಸಿಕ್ಕಿದ್ಮೇಲೆ ವಾಪಸ್ ಭಟ್ರಕುಳಿಗೆ ಬಂದೆ. ಭಟ್ರೇರಿಯವ್ರು ನಿಂಗೆ ಮಾಡಿದ್ದ ಅವಮಾನದ ಹಗೆಯನ್ನ ಹದಿಮೂರು ಕೊಲೆಗಳ ಮೂಲಕ ತೀರಿಸ್ಕೊಂಡೆ. ಇಷ್ಟೇ ಅಲ್ವಾ ನೀನು ಮಾಡಿದ್ದು? Goddamn godman? Or should I call you wannabe Godman? Or rapist or mass murderer?" ಅವನ ಭಾಷೆಯಲ್ಲೇ ಪ್ರಶ್ನೆ ಕೇಳಿದ್ದೆ. ಒಂದೊಂದು ವಾಕ್ಯವೂ ಅವನ ಚಹರೆಯನ್ನು ಬದಲಾಯಿಸಿದ್ದವು. ಕೋಳದೊಳಗಿನ ಕೈ ಕಿಸೆ ಹೊಕ್ಕಿದ್ದವು. ಅದು ಅವನು ವಿಷಿಣ್ಣನಾದಾಗಿನ ಬಾಡಿ ಲ್ಯಾಂಗ್ವೇಜು ಅನ್ನೋದು ಅರ್ಥವಾಗಿತ್ತು.

ಸುಮಾರು ಹೊತ್ತು ಮೌನದ ನಂತರ ಮಾತನಾಡಿದ. "ನಾನು ಕೊಲೆ ಮಾಡಿಲ್ಲ. ವಿಮಲಾಳಿಗೆ ನಿದ್ರೆ ಮಾತ್ರೆ ನೀಡಿದ್ದು ಹೌದು. ಆದ್ರೆ ಅವ್ಳು ನಾನು ಮದುವೆಯಾಗ್ಬೇಕಿದ್ದ ಹುಡ್ಗಿ. ಅವ್ಳ ಜೊತೆ ಸಂಭೋಗ ಮಾಡಿದ್ರೆ ಕ್ರೈಂ ಅಲ್ಲ" ಅನ್ನೋ ಸಮರ್ಥನೆ ಗೋಪುಟ್ಟನ ಬಾಯಿಂದ ಸಣ್ಣ ಸ್ವರದಲ್ಲಿ ಬಂದಿತ್ತು.

This is time where I should say, "no means no" ತೀರಾ ಫಿಲ್ಮೀ ಡೈಲಾಗುಗಳನ್ನ ಹೊಡೆಯೋ ಉಮೇದಿಯಿರ್ಲಿಲ್ಲ. "ನಿನ್ನ ಸಮರ್ಥನೆಗಳು ಬೇಕಾಗಿಲ್ಲ. ನಾನು ಮನಾಲಿಯಿಂದ ಹೊರಟಮೇಲೆ ಏನಾಯ್ತೆಂದು ಡಿಟೇಲಾಗಿ ಹೇಳು. ಭಟ್ರೇರಿಯಲ್ಲಿ ಏನಾಯ್ತು ಅಂತ ನಿನ್ನ ಕಾರ್ಯಕರ್ತರು ಎಲ್ಲಾ ಹೇಳಿದಾರೆ. You will be convicted guilty in the court of law." ಅಂದು ನನ್ನೆದುರಿಗಿದ್ದ ಫೈಲನ್ನು ಓಪನ್ ಮಾಡಿದೆ. ಅದರೊಳಗೆ ಈಗಾಗಲೇ ಗೋಪುಟ್ಟನ ಸ್ವೀಟಂಗಡಿ ತಿನಿಸುಗಳು ಕೊಟ್ಟಿದ್ದ ಹೇಳಿಕೆಗಳಿದ್ವು.

"ಎಲ್ಲಾ ಸರಿಯಾಗಿದ್ರೆ ನೀನು ನನ್ನ ಒಳ್ಳೆ ಸಹಚರನಾಗ್ತಿದ್ದೆ. ಇನ್ನೊಂದು ದಿನ ನನ್ ಜೊತೇಲಿದ್ರೆ ಒಳ್ಳೆ ಮಾಲ್ ಸಿಗ್ತಿತ್ತು ನಿಂಗೆ. ಅದಾದ್ಮೇಲೆ ನೀನು ಯಾವತ್ತೂ ನನ್ ಜೊತೆ ಇರ್ತಿದ್ದೆ, ಮೈಸೂರ್ ಪಾಕ್, ಗುಲ್ಕನ್, ಜಾಮೂನ್, ದಿಲ್ ಪಸಂದ್ ಥರ" ಅಂತ ಗೊಣಗಿದ.

"ಆ ಹುಡ್ಗಿಗೆ ಮಾಲು ಅಂದ್ಯಾ? ಹೊಲಸು ಮನುಷ್ಯ" ಅಂತ ಸ್ವಲ್ಪ ದೊಡ್ಡ ದನಿಯಲ್ಲೇ ಅಂದೆ. ಮನಾಲಿಯ ಕ್ಲಬ್ಬಲ್ಲಿ ಸಿಕ್ಕ ಹುಡುಗಿಯ ವಿಷಯ ಮಾತಾಡ್ತಿದಾನೆ ಇವ ಅಂತಲೇ ಭಾವಿಸಿದ್ದೆ ನಾನು.

"ಊಹ್ಞೂಂ, ಹಳೆ ಮನಾಲಿಯ ಸೊಪ್ಪಿಗೆ ಮಾಲು ಅಂತಿದ್ಯಲ್ಲ, ಆ ಮಾಲಿನ ಸುದ್ದಿ ಮಾತಾಡ್ತಿರೋದು ನಾನು. ಈಗ್ಲೂ ಗಾಂಜಾ ನಶೇಲೇ ಇದೀಯಾ?" ಗೋಪುಟ್ಟ ಈ ಮಾತನ್ನು ಮುಗಿಸಿದ್ದನೋ ಇಲ್ಲವೋ, ಜೊತೆಗಿದ್ದ ಪಿಎಸ್‌ಐ ನನ್ನನ್ನು ಕೋಣೆಯಿಂದ ಹೊರಗೆಳೆದುಕೊಂಡು ಹೋಗಿದ್ದ.

ಹೊರಗೆ ಬಂದೊಡನೆ ಎಸ್‌ಪಿಯವರು ಕುರ್ಚಿ ಕೊಟ್ಟು ಕುಳಿತುಕೊಳ್ಳುವಂತೆ ಸೂಚಿಸಿದ್ರು. ಆದೇಶ ಪಾಲನೆ ಮೊದಲಿಂದಲೂ ನನ್ನ ರೂಢಿಯಲ್ಲಿತ್ತು.

"Are you a junkie?" ನಾಲ್ಕೇ ಶಬ್ದಗಳಲ್ಲಿ ತಮ್ಮ ತಿರಸ್ಕಾರ, ಕೋಪ, ನಿರಾಸೆ ಹಾಗೂ ಕುತೂಹಲವನ್ನು ಹೊರಹಾಕಿದ್ರು.

"Not exactly sir, I used to smoke weed while I was in himachal. He knew that I'm not addicted. I never even smoked cigarettes during my working hours. I will not be high now, at least while I'm with police." ಅಂದು ಒಣಾ ನಗು ಪ್ರದರ್ಶಿಸಿದೆ.

"ನಿಮ್ಮನ್ನ ಬಳಸಿ ಇಂಟರಾಗೇಶನ್ ಮುಂದುವರಿಸೋ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡ್ಬೇಕಿದೆ. ಒಬ್ಬ ಡ್ರಗ್ ಅಡಿಕ್ಟ್ ಬಳಿ ಒಬ್ಬ ಕ್ರಿಮಿನಲ್ ಕನ್ಫೆಸ್ ಮಾಡ್ಕೊಂಡ್ರೆ ಅದನ್ನ ಕೋರ್ಟ್ ಒಪ್ಪತ್ತೋ ಇಲ್ವೋ ಗೊತ್ತಿಲ್ಲ. ಸಿಸ್ಟಮ್‌ನಲ್ಲಿ ಇಲ್ದಿರೋ ಒಬ್ರು ಪ್ರಶ್ನೆ ಕೇಳೋಕೆ ಇಂಟರಾಗೇಶನ್ ರೂಮಿಗೆ ಹೋಗೋದನ್ನೇ ಪಿ.ಪಿ. ವಿರೋಧಿಸಿದ್ರು. ಇನ್ನು ಆ ವ್ಯಕ್ತಿ ನಶೇಡಿ ಅಂತ ಗೊತ್ತಾದ್ರೆ ದೊಡ್ಡ ಇಶ್ಯೂ ಆಗತ್ತೆ" ಅಂದು, "ಈಗ ನೀವು ಹೊಟೆಲ್‌ಗೆ ಹೋಗಿ ರೆಸ್ಟ್ ತಗೊಳ್ಳಿ, ನಾಳೆ ಬೆಳಿಗ್ಗೆ ನಿಮ್ಮನ್ನ ಕಾಂಟ್ಯಾಕ್ಟ್ ಮಾಡಿ ತೀರ್ಮಾನವನ್ನ ತಿಳಿಸ್ತೇವೆ" ಅಂದು ಬೀಳ್ಕೊಟ್ಟರು.

ಇನ್ನೇನು ನಾನು ಕ್ಯಾಬ್ ಹತ್ತಬೇಕು ಅಂದಾಗ ಮೆಸೇಜೊಂದು ಬಂತು, ಎಸ್‌ಪಿ ಸಾಹೇಬರದ್ದು. "ಇಂಟರಾಗೇಶನ್ ರೂಮಿನಲ್ಲಿ ನಡೆದ ಮಾತುಕತೆಯನ್ನ ಅಲ್ಲಿಗೇ ಬಿಡಿ. ಅದನ್ನ ನಿಮ್ಮ ಪರ್ಸನಲ್ ಸ್ಪೇಸಿಗೆ ಕ್ಯಾರಿ ಮಾಡ್ಬೇಡಿ" ಅಂತಿತ್ತು. ಗೋಪುಟ್ಟನೊಂದಿಗೆ ನಡೆದ ಸಂಭಾಷಣೆಯ ಬಗ್ಗೆ ಹೇಳಿದ್ರೋ ಅಥ್ವಾ ತಮ್ಮ ಜೊತೆ ನಡೆದ ಮಾತುಕತೆಯ ಬಗ್ಗೆ ಹೇಳಿದ್ರೋ ಅನ್ನೋದು ತಿಳಿಯದಿದ್ರೂ, "OK sir" ಎಂಬ ರಿಪ್ಲೈ ಕಳಿಸಿದ್ದೆ.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ