ಶುರು

  ಮಧ್ಯಾಹ್ನ ನಿದ್ರೆ ಜಾಸ್ತಿಯಾಯ್ತು, ಈಗ ನಿದ್ರೆ ಬರ್ತಿಲ್ಲ.  ಹಿಂಗೇ ನ್ಯೂಸ್ ಪೀಡೆಯ ಬುಡ ಕಾಣುತ್ತೇನೋ ಅಂತ ನೋಡ್ತಿದ್ದೆ...ನಾಲ್ಕೈದು ಹಳೆ ಸ್ನೇಹಿತರು ಯಾವತ್ತೋ ಬದಲಿಸಿದ ಪ್ರೊಫೈಲ್ ಪಿಕ್ಚರ್ರುಗಳು ಕಂಡ್ವು.
     ಬಹುತೇಕ ಎಲ್ಲರ ಡೀಪಿಗಳು ಪಾರ್ಮಲ್ ಅಂಗಿಗಳ ಒಳಗೆ ಅವರನ್ನ ಅಡಗಿಸಿಟ್ಟಿದ್ವು. ಹೊಟ್ಟೆ ಚೂರೇಚೂರು ದೊಡ್ಡದಾದ್ರೂ ಅಂಗಿಯಿಂದ ಬಿಡುಗಡೆಯಾಗುತ್ತವೇನೋ ಅನ್ವಂಗಿದ್ವು. ಲೈಕ್ ಒತ್ತದೇ ಅವರ ಪ್ರೊಫೈಲುಗಳನ್ನ ಚೆಕ್ಕಿಸಿದೆ. ಎಲ್ಲರದೂ ಒಂದೋ ದೊಡ್ಡ ಕಂಪನಿಯಲ್ಲಿ ಚಿಕ್ಕ ಜಾಬ್, ಚಿಕ್ಕ ಕಂಪನಿಯಲ್ಲಿ ದೊಡ್ಡ ಜಾಬ್ ಅಥವಾ ದೊಡ್ಡ ಚಿಕ್ಕ ಕಂಪನಿಗಳಲ್ಲಿ ದೊಡ್ಡ ಚಿಕ್ಕ ಜಾಬ್ಗಳಲ್ಲಿ ಇರೋದಾಗಿ ತೋರಿಸ್ತಿದ್ವು. ಆಗ ಅನ್ನಿಸಿದ್ದು, ನಾನೂ ಇಷ್ಟೊತ್ತಿಗೆ ಹಿಂಗಿರ್ಬೇಕಾಗಿತ್ತು ಅಲ್ವಾ ಅಂತ.
       ಆ ಕ್ಷಣಕ್ಕೆ ಹಂಗನ್ನಿಸಿದ್ರೂ...ಊಹೂಂ ಯಾವುದೋ ಕಲರ್ ಕಾಲರಿನ ಪಾರ್ಮಲ್ ಷರ್ಟಿಗಿಂತಾ ನನಗಿಷ್ಟವಾದ ಕಾಲರ್ಲೆಸ್ ಟೀ ಷರ್ಟನ್ನೇ ಹಾಕಿಕಿಳ್ತಿರೋ ನನಗೆ ಆತ್ಮ ತೃಪ್ತಿಯಿದೆ. ಹಂಗಂತ ಅವರಿಗಿಲ್ಲ ಅಂತಲ್ಲ, ಆ ಜಾಗದಲ್ಲಿ ನನ್ನನ್ನು ಕಲ್ಪಿಸಿಕೊಳ್ಳೋಕೆ ನನಗೆ ಅಸಾಧ್ಯ. ದೊಡ್ಡ ನಗರದಲ್ಲಿ ಬದುಕೋದೂ ನನ್ನಿಂದಾಗದ ಕೆಲಸ. ನನಗೆ ನನ್ನೊಬ್ಬನಿಗೇ ಕೇಳುವ ಎದೆಬಡಿತ ಇಷ್ಟವೇ ಹೊರತು ನನ್ನೊಳಗಿನ ಮಾತೂ ಕೇಳದ ನಗರದ ಗಲಾಟೆ ಊಹ್ಞೂಂ ಇಂಪಾಸಿಬಲ್.
      ಒಂದು ಜಾಬಿಗಾಗಿ ಊರು ಬಿಟ್ಟು ಪರದೇಸಿಯಾಗಿ ಬದುಕೋದಿದೆಯಲ್ಲಾ, ಅದರಷ್ಟು ಯಾತನೆ ಕಲ್ಪಿತ ನೆಲದಲ್ಲಿ ಇರಲಾರದೇನೋ. ಇಲ್ಲಿ ಮಾಲ್ಗಳಿಲ್ಲದಿರಬಹುದು, ಬದುಕನ್ನು ಮಾರುವ ಮಾರುಕಟ್ಟೆಗಳಿಲ್ಲದಿರಬಹುದು ಆದರೆ ಇಲ್ಲಿ ಹಸಿವು ಹುಟ್ಟಿಸುವ ಕೆಲಸಗಳಿವೆ,ಬದುಕ ಕಟ್ಟುವ ತಾಂತ್ರಿಕತೆಯಿದೆ. ಎಲ್ಲಕ್ಕಿಂತಾ ಹೆಚ್ಚಾಗಿ ಯಾರದೋ ಬಿಂಬವಲ್ಲದ ನಾನು ಬ‍ದುಕಬಲ್ಲ ಪರಿಸರವಿದೆ.
        ಪಟ್ಟಣದಲ್ಲೇನಿದೆ? ಅದ್ದೂರಿ ಬೌತಿಕ ಪರಿಸರವಿದೆ ನಿಜ, ಅಬ್ಬರದ ಬೆಳಕಿದೆ, ದಣಿವಾಗದ ನಿರ್ಜೀವ ಬೆಳಕು. ಇಲ್ಲಿ ಕತ್ತಲಿಗೂ ಜೀವವಿದೆ, ಹಳ್ಳಿಯ ಮಿಂಚು ಹುಳದ ನಗು ಪಟ್ಟಣದ ಜಿಗಿಜಿಗಿ ಬೆಳಕಿನ ಮುಂದೆ ಏನೂ ಅಲ್ಲ ಬಿಡಿ. ಬರೀ ಉತ್ಪಾದನೆಯ,ಪುನರುತ್ಪಾದನೆಯ ಪೇಟೆಗಿಂತ ಸೃಷ್ಟಿಯೇ ಕೆಲಸವಾಗುವ ಹಳ್ಳಿಯಲ್ಲೇ ನನ್ನ ಬದುಕು ಸುಂದರವಾಗಬಹುದು.
        ಮದ್ಯಾಹ್ನವಾಗುವ ಬೆಳಿಗ್ಗೆಯೆದ್ದು ಕೃತಕ ನಗುಹೊತ್ತು, ಇವರಿಗೂ....ಅವರಿಗೂ...ಅದರ ಇವುಗಳು ಎಂದು ವಿಷ್ಷಿಸುವ ಪಟ್ಟಣದ ಗೋಡೆಗಳ ತುಂಬ ಬಣ್ಣಗಳೇ. ಗೋಡೆಗೆ ಬಣ್ಣ ಬಳಿಯೋದು ಬಳೆಗೆ ಬಣ್ಣವಿಲ್ಲವೆಂದಾ? ಇವರು ಯಾರು?  ಅವನು ನಾನೇ! ನಾನೆ? ಅವನ್ಯಾರಲ್ಲೋ ನನ್ನ ಹುಡುಕುವೆನಾ? ಸಾಮ್ಯತೆಯ ಸಾವು. ಗೋಡೆಗೆ ಬಣ್ಣ ಬಳಿದಾಯ್ತು. ನನ್ನದಲ್ಲದ ಗೋಡೆಗೆ ನನ್ನದೇ ಬಣ್ಣ, ಬರೀ ಕಂಡಂತಾಯ್ತು. ಅವರಂದಂತೇ, ಇವರಂದಂತೇ...ಎಲ್ಲರಿಗೂ ಇದರ ಅವುಗಳು.

ಹೋಗು,
ಕಡಲಿದೆ ಕೆರೆದು
ಕರೆಯುತ
ಇರುವ ಮರಳಿದೆ ಕಾದು
ಕಾಲಿಡು...
ಓಡು,
ಜಗತ್ತು ನನ್ನದಲ್ಲ!
ದಾಟು,
ಬರೆದಿದೆ ಬದುಕು
ಒಡಲಲಿ, ಕಡಲ ಮಡಿಲಲಿ

ಕದಡಿದೆ ಅಲೆ,ಅಲೆಲೇ!
ಅತ್ತುಬಿಡು,
ಕುಬ್ಜ ಅಲೆಗಳಿಗೆ
ನೀರ ಸಾಲ ಬೇಕಿದೆ,
ಕಡಲಿಗೆ ಕಡ!
ಮಡಿದ ನೆನಪುಗಳ
ಮಡಿಚಿಟ್ಟ ಚಿತೆ,
ಅಡಿ ಮರಳ ಒಡಲಲಿ
ಹೂತಿಡು,
ಅಂತ್ಯವಿದು ಸಂಸ್ಕಾರ,
ವಿಧೇಯ ಸ್ವಪ್ನಗಳ
ಒಗೆದುಬಿಡು,
ಬದುಕು ಶುರು...
 ನಾನಂದಂತೆ, ನನಗೆ, ನನ್ನೊಬ್ಬನಿಗಾದರೂ ಇದರ ಇವುಗಳು.😊 😄 

Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ