ಕುಂಟಣೆ


ನಿಮಗೆ ಮೆರವಣಿಗೆ ಊರು ಗೊತ್ತಿರಬಹುದು. ಗೊತ್ತಿಲ್ಲವೆ? ಮೆರವಣಿಗೆ ರಾಮಣ್ಣ, ಮೆರವಣಿಗೆ ವೇದಕ್ಕ? ಛೆ, ನಿಮಗೆ ಮೆರವಣಿಗೆ ಬಗ್ಗೆ ಸ್ವಲ್ಪವಾದ್ರೂ ಗೊತ್ತಿರಲೇಬೇಕು. ಇತ್ತೀಚೆಗೆ ಭರ್ತಿ ಸುದ್ದಿಯಲ್ಲಿದ್ದ ಊರೇ ಗೊತ್ತಿಲ್ಲವೆಂದ್ರೆ ನೀವು ನ್ಯೂಸ್ ಚಾನಲ್‌ಗಳಲ್ಲಿ ಕೊರೊನಾ ಕಾಮೆಂಟರಿ ಮಾತ್ರ ಕೇಳ್ತಿದ್ರಿ ಅನ್ಸತ್ತೆ. ಇರ್ಲಿ ಬಿಡಿ, ಮೆರವಣಿಗೆ ಅನ್ನೋದು ಮಲೆನಾಡಿನ ಒಂದೂರು. ಇತ್ತೀಚೆಗೆ ಒಂದೆರ್ಡು ಸಾವುಗಳಿಂದ ಇಡೀ ಮಲೆನಾಡ ಭಾಗಕ್ಕೇ ಫುಲ್ ಫೇಮಸ್ ಆಗಿತ್ತು. ನೋಡಿ, ಬೇರೆ ಏನೋ ಹೇಳೋಕೆ ಬಂದೋನಿಗೆ ಮೆರವಣಿಗೆ ಬಗ್ಗೆ ಹೇಳೋ ಹಂಗಾಗಿದ್ದು ವಿಪರ್ಯಾಸವಲ್ವೆ?
ಅಷ್ಟೇನು ದೊಡ್ಡದಲ್ಲದ, ಚಿಕ್ಕದೂ ಅಲ್ಲದ ಊರದು. ಪಶ್ಚಿಮ ಘಟ್ಟದ ಎರಡನೇ ಹಂತದ ಗುಡ್ಡಗಳಡಿಗೆ ಸ್ಥಾಪಿತ ಪ್ರದೇಶ. ಹಸಿರು ಗುಡ್ಡಗಳ ಮಧ್ಯೆ ಅಡಿಕೆ ತೋಟ, ಭತ್ತದ ಗದ್ದೆ ಸರಗಳನ್ನು ಸುತ್ತಲೂ ಹಚ್ಚಿಕೊಂಡಿರೋ ಊರನ್ನ ನೋಡೋಕೆ ಒಮ್ಮೆಯಾದ್ರೂ ನೀವು ಹೋಗಲೇಬೇಕು. ಎಂಥ ಚೆಂದ ಉಂಟು ಗೊತ್ತುಂಟಾ! ಅಂಥ ಊರು ಸಿನಿಮಾ ಮಂದಿಯ ಕಣ್ಣಿಗೂ ಬಿದ್ದು ಶೂಟಿಂಗಿಗೆ ಅಂತಲೂ ಬಂದಿದ್ರಂತೆ. ಆದ್ರೆ ಅಲ್ಲಿಯ ಮಳೆಗೆ, ಮಣ್ಣು ರಸ್ತೆಗೆ, ಅಡಿಕೆ ಮುಂಡಿಯ ಸಾರಕ್ಕೆ ಶೂಟಿಂಗು ಅಂದ್ರೆಂತ ಪರಿಚಿತವಾ? ಸರೀ ಹಿಡ್ಕೊಂಡು ಕೊಟ್ಟ ಮಳೆಗೆ ಶೂಟಿಂಗೂ ಆಗ್ದೇ, ಬಂದ ಯುನಿಟ್ಟು ಮಂದಿ ವಾಪಾಸು ಹೋಗುವಾಗ ಟಿಟಿ ಗಾಲಿಗಳು ಎರಡಡಿ ಹೂಳಲ್ಲಿ ಹುಗಿದು ಬಿದ್ದು ಒದ್ದಾಡಿದ್ದೂ ಆಯ್ತಂತೆ. ಮತ್ತೆ ಈಬದಿಗೆ ಮುಖ ಹಾಕಲ್ಲ ಅಂತ ದೊಡ್ಡ ಮಂದಿಯೆಲ್ಲ ಕೈಮುಗಿದು ಹೋದ್ರಂತೆ ಅನ್ನೋದು ಮೆರವಣಿಗೆಯ ದಂತಕತೆ. ಯಾವತ್ತೋ ಫೇಮಸ್ಸು ಆಗ್ಬೇಕಿದ್ದ ಮೆರವಣಿಗೆ ಅಂತೂ ಇಂತೂ ಫೇಮಸ್ಸು ಆಗಲಿಕ್ಕಿತ್ತು, ಈ ರೋಗವೊಂದು ಬಂದು ಎಲ್ಲಾ ಬಂದ್ ಆಗದಿದ್ರೆ ನಿಮಗೂ ವಿಷಯ ಗೊತ್ತಾಗುತ್ತಿತ್ತು ಬಿಡಿ.
ಮೆರವಣಿಗೆಯ ಶಿರಿಯಣ್ಣ ಇಡೀ ಹೋಬಳಿಯಲ್ಲೇ ಸೆಕೆಂಡ್ ಹ್ಯಾಂಡ್ ಗಾಡಿಗಳ ಬಗ್ಗೆ ಜಾಸ್ತಿ ಮಾಹಿತಿಯುಳ್ಳ, ವ್ಯವಹಾರದಲ್ಲೂ ಅಗ್ದಿ ಫೇಮಸ್ ಆದ ಮನುಷ್ಯ. ಅವನ ಅಪ್ಪ ಅಷ್ಟೇನೂ ಫೇಮಸ್ಸಲ್ಲದ, ಇದ್ದಷ್ಟು ಸ್ವಲ್ಪ ಆಸ್ತಿಯನ್ನೇ ಚಟಗಳಿಲ್ಲದ ತನ್ನ ಶಿಸ್ತಿನ ಜೀವನದ ಆಧಾರಕ್ಕಾಗಿ ಬಳಸಿಕೊಂಡ ಸಾಮಾನ್ಯ ಮನುಷ್ಯ. ಇದ್ದೊಂದು ಮಗನಿಗೆ ಕುಲವಂತ ಹೆಣ್ಣನ್ನು ತಂದು ಮದುವೆ ಮಾಡಿಸುವ ಆಸೆಯಿದ್ದರೂ ತನ್ನ ದಂಧೆಯಲ್ಲಿ ಬೆಳೆಯಲು ಸಾಧ್ಯವಿದ್ದಷ್ಟು ಚಟ ರೂಢಿಸಿಕೊಂಡ, ದಂಧೆಯಲ್ಲಿ ಉಳಿಯಲು ಕೆಲ ಅನಗತ್ಯ ಸಂಪರ್ಕಗಳನ್ನೂ ಬೆಳೆಸಿಕೊಂಡ ಮಗನಿಗೆ ಎಲ್ಲಿಂದ ಹೆಣ್ಣು ತರುವುದೆಂಬ ಸಮಸ್ಯೆ ಗೋಪಜ್ಜನದಾಗಿತ್ತು. (ಹ್ಞಾಂ, ಗೋಪಜ್ಜ ಅಂದ್ರೆ ಶಿರಿಯಣ್ಣನ ಅಪ್ಪ!)
ಒಂದಿನ ಸಂಜೆ ಟೀವಿಯಲ್ಲಿ ಬಂದ ಮೋದಿ ಇಡೀ ದೇಶ ಬಂದ್ ಮಾಡಬೇಕು ಅಂದಿದ್ದು ನಿಮಗೆ ನೆನಪಿರಬಹುದು, ಮನೆಯಲ್ಲೇ ಇರಿ ಎಂದಿದ್ದನ್ನು ನೀವು ಮರೆಯದಿರೋದಕ್ಕೆ ಸಿಕ್ಕಾಪಟ್ಟೆ ಕಾರಣಗಳಿರಬಹುದು. ಅದನ್ನೆಲ್ಲಾ ನಂಗೆ ಕಂಡಂಗೆ ಹೇಳಿ ದೇಶದ್ರೋಹಿ ಅಂತಲೂ, ದೇಶ ಬಿಟ್ಟು ಹೋಗು ಅಂತನ್ನಿಸಿಕೊಳ್ಳಲೂ ಸದ್ಯಕ್ಕೆ ಉಮೇದಿಯಿಲ್ಲ. ಆದರೂ ನಿಮಗೆ ನೆನಪಿರಬೇಕಲ್ವೇ? 
ಮಾರ್ಚ್ ತಿಂಗಳ ಮಧ್ಯಭಾಗವದು. ಮನೆಯಲ್ಲಿ ತಂದಿಟ್ಟ ನಾಲ್ಕು ಗಾಡಿಗಳು ವ್ಯಾಪಾರವಾಗದ ಚಿಂತೆಯಲ್ಲಿ ಶಿರಿಯಣ್ಣನಿದ್ದ ಸಂಜೆಯದು. ಮೆರವಣಿಗೆಯ ಸಂಜೆ ಮೊದಲೆಲ್ಲ ಮಜಾ ಇರೋದು. ಮಾರ್ಚ್ ತಿಂಗಳ ಹೊತ್ತಿಗೆ ಇದ್ದಬಿದ್ದ ಅಡಿಕೆಯನ್ನೆಲ್ಲ ಮಾರಿ ದುಡ್ಡು ಮಾಡಿಕೊಂಡಿರುತ್ತಿದ್ದ ಗಂಡಸರು ಅಶ್ವತ್ಥಕಟ್ಟೆಯ ಬಳಿ ಕುಂತು ಕಪ್ಪಾಗುವವರೆಗೆ ಗಪ್ಪ ಹೊಡೆಯುತ್ತಿದ್ದರಂತೆ. ಊರಿಗೆ ಎಶ್ಟಿ ಗಾಡಿ ಬರಹತ್ತಿದ ಮೇಲೆ ಹರಟೆಕಟ್ಟೆಯು ಜಡಿತಟ್ಟಿಯ ಬಸ್ ತಂಗುದಾಣಕ್ಕೆ ಸ್ಥಳಾಂತರವಾಯ್ತು. ಪ್ಲಾಸ್ಟೀಕು ಇಸ್ಪೀಟೆಲೆಗಳು ಬಂದಮೇಲೆ ಚುಮ್ಣಿಬುರ್ಡೆಯ ಬೆಳಕಲ್ಲಿ ಅಹೋರಾತ್ರಿ ಆಟಗಳೂ ಶುರುವಾಗಿದ್ದವು. ಅಂಥ ಮಂಡಲದಲ್ಲಿ ಶಿರಿಯಣ್ಣ ರಾಶಿ ಅನುಭವಸ್ಥ ಕಲಾವಿದ. ಊರ ಹುಡುಗರೆಲ್ಲ ಕೆಲಸಕ್ಕೆಂದು ಪೇಟೆ ಸೇರಿದಮೇಲೆ ಶಿರಿಯಣ್ಣನ ಮನೆಯಲ್ಲಿ ಹಳೆ ಕಲಾವಿದರ ಸಮಾಗಮದಲ್ಲಿ ಆಟ ನಡೆಯುತ್ತಿತ್ತು. ಕಳೆದ ಮಳೆಗಾಲದಲ್ಲಿ ಮೆರವಣಿಗೆ ಹೊಳೆ ಕೊಚ್ಚಿಕೊಂಡು ಹೋದಮೇಲೆ ಕಲಾವಿದರಿಗೆ ಸಂಪರ್ಕದ ಕೊರತೆಯಾಗಿ ಶಿರಿಯಣ್ಣನ ಮನೆ ಕಂಬಳವೂ ಸ್ಥಗಿತಗೊಂಡಿದ್ದರಿಂದ ಈಗ ಗೋಪಣ್ಣ ಆಸಕ್ತಿಯಿಂದ ಟೀವಿ ನೋಡುತ್ತಿದ್ದರೆ; ಬೆಳಕಿರುವಷ್ಟು ಹೊತ್ತು ಶಿರಿಯಣ್ಣ ಅಂಗಳದಲ್ಲಿ ನಿಂತ ಬೈಕುಗಳ ಚೈನು ಪಾಕೀಟು, ಪೆಟ್ರೋಲು ಟ್ಯಾಂಕಿನ ಕರೀ ಪೈಪು ಬಿಚ್ಚುವುದು ಸೇರಿದಂತೆ ಸರಿಯಿರುವ ಎಲ್ಲವನ್ನೂ ಪರೀಕ್ಷಿಸುವ ಟೈಂಪಾಸು ಕೆಲಸದಲ್ಲಿ ನಿರತನಾಗಿರುತ್ತಿದ್ದ. ಹಿಂಗಿದ್ದೇ ಸಂಜೆಯಾಗಿತ್ತದು.
ಗೋಪಜ್ಜನಿಗೆ ಎದೆನೋವು ಬಂತೆಂದು ಆತನೇ ದೊಡ್ಡಕೆ ಕೂಗಿದ್ದ. ’ಅಯ್ಯೋ ಶಿರೀ, ಗೋಪಜ್ಜಂಗೆ ಎದೆನೋವು ಬಂತಡೋ’ ಅಂತ ತನ್ನ ಬಗ್ಗೆ ತಾನೇ ಕೂಗಿಕೊಂಡಿದ್ದು ಯಾಕೆಂದು ನನಗಂತೂ ಗೊತ್ತಿಲ್ಲ. ವಾಸ್ತುಪ್ರಕಾರ ನೆಟ್ವರ್ಕು ಬರುವಲ್ಲಿ ಕುಂತಿದ್ದ ನಾನೂ ಸಹ ಶಿರಿಯಣ್ಣನ ಮನೆಗೆ ಹೋಗಿ ಹೆಲ್ಪಿಸಬೇಕಾಗಿದ್ದು ನನ್ನ ಸಾಮಾಜಿಕ ಕಳಕಳಿಯ ಗುಣವೆಂದು ಹೇಳಬೇಕಿಲ್ಲ ತಾನೆ?
ಅಂತೂ ಗಪ್ಪತಿ ಭಟ್ಟರ ಮನೆಯ ಓಮ್ನಿ ಕಾರನ್ನು ಮಾಣಿ ಹೊಡೆದುಕೊಂಡು ಬಂದ, ಗೋಪಜ್ಜನನ್ನು ಆಸ್ಪತ್ರೆಗೆ ಒಯ್ಯಲು. "ಒಂದ್ ಗಾಡಿನೂ ಹೋಜಿಲ್ಲೆ, ಈಗೇ ಈ ಕರ್ಮ ಬ್ಯಾರೆ ಬಂತು" ಅನ್ನುತ್ತಲೇ ಗೋಪಜ್ಜನನ್ನು ಕಾರಿನ ಹಿಂಬದಿ ಸೀಟಲ್ಲಿ ತುರುಕಿ ತಾನು ಮುಂದೆ ಹತ್ತಿದ ಶಿರಿಯಣ್ಣ. ನಾನು ಅಲ್ಲಿ ನನ್ನ ಅಸ್ತಿತ್ವ ಹುಡುಕಿಕೊಳ್ಳುತ್ತ ಗೋಪಜ್ಜನ ಬದಿಗೆ ಕುಂತೆ.
ಚೆಕ್‌ಪೋಸ್ಟಿನಲ್ಲಿ ಕಾರು ನಿಲ್ಲಿಸಿ ಮಾಸ್ಕು ಹಾಕಿಲ್ಲವೆಂದು, ಅಂಬ್ಯುಲೆನ್ಸಿನಲ್ಲಿ ಬರಲಿಲ್ಲವೆಂದು ಪೊಲೀಸರು ದಬಾಯಿಸಿದರೂ, ಮಾನವೀಯತೆ ಇನ್ನೂ ಇದೆ (ಈಬಾರಿಯ ಮಳೆಗಾಲ ನೋಡಿದರೆ ಡೌಟು ಬರುತ್ತದಾ?) ಅನ್ನುವಂತೆ ದಂಡ ಹಾಕದೇ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ದಾರಿಯ ತುಂಬೆಲ್ಲ ಮಾಣಿಯು ತನ್ನ ವಾಟ್ಸಾಪಲ್ಲಿ ಬಂದ ಕೊರೊನಾ ಔಷಧದ ರೆಸಿಪಿಯನ್ನು ಶಿರಿಯಣ್ಣನ ತಲೆಗೆ ತುಂಬುತ್ತಿದ್ದರೆ ಶಿರಿಯಣ್ಣನಿಗೆ ಮಾತ್ರ ಮಾರಾಟವಾಗದ ತನ್ನ ಗಾಡಿಗಳದೇ ಚಿಂತೆಯಾಗಿತ್ತು. ಆಸ್ಪತ್ರೆಯ ಗೇಟಿನಲ್ಲೇ ಕೈಗೆ ಸ್ಯಾನಿಟೈಜರು ಹೊಯ್ದು, ತಲಾ ನೂರು ರೂ.ಗಳಂತೆ ಮಾಸ್ಕುಗಳಿಗೆ ದುಡ್ಡು ಸೊಗೆದು ಒಳಬಿಟ್ಟರು. ಆಸ್ಪತ್ರೆಯಲ್ಲಿ ನರಪಿಳ್ಳೆಯೂ ಇದ್ದಿರಲಿಲ್ಲ, ಕೊರೊನಾ ನಮ್ಮ ಜನರಲ್ಲೂ ಸಾಮಾನ್ಯ ಜ್ಞಾನ ತುಂಬುವಲ್ಲಿ ಯಶಸ್ವಿಯಾಗಿದೆಯೆಂದೇ ನಾನು ನಂಬಿದೆ.
ಮಧ್ಯಾಹ್ನ ತಿಂದ ಬಟಾಟೆ ಪಲ್ಯದ ಗ್ಯಾಸು ಕಟ್ಟಿದೆಯೆಂದು ಅದಾಗಲೇ ತೀರ್ಮಾನಿಸಿದ್ದ ಶಿರಿಯಣ್ಣ ಗಜಾನ್ನ ಡಾಕ್ಟರ ಅಪಾಯಿಂಟ್ಮೆಂಟು ತೆಗೆದುಕೊಂಡು ಅಪ್ಪಯ್ಯನನ್ನು ಅವರಲ್ಲಿ ಕೊಂಡೊಯ್ದ.
ತಾಸಿನ ಮೇಲೆ ಹೊರಬಂದ ಶಿರಿಯಣ್ಣನ ಬಳಿ ಗೋಪಜ್ಜನ ಅವಸ್ಥೆಯ ಬಗ್ಗೆ ವಿಚಾರಿಸಿದ್ದು ಮಾಣಿಯೇ. 
"ಆ ಸುಡ್ಗಾಡ್ ಕುಂಯ್ ಕುಂಯ್ ಗುಡ ಮಿಶನ್ನಿಗೆಲ್ಲಾ ಹಾಕಿ ನೋಡ್ದ್ವಾ ಸತ್ತವು. ಆಂಜಿಯೋಪ್ಲ್ಯಾಸ್ಟಿನ ಎಂತೋ ಮಾಡವು, ಹಾರ್ಟಲ್ಲಿ ಕಂಡಿ ಬಿಜ್ಜು ಎಲ್ಲಾ ಅಂದ್ವಪಾ. ಎಷ್ಟ್ ಹೆರೀತ್ವ ಎಂತ ಸುಡ್ಗಾಡನ" ಅನ್ನುತ್ತಲೇ "ಯನ್ ಮನಿಗ್ ಬಿಡು, ಗಾಡಿಗೆ ಗಿರಾಕಿ ಬಂಜ್ವಡಾ" ಅಂದು ಕಾರಿನೆಡೆಗೆ ಹೊಂಟೇಬಿಡಬೇಕೆ! ಎರಡು ನಿಮಿಷದ ಚರ್ಚೆಯ ನಂತರ ಸದ್ಯಕ್ಕೆ ನಾನು ಆಸ್ಪತ್ರೆಯಲ್ಲೇ ಉಳಿಯಬೇಕೆಂದೂ, ಎರಡು ತಾಸಿನೊಳಗೆ ತಾನು ವಾಪಸ್ಸು ಬರುತ್ತೇನಂತೂ ಹೇಳಿ ಮಾಣಿಯ ಜೊತೆ ಮೆರವಣಿಗೆಗೆ ಹೊಂಟ ಶಿರಿಯಣ್ಣ.
ಹಂಗೆ ಹೋದ ಮನುಷ್ಯ ಮಾರನೇದಿನ ಬೆಳಿಗ್ಗೆ ತನ್ನ ಹಳೇ ಸುಝುಕಿ ಗಾಡಿಯೇರಿ ಬರಬೇಕೇ! ರಾತ್ರಿಯ ಊಟ, ಬೆಳಗಿನ ತಿಂಡಿಯ ಖರ್ಚು ನಾನೇ ಭರಿಸಬೇಕಾಯ್ತು ಅನ್ನೋದಕ್ಕಿಂತ ಹೆಚ್ಚಾಗಿ ಫೆನಾಯಿಲ್ಲು ವಾಸನೆಯೊಂದಿಗೆ ರಾತ್ರಿ ಕಳೆಯಬೇಕಾಯ್ತಲ್ಲ ಅನ್ನೋ ಬೇಜಾರು ಜಾಸ್ತಿಯಾಗಿತ್ತು. "ನಿನಗೇ ಕಾಯ್ತಿದ್ದೆ ಮಾರಾಯ, ಶುಗರ್ರು ಚೆಕ್ ಮಾಡಿ ಇವತ್ತೇ ಆಪರೇಶನ್ನು ಮಾಡ್ತಾರಂತೆ" ಅಂದೆ ಶಿರಿಯಣ್ಣನ ಸ್ವಾಗತವಾಗಿ.
ಆವತ್ತು ಆಸ್ಪತ್ರೆ ಬಿಟ್ಟವ ಮತ್ತೆ ಆ ದಿಕ್ಕಿಗೆ ಮುಖ ಹಾಕಬಾರದೆಂದು ತೀರ್ಮಾನಿಸಿದ್ದೆ. ಆದರೆ ಎರಡು ದಿನಗಳಾದರೂ ಆಪರೇಶನ್ನೇ ಮಾಡದೆ ಐಸಿಯುನಿಂದ ವಾರ್ಡಿಗೆ, ವಾರ್ಡಿನಿಂದ ಐಸಿಯುಗೆ ಗೋಪಜ್ಜನನ್ನು ಸ್ಥಳಾಂತರ ಮಾಡುತ್ತಲೇ ಉಳಿದ ಆಸ್ಪತ್ರೆಯವರ ವಿರುದ್ಧ ರೊಚ್ಚಿಗೆದ್ದ ಶಿರಿಯಣ್ಣ ನನ್ನ ತೀರ್ಮಾನವನ್ನು ತಾನು ತೆಗೆದುಕೊಂಡು ಮನೆಗೆ ಬಂದುಬಿಟ್ಟ. ಮೊದಲೇ ನನಗೆ ಸಾಮಾಜಿಕ ಕಳಕಳಿ ಚೂರು ಜಾಸ್ತಿಯೇ. (ನನ್ನಮ್ಮನೂ ಆಗಾಗ ನನಗೆ ’ಮನೆಗೆ ಮಾರಿ, ಊರಿಗೆ ಉಪಕಾರಿ’ ಎಂದು ಬಯ್ಯುವುದರ ಮೂಲಕ ನನ್ನ ಗುಣಗಾನ ಮಾಡುತ್ತಿರುತ್ತಾಳೆ!) ಹಂಗಾಗಿ ಬುಲಾವು ಬಂದ ತಕ್ಷಣ ಆಸ್ಪತ್ರೆಗೆ ಹೋಗಿ ಕುಂತೆ. ಮಾಡುವುದೇನಿದೆ ಆಸ್ಪತ್ರೆಯಲ್ಲಿ? ಮೊಬೈಲು ತೆಗೆದು ಗೇಮು ಆಡುವುದು, ಬೇಜಾರು ಬಂದಾಗ ಪಿಚ್ಚರ್ರು ನೋಡುವುದು, ಸಿಸ್ಟರ್ರುಗಳಿಗೆ ಇಂಜೆಕ್ಷನ್ನು ನೀಡುವ ಸರಿಯಾದ ವಿಧಾನ ತಿಳಿಸುವುದು, ಇಷ್ಟೇ ಅಲ್ಲವೇ? ಮತ್ತೆರಡು ದಿನಗಳ ನಂತರ ಅಂತೂ ಆಪರೇಶನ್ನಿಗೆ ಮುಹೂರ್ತ ಕೂಡಿ ಬಂತೆನ್ನುವಂತೆ ಆಪರೇಶನ್ನು ಥಿಯೇಟರಿಗೆ ಗೋಪಜ್ಜನನ್ನು ಕೊಂಡೊಯ್ಯಲಾಯಿತು. ಶಿರಿಯಣ್ಣನಿಗೆ ಫೋನು ಮಾಡಿ ಆಸ್ಪತ್ರೆಗೆ ಬಾ ಮಾರಾಯ, ದುಡ್ಡುಗಿಡ್ಡು ಕೇಳಿದರೆ ಕೊಡಬೇಕಾಗುತ್ತದೆ ಎಂದು ಗೋಗರೆದು ಕರೆಸಿಕೊಂಡೆ. ಬಿಲ್ಲು ಸಹಜವಾಗಿ ಅದಾಗಲೇ ಲಕ್ಷ ರೂ. ಮೀರಿತ್ತು! ರೋಗಿಗಳ ಕೊರತೆಯಲ್ಲಿ ಬೇಜಾರಿನಲ್ಲಿದ್ದ ವೈದ್ಯರು ಅಪರೂಪಕ್ಕೆ ಆಸ್ಪತ್ರೆಗೆ ಬಂದಿದ್ದ ಗೋಪಜ್ಜನನ್ನು ತುಂಬಾ ಚೆನ್ನಾಗಿಯೇ ನೋಡಿಕೊಂಡಿದ್ದರು. ಇಲ್ಲೇಕೆ ಏಕ್ದಂ ಸಂತಾಪದ ನಮ್ನಿಯ ವಾಕ್ಯಗಳು ಬಂದವೆಂದು ಗೊಂದಲ ಪಡಬೇಡಿ, ನನಗೂ ಅಷ್ಟೇ, ಗೋಪಜ್ಜ ಸತ್ತ ವಿಷಯ ತಿಳಿದಿದ್ದು ತಡವಾಗಿಯೇ!
ಸಾಯುವ ಹೊತ್ತಿಗೆ ಗೋಪಜ್ಜನಿಗೆ ನಮ್ಮೂರಲ್ಲಿ ಅಪರೂಪವಾದ ಕೊರೊನಾ ಸೋಂಕು ಬಂದಿತ್ತೆಂದೂ, ಸಾಯಲು ಅದೂ ಕಾರಣವಿರಬಹುದು ಎಂದೂ ಹೇಳಲಾಯ್ತಾದರೂ ಅದೆಂತ ಮಳ್ಳೇ, ಇಷ್ಟು ದಿನ ಮನೆಯಲ್ಲೇ ಉಳಿದು ಒಂದು ವಾರ ಆಸ್ಪತ್ರೆಯಲ್ಲಿದ್ದವನಿಗೆ ಕೊರೊನಾ ಬರಲು? ಬಂದಿರಬಹುದು ಅಂತೀರಾ? ಸಾಧ್ಯತೆಯಿದೆಯಾ? ಸಾಯ್ಲಿ ,ಬೇಡ ಬಿಡಿ ಈ ಕಾಂಟ್ರಾವರ್ಸಿಗಳು.
ಗೋಪಜ್ಜನ ದೇಹವನ್ನು ತಪಾಸಣೆ ಮಾಡಲು ಆಸ್ಪತ್ರೆ ಸಮಯ ಕೇಳಿದ್ದರಿಂದ, ಅಂತ್ಯಕ್ರಿಯೆಗೆ ತಯಾರು ಮಾಡಬೇಕಿದ್ದರಿಂದ ಶವರಹಿತವಾಗಿ ಊರಿಗೆ ಹೋಗಬೇಕಾಯ್ತು. ಗೋಪಜ್ಜನ ಆಪ್ತರೆಲ್ಲ ಸೇರಿ ಮೆರವಣಿಗೆಯನ್ನಂತೂ ಮಾಡುವಂತಿಲ್ಲವಲ್ಲ... ದಾರಿಯಲ್ಲಿ ಹೋಗುತ್ತ ಶಿರಿಯಣ್ಣ ಮಾಣಿಗೆ ಹೇಳಿದ ಮಾತೊಂದು ಇಷ್ಟೆಲ್ಲ ಬರೆಯಲು ಒತ್ತಾಯ ಮಾಡಿದಂತಿತ್ತು. “ಮನುಷ್ಯನ ಬದುಕೇ ಇಷ್ಟು, ದುಡಿ, ಬದುಕು, ಖಾಲಿ ಮಾಡು, ಮತ್ತೆ ದುಡಿ, ಕೊನೆಗೆ ಸಾಯಿ. ಯಾಕೆ ದುಡಿಯಬೇಕು? ಎಷ್ಟು ದುಡಿದರೆ ಸಾಕು? ದುಡಿಯುವುದೇ ಬದುಕಾ? ನಮ್ಮ ಬದುಕಿಗೆ ನಾವೇ ಒಂದು ವ್ಯಾಖ್ಯಾನ ಬರೆದುಕೊಂಡು ಇದೇ ಬದುಕು ಎಂದು ನಂಬುತ್ತೇವೆ. ಮತ್ಯಾರಿಗೋ ಅದು ಬದುಕಾಗಿ ಕಾಣಿಸೋದಿಲ್ಲ. ಅಪ್ಪಂಗೆ ತೋಟ ಮಾಡುವುದೇ ಬದುಕಾಗಿತ್ತು, ನಂಗೆ ಗಾಡಿ ಮಾರುವುದೇ ಬದುಕು. ನನ್ನ ಬದುಕು ಅಪ್ಪಂಗೆ ನಾನು ಬದುಕಿದಂತೆಯೇ ಅನಿಸಿರಲಿಲ್ಲ. ಕಟ್ಟಿಗೆ ಕಣಿಯ ಮೇಲೆ ಹರಿದಾಡುವ ಕುಂಟಣೆಯೂ ನನ್ನಂತೆ ಕಾಣುತ್ತಿತ್ತು ಅವಂಗೆ. ಕುಂಟಣೆಗೆ ಮದುವೆ ಮಾಡಬೇಕಿತ್ತು ಅವ, ಮಾಡಲಿಲ್ಲ; ಆ ಬೇಲಿ ಗುಟ್ಟದ ಮೇಲೆ ಅವನಿಗೇ ವಿಶ್ವಾಸವಿರಲಿಲ್ಲವೋ, ಹೆಣ್ಣು ಕೊಡುವುದಿಲ್ಲವೆಂದು ನಂಬಿದ್ದನೇನೋ..."

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ