ನೀ ಕೊಡದ ಮುತ್ತು ಕೆನ್ನೆ ತುಂಬ...


ಬಹುಶಃ ನಾ ಬರೆದ ಮೊದಲ ಹಲ್ಬಾಣ ಇದೇ ಆಗಿರ್ಬೇಕು ಓದಿಬಿಡಿ.

     ಈ ಮೂರು ವರ್ಷಗಳಲ್ಲಿ ಅದೆಷ್ಟು ಲವ್ವುಗಳಾದ್ವೋ ಅದೆಷ್ಟು ಬ್ರೇಕಪ್ಪುಗಳಾದ್ವೋ ಅ ದೇವರಿಗೇ ಗೊತ್ತು. ಅದರೆ ಎಷ್ಟು ಲವ್ವುಗಳಾದ್ವೋ ಅಷ್ಟೇ ಬ್ರೇಕಪ್ಪುಗಳಾಗಿದ್ದಂತೂ ಸತ್ಯ. ಮೊದಲ ಪ್ರೇಮ, ಮೊದಲ ಸ್ಪರ್ಷ, ಮೊದಲ ನೋಟ, ಮೊದಲ ಅಪ್ಪುಗೆ... ಮೊದಲ ಬ್ರೇಕಪ್... ಇವನ್ನೆಲ್ಲಾ ಮರೆಯೋದು ಅಷ್ಟು ಸುಲಭವಲ್ಲ ಬಿಡಿ. ನನಗೆ ಮೊದಲ ಪ್ರೆಮದ ನಿಶಾನೆಯಾಗಿ ಏನೂ ಉಳಿದಿಲ್ಲ, ಆದರೆ ಮೊದಲ ವಿದಾಯದ ಕುರುಹಾಗಿ ಉಳಿದಿರೋದು ಇದೊಂದೇ ಪತ್ರ, ಪೋಸ್ಟ್ ಮಾಡದೇ ಬರೀ ಬರೆದಿಟ್ಟ ಪತ್ರ...

    ಏಯ್ ನಿರ್ಲಜ್ಜ ಹುಡುಗಿ,
        ನೆನಪುಗಳಿಗೆ ಸಾವಿಲ್ಲ ಎಂದು ಗೊತ್ತಿತ್ತು, ಆದರೆ ರಜಾನೂ ಇಲ್ಲ ಅಂತ ತಿಳಿದಿದ್ದು ಈಗಲೇ, ನೀನು ಬಿಟ್ಟು ಹೋದಮೇಲೇ... ಹುಣ್ಣಿಮೆಯ ಚಂದಿರ ಆಗಸದಲ್ಲಿ ನಕ್ಕಾಗ ನಿನ್ನ ನಗು ನೆನಪಾದರೆ, ಅಮಾವಾಸ್ಯೆಯ ಕತ್ತಲು ಕಂಡಾಗ ಜೊತೆಯಲ್ಲಿ ನೀನಿಲ್ಲ ಎಂಬ ನೆನಪಾಗಿ ಮರಗುತ್ತೇನೆ. ನಂಗೊತ್ತು, ನೀನು ನನ್ನ ಮರೆತಿದ್ದೀಯ ಅಂತ, ನನ್ನ ಮರೆತು ಹಾಯಾಗಿದ್ದೀಯಾ ಅಂತಾನೂ ಗೊತ್ತು ಗೆಳತಿ. ಕನ್ನಡ ಚಿತ್ರಗಳನ್ನು ನೋಡಿ ಬೆಳೆದ ನನ್ನಂಥಾ ಪ್ರೇಮಿಗಳು ನಿನ್ನ ಖುಷಿಯೇ ನನ್ನ ಪ್ರೀತಿಯ ಧ್ಯೇಯ ಎಂದು ತಿಳಿಯೋದು ಪ್ರೇಮ ಧರ್ಮವಲ್ಲವಾ ಗೆಳತಿ...
    ನಾನು ಹೇಗಿದ್ದೀನಿ ಅಂತಾ ಕೇಳಿದೆಯಾ ಗೆಳತಿ? ನಾನೂ ಖುಷಿಯಾಗಿದ್ದೇನೆ ಬಿಡು. ಸಾಕ್ಷಿ ಬೇಕಾದರೆ ಬಂದು ನನ್ನ ಕಣ್ಣೀರ ನೋಡು. ಬೇಡ, ನನ್ನ ಕಣ್ಣಿರನ್ನು ನೋಡಬಂದರೆ ನೀ ತಿರಸ್ಕರಿಸಿ ಬಿಟ್ಟ ನನ್ನ ಮುಖವನ್ನೂ ತೋರಿಸಬೇಕಾಗುತ್ತೆ ಅಲ್ಲವೇ... ನೀನಲ್ಲೇ ಇರು. ಹಳೆ ಹುಡುಗ ಅಳದೇ ಇದ್ದರೆ ನಿಮ್ಮ ವಿದಾಯ ಸಾರ್ಥಕವಾಗುವುದಿಲ್ಲ ಬಿಡಿ.
ಆಣೆ ಮಾಡಿ ಹೇಳಿದ್ದೆ,
ಸದಾ ನಗುತ್ತಿರುವೆನೆಂದು...
ಆ ನೆನಪುಗಳಲ್ಲೇ ನಗುತ್ತಿರುವೆ
ನಾ ಹಳೆ ಪ್ರೇಮಿ...

ಕೆಲವೊಮ್ಮೆ ನನ್ನ ನೋಡಿ,
ಮತ್ತೊಮ್ಮೆ ಪರಿಸ್ಥಿತಿಯ ನೋಡಿ ಅತ್ತೆ,
ಮಾತು ಹೊರಬಂದರೆ
ಪ್ರತಿ ಮಾತಿಗೂ ಅತ್ತೆ,
ಗೆಳತೀ...
ನಾ ನಿನ್ನ ಹಳೆ ಪ್ರೇಮಿ.

       ಮೊದಮೊದಲು ಎಷ್ಟು ಮೂರ್ಖನ ಹಾಗೆ ರಿಯಾಕ್ಟ್ ಮಾಡಿಬಿಟ್ಟೆ ಅಲ್ವಾ... ನೀನೆಲ್ಲೋ ನನ್ನ ತೋಳಿಂದ ಜಾರತೊಡಗಿದ್ದೀ ಎಂಬುದು ಅರಿವಾಗ್ತಾ ಇದ್ದಹಾಗೆ ಜಾತ್ರೆಯಲ್ಲಿ ಅಮ್ಮನ ಕಳಕೊಂಡ ಮಗೂ ಥರ ತಬ್ಬಿಬ್ಬಾದೆ. ಮೂವತ್ತಾರು ತಿಂಗಳು ಏನನ್ನೂ ಮಾಡದೇ ಬರೀ ನಿನ್ನ ಪ್ರೀತಿಸಿದ ಮಾತ್ರಕ್ಕೇ ನೀ ನನ್ನ ಸ್ವಂತ ಅಂತ ತಿಳ್ಕೊಂಡು ನಾನು  ಮಾಡಿದ್ದು ತಪ್ಪೇ ಗೆಳತಿ, ಸಂಶಯವಿಲ್ಲ.
      ಮೊದಲ ಬಾರಿ ನಿನ್ನ ಕಣ್ಣ ಆಗಸ ಬಣ್ಣ ಬಿಡೋದನ್ನು ನೋಡಿದೇ ನೋಡು, ಕಂಗಾಲಾಗಿಬಿಟ್ಟೆ. ಮೊದಮೊದಲು ನಿನ್ನ ಅದೆಷ್ಟು ಕಾಡಿಬಿಟ್ಟೆ ಅಲ್ವಾ? ನಿಂಗೆ ನೆನಪಿದ್ಯಾ, ಆರಡಿ ಎತ್ತರದ ಆಳು  ಚಿಕ್ಕ ಮಗುವಿನ ಥರ ಕಣ್ಣೀರಿಟ್ಟೆ! ಎರಡೂ ಕೈ ಚಾಚಿ ಒಂದು ಹಿಡಿ ಭರವಸೆಗಾಗಿ ಅದೆಷ್ಟು ಬೇಡಿದೆ, ನಿನಗೆ ಕೋಪ ಬಂದದ್ದು ತಪ್ಪಲ್ಲ ಬಿಡು. ಒಂದು ಬಾರಿ ಹೇಳು.. ಇದೆಲ್ಲ ತಮಾಶೆಯೆಂದು...ನೀ ನನ್ನ ಪ್ರೀತಿಸುತ್ತೇನೆಂದು ಒಂದು ಬಾರಿಯಾದರೂ ಹೇಳು ಗೆಳತೀ...
      ಆದರೂ ನೀನೆಷ್ಟು ವಂಚಕಿ ಗೆಳತೀ, ಆ ಮೂರು ವರ್ಷಗಳಲ್ಲಿ ಒಂದು ಬಾರಿಯೂ ನಿನಗೆ ಇದೆಲ್ಲಾ ಬರೀ ಇನಪ್ಯಾಚ್ಯುಯೇಷನ್ ಅಂತಾ ಅನ್ನಿಸಿಯೇ ಇರಲಿಲ್ವಾ? ನೀವು ಹುಡ್ಗೀರೇ ಹೀಗೆ ಅಲ್ವಾ, ಹುಡುಗ ಪೂರ್ತಿ ನೀರ ಮದ್ಯ ಬಂದಿದ್ದಾನೆ ಅಂತ ನಿಶ್ಚಿತವಾಗುವವರೆಗೂ ನಿಮ್ಮ ದೋಣಿಯನ್ನು ಮುಂದೋಡಿಸುವುದೇ ಇಲ್ಲ ಅಲ್ವ? ಆಮೇಲಾದರೂ ಇದು ನನ್ನ ದೋಣಿ, ನೀ ಹೊರಗೆ ಹೋಗು ಅಂತಾ ಹೇಳೋದು ಎಷ್ಟು ಸುಲಭವಲ್ವಾ ನಿಮಗೆ?

ಎಲ್ಲಿಯ ತನಕ ಜೊತೆಯಿದ್ದೆಯೋ
ಅಲ್ಲಿಯ ತನಕ ಪ್ರೀತಿ ಮಾಡಿದೆ,
ಮತ್ತೂ ಜಾಸ್ತಿ ಪ್ರೀತಿ ಮಾಡಿದಂತೇ
ಜೊತೆ ಬಿಟ್ಟೆ, ನಾ ಹಳೇ ಪ್ರೇಮಿ...

       ನಾನಿನ್ನೂ ಆ ಅಚಿತಿಮ ಆಘಾತಕ್ಕೆ ರೆಡಿಯಾಗೇ ಇರಲಿಲ್ಲ. ನಿನ್ನ ಮಾತುಗಳು ಕೇಳಿಸಿತ್ತಾ? ಇಲ್ಲ ಅವು ನನ್ನ ಕಿವಿಗಳಿಗೆ ಬಂದು ಅಪ್ಪಳಿಸಿದ್ದವು, ಆಮೆಲೆ ಜಿವನ ಪೂರ್ತಿ ನನಗೆ ಪ್ರೀತಿಯ ಮಾತುಗಳೇ ಕೇಳಲಿಲ್ಲ! ಊಹ್ಞೂಂ, ಇದೆಲ್ಲ ಸುಳ್ಳು, ನೀನು ನನ್ನ ಬಿಟ್ಟು ಎಲ್ಲೂ ಹೋಗಿಲ್ಲ, ಇವೆಲ್ಲಾ ನಿನ್ನ ತಮಾಶೆಯ ಹೊಸ ಆಟ ಎಂದೇ ಅದೆಷ್ಟು ನಂಬಿದ್ದೆ ಗೆಳತಿ...ಆ ಒಮದು ಸುಳ್ಳು ಭರವಸೆಯಲ್ಲೆ ಕಾಲಕಳೆದೆ. ಈಗ ಮತ್ತೆ ಮೂರು ವರ್ಷಗಳೇ ಉರುಳಿವೆ, ಇನ್ನೂ ನಿನ್ನೊಂದು ಹಿಡಿ ಪ್ರೀತಿಗೆ ಕಾಯುತ್ತಿರುವೆ. ನೀ ಕೊಡದ ಮುತ್ತು ಕೆನ್ನೆ ತುಂಬ ಗುರುತಾಗಿದೆ.

ತಿರುಗಿ ಬರುವುದಾದರೆ ಹೇಳು,
ಹೊಸ್ತಿಲಲಿ ಮೊಂಬತ್ತಿ ಹಚ್ಚಿಡುವೆ,
ಹಸಿರ ತೋರಣ ಕಟ್ಟಿಡುವೆ,
ಎದೆ ಗುಡಿಸಿಲ ಕಸ ಗುಡಿಸಿ
ಸಿಂಗಾರ ಮಾಡಿಡುವೆ,
ಕೇಳದೇ ಮರು ಪ್ರಶ್ನೆ
ಸ್ವಾಗತಿಸುವೆ ಗೆಳತೀ...
ನಾ ನಿನ್ನ ಹಳೆ ಪ್ರೇಮಿ.

Comments

ಹಳೇ ಪ್ರೇಮ ಪತ್ರ ಚೆನ್ನಾಗಿದೆ

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ