ಕಾಫಿ ವಿಥ್ ಪ್ರೆಂಡ್

        ಮೊನ್ನೆ ಸಂಜೆ ಅಪರೂಪವೆಂಬಂತೆ ನನ್ನ ಗೆಳೆಯ ಮನೆಗೆ ಬಂದಿದ್ದ. ನನಗಿಂತ ಚೂರು ಜಾಸ್ತಿಯೇ ಓದಿದ್ದ ಆತ ಬುದ್ದಿಯಲ್ಲೂ ನನಗಿಂತ ಚುರುಕು. ಅಡುಗೇ ಮನೆಯಲ್ಲಿ ಏನಾದರೂ ತಿನ್ನೋಕಿದ್ಯಾ ಅಂತ ನೋಡೋಕೆ ಇಬ್ರೂ ಒಳಹೊಕ್ವಿ.
      ತಿನ್ನೋಕೆ ಏನೂ ಕಾಣಲಿಲ್ಲ, ಸರಿ ಕಾಪಿ ಕುಡಿಯೋ ಚಟ ಹತ್ತಿತು. ಸರಿ ನಾನು ಕಾಫಿ ಮಾಡೋಕೆ ರೆಡಿಯಾದೆ. ಇವನಿಗೋ ಮಾತಿನ ತೆವಲು ಚೂರು ಜಾಸ್ತೀನೇ, ಇವತ್ತು ಯಾಕೋ ಸಮಾಜದ ಉದ್ದಾರದತ್ತ ಇವನ ಚಿತ್ತ ನೆಟ್ಟಂತಿತ್ತು. ನಮ್ಮ ಸಂಸ್ಕøತಿಯ ಶುದ್ದೀಕರಣದತ್ತ ಮಾತು ಹರಿಸತೊಡಗಿದ.
      ನಮ್ಮ ಭಾರತೀಯ ಸಂಸ್ಕøತಿ ಜಗತ್ತಿನಲ್ಲೇ ಶ್ರೇಷ್ಠವಾದದ್ದು, ಆದರೆ ಮೂಲ ಸಂಸ್ಕøತಿ ನಾಶವಾಗಿ ಅನೇಕ ಸಂಸ್ಕøತಿಗಳ ಮಿಶ್ರಣದಿಂದಾಗಿ ಅಶುದ್ದವಾಗಿದೆ. ನಮ್ಮ ಜನ ಮನಸ್ಸು ಮಾಡಿದರೆ ಮಾತ್ರ ನಮ್ಮ ಸಂಸ್ಕøತಿ ಉಳಿಯುತ್ತದೆ...ಮತ್ತೆ ಮೊದಲಿನಂತೆ ನಮ್ಮ ಸಂಸ್ಕøತಿ ಉತ್ತುಂಗಕ್ಕೇರುತ್ತದೆ ಎನ್ನುತ್ತಿದ್ದ. ನಾನು ಬಿಸಿ ಹಾಲಿಗೆ ಕಾಫಿ ಪುಡಿ ಹಾಕಿದೆ.
    ಪಾಶ್ಚಿಮಾತ್ಯರ ಅಂಧಾನುಕರಣೆಯಿಂದ ಸೀರೆ, ಪಂಚೆಗಳ ಜಾಗವನ್ನು ಜೀನ್ಸ್, ಟೀಶರ್ಟ್ ಆಕ್ರಮಿಸಿವೆ. ಭರತದಲ್ಲಿ ಇಂತಹ ಬಟ್ಟೆಗಳನ್ನು ನಿಶೇಧ ಮಾಡಬೇಕು ಎಂದ. ಅಷ್ಟೊತ್ತಿಗೆ ಕಾಫೀ ಪುಡಿ ಹಾಲಿನೊಂದಿಗೆ ಬೆರೆತು ಒಳ್ಳೆಯ ಘಮ ಹರಡಿತ್ತು. ಅದಕ್ಕೊಂದಿಷ್ಟು ಸಕ್ಕರೆ ಬೆರೆಸಿ ಕಪ್‍ಗೆ ಬೆರೆಸಿ ನಾನೊಂದು ಅವನೊಂದು ಕಪ್ ಕೈಲಿಟ್ಟುಕೊಂಡ್ವಿ.
    ಅಷ್ಟರಲ್ಲಿ ಅವನ ಆರೋಪ ನನ್ನ ಮೇಲೆ ಎರಗಿತ್ತು. ನೀನು ನನ್ನ ಮಾತುಗಳನ್ನು ಕೇಳುತ್ತಿಲ್ಲ, ಎಲ್ಲರೂ ನಿನ್ನಂತೆಯೇ ಇಚ್ಚಾಶಕ್ತಿಯೇ ಇಲ್ಲದಕ್ಕೇ ನಮ್ಮ ಸಂಸ್ಕøತಿ ಹಾಳಾಗುತ್ತಿದೆ ಎಂದು ನೇರವಾಗಿ ನನ್ನ ಬುಡಕ್ಕೇ ಬಂದ. ನನ್ನ ಗೆಳೆಯನ ಆರೋಪ ಸಿಟ್ಟು ತರಿಸುವಲ್ಲಿ ಯಶಸ್ವಿಯಾಗಿತ್ತು.
     ಅಯ್ಯೋ, ನನಗೆ ಕಾಫಿ ಬೇಡ ಹಾಲೇ ಚೆನ್ನಾಗಿತ್ತು, ಕಾಫಿಯನ್ನು ಮತ್ತೆ ಹಾಲಾಗಿ ಮಾಡಿಕೊಡ್ತೀಯಾ? ಎಂದು ಪ್ರಶ್ನೆ ಮಾಡಿದೆ. ಅವನಿಗೆ ನಾನೀಗ ವಿಷಯಕ್ಕೆ ಬಂದೆ ಎಂದು ಅರ್ಥವಾಯಿತೇನೋ, ಕಾಫಿಯನ್ನು ಆರುವವರೆಗೆ ಬಿಸಿ ಮಾಡಿದರೆ ಘನ ರೂಪದಲ್ಲಿ ನಿನಗೆ ಹಾಲು, ಸಕ್ಕರೆ, ಕಾಫಿ ಪೌಡರ್ ಎಲ್ಲಾ ಸಿಗುತ್ತದೆ, ನಿನಗೆ ಯಾವದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದ.
      “ಹ್ಞುಂ, ನಿನ್ನ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ, ಇದೇ ಮಾತನ್ನು ನಮ್ಮ ಸಂಸ್ಕøತಿಯ ಶುದ್ದತೆಯ ವಿಷಯಕ್ಕೂ ಅನ್ವಯಿಸಬಹುದು ಅಲ್ವಾ? ನಾವು ಎಷ್ಟೇ ಪ್ರಯತ್ನಿಸಿ ಸಂಸ್ಕøತಿಯನ್ನು ಶುದ್ದ ಮಾಡಹೊರಟರೂ ಮೂಲ ಸಂಸ್ಕøತಿ ನಮಗೆ ಸಿಗೋದಿಲ್ಲ, ಸುಮ್ಮನೇ ಸಾಹಸ ಮಾಡಿ ಸಂಸ್ಕøತಿಯನ್ನು ಹಾಳು ಮಾಡುವುದರ ಬದಲು ಇರುವ ಸಂಸ್ಕøತಿಯನ್ನೇ ಕಾಪಾಡಿಕೊಂಡು ಹೋಗೋಣ...” ಇಷ್ಟು ಹೇಳೋವಷ್ಟರಲ್ಲಿ ಕಾಫಿ ತಣ್ಣಗಾಗಿತ್ತು, ಹೋಗಿ ಬಿಸಿ ಮಾಡುವಷ್ಟರಲ್ಲಿ ನನ್ನ ತಲೆ ತಣ್ಣಗಾಗಿತ್ತು.

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ