ಅನಾಥಪ್ರಜ್ಞೆ

ಕುತ್ತಿಗೆಯ ನೆರಿಗೆಗಳನ್ನು ಲೆಕ್ಕ ಹಾಕಿದರೆ ಅರವತ್ತರ ಮೇಲೆ ದಾಟಬಹುದೇನೋ. ಅಜಮಾಸು ಅಷ್ಟೇ ವಯಸ್ಸಾದ ಅಜ್ಜಿಯವಳು. ಟಿವಿ ಕಪಾಟಿನ ಡ್ರಾವರಿಗೆ ಬೀಗ ಜಡಿದೂ ಮತ್ತೆ ಮತ್ತೆ ಭದ್ರತೆಯ ತಪಾಸಣೆ ಮಾಡುವಷ್ಟು ಅಭದ್ರತೆ ಅವಳನ್ನ ಕಾಡುತ್ತಿತ್ತು. ಅದರಲ್ಲಿ ಅಬ್ಬಬ್ಬಾ ಅಂದರೆ ಯಾವುದೋ ಕಾಲದ ತರಂಗವೋ, ಸುಧಾ ಮ್ಯಾಗಜೀನೋ ಇರಬಹುದಷ್ಟೇ! ಚಿಕ್ಕ ಚಿಕ್ಕ ವಸ್ತುಗಳೂ ತನಗೆ ನಿಽಯಷ್ಟೇ ಮುಖ್ಯ ಎಂಬಂತೆ ಜತನದಿಂದ ಕಾಯ್ದುಕೊಳ್ಳುವ ಅಭ್ಯಾಸ ಆಕೆಗೆ ಇತ್ತೀಚೆಗಷ್ಟೇ ಶುರುವಾದದ್ದು; ಇರದ ಮಕ್ಕಳನ್ನು ಇವಳಿಗೆ ಬಿಟ್ಟು ಗಂಡನೂ ಹರನ ಪಾದ ಸೇರಿದಾಗಿನಿಂದ...

ಗಡಿಹನಿ ಹತ್ತುವ ವೇಳೆಗೆಲ್ಲ ಊರ ಉಳಿದ ಮಂದಿ ಬಾಳೆಹೆಡೆ ಮಾಡಿ ಅಡಿಕೆಗೊನೆಗಳಿಗೆ ತುತ್ತ-ಸುಣ್ಣವನ್ನೋ, ಬಯೋಪಾಯ್ಟನ್ನೋ ಹೊಡೆಯಲು ತಯಾರಾಗುತ್ತಿದ್ದರೆ ಸಾವಿತ್ರಜ್ಜಿ ಬೆಳೆಸಾಲಕ್ಕೆ ಅರ್ಜಿ ಹಾಕುವುದೂ ಬಗೆಹರಿಯದೆ, ಕೊನೆಗೌಡನ ಹುಡುಕಾಟವೂ ಕೊನೆಗಾಣದೆ ಹೇಡಿಗೆಯ ಮೇಲೆ ಕುಂತು ಸೆರಗಿನ ತುದಿಯಲ್ಲಿ ಗಾಳಿ ಬೀಸಿಕೊಳ್ಳುತ್ತಿದ್ದಳು.

ಇಂಥ ದಿನಗಳು ಶುರುವಾಗಿದ್ದು ಎಲ್ಲಿಂದ? ಪ್ರಶ್ನೆಯಾಗಿ ನೆನಪುಗಳು ಬರುತ್ತಿದ್ದರೆ ಗಾಳಿ ಬೀಸುತ್ತಿದ್ದ ಸೆರಗೂ ನಿಷ್ಕ್ರಿಯವಾಗಿತ್ತು. ಮೊಗೆ ಓಳಿಗೆ ನೀರು ಹೊಯ್ಯಲು ಹೋಗಿದ್ದ ಮಗ ಥಿಮೇಟು ಕರಡಿ ಕುಡಿದಿದ್ದು, ಬಯಲುಸೀಮೆಯ ಸೊಸೆ ಮಲೆನಾಡ ಕೃಷಿ-ಬದುಕಿಗೆ ಒಗ್ಗದೇ ತನ್ನ ಮಗಳೊಟ್ಟಿಗೆ ತವರಿಗೆ ಹೋಗಿದ್ದು, ಇದ್ದೊಬ್ಬ ಗಂಡನೆಂಬ ಪ್ರಾಣಿ ಸಂಭಾವನೆಯ ಆಸೆಗೆ ಮನೆಯ ಜವಾಬ್ದಾರಿ ತೊರೆದು ಊರೂರು ತಿರುಗಲು ಹೋಗಿದ್ದು... ಹಾಗೆಯೇ ಪರಂಧಾಮಗೈದಿದ್ದು... ಕಳೆದ ಮೂರು ವರ್ಷಗಳಲ್ಲಿ ನಡೆದದ್ದೆಲ್ಲವೂ ಸಾವಿತ್ರಮ್ಮನ ಪ್ರಾಯದ ದಿನಗಳ ವೈರುಧ್ಯವೇ. ಅಪರೂಪಕ್ಕೆ ಬರುವ ಹೆಣ್ಣುಮಕ್ಕಳೂ ಮೊದಲ ದಿನ ಸಾಂತ್ವನ ಹೇಳಿದರೆ ಹೊರಡುವ ದಿನ ಆಸ್ತಿಯನ್ನು ಪರಭಾರೆ ಮಾಡಲು ಗಡುವು ನೀಡುತ್ತಿದ್ದುದು ಇವಳ ನಿರ್ಣಯಗಳಲ್ಲಿ ದ್ವಂದ್ವ ಹುಟ್ಟಿಸುವಂಥ ವಿಷಯ. ಇದ್ದಿಬ್ಬರು ಹೆಣ್ಣುಮಕ್ಕಳಿಗೆ ಹಂಚಿ ಖುಷಿ ಪಡುವಷ್ಟು ಅಡಿಕೆ ತೋಟವಿರಲಿಲ್ಲ. ಎಂಟತ್ತು ಗುಂಟೆ ತೋಟ, ಅರ್ಧ ಎಕರೆ ಗದ್ದೆಗಾಗಿ ಇಬ್ಬರ ಗಂಡಂದಿರೂ ಬಡಿದಾಡುವುದನ್ನೇ ನೋಡಲಿಕ್ಕೆ ತಾನು ಬದುಕಿದ್ದೇನೆಂಬ ನಂಬಿಕೆ ಸಾವಿತ್ರಮ್ಮನದಾಗಿತ್ತು.

ಸಾವಿತ್ರಮ್ಮ ಇನ್ನೂ ಮನೆಯ ಸೊಸೆ ಸಾವಿತ್ರಿಯಾಗಿದ್ದಾಗ ತುಂಬು ಕುಟುಂಬ. ಮಾವ, ಅತ್ತೆ, ಇಬ್ಬರು ಬಾವಂದಿರು, ಅತ್ತಿಗೆಯರು; ಅವರ ಮಕ್ಕಳು. ಮಾವನಿಗೆ ಇದ್ದ ಮೂರೆಕರೆ ಬಾಗಾಯ್ತದಲ್ಲಿ ಜೀವನ ಕಷ್ಟವೇನೂ ಅಲ್ಲವಾಗಿತ್ತು. ಆಗಷ್ಟೇ ಮಕ್ಕಿಗದ್ದೆಯನ್ನು ಹೊಸತೋಟವೆಂದು ಕರೆಯುವಷ್ಟು ವಾಣಿಜ್ಯ ಬೆಳೆಯ ಆಕ್ರಮಣ ಶುರುವಾಗಿತ್ತು. ಅಡಿಕೆ ರೇಟು ತೀರಾ ಹೆಚ್ಚಿಲ್ಲದಿದ್ದರೂ ಭತ್ತ ಮಾರಿದರೆ ದಕ್ಕುತ್ತಿದ್ದ ಹಣಕ್ಕಿಂತ ಹೆಚ್ಚಿತ್ತು. ಮನೆಯ ಅಣ್ಣ-ತಮ್ಮಂದಿರಲ್ಲಿ ವ್ಯಾಜ್ಯ ಹುಟ್ಟಿದ್ದೇ ಈ ಹೊಸ ಬೆಳೆಯ ಲೋಭದಿಂದ ಎಂದು ಸಾವಿತ್ರಮ್ಮನಿಗೆ ಅನಿಸೋಕೆ ಶುರುವಾಗಿದ್ದು ಇತ್ತೀಚೆಗಷ್ಟೇ. ಮನೆ ಸೊಸೆಯಂದಿರೇ ತಮ್ಮ ಗಂಡಸರ ತಲೆ ತಿರುಗಿಸಿ ಹಿಸೆ ಪಡೆದಿದ್ದೆಂದು ಇಡೀ ಊರಿಗೆ ನಂಬಿಸಿದ್ದು ತನ್ನ ಅತ್ತೆಯೇ. ಆದರೆ ಅದರಲ್ಲಿ ಸುಳ್ಳೆನಿಸುವುದು ಏನಿತ್ತು? ಆಗಷ್ಟೇ ಫಲ ಬಿಡುತ್ತಿದ್ದ ತೋಟ ಆಸೆ ಹುಟ್ಟಿಸಿತೆಂದು ತಾನು ಹೇಳಬಹುದಷ್ಟೇ! ಇದ್ದ ಮೂರೆಕರೆಯನ್ನು ಆರು ಭಾಗ ಮಾಡಿ ಮಕ್ಕಿತೋಟದ ಪಾಲನ್ನು ದೊಡ್ಡ ಬಾವ ಪಡೆದಾಗ ನ್ಯಾಯ ಮಾತಾಡುವ ಮಂದಿ ಎಲ್ಲಿದ್ದರೋ? ಹೀಗೆಲ್ಲ ದೊಡ್ಡ ಧ್ವನಿಯಲ್ಲಿ ಊರನ್ನು ಪ್ರಶ್ನಿಸಬೇಕೆಂದರೆ ಕೇಳುವವರು ಯಾರು? ಆ ಹಿಸೆ ಪಂಚಾಯತಿ ಮಾಡಿದ್ದವರಲ್ಲಿ ಬೇಣದ ಮನೆಯ ರಾಮಣ್ಣನನ್ನು ಬಿಟ್ಟರೆ ಈಗ್ಯಾರೂ ಇಲ್ಲ. ಅವನಾದರೂ ಮಾತನಾಡುವಷ್ಟು ಗಟ್ಟಿಯಿದ್ದರೆ ಪ್ರಶ್ನೆ ಮಾಡಿಬಿಡುತ್ತಿದ್ದೆ, ಅವನದೂ ನನ್ನದೇ ಸ್ಥಿತಿಯಲ್ಲವೆ?

 ರಾಮಣ್ಣನ ನೆನಪಾದ ಮೇಲೆ ಅವನ ಮನೆಗೊಮ್ಮೆ ಹೋಗಬೇಕೆಂಬ ನಿರ್ಣಯವೊಂದು ಮೂಡಿತ್ತು. ನಿನ್ನೆಯಷ್ಟೇ ಮುಗಿದ ಸೂತಕ, ನೆರವಿನ ಮಜ್ಜಿಗೆಯ ಎರವಲು ಸೂಕ್ತ ನೆಪವನ್ನೂ ನೀಡಿತ್ತು. ಸಾವಿತ್ರಮ್ಮ ಬಹುತೇಕ ಅನಾಥಳಾದ ಮೇಲೆ ರಾಮಣ್ಣನ ಮನೆಗೆ ಭೆಟ್ಟಿಯಿಡುವುದು ಆಕೆಗೆ ವಿಕೃತ ಸಂತೋಷವೇನನ್ನೋ ನೀಡುತ್ತಿತ್ತು. ತನ್ನ ಇಂದಿನ ಈ ಸ್ಥಿತಿಗೆ ರಾಮಣ್ಣನೂ ಅನೇಕ ಕಾರಣಗಳಲ್ಲೊಬ್ಬನೆಂಬ ದೃಢ ನಂಬಿಕೆ ಸಾವಿತ್ರಮ್ಮನದು. ಮೂವತ್ತೈದು ವರ್ಷಗಳ ಹಿಂದೆ ಹಿಸೆಯೆಂಬ ಪ್ರಹಸನ ನಡೆಯದಿದ್ದರೆ ತಾನಿವತ್ತು ಒಂಟಿ ಜೀವನ ನಡೆಸಬೇಕಿರಲಿಲ್ಲ ಎಂಬುದೊಂದು ಕಾರಣವೇ ಇರಬಹುದು, ಗೊತ್ತಿಲ್ಲ.

ರಾಮಣ್ಣನ ಮನೆಗೆ ಹೋದರೆ ಆಕಳ ಕೂಗಿಲ್ಲ, ಕೊಟ್ಟಿಗೆಯ ಬಳಿ ಚಂದ್ರ ತಂದುಹಾಕುತ್ತಿದ್ದ ಹುಲ್ಲಿನ ಹೊರೆಯಿಲ್ಲ. ಹಿತ್ತಲ ಬಾಗಿಲು ಒಳಗಿಂದ ಮೀಡ ಹಾಕಿಕೊಂಡಿತ್ತು. ರಾಮಣ್ಣಾ ಎಂದು ಕರೆದಾಗ ‘ಎದ್ರಿಗ್ ಬಾರೇ’ ಎಂಬ ಪ್ರತಿಕೂಗು ರಾಮಣ್ಣನ ಮನೆಯ ಅರ್ಧ ಪ್ರದಕ್ಷಿಣೆ ಹಾಕುವಂತೆ ಮಾಡಿತ್ತು. ಟಿವಿಯಲ್ಲಿ ಅಡ್ವರ್ಟೈಸು ಮಾಡುವ ಯಾವುದೋ ಸುಡಗಾಡು ಎಣ್ಣೆಯನ್ನು ಮೊಣಕಾಲಿಗೆ ಆಗಷ್ಟೇ ಮೆತ್ತಿಕೊಂಡಿದ್ದ ರಾಮಣ್ಣ, “ಮಳ್ಕಂಡೆ ನೋವೆ... ಸಾಯ್ಲಿ" ಎನ್ನುತ್ತಲೇ ಸಾವಿತ್ರಮ್ಮಳನ್ನು ಆಹ್ವಾನಿಸಿದ.

“ಅಲ್ದಾ, ಆಕ್ಳು, ಕರ ಎಲ್ಲಾ ಎಂತ ಬಿಟ್ಟಾಕಿದ್ಯನಾ? ಕಾವ್ಲಿಗೆ ಯಾರ್ ಬಂಜ?" ಎಂಬ ಪ್ರಶ್ನೆ ಅವಳ ಕೈಲಿದ್ದ ಗಿಂಡಿಯನ್ನು ನೋಡುವಂತೆ ರಾಮಣ್ಣನನ್ನು ಪ್ರೇರೇಪಿಸಿತ್ತು.

ಸುಡುಗಾಡು ಕಾಲುನೋವಿನ ದೆಸೆಯಿಂದ ನಿನ್ನೆ ಆಕಳನ್ನು ಮಾರಿದ್ದಾಗ್ಯೂ, ನೆರವಿಗೆ ಮಜ್ಜಿಗೆ ಬೇಕಾದರೆ ತುರ್ತಕ್ಕೆ ಸಿಗಬಹುದೆಂದೂ ಹೇಳಿ ಸಾವಿತ್ರಮ್ಮನ ಕೈಯಿಂದ ಗಿಂಡಿಯನ್ನು ತೆಗೆದುಕೊಂಡ. (ಇವಿಷ್ಟನ್ನೂ ಅವರ ಸಂಭಾಷಣೆ ರೂಪದಲ್ಲೇ ಹೇಳಿದ್ದರೆ ಹವ್ಯಕ ಭಾಷೆ ಪೂರ್ತಿಯಾಗಿ ಅರ್ಥವಾಗದ ನೀವು ಕೆಲವರಾದರೂ ನನ್ನನ್ನು ಪ್ರಶ್ನಿಸುವುದಿಲ್ಲವೆ!?)

ನೆರವಿನ ಮಜ್ಜಿಗೆ ನೆರವು ಕೇವಲ ನೆಪವಾಗಿತ್ತಲ್ಲವೆ ಸಾವಿತ್ರಮ್ಮಳಿಗೆ? ಮಜ್ಜಿಗೆ ಗಿಂಡಿ ವಾಪಸ್ಸು ಬಂದಮೇಲೆ, “ಅಲ್ದಾ ರಾಮಣ್ಣಾ, ಗೋಗ್ರಾಸ ಕೊಡಲೆ, ಗೋಪೂಜೆ ಮಾಡಲಾದ್ರೂ ಒಂದ್ ಆಕ್ಳ್ ಇರಡ್ದನಾ ಮನ್ಯಂಬಲ್ಲಿ?" ಎಂದು ರಾಮಣ್ಣನ ಅಸಹಾಯಕತೆಯನ್ನು ಕುಹುಕವಾಡುತ್ತ, ಅವನ ಬ್ರಾಹ್ಮಣ್ಯವನ್ನೂ ಪ್ರಶ್ನಿಸಿದಳು ಸಾವಿತ್ರಮ್ಮ.

“ಕೈಯಲ್ಲಾದ್ರೆ ಎಲ್ಲಾ ಶಾಸ್ತ್ರನೂ ಮಾಡವು. ಆಗಗಿದ್ದಾಗ ಬದ್ಕಲೆ ಯಾವ್ದು ಸಸಾರನ ಅದ್ರ ಮಾಡವು. ಈಗ್ ನಿನ್ನೇ ನೋಡು, ವೆಂಕಜ್ಜ (ಸಾವಿತ್ರಮ್ಮಳ ಮಾವ) ಇದ್ದಾಗ ಅಷ್ಟ್ ಛಲೋ ತ್ವಾಟ ಮಾಡ್ದಾ, ನಿಂಗ್ಳತ್ರ ಈಗ ಮಾಡು ಅಂದ್ರೆ ಮಾಡಲಾಗ್ತ? ಅದ್ಕಾಗೇ ಹಿರ್ಯನಿಕ್ಕ ಹೇಳಿದ್ದ, ಪಡ್ದಿದ್ದುಂಡ್ತ್ಯೋ ದುಡ್ದಿದ್ದುಂಡ್ತ್ಯೋ ಹೇಳಿ" ಎಂದು ಸಾವಿತ್ರಮ್ಮಳಿಗೆ ಅವಳ ಜಾಗ ತೋರಿಸಿದ್ದು ರಾಮಣ್ಣ ಇನ್ನೂ ತನ್ನ ಪಂಚಾಯ್ತಿ ಜಾಣತನವನ್ನು ಕಳೆದುಕೊಂಡಿಲ್ಲ ಎಂದು ಸೂಚಿಸಿತ್ತು.

“ಅದೂ ಹೌದು ಹೇಳು. ನಮ್ಮತ್ರ ಮಾಡಲಾಗ್ತಿಲ್ಲೆ, ಮಕ್ಕಕ್ಕೆ ಬೇಕಾಜಿಲ್ಲೆ. ಯಂಗಾರೆ ಮಗ್ನೂ ಇಲ್ಲೆ ಹೇಳಾತು. ನಿನ್ ನೋಡು, ಮಗ್ನ ಛಲೋ ಓದ್ಸಿ ಕಲೆಕ್ಟರ್ ಮಾಡಿದ್ದೆ. ಅವ ದುಡ್ ಕಳ್ಸ್ತಾ, ಮ್ಯಾಲಿಂದ ಅಡ್ಕೆ ದುಡ್ಡೂ ಬತ್ತು. ಅರಾಮ್ ಇದ್ದೆ" ಎನ್ನುತ್ತ ತಾನು ಶರಣಾದೆ, ನೀನೂ ಶರಣಾಗು ಎಂಬ ಸಂದೇಶ ಕಳುಹಿಸಿದಳು ಸಾವಿತ್ರಮ್ಮ.

“ಎಂತಾ ಅರಾಮನ, ಮಾರಾಯ್ತಿ. ಸಂಜ್ಯಾದ್ರೆ ಮಳ್ಕಂಡೆ ನೋವು. ಬೆಳ್ಗಾದ್ರೆ ಅಡ್ಗೆ ಮಾಡ್ಕಂಬ್ಲೂ ಅಟಾಪಿರ್ತಿಲ್ಲೆ. ಯಂದೇ ಕೈ, ಯಂದೇ ಬಾಯಿ ಹೇಳಿ ಸುಮ್ನಿಪ್ಪದೆಯಾ. ಪಮ್ಮ ಮೊನ್ನೆ ಒಂದ್ನಾಕ್ ಮಗೆಕಾಯಿ ತಂದ್ಕೊಡಗಿದ್ರೆ ತೆಳ್ಳೇವ್ ಮಾಡ್ಕಂಬ್ಲೂ ಆಗ್ತಿತ್ತಿಲ್ಲೆ. ಎಷ್ಟ್ ದಿನಾ ಹೇಳಿ ಒಣಾ ಅವ್ಲಕ್ಕಿ ತಿನ್ನಲಾಗ್ತು ನೀನೇ ಹೇಳು. ಮಗರಾಯ ಅಂತೂ ವಾರಕ್ಕೊಂದ್ ಫೋನ್ ಮಾಡಿ ಗುಳ್ಗೆ, ಔಷಧಿ ತಗಂಡ್ಯ ಕೇಳ್ತಾ, ಮೊಮ್ಮಗ್ಳತ್ರ ವಿಡಿಯೋ ಕಾಲ್ ಮಾಡ್ಸ್ತಾ. ಜೀವಂತ ಇಪ್ದೇ ಜೀವನ ಆಗೋಜು. ಒಂದೊಂದ್ಸಲ ಎಂತಕ್ಕಾರೂ ಮಕ್ಳ ಇಷ್ಟೆಲಾ ಓದ್ಸಿದ್ನನ ಕಾಣ್ತು. ನಮ್ಗ್ ಅರಾಮಿರತನ್ಕ ಮಕ್ಕ ಬೆಂಗ್ಳೂರಲ್ಲಿದ್ದ, ದಿಲ್ಲೀಲಿದ್ದ, ಅಮೇರಿಕ್ದಲ್ಲಿದ್ದ ಹೇಳ್ಕಂಬದು ಹೆಮ್ಮೆ, ಅಹಂಕಾರ. ಹಾಶ್ಗೆ ಹಿಡ್ದಾದ್ಮೇಲೆ ಮಕ್ಕ ಮನೆಲಿಲ್ಲೆ ಹೇಳದೇ ಕೊರ್ಗಾಗ್ತು." ಎಂದು ವಯಸ್ಕರ ಅಳಲಿಗೆ ಧ್ವನಿಯಾದ ರಾಮಣ್ಣ.

ಸಾವಿತ್ರಮ್ಮನಿಗೆ ಮನದ ಮೂಲೆಯಲ್ಲೆಲ್ಲೋ ಖುಷಿಯಾಯ್ತು. ಅದರೊಟ್ಟಿಗೇ ರಾಮಣ್ಣ ಇವತ್ತೇ ಅಷ್ಟೂ ಕಷ್ಟಗಳ ಪಟ್ಟಿ ಕೊಟ್ಟರೆ ನಾಳೆಯ ಮನರಂಜನೆಗೆ ವಿಷಯ ಸಿಗುವುದಿಲ್ಲವೆಂಬ ಅರಿವೂ ಆಯ್ತು.

“ಎಲ್ಲಾ ನಾವ್ ಪಡ್ಕಬಂದಂಗೆ ಆಗ್ತು ಬಿಡಾ ರಾಮಣ್ಣಾ. ನಿಂಗಾರೆ ಔಷಧಿ ತಗ ಹೇಳಲಾದ್ರೂ ಜನ ಇದ್ದ. ನನ್ ನೋಡು. ನಾ ಇವತ್ತೇ ಸತ್ತೋದ್ರೆ ಎಂಟ್ ಗುಂಟೆ ತ್ವಾಟ ಆದ್ರೂ ಸಿಗ್ತು ಹೇಳಿ ನಾ ಹೆತ್ತವೇ ಕಾಯ್ತಾ ಇದ್ದ. ಇದ್ದಷ್ಟ್ ದಿನ ನೋಡದು. ನಾವೆಂತ ತಗಂಡೋಗ್ತ್ವನಾ ಇದ್ರೆಲ್ಲಾವಾ? ಯಮ್ಮನೆ ಸರೋಜನ್ ಮಗ್ಳು ಟಿವಿಗೆ ದುಡ್ ತುಂಬ್ತಿ ಹೇಳಿದ್ದು, ತುಂಬಿದ್ದ ಎಂತದನ. ಕಪ್ಪಾದ್ರೆ ಅದ್ಕೆ ಶಿಗ್ನಲ್ಲೂ ಸಿಗ್ತಿಲ್ಲೆ. ಹೋಗ್ನೋಡ್ತಿ ಅಕಾ" ಎನ್ನುತ್ತ ರಾಮಣ್ಣನಿಗೆ ಮತ್ತೆ ಮಾತಾಡಲು ಅವಕಾಶವನ್ನೂ ನೀಡದೆ ಮನೆಗೆ ಹೊಂಟಳು.

ದಾರಿಯಲ್ಲಿ ಮತ್ತವೇ ಜಿಜ್ಞಾಸೆಗಳು. ನಾವು ಯಾವುದಕ್ಕಾಗಿ ಬದುಕಿದೆವು? ಹಿಡಿ ಸಂತೋಷವೂ ಸಿಗದಷ್ಟು ವೃದ್ಧಾಪ್ಯ ನಮ್ಮ ಯಾವ ಕರ್ಮದ ಫಲ? ಮಕ್ಕಳನ್ನು ಸರಿಯಾಗಿ ಬೆಳೆಸದ ನನ್ನ ಜೀವನ ಹೀಗಾಯ್ತು, ಮಕ್ಕಳಿಗೆ ಒಳ್ಳೆ ಶಿಕ್ಷಣ, ಜೀವನ ಕೊಟ್ಟ ರಾಮಣ್ಣನ ಬದುಕು ನನ್ನದಕ್ಕಿಂತ ಹೇಗೆ ಭಿನ್ನ? ಒಳ್ಳೆಯದು, ಕೆಟ್ಟದರ ವ್ಯತ್ಯಾಸವೇ ಅರಿಯದ ಅರವತ್ತು ವರ್ಷಗಳ ಬದುಕು ಯಾವ ಪುಣ್ಯಕ್ಕೆ? ನನ್ನ ಮಗ ಬದುಕಿಲ್ಲ, ಅವನ ಮಗ ಬದುಕಿದ್ದಾನೆ. ಆದರೂ ನಾವಿಬ್ಬರು ಬಹುತೇಕ ಅನಾಥರೇ! ರಾಮಣ್ಣ ಜೀವಂತವಾಗಿರಲು ಅವನ ಮಗ ಏನು ಬೇಕಾದರೂ ಮಾಡುತ್ತಾನೆ. ನಾನು ಸತ್ತರೆ ನನ್ನ ಮಕ್ಕಳು ಏನಾದರೂ ಮಾಡುತ್ತಾರೆ. ಇವೆರಡರ ಮಧ್ಯೆ ಒಳ್ಳೆಯದ್ಯಾವುದು? ಕೆಟ್ಟದ್ಯಾವುದು? ಜೀವಂತವಿರುವುದೇ ಬದುಕಾದರೆ ಈಗಾಗಲೇ ಸತ್ತವರದ್ದು ಕೆಟ್ಟ ಬದುಕೆ? ಗಾಂಽಯದ್ದು? ನಮ್ಮ ಗುರುಗಳದ್ದು? ಜಿಜ್ಞಾಸೆಗಳಿಗೆ ವಿರಾಮ ಸಿಕ್ಕಿದ್ದು ತನ್ನ ಕೊಟ್ಟಿಗೆಯಲ್ಲೂ ಆಕಳಿಲ್ಲವೆಂಬ ಅರಿವಾದಾಗಲೇ.

*             *               *

ಸಾವಿತ್ರಮ್ಮ ಕಾಣದೇ ಎರಡು ದಿನಗಳಾದ ಮೇಲೆ ಆಕೆಯ ಶವ ಪ್ಲಾಂಟೇಷನ್ನಿನ ವಾರೆಯಲ್ಲಿ ಸಿಕ್ಕಿತ್ತು. ಗೌರಿ ಆಕಳ ಕೂಗು ಕೇಳಿ ಅದೇ ವಾರೆಯ ತಗ್ಗಿನಲ್ಲಿ ಹುಲ್ಲು ಸವರುತ್ತಿದ್ದ ಪಮ್ಮ ಗುಡ್ಡ ಹತ್ತುವಾಗ ಗೌರಿ ಆಕಳೂ, ಅದರ ಒಡತಿ ಸಾವಿತ್ರಮ್ಮಳೂ ಕಂಡರಂತೆ. ಸಾವಿತ್ರಮ್ಮಳ ದೇಹ ಅದಾಗಲೇ ದ್ರವವಾಗಿ ಹರಿಯುತ್ತಿತ್ತಂತೆ. ಅದೆಷ್ಟು ಹೊತ್ತಾಗಿತ್ತೋ ಗೌರಿ ಆಕಳು ಬಂದು... ಸಾವಿತ್ರಮ್ಮ ಏನನ್ನೂ ಕೊಂಡೊಯ್ಯಲಿಲ್ಲ, ಅವಳ ಎಂಟು ಗುಂಟೆ ಜಾಗವನ್ನೂ ಸೊಸೈಟಿಯವರು ಹರಾಜು ಮಾಡುತ್ತಾರಂತೆ, ಸಾಲ ತೀರಿಸಲು ಹೆಣ್ಣುಮಕ್ಕಳು ತಯಾರಿರದ ಕಾರಣ....


Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ