ಆಗಸದ ತೂತು | ಸಂಚಿಕೆ ೧೧ - ಪುಟ್ಟಿಯಲ್ಲ, ಮೈಸೂರ್‌ಪಾಕ್

 "She was jealous. ಮುಖ ನೋಡಿದ್ರೇ ಗೊತ್ತಾಗ್ತಿತ್ತು. ಆದ್ರೆ ಅವ್ಳನ್ನ ಇಗ್ನೋರ್ ಮಾಡಿದ್ರೆ ಉಳ್ದೋರನ್ನ ಕಂಟ್ರೋಲ್ ಮಾಡೋದು ನನ್ನೊಬ್ನಿಂದ ಆಗೋದಲ್ವಾಗಿತ್ತು. ನಾನು ದೇವರ ಕೋಣೆ ಆಗಿದ್ರೆ ಅವ್ಳು ಆ ಕೋಣೆ ಬೀಳ್ದಿದ್ದಂಗೆ ನೋಡ್ಕೊಳ್ಳೋ ಕಂಬ ಆಗಿದ್ಳು. ನಾನು ಹೊಸ ಹುಡ್ಗೀನ ಪ್ರೀತಿಸ್ತಿದ್ರೂ ಮಲ್ಲಿಕಾಳನ್ನ ಕಡೆಗಣ್ಸಿ ಹೊಸ ಹುಡ್ಗೀ‌ನ ಪಟ್ಟದ ರಾಣಿ ಅಂತೇನೂ ಘೋಷಣೆ ಮಾಡಿರ್ಲಿಲ್ಲ. ಮೈಸೂರ್ ಪಾಕೇ ನನ್ನ ಸೆಕೆಂಡ್ ಇನ್ ಕಮಾಂಡ್ ಆಗಿದ್ಳು" ಹೊಸ ಲವ್ ಟ್ರೈಆ್ಯಂಗಲ್ ಬಗ್ಗೆ ಗೋಪುಟ್ಟ ತನ್ನ ವಿಶ್ಲೇಷಣೆ ಕೊಡ್ತಿದ್ದ.


ಅವನನ್ನ ಮಧ್ಯದಲ್ಲೇ ತಡೆದ ನಾನು, "ಮೊದ್ಲು ಆ ಹೊಸ ಹುಡ್ಗಿ ಹೆಸ್ರೇನು ಅಂತೇಳು ಮಾರಾಯ, ಅವ್ಳ ಕತೆ ಏನು?" ಅಂತ ಕೇಳ್ದೆ.

"ಅವ್ಳೆಸ್ರು ಚಂಪಾ ಅಂತ. ಫ್ರಾನ್ಸ್ ಮೂಲದ ಅವ್ಳಪ್ಪ ಹಿಪ್ಪಿಗಳ ಕಾಲ್ದಲ್ಲಿ ಭಾರತಕ್ಕೆ ಬಂದು ಇಲ್ಲೇ ಉಳ್ಕೊಂಡಿದ್ದ. ಅವ್ನ ಹೆಂಡ್ತಿ ಅಸ್ಸಾಮಿನಿವ್ಳಂತೆ. ಇಬ್ರೂ ಗೋಕರ್ಣದಲ್ಲಿ ಭೆಟ್ಟಿಯಾಗಿ ಅಲ್ಲೇ ಒಟ್ಟಿಗೇ ಇದ್ರಂತೆ. ಇವ ತಂದಿದ್ದ ಹಣ ಖಾಲಿಯಾದಾಗ ಗೋವಾದೊಳಕ್ಕೆ ಸೇರಿ ಎಕ್ಸ್ಟಸಿ ತಯಾರು ಮಾಡೋಕೆ ಶುರು ಮಾಡಿದ್ರು. ನಿಧಾನಕ್ಕೆ ಒಂದು ಗ್ಯಾಂಗ್ ಬಿಲ್ಡ್ ಮಾಡೋ ಹೊತ್ತಿಗೆ ಇವ್ರ ಅಡ್ಡದ ಮೇಲೆ ಪೊಲೀಸ್ ರೇಡ್ ಆಗಿ ಅವ್ಳಪ್ಪ ಅಂದರ್ ಆದ. ಚಂಪಾಳ ಅಮ್ಮ ಇದ್ದ ಹಣ, ಅವ್ನ ಪಾಸ್ಪೋರ್ಟು ಎಲ್ಲಾ ತಗೊಂಡು ನಾಪತ್ತೆಯಾದ್ಳು. ಆವಾಗ ಕಾಣೆಯಾದೋಳು ಸಿಕ್ಕಿಲ್ಲ. ಒಂದ್ ವರ್ಷದ್ ನಂತ್ರ ಹೊರ್ಗ್ ಬಂದ ಫ್ರಾನ್ಸಿಸ್ ಚಂಪಾ ಮತ್ತೆ ಅವ್ಳಣ್ಣನ ಜೊತೆ ಓಲ್ಡ್ ಮನಾಲಿಗೆ ಶಿಫ್ಟ್ ಆಗಿದ್ದ. ಇವ್ಳು ಓದಿದ್ದೆಲ್ಲ ಶಿಮ್ಲಾದ ರೆಸಿಡೆನ್ಶಿಯಲ್ ಸ್ಕೂಲಲ್ಲಿ. ಟ್ವೆಲ್ಥ್ ಮುಗ್ಸಿ ಊರಿಗೆ ಬಂದೋಳು ವಾಪಸ್ ಹೋಗ್ಲಿಲ್ಲ. ಫ್ರಾನ್ಸಿಸ್ ಕೂಡ ಶಿಕ್ಷಣಕ್ಕಿಂತ ಜೀವನಾನುಭವ ಮುಖ್ಯ ಅಂತ ಒತ್ತಾಯ ಮಾಡ್ಲಿಲ್ಲ. ನಿಧಾನಕ್ಕೆ ಫ್ರಾನ್ಸಿಸ್‌ನ ಎಕ್ಸ್ಟಸಿ ಚೈನಲ್ಲಿ ಕೊಂಡಿಯಾದ್ಳು. ಬಿಜ್ನೆಸ್ಸನ್ನ ಕನ್ವೆನ್ಶನಲ್ ಸ್ಟೈಲಿಂದ ಮಾಡರ್ನ್ ಸ್ಟೈಲಿಗೆ ಕನ್ವರ್ಟ್ ಮಾಡ್ಬೇಕು ಅಂದ್ಕೊಂಡಾಗ ರಿಸ್ಕ್ ಬೇಡ ಅಂತ ಅವ್ಳಪ್ಪ, ಅಣ್ಣ ಒಪ್ಲಿಲ್ಲ. ಒಂದಿನ ನಾವೆಲ್ಲ ಸೇರಿ ರಾಬರಿ ಮಾಡಿದ್ವಿ, ಮನಾಲಿಯಿಂದ ಪರಾರಿಯಾದ್ವಿ." ಅಂದ ಗೋಪುಟ್ಟ.
ಗೋಪುಟ್ಟನ ಕತೆಗೆ ಚಂಪಾಳ ಕತೆ ಮ್ಯಾಚ್ ಆಗ್ತಿತ್ತು. ಚಂಪಾ ಆಗಿದ್ದೋಳು ಮಲ್ಲಿಕಾ ಆಗಿದ್ಹೇಗೆ? ನಾನೀಗ ಇಂಟರಾಗೇಶನ್ನಿಗಿಂತ ಗೋಪುಟ್ಟನ ಗ್ಯಾಂಗಿನ ಕ್ಯಾರೆಕ್ಟರುಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದೆ. "ಮುಂದೆ? ಮಲ್ಲಿಕಾ ಓವರ್‌ಡೋಸ್ ಆಗಿ ಸತ್ತಿದ್ದೆಲ್ಲಿ? ಅವ್ಳ ಬಾಡಿ ಏನಾಯ್ತು? ಯಾಕೆ ಎಲ್ಲೂ ರಿಪೋರ್ಟ್ ಆಗಿಲ್ಲ?" ನನ್ನ ಪ್ರಶ್ನೆ ಮತ್ತೂ ಬೆಳೆದಿತ್ತು.
ಗೋಪುಟ್ಟ ಆವತ್ತು ಯಾವುದೇ ನಕರಾ ಮಾಡದೆ ಉತ್ತರಿಸುತ್ತಿದ್ದುದು ಮತ್ತೂ ವಿಶೇಷವಾಗಿತ್ತು. "ನಾವು ರಾಬರಿ ಮಾಡಿ ಮನಾಲಿಯಿಂದ ದೆಹಲಿಯತ್ತ ಹೊರ್ಟಿದ್ವಿ. ಅದು ನನ್ನ ಉದ್ದೇಶ ಆಗಿತ್ತು. ಮಲ್ಲಿಕಾ ಮಾತ್ರ ಸೌಥ್ ಕಡೆ ಹೋಗ್ಬೇಕು ಅಂತಿದ್ಳು. ಅವ್ಳ ತಲೇಲಿ ದೆಹಲಿಯತ್ತ ಹೋಗೋ ಪ್ಲ್ಯಾನ್ ನಾನು ಮತ್ತೆ ಚಂಪಾ ಸೇರಿ ನಿರ್ಣಯಿಸಿದ್ದು ಅನ್ನೋ ಯೋಚನೆ ಮೂಡಿತ್ತೇನೋ. ಯಾವುದರಿಂದ ರಕ್ಷಿಸ್ತೀನಿ ಅಂತ ನನ್ನ ಜೊತೆಗಿದ್ದೋರಿಗೆ ಭರವಸೆ ಕೊಟ್ಟಿದ್ನೋ ಅದರ ಕಡೆಗೇ ಹೋಗೋದು ನನಗಿಷ್ಟವಿಲ್ವಾಗಿತ್ತು. ದಕ್ಷಿಣ ಭಾರತ ಇನ್ನೇನು ಐದಾರು ತಿಂಗ್ಳಲ್ಲಿ ನಾಶವಾಗ್ತಿತ್ತು. ಹದಿನಾರು ಮಂದಿ, ನಾಲ್ಕು ವಾಹನ, ಮೂರು ತಿಂಗಳು ಸಾಕಾಗ್ವಷ್ಟು ರೇಶನ್ ಇವನ್ನೆಲ್ಲ ತಗೊಂಡು ದಕ್ಷಿಣಕ್ಕೆ ಹೋಗಿ; ಅಲ್ಲಿ ಪ್ರಳಯ ಶುರ್ವಾದ್ಮೇಲೆ ಮತ್ತೆ ಉತ್ತರಕ್ಕೆ ಬರೋದು ರಿಸ್ಕಿ ಅನಿಸಿತ್ತು ನಂಗೆ. ಮಲ್ಲಿಕಾಳ ಆಕ್ಷೇಪಕ್ಕೆ ಬೆಲೆ ಕೊಡದೇ ದೆಹಲಿಯತ್ತ ಹೊರಟಿದ್ವಿ. ಮನಾಲಿಯಿಂದ ದೆಹಲಿಗೆ ಹೋಗೋ ರಸ್ತೆ ಅರ್ಧ ಕ್ರಮಿಸಿದ್ಮೇಲೆ ಸೆತ್ಲೆಜ್ ನದಿಗೆ ಕಟ್ಟಿರೋ ಸೇತುವೆ ಸಿಗತ್ತೆ. ಅಲ್ಲೇ ಅಕ್ಕಪಕ್ಕದಲ್ಲಿ ದೊಡ್ಡ ದೊಡ್ಡ ಸಿಮೆಂಟ್ ಕಾರ್ಖಾನೆಗಳಿವೆ. ಅಲ್ಲೆಲ್ಲೂ ಹತ್ತಿರ ಜನವಸತಿ ಪ್ರದೇಶ ಇಲ್ದಿರೋದ್ರಿಂದ ಮೊದಲ ಕ್ಯಾಂಪನ್ನ ಸೆತ್ಲೆಜ್ ನದಿಯ ನಿರ್ಜನ ದಂಡೆಯ ಮೇಲೆ ಹಾಕೋದು ಅಂತ ತೀರ್ಮಾನಿಸಿದ್ವಿ. ಚಂಪಾಳಿಗೆ ಪುಟ್ಟಿ ಅಂತ ಕರೀತಿದ್ದೆ ಆಗ. ನಾನು, ಪುಟ್ಟಿ, ದಿಲ್‌ಪಸಂದ್ ಬಂಡೆಗಳ ಮೇಲೆ ಕುಂತು ನದಿಯಾಕೆ ಪಶ್ಚಿಮದ ಕಡೆ ಹರೀತಿದೆ ಅಂತ ಚರ್ಚಿಸ್ತಿದ್ವಿ. ಇವೆಲ್ಲಾ ನದಿಗಳು ಬದುಕಿ, ದಕ್ಷಿಣದ ನದಿಗಳೆಲ್ಲಾ ಸತ್ತಾಗ ಇವುಗಳ ಅವಲಂಬನೆ ಎಷ್ಟಾಗ್ಬೋದು ಅನ್ನೋ ಲೆಕ್ಕಾಚಾರದಲ್ಲಿದ್ವಿ. ಆಗ್ಲೇ ಮೈಸೂರ್ ಪಾಕು ಬಂಡೆಗಳನ್ನೇರಿ ನಮ್ಮತ್ತ ಬಂದ್ಳು. ಕಯ್ಯಲ್ಲಿ ವಾಡ್ಕಾ ಬಾಟಲಿಯಿತ್ತು, ಆಗಲೇ ಅರ್ಧ ಖಾಲಿಯಾಗಿತ್ತದು. ಬಂದೋಳೇ ಚೆರ್ರಿ ಎಲ್ಲಿದೆ ಅಂತ ಕೇಳಿದ್ಳು. ಗುಲಾಬಿ ಬಣ್ಣದ ಎಕ್ಸ್ಟಸಿ ಮಾತ್ರೆಗಳಿಗೆ ನಾವು ಚೆರ್ರಿ ಅಂತ ಕರೀತಿದ್ವಿ. ಆಲ್ರೆಡಿ ನೀನು ಹೈ ಆಗಿದೀಯಾ, ಮತ್ಯಾಕೆ ಚೆರ್ರಿ ಅಂತ ಕೇಳ್ದಾಗ ಸಾಯೋಕೆ ಬೇಕು ನಿಂಗ್ಯಾಕೆ? ಅಂತ ರಾಂಗ್ ಆಗಿದ್ಳು. ಮಳ್ ಹಲ್ಬ್‌ಬೇಡ ಅಂದಾಗ, ನೀನು ಮತ್ತೆ ನಿನ್ ಪುಟ್ಟಿ ಚಕ್ಕಂದ ಆಡ್ತಿರಿ, ನಾವೆಲ್ಲಾ ಖುಷ್ಯಾಗಿಲ್ದಿದ್ರೂ ಪರ್ವಾಗಿಲ್ಲ ಅಂತ ಆರೋಪಿಸಿದ್ಳು. ನಂಗೆ ಕೋಪ ಬಂದು ಹೊಡ್ಯೋಕೋದಾಗ ಚಂಪಾಳೇ ತಡ್ದು ಕಪ್ಪು ಥಾರ್ ಗಾಡಿಯ ಡ್ಯಾಶ್‌ಬೋರ್ಡಲ್ಲಿ ಚೆರ್ರಿ ಇದೆ ಅಂದ್ಳು. ಮೈಸೂರ್‌ಪಾಕ್ ನಗ್ತಾ ಹೋದ್ಳು. ಅದಾಗಿ ಅರ್ಧ ಗಂಟೆ ನಂತ್ರ ನಾವು ಬಂಡೆಯಿಳ್ದು ಕ್ಯಾಂಪಿಗೆ ಹೋದ್ವಿ. ಇನ್ನೇನ್ ನಿದ್ರೆ ಮಾಡ್ಬೇಕು ಅನ್ನೋ ಹೊತ್ತಿಗೆ ಗುಲ್ಕನ್ ಕೂಗಿದ್ದ. ಮೈಸೂರ್‌ಪಾಕ್ ಕಾಲ್ ಕೆಜಿ ಚೆರ್ರಿ ತಿಂದು ಮಲ್ಗಿದ್ಳು. ಖಬರ್ ಇರ್ಲಿಲ್ಲ. ಮತ್ತೆ ಎದ್ಕೊಳ್ಲಿಲ್ಲ. ಅವ್ಳನ್ನ ಎಲ್ರೂ ಸೇರಿ ದಫನ್ ಮಾಡಿದ್ವಿ. She was more than family for me. ಅವ್ಳನ್ನ ಕಳ್ಕೊಂಡು ನಾವು ಮತ್ತೆ ಅಲ್ಲಿಂದ ಮೂವ್ ಆಗ್ತೀವಿ ಅನ್ನೋ ನಂಬಿಕೇನೇ ಹೊರ್ಟೋಗಿತ್ತು. ನಾಲ್ಕ್ ದಿನ ಅಲ್ಲೇ ಇದ್ವಿ. Everyone was devastated. ಅಂತ ಹೊತ್ತಲ್ಲಿ ಪುಟ್ಟಿ ಬಂದು ಸಮಾಧಾನ ಮಾಡಿದ್ಳು. ಮೈಸೂರ್‌ಪಾಕಿಗೆ ಗೌರವ ಸಲ್ಲಿಸೋಕೆ ನಾವು ದಕ್ಷಿಣದ್ ಕಡೆ ಹೋಗೋಣ ಅಂದ್ಳು. ನಂಗೆ ಪುಟ್ಟಿಯಲ್ಲಿ ಮೈಸೂರ್‌ಪಾಕ್ ಕಾಣ್ತಿದ್ಳು. ಮೈಸೂರ್‌ಪಾಕ್ ಅಂತ ನಾಮಕರಣ ಮಾಡ್ದೆ. ಅವ್ಳ ವೋಟರ್ ಐಡಿ ಟ್ಯಾಂಪರ್ ಮಾಡಿ ಇವ್ಳ ಫೊಟೋ ಹಚ್ದೆ. Thereafter I never missed Mysore pak, until today. ಬಹುಶಃ ಮಲ್ಲಿಕಾ ಇದ್ದಿದ್ರೆ ಇವತ್ತು ನಾವೆಲ್ಲ ಸ್ಟೆಶನಲ್ಲಿ ಇರ್ತಿರ್ಲಿಲ್ಲ." ಅಂತ ಅಳೋಕೆ ಶುರು ಮಾಡಿದ್ದ ಗೋಪುಟ್ಟ.

ಆವತ್ತಿನ‌ ಇಂಟರಾಗೇಶನ್ ಅಲ್ಲಿಗೇ ಮುಗಿಸೋದಕ್ಕೆ ತೀರ್ಮಾನಿಸಿದ್ವಿ. ಎಸ್‌ಪಿಯವ್ರು ಮಾತಾಡೋದಿದೆ ಅಂದಿದ್ದಕ್ಕೆ ಅವ್ರ ಚೇಂಬರಿಗೆ ಹೋದೆ.

"ಹದಿನೈದ್ ಮಂದೀನ ಕಸ್ಟಡಿಗೆ ತಗೊಂಡು ಎರ್ಡ್ ದಿನ ಆಯ್ತು. ಇನ್ನೂ ಮಿಡಿಯಾದವ್ರಿಗೆ ವಿಷ್ಯ ಲೀಕ್ ಆಗ್ದಿರೋದು ನಮ್ ಅದೃಷ್ಟ. ವಿಷ್ಯ ಲೀಕ್ ಆಗಿ ಮಾನವ ಹಕ್ಕು, ಪ್ರೆಸ್‌ನೋರ ಪ್ರೆಶರ್ ಶುರ್ವಾಗೋ ಮುಂಚೆ ನಾಳೆಯಾದ್ರೂ ಇವ್ರನ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಮಾಡ್ಬೇಕು. ನಾಲ್ಕ್ ಮಂದಿ ಕನ್ಫೆಶನ್ ಇದೆ. ಸದ್ಯಕ್ಕಂತೂ ಬೇಲ್ ಸಿಗಲ್ಲ. ಮೀಡಿಯಾ ಟ್ರಯಲ್ ಶುರ್ವಾದ್ರೆ ನಿಮ್ ಮಿಡಿಯಾ ಹೌಸ್ ನಮ್ ಸಪೋರ್ಟಿಗೆ ಇರತ್ತಲ್ವಾ?" ಅಂತ ಕೇಳಿದ್ರು ಎಸ್‌ಪಿಯವ್ರು.
"ಖಂಡಿತ ಇರತ್ತೆ ಸರ್. ಇವ್ರೆಲ್ಲ ಸೇರಿ ಚಿಕ್ ಮಗೂನ ಕೊಂದಾಗ ಯಾವ್ ಮಾನವ ಹಕ್ಕು ಇತ್ತಂತೆ? ನಾವೇನ್ ಅವ್ರನ್ನ ಹೊಡ್ದಿಲ್ಲ, ಹಿಂಸೆ ಕೊಟ್ಟಿಲ್ಲ. ಒಂದ್ ದಿನ ಜಾಸ್ತಿ ಕಸ್ಟಡೀಲಿ ಇಟ್ಕೊಂಡಿದೀವಷ್ಟೇ. ಇನ್ನು ಮಿಡಿಯಾ ಟ್ರಯಲ್ ಶುರ್ವಾದ್ರೆ ಅದ್ನ ನಾವ್ ಹ್ಯಾಂಡಲ್ ಮಾಡ್ತೀವಿ ಬಿಡಿ. ನಮ್ ಪಿಆರ್ ಟೀಮ್ ನಿಮ್ ಜೊತೆ ಇರತ್ತೆ" ಅಂತ ಅಭಯ ಕೊಟ್ಟೆ.

ನಾಳೆ ಬದ್ಲು ಆವತ್ ಸಂಜೇನೇ ಕೋರ್ಟಿಗೆ ಹಾಜರು ಮಾಡೋ ಪ್ಲಾನ್ ನಡ್ದಿದ್ದು ಆಮೇಲಿನ ಬೆಳವಣಿಗೆ. ರಾತ್ರೋರಾತ್ರಿ ಮ್ಯಾಜಿಸ್ಟ್ರೇಟ್ ಮುಂದೆ ಗೋಪುಟ್ಟ ಮತ್ತವನ ಸಹಚರರನ್ನ ಹಾಜರು ಮಾಡಲಾಯ್ತು. ಪೊಲೀಸ್ರು ಹದ್ನಾಲ್ಕ್ ದಿನ ಕಸ್ಟಡಿ ಕೇಳಿದ್ದಕ್ಕೆ ಹನ್ನೊಂದ್ ದಿನ ಕಸ್ಟಡಿ ಸಿಕ್ತು.

ಮಾರ್ನೆದಿನ ಪೇಪರ್‌ಗಳ ಹೆಡ್ಲೈನುಗಳು "ಸೆರೆಸಿಕ್ಕ ಭಟ್ರೇರಿ ಹಂತಕರು" ಅನ್ನೋ ಜಜ್‌ಮೆಂಟ್ ಕೊಟ್ಟಿದ್ವು.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ