ಆಗಸದ ತೂತು | ಸಂಚಿಕೆ ೨- ಮತ್ತೆ ಬೇವಾರ್ಸಿ

 ಗೋಪುಟ್ಟ ಅಜ್ಜನಮನೆಗೆ ಬಂದಿದ್ದು ನಿಮಗೆ ಗೊತ್ತೇ ಇದೆ. ಅಷ್ಟಕ್ಕೂ ನಾನೇಕೆ ಗೋಪುಟ್ಟನ ಕತೆ ಹೇಳುತ್ತಿದ್ದೇನೆಂದೇ ತಿಳಿಸಿಲ್ಲ ನೋಡಿ‌. ಈ ಗೋಪುಟ್ಟ ನಂಗೆ ಸಿಕ್ಕಿದ್ದು ಹಿಮಾಚಲದ ಆಕಡೆ ತುದಿಯಾದ ಕಾಥಿಕುಕ್ರಿಯೆಂಬ ಬೆಟ್ಟದಲ್ಲಿ ಅಂಡಲೆಯುತ್ತಿದ್ದಾಗ ಸಿಕ್ಕಿದ್ದ. ಅರೆ, ನಮ್ ಕನ್ನಡಿಗ ಎಂಬ ಯಾವ ಹೆಮ್ನೆಯೂ ಮೂಡದಷ್ಟು ಆತ್ಮೀಯನಾದ ಗೋಪುಟ್ಟ, ಕನ್ನಡಕ್ಕಿಂತ ಒಟ್ರಾಶಿ ಇಂಗ್ಲಿಷ್ ಶಬ್ದಗಳನ್ನು ತುರುಕಿ ಮಾತಡಿದ್ದೇ ಜಾಸ್ತಿ. ಅವನ ವೊಕ್ಯಾಬುಲರಿಯನ್ನು ಮುಂದೆ ಹೇಳುತ್ತೇನೆ, ಅಲ್ಲಿಯವರೆಗೆ ಚೂರುಪಾರಾದರೂ ಮರ್ಯಾದೆಯಿಟ್ಟುಕೊಳ್ಳುವ ಉದ್ದೇಶ ನನ್ನದು.

ಅದಿರ್ಲಿ, ನಾನು ಕಾಥಿಕುಕ್ರಿಗೆ ಹೋಗಿದ್ದ ಕಾರಣಕ್ಕೂ, ಗೋಪುಟ್ಟನ ಪ್ರವಾಸಕ್ಕೂ ರಾಶಿ ವ್ಯತ್ಯಾಸವೇನೂ ಇರಲಿಲ್ಲ. ಇಬ್ಬರೂ ಹೊತ್ತೋಗದೆ ಊರು ತಿರುಗಿದ್ದಷ್ಟೇ. ಆದರೆ ಅವನಿಗೆ ಊರು ಬಿಡಲಂತೂ ಕಾರಣವಿತ್ತು‌. ಆ ಕಾರಣಗಳನ್ನೆಲ್ಲ ಕೇಳಿದಾಗ ಇಂಥ ಮನುಷ್ಯನ ಬಗ್ಗೆ ನಿಮಗೂ ತಿಳಿದಿರಲಿ ಎಂಬ ಮಾನವೀಯ ಸ್ಪಂದನೆ ಈ ಕತೆ ಹೇಳಲಿಕ್ಕೆ ಕಾರಣ.
ಈ ಮಳ್ಳ ಗೋಪುಟ್ಟ ಅವನ ಅಜ್ಜನಮನೆಯಿಂದ ಹೊರಹಾಕಿಸಿಕೊಂಡಿದ್ದಕ್ಕೂ ಕಾರಣವಿದೆ. ಹೆಚ್ಚು ಓದಿರದ, ಹೆಚ್ಚು ಜನರೊಂದಿಗೆ ಸಂಪರ್ಕವಿರದ ಟಿಪಿಕಲ್ಲು ಮಲೆನಾಡ ಪ್ರವಾಹಪೀಡಿತ ಗ್ರಾಮಸ್ಥನ ಮನಸ್ಥಿತಿ ಗೋಪುಟ್ಟನದು. ಭೂಕುಸಿತಕ್ಕೂ ಮುನ್ನ ಕಾಳಜಿ, ಕನಿಕರದ ಕೇಂದ್ರಬಿಂದುವಾಗಿದ್ದ ಭಟ್ರಕುಳಿ ಊರು (ಎಲ್ಲ ಹೇಳಿ ಗೋಪುಟ್ಟನ ಊರ್ಯಾವುದೆಂದೇ ಹೇಳಿರಲಿಲ್ಲ ನೋಡಿ!) ಪಕ್ಕದ ಊರುಗಳಿಗಿಂತ ಬೇಗ ಫೋರ್‌ಜಿ ನೆಟ್ವರ್ಕನ್ನು ಪಡೆದಿತ್ತು. ಯಾರ್ಯಾರೋ ಒಟ್ಟಾಕಿಕೊಟ್ಟಿದ್ದ ದೇಣಿಗೆ ಹಣ, ಅವಶ್ಯಕತೆಗಿಂತ ಜಾಸ್ತಿ ಒಟ್ಟಾಗುತ್ತಿದ್ದ ಪಡಿತರ, ಪ್ರತಿವರ್ಷ ಬರುತ್ತಿದ್ದ ಪರಿಹಾರ, ಎಲ್ಲದರ ಪರಿಣಾಮವೆಂಬಂತೆ ಹಣದ ಓಡಾಟವಂತೂ ಚೆನ್ನಾಗೇ ಇದ್ದ ಭಟ್ರಕುಳಿ ಗ್ರಾಮಸ್ಥರು ನೆಟ್‌ಫ್ಲಿಕ್ಸು, ಪ್ರೈಮುಗಳ ಚಂದಾದರಿಕೆಯನ್ನೂ ಹೊಂದಿ ಮನರಂಜನೆಗಂತೂ ಕೊರತೆಯಿಲ್ಲದಷ್ಟು ದುಡಿತಹೀನ ಮಂದಿಯಾಗಿ ರೂಪುಗೊಂಡಿದ್ದರು. ಅದರಲ್ಲೊಬ್ಬ ಈ ಗೋಪುಟ್ಟ. (ಈ ಆರೋಪ, ಉತ್ಪ್ರೇಕ್ಷೆಗಳೆಲ್ಲ ಸ್ವತಃ ಗೋಪುಟ್ಟನದು. ನನ್ನದಲ್ಲ!) ಹದಾಕಿ ಇಂಗ್ಲೀಷು ಪಿಚ್ಚರ್ರು, ಸೀರೀಸುಗಳನ್ನು ನೋಡಿದ್ದವನಿಗೆ ಬೇಕಾದಷ್ಟು ಕನ್ನಡದ ಮಧ್ಯೆ ಬೇಡದ ಇಂಗ್ಲಿಷ್ ಪದಗಳನ್ನೆಲ್ಲ ಸೇರಿಸಿ ಮಾತಾಡುವಷ್ಟು ಭಾಷಾಜ್ಞಾನವಿತ್ತು.
ಗೋಪುಟ್ಟನನ್ನು ಕಂಡರೆ ಮಕ್ಕಳಿಗ್ಯಾಕೋ ಸಿಕ್ಕಾಪಟೆ ಗೇವು. (ಆತ್ಮೀಯತೆ, ಬಾಂಧವ್ಯ ಎಂಬರ್ಥದ ಪದ) ಛಲೋ ಸುದ್ದಿ ಹೇಳುತ್ತಾನೆಂಬ ಕಾರಣಕ್ಕೋ, ಛಲೋ ಅಟೆನ್ಶನ್ ನೀಡುತ್ತಾನೆಂಬ ಕಾರಣಕ್ಕೋ; ಒಟ್ಟಿನಲ್ಲಿ ಇವನ ಜೊತೆ ಕುಂತು ಹರಟೆ ಹೊಡೆಯುವುದೆಂದರೆ ಮಕ್ಕಳಿಗದೆಂಥದೋ ಖುಷಿ. ಹಿಂಗಿದ್ದ ಗೋಪುಟ್ಟ ಅಜ್ಜನಮನೆಯ ಕೇರಿಗೆ ಸ್ಥಳಾಂತರಗೊಂಡ ನಂತರ ಕೇರಿ ಮಕ್ಕಳೆಲ್ಲ ಇವನನ್ನು ಗೊದ್ದ ಮೆತ್ತಿದಂತೆ ಸುತ್ತುವರೆಯುತ್ತಿದ್ದರು. ಅವರಲ್ಲಿ ಒಳ್ಳೆ ಮಾತುಗಾರ್ತಿ, ತುಂಟಿಯೆಂದರೆ ಇವನ ಮಾವನ ಮೊಮ್ಮಗಳೇ. ಹೆಸರು ಪಾರ್ತಿಯೆಂದು ಗೋಪುಟ್ಟ ಹೇಳಿದ್ದ ನೆನಪು. ಇವನ ಬೇವಾರ್ಸಿ ಸ್ಥಿತಿಗೆ ಮಾಧ್ಯಮವೂ ಅವಳೇ ಆಗಿದ್ದಳು.
ನಡೆದದ್ದು ಮತ್ತೇನಲ್ಲ. ಮಕ್ಕಳಿಗೆ ಅಟೆನ್ಶನ್ ಕೊಡುವ ಹೊಡೆತಕ್ಕೆ, 'ಅಮ್ಮ ಊಟ ಮಾಡಲೆ ಬತ್ತಿಲ್ಲೆ ಹೇಳಿ ಬೈದ್ರೆ ಫಕ್ಯಾ ಹೇಳಿಕ್ಕೆ ಓಡ್ಬುಡು' ಅಂತ ಹೇಳಿಕೊಟ್ಟಿದ್ದನಂತೆ ಈ ಮಂಗ್ಯಾ. ಪಾರ್ತಿ ಆಗಷ್ಟೇ ಎರಡು ವರ್ಷದವಳು. ಮಧ್ಯಾಹ್ನ ಅವಳಮ್ಮ ಊಟ ಮಾಡಿಸಲು ಬಂದರೆ ಫಕ್ ಯಾ ಅಂತಂದು ಓಡೇಬಿಟ್ಟಳು. ಅವಳಮ್ಮ ಶುಭಾಳಿಗೆ ಆ ಕ್ಷಣದಲ್ಲಿ ಪಾರ್ತಿ ಏನೆಂದಳೆಂದು ಗೊತ್ತಾಗಲಿಲ್ಲ. ಪಾರ್ತಿಗೆ ಉಣ್ಣಿಸಲು ಕೊನೆಗೂ ಸಾಧ್ಯವಾಗದೇ ಕ್ಯಾರೇಟ್ ಲೇಹವನ್ನೇ ತಿನಿಸುವ ಅವಸ್ಥೆಯಾಯ್ತು. ಸಂಜೆಯೂ ಅದೇ ಸನ್ನಿವೇಶ ಮರುಕಳಿಸಿದಾಗ ಆಕೆ fuck you ಅಂದಳೆಂದೂ, ಅದರರ್ಥವೇನೆಂದೂ, ಯಾರು ಹೇಳಿಕೊಟ್ಟಿದ್ದೆಂದೂ ಇಡೀ ಮನೆಯವರಿಗೆ ಅರ್ಥವಾಗಿತ್ತು‌. ಇಷ್ಟು ಮಳ್ಳು ಮನುಷ್ಯನನ್ನು ಮನೆಯಲ್ಲಿಟ್ಟುಕೊಳ್ಳಲಿಕ್ಕಾಗತ್ತಾ? ಊಹ್ಞೂಂ, ರಾತ್ರೋರಾತ್ರಿ ಮನೆಯಿಂದ ಹೊರಹಾಕಲಾಯ್ತು. ಗೋಪುಟ್ಟ ಮತ್ತೆ ಬೇವಾರ್ಸಿಯಾದ. (ಬಹುತೇಕರ ಬೈಗುಳದ ಬೇವರ್ಸಿಯ ಅರ್ಥ ವಾರಸದಾರರಿಲ್ಲದವನೆಂಬ ಹಿಂದಿ ಭಾಷೆಯ ಬೇವಾರಿಸ್ ಮೂಲದ್ದಂತೆ)

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ