Posts

ಸೌಂಡು

ಎದೆಯ ಕದವ ಯಾರೋ ಬಡಿದಂತೆ ಸೌಂಡು. ಯಾರಿದ್ದೀರಾ ಎಂಬ ದನಿ, ಮತ್ತೆ ಬಡಿದಂತೇ ಸೌಂಡು. ಬಾಗಿಲಲಿ ನಿಂತವರಾರು? ಅದು ಅವಳೇ ಇರಬೇಕು, ಅಷ್ಟುದ್ದ ಕೇಶ ಯಾರಿಗಿದೆ! ಮತ್ತೆ ಸೌಂಡು. ಇಲ್ಲೇನು ಕೆಲಸ? ಕನಸ ಕೊಲೆ ಮಾಡಿದ ಸಾಕ್ಷಿ ನಾಷಕೆ ಬಂದಳೇ, ಕೊಲೆ ಮಾಡಿದ ಸಂತೋಷ ಕೂಟಕೋ? ಮತ್ತೆ ಸೌಂಡು, ಟಕ್ ಟಕ್... ಚಿಲಕ ತೆಗೆದ ಶಬ್ಧ, ಒಳಗೇ ಬಂದಳು! ಟಕ್ ಟಕ್ ಚಪ್ಪಲಿಯ ಸದ್ದು, ಚಪ್ಪಲಿ ಬಿಚ್ಚಿಟ್ಟು ಬಾ ಅನ್ನಲೇ? ಅಂದರೆ ಆಹ್ವಾನ ಕೊಟ್ಟಂತೆ! ಟಕ್ ಟಕ್ ಸೌಂಡು ಅರೆ ಶಬ್ಧ ಮಾಯ! ಎದೆಯ ಮಾಂಸಲದಲ್ಲಿ ಚಪ್ಪಲಿಯ ಮುಳ್ಳು ಚುಚ್ಚಿರಬೇಕು! ನನ್ನದೇ ಎದೆ, ಆದರೂ ನೋವಿಲ್ಲ! ಎದೆಯ ಜಗುಲಿಯಲ್ಲಿ ಸೌಂಡು, ಕೊಲೆಯ ಕಲೆ ಅಳಿಸಿದ ಸೌಂಡು, ನೆನಪು ಸಾಕ್ಷಿ ನಾಷಕ, ಬದುಕ ವಿನಾಷಕ! ಪ್ರೀತಿ ವಿದೂಷಕ.

ಬೆಂಗ್ಳೂರು

"ಇದು ಬೆಂಗ್ಳೂರು ಅಪ್ಪಾ, ಇಲ್ಲಿ ಉತ್ಪಾದನೆಯಷ್ಟೇ ಆಗುತ್ತೆ ಸೃಷ್ಠಿಯಲ್ಲ" ಅಣ್ಣನ ಮದುವೆಯಾಗಿ ಮೂರುವರ್ಷವೇ ಕಳೆದರೂ ಮಕ್ಕಳಾಗದ್ದರ ಬಗ್ಗೆ ಅಪ್ಪನ ಜಿಜ್ಞಾಸೆಗೆ ಅಣ್ಣನ ಉತ್ತರ ಸೂಚ್ಯವಾಗಿ ಪೇಟೆಯ ಬದುಕಿನೆಡೆಗಿನ ತಾತ್ಸಾರವನ್ನು ಸೂಚಿಸುತ್ತಿತ್ತು. ಅಣ್ಣ ಮಾಡಿದ ಮ್ಯಾನೇಜ್ಮೆಂಟ್ ಮಾಸ್ಟರ್ ಪದವಿಗೆ ದಿನಕ್ಕೆ ಬರೀ ಹದಿನಾರು ಘಂಟೆಗಳಷ್ಟೇ ಕೆಲಸಮಾಡುವ ನೌಕರಿ ಸಿಕ್ಕಿತ್ತು ಅನ್ನೋದು ಇತಿಹಾಸ. ಅಣ್ಣನಿಗೋ ಮನೆಕಡೆ ತೋಟಗಳ ಮಧ್ಯೆ ಬದುಕೋದೇ ಇಷ್ಟವಾಗಿತ್ತು. ಆದರೆ ಅಪ್ಪನಿಗೋ ತನ್ನ ಮಗ ತಿಂಗಳಿಗೆ ಐದಂಕಿಯ ಸಂಬಳ ಪಡೆಯುವ ಉದ್ಯೋಗಿ ಎಂಬ ಜಂಭವೇ ಇಷ್ಟವಾಗಿತ್ತು. ಅವನಿಷ್ಟದಂತೇ ಎಂ.ಬಿ.ಎ ಮುಗಿಸಿ ಬೆಂಗಳೂರೆಂಬ ಬದುಕ ಕಾರ್ಖಾನೆಯಲ್ಲಿ ಪ್ರತಿಷ್ಠಾಪಿತನಾದ. ಅಪ್ಪನಿಗೂ ವಯಸ್ಸಾಯಿತು, ಸಮಯ ಕಳೆದಂತೆ ಆಸೆಗಳು ಬದಲಾಗುತ್ತವಂತೆ, ಈಗ ಅಪ್ಪನಿಗೆ ಮೊಮ್ಮಕ್ಕಳ ಬಳಿ ತನ್ನ ಮೀಸೆ ಎಳೆಸಿಕೊಳ್ಳೋ ಹಂಬಲ. ಇತಿಹಾಸ ಆಸೆಗಳಂತೆ ಬದಲಾಗುವುದಿಲ್ಲ ಎಂಬ ಅನುಭವ ಅಪ್ಪನಲ್ಲಿ ನಿರಾಸೆ ಮೂಡಿಸಿದೆ. ಒಂದು ಪಡೆಬೇಕೆದರೆ ಒಂದನ್ನು ಕಳೆದುಕೊಳ್ಳಲೇಬೇಕು ಅಲ್ವಾ...

ಮಾಯಾ!

ಅವಳು ಇದ್ದಕ್ಕಿದ್ದಂಕೇ ಮಾಯವಾದವಳು, ಇದ್ದಕ್ಕಿದ್ದಂತೇ ಪ್ರತ್ಯಕ್ಷವಾದವಳು! ಅವಳಾಗೇ ಬಿಟ್ಟು ಹೋದಾಗ ಅಯ್ಯೋ ಹೋದಳಲ್ಲಾ ಎಂಬ ನೋವಿಗಿಂತಾ ಎಲ್ಲಿ ಹೋದಳು ಅನ್ನೋ ಚಿಂತೇನೇ ಜಾಸ್ತಿಯಾಗಿತ್ತು. ಅವಳು ವಾಪಸ್ಸು ಬಂದಾಗ ಎರಡು ಸುಧೀರ್ಘ ವಸಂತಗಳು ಉರುಳಿದ್ದವು. ಆ ವಸಂತಗಳಲ್ಲಿ ಅದೆಷ್ಟೋ ಘಟನೆಗಳ ನಡುವೆ ಅವಳ ನೆನಪು ವಿಶ್ರಾಂತಿ ತೆಗೆದುಕೊಂಡಿತ್ತು. ಈಬಾರಿ ಅವಳ ಕಥೆ ಕೇಳುವ ಮನಸ್ಸು ನನ್ನದಾಗಿರ್ಲಿಲ್ಲ. ಬದುಕು ಅವಳ ಪಾವಿತ್ರ್ಯವನ್ನು ಶಂಕಿಸಿತ್ತು. ಒಳ್ಳೆಯತನ ಅನ್ನೋದು ತೀರಾ ಆಪ್ತರಿಗೆ ಅಪಥ್ಯ. ಅವಳು ಜಗತ್ತಿನ ಎಲ್ಲಾ ಒಳ್ಳೆಯತನವನ್ನ ನನ್ನಲ್ಲಿ ನಿರೀಕ್ಷಿಸಿ ಎದುರಿಗೆ ನಿಂತದ್ದು ಕಾಣುತ್ತಿತ್ತು. ನನ್ನೆಲ್ಲಾ ಪ್ರಶ್ನೆಗಳನ್ನು ಮಾನವೀಯತೆಯ ಮುಖವಾಡದಲ್ಲಿ ಅಡಗಿಸಿಟ್ಟು ಅವಳನ್ನು ಸ್ವಾಗತಿಸಿದೆ.ಎಂದಿಗೂ ಆ ಎರಡು ವರ್ಷದ ಅವಳ ಬದುಕನ್ನು ಪ್ರಶ್ನಿಸಲೇ ಇಲ್ಲ...

ರಿಪ್ಲೈ

ಅನಾಮತ್ತು ನೂರೈವತ್ತು ಬಾರಿ ಮೆಸೇಜಿಸಿದ್ರೂ ಆಕಡೆಯಿಂದ ರಿಪ್ಲೈ ಬರದಿರೋದ ನೋಡಿ ಅವಳ ಮನೆ ಕಡೆಯೇ ಹೊರಟ. ಎರಡು ದಿನಗಳಿಂದ ಪತ್ತೆಯೇ ಇಲ್ರಾ ಏನು ಕಥೆ ಎಂದು ದಬಾಯಿಸಿ ತನಗೆ ಅವಳ ಮೇಲಿರೋ ಮಮಕಾರವನ್ನ ಷೋ ಮಾಡಬೇಕು, ಅದನ್ನು ಕಂಡು ಆಕೆ ಇವನ ಪ್ರೀತಿಯಲ್ಲಿ ಮುಳುಗಬೇಕು ಅನ್ನೋ ಆಸೆ ಆತನದ್ದಾಗಿತ್ತು ಅನ್ಸುತ್ತೆ. ಮದ್ಯ ದಾರಿಯಲ್ಲೇ ಆಕೆ ಸಿಕ್ಕಿಬಿಟ್ಲು! "ನಂಗೇಕೆ ರಿಪ್ಲೈ ಮಾಡ್ತಿಲ್ಯಾ? ಏನಾದ್ರೂ ತಪ್ಪಾಯ್ತಾ?" ಅಂತಾ ಕೇಳಿಯೂಬಿಟ್ಟ. "ಬಾ ಪೋಲಿಸ್ ಸ್ಟೇಷನ್ನಿಗೆ ಹೋಗೋಣ" ಅಂದ್ಲು. ಇದೇನಪ್ಪಾ ಗ್ರಹಚಾರ, ಯಾರಾದ್ರೂ ಮಾಡ್ಬಾರ್ದನ್ನ ಮಾಡ್ಬಿಟ್ರಾ? ಮೊದಲೇ ಬೆಂಗ್ಳೂರು ಅತ್ಯಾಚಾರದ ನಗರವಾಗೋಗಿದೆ. ಪುಣ್ಯ ಇನ್ನೂ ಪ್ರಪೋಸ್ ಮಾಡಿಲ್ಲ, ಬೇರೆ ಯಾರ್ನಾದ್ರೂ ಹುಡ್ಕೊಳ್ಬೇಕು ಅಂತ ಯೋಚನೆ ಮಾಡೋ ಹೊತ್ತಿಗೆ ಪೋಲಿಸ್ ಸ್ಟೇಷನ್ ಹತ್ತಿರ ಬಂದಿತ್ತು. ಆಕೆ ಒಳಗೆ ಹೋದೋಳೇ ಒಬ್ಬ ಕಾನ್ಸ್ಟೇಬಲ್ ಹತ್ರಾ ಅಂದ್ಲು, "ಸಾರ್ ನನ್ನ ಮೊಬೇಲ್ ಸಿಕ್ತು ಅಂತಾ ಹಾಸ್ಟೇಲಿಗೆ ಫೋನ್ ಬಂದಿತ್ತು..."

ಕಾಗದದ ಕಟ್ಟು!

ಅದು ಹೇಗೆ ಕದ್ದಿದ್ದನೋ ಪುಣ್ಯಾತ್ಮ ಅಷ್ಟು ಹಣಗಳನ್ನು. ಕದಿಯೋ ಅಬ್ಬರದಲ್ಲೋ, ಅಷ್ಟೋಂದ್ ಹಣ ಕಂಡ ಖುಷಿಯಲ್ಲೋ ಏನೋ ಹಣ ಎಣಿಸದೇ ಒಂದು ಅಮೇರಿಕನ್ ಟೂರಿಸ್ಟರ್ ಬ್ಯಾಗಿನ ತುಂಬ ತುಂಬಿಟ್ಟಿದ್ದ. ಅದೇ ಊರಲ್ಲಿದ್ರೆ ಸಿಕ್ಕಾಕೊಂಡ್ ಬೀಳ್ತೀನಿ ಅಂತ ಊರು ಬಿಟ್ಟ. ರೈಲಿನಲ್ಲಿ ಹೊರಟಿದ್ದಾಗ ಕನಸಲ್ಲಿ ಪೋಲೀಸರು ಬಂದಂತಾಗಿ ಎದ್ದು ಓಡಿತ್ತಿರೋ ರೈಲಿನಿಂದ ಜಿಗಿದೇ ಬಿಟ್ಟ! ಬಿದ್ದವನು ಸತ್ತನೋ ಬದುಕಿದನೋ ಗೊತ್ತಿಲ್ಲ. ಅವನು ಬಿದ್ದದ್ದನ್ನ ಕಂಡ ವ್ಯಕ್ತಿ ಏಕೆ ಹಾಗೆ ಮಾಡಿದನೋ ಗೊತ್ತಿಲ್ಲ, ಮೊದಲು ಬ್ಯಾಗ್ ಬಿಚ್ಚಿ ನೋಡಿದವ ರೈಲಿನಿಂದ ಬಿದ್ದವನ ಮತ್ತೆ ನೋಡದೇ ಅಲ್ಲಿಂದ ಪರಾರಿಯಾದ. ಆಗಲೇ ಕತ್ತಲಾಗಿತ್ತು, ಓಡುತ್ತಿರೋನು ತಡವರೆಸಿ ಬಿದ್ದ. ಬಿದ್ದವನು ಏನಾದನೋ ಗೊತ್ತಿಲ್ಲ, ಮತ್ತೆ ಏಳಲಿಲ್ಲ! ಆ ಬ್ಯಾಗ್ ಒಬ್ಬ ಕುಡಿದು ಧರೆಗುರುಳಿದ್ದವನ ಮೇಲೆ ಬಿತ್ತು. ಏನಪ್ಪಾ ಇದು ಅಂತ ನೋಡಿದರೆ ಬ್ಯಾಗ್ ತುಂಬಾ ಜೊಡಿಸಿಟ್ಟ ಕಾಗದದ ಕಟ್ಟುಗಳು( ಹಣ ) 'ಎಂತಾ ಛಳಿ' ಅನ್ನುತ್ತಾ ಕಾಗದಕ್ಕೆ ಬೆಂಕಿ ಹಚ್ಛಾ ಛಳಿಯಿಂದ ಬಚಾವಾದ!!

ನಗು

ಅಕ್ಕ ಇತ್ತೀಚೆಗೇಕೋ ಮೊಬೈಲ್ ನೋಡಿಕೊಂಡು ಒಬ್ಬಳೇ ನಗಾಡುತ್ತಾಳೆ. ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಳ್ಳೋದು ಜಾಸ್ತಿಯಾಗಿದೆ. ಏನಿರಬಹುದು ಅವಳ ನಗುವಿನ ಹಿಂದೆ? ಅಶ್ವಥ್ ಅಕ್ಕನ ನಗುವಿನ ಕಾರಣ ಹುಡುಕಿದ್ದ. ಅಕ್ಕ ಯಾರದೋ ಪ್ರೀತಿಯಲ್ಲಿ ಬಿದ್ದಿದ್ದಾಳೆ! ಅಪ್ಪನಿಗೆ ಹೇಳಿ ಬಿಡಿಸೋದಾ? ಇಲ್ಲ, ನಾನು ದೊಡ್ಡವನಾಗಿದ್ದೇನೆ, ಇಷ್ಟು ಚಿಕ್ಕ ವಿಷಯವನ್ನ ಅಪ್ಪನ ಬಳಿ ಒಯ್ದರೆ ಸುಮ್ಮನೇ ರಗಳೆ ಅಂದುಕೊಂಡು ಅಕ್ಕ ಒಬ್ಬಳೆ ಇರುವಾಗ ಚೆನ್ನಾಗಿ ಬೈದ. ಅಕ್ಕ ಅತ್ತಳು, ಅಳು ಗಂಡಸರ ಅಹಂಕಾರ ಹೆಚ್ಚಿಸುತ್ತೆ, ಆಫೀಮಿನ ಅಮಲಿನಂತೆ. ಅವನಿಗೆ ತನ್ನ ಗಂಡಸ್ತನದ ಮೇಲೆ ಹೆಮ್ಮೆಯೆನಿಸಿತು. ಆಕೆ ತನ್ನ ಇನಿಯನಿಗೆ ತನ್ನನ್ನು ಮರೆತುಬಿಡುವಂತೆ ಮೆಸೇಜಿಸಿ ಬಾಕಿ ಇದ್ದ ಅಳುವನ್ನು ಮುಗಿಸಲು ಯತ್ನಿಸಿದಳು. ಅವಳ ಇನಿಯನೋ ಭಯಂಕರ ನೈತಿಕತೆಯ ಮನುಷ್ಯ, ಅವಳಿಗೇ ಇಷ್ಟವಿರದ ಮೇಲೆ ಬಲವಂತವೇಕೆ ಎಂದು ಸುಮ್ಮನಾದ. ಗಂಡಸಾದವನು ಪ್ರೀತಿಯನ್ನು ಅಪೇಕ್ಷಿಸುತ್ತಾನೆ, ಕೊಂಡುಕೊಳ್ಳುವುದಿಲ್ಲವಂತೆ...

ವಿರಹ

ಹೊರಗೆ ಸುರಿದ ಮಳೆ ನೀರು ತಲೆಯೊಳಗೆ ಹೊಕ್ಕಿ ಮೆದುಳನ್ನು ತೋಯಿಸಿದಂತೆ ಅನ್ನಿಸುತ್ತಿತ್ತು. ಯೋಚಿಸಲು ಬೇಕಾದಷ್ಟಿತ್ತು, ಯಾವುದನ್ನು ಮೊದಲು ಯೋಚಿಸೋದು ಅಂತ ಒಂದಷ್ಟು ಚೀಟಿಗಳನ್ನು ಬರೆದು ಆರಿಸಿಬಿಡಲಾ? ಮನೆಯ ಬಲಬಾಗದ ಗೋಡೆ ಕುಸಿದ ಮಾರನೇ ದಿನವೇ ಅವಳೇನೋ ಹೊರಟೇ ಹೋದಳು, ಬಾಣಂತನದ ಖರ್ಚು ಉಳಿಯಿತೆಂದು ಸಮಾಧಾನ ಪಟ್ಟರೆ ಜನ ಏನಂದುಕೊಂಡಾರು? ಅಷ್ಟಕ್ಕೂ ಅವಳಿದ್ದಾಗ ಸಮಾಧಾನವಿತ್ತೇ? ಈ ಮಾತನ್ನು ಯಾರೂ ಕೇಳುವುದಿಲ್ಲ, ಖಾಸಾ ನನ್ನ ತಾಯಿಯೇ ಕೇಳಲಾರಳು!  ನಾಳೆಯಾದರೂ ಒಡೆದ ಹಂಚುಗಳನ್ನು ಬದಲಿಸಬೇಕು. ಮತ್ತೆ ಮಳೆ ಬಂದಾಗ ನನ್ನ ಹಾಸಿಗೆಯಾದರೂ ಒಣಗಿರಬೇಕು! ಎಷ್ಟು ಹಂಚುಗಳು ಹೋಗಿರಬಹುದು? ಹೆಚ ್ಚೆಂದರೆ ಒಂದೈವತ್ತು? ಅಷ್ಟೇ, ಒಟ್ಟೂ ಇನ್ನೂರಿದ್ದೀತಾ ಹಂಚುಗಳು? ಛೇ, ಅವಳಿದ್ದಿದ್ದರೆ ಎಲ್ಲಾ ಲೆಕ್ಕಗಳಿಗೂ ಉತ್ತರ ಸಿಕ್ಕುತ್ತಿತ್ತೇನೋ. ಹಸುವಿನ ಹಾಲನ್ನು ಯಾರ ಬಳಿ ಕರೆಯಿಸಲಿ? ಅದಕ್ಕೆ ಹುಲ್ಲು ಮಾಡುವುದು ಹೇಗೆ? ಒಂದು ದಿನವೂ ಆಕೆ ಇದನ್ನೆಲ್ಲಾ ನನ್ನ ಬಳಿ ಮಾಡಿಸಿಲ್ಲ, ಮುಂದೊಂದು ದಿನ ನಾನು ಪರದಾಡಲೆಂದೇ ಆಗಿರಬೇಕು! ಹೆರಿಗೆಗೆ ತವರಿಗೆ ಹೋದ ಹೆಂಡತಿಯ ನೆನಪು ಕೆಟ್ಟದಾಗಿ ಬರುತ್ತಿತ್ತು ಶಂಕರಣ್ಣನಿಗೆ...