ಕೋತಿಗಳ ಬಿಗ್ ಬಾಸ್ ಮನೆ ಕಥೆ


      ನನ್ನ ಹುಡುಗಿಗೆ ಕಥೆ ಕೇಳೋ ಗೀಳು, ಯಾವಾಗ ಸಿಕ್ಕಿದ್ರೂ  ಕಥೆ ಹೇಳೆಂದು ಪೀಡಿಸುತ್ತಿದ್ಲು. ನನ್ನಲ್ಲಿದ್ದ ಚಂದಮಾಮ ಕಥೆಗಳೆಲ್ಲಾ ಖಾಲಿಯಾಗಿದ್ವು, ಈ ಬಾರಿ ಸಿಕ್ಕಾಗಲೂ ಕಥೆ ಹೇಳು ಎಂದು ಕೇಳಿದರೆ ಯಾವ ಕಥೆ ಹೇಳಲಿ ಎಂಬ ಚಿಂತೆ, ಸರಿ ನನ್ನ ಬಳಿ ಒಂದು ಕಥೆಯಿದೆ, ಅದನ್ನೇ ಅವಳಿಗೆ ಹೇಳಲಾ? ಮೊದಲು ನಿಮಗೆ ಕಥೆ ಹೇಳುವೆ, ಚೆನ್ನಾಗಿದ್ರೆ ಹೇಳಿ ಇದನ್ನೇ ಅವಳಿಗೆ ಹೇಳ್ತೀನಿ.
      ಒಂದು  ಕೋಣೆಯಲ್ಲಿ ಒಟ್ಟು ಎಂಟು ಕೋತಿಗಳನ್ನು ಕೂಡಿ ಹಾಕಲಾಯಿತು, ಸೇಮ್ ನಮ್ಮ ಬಿಗ್‍ಬಾಸ್ ಮನೇ ಥರ. ಒಂದು ಟ್ವಿಸ್ಟ್ ಬೇಕಲ್ಲಾ, ಮನೆ ಛಾವಣಿಯ ಮೇಲೆ ಒಂದು ಹಣ್ನಾದ ಬಾಳೆಗೊನೆಯನ್ನು ತೂಗಿ ಹಾಕಲಾಯಿತು. ಬಾಳೆಗೊನೆ ತೂಗಿ ಹಾಕಿದ್ರೆ ಆಯ್ತಾ? ಕೋತಿಗಳಿಗೆ ಹತ್ತಲಿಕ್ಕಾಗ್ಲಿ ಅಂತಾ ಒಂದು ಹಗ್ಗವನ್ನೂ ಜೋತು ಬಿಡಲಾಯ್ತು.
    ಬಾಲೆಗೊನೆ ಕಂಡ ಕೋತಿಗಳು ಸುಮ್ಮನೇ ಕುಳಿತುಕೊಳ್ಳೋಕೆ ಸಾಧ್ಯಾನಾ? ಕಣ್ಣೆದುರೇ ಬಾಳೆಗೊನೆ, ತಿನ್ನೋಕೆ ಸುಲಭವಾಗ್ಲಿ ಅಂತಾ ಜೋತುಬಿದ್ದಿರೋ ಹಗ್ಗ! ಖುಷಿಯಿಂದ ಒಂದು ಕೋತಿ ಹಗ್ಗ ಹಿಡಿದು ಮೇಲೇರೆಬಿಟ್ತು. ಇನ್ನೇನು ಬಾಳೇಹಣ್ಣಿಗೆ ಬಾಯಿ ಹಾಕಿಬಿಟ್ತು ಅಂದಾಗ್ಳೇ ಮತ್ತೊಂದು ಕೋತಿ ಅದರ ಬಾಲ ಹಿಡಿದು ಜಗ್ಗೇ ಬಿಟ್ತು! ಬಾಕಿ ಕೋತಿಗಳು ಸುಮ್ಮನಿರಬೇಕಲ್ವಾ, ಅವೆಲ್ಲಾ ಸೇರಿ ಮೊದಲನೇ ಕೋತಿಗೆ ಹೊಡೆಯಹತ್ತಿದವು. ನಮ್ಮೆದುರೇ ಬೇರೆಯವ್ರು ಉದ್ದಾರ ಆದ್ರೆ ಸಹಿಸಲಾಗುತ್ತಾ?
     ಮೊದಲನೇ ಕೋತಿಗೆ ತಾನ್ಯಾಕೆ ಹೊಡೆತ ತಿಂದೆ ಅಂತಾನೂ ಗೊತ್ತಾಗ್ಲಿಲ್ಲ ಬಿಡಿ, ಆದ್ರೆ ಮತ್ತೊಮ್ಮೆ ಬಾಳೆಗೊನೆಗೆ ಬಾಯಿ ಹಾಕೋಕೆ ಹೋಗಲಿಲ್ಲ. ಆದರೆ ತೂಗಾಡುತ್ತಿರೋ ಬಾಳೆಗೊನೆ ಎರಡನೇ ಕೋತಿಯ ಬಾಯಲ್ಲಿ ನೀರು ತರಿಸಿತ್ತು, ಹಿಂದೊಮ್ಮೆ ತಾನೇ ಮುಂದೆ ನಿಂತು ಮೊದಲನೇ ಕೋತಿಗೆ ಭಾರಿಸಿದ್ದು ನೆನಪಾಗಿ ತಾನೀಗ ಗುಂಪಿನ ನಾಯಕ ಎಂಬ ಧೈರ್ಯದಿಂದ ಹಗ್ಗ ಹಿಡಿದು ಮೇಲೇರೇಬಿಟ್ಟಿತು. ಆದರೆ ಇದಕ್ಕೂ ಅದೇ ಹಳೆ ಕೋತಿಗಾದ ಸ್ಥಿತಿಯೇ ಆಯಿತು. ಹೊಡೆತ ತಿಂದ ಈ ಕೋತಿಯೂ ಮತ್ತೆ ಬಾಳೆಗೊನೆಗೆ ಆಸೆಪಡಲಿಲ್ಲ.
    ಹೇಳಿದ್ನಲ್ಲಾ ಇದು ಸೇಮ್ ಬಿಗ್‍ಬಾಸ್ ಮನೇ ಥರಾ ಅಂತಾ, ಮೊದಲೆರಡು ಕೋತಿಗಳನ್ನು ಎಲಿಮ್ನೇಟ್ ಮಾಡಲಾಯ್ತು. ಈಗ ವೈಲ್ಡ್ ಕಾರ್ಡ್ ಎಂಟ್ರಿ ಟೈಮ್, ಮತ್ತೆರಡು ಹೊಸಾ ಕೋತಿಗಳನ್ನು ಮನೆಯೊಳಗೆ ಬಿಡಲಾಯ್ತು. ಒಳಬಂದ ಎರಡು ಹೊಸ ಕೋತಿಗಳಿಗೋ ಆಶ್ಚರ್ಯ, ಯಾಕಪ್ಪಾ ಬಾಳೆಗೊನೆ ತೂಗಾಡುತ್ತಿದ್ರೂ ಯಾವ ಕೋತಿಯೂ ತಿನ್ನುತ್ತಿಲ್ಲ ಎಂದು!
      ಹೊಸಕೋತಿಯೊಂದು ಬಾಳೆಹಣ್ಣು ತಿಂದೇಬಿಡ್ತೀನಿ ಎಂದು ಹಗ್ಗ ಹತ್ತೇ ಬಿಡ್ತು, ಎಂದಿನಂತೇಹೊಡೆತ ತಿಂದು ಮೂಲೆಯಲ್ಲಿ ಕುಳಿತುಕೊಂಡ್ತು. ಮತ್ತೆ ಎಲಿಮನೇಟ್ ಪ್ರಕ್ರಿಯೆ ಮುಂದುವರೀತು, ಎಲ್ಲಾ ಕೋತಿಗಳು ಬದಲಾದವು. ಯಾವುದೇ ಕೋತಿ ಬಾಳೆಹಣ್ಣು ತಿನ್ನಲು ಆ ಉಳಿದ ಕೋತಿಗಳು ಹಲ್ಲೆ ಮಾಡತೊಡಗಿದ್ವು. ಆದರೆ ಯಾವ ಕೋತಿಗೂ ತಾನೇಕೆ ಮತ್ತೊಂದು ಕೋತಿಗೆ ಹೊಡೆಯುತ್ತಿದ್ದೇನೆ ಅಂತ ಗೊತ್ತಿರಲಿಲ್ಲ! ಹಳೆ ಕೋತಿಗಳ ಅನುಕರಣೆ ಮಾಡುತ್ತಿದ್ದೇನೆ ಎಂಬುದು ಮಾತ್ರ ಎಲ್ಲಾ ಕೋತಿಗಳಿಗೆ ತಿಳಿದಿತ್ತು.
    ಇದೇ ನಮ್ಮ ಶಾಸ್ತ್ರ ಮತ್ತು ಸಂಪ್ರದಾಯ, ಯಾಕೆ ಮಾಡುತ್ತಿದ್ದೇವೆ, ಯಾರಿಗಾಗಿ ಮಾಡುತ್ತಿದ್ದೇವೆ ಅಂತಾನೇ ಗೊತ್ತಿರಲ್ಲ. ಆದರೆ ಹಿರಿಯರು ಸುಮ್ಮಸುಮ್ಮನೇ ಯಾವ ಶಾಸ್ತ್ರಗಳನ್ನು ಮಾಡಿಲ್ಲ ಎಂಬುದು ಮಾತ್ರ ನಮ್ಮ ಸಮರ್ಥನೆ. ನಿಜ, ಎಲ್ಲದರ ಹಿಂದೆಯೂ ಕಾರಣಗಳು ಇರುತ್ವೆ, ಆದರೆ ಆ ಕಾರಣಗಳು ಇಂದಿನ ಕಾಲಮಾನದಲ್ಲಿ ಅನುಕರಣೀಯವೇ ಎಂಬುದು ಪ್ರಶ್ನೆಯಾಗೇ ಉಳಿಯುತ್ತದೆ. ಅಂಧಾನುಕರಣೆ ಬಿಟ್ಟು ಪ್ರಶ್ನೆ ಕೇಳುವ ಮನೋಭವವನ್ನು ಬೆಳೆಸಿಕೊಳ್ಳೋಣ. ಕ್ಷಮಿಸಿ, ಕಥೆ ಎಂದು ಹೇಳಿ ಚೂರು ಜಾಸ್ತೀನೇ ಕೊರೆದೆನೇನೋ, ಆದರೂ ಕಥೆ ಹೇಗಿತ್ತು ಅಂತಾ ಹೇಳ್ತೀರಾ ಅಲ್ವಾ?

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ