ಆಗಸದ ತೂತು | ಸಂಚಿಕೆ ೧- ಕುಂಡೆಗೇಕೆ ಕಾಲಿದೆ?

 ಓದುವ ಮುನ್ನ, ಗಮನಕ್ಕೆ:

ಇಲ್ಲಿ ಹೇಳಲ್ಪಡುವ ಕತೆ, ಪಾತ್ರ, ಘಟನೆ, ಸನ್ನಿವೇಶ, ಹೆಸರು ಎಲ್ಲವೂ ಕಾಲ್ಪನಿಕ ಮಾತ್ರ. ಕತೆಯನ್ನು ಹೇಳುತ್ತಿರುವ ವ್ಯಕ್ತಿಯ ಭಾಷೆ ಯಾರ ಮೇಲೂ ಪ್ರಭಾವ ಬೀರಲು, ಸಾಮಾಜಿಕ ಶಾಂತಿ ಕದಡಲು ಅಥವಾ ಸಮಾಜ ವಿರೋಧಿ ಮನಸ್ಥಿತಿಯನ್ನು ಹಬ್ಬಿಸುವ ಉದ್ದೇಶ ಹೊಂದಿಲ್ಲ. ನೀವು ಮೃದುಭಾಷಿ, ಮೆದು ಮನಸ್ಸಿನವರಾಗಿದ್ದರೆ ಇದನ್ನು ಓದದೇ ಮಾನಸಿಕ ಶಾಂತಿಯನ್ನು ಕಾಪಾಡಿಕೊಂಡು ಸುಸಂಸ್ಕೃತ ನಾಗರಿಕರಂತೆ ಬಾಳ್ವೆ ನಡೆಸಬಹುದು. ಇದನ್ನು ಓದುವ ನಿರ್ಣಯ ಸಂಪೂರ್ಣವಾಗಿ ನಿಮ್ಮದು.
______________________________________________________________

ಅಸಲಿ ಕತೆ ಶುರುವಾಗಿದ್ದು ಈಗೆರಡು ವರ್ಷಗಳ ಹಿಂದೆ. ಪ್ರತಿ ಮಳೆಗಾಲವನ್ನೂ ಆ ಊರ ಹೊಳೆ ಇಳಿವವರೆಗೆ ಬೆಟ್ಟದ ತಲೆಮೇಲೆ ಬಿಡಾರ (ಗುಡಿಸಲು) ಹೂಡಿ ಕಳೆಯುತ್ತಿದ್ದ ಮಂದಿಗೆ ಜೂನ್ ಮುಗಿಯುತ್ತ ಬಂದರೂ ನೆಗ್ಗಸು (ಪ್ರವಾಹ) ಹೋಗುವಷ್ಟು ದೊಡ್ಡ ಮಳೆಯೊಂದೂ ಬರದಿರುವುದು 'ಸುಡಗಾಡು ಗ್ಲೋಬಲ್ ವಾರ್ಮಿಂಗೇ ಕಾರಣ' ಅಂತನಿಸುವಂತಾಗಿತ್ತು. ಮೇ ಅಂತ್ಯದೊಳಗೇ ಬಿಡಾರ ಕಟ್ಟಿ, ಜಡಿತಟ್ಟಿ (ಗೋಡೆಗೆ ಮಳೆಹನಿ ತಾಗದಂತೆ ಅಡಿಕೆ ಸೋಗೆ/ತೆಂಗಿನ ಹೆಡೆಯನ್ನು ಕಟ್ಟುವ ಪದ್ಧತಿ ಮಲೆನಾಡಲ್ಲಿ ಇತ್ತು; ಈಗ ಅಪರೂಪ. ಅದಕ್ಕೆ ಶಿರಸಿ ಭಾಗದಲ್ಲಿ ಜಡಿತಟ್ಟಿ ಎಂಬ ಹೆಸರಿತ್ತು) ನಿಲ್ಲಿಸಿ, ಕಟ್ಟಿಗೆ ಸರಿದಿಟ್ಟುಕೊಂಡಿದ್ದು ಪುಕ್ಳೆರಿ ದಂಡ ಎಂದು ಗೊಣಗಿಕೊಳ್ಳುತ್ತ ಗೋಪುಟ್ಟ ತನ್ನ ದುಪ್ಪಟಿ ಹೊದ್ದು ಮಲಗಿದ ತಾಸೊಪ್ಪತ್ತಿನೊಳಗೆ ಅದೆಂತದೋ 'ಜರಜರ' ಸದ್ದಾಯಿತು. ಅದರ ಹಿಂದೇ ಧಡಾರ್-ಭಡಾರ್ ಸೌಂಡು. ಮೂರು ವರ್ಷದ ಹಿಂದೆ ಪ್ರಧಾನಮಂತ್ರಿ ಆವಾಸ ಯೋಜನೆಯ ಅರೆಬರೆ ಅನುದಾನದಲ್ಲಿ ಕಟ್ಟಿದ್ದ ಹಿತ್ಲಾಕಡೆ ಓರಿಯ ಕೆಂಪ್ಗಲ್ಲು-ಸಿಮೆಂಟ್ ಪ್ಯಾಚಿನ ಗೋಡೆ ಪೂಟುಗಟ್ಟಲೆ ಮುಂದೆ ಬಂತೇನೋ ಎಂಬಂತೆ ಮಾಡು ವಾರೆಯಾಯಿತು. ಅರವತ್ತು ಕ್ಯಾಂಡಲಿನ ಬಲ್ಬು ಈಗಷ್ಟೇ ತನ್ನ ಹಣೆಗೆ ಸಮಾಂತರವಾಗಿ ಇತ್ತು, ಈಗಿಲ್ಲ ಎಂಬ ಅರಿವು ಬಂದೊಡನೆ ಧಡಕ್ಕನೆ ಎದ್ದ ಗೋಪುಟ್ಟ ಕುಂಡೆಗೆ ಕಾಲು ಕೊಟ್ಟು ಕಿತ್ರಾಬಿದ್ದು ಹೊರಗೋಡಿದ‌. ಬದಿಮನೆಯವರೆಲ್ಲ ಹೊಳೆ ಬ್ಯಾಲೆಗಿಂತ ಮೇಲೇ ಮನೆ ಕಟ್ಟಿಕೊಂಡಿದ್ದರು, ಈಗಿಲ್ಲ ಎಂಬ ಪ್ರಜ್ಞೆ ಹುಟ್ಟುವಷ್ಟು ಬೆಳಕಿಲ್ಲದೇ; ಮೊಬೈಲು ಟಾರ್ಚಿನ ಆಸರೆಯಲ್ಲಿ, ಮಾರಿಗೊಂದರಂತೆ ಬೀಳುತ್ತಿದ್ದ ಹನಿಗಳ ನಿರ್ಲಕ್ಷ್ಯಿಸಿ ಯಾವತ್ತೂ ಗಂಜಿಕೇಂದ್ರವಾಗುತ್ತಿದ್ದ ಶಾಲೆಯತ್ತ ಜೋರು ಹೆಜ್ಜೆಯಿಟ್ಟು ಸಾಗಿದ. ದಾರಿ ಪೂರ ಗೊಚ್ಚು ಹಾಗೂ ಯಾರೋ ರಾಶಿ ರಾಶಿ ಚಾಚಿ ಮಾಡಿದಂತೆ ಅರ್ಲು ತುಂಬಿದ್ದು ಗಮನಕ್ಕೆ ಬಂದಿದ್ದು ಮನೆಯಿಂದ ಹೊರಟ ಎರಡೂವರೆ ನಿಮಿಷಗಳ ನಂತರವಂತೆ! ಶಾಲೆಮನೆ ಪೂರ್ತಿ ಮಣ್ಣಡಿಗಾಗಿದ್ದು ತಿಳಿದಿದ್ದು ಅದಕ್ಕಾಗಿ ಹುಡುಕಾಡಿದ ಅರ್ಧ ಗಂಟೆ ನಂತರವಂತೆ. ಇಡೀ ಊರಿಗೆ ಉಳಿದಿದ್ದು ಗೋಪುಟ್ಟನೊಬ್ಬನೇ ಅಂತ ತಿಳಿದಿದ್ದು ಮಾರನೇದಿನ ಹುಂಡುಕೋಳಿಗಳು ಕೂಗಿ ಬೆಳಗು ಮಾಡಿದಾಗಲೇ!
ಹಿಂಗೆ ಊರಿಗೊಬ್ಬನೇ ಗೋಪುಟ್ಟನಾದ ನಂತರ ಜೀವನದ ಮೇಲೆ ಮೊದಲಿನಷ್ಟು ನಿರೀಕ್ಷೆ, ಆಸೆಗಳಿಲ್ಲದೆ ದ್ವೀಪದಂತಾಗಿದ್ದ ಊರಿನಲ್ಲಿ ಉಳಿದ ಗೋಪುಟ್ಟ ಎಲ್ಲವನ್ನೂ ಕಳೆದುಕೊಂಡಿದ್ದು ಅದೇ ಮೊದಲಲ್ಲ. ಕೆಲ ವರ್ಷಗಳ ಹಿಂದೆ ಬಂದ ಪ್ರವಾಹದಲ್ಲಿ ಕೊಟ್ಟಿಗೆ, ದನ-ಕರು ಹಾಗೂ ತಂದೆ-ತಾಯಿಯರನ್ನು ಹೊಳೆ ಸೆಳೆದೊಯ್ದಿತ್ತು. ಶವವೂ ಸಿಗದೆ ಎಲ್ಲರೂ ಸತ್ತರೆಂದು ಭಾವಿಸಿ ಕಾಲ್ಪನಿಕ ಸಂಸ್ಕಾರ, ಕ್ರಿಯೆಗಳನ್ನೆಲ್ಲ ಮಾಡಿಮುಗಿಸಿದ್ದ. ಪ್ರವಾಹಪೀಡಿತ ಊರಲ್ಲುಳಿದ ಗೋಪುಟ್ಟನಿಗೆ ಮದುವೆ ಮಾಡಿಸಬೇಕೆಂದು ಘಟ್ಟದ ಕೆಳಗಿನ ಸೋದರಮಾವಂದಿರು ಎಷ್ಟೇ ಪ್ರಯತ್ನಿಸಿದರೂ ಯಶ ಸಿಗಲಿಲ್ಲ. ಪ್ರಾಯ ಇನ್ನೂ ಇರುವುದರಿಂದ ಪ್ರಯತ್ನವೇನೂ ನಿಂತಿಲ್ಲ.
ಆವತ್ತು ರಾತ್ರಿ ಗೋಪುಟ್ಟ ಮನೆಯಿಂದ ಓಡಿದ ಕ್ಷಣೊಪ್ಪತ್ತಿನಲ್ಲಿ ಆವಾಸ ಯೋಜನೆಯ ಮನೆ ಧರಾಶಾಯಿಯಾಗಿತ್ತು. ತುರ್ತದ ವಾಸ್ತವ್ಯಕ್ಕೆಂದು ಅಜ್ಜನಮನೆ ಸೇರಿದ‌. ಬಡಪಾಯಿ ಜೀವದ ಜವಾಬ್ದಾರಿ ಮಾವಂದಿರದ್ದು. ಗದ್ದೆಯಲ್ಲಿ ಬೆಳೆದ ಶೇಂಗಾ, ಉಳ್ಳಾಗಡ್ಡೆ, ಭತ್ತದ ಉತ್ಪನ್ನ ಸಾಕಂಬಷ್ಟು ಇದ್ದಿದ್ದರಿಂದ ಗೋಪುಟ್ಟ ಅವರಿಗೆ ಹೊರೆಯೇನೂ ಆಗಿರಲಿಲ್ಲ‌. ಆದರೂ ಅವನ ಅಪ್ಪಟ ಸಾಚಾತನದೊಟ್ಟಿಗಿನ ಕೀಟಲೆ ಆತನನ್ನು ಮತ್ತೆ ಸ್ಥಳಾಂತರಿಸಿದ ಕತೆ ಮುಂದೊಮ್ಮೆ ಹೇಳುವೆ. ಈಗ ಇಷ್ಟು ಹರಟೆ ಸಾಕು.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ