ಆಗಸದ ತೂತು | ಸಂಚಿಕೆ ೧೨ - ಭಾರತ ಸಂಚಾರ

 ಇಂಟರಾಗೇಶನಲ್ಲಿ ಗೋಪುಟ್ಟನ ಸ್ಟೇಟ್ಮೆಂಟು ಪ್ರಥಮ ಪುರುಷ ದೃಷ್ಟಿಕೋನದಲ್ಲಿರೋದ್ರಿಂದ (ನಾನು ಇಂಗ್ಲಿಷ್ ಪದಗಳ ಬಳಕೆ ಮಾಡೋದಕ್ಕೆ ಆಕ್ಷೇಪ ವ್ಯಕ್ತಪಡಿಸೋರು ಇದೆಂಥದು ಅಂತ ಕೇಳ್ಬಾರ್ದು. ಆದ್ರೂ ಎಲ್ಲರಿಗೂ ಅರ್ಥ ಆಗ್ಲಿ ಅಂತ ಹೇಳ್ತಿದೀನ, first person POV or point of viewನಲ್ಲಿರೋದ್ರಿಂದ ಅಂತ ಓದ್ಕೊಳಿ) ಪೂರ್ತಿ ಕತೆ ಕೂಡ ಕತೆ ಹೇಳೋನ ದೃಷ್ಟಿಕೋನದಲ್ಲಿ ಇರೋದ್ರಿಂದ (which is also in first person POV) ಓದುವಾಗ ಗೊಂದಲ ಉಂಟಾಗ್ಬೋದು. ಹಂಗಾಗಿ ಇಂಟರಾಗೇಶನ್ ಪಾರ್ಟನ್ನು ಗೋಪ್ಪುಟ್ಟನ point of viewದಲ್ಲಿ ಬರೀತಿದೀನಿ. ಇಂಟರಾಗೇಶನ್ ಭಾಗದಲ್ಲಿ 'ನಾನು' ಅಂದ್ರೆ ನರೇಟರ್ ಅಲ್ಲ, ಗೋಪುಟ್ಟ ಎಂದು ಅರ್ಥೈಸಿಕೊಳ್ಳಿ. ಅಲ್ಲೆಲ್ಲೂ ನರೇಟರ್ ಇಣುಕೋದಿಲ್ಲ ಇನ್ನು ಮುಂದೆ. ಇದಕ್ಕೆ narrator shift ಅಂತಾನೂ ಕರೀಬೋದು. ಮನಾಲಿಯಿಂದ ಗೋಪುಟ್ಟನ ಗ್ಯಾಂಗ್ ಹೊರಟ ನಂತರದ ಟೈಮ್‌ಲೈನಿನ ಹಲವಾರು ಘಟನೆಗಳಲ್ಲಿ ಹೇಳದಿದ್ರೆ ಆಗೋದೇ ಇಲ್ಲ ಅನ್ಸಿದ ಘಟನೆಗಳನ್ನಷ್ಟೇ ಗೋಪುಟ್ಟನ ಬಾಯಲ್ಲಿ ಕೇಳಿ.

----------------------------***-------------------------

ಮನಾಲಿಯನ್ನು ತೊರೆದ ಐದನೇ ದಿನ, ಜೂನ್ ೪, ೨೦೨೧

ಸೆತ್ಲೆಜ್ ತೀರದಿಂದ ನಮ್ಮ ಕಾರವಾನ್ ವಾಪಸ್ಸು ಬರದೇ ಚಂಡಿಘಡ, ಕುರುಕ್ಷೇತ್ರ, ಪಾಣಿಪತ್ ಮೂಲಕ ಸಾಗಿ ಎನ್.ಎಚ್. ೪೪ರನ್ನು ಬಳಸಿ ಚೆನ್ನೈ ಕಡೆ ಹೋಗೋಕೆ ಸಿದ್ಧವಾಗಿತ್ತು. ಮಲ್ಲಿಕಾಳನ್ನು (ಮೈಸೂರ್ ಪಾಕ್ ಎಂದೇ ಮತ್ತೆ ಹೇಳಿದ್ರೆ ಹೊಸ ಹುಡುಗಿ ಮತ್ತೆ ಹಳಬಳ ಮಧ್ಯೆ ಗೊಂದಲವಾಗ್ಬೋದೇನೋ) ಕಳ್ಕೊಂಡು ಎಲ್ಲರೂ ನಿಸ್ತೇಜವಾಗಿದ್ವಿ. ಆದ್ರೆ ಇನ್ನೂ ಹಿಮಾಚಲದಲ್ಲೇ ಇದ್ರೆ ಗ್ಯಾಂಗ್‌ವಾರ್ ಆಗೋ ಸಾಧ್ಯತೆಗಳೇ ಜಾಸ್ತಿಯಿದ್ವು. ಅದ್ರಲ್ಲೂ ಚಂಪಾಳ ಯೋಚನಾಶೈಲಿಗೆ ರಾಜಿ ಸಂಧಾನವಂತೂ ಅಸಾಧ್ಯವಾಗಿತ್ತು. ಆದಷ್ಟು ಬೇಗ ಹಿಮಾಚಲವನ್ನು ತೊರೆಯೋ ದೃಷ್ಟಿಯಿಂದ ಚಂಡಿಘಡದತ್ತ ಚಲಿಸೋಕೆ ಶುರುಮಾಡಿದ್ವಿ.


ನಗರ ಪ್ರದೇಶಗಳನ್ನ ಅವಾಯ್ಡ್ ಮಾಡೋ ಉದ್ದೇಶ ನಮ್ದಾಗಿತ್ತು. ಕುರುಕ್ಷೇತ್ರ, ಪಾಣಿಪತ್‌ಗಳನ್ನ ದಾಟಿ ದೆಹಲಿಯ ಒಳ ಹೊಕ್ದೇ ಜೈಪುರ-ಕೋಟಾ-ಇಂದೋರ್ ಮೂಲಕ ಸಾಗಿ ನಾಗ್ಪುರದಲ್ಲಿ ಎನ್‌ಎಚ್ ೪೪ ಸೇರೋ ಹೊಸ ರೂಟ್ ಮ್ಯಾಪ್ ತಗೊಂಡು ಮೈಸೂರ್‌ಪಾಕ್ ಬಂದಿದ್ಳು. ದೆಹಲಿಯ ಪೂರ್ವ ಭಾಗದಲ್ಲಿ ಹೋದ್ರೂ ಒಂದೇ, ಪಶ್ಚಿಮಕ್ಕೆ ಹೋದ್ರೂ ಒಂದೇ ಅಂದ್ಕೊಂಡಿದ್ದ ನಂಗೆ, "ಹೆಚ್ಚಿನ ಮಂದಿ ರಾ.ಹೆ.೪೪ರಲ್ಲಿ ಹೋಗ್ತಾರೆ, ಸೌಥಿಗೆ ಹೋಗ್ತಾ ಮಳೆ ಹೆಚ್ಚಾಗತ್ತೆ, ಜೈಪುರದ ಮೇಲೆ ಹೋದ್ರೆ ಇಂಧೋರ್ ತನ್ಕ ಮಳೆ ಕಮ್ಮಿ ಸಿಗ್ಬೋದು; ಬೇಗ ಹೋಗೋಕಾಗತ್ತೆ" ಅಂತ ಕನ್ವಿನ್ಸ್ ಮಾಡಿದ್ಳು ಮೈಸೂರ್‌ಪಾಕ್. ನಾನದಕ್ಕೆ ಒಪ್ಪಿದೆ.

ಐದನೇ ದಿನ ರಾತ್ರಿ ಹೊತ್ತಿಗೆ ಚಂಬಲ್ ಹ್ಯಾಂಗಿಂಗ್ ಬ್ರಿಜ್ ದಾಟಿದ್ವಿ. ಕೋಟಾ ಬಳಿ ಒಂದು ಸಸ್ತಾ ಮೊಟೆಲ್‌ನಲ್ಲಿ ಹದಿನೈದೂ ಮಂದಿ ಸೇರಿ ಎರಡು ರೂಮ್ ಪಡೆದು ಮಲ್ಗಿದ್ವಿ. ಎಲ್ರಿಗೂ ಸುಸ್ತಾಗಿತ್ತಾದ್ರೂ ಗುಲ್ಕನ್ ಇತ್ತೀಚೆಗೆ ಸೆಕ್ಸ್ ಅಡಿಕ್ಟ್ ಆದಂಗಿದ್ದ. ಚೆರ್ರಿ ತಿಂದು ರಂಪಾಟ ಮಾಡ್ದಾಗ ಕೈಕಾಲು ಕಟ್ಟಿ ಮಲ್ಗಿಸೋ ಪ್ರಸಂಗ ಬಂತು. ಅದ್ಬಿಟ್ರೆ ನಮ್ ಎರ್ಡ್ನೇ ದಿನದ ಪ್ರಯಾಣ ಅಷ್ಟೇನ್ ಕಷ್ಟ ಆಗ್ಲಿಲ್ಲ.

ಮಾರನೇ ದಿನ ಏಳು ಗಂಟೆಗೇ ಎಲ್ಲರನ್ನೂ ಎಬ್ಬಿಸಿಕೊಂಡು ಪ್ರಯಾಣ ಮುಂದ್ವರ್ಸಿದ್ವಿ. ಆವತ್ತು ನಾವು ರಾಜಸ್ಥಾನ ತೊರೆದು ಮಧ್ಯಪ್ರದೇಶವನ್ನ ಪ್ರವೇಶಿಸಬೇಕಿತ್ತು. ಇದುವರೆಗೂ ನಮ್ಮ ಗಾಡಿಯಲ್ಲಿದ್ದ ಎಪ್ಪತ್ತು ಕೆಜಿಯಷ್ಟು ಎಕ್ಸ್ಟಸಿ ಮಾತ್ರೆಯನ್ನ ಯಾವ ಪೊಲೀಸರೂ ತಪಾಸಣೆ ಮಾಡಿ ವಶಪಡಿಸ್ಕೊಳ್ದಿದ್ದು ಸಮಾಧಾನ ತಂದಿದ್ರೂ ಅದನ್ನ ಇನ್ನೂ ಎಷ್ಟ್ ದಿನ ಕಾಪಾಡ್ಕೊಳೋಕಾಗತ್ತೆ ಅನ್ನೋ ಭಯ ಹೆಚ್ಚಾಗ್ತಾ ಇತ್ತು. ಮಧ್ಯಪ್ರದೇಶ ಗಡಿ ಎಂಟರಾಗ್ತಿದ್ದಂಗೇ ಪೊಲೀಸ್ ಚೆಕ್ ಪೋಸ್ಟ್ ಇತ್ತ, ಫಾರೆಸ್ಟ್ ಚೆಕ್‌ಪೋಸ್ಟ್ ಕೂಡ ಇತ್ತು. ಎಲ್ಲ ಸಹಚರರನ್ನೂ ಡೀಸೆಂಟಾಗಿ ಕಾಣೋ ಥರ ರೆಡಿ ಮಾಡೋ ಜವಾಬ್ದಾರಿಯನ್ನ ಮೈಸೂರ್‌ಪಕ್ ಮತ್ತೆ ದಿಲ್‌ಪಸಂದ್ ಚೆನ್ನಾಗೇ ನಿಭಾಯಿಸಿದ್ರು. ದೂದ್‌ಪೇಡಾ ಮತ್ತೆ ಜಲೇಬಿ ಇದ್ದ ಕಪ್ಪು ಥಾರ್‌ನಲ್ಲಿ ಚೆರ್ರಿ ಚೀಲಗಳಿದ್ವು. ಯಾರಿಗೂ ಡೌಟ್ ಬರದಿರ್ಲಿ ಅಂತ ಚೀಲಗಳ ಮೇಲ್ಭಾಗದಲ್ಲಿ ಅಕ್ರೂಟ್ ಚೂರುಗಳನ್ನ ಹಿಮಾಚಲ ದಾಟೋದ್ರೊಳ್ಗೇ ತುಂಬಿಕೊಂಡಿದ್ವು. ಮಧ್ಯಪ್ರದೇಶ ಪೊಲೀಸರು ನಮ್ಮ ಕಾರವಾನಿನ ಮೊದಲ ನಾಲ್ಕು ಗಾಡಿಗಳನ್ನ ನೋಡಿ ನಂಬಿದ್ದರೇನೋ, ಥಾರ್‌ನಲ್ಲಿದ್ದ ಅಕ್ರೂಟ್ ತಿರುಳುಗಳನ್ನ ನೋಡಿ ಒಂದೆರ್ಡು ಕೆ.ಜಿ. ತಗೊಂಡಿದ್ದು ಬಿಟ್ರೆ ಅವುಗಳ ಅಡಿಗೆ ಇದ್ದ ಚೆರ್ರಿ ಮಾತ್ರೆಗಳನ್ನ ನೋಡೋಕೂ ಹೋಗ್ಲಿಲ್ಲ. We were happy to gift them.

ಭೋಪಾಲಿಗೆ ಹೋದರೆ ರಿಸ್ಕು ಎನಿಸಿ ಬ್ಯಾವಾರಾದಲ್ಲಿ ತಿರುಗಿ ಉಜ್ಜಯನಿ, ಇಂದೋರ್ ಮೂಲಕ ಸಾಗೋದಾಗಿ ತಿರ್ಮಾನಿಸಿದ್ವು. ಇಂದೋರ್ ದಾಟಿ ಕಾಥೆಗಾಂವ್ ಮೂಲಕ ಬೇತೂಲ್‌ನಲ್ಲಿ ಹೈವೇಗೆ ಸೇರುವ ಹೊತ್ತಿಗೆ ಸಂಜೆಯಾಗುತ್ತದೆಂಬ ನಂಬಿಕೆ ನನ್ನದಾಗಿತ್ತು. ಆದರೆ ಹರ್ದಾ ಬಳಿ ನರ್ಮದಾ ನದಿಯನ್ನ ನೋಡಿದ್ದೇ ಅದರ ಬ್ಯಾಲೆ ಮೇಲೆ ರಾತ್ರಿ ಕಳೆವ ಉಮೇದಿ ಮಾಡಿದ್ರು ನನ್ನ ಸಹಚರರು. ಕಾಡುಪ್ರಾಣಿಗಳ ಹಾವಳಿ ಜಾಸ್ತಿ ಎಂದರೂ ಕೇಳದಿದ್ದಾಗ ಅಲ್ಲೇ ಟೆಂಟ್ ಹಾಕಬೇಕಾಯ್ತು.


ಮನಾಲಿ ಬಿಟ್ಟ ಆರನೇ ದಿನ, ಜೂನ್ ೫, ೨೦೨೧

ಸೆತ್ಲೆಜ್ ತೀರದಿಂದ ಗುಳೆ ಹೊರಟ ನಮ್ಮ ತಂಡ ಎರಡನೇ ರಾತ್ರಿಯ ಹೊತ್ತಿಗೆ ನರ್ಮದಾ ದಡದಲ್ಲಿತ್ತು. ಅಷ್ಟು ದೂರ, ವಿಶ್ರಾಂತಿಯಿರದೇ ಇಷ್ಟು ಬೇಗ ಪ್ರಯಾಣ ಮಾಡಬಹುದೆಂಬ ಕಲ್ಪನೆ ಇದ್ದಿರಲಿಲ್ಲ. ಆವತ್ತು ರಾತ್ರಿ ಎಲ್ಲರೂ ಚೆರ್ರಿ ತಿಂದು 'ಮಜಾ' ಮಾಡ್ತಿದ್ರೆ ನಂಗೆ ಇನ್ನೊಂದು ಚೂರೇ ಕೆಳಗಿಳಿದ್ರೆ ಗೋದಾವರಿ ನದಿ ಬರುತ್ತದೆಂಬ ಆತಂಕ. ಗೋದಾವರಿಯ ಕೆಳಭಾಗ ಪೂರ್ತಿ ದಕ್ಷಿಣ ಭಾರತ! ಆಗಸದ ತೂತು ಆಪೋಶನ ತೆಗೆದುಕೊಳ್ಳೋ ಭಾರತದ ಭಾಗ. ವರ್ಷೊಪ್ಪತ್ತಿನಲ್ಲಿ ಇಲ್ಲಿ ಪ್ರಳಯವಾಗುತ್ತದೆಂದು ಹೇಳಿದರೆ ಯಾರೂ ನಂಬರೇನೋ ಎಂದೇ ಉತ್ತರಕ್ಕೆ ಬಂದಿದ್ದ ನಾನೀಗ ಮತ್ತೆ ದಕ್ಷಿಣದತ್ತ ಹೊರಟಿದ್ದೆ. ನನ್ನ ಜೊತೆ ಈಗ ನನ್ನ ಮಾತನ್ನು ಕೇಳೋ ಹದಿನಾಲ್ಕು ಜನರಿದ್ದರು. ಹದಿನೈದರಲ್ಲಿ ಒಂದು ಕೊಂಡಿ ಅದಾಗಲೇ ಕಳಚಿಕೊಂಡಿತ್ತು. ಮನಾಲಿಯಲ್ಲಿ ಲೂಟಿ ಮಾಡಿದಮೇಲೆ ಒಂದೇ ಒಂದು ಕ್ರೈಮನ್ನೂ ನನ್ನವರು ಮಾಡದಿದ್ದುದು ನಿಟ್ಟುಸಿರು ಬಿಡುವಂತೆ ಮಾಡಿತ್ತು. ಬಿಯಾಸ್ ನದಿಯಲ್ಲಿದ್ದ ದೊಡ್ಡ, ತಂಪು ಬಿಳೀ ಬಂಡೆಗಳು ದಕ್ಷಿಣದ ನದಿಗಳಲ್ಲೇಕಿಲ್ಲ? ಬಿಯಾಸಿಗೆ ಹೋಲಿಸಿದರೆ ಸೆತ್ಲೆಜ್ ಕೂಡ ಸಣ್ಣ ಬಂಡೆಗಳ ನದಿಯೇ. ನರ್ಮದೆಯ ಒಡಲಲ್ಲಿ ಮತ್ತೂ ಸಣ್ಣವಿದ್ದವು. ಬಿಸಿಲಿಗೆ ಕಾದು ಕಪ್ಪಗಾದವೇನೋ ಅನಿಸುವಂಥ, ಕುಂಡೆಯೂರಿ ಕುಳಿತುಕೊಳ್ಳಲಷ್ಟೇ ಸಾಕು ಎಂಬಷ್ಟು ದೊಡ್ಡ ಬಂಡೆಗಳಿವು. ನದಿಯೊಳಗೆ ದೊಡ್ಡ ಬಂಡೆಗಳಿದ್ದಾವಾ? ನಿಶ್ಚಲವೆಂಬಷ್ಟು ನಿಧಾನಗತಿಯಲ್ಲಿ ಹರಿವ, ನಾಲ್ಕಾಳು ಆಳದ ನರ್ಮದೆಯ ಒಡಲಲ್ಲಿ ಏನಿದ್ದಾವೆಂದು ಊಹಿಸಿದರೆ ಎಲ್ಲ ಸಾಧ್ಯತೆಗಳೂ ಸತ್ಯವೆಂದೇ ಭಾಸವಾಗುತ್ತಿತ್ತು. ಬೇಸಿಗೆಯ ಆವಿಗೆ ತನ್ನನ್ನೊಡ್ಡಿಕೊಂಡು ಸೊರಗಿದ್ದ ನರ್ಮದಾ ಇನ್ನೊಂದು ವಾರದೊಳಗೆ ತನ್ನ ಜಲಾನಯನ ಪ್ರದೇಶದ ಮಳೆನೀರನ್ನೆಲ್ಲ ಹೀರಿ ಎಷ್ಟಗಲವಾಗಬಹುದು? ಪ್ರಶ್ನೆಗೆ ನಾ ಕುಳಿತಿದ್ದ ಕೊರಕಲು ಇಳಿಜಾರು ತಾನೂ ಮುಳುಗುತ್ತೇನೆಂದು ಉತ್ತರಿಸಿತ್ತು. ಗೋದಾವರಿ ಹೇಗಿರಬಹುದು?

ಸಹ್ಯಾದ್ರಿಯನ್ನೂ ಒಳಗೊಂಡು ಗೋದಾವರಿಯ ಕೆಳ ಭಾಗದಲ್ಲಿ ದಂಡಕಾರಣ್ಯವಿತ್ತಂತೆ. ರಾಕ್ಷಸರು, ಮುನಿಗಳು, ವಾನರರು ಎಲ್ಲರಿಗೂ ಸಾಕಂಬಷ್ಟು ಜಾಗ ಕೊಟ್ಟಿದ್ದ ಪ್ರಸ್ಥಭೂಮಿ ಪುರಾಣಗಳಿಂದಲೂ ಕುಖ್ಯಾತಿ ಹೊಂದಿದ್ದೇ. ಹಿಮಾಲಯದ ಕಡೆ ಒಂದು ಗಾಂವ್ಟಿ ಕತೆಯಿದೆ. ಶಿವನು ಹಿಮಾಲಯದ ಬುಡಕಟ್ಟಿನವನಂತೆ. ಯಾವುದೋ ಸೊಪ್ಪಿನ ರಸ ಕುಡಿದು ಕತ್ತಿನ ಭಾಗ ನೀಲವಾಯ್ತಂತೆ, ಆತ ನೀಲಕಂಠನಾದ. ಅವನ ಕಂಠವೇ ಆತನ ಗುರುತಾಯ್ತು. ನೈತಿಕವಾಗಿ ಉನ್ನತವಾಗಿದ್ದ ಆತ ಒಳ್ಳೆಯ ಯೋಧನಾಗಿದ್ದ. ಅವನ ಬುಡಕಟ್ಟಿನ ನಾಯಕನಾದ. ಇವನ ಸಾಹಸಗಾಥೆಗಳನ್ನು ಕೇಳಿ ಪರ್ವತ ರಾಜ ತನ್ನ ಸೈನ್ಯಕ್ಕೆ ಅಧಿಪತಿ ಮಾಡಿದನಂತೆ. ಯುದ್ಧಗಳಲ್ಲಿ ರಾಜನಿಗೆ ಜಯ ಸಿಗುವಂತೆ ಮಾಡಿದ ಶಿವನ ಮೇಲೆ ಪರ್ವತ ರಾಜನ ಮಗಳು ಪಾರ್ವತಿಗೆ ಪ್ರೇಮಾಂಕುರವಾಯ್ತಂತೆ. ಪರ್ವತರಾಜ ಮತ್ತವನ ಕುಲಬಾಂಧವರು ಯಾವುದೋ ಶೃಂಗದಲ್ಲಿ ಅಮೃತವನ್ನು ತಯಾರಿಸುತ್ತಿದ್ದರಂತೆ. ಆ ಅಮೃತವನ್ನು ಕುಡಿದ ಪಾರ್ವತಿಗೆ ಜನಿಸಿದ ಮಗ ಗಣೇಶನಂತೆ, ಅಮೃತದ ಅಡ್ಡಪರಿಣಾಮವಾಗಿ ಆತನ ಮೂಗು ಉದ್ದವಾಗಿತ್ತಂದೆ, ಕೋರೆ ಹಲ್ಲುಗಳು ಮಿತಿಮೀರಿ ಬೆಳೆದವಂತೆ. ಅಂಥ ಸಾಕಷ್ಟು ಮಂದಿಯನ್ನು ರಾಕ್ಷಸರೆಂದೇ ಭಾವಿಸಿ ಪರ್ವತರಾಜ ಅವರನ್ನೆಲ್ಲ ದಂಡಕಾರಣ್ಯಕ್ಕೆ ಅಟ್ಟುತ್ತಿದ್ದನಂತೆ. ಹಾಗೆ ಗಡಿಪಾರಾದವರಲ್ಲಿ ಕಾಳಿಯೂ ಒಬ್ಬಳಂತೆ, ಆಕೆ ಪಾರ್ವತಿಯ ಸಹೋದರಿಗಿದ್ದಳಂತೆ! ಹಿಮಾಲಯದ ಬುಡಕಟ್ಟುಗಳಲ್ಲಿ ಇಂಥ ಹಲವು ಕತೆಗಳಿವೆ. ಅವುಗಳನ್ನೆಲ್ಲ ಇತಿಹಾಸವೆಂದೇ ಅವರು ನಂಬುತ್ತಾರೆ. ಅಂಥ ಕತೆಗಳಲ್ಲೂ ದಂಡಕಾರಣ್ಯ ಎರಡನೇ ದರ್ಜೆ ನಾಗರಿಕರ ಸ್ಥಾನವೆಂದೇ ಪರಿಗಣಿಸಲ್ಪಟ್ಟಿತ್ತು. ಈಗಿನ ಸ್ಥಿತಿ ಬೇರೆಯಿದೆಯೇ? ದೇಶವಾಳೋ ಸರ್ಕಾರಗಳಿಗೆ ದಕ್ಷಿಣ ಭಾರತ ರಾಜ್ಯಗಳು ಪ್ರಾಶಸ್ತ್ಯವುಳ್ಳ ರಾಜ್ಯಗಳೇ ಅಲ್ಲ. ದಕ್ಷಿಣ ಭಾರತದ ನಾಗರಿಕರು ಎರಡನೇ ದರ್ಜೆ ನಾಗರಿಕರೇ. ಆ ಭಾಗದ ರಾಜಕಾರಣಿಗಳೂ ಅಷ್ಟೇ, ಯಾವತ್ತೂ ಸರ್ಕಾರದ ಭಾಗವಲ್ಲ; ಪ್ರಧಾನಿ ಹುದ್ದೆಗೇರುವ ಅರ್ಹತೆಯನ್ನಂತೂ ಹೊಂದಿರುವುದಿಲ್ಲ. ದೇವಿಗೂ ಆಗಸದ ತೂತಿನ ಪ್ರಯೋಗಕ್ಕೆ ದಕ್ಷಿಣ ಭಾರತವೇ ಸೂಕ್ತವೆಂದು ಕಂಡಿದ್ದರಲ್ಲಿ ಅತಿಶಯವಿಲ್ಲ. ಅಲ್ಲಿಂದಲೇ ಪ್ರಳಯ ಆರಂಭಿಸುವುದು ಅನ್ಯಾಯವೇನಲ್ಲ.

ಹೀಗೇ ನನ್ನ ಯೋಚನಾ ಸರಣಿ ಮುಂದುವರಿಯುತ್ತಿತ್ತು. ನನ್ನ ಧ್ಯಾನಾವಸ್ಥೆಯದು. ನಾನು ನದಿ ತೀರದಲ್ಲಿ ಕಣ್ಮುಚ್ಚಿ ಧ್ಯಾನಿಸುತ್ತಿದ್ದರೆ ಯಾರೂ ನನಗೆ ತಡೆಯಂಟುಮಾಡೋದಿಲ್ಲವಾಗಿತ್ತು. ಮಲ್ಲಿಕಾ ಅದರಲ್ಲೆಲ್ಲ ತೀರ ಆಸ್ಥೆ ತೋರಿಸುತ್ತಿದ್ಳು. ಆದ್ರೆ ನನ್ನ ಧ್ಯಾನಕ್ಕಾವತ್ತು ಮೈಸೂರ್‌ಪಾಕು ಬ್ರೇಕು ಹಾಕಿದ್ಳು.

"ಗೋಪುಟ್ಟ, ಮೊಸಳೆ ಬರ್ತಿದೆ ಮೇಲ್ ಹೋಗೋಣ ಬಾ" ಅಂದಾಗ ಕೋಪ ಬಂತಾದ್ರೂ ಅವಳ ತಪ್ಪೇನಿದೆ ಅನಿಸಿ ಎದ್ದು ಗಾಡಿಯತ್ತ ಹೋಗಿದ್ದೆ. ಆಗ ರಾತ್ರಿ ಒಂಬತ್ತೂಮೂವತ್ತು.

ನದಿ ದಡದಲ್ಲಿ ಹಾಕಿದ್ದ ಟೆಂಟುಗಳನ್ನೆಲ್ಲ ತೆಗೆದು ಎತ್ತರ ಪ್ರದೇಶಕ್ಕೆ ಸ್ಥಳಾಂತರಗೊಂಡೆವು. ಪಾಳಿಯ ಮೇಲೆ ತಲಾ ನಾಲ್ಕು ಮಂದಿ ಕಾವಲು ಕಾಯಬೇಕೆಂದು ತೀರ್ಮಾನಿಸಿದೆವು. ಅಷ್ಟೊತ್ತಿಗೆ ಹತ್ತೂಮುಕ್ಕಾಲು ಆಗಿತ್ತು. ಕಾವಲು ಕಾಯುವವರ ಸಮಯ ನಿಗದಿಗೆಂದು ತಲೆ ಎಣಿಸಿದಾಗ ಹದಿನಾಲ್ಕೇ ಮಂದಿ! ಜಲೇಬಿ ನಾಪತ್ತೆಯಾಗಿದ್ದ!

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ