ಆಗಸದ ತೂತು | ಸಂಚಿಕೆ ೪- ಹೊಳೆ ಬ್ಯಾಲೆ (೧)

 ಚಾರ್ಲ್ ಮ್ಯಾನ್ಸನ್ (charles manson) ಯಾರು ಅಂತ ಗೂಗಲ್ ಮಾಡಿದಿರಾ? ಮಾಡಿರದಿದ್ದರೆ ಒಮ್ಮೆ ಅವನ ಬಗ್ಗೆ ತಿಳಿದುಕೊಳ್ಳೋದೊಳ್ಳೇದು ನೋಡಿ. ಗೋಪುಟ್ಟನ ಕತೆ ಸರಿಯಾಗಿ ಅರ್ಥವಾಗ್ಬೇಕಂದ್ರೆ ಮ್ಯಾನ್ಸನ್ ಮತ್ತೆ ಅವನ ಫ್ಯಾಮಿಲಿಯ ಬಗ್ಗೆ ಗೊತ್ತಿದ್ರೆ ಒಳ್ಳೇದು. ಅಂದಂಗೆ ಕತೆ ಹೇಳ್ತಿರೋ ಭಾಷೆ, ಕೆಲ ಪದಗಳ ಬಗ್ಗೆ ನಿಮ್ಗೇನಾದ್ರೂ ಆಕ್ಷೇಪ ಉಂಟಾ? (ಕಾಮೆಂಟ್ ಸೆಕ್ಷನನ್ನ ಬಳ್ಸ್ಕೊಳ್ಳಿ!)

ಹ್ಞೂಂ, ಎಲ್ಲಿತನ್ಕ ಆಗಿತ್ತು? ಗೋಪುಟ್ಟ ಅದ್ಯಾಕೆ ಆ ಮಗುವಿಕೆ ಕೆಟ್ಟ ಶಬ್ದ ಹೇಳ್ಕೊಟ್ಟ ಅಂತ ಸ್ಪಷ್ಟನೆ ನೀಡಿದ್ದ ಅಲ್ವಾ? ಅವ್ನ ಕತೆ ಅಲ್ಲಿಗೇ ಮುಗ್ದಿಲ್ಲ. ಆ ಸಲ ಭೂಕುಸಿತ ಆದ್ಮೇಲೆ ಸರ್ಕಾರದ ಪರಿಹಾರ, ಸಂಘ-ಸಂಸ್ಥೆಗಳಿಂದ ಒಟ್ಟಾದ ದೇಣಿಗೆ, ಮಠ-ಮಾನ್ಯಗಳ ನೆರವು ಎಲ್ಲಾ ಸಿಕ್ಕಿತ್ತು ಗೋಪುಟ್ಟನಿಗೆ‌. ಅಜ್ಜನ ಮನೆಯಿಂದ ಹೊರಬಿದ್ದವನೇ ಭಟ್ರಕುಳಿಗೆ (ಗೋಪುಟ್ಟನ ಊರ ಹೆಸ್ರದು, ನೆನ್ಪಿದೆ ಅಲ್ವಾ?) ಹೋಗಿ, ಅರೆಮನೆ ಕಟ್ಟಿ, ಬಿದ್ದ ಮನೆಯಿಂದ ಉಪಯೋಗಕ್ಕೆ ಬರೋದನ್ನೆಲ್ಲ ಒಟ್ಟಾಕಿ ಉಳ್ಕೊಂಡ. ಗುಡ್ಡ ಕುಸಿದು ಬಹುತೇಕ ಸಪಾಟಾಗಿದ್ದ ಊರಲ್ಲಿ ಬಾಂದುಕಲ್ಲು (ನೀವು ಗಡಿಕಲ್ಲು ಅಂತೀರಾ?), ಗದ್ದೆ ಬಯ್ಲು, ಸೊಪ್ಪಿನ ಬೆಟ್ಟ, ಡಾಂಬರು ರಸ್ತೆ ಎಂತ ಸಡ್ಗಾಡೂ ಇಲ್ಲವಾಗಿತ್ತು. ಇದ್ದಿದ್ದರಲ್ಲೇ ಎತ್ತರ ಅಂತನಿಸೋ ಜಾಗದಲ್ಲಿತ್ತು ಗೋಪುಟ್ಟನ ಹೊಸ ಬಿಡಾರ. ಮನೆಯ ಒಂದು ಓರೆ ಸ್ಮಶಾನದತ್ತ ಒರಗಿತ್ತು. ಅದು ಭೂಗತ ಭಟ್ರಕುಳಿ ಮತ್ತು ಲೆಕ್ಕ ಮಾಡಿ ಎಂಟು ಮನೆಯಿದ್ದ ಭಟ್ರೇರಿ ಹಳ್ಳಿಗಳ ಜಂಟಿ ಸುಡಗಾಡು, ಗಡಿಯೂ ಹೌದು. ಎಲ್ಲ ಮಣ್ಣಾದ ಮೇಲೂ ಊರುಬಿಡದ ಇವ ಬಂದು ಅಲ್ಲಿ ಮನೆ ಕಟ್ಟಿಕೊಂಡಿದ್ದು ಭಟ್ರೇರಿ ಊರವರಿಗೆ ಎಂಥದೋ ಒಂದು ನಮೂನೆ ಹೆಮ್ಮೆಯಂಥ ಸಂಗತಿಯಾಗಿತ್ತು‌. ಆದ್ರೂ ಊರುಬಿಟ್ಟು ಓಡಿಹೋಗಿದ್ದು ಯಾಕೆ ಅಂತ ಕೇಳ್ದಾಗ ಒಂದ್ ಕತೆ ಹೇಳ್ದಾ ನೋಡಿ...

ಅಜ್ಜನ ಮನೆಯಿಂದ ಹೊರಬಿದ್ದವ ಸೊಕಾಶ ಒಂದು ನೌಕರಿ ಹಿಡ್ಕೊಂಡ. ಅಂತ ಘನಂದಾರಿ ಕೆಲಸವೇನಲ್ಲ, ಔಷಧಿ ಕಂಪನಿಯೊಂದರ ರೆಪ್ಪು. ಜಾಬು ಸೇರಿ ತಿಂಗಳಾಗಿತ್ತೇನೋ. ಆವತ್ತು ಮೇ ೩೧, ೨೦೨೦. ರಾಷ್ಟ್ರಾದ್ಯಂತ ಹೇರಿದ್ದ ಲಾಕ್‌ಡೌನ್ ಭಾಗವಾಗಿ ಹೇರಿದ್ದ ಎರಡು ತಿಂಗಳ ಬಾರು ಬಂದಿನ ಕೊನೆಯ ರಾತ್ರಿ. ಕೊರೊನಾ ಉಪಟಳ‌ ಸಾಲದೆಂಬಂತೆ ಕಳೆದೆರಡು ದಿನಗಳಿಂದ ಮಳೆಯ ಕಾಟವೂ ಶುರುವಾಗಿತ್ತು. ಆತ ಕೆಲಸ ಮುಗಿಸಿ ಮನೆಗೆ ಹೊರುಡುವಾಗಲೇ ರಾತ್ರಿ ಹತ್ತತ್ರ ಹತ್ತು. ಸುರಿಯಿತ್ತಿದ್ದ ಮಳೆಯಲ್ಲೇ ತನ್ನ ಗಾಡಿಯೇರಿ ಸಾಗುತ್ತಿದ್ದವನಿಗೆ ಎಂಥದೋ ಒಂದು ಪ್ರಾಣಿ ರಸ್ತೆ ಮಧ್ಯೆ ನಿಂತಂತೆ ತೋರಿತು. ಹೆದರಿ ಸರಿಯುತ್ತದೆಂಬ ಧೈರ್ಯದಲ್ಲೇ ಬ್ರೇಕು ಹಿಡಿಯದೇ ಹೋದ. ಸರಿಯಲಿಲ್ಲ. ಬಿದ್ದ.
ಎಚ್ಚರವಾಗಿದ್ದು ಆಸ್ಪತ್ರೆಯಲ್ಲಿ. ಸಮಯ, ರಾತ್ರಿ ಒಂದು ಗಂಟೆ ಮೂವತ್ತು ನಿಮಿಷ, ಜೂನ್ ೧. ತಾನು ಬಿದ್ದಿದ್ದು, ಯಾರೋ ಪಿಕಪ್ಪು ಗಾಡಿಯವ ಆಸ್ಪತ್ರೆಗೆ ತಂದು ಬಿಟ್ಟಿದ್ದು ಎಲ್ಲವೂ ಅಸ್ಪಷ್ಟವಾಗಿ ನೆನಪಾಯಿತು. ಭಟ್ರೇರಿಯ ಭಟ್ಟರ ಮನೆಗೆ ಕರೆ ಮಾಡಿ ವಿಷಯ ತಿಳಿಸೋಣ, ಮನೆಗೆ ಬೀಗ ಜಡಿದ ನೆನಪೂ ಇಲ್ಲ ಅಂದುಕೊಂಡ ಈ ಪುಣ್ಯಾತ್ಮ. ಎಷ್ಟೋ ರಿಂಗುಗಳಾದಮೇಲೆ ಭಟ್ಟರ ಮಗ ಫೋನ್ ಎತ್ತಿದ್ದ. ಇವನು ಮಾತಾಡುವುದರೊಳಗೇ, "ಕುಡಿದು ಗಾಡಿ ಹೊಡೆಯೋದಲ್ದೆ ಆ್ಯಕ್ಸಿಡೆಂಟ್ ಬೇರೆ ಮಾಡ್ಕೊಂಡಿದೀಯಾ? ಊರ ಮರ್ಯಾದಿ ಪೂರ್ತಿ ತೆಗೆದೆ. ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ್ಮೇಲೆ ಮನೆಗೆ ಬಂದ್ರೆ ನೋಡು" ಅನ್ನುತ್ತಲೇ ಬಹಿಷ್ಕಾರ ಹೊರಡಿಸಿ ಕಾಲ್ ಕಟ್ ಮಾಡಿದ. ಕಾಲಿನ ಮೀನಖಂಡದಲ್ಲೊಂದು ಆಳವಾದ ಗಾಯ, ಕೈಗಳ ಮೇಲೆ ತರಚಿದ ಗುರುತುಗಳನ್ನು ಬಿಟ್ಟು ಗಂಭೀರ ಗಾಯಗಳೇನೂ ಇರಲಿಲ್ಲ. ತಾನು ಕುಡಿಯದಿದ್ದರೂ ಬೈಸಿಕೊಂಡ ಕೋಪ, ಹತಾಷೆ ಎಲ್ಲವನ್ನೂ ಅವನ ಮುಖದಲ್ಲಿ ಕಾಣಿಸುತ್ತಿತ್ತೇನೋ, ನೋಡಬೇಕಾದ ದೃಶ್ಯ ತಪ್ಪಿಸಿಕೊಂಡ ದುಃಖ ನನ್ನದು. ಅವೆಲ್ಲ ಮಿಶ್ರ ಭಾವನೆಗಳೊಟ್ಟಿಗೆ ಹಾಸಿಗೆಯಿಂದೆದ್ದು ಹೊರಟ. ನೋವು ತಿಳಿಯದಿರಲೆಂದು ಕೊಟ್ಟಿದ್ದ ಇಂಜೆಕ್ಷನ್ನು ತಲೆಯನ್ನು ಹೊಕ್ಕಿ ಅದಾಗಲೇ ಅಮಲು ಹುಟ್ಟಿಸಿತ್ತು. ಹೆಂಗೋ ನಡೆದು ಆಸ್ಪತ್ರೆಯ ಹೊರ ಬಂದು ಕಟ್ಟಡವನ್ನೊಮ್ಮೆ ನೋಡಿದ. ಯಾವಗಲೋ ವಾಸ್ತವ್ಯವಿದ್ದಿರಬಹುದಾದ ದೆವ್ವಗಳು ತಮಗೆ ಈ ಮನೆಯಲ್ಲಿನ್ನು ಇರಲಾಗದು ಎಂದು ಬಿಟ್ಟು ಹೋದಂತಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರ ಎಂಬ ಬೋರ್ಡು ಹಾವಸೆ ಹಿಡಿದು ಪ್ರಾಥಮಿಕ ಅಯೋಗ್ಯ ಕೇಂದ್ರ ಎಂದು ಅಸ್ಪಷ್ಟವಾಗಿ ಓದಿಸಿಕೊಳ್ಳುತ್ತಿತ್ತು. ಅದರ ಹೊರಗಡೆ ಪಿಕಪ್ಪು ವಾಹನದವ ಬೀಡಿ ಸೇದುತ್ತ ನಿಂತಿದ್ದ. ಇವನಿಗಾಗೇ ಕಾಯುತ್ತಿದ್ದನೇನೋ, ಇವನೂ ಐವತ್ತರ ನಾಲ್ಕೈದು ನೋಟನ್ನು ಅವನ ಕೈಗಿತ್ತು ತನ್ನ ಗಾಡಿಯಿದ್ದಲ್ಲಿ ವಾಪಸು ಬಿಡು ಎಂದು ಆದೇಶವಿತ್ತ. ಬ್ಲ್ಯಾಕಿನಲ್ಲಿ ದುಬಾರಿ ಬೆಲೆಯ, ಲೋಕಲ್ಲು ಕ್ವಾಲಿಟಿಯ ಹೆಂಡ ಕುಡಿದು ಬೇಸರ ಬಂದಿದ್ದ ಡ್ರೈವರ ಇನ್ನು ಕೆಲವೇ ಘಂಟೆಗಳಲ್ಲಿ ಹೊಸ, ಸೋವಿ ಎಣ್ಣೆ ಸಿಗುತ್ತದೆಂದೂ, ಶರಾಬು ಅಂಗಡಿಯೆದುರು ಜನ ಜಮಾಯಿಸುವ ಮುನ್ನವೇ ತಾನು ಕ್ಯೂದಲ್ಲಿ ನಿಲ್ಲಬೇಕೆಂದು ಈಗಾಗಲೇ ಪೇಟೆಯೆಡೆ ಹೊರಟಿದ್ದೇನೆಂದು ಹೇಳುತ್ತಲೇ ಗಾಡಿ ಚಾಲೂ ಆಗಿ ಅರ್ಧ ದಾರಿ ದಾಟಿತ್ತು. ತನ್ನ ಬೈಕಿಗೆ ಅಡ್ಡ ಬಂದಿದ್ದು ಪ್ರಾಣಿಯಲ್ಲವೆಂದು, ಲಡ್ಡಾಗಿದ್ದ ಹಳೇ ಮತ್ತಿಮರ ಮಳೆಗೆ ಬುಡ ನೆನೆದು ಉದುರಿ ಬಿದ್ದಿತ್ತೆಂದೂ ಪಿಕಪ್ಪು ಗಾಡಿಯವ ಹೇಳಿದರೂ ನಂಬಿಕೆ ಬರಲಿಲ್ಲ.
ಅಂತೂ ತನ್ನ ಬೈಕನ್ನು ಕಂಡ ಗೋಪುಟ್ಟ ಗಾಡಿಯನ್ನೊಮ್ಮೆ ನೋಡಿದ. ಒಂದಿಡೀ ಪಕ್ಕ ರಸ್ತೆಗೆ ತೇಯ್ದು ಚಪ್ಪಟೆಯಾಗಿದ್ದರೂ ಗಾಡಿ ಓಡಿಸುವಷ್ಟು ಸರಿಯಾಗೇ ಇತ್ತು. ಪಿಕಪ್ಪಿನವನಿಗೆ ಮತ್ತೂ ಇನ್ನೂರು ರೂ. ನೀಡಿ ನಲ್ವತ್ತು ರೂ. ಮುಖಬೆಲೆಯ ಬೆಂಗ್ಳೂರು ವಿಸ್ಕಿಯ ಎರಡು ಕ್ವಾರ್ಟರ್ ಖರೀದಿಸಿ ಒಂದು ಟೆಟ್ರಾ ಪ್ಯಾಕನ್ನು ಗಾಡಿಯೆತ್ತುತ್ತಲೇ ಖಾಲಿ ಮಾಡಿದ ಇವನಿಗೆ ಊರಿಂದ ಹೊರಹಾಕಿದಮೇಲೆ ಎತ್ತ ಹೋಗಬೇಕೆಂಬ ನಿರ್ಧಾರವೂ ಇರಲಿಲ್ಲ. ಟೈಮು ನೋಡಲು ಮೊಬೈಲ್ ಚಾಲೂ ಮಾಡಿದ. ಎರಡೂ ನಲವತ್ತೈದು ಎಂಬ ಅಂಕಿಗಳಿಗಿಂತ ವಾಲ್ಪೇಪರಿನಲ್ಲಿದ್ದ ಹಳೆ ಹುಡುಗಿಯೇ ಅಚ್ಚಾಗಿ ಕಂಡಿದ್ದಕ್ಕೆ ಕಾರಣ ಗೊತ್ತಿಲ್ಲ.
ನೆಟ್ಟಗೆ ಪೇಟೆಗೆ ಹೋದ. ಇನ್ನೂ ಲೈಟು ಉರಿಸಿಕೊಳ್ಳುತ್ತಿದ್ದ ಯಾವುದೋ ಲಾಡ್ಜಿಗೆ ಹೊಕ್ಕು, ಅಲ್ಲಿನ ರೂಂ ಬಾಯ್ ತೋರಿಸಿದ ಕೋಣೆಯೊಳಹೊಕ್ಕ ಇವ ನೆಟ್ಟಗೆ ಹಾಸಿಗೆಗೆ ಬಿದ್ದ.
ಮತ್ತೆ ಎಚ್ಚರಾಗಿದ್ದು ಯಾವುದೋ ವಾಟ್ಸಪ್ ಮೆಸೇಜು ಸದ್ದು ಮಾಡಿದಾಗ. ಲಾಕ್ ಸ್ಕ್ರೀನು ಇನ್ನೂ ಲೈಟು ಉರಿಸಿಕೊಂಡಿತ್ತು, ಸಮಯ ೪ ಗಂಟೆ, ಬೆಳಗಿನ ಜಾವ.
ಮಲಗುವಾಗ ಒಬ್ಬನೇ ಇದ್ದವನ ಮಂಚದಲ್ಲೀಗೊಬ್ಬಳು ಯುವತಿಯಿದ್ದಳು. ಇವನಂತೇ ಬೆತ್ತಲೆ. ಇವನ ಎದೆ ಮೇಲಿದ್ದ ಅವಳ ಕೈಯನ್ನು ಎತ್ತಿಟ್ಟು, ಲೈಟ್ ಹಾಕಿಕೊಂಡು ಉಚ್ಚೆ ಹೊಯ್ಯಲು ಬಾಥ್‌ರೂಮಿಗೆ ಹೋದ.
ಹೊರಬಂದು ಇನ್ನೇನು ಮಲಗಬೇಕು ಎಂಬಷ್ಟರಲ್ಲಿ ಬೆಡ್‌ಶೀಟು ಒದ್ದೆಯಾದಂತೆ ಕಂಡು ಅವಳನ್ನು ಹೊರಳಿಸಿದ. ಆಕೆಯಿನ್ನೂ ಕನವರಿಸುತ್ತಿದ್ದಳು. ಅವಳ ಬೆತ್ತಲೆ ಸ್ತನಗಳು ಕೆಂಪಾಗಿದ್ದವು‌, ರಕ್ತ ಒಸರುತ್ತಿತ್ತು; ಯಾವುದೇ ಗಾಯಗಳಿರಲಿಲ್ಲವಂತೆ!
ಮಂಚದ ಕೆಳಗೆ ಎಸೆದಿದ್ದ ವಸ್ತ್ರ ಧರಿಸಿ ಅಲ್ಲಿಂದ ಹೊರಬಂದ. ಪ್ಯಾಂಟಿನಲ್ಲಿದ್ದ ಮತ್ತೊಂದು ಟೆಟ್ರಾ ಪ್ಯಾಕನ್ನು ಅಲ್ಲೇ ವರಾಂಡಾದಲ್ಲಿ ಇಳಿಸಿದ‌. ಅದಾಗಲೇ ತಾಸಿನ ಲೆಕ್ಕದ ದಂಧೆ ಮುಗಿಸಿ ಹೊರಹೊಂಟಿದ್ದ ಹೆಂಗಸರು ಇವನನ್ನು ನೋಡದಿದ್ದರೂ ಒಂದಿಬ್ಬರ ಕುಪ್ಪುಸ ಒದ್ದೆಯಾಗಿದ್ದು ಗೋಪುಟ್ಟನ ಗಮನಕ್ಕೆ ಬಂದಿತ್ತಂತೆ. ಮತ್ತೊಂದು ಕ್ವಾರ್ಟರ್ ಬೇಕೆನ್ನಿಸಿತು. ಲಾಡ್ಜಿನ ಲಾಬಿಗೆ ಬಂದು ಹಣ ಪಾವತಿಸಿದ. ಬದಿಯಲ್ಲೇ ಇದ್ದ ಬಾರಿಗೆ ಆಗಲೇ ಹತ್ತಿಪ್ಪತ್ತು ಮಂದಿ ಬಂದು ಕ್ಯೂ ನಿಂತಿದ್ದರು. ಅಲ್ಲಿ ನಿಂತು ಕಾಯುವ ವ್ಯವಧಾನವಿರದೇ ಗಾಡಿಯೇರಿ ಹೊರಟ.
ಅದಾಗಲೇ ಸೂರ್ಯನೂ ಬಾರಿನೆದುರು ನಿಲ್ಲುವ ಗಡಿಬಿಡಿಯಲ್ಲಿದ್ದವನಂತೆ ಸೊಕಾಶ ಹೊರಬಂದಿದ್ದ. ನಗರದಿಂದ ಹೊರಗೆ, ಯಾವುದೋ ರೆಸಾರ್ಟಿನಂಥ ಜಾಗಕ್ಕೆ ಅದ್ಯಾಕೆ ಬಂದನೋ ಇವ, ಗೊತ್ತಿಲ್ಲ. ಚೆಕಿನ್ನು ಮಾಡಿ ಉತ್ತರ ದಿಕ್ಕಿನ ಕಾಟೇಜತ್ತ ರೆಸಾರ್ಟಿನವ ಕರೆದೊಯ್ದ. ಹಾಸಿಗೆ ಮೇಲೆ ಬಿದ್ದವನಿಗೆ ಒಳ್ಳೆ ಜೊಂಪು ಹತ್ತಿತಂತೆ.
ಮತ್ತೆ ಎಚ್ಚರಾದಾಗ, ಮೊಬೈಲು ಹನ್ನೊಂದು ಗಂಟೆತಾಗಿದೆ ಎಂದಿತ್ತು. ಕಾಟೇಜಿನ ಹೊರಬಂದ. ಸಣ್ಣ ಹುಲ್ಲಿನ ಕಾಲುಹಾದಿಯ ತುಂಬೆಲ್ಲ ರಕ್ತದ ಗುರುತು. ರೆಸಾರ್ಟಿನ ಲಾಬಿಯ ಪಕ್ಕ ಇದ್ದ ಸಭಾಂಗಣದಲ್ಲಿ ಗಲಾಟೆ. ಹೆಚ್ಚಿನವು ಹೆಂಗಸರ ಧ್ವನಿಯೇ. ಅಲ್ಲಿಯ ಬಾಗಿಲೂ ರಕ್ತಮಯವಾಗಿತ್ತು. ರೆಸಾರ್ಟಿಂದ ಹೊರಡುವಾಗ ಮತ್ತಷ್ಟು ಮಬ್ಬಾಗಿತ್ತು, ಮಳೆ ಬರುವಂತಿತ್ತು. ಗಾಡಿ ಚಾಲೂ ಆಗಲಿಲ್ಲ. ನಡೆದೇ ಹೊರಟ. ರೆಸಾರ್ಟ್ ಬದಿ ತಿರುಗಿ ನೋಡಿದ, ಯಾವಗಲೋ ವಾಸ್ತವ್ಯವಿದ್ದಿರಬಹುದಾದ ದೆವ್ವಗಳು ತಮಗೆ ಈ ಮನೆಯಲ್ಲಿನ್ನು ಇರಲಾಗದು ಎಂದು ಬಿಟ್ಟು ಹೋದಂತಿತ್ತು. ಮುಂದೆ ಸಾಗಿದಂತೆ ಮತ್ತಷ್ಟು ಕತ್ತಲಾಯಿತು. ಮೊಬೈಲು ಟಾರ್ಚಲ್ಲೇ ದಾರಿ ಹಿಡಿದು ಹೊರಟ. ಯಾವುದೋ ಪ್ರಾಣಿಯಂಥದ್ದು ರಸ್ತೆಗೆ ಅಡ್ಡಲಾಗಿ ನಿಂತಂತಿತ್ತು. ತನಗೇನು ಮಾಡೀತು ಅದು ಎಂಬ ಧೈರ್ಯದಲ್ಲೇ ಸಾಗಿದ. ಹೋದ, ಆಕೃತಿಗೆ ಸಮೀಪಿಸುತ್ತಿದ್ದಂತೆ ಅದು ಕೂಗಲು ಶುರು ಮಾಡಿತಂತೆ‌. ಅಸ್ಪಷ್ಟ ಧ್ವನಿ ಸ್ಪಷ್ಟವಾಗುತ್ತಿತ್ತು. "ಓಡು, ಉತ್ತರಕ್ಕೆ ಹೋಗು‌. ತಂಪಗಿರುವಲ್ಲಿ ರೋಗವಿಲ್ಲ, ಮಳೆಯಿಲ್ಲ. ಎಲ್ಲವೂ ಸರ್ವನಾಶವಾಗುತ್ತದೆ. ಆಗಸಕ್ಕೆ ತೂತು ಬೀಳ್ತದೆ" ಅಂತಂತೆ.

ಅದಾದ ಮೇಲೆ  ದಕ್ಷಿಣ ಬಿಟ್ಟವ ಇನ್ನೂ ಹೋಗಿಲ್ಲ ಅಂದಿದ್ದ. ನನ್ನೊಟ್ಟಿಗಿದ್ದಾಗಲೂ ರಾತ್ರಿ ಒಮ್ಮೊಮ್ನೆ "ಆಗಸಕ್ಕೆ ತೂತು ಬಿತ್ತು" ಅಂತ ಕನವರಿಸುತ್ತಿದ್ದ. ಇದೆಲ್ಲ ಆತ ಹೇಳಿದ ಕತೆಯೇ ಇದ್ದಿರಬಹುದು. ಯಾವ ಪತ್ರಿಕೆಯಲ್ಲೂ ಸ್ತನಗಳಿಂದ ರಕ್ತ ಒಸರುತ್ತಿರುವ ಮಹಿಳೆಯರ ಸುದ್ದಿ ಓದಿದ ನೆನಪಿಲ್ಲ. ಅದೆಲ್ಲ ಖರೆ ಘಟನೆಯಾಗಿದ್ದರೆ ನಮ್ಮ ಟಿವಿ ಚಾನಲ್ಲುಗಳು ಸುಮ್ಮನಿರುತ್ತಿದ್ದವೆ? ಸೊಶಿಯಲ್ ಮಿಡಿಯಾಗಳು ಅದೆಷ್ಟು ಕೋಟಿ ಮೀಮ್‌ಗಳನ್ನು ತಯಾರಿಸಿಬಿಡುತ್ತಿದ್ದವೇನೋ!
ಒಂದಂತೂ ಅರಿವಾಗಿತ್ತು, ಗೋಪುಟ್ಟ ಬಾರ್ಡರ್‌ಲೈನ್ ಸೈಕೋಪಾಥ್ ಖಂಡಿತ ಅಲ್ಲ!

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ