ಪತ್ತೆದಾರಿ ಕತೆ

      ನಾನು ಮೊದಲಿಂದಲೂ ಅಷ್ಟೇ, ತೀರಾ ಶೆರ್ಲಾಕ್ ಹೋಮ್ಸ್‌ನಷ್ಟಲ್ಲದಿದ್ದರೂ ಒಂದು ರೇಂಜಿಗೆ ಬೆಶ್ಟ್ ಪತ್ತೇದಾರ. ಸಣ್ಣಕಿದ್ದಾಗಲೇ ನಮ್ಮ ತೋಟದ ಮಂಡಗಾಲುವೆ ಬದಿಯ ಬಕ್ಕೇಮರಕ್ಕೆ ಬೆಳೆದಿದ್ದ ಬಕ್ಕೆ ಹಣ್ಣು ಕಾಣೆಯಾದಾಗ ನನ್ನ ಚಾಣಾಕ್ಷತನದಿಂದ ಕಳ್ಳನನ್ನು ಹಿಡಿದಿದ್ದೆ. ಹೆಂಗೆ ಅಂತೀರಾ? ಹೇಳಿದರೂ ನಿಮಗೆ ತಿಳಿಯಲಿಕ್ಕಿಲ್ಲ ಬಿಡಿ. ಹೋದ ತಿಂಗಳು ನಡೆದ ಕೊಲೆಯ ಆರೋಪಿಯನ್ನು ಪತ್ತೆ ಹಚ್ಚಿದ ಮೇಲಂತೂ ನನ್ನ ಪ್ರೊಫೆಶನನ್ನೇ ಬದಲಾಯಿಸಿ ಪೂರ್ಣಾವಧಿ ಪತ್ತೇದಾರಿಕೆ ಮಾಡಬೇಕೆಂದು ತೀರ್ಮಾನಿಸಿದ್ದೇನೆ. ಅದಕ್ಕೂ ಮೊದಲು ನಡೆದದ್ದೇನು ಅಂತ ಹೇಳಿ ನಿಮ್ಮ ಅಭಿಪ್ರಾಯವನ್ನೂ ಕೇಳೋಣ ಅಂದುಕೊಂಡೆ. (ನಿಮ್ಮ ಅಭಿಪ್ರಾಯ ನನ್ನ ತೀರ್ಮಾನವನ್ನು ಬದಲಾಯಿಸಲಾರದು. ನನ್ ಬದುಕು, ನನ್ ರೂಲ್ಸು. ಕೇಳೋಕ್ ನೀವ್ಯಾರು)

ನಮ್ಮೂರು ಮೆರವಣಿಗೆ ಪಕ್ಕದ ಹಳ್ಳಿ. ಜಗತ್ತಿನಲ್ಲಿ ನಡೆವ ಎಲ್ಲಾ ಥರದ ಘಟನೆಗಳೂ ಮೆರವಣಿಗೆಯಲ್ಲಿ ನಡೀತವೆ. ಅದಕ್ಕೇ ಆ ಊರು ನಿಮಗೆ ಗೊತ್ತಿರಬಹುದು. ನಮ್ಮೂರು ಅಗ್ದಿ ಶಾಂತ, ಸೌಮ್ಯ, ಸಹಬಾಳ್ವೆಯ ಮಂದಿ ಬದುಕೋ ಊರು. ಹೊಳೆಗೆ ಬ್ರಿಜ್ ಇಲ್ಲ, ರಸ್ತೆಯಿಲ್ಲ. ಆದರೂ ಇಪ್ಪತ್ತಿಪ್ಪತ್ತೈದು ವರ್ಷದಿಂದ ವೋಟು ಒತ್ತಿದ್ದು ಮಾತ್ರ ಒಬ್ಬರಿಗೇ. ಕಾರಣ ಗೊತ್ತಲ್ಲ, ಆತ ಯಾರಿಗೂ ಕೆಟ್ಟದು ಮಾಡದ ಗೋವಿನಂಥಾ ಮನ್ಷ ಅಂತ. ನೋಡಿ, ಪತ್ತೇದಾರಿ ಕತೆ ಹೇಳೋನಿಗೆ ರಾಜಕೀಯ ಬೇರೆ ನೆನ್ಪಾಯ್ತು. ಅಲ್ಲ, ಯಾಕೆ ಆ ವಿಷ್ಯ ಬಂತು ಅಂದ್ರೆ, ನಮ್ಮೂರಿನ ಮಂದಿ ಅಗ್ದಿ ಶಾಂತ, ಸೌಮ್ಯ, ಸಹಬಾಳ್ವೆಯವ್ರು. ರಸ್ತೆಯಿಲ್ಲ, ಹೊಳೆಗೆ ಬ್ರಿಜ್ ಇಲ್ಲ ಅಂದ್ರೂ...ಅದಕ್ಕೇ, ನಮ್ಮೂರ ಹೆಸರು ಯಾರಿಗೂ ಗೊತ್ತಿಲ್ಲ. ನೋಡೋಕೆ ಮೆರವಣಿಗೆಯ ಪಡಿಯಚ್ಚಾದ್ರೂ ಯಾರೂ ಬರೋದಿಲ್ಲ, ಊರನ್ನ ಹೊಗಳೋದಿಲ್ಲ. ನಾವ್ ಗೊತ್ತಲ್ಲ, ಅಗ್ದಿ  ಶಾಂತ, ಸೌಮ್ಯ, ಸಹಬಾಳ್ವೆಯ ಮಂದಿ ಅಂತ? ಅದಕ್ಕೇ, ಉಳಿದ ವಿಷ್ಯ ತಲೆಗೆ ಹಚ್ಕೊಂಡಿಲ್ಲ. 
ಆಗ್ಲೇ ಅಂದಂಗೆ ಜಗತ್ತಿನಲ್ಲಿ ನಡೆಯೋ ಅಷ್ಟೂ ಘಟನೆಗಳು ಮೆರವಣಿಗೇಲಿ ನಡೀತವೆ. ದೊಡ್ಡ ದೊಡ್ಡ ಊರುಗಳಲ್ಲಿ ಕ್ರೈಮುಗಳು ಸಾಮಾನ್ಯ. ಮೆರವಣಿಗೆಯಲ್ಲಿ ಪದೇಪದೆ ಅಪರಾಧಗಳು ಆಗದಿದ್ರೂ ವರ್ಷಕ್ಕೊಂದು ಕ್ರೈಮು ವಾಡಿಕೆಯಂತೆ ಆಗತ್ತೆ. ಅಂಥದ್ದೇ ಒಂದು ಅಸಹಜ ಸಾವು ಹಿಂದಿನ ತಿಂಗಳು ಆಯ್ತು. ಒಬ್ಬ ಹೆಂಗಸು ನೇಣು ಬಿಗಿದುಕೊಂಡು ಸತ್ತೇ ಹೋದ್ಳು. ಯಾರು ಅಂತೀರಾ? ಲಕ್ಕು ನಾಯ್ಕನ ಹೆಂಡತಿ ಪಾರಿ. ಮೆರವಣಿಗೆಯ ಒಂದು ತುದಿಗೆ ಕುಂಬ್ರಿ ಗುಡ್ಡವಿದೆ. ಹಳೇ ಕಾಲದಲ್ಲಿ ಅಲ್ಲೆಲ್ಲ ಭಯಂಕರ ಕಾಡಿತ್ತಂತೆ. ಈಗಿಲ್ಲ. ಫಾರೆಸ್ಟು ಇಲಾಖೆ ಬೆಳೆಸಿದ ಅಕೇಶಿಯ ಮರಗಳ ನೆಡುತೋಪು ಪಶ್ಚಿಮ ಘಟ್ಟದ ಎರಡನೇ ಶ್ರೇಣಿಯನ್ನು ಆವರಿಸಿಕೊಂಡಿವೆ.

ಅಂಥ ಪ್ಲಾಂಟೇಷನ್ ಮಧ್ಯ ಒಂದು ನೆಲ್ಲಿ ಮರದ ಹೆಣೆಗೆ ಸೀರೆ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಳು ಪಾರಿ. ಪೊಲೀಸರ ಜೊತೆಯೇ ನಾನೂ ಸ್ಥಳಕ್ಕೆ ಹೋಗಿದ್ದೆ. ಸ್ಥಳದಲ್ಲಿ ಅಂಥ ವಿಶೇಷ ಏನೂ ಇರಲಿಲ್ಲ. ಶವದ ಭಾರಕ್ಕೆ ನೆಲ್ಲಿ ಹೆಣೆ ಮುರಿದು ಪಾರಿಯ ಕಾಲು ನೆಲಕ್ಕೆ ತಾಗುತ್ತಿದ್ದುದರಿಂದ ಅದು ಆತ್ಮಹತ್ಯೆಯಲ್ಲ, ಕೊಲೆ ಎನ್ನುವ ಮೂರ್ಖ ನಾನಲ್ಲ. ಆದರೆ ಅದು ಆತ್ಮಹತ್ಯೆಯಲ್ಲ ಅನ್ನೋದಕ್ಕೆ ಕಾರಣಗಳೂ ಇದ್ವು, ಆಮೇಲೆ ಹೇಳ್ತೇನೆ.

ತೊಗಟೆಯ ಭಾಗವನ್ನು ಕಾಂಡಕ್ಕೆ ಜೋಡಿಸಿಕೊಂಡಿದ್ದ ಕೊಂಬೆ, ಪಂಚನಾಮೆ ಮುಗಿಸಿ ಹೆಣ ಇಳಿಸುವಾಗ ಪೂರ್ತಿ ಮುರಿಯಿತು.
ಅಷ್ಟೇ ಆಗಿದ್ದರೆ ತಲೆಬಿಸಿಯಿರಲಿಲ್ಲ. ನೆಲ್ಲಿ ಮರದ ಬುಡದಲ್ಲಿದ್ದ ಅಕೆಶಿಯ ಬುಡ್ಚಿಗೆ ಪಾರಿಯ ತಲೆ ತಾಗಿ ಕಿವಿ ಹರಿದು ಹೋಯಿತು. ಅದಾಗಲೇ ಸೇರಿದ್ದ ಜನರ ಮಧ್ಯೆ ಪಾರಿಯ ನಾದಿನಿಯ ಕೂಗು ಜೋರಾಗಿ ಕೇಳಿ ಬಂತು. ಗದ್ಗದಿತ ಸ್ವರದಲ್ಲಿ, “ಅಯ್ಯೋ ನನ್ ಅಕ್ಕನ್ ತಲೆ ಒಡೆದ್ಯಲ್ಲೋ ಬೋ**ಮಗನೇ..." ಪೊಲೀಸರಿಗೆ ಬೈದ್ಳಾ? ಗೊತ್ತಿಲ್ಲ. ಅಲ್ಲ, ನೇಣು ಹಾಕಿಕೊಂಡು ಸತ್ತವಳ ತಲೆ ಒಡೆಯಬಹುದಾ? ನಾನ್ಯಾಕೆ ಲಾಜಿಕ್ ಹುಡುಕೋಕೋಗ್ಲಿ ಅಂತ ಸುಮ್ನಾದೆ.
ಹೆಣವನ್ನಿಳಿಸಿ ಪೊಲೀಸರು ಸಾಮಾನ್ಯ ಪ್ರಶ್ನೋತ್ತರಗಳಿಗೆ ಹೊಂಟರು. ನಾನೂ ಹಿಂದೆಯೇ ಹೊಂಟೆ. ಮೊದಲಿಗೆ ಲಕ್ಕು ನಾಯ್ಕನ ಬಳಿ ಮಾತು ಶುರುವಿಟ್ಟರು.

"ಹೆಂಡ ಕುಡೀತಿದ್ಯಂತೆ? ಇವತ್ತೂ ಹೊಡ್ದ್ಯಾ?"

"ನಾ ಹೆಂಡನೇ ಮುಟ್ಟುದಿಲ್ಲಾ ಸಾರ್, ಯಾರೋ ಸುಳ್ ಹೇಕೊಟ್ಟಾರೆ ನಿಮ್ಗೆ"

ಹಿಂಗೇ ಅಸಡ್ಡೆಯಿಂದ ಶುರುವಾದ ಪ್ರಶ್ನೋತ್ತರ ಹಂಗೇ ಮುಗೀತು. ಸಾರಾಂಶ ಹೇಳೋದಾದ್ರೆ, ಪಾರಿ ಬೆಳಿಗ್ಗೆ ಹನ್ನೊಂದು ಗಂಟೆ ಹೊತ್ತಿಗೆ ಕಟ್ಟಿಗೆ ತರಲೆಂದು ಪ್ಲಾಂಟೇಷನ್‌ಗೆ ಹೋಗಿದ್ದಳು. ಊಟಕ್ಕೆ ಬಂದ ಲಕ್ಕುವಿಗೆ ಪಾರಿ ಯಾರದೋ ಸಂತಿಗೆ ಓಡಿಹೋದಳೆಂಬ ಡೌಟು ಬಂತು. ಮೊದಲು ಸಿಕ್ಕ ಕ್ಲೂ ಏನಪ್ಪಾ ಅಂದ್ರೆ, ಹೋಪಲ್ಲಿ ಚಪ್ಪಲು ಬಿಟ್ಟು ಕೊಟ್ಟಿಗೆ ಕೆಲಸದ ಚಪ್ಪಲ್ಲು ತೊಟ್ಟು ಹೋಗಿದ್ದು. ಆಕೆ ಓಡಿಹೋಗಿಲ್ಲ ಅನ್ನೋದು ಪಕ್ಕಾ ಆದಮೇಲೆ ಬೇಣದಮನೆ ನಾಣಯ್ಯನ ಜೊತೆ ಚಕ್ಕಂದ ಆಡಲು ಹೋದಳಾ ಅನ್ನೋ ಅನುಮಾನ ಶುರುವಾಗಿ ಬೇಣದಮನೆ ಕಡೆ ಹೊಂಟ. ಲಕ್ಕುವಿನ ತಮ್ಮ ಪಮ್ಮ ಅತ್ತಿಗೆಯನ್ನು ಹುಡುಕುತ್ತಾ ಬಂಬೀಸರದತ್ತ ಹೊಂಟ. 
ಬೇಣದಮನೆ ನಾಣಯ್ಯನ ಬಗ್ಗೆ ಹೇಳೋದಾದ್ರೆ, ಸುರದ್ರೂಪಿ ಮಧ್ಯವಯಸ್ಕ. ನೋಡಿದರೆ ನಾಲ್ಕೈದು ಸಂಬಂಧಗಳನ್ನಾದ್ರೂ ಮೇಂಟೇನು ಮಾಡುತ್ತಿದ್ದಾನೆಂಬ ಭಾವನೆ ಬರದಿರದು. ಅದೇ ಭಾವನೆಯೇ ಗಾಸಿಪ್ಪುಗಳಿಗೆ ಕಾರಣವಾಗಿತ್ತು. ಅದೆಷ್ಟು ಸತ್ಯವೋ, ಸುಳ್ಳೋ ಗೊತ್ತಿಲ್ಲ.

ಹಂಗೆ ಹುಡುಕಿಹೊಂಟ ಲಕ್ಕುವಿಗೆ ಪಾರಿ ಬೇಣದಮನೆಯಲ್ಲಿ ಸಿಗಲಿಲ್ಲ. ಬದಲಾಗಿ ಬೆಳಿಗ್ಗೆಯೇ ಹಗ್ಗ, ಸಪ್ಗತ್ತಿ ಹಿಡ್ಕೊಂಡು ಗುಡ್ಡೇಕಡೆ ಹೋದಳೆಂಬ ಸುಳುಹು ಅವನ ಹೆಗಡ್ತೇರಿಂದ ಸಿಕ್ಕಿತ್ತು. ಹಂಗೆ ಪ್ಲಾಂಟೇಷನ್ ಹತ್ತಿ ಹೊಂಟ ಲಕ್ಕುವಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪಾರಿ ಕಂಡಿದ್ದಳು. ಅಷ್ಟೊತ್ತಿಗೆ ಮಧ್ಯಾಹ್ನ ಮೂರು ಗಂಟೆ. ಇದಿಷ್ಟು ಕೇಳಿಕೊಂಡ ನಾನು ಸುಮ್ಮನೆ ಟೈಂವೇಸ್ಟು ಅಂದುಕೊಳ್ಳುತ್ತಾ ಹೆಂಗಿದ್ರೂ ಸಂಜೆಯಾಯ್ತು, ಒಂದು ರೌಂಡು ಬೆಟ್ಟ ತಿರುಗೋಣ ಅಂದುಕೊಂಡು ಬೆಟ್ಟದತ್ತ ಮತ್ತೆ ಹೆಜ್ಜೆಯಿಟ್ಟೆ.
ಅತ್ತ ಪೊಲೀಸರು ಲಕ್ಕುವಿನ ಕುಡಿತದ ಚಟಕ್ಕೆ ಬೇಸತ್ತು ಪಾರಿ ಸತ್ತಳು ಎಂಬ ನಂಬಿಕೆಗೆ ಬಂದು, ಲಕ್ಕುವಿಗೆ ಮತ್ತೆ ಕುಡಿದರೆ ಜೈಲಿಗೆ ಹಾಕುತ್ತೇನೆಂದು ಬೆದರಿಸಿ ಹೋದರು.

ಹಂಗೇ ಗುಡ್ಡ ಹತ್ತುತ್ತಿದ್ದಾಗ ಅಕೇಶಿಯ ಎಲೆಗಳ ಹಾಸು ಕೆದರಿದಂತೆ ಕಂಡುಬಂತು. ಸ್ವಲ್ಪ ದೂರದಲ್ಲಿ ಹರಳು ಹೊಳೆದಂತೆ ಕಂಡಿತು, ನೋಡಿದರೆ ಮೂಗುಬೊಟ್ಟು. ಒಂದು ಗ್ರಾಮೋ, ಎರಡು ಗ್ರಾಮೋ ತೂಕದ ಬಂಗಾರ ಇಟ್ಟುಕೊಂಡು ನಾನೇನು ಮಾಡಲಿ? ಗೊತ್ತಾಗಲಿಲ್ಲ. ಆದ್ರೂ ವೆಸ್ಟ್‌ಕೋಟಿನ ಬಗಲು ಕಿಸೆಗೆ ಸೇರಿಸಿಕೊಂಡೆ. ನಾಲ್ಕೈದು ಮಾರು ಹೋದೊಡನೆ ಬೊಗಸೆಯಷ್ಟು ಹೊಳೆ ದಾಸವಾಳ ಹಣ್ಣುಗಳು ಕೈತಪ್ಪಿ ಬಿದ್ದಂತೆ ಹರಡಿಕೊಂಡಿದ್ದವು. ನಾನು ಸಣ್ಣಕಿದ್ದಾಗಿನಿಂದ ಹೊಳೆದಾಸವಾಳ ಹಣ್ಣಿನ ಫ್ಯಾನು. ಇನ್ನೂ ಕೆಂಪಗಿದ್ದ ಹಣ್ಣೊಂದನ್ನು ಬಾಯಿಗೆ ಎಸೆದುಕೊಂಡೆ. ಒಗರು ಮಿಶ್ರಿತ ಸಿಹಿ ರುಚಿ ಕೊಟ್ಟಿತು. ಹಾವು ಮೂಸಿದಂತೆ ಸ್ವಲ್ಪ ಕಪ್ಪಗೆ ತಿರುಗಿದ್ದ ಹಣ್ಣುಗಳನ್ನು ಬಿಟ್ಟು ಉಳಿದವನ್ನು ತಿನ್ನುತ್ತಾ ಮುಂದೆ ಹೊಂಟೆ. ನಾಲ್ಕೈದು ಫರ್ಲಾಂಗು ದೂರದಲ್ಲಿ ಪಾರಿಯ ಸ್ಮಾರಕ ನೆಲ್ಲೀಮರ ಕಂಡಿತು. ಮರದ ಬುಡದಲ್ಲಿ ಏನನ್ನೋ ಎಳೆದಂತೆ ಕಾಣುತ್ತಿತ್ತು. ಆಗಲೇ ನೋಡಿ, ಆ ಮೂಗುಬೊಟ್ಟಿಗೂ, ಚೆಲ್ಲಿದ ಹೊಳೆದಾಸವಾಳ ಹಣ್ಣಿಗೂ, ಪಾರಿಯ ಸಾವಿಗೂ ಏನೋ ಲಿಂಕ್ ಇದೆ ಅಂತ ಡೌಟ್‌ ಬಂದಿದ್ದು.

ಈಗ ನನ್ನ ಪತ್ತೇದಾರಿ ಬುದ್ಧಿಗೆ ಕೆಲಸ ಸಿಕ್ಕಂತೆ ಕಂಡಿತು. ಮೊದಲಿಗೆ ಮೂಗುಬೊಟ್ಟು ದಾರಿಯಲ್ಲಿ ಸಿಕ್ಕಿದ್ದು; ಪಾರಿಯ ಶವ ತೆಗೆವಾಗ ಮರದ ಬುಡ್ಚಿಗೆ ತಲೆ ಜಪ್ಪಿ ಕಿವಿ ಹರಿದಿತ್ತಾದರೂ ಮೂಗಿಗೆ ಪೆಟ್ಟಾಗಿರಲಿಲ್ಲ. ಅಂದರೆ ಶವ ತೆಗೆದಾಗ ನಂತರ ಬಿದ್ದ ಮೂಗುಬೊಟ್ಟು ಅದಲ್ಲ. ಆಕೆ ಬಂಗಾರದ ಮೇಲೆ ಜಿಗುಪ್ಸೆ ಬಂದು ಮೂಗುಬೊಟ್ಟನ್ನು ಎಸೆದು ಹೋಗಿರಲಿಕ್ಕಿಲ್ಲ, ಯಾವ ಹೆಣ್ಣೂ ಹಂಗೆ ಬಂಗಾರದ ತುಂಡನ್ನು ಎಸೆಯುವುದು ಅಸಾಧ್ಯ! ನೆಲಕ್ಕೆ ಚೆಲ್ಲಿದ್ದ ಹೊಳೆ ದಾಸವಾಳ ಹಣ್ಣುಗಳು ಯಾರೋ ಮಕ್ಕಳು ಪಾರಿಯ ಕೊಲೆಯನ್ನು ನೋಡಿದ್ದಾರೆಂದು ಸೂಚಿಸುತ್ತಿದ್ದವು. ಹ್ಞೂಂ, ಶವವನ್ನು ನೋಡಿ ಹೆದರಿ ಹಣ್ಣುಗಳನ್ನು ಕೈಚೆಲ್ಲಿರುವ ಸಾಧ್ಯತೆಯಿದ್ದರೂ ಶವ ನೋಡಿದ ತಕ್ಷಣ ಯಾರಿಗಾದರೂ ಪಾರಿಯ ಕುರಿತು ಹೇಳಿರಬೇಕಿತ್ತು. ಆದರೆ ಲಕ್ಕುವಿಗೆ ಶವ ಕಾಣಿಸುವ ಮೊದಲು ಪಾರಿಯ ಸಾವಿನ ಕುರಿತು ಮತ್ಯಾರೂ ಮಾತನಾಡಿರಲಿಲ್ಲ. ಅಲ್ಲದೇ ಎಲೆಗಳು ಕೆದರಿದ ಜಾಗ, ಮೂಗುಬೊಟ್ಟು ಬಿದ್ದ ಜಾಗ ಪಾರಿಯ ಶವ ಸಿಕ್ಕ ಜಾಗಕ್ಕಿಂತ ಹತ್ತಿರದಲ್ಲಿದ್ದು, ಹಣ್ಣುಗಳು ಚೆಲ್ಲಿದ್ದ ಜಾಗದಿಂದ ಕಾಣುವಂತಿದ್ದವು. ಅಂದರೆ, ಮೂಗುಬೊಟ್ಟು ಬಿದ್ದ ಜಾಗದಲ್ಲೋ ಅಥವಾ ತೆರಕು ಕೆದರಿದ್ದ ಜಾಗದಲ್ಲೋ ಕೊಲೆ ನಡೆದಿದೆ, ಶವವನ್ನು ಅಲ್ಲಿಂದ ಸಾಗಿಸಿ ನೆಲ್ಲೀಮರಕ್ಕೆ ನೇಣು ಬಿಗಿಯಲಾಗಿದೆ!

ಇಷ್ಟು ತಿಳಿದಮೇಲೆ ಅರ್ಧರ್ಧ ಕೊಲೆ ಕೇಸು ಮುಗಿದಂತೆಯೇ. ಕೊಲೆಗಾರ ಯಾರು ಎಂಬುದನ್ನು ಕಂಡುಹಿಡಿಯುವುದೊಂದು ಬಾಕಿ. ರಜಾ ದಿನವಲ್ಲದಿದ್ದರೂ ಶಾಲೆಗೆ ಹೋಗದ, ಮಧ್ಯಾಹ್ನದ ಹೊತ್ತು ಬೆಟ್ಟವೇರಿದ ಮಕ್ಕಳು ಯಾರೆಂಬುದು ನನಗದಾಗಲೇ ತಿಳಿದಿತ್ತು. ಅವರನ್ನು ವಿಚಾರಿಸುವ ಮೊದಲೇ ಕೊಲೆಗಾರನ ಸುಳುಹು ನೀಡುವ ಏನಾದರೂ ಘಟನೆಗಳು ಇವೆಯೇ ಎಂದು ಯೋಚನೆ ಶುರುವಿಟ್ಟುಕೊಂಡೆ. ಶವ ಸಿಕ್ಕ ಸ್ಥಳದಲ್ಲಿ ಕೂಗಾಡಿದ ಪಾರಿಯ ಮೈದುನನ ಹೆಂಡತಿ? ಏನವಳ ಹೆಸರು, ಲಕ್ಷ್ಮಿಯೇ? ಅಕ್ಕನತಲೆ ಒಡೆದೆಯಲ್ಲೋ ಬೋ**ಮಗನೆ ಎಂದಿದ್ದೇಕೆ? ನೇಣು ಬಿಗಿದುಕೊಂಡು ಸತ್ತವಳ ತಲೆಗೆ ಪೆಟ್ಟುಬಿದ್ದರೆ ತಲೆ ಒಡೆದಂತೆಯೇ? ಶವ ಇಳಿಸುವಾಗ ಎಡವಟ್ಟು ಮಾಡಿದ ಪೊಲೀಸರಿಗೆ ಬೈದಿದ್ದರೆ ಏಕವಚನ ಇರುತ್ತಿರಲಿಲ್ಲವೇನೋ, ಮೂವರು ಸೇರಿಸಿ ಶವ ಇಳಿಸಿದರಲ್ಲವೆ? ಅವಳ ಗಂಡ? ಬಂಬೀಸರಕ್ಕೆ ಹೋದವ ಶವ ಪತ್ತೆಯಾದರೂ ಬಂದಿರಲಿಲ್ಲವೇಕೆ? ಲಕ್ಕುವಿನ ತಮ್ಮ ಪಮ್ಮನ ಮೇಲೆ ಶಂಕೆ ಮೂಡತೊಡಗಿತು.

ಶಾಲೆಗೆ ಚಕ್ಕರ್ ಹೊಡೆದ ಮಕ್ಕಳ ವಿಷಯ ಹೇಳಲಿಲ್ಲ ಅಲ್ಲವೇ? ಮತ್ಯಾರೂ ಅಲ್ಲ, ನಮ್ಮನೆಗೆ ಬಟ್ಟೆ ತೊಳೆಯಲು ಬಂದಿದ್ದ ಗೌರಿಯ ಮಕ್ಕಳು. ಬಟ್ಟೆ ತೊಳೆವಾಗ ಈ ಹುಡ್ರು ಶಾಲಿಗೆ ಕಳ್ಬೀಳ್ತಾವೆ, ಎಂತ ಮಾಡುದ ಏನೇನ ಅನ್ನುತ್ತಾ ನನ್ನಮ್ಮನೊಟ್ಟಿಗೆ ಗೊಣಗುತ್ತಿದ್ದುದ ಕೇಳಿಸಿಕೊಂಡಿದ್ದೆ. ಬೇಕೆಂದೋ ಅಥವಾ ಕದ್ದೋ ಅವರ ಸಂಭಾಷಣೆಯನ್ನು ಕೇಳಿಸಿಕೊಂಡಿಲ್ಲ ಮತ್ತೆ! ಹಂಗೇ ಆಕಳಿಗೆ ಹುಲ್ಲು ಹಾಕುವಾಗ ಕಿವಿಗೆ ಬಿತ್ತಷ್ಟೇ. ಪೊಲೀಸರಿಗೆ ಈ ಕೊಲೆ ಸಾಧ್ಯತೆಯ ಕುರಿತು ತಿಳಿಸಿ ಬರಹೇಳಿದೆ. ಬೆಟ್ಟ ಇಳಿದವನೇ ನೆಟ್ಟಗೆ ಗೌರಿಯ ಮನೆಗೆ ಹೋದೆ. ಗೌರಿಯ ಮಕ್ಕಳು ಹೇಡಿಗೆ ತುದಿಯಲ್ಲಿದ್ದ ಹೊಡಚಲಿನ ಬಳಿ ಅವರ ಅಪ್ಪ ದೇವನಿಗೆ ಒರಗಿ ಕುಂತಿದ್ದರು. ಕಿಸೆಯಲ್ಲಿ ಇಟ್ಟುಕೊಂಡಿದ್ದ ಹೊಳೆದಾಸವಾಳ ಹಣ್ಣುಗಳನ್ನು ತೆಗೆದು ಅವರ ಕೈಗಿಡುತ್ತಿದ್ದಂತೆಯೇ ಭಯದ ಛಾಯೆ ಅವರ ಮುಖದಲ್ಲಿ ಹಾದುಹೋಗಿ ಕೈಗಳು ಅಪ್ಪನ ತೋಳುಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸಿದ್ದವು. ದ್ಯಾವನಿಗೆ ಅದಾಗಲೇ ವಿಷಯ ತಿಳಿದಂತಿತ್ತು. ನನಗೆ ವಿಷಯ ತಿಳಿಸುವಷ್ಟರಲ್ಲಿ ಹವಾಲ್ದಾರ ಮಂಜಣ್ಣನ ಜೊತೆ ಪಿಎಸೈ ನವೀನ್‌ಕುಮಾರ್ ಗಾಡಿಯಿಳಿದು ಬಂದರು. ಇನ್ನೇನು ಹೇಳೋದು? ಪಾರಿಯ ಮನೆಗೆ ಹೋಗಿ ಪಮ್ಮನನ್ನು ಬಂಧಿಸುವುದಷ್ಟೇ ಬಾಕಿ. 

ಪಾರಿಯ ಮನೆಯಲ್ಲಿ ನಾವು ಹೋಗುವ ಮುನ್ನವೇ ಸಣ್ಣ ಯುದ್ಧವೊಂದು ನಡೆದಿತ್ತೇನೋ ಎಂಬಷ್ಟು ಮೌನವಿತ್ತು. ಲಕ್ಷ್ಮಿಯ ಮುಖ ಚುಮಣಿ ಬುರುಡೆಯ ಬೆಳಕಲ್ಲಿ ಉಗ್ರವಾಗಿ ಕಾಣುತ್ತಿತ್ತು. ಲಕ್ಕು ಹೇಡಿಗೆಯ ಮೇಲೆ ನಮ್ಮ ಬರುವಿಕೆಗೇ ಕಾಯುತ್ತಿದ್ದವನಂತೆ ಕುಂತಿದ್ದ. ಪಮ್ಮ ಎಲ್ಲಿ ಎಂದು ಕೇಳಿದಾಗ ಲಕ್ಷ್ಮಿಯೇ, “ಅದೇ ಅಲ್ಲವ್ನೆ ಬೋ**ಮಗ" ಎಂದು ಒಳಜಗುಲಿಯ ಕರಿ ಮೂಲೆಯತ್ತ ಬೆರಳು ತೋರಿಸಿದಳು. ಪಮ್ಮನ ಮುಸುಡಿಯಿಂದ ರಕ್ತ ಒಸರುತ್ತಿತ್ತು. ದೀರ್ಘವಾದ ಉಸಿರು ಎಳೆದುಕೊಳ್ಳುತ್ತಿದ್ದ, ಬಾಯಿಯಿಂದ ಲೋಕಲ್ಲು ವಿಸ್ಕಿಯ ವಾಸನೆ ಹೊಮ್ಮಿ ಬರುತ್ತಿತ್ತು. ಬಹುಶಃ ಎಡಗಾಲು ಮುರಿದಿತ್ತೇನೋ, ಪೊಲೀಸರು ಭುಜ ಹಿಡಿದು ಎಬ್ಬಿಸಿದರೂ ನಡೆಯಲಾಗಲಿಲ್ಲ. ಮಕ್ಕಳ ಹೇಳಿಕೆ, ಲಕ್ಷ್ಮಿಯ ಬೈಗುಳಗಳುಳ್ಳ ಸಾಕ್ಷಿಯನ್ನಾಧರಿಸಿ ಪಮ್ಮ ಜೈಲಿಗೆ ಹೋದ. ನಾನು ಪೂರ್ಣಪ್ರಮಾಣದ ಪತ್ತೇದಾರನಾಗಲು ತೀರ್ಮಾನಿಸಿದ್ದು ಹಿಂಗೆ ನೋಡಿ. ಹೆಂಗೆ ಪತ್ತೇದಾರಿಕೆ ಅಡ್ಡಿಲ್ಲವಾ?

ಓಹ್, ಮೋಟಿವ್! ಹೇಳಲು ಮರೆತಿದ್ದೆ. ಅಷ್ಟೇನು ಗಂಭೀರವೇನೂ ಅಲ್ಲದ ಕಾರಣಕ್ಕಾಗಿ ಪಾರಿ ಹೆಣವಾಗಿ ಹೋದಳು. ಪಾರಿಯ ಅಪ್ಪನ ಮನೆಯವರು ವರದಕ್ಷಿಣೆಯೆಂದು ಸಾಕಷ್ಟು ಬಂಗಾರವನ್ನು ನೀಡಿದ್ದರು. ಅತ್ತೆ ಹೋದಮೇಲೆ ಅಷ್ಟೂ ಬಂಗಾರದ ಹಕ್ಕು ಪಾರಿಗೇ ಸಿಕ್ಕಿತ್ತು. ಕುಡುಕ ಪಮ್ಮ ದುಡಿಮೆಯೂ ಇಲ್ಲದೆ ಚಟವನ್ನೂ ನಿಯಂತ್ರಿಸಿಕೊಳ್ಳದೆ ಹೆಂಡತಿಯ ಹಣ, ಬಂಗಾರ ಎಲ್ಲವನ್ನೂ ಖಾಲಿ ಮಾಡಿದ್ದ. ಮಲೆನಾಡಿನ ಮನೆಹಿಂಸೆಗೆ ಇದಲ್ಲದೇ ಮತ್ತೇನು ಕಾರಣವಿರಬಹುದು? ಏನೂ ಇಲ್ಲ ಬಿಡಿ. ಹಲವು ಬಾರಿ ಕೇಳಿದರೂ ಹಣ ಕೊಡಲಿಲ್ಲವಂತೆ. ಬೇಣದಮನೆ ನಾಣಯ್ಯನ ಕುರಿತಾದ ಗಾಸಿಪ್ ಹಬ್ಬಿಸಿ ಹೆದರಿಸಿದ, ಹಣ ಕೊಡಲಿಲ್ಲವಂತೆ. ಆವತ್ತೂ ಹಣ ಕೇಳಿರಬಹುದು, ಕೊಡದಿದ್ದಾಗ ಕುತ್ತಿಗೆ ಹಿಚುಕಿ ಹೆದರಿಸಹೋದ, ಸತ್ತೇಹೋದಳು. ಕುಡುಕ ಪಮ್ಮ ಪಾರಿ ಕಟ್ಟಿಗೆ ಕಟ್ಟಲೆಂದು ತಂದಿದ್ದ ಹಗ್ಗದಿಂದಲಾದರೂ ನೇಣು ಹಾಕಿದ್ದರೆ, ಮಕ್ಕಳಿಗೆ ಕಾಣದಂತೆ ಕುತ್ತಿಗೆ ಹಿಸುಕಿದ್ದರೆ ಬಚಾವಾಗುತ್ತಿದ್ದನೇನೋ. ಇಲ್ಲ ಬಿಡಿ, ನನ್ನಂಥ ಪತ್ತೇದಾರನ ಕಣ್ಣು ತಪ್ಪಿಸಿ ಕೊಲೆಗಾರ ಬಚಾವಾಗುತ್ತಾನಾ? ಸಾಧ್ಯವೇ ಇಲ್ಲ!

Comments

Popular posts from this blog

ಒಂದು ಭಾನುವಾರದ ಕತೆ

ಜಮೀನು, ಕೊಡದಲ್ಲ

ವಿದಾಯ...