ಒಂದಿಷ್ಟು ಪುಟಿಕಥೆಗಳು...

‪‎ಸಾಕ್ಷಾತ್ಕಾರ‬
ದೇವರು ಎಲ್ಲಿದ್ದಾನೆ? ಹುಡುಕದೆಯೇ ಹಿರಣ್ಯಕಶ್ಯಪುವಿಗೆ ಕಂಡನಂತೆ! ಅದೂ ಯಾವುದೋ ಭಕ್ತ ಬರೆದ ಕಥೆಯಲ್ಲವೇ? ಬರೆದವರೆಲ್ಲ ಕಥಾನಾಯಕನನ್ನು ದೇವರೆಂದೋ, ದೇವರೇ ನಾಯಕನೆಂದೋ ಬರೆದಿರುತ್ತಾರೆ ಬಿಡಿ. ನಾನು ಯಾರೋ ಬರೆದಿಟ್ಟ ಕಥೆಯ ನಾಯಕನ ಹುಡುಕಾಟದಲ್ಲಿಲ್ಲ, ಆ ಶಕ್ತಿಯನ್ನು ಹುಡುಕುತ್ತಿದ್ದೇನೆ.
ಆ ಮಹಾಶಕ್ತಿ ಇಂತಹ ಶುಭ್ರ ಹಿಮಾಲಯದಲ್ಲಿರದೇ ಮತ್ತೆಲ್ಲಿರುತ್ತಾನೆ? ಇಲ್ಲ, ಇಲ್ಲಿಯೂ ಆ ಚೇತನವಿಲ್ಲ! ಇದು ಬರೀ ಬೆಳಕಿನ ಜಾಗ, ಬರೀ ಚಳಿಯ ಜಾಗ ಇಲ್ಲಿ ಹಸಿರೂ ಚಿಗುರುವುದಿಲ್ಲ ಇನ್ನೆಂತಹ ಚೇತನವಿದ್ದೀತು!

ಪರಮಾರ್ಥ ಕಾಣಲು ಹೋದವ ಮರಳಿ ಬಂದ. ಬಂದವನಿಗೆ ಎಲ್ಲ ಕೇಳಿದರು,ಸಾಕ್ಷಾತ್ಕಾರವಾಯಿತಾ?
ಇವನೇನಂದ? 
"ನಿಮ್ಮ ದೇವರು ಸಿಕ್ಕಿದ್ದ, ನನ್ನ ಕಂಡು ಕೈಮುಗಿದು ಹುಡುಕಿ ಕಾಟಕೊಡಬೇಡಿ ಏನೇ ಆದರೂ ನಾನಿರುವೆ...ಅಂದ"
**********************************************
ಅವನಿಗೆ ಒಂದಷ್ಟು ಬ್ರೇಕಪ್ಪುಗಳಾಗಿದ್ವು. ಅವನ ಗಡ್ಡದ ಹೇರ್ ಸ್ಟೈಲ್ ನೋಡಿದವರ ಮನಸ್ಸಲ್ಲಿ ಆ ಯೋಚನೆ ದೃಢವಾಗ್ತಿತ್ತು.
ಹಿಂಗೇ ನಮ್ಮ ನಿಮ್ಮಂಗೇ ಸಾಮಾಜಿಕ ಜಾಲತಾಣದಲ್ಲಿ (  ) ಸಕ್ರಿಯನಾಗಿದ್ದವನಿಗೆ ಹೊಸತಾಗಿ ಪರಿಚಯವಾದ ಹುಡುಗಿಯರು ಕೇಳೋ ಪ್ರಶ್ನೆ ಹಳೆ ಹುಡುಗಿಯ ಹೆಸರೇನು?
ಅವನೇನೋ ಉತ್ತರ ಹೇಳುತ್ತಿದ್ದ ಬಿಡಿ ಅವನಿಗೇನು!

‪‎ಪ್ರತೀಕಾರ‬!

ಆವತ್ತೊಂದಿನ ಬಂದ ಸುಂದರಿಯೊಬ್ಬಳ ಮೆಸೇಜು ನಿದ್ದೆ ಕೆಡಿಸಿತ್ತು. ಅದೇ ಹೆಸರು, ಹಳೆ ಹುಡುಗಿಯದು! 
ಆಕೆ ಕೇಳಿದ್ದು, ಯಾವೂರು ಎನು ಕೆಲಸ?
ಇವನೇನೋ ನಿಜ ನುಡಿದ.
ಮತ್ತೆ ಪ್ರಶ್ನೆ, ಯಾರನ್ನಾದರೂ ಪ್ರೀತಿಸುತ್ತಿದ್ದೀರಾ?
ಇವನೆಂದ, ಅಂತಾ ದುರಂತ ನೆನಪಿಲ್ಲ.
ಪ್ರಶ್ನೆಗೆ ವಿರಾಮವೆಲ್ಲಿ ಹೊಸ ಪರಿಚಯ!
ಪ್ರೇಮ ವೈಫಲ್ಯವೇ?
ಅಂದಂಗೆ ಇವನಿಗೊಂದು ಆಸೆಯಿತ್ತಂತೆ, ಬಿಟ್ಟು ಹೋದವಳಿಗೆ ಅವಮಾನ ಮಾಡಬೇಕೆಂದು, ಅವಳ ಮುಖ ಕಂಡರಾಗದವನಿಗೆ ಮಾತನಾಡುವ ಮುಖವಿಲ್ಲ.
ಈಕೆಗಂದ, "ತಂಗೀ ನನಗೆ ಮದುವೆಯಾಗಿದೆ."
ಪ್ರತೀಕಾರ ಸಮಾನ ಹೆಸರಿನ ಮೇಲೆ...
*****************************
ಬರಿದಾಗಿದ್ದ ಜೋಳಿಗೆಯನ್ನು ಹೊತ್ತುಕೊಂಡು ವಾಪಸ್ಸು ಬಂದವನಿಗೆ ಮುಂದೇನು ಎಂಬ ಪ್ರಶ್ನೆ ಸುಳಿಯಲಿಲ್ಲ. ಹಸಿವನ್ನೂ ಗೆದ್ದವನಲ್ಲವೇ!
ದಿನಕ್ಕೆ ಏಳು ಅಂದರೆ ಏಳೇ ಮನೆಯ ಬಾಗಿಲಿಗೆ ಹೋಗಿ ಭವತೀ ಭಿಕ್ಷಾಂದೇಹಿ ಎಂದು ಮುತ್ತೈದೆಯರ ಭಿಕ್ಷಯನ್ನು ಪ್ರಸಾದವೆಂಬಂತೆ ಜೋಳಿಗೆಗೆ ತುಂಬಿಕೊಂಡು ಸ್ವಪಾಕ ಭೋಜನ ಮಾಡಿ ರೂಢಿಯಾಗಿತ್ತು. ಇವತ್ತು ಎಂದಿನಂತೆ ಏಳು ಮನೆಗಳಿಗೆ ಹೋಗಿದ್ದಷ್ಟೇ, ಮೊದಲ ಮನೆ ಬಾಗಿಲಿಗೆ ಹೋದಾಗಲೇ ಮನಸ್ಸು ಕೆಟ್ಟಿತ್ತು. ಬಾಲೆಯೊಬ್ಬಳನ್ನು ಭಕ್ಷಿಸಿದ ಸುದ್ದಿ ಕೇಳಿದ್ದಕ್ಕೇ ಇವನೇಕೆ ಭಿಕ್ಷಾಚನೆ ಮಾಡದೇ ವಾಪಸಾದ?

ನೆನಪು, ಎಲ್ಲಾ ಹಸಿವನ್ನೂ ಗೆದ್ದವನಿಗೆ ಆ ಹಸಿವನ್ನು ಗೆಲ್ಲಲಾಗಿರಲಿಲ್ಲ. ಭಿಕ್ಷೆಗೆ ಹೋದಾಗೊಮ್ಮೆ ಮುತ್ತೈದೆಯೊಬ್ಬಳನ್ನು ಬೇಟೆಯಾಡಿದ್ದ... ಅದೇ ಅಲ್ಲವೇ ಮನಸ್ಸಿಗೆ ಗಾಯ ಮಾಡಿದ್ದು? ಆ ಊಟದ ಪಶ್ಚಾತಾಪವೇ ಆ ಹಸಿವನ್ನೂ ಗೆಲ್ಲಿಸಿದ್ದು? ಆ ಶಾಪವೇ ಅಲ್ಲವೇ ರಾತ್ರಿಯ ಸ್ವಪ್ನಗಳಾಗಿದ್ದು? ಆ ಪಾಠವೇ ಅಲ್ಲವೇ ಇಂದು ಈ ಊರಿನಲ್ಲಿ ನಂಬಿ ಭಿಕ್ಷೆ ಕೊಡುವ ಭಕ್ತರನ್ನು ನೀಡಿದ್ದು?
*******************************
ಅದು ಆವಾಗಿನ ಮಾತು. ಅವಳು ಮೈಕಿಗೆ ಬಾಯಿಕೊಟ್ಟು ಹಾಡುತ್ತಿದ್ದರೆ ಇಂವಾ ಪಕ್ಕದಲ್ಲಿ ಕುತ್ಕೊಂಡು ಕೊಳಲಿನ ಕಿಂಡಿಯೊಳಗೆ ಉಸಿರು ಬಿಡ್ತಿದ್ದ. ಅದ್ಬುತ ಕೆಮೆಸ್ಟ್ರಿ ಅಂತಾ ಶಾಲೆಯ ಉಳಿದ ಮಕ್ಳು ಹೇಳ್ತಿದ್ರು. ಅವನಿಗೆ ಕೇಳೋ ಹಾಗೇ ಅವರಿಬ್ಬರು ಪ್ರೀತಿಸ್ತಾ ಇದಾರೆ ಅಂತಾ ಗಾಳಿಯಲ್ಲಿ ಮಾತನ್ನ ನೂಕ್ತಿದ್ರು.
ಇವನಿಗೂ ಆಕೆಯನ್ನ ಕಂಡ್ರೆ ಇಷ್ಟ. ಅವಳ ವಯಸ್ಸೆಷ್ಟು? ಇವನಷ್ಟೇ! ಅದಿರ್ಲಿ, ಇಂವ ಹೋಗಿ ಅವಳ ಬಳಿ ನಿವೇದನೆ ಮಾಡ್ಕೋಬೇಕು ಅಂತಿದ್ದ. ಒಂದಿನ ಮಾಡಿಯೂ ಬಿಟ್ಟ.
ಅವಳೋ ಗಾಯಕಿ, ಮುಂದೆ ಉಜ್ವಲ ಭವಿಷ್ಯವಿದೆ ಅಂತ ಸ್ವತಃ ಅವಳ ಗುರುಗಳೇ ಹೇಳ್ತಿದ್ರು. ಇವನೋ ಸಪ್ತದಲ್ಲಿ ಉಸಿರು ಬಿಗಿಹಿಡಿಯಲು ಒದ್ದಾಡೋ ವಾದಕ. ಅವಳು ಹೆಂಗೆ ಒಪ್ತಾಳೆ ನೀವೇ ಹೇಳಿ!
ಮಾರನೇ ದಿನ ಊರ್ತುಂಬಾ ಹೊಸ ಸುದ್ದಿ ಹಬ್ಬಿತ್ತು... "ಅಯ್ಯೋ ಅವಳನ್ನ ಅವಳ ಸಂಗೀತ್ ಮೇಷ್ಟ್ರು ಇಟ್ಕೊಂಡಿದಾನಂತೆ, ಖಾಸಾ ಅವಳ್ಜೊತೆ ಕೊಳಲು ಭಾರಿಸೋ ಅವನೇ ಅಂದಾ ಅಂತೀನಿ!"
********************************
ಅದು ಹಳೇಕಾಲದ ಗಡಿಯಾರ, ಹತ್ತು ಬಾರಿ ಬಡಿದು ಸುಮ್ಮನೇ ತನ್ನ ಕಾಲುಗಳನ್ನ ಮುಂದಿಡುತ್ತಿತ್ತು. ಅದಕ್ಕೆ ಸ್ಪಸ್ಟವಾಗಿಯಲ್ಲದಿದ್ದರೂ ಅವನು ಬರೆಯುತ್ತಿದ್ದುದು ಕಾಣುತ್ತಿತ್ತು. 
ಪೆನ್ನು ಕಾಗದದ ವೈರಿಯೇನೋ ಎಂಬಂತೆ ಕಾಗದದ ಎದೆಯ ಮೇಲೆ ತನ್ನ ಘಾತ ನೆಡೆಸುತ್ತಿತ್ತು. ಅದಕ್ಕೂ ಅನುಭವವಿದೆ, ಆಗಾಗ ಆತ ಅದನ್ನು ಉಪಯೋಗಿಸಿ ಏನೇನೋ ಗೀಚುವುದುಂಟು.
ಅವನ ಕನ್ನಡಕ ಕಾಗದವನ್ನೇ ದಿಟ್ಟಿಸುತ್ತಿದೆ. ಸ್ನಾನ ಮಾಡುವಾಗ ಅವನಿಂದ ಅಗಲುತ್ತದೆಯಷ್ಟೇ. ಕನಸುಗಳನ್ನು ಬರಿಗಣ್ಣಿಂದ ನೋಡಲೆಂದೇ ನಿದ್ರಿಸುವಾಗ ಅದನ್ನು ತೆಗೆದಿಡೋದುಂಟು.
ವಿದ್ಯುತ್ ದೀಪ ಇದಕ್ಕೆಲ್ಲಾ ತಾನೇ ಕಾರಣನೆಂಬ ಅಹಂಕಾರದಿಂದ ಕಣ್ಣು ತೆರೆದುಕೊಂಡೇ ಇದೆ. ಮತ್ತೆ ಬೆಳಗಾಗುವವರೆಗೂ ತಾನೇ ಸೂರ್ಯನೆಂಬ ಹೆಮ್ಮೆಯದಕೆ.
*******************************
ಆತನಿಗೆ ಅದೆಲ್ಲಾ ಗೊತ್ತು, ಅವುಗಳ ನಿರ್ಜೀವದೆಡೆಗೆ ಆತನಿಗೆ ನಂಬಿಕೆಯಿದೆ. ತಾನು ಬರೆದದ್ದನ್ನ ಅವು ಯಾರಿಗೂ ಹೇಳಲಾರವು. ಆ ಕಾಗದವನ್ನೊಂದು ಬಿಟ್ಟು.
ನಿರ್ಜೀವ ಪಾತ್ರಗಳು ಮಾತನಾಡಿದ್ದನ್ನ ನಾನು ಕೇಳಿದ್ದೇನೆ. ಅವೇ ನನಗೆ ಆತನ ಕಥೆ ಹೇಳಿದ್ದು.
ಅವನೊಬ್ಬ ಕಥೆಗಾರ. ಕಥೆಗಳನ್ನುಬರೆದ. ಆ ಕಥೆಗಳನ್ನೇ ನಾನು ಹೇಳುವುದು. ಅವನಿದ್ದಿದ್ದರೆ ಕಥೆಗಳೇ ಇರುತ್ತಿರಲಿಲ್ಲ!

ಅವನು ಆವತ್ತು ಕೇಳಿದ್ದ ಪ್ರಶ್ನೆ ದಂಗು ಬಡಿಸಿತ್ತು. "ಒಂದು ವೇಳೆ ನಾನು ನಿಜವಾಗಿಯೂ ಇಲ್ಲದಿದ್ರೆ? ನನ್ನ ಜೊತೆ ನೀನಾಡಿದ ಮಾತು, ನನ್ನ ಫೋಟೋ, ವಿಡಿಯೋ ಚಾಟಿನ ಸಂವಹನ, ನಮ್ಮಿಬ್ಬರ ದೂರವಾಣಿ ಕರೆಗಳು...ಎಲ್ಲಾ ಬರೀ ನಿನ್ನ ಕಲ್ಪನೆಗಳಾಗಿದ್ರೆ?"
ಇದಕ್ಕೆಂತಾ ಉತ್ತರ ಹೇಳೋದು? ತಮಾಷೆಯೆಂದು ನಕ್ಕು ಸುಮ್ಮನಾಗೋದಾ? ಅಥವಾ ನಿಜವೆಂದು ನಂಬೋದಾ? ಹುಚ್ಚು ನನಗಾ? ಅವನಿಗಾ ಹುಚ್ಚು?
ಅಷ್ಟಕ್ಕೂ ನಮ್ಮ ಜೊತೆ ಮಾತನಾಡೋರು ನಿಜವಾಗಿಯೂ ಬದುಕಿರುತ್ತಾರಾ, ಹೇಗೆ ಕಂಡುಹಿಡಿಯೋದು?
ಅವಳ ಯೋಚನೆ ನಿಮಗೆ ಅರ್ಥವಾಗಲಿಕ್ಕಿಲ್ಲ. ಅವಳ ಸನ್ನಿವೇಶದ ಒಳ ಹೊಕ್ಕದ ಹೊರತು!!
‪#‎ಭ್ರಮೆ‬

ಅವಳಿಗೆ ಮಾನಸಿಕ ಖಿನ್ನತೆ, ಖಂಡಿತಾ ಹುಚ್ಚಲ್ಲ. ಅವಳೇ ಒಂದು ಫೇಸ್ಬುಕ್ ಖಾತೆ ತೆರೆದು ಅವಳ ಗೆಳೆಯನ ಹೆಸರಿಟ್ಟಿದ್ದಳು. ಕಲ್ಪನೆಯ ಗೆಳೆಯ! ಅದರಿಂದ ತನಗೇ ಮೆಸೇಜಿಸಿಕೊಂಡು ಅವನೇ ಮೆಸೇಜಿಸಿದಂತೆ ಖುಷಿ ಪಡುತ್ತಿದ್ದಳು.
ಇವಳ ಖಾಯಿಲೆ ದಿನೇ ದಿನೇ ಹೆಚ್ಚಿತ್ತು. ಇವಳ ನಡುವಳಿಕೆಯ ಬಗ್ಗೆ ಅನುಮಾನ ಬಂದಮೇಲೆ ಆಕೆಯ ತಂದೆ ತಾಯಿಯರು ಒಬ್ಬ ಮಾನಸಿಕ ತಜ್ಞನ ಮೊರೆ ಹೋದರು. ಆ ಸುಳ್ಳೇ ಅಕೌಂಟಿನ ಪಾಸ್ವರ್ಡನ್ನು ಸಂಪಾದಿಸಿ ಆಕೆಗೆ ಅವಳ ಭ್ರಮೆಯ ಇನಿಯನ ಮೇಲೆ ಅಭಿಪ್ರಾಯ ಬದಲಾಗುವಂತೆ ಮಾಡಲಾಯಿತು. ಕೊನೆ ಬಾರಿಗೆಂಬಂತೆ ಮೇಲಿನ ಮೆಸೇಜ್ ಕಳಿಸಲಾಯಿತು...
ಈಗ ಆ ಅಕೌಂಟು ಯಾರಿಂದಲೂ ಉಪಯೋಗವಾಗುತ್ತಿಲ್ಲ. 
****************************************************
ಅಕ್ಕ ಇತ್ತೀಚೆಗೇಕೋ ಮೊಬೈಲ್ ನೋಡಿಕೊಂಡು ಒಬ್ಬಳೇ ನಗಾಡುತ್ತಾಳೆ. ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಳ್ಳೋದು ಜಾಸ್ತಿಯಾಗಿದೆ. ಏನಿರಬಹುದು ಅವಳ ನಗುವಿನ ಹಿಂದೆ?
ಅಶ್ವಥ್ ಅಕ್ಕನ ನಗುವಿನ ಕಾರಣ ಹುಡುಕಿದ್ದ. ಅಕ್ಕ ಯಾರದೋ ಪ್ರೀತಿಯಲ್ಲಿ ಬಿದ್ದಿದ್ದಾಳೆ! ಅಪ್ಪನಿಗೆ ಹೇಳಿ ಬಿಡಿಸೋದಾ? ಇಲ್ಲ, ನಾನು ದೊಡ್ಡವನಾಗಿದ್ದೇನೆ, ಇಷ್ಟು ಚಿಕ್ಕ ವಿಷಯವನ್ನ ಅಪ್ಪನ ಬಳಿ ಒಯ್ದರೆ ಸುಮ್ಮನೇ ರಗಳೆ ಅಂದುಕೊಂಡು, ಅಕ್ಕ ಒಬ್ಬಳೆ ಇರುವಾಗ ಚೆನ್ನಾಗಿ ಬೈದ. 
ಅಕ್ಕ ಅತ್ತಳು, ಅಳು ಗಂಡಸರ ಕೋಪ ಹೆಚ್ಚಿಸುತ್ತೆ, ಆಫೀಮಿನ ಅಮಲಿನಂತೆ. ಅವನಿಗೆ ತನ್ನ ಗಂಡಸ್ತನದ ಮೇಲೆ ಹೆಮ್ಮೆಯೆನಿಸಿತು.ಆಕೆ ತನ್ನ ಇನಿಯನಿಗೆ ತನ್ನನ್ನು ಮರೆತುಬಿಡುವಂತೆ ಮೆಸೇಜಿಸಿ ಬಾಕಿ ಇದ್ದ ಅಳುವನ್ನು ಮುಗಿಸಲು ಯತ್ನಿಸಿದಳು.
ಅವಳ ಇನಿಯನೋ ಭಯಂಕರ ನೈತಿಕತೆಯ ಮನುಷ್ಯ, ಅವಳಿಗೇ ಇಷ್ಟವಿರದ ಮೇಲೆ ಬಲವಂತವೇಕೆ ಎಂದು ಸುಮ್ಮನಾದ. ಗಂಡಸಾದವನು ಪ್ರೀತಿಯನ್ನು ಅಪೇಕ್ಷಿಸುತ್ತಾನೆ, ಕೊಂಡುಕೊಳ್ಳುವುದಿಲ್ಲವಂತೆ...

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ