ಗುಬ್ಬಕ್ಕನ ಕಥೆ

              ಅಮ್ಮ ನನಗೆ ಹೇಳಿದ ಎಲ್ಲಾ ಕಥೆಗಳೂ “ಒಂದಲ್ಲಾ ಒಂದೂರಲ್ಲಿ...” ಎಂದೇ ಶುರುವಾಗ್ತಿತ್ತು. ಆ ಕಥೆಗಳಲ್ಲೆಲ್ಲಾ ಇಣುಕುತ್ತಿದ್ದ ಕಾಗಕ್ಕ ಗುಬ್ಬಕ್ಕನ ಪಾತ್ರಗಳು ನನಗೆ ಖುಷಿ ಕೊಡ್ತಿದ್ವು ಆಗೊಂದು-ಈಗೊಂದು ಕಥೆಗಳಲ್ಲಿ ರಾಜ ರಾಣಿಯರ ಪ್ರವೇಶವೂ ಆಗ್ತಿತ್ತು.ಈಗ ನಾನೂ ಕಥೆ ಹೇಳುವ ವಯಸ್ಸಿನ ಆಸುಪಾಸಿನಲ್ಲಿದ್ದೇನೆ, ನನ್ನ ಮಕ್ಕಳಿಗೆ ಯಾವ ಕಥೆ ಹೇಳಲಿ? ನನ್ನ ಬಳಿ ಮಕ್ಕಳಿಗೆ ಹೇಳಲು ಕಥೆ ಇಲ್ಲ, ನಿಮಗೆ ಹೇಳೋಕೆ ಒಂದು ಕಥೆ ನನ್ನ ಹತ್ತಿರ ಇದೆ. ಈ ಕಥೆಯಲ್ಲಿ ಪಾತ್ರಗಳಿವೆ, ಮುಗ್ದ ಗುಬ್ಬಕ್ಕನೂ ಇದ್ದಾಳೆ,ಮೋಸಗಾತಿ ಕಾಗಕ್ಕನೋ ಇದ್ದಾಳೆ. ಬಿಳಿ ಕುದುರೆ ಏರಿ ಬರುವ ರಾಜಕುಮಾರ, ಹಗಲಿಡೀ ಸ್ವಪ್ನ ಕಾಣುವ ರಾಜಕುಮಾರಿಯೂ ಇದ್ದಾಳೆ...

          ಎಷ್ಟೋ ರಾತ್ರಿಗಳ ಆಕ್ರಂದನ ನಾಲ್ಕು ಗೋಡೆಗಳ ನಡುವಿನ ಮತ್ತೊಂದು ಜೀವಕ್ಕೆ ಖುಷಿ ಕೊಡುತ್ತಿತ್ತು. ಯಾವುದೇ ಪಿತ್ರಾರ್ಜಿತ ಆಸ್ತಿಯಿಲ್ಲದ ಅವಳು,ಕನಿಷ್ಠ ಎಂಟನೇ ಕ್ಲಾಸಿನ ಕನ್ನಡ ಪುಸ್ತಕವನ್ನೂ ಓದಲು ತಿಣಕಾಡುತ್ತಿದ್ದ ಅವಳಿಗೆ ಹೆಣ್ಣೆಂಬ ಹಣೆಪಟ್ಟಿಯೊಂದೇ ಜೀವಕ್ಕಿದ್ದ ಅರ್ಹತೆಯಾಗಿತ್ತು. ಯಾರೋ ತಂದೆ-ತಾಯಿಯರೆಂಬ ಅಪರಿಚಿತರು ಕರುಣಿಸಿದ್ದ ಜೀವವನ್ನು ಬದುಕಿಸಿಕೊಳ್ಳಲು ಗುಬ್ಬಕ್ಕನಿಗಿದ್ದುದು ಅದೊಂದೇ ದಾರಿ. ಚಿಕ್ಕ ವಯಸ್ಸಿಗೇ ಕಾÀಗಕ್ಕನ ಸೆರೆಯಾಳಾಗಿದ್ದ ಇವಳ ಸೌಂದರ್ಯ ಅದೆಷ್ಟೋ ಗಿರಾಕಿಗಳಿಂದ ಸೂರೆಯಾಗಿತ್ತು.
       ಹಗಲಲಿ ಊರ ವಿಪ್ರರಿಗೆ
       ಅಸ್ಪರ್ಷೆ,
       ರಾತ್ರಿರಾಣಿಯ ಸೌಂದರ್ಯಕೆ
       ಸಂಜೆ ಬುಲಾವು
       ಗರತಿಯಾಗುವ ಹೆಣ್ಣಲ್ಲ
       ಇವಳು,
       ಬಿಕರಿಯಾಗುವ ಸರಕು.
       ಗುಬ್ಬಕ್ಕನ ಕಿರುಚಾಟ
       ಮಂಚದ ಸದ್ದಿನಡಿ ಗೌಣ,
       ಕಾಗಕ್ಕನ ಕಂಠದೆದುರು
       ಮೌನ.
         ಎಷ್ಟೋ ಬದುಕುಗಳು ಮನೆಯಿಂದಲೇ ಶುರುವಾಗುತ್ತದಂತೆ. ಇವನಿಗೂ ಮನೆಯುಂಟು, ಮಡದಿಯೂ ಇದ್ದಾಳೆ. ಬದುಕಲು ಸಾಕಾಗುವಷ್ಟೇನೋ ಹಿರೀಕರೇ ಮಾಡಿಟ್ಟು ಹೋಗಿದ್ದಾರೆ. ಸಿರಿವಂತ ಎಂಬ ಅಂಕಿತ ಅವನದಲ್ಲ. ರಾಜಕುಮಾರ, ಪಟ್ಟಣದಿ ಇವನ ವಾಸ. ನಿವಾಸ ಸ್ವಂತದ್ದು. ಅಲ್ಪ ತೃಪ್ತನಿಗೆ ಅತೃಪ್ತ ಪತ್ನಿ, ರಾಜಕುಮಾರಿ. ತಿಂಗಳಿಡಿಯ ರಾಜಕುಮಾರನ ಆದಾಯ ಇವಳ ವಾರದ ಖರ್ಚು. ಅವಶ್ಯಕತೆಯ ಬದುಕು ಸೌಕರ್ಯ ಬಯಸುತ್ತಿತ್ತು. ಇಂದಿನ ಸೌಕರ್ಯದ ದಾಹ ನಾಳೆ ಐಶ್ವರ್ಯದ ಮಹಾದಾಹವಾಗುತ್ತದೆ ಎಂದು ರಾಜಕುಮಾರನಿಗೆ ತಿಳಿದಿತ್ತು. ರಾಜಕುಮಾರಿಯ ಬಯಕೆಗಳಿಗೆ ಇವನಲ್ಲಿ ಪೂರೈಕೆಯ ವ್ಯತ್ಯಯ, ಮುಂದೆ ಆರ್ಥಿಕ ಹಿಂಜರಿತ.
   ನಿನ್ನ ಮಡಿಲಲ್ಲಿ
   ನೆಮ್ಮದಿಯ ಬಯಸಿದೆ,
   ಹುಡುಕಿದೆ ಎಲ್ಲಾಕಡೆ,
   ಹುಡುಕಿ ಹುಡುಕಿ
   ಬಿಕರಿಯಾದೆ,
   ನಾ ರಾಜಕುಮಾರ...

   ಜಗತ್ತನ್ನೇ ಮುಟ್ಟುವ
   ಹಂಬಲ,
   ಆಕಾಶವನ್ನೇ ತಲುಪುವ
   ತವಕ,
   ಆಸೆ ತಿಳಿಯದ ಪತಿ.
   ಮೈಲಿಗಲ್ಲಾಗಲಿಲ್ಲ ರಾಜಕುಮಾರ,
   ಅಡ್ಡಗಾಲು

      ದಾಂಪತ್ಯದಲ್ಲಿ ಸುಖ ಸಿಗದ ರಾಜಕುಮಾರ ಎಲ್ಲಾ ಇತರರಂತೆ ಗುಬ್ಬಕ್ಕನ ಬಳಿ ಬಂದು ನಿಂತ. ಮತ್ತೊಂದು ಆರ್ತನಾದಕ್ಕೆ ತಯಾರಿ ನೆಡೆಸುತ್ತಿದ್ದವಳಿಗೆ ಇವನಲ್ಲಿ ಕಂಡದ್ದು ಮಾತ್ರ ಸುಧೀರ್ಘ ಧ್ಯಾನ. ಮೊದಲ ಬಾರಿ ಆ ಕೋಣೆಯ ಗೋಡೆಗಳು ಕಿವುಡಾಗಿರುವೆವೇನೋ ಎಂಬಷ್ಟು ಮೌನ ಅಲ್ಲಿ ನೆಲೆಸಿತ್ತು. ಮಂಚದ ಒಂದು ಮೂಲೆಯಲ್ಲಿ ಕುಳಿತಿದ್ದ ಅವ ಕೋಣೆಯ ಮತ್ತೊಂದು ಮೂಲೆಯತ್ತ ದೃಷ್ಠಿ ನೆಟ್ಟಿದ್ದ, ಅವಳು ಮಾಡಿನೆಡೆಗೆ ಆಕರ್ಷಿತಳಾಗಿದ್ದಳು.
       ಮಾತಾಡಲು ಏನೆಲ್ಲಾ ಇದ್ದವಲ್ಲಾ! ಮಾತು ಇಬ್ಬರಿಗೂ ದೂರವಾಗಿತ್ತು. ಆ ಶಾಂತಿಯಲ್ಲಿ ಇವನಿಗೆ ಖುಷಿ ಸಿಕ್ಕಿತ್ತು,ಇವಳಿಗೆ ನೆಮ್ಮದಿ ದೊರಕಿದ್ದೂ ಆವಾಗಲೇ ಮೊದಲು. ಅದೇ ಮೌನದ ಅಂದಃಕಾರದ ನಡುವೆ ಎಲ್ಲಿ ಬೆಳಕಾಗಿ ಹೋಯಿತೇನೋ ಎಂದು ಅಂವ ಕತ್ತಲೆಯಲ್ಲೇ ಹೊರಟ,ಇವಳು ಮುಂದೆ ತನ್ನ ಬಾಳಲ್ಲೂ ಬೆಳಕು ಹರಿದೀತೇನೋ ಎಂದು ಕಾಯುತ್ತಾ ಅದೇ ಕೋಣೆಯ ಕತ್ತಲಲ್ಲಿ ಕುಳಿತಳು.

   ಅವನು ಮಹಡಿ ಅರಮನೆಯ ಅರಸನಲ್ಲ, ಅವಳಿಗೋ ಅಂತಸ್ಥು ಬೇಡವಾಗಿತ್ತು. ಹಗಲಲಿ ಯಾರೋ ಆಗಿರುವ ಇವರು ರಾತ್ರಿ ಮಾತ್ರ ದಂಪತಿಗಳು. ಅವರ ದಾಂಪತ್ಯವಾದ್ರು ಎಂಥದ್ದು? ಕಾಮಕ್ಕಾಗಿ ಒಂದಾದವರಲ್ಲ ಅವರು, ಇರುಳಿಡೀ ದುಃಖ ಹಂಚಿಕೊಳ್ಳುವುದೇ ಇವರ ನಿತ್ಯ ಕೆಲಸ.ಎಷ್ಟು ದಿನ ಹೀಗೇ ಇರುತ್ತಾರೆ ಅವರಾದರೂ? ಮಾತು ಮುಗಿದಿತ್ತು, ಒಂದು ದಿನ ಇಬ್ಬರೂ ಒಂದಾದರು. ಅದೂ ಎಷ್ಟು ದಿನ? ಅವನಿಗೂ ಈ ಹಗಲು ರಾತ್ರಿಗಳ ಕಣ್ಣಾ ಮುಚ್ಚಾಲೆ ಆಟ ಬೇಸರ ತಂದಿತ್ತು.
     ಅವನು ಕೆಲಸ ಜಾಸ್ತಿಯಿದ್ದಾಗಲೆಲ್ಲಾ ಗುಬ್ಬಕ್ಕನ ಮನೆಗೆ ಬರುತ್ತಿರಲಿಲ್ಲ. ಆದರೆ ಹೋದ ವಾರ ಹೋದ ರಾಜಕುಮಾರ ತಿರುಗಿ ಬಂದೇ ಇಲ್ಲದ್ದು ಗುಬ್ಬಕ್ಕನಿಗೆ ಕಳವಳ ಉಂಟು ಮಾಡಿತ್ತು. ವಾರಗಳುರುಳಿದವು,ತಿಂಗಳುಗಳೂ ಕಳೆದವು, ರಾಜಕುಮಾರ ಮಾತ್ರ ತಿರುಗಿ ಬರಲೇ ಇಲ್ಲ. ಕಾಗಕ್ಕನ ಸುಪರ್ದಿಯಲ್ಲಿ ಗುಬ್ಬಕ್ಕ ರಾಜಕುಮಾರನ ಹುಡುಕುವುದಿರಲಿ, ಹೊರ ಹೋಗಿ ಯಾರ ಬಳಿಯಾದರೂ ಕೇಳುವ ಮಾತೂ ದೂರ.
    ದಿನಗಳುರುಳಿದಂತೆ ಗುಬ್ಬಕ್ಕ ತನ್ನ ಕೆಲಸದಲ್ಲಿ ವ್ಯಸ್ತಳಾದಳು. ರಾತ್ರಿ ಯಾರ ಜೊತೆಯಲ್ಲೋ ಮಲಗುವುದು ಮತ್ತೆ ರೂಢಿಯಾಯಿತು. ರಾಜಕುಮಾರನಿಗಾಗಿ ಗುಬ್ಬಕ್ಕನ ಕಾಯುವಿಕೆ ಮಾತ್ರ ನಿಂತಿಲ್ಲ. ನಿಮಗ್ಯಾರಿಗಾದರೂ ರಾಜಕುಮಾರ ಕಂಡರೆ ದಯವಿಟ್ಟು ಗುಬ್ಬಕ್ಕನಿಗೆ ತಿಳಿಸಿ. ಅವಳ ಮನೆ ಇನ್ನೂ ಅಲ್ಲೇ ಇದೆ, ಗುಬ್ಬಕ್ಕ ಬಾಗಿಲ ಬಳಿಯೇ ನಿಂತಿರುತ್ತಾಳೆ.

Comments

ಹೀಗೊಂದು ಕಾಗಕ್ಕ ಗುಬ್ಬಕ್ಕ.. ಸಂಬಂಧಗಳ ಮೇಲೆ ಒಂದಷ್ಟು ಬೆಳಕು ಚೆಲ್ಲುವಂಥದ್ದು.. :) :) :)

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ