ಆಗಸದ ತೂತು | ಸಂಚಿಕೆ ೩- ಬಾರ್ಡರ್‌ಲೈನ್

 ಗೋಪುಟ್ಟ ತಾನು ಅಜ್ಜನಮನೆಯಿಂದ ಗಡಿಪಾರಾಗಲು ಕಾರಣವಾದ ಕತೆ ಹೇಳೋವರೆಗೂ ಆತ ನನ್ನಂತೇ ಒಬ್ಬ ಬಾರ್ಡರ್‌ಲೈನ್ ಸೊಶಿಯೋಪಾಥ್ ಅಥವಾ ಬಾರ್ಡರ್‌ಲೈನ್ ಸೈಕೋಪಾಥ್ ಅಂತಂದುಕೊಂಡಿದ್ದೆ. ಆದ್ರೆ ಈ ಬಡ್ಡಿಮಗ ಪಕ್ಕಾ ಮೆಂಟಲ್ ಕೇಸ್ ಅಂತ ಗೊತ್ತಾಗಿದ್ದು ನಂತರವಷ್ಟೇ.

ಕಾಥಿಕುಕ್ರಿಯಿಂದ ಹೊಂಟ ನಾವು ಮುಂದಿನ ತಂಗುದಾಣವಾಗಿ ಆಯ್ಕೆ ಮಾಡಿಕೊಂಡಿದ್ದು ರಾಯಲ್ ಹೆರಿಟೇಜ್ ಹೊಟೆಲನ್ನು. ಕುಲ್ಲು ಮತ್ತು ಮನಾಲಿಗಳ ಮಧ್ಯೆ ಬಿಯಾಸ್ ನದಿ ತಟದಲ್ಲಿದ್ದ ಹೊಟೆಲ್ ಚಳಿಗಾಲದಲ್ಲಿ ಪೂರ್ತಿ ಹಿಮ ತುಂಬಿ, ರಸ್ತೆ ಸಂಪರ್ಕವನ್ನೂ ಇಟ್ಟುಕೊಳ್ಳದಷ್ಟು ಏಕಾಂತವಾಗುತ್ತದಂತೆ. ಮೊದಲೇ ಬುಕ್ ಮಾಡದಿದ್ದರೆ ರೂಮಲ್ಲಿ ಉಳಿಯೋದಿರಲಿ, ಲಾಬಿಯಲ್ಲೂ ನಿಲ್ಲೋಕೆ ಬಿಡದ ಹೊಟೆಲ್‌ಗೆ ನಾವಿಬ್ಬರೂ ಪ್ರತ್ಯೇಕವಾಗಿ ಮೊದಲೇ ಬುಕ್ ಮಾಡಿಕೊಂಡಿದ್ದು ಕಾಕತಾಳೀಯವಿದ್ದೀತು, ಯೋಚಿಸಿಲ್ಲ. ರಾಯಲ್ ಹೆರಿಟೇಜಿನಿಂದ ಹತ್ತು ಮೈಲಿ ದೂರದಲ್ಲಿ ಮನಾಲಿಯೆಂಬ ಹನಿಮೂನ್ ಸ್ಪಾಟ್ ಇದ್ದಿದ್ದಕ್ಕೂ, ನಮ್ಮ ಪ್ರವಾಸಕ್ಕೂ ಸಂಬಂಧವಿರಲಿಲ್ಲ. ಅಗ್ದಿ ಬೆಶ್ಟ್ ಸೊಪ್ಪು (ನೀವೆಲ್ಲ weed, grass, joint ಅಂತೆಲ್ಲ ಇಂಗ್ಲಿಷ್ ಅರ್ಬನ್ ಸ್ಲ್ಯಾಂಗ್ ಬಳಸಿದರೆ ನಮಗೆಲ್ಲ ಅದು ಸೊಪ್ಪಷ್ಟೇ) ಹಳೆ ಮನಾಲಿಯಲ್ಲಿ ಸಿಗುತ್ತದೆಂಬ ಆಸೆ ನನ್ನದಾಗಿದ್ದರೆ, ಗೋಪುಟ್ಟನಿಗೆ ಸೊಲಾಂಗ್ ವ್ಯಾಲಿಯಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವ ಹುಚ್ಚು ಹುಟ್ಟಿತ್ತು. ಮೊದಲೇ ಯೋಜಿಸಿದ್ದೆಯಾ ಎಂದು ಪ್ರಶ್ನಿಸಿದಾಗ, "ನಿನ್ನೇವರೆಗೂ ಅಲ್ಲಿ ಅಂಥದ್ದೆಲ್ಲಾ ಉಂಟು ಅಂತಾನೂ ಗೊತ್ತಿರ್ಲಿಲ್ಲ" ಅಂದಿದ್ದ ನಿರ್ಲಿಪ್ತವಾಗಿ.
ಆತನೊಂದಿಗೆ ಮಾತಾಡೋದು ಅಂದ್ರೆ ಹೂಂಸಿನೊಂದಿಗೆ ಸರಸವಾಡ್ದಂಗೆ ಅಂತನಿಸೋದು ಒಂದೊಂದ್ಸಲ. ಮತ್ತೊಂದಿಷ್ಟು ಬಾರಿ ಅದ್ಯಾವುದೋ ಫಿಲಾಸಾಫಿಯನ್ನು ಆಗಷ್ಟೇ ತಯಾರಿಸಿ ತಲೆಗೆ ತುರುಕುತ್ತಿದ್ದಾನೇನೋ ಅನಿಸೋದುಂಟು. ಚಿಕ್ಕ ಮಗುವಿಗೆ ಅಶ್ಲೀಲ ಬೈಗುಳ ಹೇಳಿಕೊಟ್ಟಿದ್ದು ತಪ್ಪಲ್ವಾ ಅಂತ ಕೇಳಿದ್ದೆ. ಅದಕ್ಕವನ ಪ್ರತಿಕ್ರಿಯೆ ಮಜಾ ಇತ್ತು ನೋಡಿ, "ಎಲ್ಲಾ ಕ್ರಿಯೆಯ ಪರಿಣಾಮ ಬರೀ ಎರಡು ಸಾಧ್ಯತೆಗಳದ್ದು. ಒಂದು ಒಳ್ಳೇದು; ಮತ್ತೊಂದು ಕೆಟ್ಟದ್ದು. ಹಿಂಗೇ ಸಮಾಜ ಹಾಳಾಗೋದು. ನಾನದ್ಕೆ ಫಕ್ ಯಾ ಅಂತ ಹೇಳಿಕೊಟ್ಟೆ. ಅದೊಂದು ಅರ್ಬನ್ ಸ್ಲ್ಯಾಂಗ್. ಬೇರೆ ದೇಶಗಳಲ್ಲಿ ಅದಕ್ಕೆ ಸೆಕ್ಶುವಲೈಸ್ಡ್ ಅರ್ಥವನ್ನು ಬಿಟ್ಟು ಬೇರೆ ಅರ್ಥಗಳೂ ಉಂಟು. ನಮ್ಮಲ್ಲೇ ಬಯಲುಸೀಮೆಗೆ ಹೋಗು, ಹಟ್ರ್ ನಿಂಗ ಅನ್ನೋದು ತೀರಾ ಸಾಮಾನ್ಯ. ಅಲ್ಲಿ ಹಟ್ರ್ ನಿಂಗ ಅಂದ್ರೆ ರೇಪ್ ಥ್ರೆಟ್ ಅಲ್ಲ. ನಮ್ಮಲ್ಲಿ ಬಯ್ಯೋದು ಹೆಂಗೆ ಗೊತ್ತಾ? ಸೂ..ಮಗನೆ, ಬೋ...ಮಗನೆ, ರಂ*, ಲೌ*, ನಿನ್ನಮ್ಮನ್ (ಸಫಿಕ್ಸು ಬೇಡ), ನಿನ್ ಅಕ್ಕನ್ (ಸಫಿಕ್ಸು ಬೇಡ) ಹಿಂಗಿದ್ದೊಂದಿಷ್ಟು. ಎಲ್ಲಾ ಬೈಗುಳಗಳೂ ಸೆಕ್ಶುವಲ್ ಥ್ರೆಟ್‌ಗಳೇ. ಸೆಕ್ಶುವಲ್ ಸ್ಲರ್ ವರ್ಡ್‌ಗಳನ್ನ ನಾರ್ಮಲೈಸ್ ಮಾಡಿದ್ದೂ ನಮ್ಮ ಸಮಾಜವೇ. ಫಕ್ ಯಾ ಅಂತ ಸ್ಲಾಂಗಲ್ಲಂದ್ರೆ ನಾನು ನಿನ್ ಬಗ್ಗೆ ಯಾವ್ದೇ ಲಕ್ಷ್ಯ ಕೊಡ್ತಿಲ್ಲ ಹೋಗು ಅಂತರ್ಥ ಬರತ್ತೆ. ಆ ಮಗು ದೊಡ್ಡವನಾದ್ರೂ ಯಾವ್ದೇ ಬೈಗುಳಗಳನ್ನ ಕಲಿಯಲ್ಲ ಅನ್ನೋದು ಎಲ್ಲ ಪಾಲಕರ ಮೂಢನಂಬಿಕೆ. ಅದೇ ಮೂಢನಂಬಿಕೇನ ಆ ಮಗು ದೊಡ್ಡೋಳಾಗಿ ಮಕ್ಳಾದಾಗ್ಲೂ ಇಟ್ಕೊಳ್ತಾಳೆ. ಬೈಗುಳಗಳು ಹರ್ಟ್ ಆಗೋದು ನಾವು ರಿಸೀವಿಂಗ್ ಎಂಡಲ್ಲಿ ಇದ್ದಾಗ ಮಾತ್ರ. ನಾವು ಬಯ್ಯೋವಾಗ ನಮ್ಗದು ಖುಷಿ ಕೊಡತ್ತೆ. ನಾವು ಬಯ್ಯೋವಾಗ ಇರೋವಷ್ಟು ನಾರ್ಮಲ್ಲಾಗಿ ಬೈಸ್ಕೊಳ್ವಾಗ್ಲೂ ಇರ್ಬೇಕು ಅಂದ್ರೆ ಸಣ್ಣಸಣ್ದಕ್ಕೂ ಬಯ್ಬೇಕು, ಅದನ್ನ ನಾರ್ಮಲೈಸ್ ಮಾಡ್ಬೇಕು. ಎಲ್ಲಾ ಬೈಗುಳಗಳಿಂದ ನಮ್ ಮಕ್ಳನ್ನ ಕಾಪಾಡ್ತೀವಿ ಅಂತಂದ್ಕೊಳ್ಳೋ ಬದ್ಲು ಎಲ್ಲಾ ಬೈಗುಳಗಳ್ನ ನಮ್ಮ ಮಕ್ಳು ಕಲೀಬೇಕು ಅಂತ ಯಾವಾಗ ಗೊತ್ತಾಗತ್ತೋ ಆವತ್ತೇ ನಮ್ ಸಮಾಜ ಉದ್ಧಾರ ಆಗೋದು" ಅಂತ ನಾನ್‌ಸ್ಟಾಪಾಗಿ ದನ ಉಚ್ಚೆ ಹೊಯ್ದಂಗೆ ಹೇಳಿದ್ದ ಗೋಪುಟ್ಟ.
ನನ್ನ ಇಂಟ್ರಾವರ್ಟ್ ವ್ಯಕ್ತಿತ್ವದ ಅಗ್ದಿ ವಿರುದ್ಧ ವ್ಯಕ್ತಿಯಾಗಿದ್ದ ಗೋಪುಟ್ಟ ಹೋದಲ್ಲೆಲ್ಲಾ ದೋಸ್ತರನ್ನು ಹುಟ್ಟಿಸಿಕೊಳ್ಳುತ್ತಿದ್ದ. ಅಂಥ ದೋಸ್ತರು ಮತ್ತೆ ಸಿಕ್ಕರೆ ಖುಷಿಯಿಂದ, ಡೇವಿಡ್ ಡಛೋನಿ ಸ್ಟೈಲಿನಲ್ಲಿ 'ಮಾದಫಕಾ' ಎಂದು ಅಪ್ಪಿಕೊಳ್ಳುತ್ತಿದ್ದ ಆತನ ನಡವಳಿಕೆ ಆತನ ಫಿಲಾಸಫಿಯನ್ನು ನೆನಪಿಸಿ ನಗು ಹುಟ್ಟಿಸುತ್ತಿತ್ತು. ತೀರಾ ಗುಂಗುರು ಕೂದಲಿನ ತಲೆಬುರ್ಡೆ, ವಿರಳ ಒತ್ತಡದ ಫ್ರೆಂಚ್ ಗಡ್ಡ, ಜೂಟ್ ಜೋಳಿಗೆ, ದೊಡ್ಡ ಗ್ಲಾಸಿನ ಕನ್ನಡಕ, ದೊಗಲೆ ಅಂಗಿ, ಹಿಮಾಚಲದ ಚಳಿಗೋ ಅಥವಾ ತೊಗಲ ರಂಗಿನ ಬಗ್ಗೆ ಕ್ಯಾರೇ ಅನ್ನದ ಅವನ ಸ್ವಭಾವಕ್ಕೋ ಸುಟ್ಟಂತಾದ ಗೋಧಿ ಬಣ್ಣದ ಅವನ ಮುಸುಡು ಒಮ್ಮೊಮ್ಮೆ ಚಾರ್ಲ್ ಶೋಭರಾಜನನ್ನೂ, ಚಾರ್ಲ್ಸ್ ಮಾನ್ಸನ್‌ನನ್ನೂ ಹೋಲುತ್ತದೆಂದು ಆತನ ಪರಿಚಯವಾದ ವಾರದ ಮೇಲೆ ಗಮನಿಸಿದ್ದೆ. ಅಷ್ಟರೊಳಗಾಗಿ ಆತ ಅವರಿಬ್ಬರನ್ನೂ ಮೀರಿಸುವ ಸೈಕೋಪಾಥ್ ಎಂಬುದು ಗೊತ್ತಾಗಿತ್ತು‌.
ಹೆಂಗೆ ಅಂತ ಕೇಳಿದ್ರಾ? ಇನ್ನೊಮ್ಮೆ ಹೇಳ್ತೇನೆ ಆಯ್ತಾ?

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ