ಕೈಗಾರಿಕಾ ಕ್ರಾಂತಿಯ ತೆಕ್ಕೆಯಲ್ಲಿ ಮಿಸುಕಾಡುವ ಕೃಷಿವಲಯದ ಸಾಧ್ಯತೆ

ನಾವು ಆಗಾಗ ‘ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ’ ಅನ್ನೋ ಆರೋಪವನ್ನು ಕೇಳುತ್ತೇವೆ, ಮಾಡುತ್ತೇವೆ. ಆದರೆ ಈ ಆಧುನಿಕ ವೃದ್ಧಾಶ್ರಮಗಳ ನಿರ್ಮಾಣ ಹೇಗಾಯ್ತು ಅನ್ನುವ ಯೋಚನೆಗೆ ’ನಗರಗಳತ್ತ ಯುವಜನತೆಯ ವಲಸೆ’ ಎನ್ನುವ ಮೂರು ಪದಗಳ ಉತ್ತರವನ್ನು ನೀಡಿ ಸುಮ್ಮನಾಗುತ್ತಿದ್ದೇವಷ್ಟೆ. ಇದರ ಮೂಲ ಮತ್ತು ಪರಿಣಾಮ ನಮ್ಮ ಮೇಲ್ಮಟ್ಟದ ಊಹೆಗಳಲ್ಲಿ ಮೂಡದೇ ಉಳಿದುಬಿಡುತ್ತವೆ.

೧೯೬೦ರ ದಶಕದಲ್ಲಿ ಕೃಷಿ ಕ್ರಾಂತಿ ಎನ್ನುವ ಕ್ರಾಂತಿಯೊಂದಕ್ಕೆ ಭಾರತ ತನ್ನನ್ನ ದೂಡಿಕೊಂಡಿತಾದರೂ ಅದಕ್ಕೂ ಮೊದಲೇ, ಅಂದರೆ ಸ್ವಾತಂತ್ರ್ಯದ ಹೊತ್ತಿಗೆಲ್ಲಾ ಕೈಗಾರಿಕಾ ಕ್ರಾಂತಿಯೆಂಬುದರ ಮೂಲಕ ಹೊಸ ಉದ್ಯೋಗಗಳನ್ನು ತಯಾರಿಸಲಾಗಿತ್ತು. ಅದಕ್ಕೆ ಕನಿಷ್ಠ ವಿದ್ಯಾರ್ಹತೆ, ಕೌಶಲಗಳ ಮಾನದಂಡ ಆ ಕಾಲಕ್ಕೆ ನಿಗದಿಯಾಗದಿದ್ದರೂ ಕೌಶಲದ ಅವಶ್ಯಕತೆ ಇದ್ದೇ ಇತ್ತು. ನಾವು ಆರೋಪಿಸುವ ಮೆಕಾಲೆ ಶಿಕ್ಷಣ ಪದ್ಧತಿ ಅದಾಗಲೇ ರೂಢಿಯಲ್ಲಿದ್ದುದಲ್ಲದೆ ಅದರ ಅವಶ್ಯಕತೆಯನ್ನೂ ಸೃಷ್ಟಿಸಲಾಯ್ತು. ಇವೆಲ್ಲ ಸ್ವಾತಂತ್ರ್ಯೋತ್ತರ ಭಾರತವನ್ನು ಬಲಿಷ್ಠಗೊಳಿಸಲು ಅವಶ್ಯವೆಂಬ ನಂಬಿಕೆ ನಮ್ಮಲ್ಲಿ ಮೂಡಿದ್ದು ಬಹುಶಃ ೭೦-೮೦ರ ದಶಕದ ಸುಮಾರಿಗೆ. ಆರ್ಥಿಕತೆಯ ಜಾಗತಿಕ ಸ್ಥಾನಮಾನಗಳ ಸಂಪಾದನೆಗೋಸ್ಕರ ಭಾರತದ ಸರ್ಕಾರಗಳು ನಗರ ಸೃಷ್ಟಿಗೆ, ನಗರಗಳ ಆರ್ಥಿಕ ಸಾಬಲ್ಯಕ್ಕೆ, ಕೈಗಾರಿಕಾ ವಸಾಹತುಗಳ ಸಾಬಲ್ಯಕ್ಕೆ ಹಲವು ಯೋಜನೆಗಳನ್ನು ತಂದ ಪರಿಣಾಮವೇ ಈಗಿನ ಹಳ್ಳಿಗಳ ಸ್ಥಿತಿ.

ಕಡಿಮೆ ಕೂಲಿದರಕ್ಕಾಗಿ ಹಳ್ಳಿಗರತ್ತ ದೃಷ್ಟಿ!

ನಗರಗಳಲ್ಲಿ ಆಹೊತ್ತಿಗೆಲ್ಲ ಉದ್ಯೋಗ ವಂಚಿತರ ಸಂಖ್ಯೆ ಕ್ಷೀಣಿಸುತ್ತಿತ್ತು. ಹೆಚ್ಚು ಪಗಾರಿಗೆ ನಗರಗಳ ಜನತೆಯನ್ನು ಆಕರ್ಷಿಸಲು ಕೈಗಾರಿಕೆಗಳು ವಿಫಲವಾದ್ದರಿಂದ, ಕಡಿಮೆ ಪಗಾರಿಗೆ ಹಳ್ಳಿಗಳಿಂದ ಕೂಲಿಗಳನ್ನು ತರಿಸಿಕೊಳ್ಳಬಹುದೆಂಬ ಯೋಚನೆ ಯೋಜನೆಯಾದ ನಂತರ ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ನೀಡಲು ಸಿದ್ಧತೆಗಳಾದವು. ಉಚಿತ ಶಿಕ್ಷಣ ಹಳ್ಳಿಗರಲ್ಲಿ ಕೈ
ಗಾರಿಕಾ ಅವಶ್ಯ ಕೌಶಲಗಳನ್ನು ತುಂಬುವಲ್ಲಿ ತಕ್ಕಮಟ್ಟಿನ ಯಶಸ್ಸನ್ನೂ ಪಡೆಯಿತು. 

ಬದುಕಲು ಶಿಕ್ಷಣ ಅವಶ್ಯವೆಂದು ನಂಬಿದ ಕೆಲವರು ಕಲಿತು, ಕೆಲಸಕ್ಕೆ ಸೇರಿದರು. ಅದೊಂದು ಪ್ರತಿಷ್ಠೆಯಾಗಿ ಬದಲಾಗಿದ್ದು ನಮ್ಮ ತಲೆಮಾರಿನಲ್ಲಿ. ಅದಕ್ಕೂ ಮೊದಲು ಕಡಿಮೆ ಕೂಲಿಗೆ ಕೆಲಸ ಮಾಡುವ ಹಳ್ಳಿಗರನ್ನು ನಗರಗಳು, ಕೈಗಾರಿಕಾ ವಸಾಹತುಗಳು ಸೆಳೆದಿದ್ದವು. ಈಗ ಹಳ್ಳಿಗಳಲ್ಲಿ ಉಳಿದಿರುವ ಪೀಳಿಗೆ ಕೃಷಿ ನಿರಾಶ್ರಿತರಾಗಲು ಸಿದ್ಧವಿರದ, ಕೈಗಾರಿಕಾ ಕೌಶಲಗಳನ್ನು ಕಲಿಯದ; ಸರ್ಕಾರ ಹಾಗೂ ಉದ್ದಿಮೆಗಳ ದೃಷ್ಟಿಯಲ್ಲಿ ನಿರಕ್ಷರಕುಕ್ಷಿಗಳು!


೭೦ರ ದಶಕದ ನಂತರ ಹಳ್ಳಿಗಳಿಂದ ನಗರಕ್ಕೆ ವಲಸೆ ಹೋಗುವವರ ಸಂಖ್ಯೆಯಲ್ಲಿ ಏರುಗತಿ ಕಾಣಿಸಿಕೊಂಡಿದ್ದಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತ ಹೋದರೆ ಕಾಣುವ ಅಂಶಗಳು,

* ಹೆಚ್ಚಿದ ವಿದ್ಯಾವಂತರ ಸಂಖ್ಯೆ.

* ಆಕರ್ಷಣೀಯ ಕೂಲಿದರ.

* ಯಾಂತ್ರೀಕೃತ ಜೀವನಶೈಲಿ.

* ನಷ್ಟದ ಸಂಭಾವ್ಯತೆ ಕಮ್ಮಿಯಿರುವುದು.


ಈ ಎಲ್ಲ ಅಂಶಗಳನ್ನು ಸರ್ಕಾರಗಳು ನಿಯಂತ್ರಿಸಬಹುದಾಗಿದ್ದರೂ ಹೊಸ ಭರವಸೆ, ಆಕರ್ಷಣೆಗಳ ಮೂಲಕ ಇವುಗಳ ವ್ಯಾಪ್ತಿಯನ್ನು ಹೆಚ್ಚಿಸಿದ್ದು ಸಮಾಜದ ಸ್ಥಿರತೆ ಹಾಳಾಗಲು ಕಾರಣ.

ಮೊದಲ ತಲೆಮಾರಿನ ವಲಸಿಗರು ಹಳ್ಳಿಗಳನ್ನು ತೊರೆಯಲು ಕೃಷಿಯಲ್ಲಿನ ಲಾಭ ಹಾಗೂ ಶ್ರಮದ ನಡುವಿನ ವ್ಯತ್ಯಾಸ ಕಾರಣವಾಗಿದ್ದರೆ ನಂತರದ ತಲೆಮಾರುಗಳು ಕೃಷಿಯನ್ನು ಉದ್ಯೋಗವೆಂದು ಭಾವಿಸದಿರುವುದೂ ಕಾರಣಗಳಲ್ಲಿ ಸೇರಿಕೊಂಡಿತು. ನಗರ ಜನತೆಯ ಜೀವನಶೈಲಿ, ಜೀವನ ವೆಚ್ಚಕ್ಕನುಗುಣವಾಗಿ ಅಲ್ಲಿನ ಸಂಬಳದ ನಿರೀಕ್ಷೆ ಹೆಚ್ಚಾಗುತ್ತಿದ್ದಂತೆ ಅವರಿಗಿಂತ ಕಡಿಮೆ ಸಂಬಳದ ನಿರೀಕ್ಷೆಯಿದ್ದ ಹಳ್ಳಿಗರನ್ನು ನಗರಗಳತ್ತ ಸೆಳೆವ ಕ್ರಿಯೆ ಕ್ರಿಯಾಶೀಲವಾಗಿ ಬೆಳೆಯುತ್ತಿದೆ. ಈಗ ನಗರಗಳಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ‘ಅಗ್ರಿಕಲ್ಚರಲ್ ರೆ-ಜೀಸ್’ಅನ್ನುವುದು ಇದಕ್ಕಾಗಿಯೇ.ಈ ಹಿಂದೆ ನಗರಗಳಿಗೆ ವಲಸೆ ಹೋದವರು ನಾಗರಿಕರಾಗಿಯೇ ಉಳಿದುಬಿಡುತ್ತಾರೆ. ಅವರ ಮಕ್ಕಳನ್ನು ನಾಗರಿಕರಾಗಿಯೇ ನೋಡಲಾಗುತ್ತದೆ. ಅವರ ಅವಶ್ಯಕತೆಗಳು ನಗರ ಜೀವನಕ್ಕನುಗುಣವಾಗಿಯೇ ಬೆಳೆದಿರುತ್ತವೆ ಹಾಗೂ ಕೈಗಾರಿಕಾ ವಸಾಹತುಗಳು ಹೊಸ ತಲೆಮಾರಿನ ಹಳ್ಳಿಗರನ್ನು ಆಕರ್ಷಿಸುತ್ತಲೇ ಉಳಿಯುತ್ತವೆ. ೫೦ರ ದಶಕದಲ್ಲಿ ಶುರುವಾದ ಪ್ರಕ್ರಿಯೆ ನಗರಗಳ ಜನಸಾಂದ್ರತೆಯನ್ನು ಹೆಚ್ಚಿಸುವ ಫಲಿತಾಂಶದ ಹೊರತಾಗಿ ಮತ್ಯಾವ ಪರಿಣಾಮವನ್ನೂ ಬೀರಿಲ್ಲದಿರುವುದು ಈಎಲ್ಲ ಪ್ರಕ್ರಿಯೆಗಳ ಕಾರಣವಾದ ‘ಜಾಗತಿಕ ಆರ್ಥಿಕ ಸ್ಥಾನದಲ್ಲಿ ಗಣನೀಯ ಶ್ರೇಣಿ’ಯಲ್ಲಿರುವ ಆಕಾಂಕ್ಷೆಯನ್ನು ಭವಿಷ್ಯದಲ್ಲಿ ಕಳೆದುಕೊಳ್ಳುವಂತೆ ಮಾಡಬಹುದು!

ಕೃಷಿ ವೈಮುಖಕ್ಕೆ ಶಿಕ್ಷಣದ ಕೊಡುಗೆ:

‘ಸಾಕ್ಷರತೆಯಿಂದ ಅಭ್ಯುದಯ’ಎಂಬ ಸಿದ್ಧಾಂತದ ನೆಲೆಗಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯ ಮತ್ತು ಉಚಿತಗೊಳಿಸಿದ್ದರ ಹಿಂದೆ ಉದ್ದಿಮೆಗಳಿಗಾಗಿ ಕಡಿಮೆ ವೇತನದ ಕೂಲಿಗಳನ್ನು ಸೃಷ್ಟಿಸುವ ಹುನ್ನಾರವಿದ್ದರೂ ಶಿಕ್ಷಣ ನೀತಿಗಳು ರಾಜಕೀಯ ಪಕ್ಷಗಳ ಸಿದ್ಧಾಂತಗಳನ್ನು ಪ್ರತಿಪಾದಿಸುವ ಪೀಳಿಗೆಯನ್ನು ಸೃಷ್ಟಿಸಲೂ ಬಳಕೆಯಾಗಿವೆ. ಅನವಶ್ಯಕವೆನಿಸುವ ಮತಗಳ ಇತಿಹಾಸ, ಮತ ಪ್ರಚಾರಕರ ಇತಿಹಾಸ, ಪಕ್ಷಗಳ ನೇತಾರರ ಇತಿಹಾಸ ಬೋಽಸುವ ಬದಲು ಕೃಷಿ ಕುರಿತಾದ ಪರಿಚಯಾತ್ಮಕ ಪಠ್ಯಗಳನ್ನಾದರೂ ಸಿಲೇಬಸ್‌ಗಳಲ್ಲಿ ತುಂಬಬಹುದಿತ್ತು. ಉದ್ದಿಮೆಗಳ ಅವಶ್ಯಕತೆಗಳನ್ನು ಪೂರೈಸಿ ನಿವೃತ್ತರಾದ ಕೃಷಿ ನಿರಾಶ್ರಿತರು ನಿವೃತ್ತ ಜೀವನವನ್ನು ಕೃಷಿ ಮಾಡುತ್ತ ಕಳೆಯಬಹುದಿತ್ತು. ಆಗ ಕೊನೆಯಪಕ್ಷ ನಗರ-ಗ್ರಾಮಗಳ ಜನಸಾಂದ್ರತೆಯಾದರೂ ಸ್ಥಿರಗೊಳ್ಳುತ್ತಿತ್ತೇನೋ!

ಕೃಷಿ ಭಾರತದ ಪ್ರಮುಖ ಉದ್ಯೋಗವಾಗಿದ್ದ ಕಾಲವೊಂದಿತ್ತು. ಈಗ ಪರ್ಯಾಯ ಉದ್ಯೋಗಗಳು ದೇಶದಲ್ಲಿವೆ. ಪ್ರತಿ ವರ್ಷ ಕೋಟಿಗಟ್ಟಲೆ ಯುವಕರು ಪದವೀಧರರಾಗುತ್ತಿದ್ದಾರೆ. ಅವರಿಗೆಲ್ಲ ಕೆಲಸ ನೀಡಲು ಸಾಧ್ಯವಾಗದ ಕಾರಣ, ಹಳ್ಳಿಗರ ಕೂಲಿ ದರವೂ ನಗರ ಜನತೆಯ ಕೂಲಿದರದಷ್ಟೇ ಹೆಚ್ಚುತ್ತಿರುವ ಪರಿಣಾಮಕ್ಕೆ ಪರಿಹಾರ ಇನ್ನಷ್ಟೇ ಯೋಚಿಸಬೇಕಿದೆ. 

ನಿಯೋಲಿಬರಲಿಸಮ್ ಪರಿಣಾಮ!


೧೯೮೮ರ ಹೊತ್ತಿಗೆ ಸರ್ಕಾರದ ಬಹುತೇಕ ಆದಾಯ ಸರ್ಕಾರಿ ಸಂಸ್ಥೆ, ಉದ್ದಿಮೆಗಳ ಮೇಲೆಯೇ ಹೂಡಿಕೆಯಾಗುತ್ತಿದ್ದುದರ ಪರಿಣಾಮ ಮೂಲಸೌಕರ್ಯಾಭಿವೃದ್ಧಿಯಲ್ಲಿ ದೇಶ ಹಿಂದುಳಿದಿತ್ತು. ಸರ್ಕಾರಿ ಉದ್ದಿಮೆಗಳಿಗೆ ಬಂಡವಾಳ ಹೂಡುವುದಲ್ಲದೆ, ಆ ಸಂಸ್ಥೆಗಳಲ್ಲಿ ಹೆಚ್ಚಿದ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುವುದು ಹಾಗೂ ವಾರ್ಷಿಕ ಉತ್ಪಾದನಾ ದರ ಮತ್ತು ಆರ್ಥಿಕ ಬೆಳವಣಿಗೆಯನ್ನು ಪೋಷಿಸಲು ಸರ್ಕಾರಿ ಉದ್ದಿಮೆಗಳಲ್ಲಿ ಖಾಸಗಿ ಹೂಡಿಕೆಗಳಿಗೆ ಅವಕಾಶ ನೀಡಲಾಯಿತು. ಮುಕ್ತ ಮಾರುಕಟ್ಟೆ, ಜಾಗತೀಕರಣ ಮೊದಲಾದ ನಿಯೋಲಿಬರಲಿಸಂ ತತ್ವಗಳ ಅಳವಡಿಕೆಯಿಂದ ಉತ್ಪಾದನಾ ಸಾಮರ್ಥ್ಯ, ಆರ್ಥಿಕ ಚೇತರಿಕೆಗಳಿಗೆ ಹೊಸ ಗುರಿ ನಿಗದಿಪಡಿಸಲಾಯ್ತು. ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಬಹುತೇಕ ವಿಫಲವಾಗಿರುವ ನಿಯೋಲಿಬರಲಿಸಮ್ ಭಾರತದ ಭ್ರಷ್ಟ, ಚಂಚಲ ಮನಸ್ಸುಗಳನ್ನು ಹೆಚ್ಚಿನ ಲಾಭಕ್ಕೋಸ್ಕರ ಮತ್ತಷ್ಟು ಭ್ರಷ್ಟಗೊಳಿಸದಿದ್ದರೆ ಸಾಕು ಎಂಬ ಅಳುಕಿನಿಂದಲೇ ಭಾರತದಲ್ಲಿ ಜಾರಿಗೆ ಬಂದರೂ ೧೯೮೮ರ ನಂತರದ (ನಿಯೋಲಿಬರಲಿಸಮ್ ಜಾರಿಗೆ ಬಂದ ನಂತರದ) ಆರ್ಥಿಕ ಬೆಳವಣಿಗೆ ಆ ಹಿಂದಿನ ಆರ್ಥಿಕ ಬೆಳವಣಿಗೆಯಷ್ಟೇ ದರವನ್ನು ನೀಡಿದೆ. ಆದರೆ ಈ ತತ್ವಗಳು ಉದ್ದಿಮೆಯ ಉನ್ನತಿಯನ್ನಷ್ಟೇ ಬಯಸುವುದರಿಂದ, ಹೂಡಿಕೆದಾರರ ಉದ್ದೇಶ ಲಾಭ ಮಾಡಿಕೊಳ್ಳುವುದಷ್ಟೇ ಆಗಿದ್ದರಿಂದ ಬಡತನ ನಿರ್ಮೂಲನೆಯೆಂಬ ರಾಷ್ಟ್ರೀಯ ಉದ್ದೇಶವೊಂದರ ಈಡೇರಿಕೆ ಅನಿರ್ದಿಷ್ಟಾವಽಗೆ ಮುಂದೂಡಲ್ಪಟ್ಟಿತು. ಪಬ್ಲಿಕ್ ಸೆಕ್ಟರ್ ಕಂಪೆನಿಗಳ ಲಾಭಾಂಶ ಕಮ್ಮಿಯಾಯಿತಷ್ಟೇ ಅಲ್ಲ, ಪ್ರೈವೇಟ್ ಸೆಕ್ಟರ್ ಕಂಪೆನಿಗಳ ಬಲವೃದ್ಧಿಯಾಯಿತು. (ಪಬ್ಲಿಕ್ ಸೆಕ್ಟರ್ ಕಂಪೆನಿಗಳೆಂದರೆ ನಾನು, ನೀವೆಲ್ಲ ಶೇರು ಖರೀದಿಸಿ ಕಂಪೆನಿಯ ಲಾಭಾಂಶದ ಭಾಗೀದಾರರಾಗಬಹುದು. ಪ್ರೈವೇಟ್ ಸೆಕ್ಟರ್ ಕಂಪೆನಿಗಳಲ್ಲಿ ಆ ಆಯ್ಕೆಯಿಲ್ಲ; ಲಾಭಾಂಶದ ಬಹುದೊಡ್ಡ ಪಾಲು ಹೂಡಿಕೆದಾರರಿಗೆ ಸೇರುತ್ತದೆ. ಶೇರನ್ನು ಮಾರುಕಟ್ಟೆಯಲ್ಲಿ ಬಿಟ್ಟ ಖಾಸಗಿ ಕಂಪೆನಿಗಳೂ ಇವೆ, ಅವು ಪ್ರೈವೇಟ್ ಸೆಕ್ಟರ್ ಕಂಪೆನಿಗಳಲ್ಲ.) ಹೀಗೆ ನಿಯೋಲಿಬರಲಿಸಂನ ಪರ-ವಿರೋಧ ವಾದಿಗಳಿಬ್ಬರೂ ನಿರ್ಲಕ್ಷ್ಯಿಸುವ ವಿಷಯವೇ ನಗರವಲಸೆಯೆಂಬ ಸಮಸ್ಯೆ. ಹೆಚ್ಚು ಉತ್ಪಾದನೆ, ಆರ್ಥಿಕ ಬೆಳವಣಿಗೆಯ ಗುರಿ ಸಾಽಸಲು ಖಾಸಗಿ ಉದ್ದಿಮೆಗಳು ಹಳ್ಳಿಯ ಜನರನ್ನೇ ಸೆಳೆದವು, ಅದಕ್ಕೆ ಸರ್ಕಾರದ ಪರೋಕ್ಷ ಬೆಂಬಲವೂ ಇದೆ. ಖಾಸಗಿ ಕಂಪನಿಗಳು ಉತ್ಪಾದನಾ ವಲಯದ ಹಿಗ್ಗಿಸುವಿಕೆ, ಹೆಚ್ಚು ಸಂಬಳ, ಹೆಚ್ಚು ಉದ್ಯೋಗ ನೀಡುತ್ತವೆಂದು ನಂಬಲಾಗಿತ್ತಾದರೂ ಅವುಗಳ ಗುರಿಯಲ್ಲಿ ಈಮೇಲಿನ ಅಂಶಗಳು ಸೇರಿಲ್ಲವೆಂದೂ ಗಮನಿಸಬೇಕಿತ್ತು. ನಾಲ್ಕನೇ ತಂತ್ರಜ್ಞಾನ ಕ್ರಾಂತಿ (ಮಾಹಿತಿ ತಂತ್ರಜ್ಞಾನ ಕ್ರಾಂತಿ) ದೊಡ್ಡಮಟ್ಟದ ಬಂಡವಾಳವನ್ನು ಆಕರ್ಷಿಸಲು ಶುರುಮಾಡಿದ ಮೇಲೆ ಅದೆಷ್ಟು ಹಳ್ಳಿಗಳು ಅನಾಥವಾದವೆಂಬ ಲೆಕ್ಕಾಚಾರಕ್ಕಿಂತ ನಿಮ್ಮ ಊರಿನಲ್ಲಿ ಅದೆಷ್ಟು ಮಂದಿ ಉಳಿದಿದ್ದಾರೆಂಬ ಲೆಕ್ಕಾಚಾರವೇ ಸಾಕು, ರಾಷ್ಟ್ರೀಯ ಆರ್ಥಿಕ ಅಭಿವೃದ್ಧಿ ದರದ ಹೆಚ್ಚಳಕ್ಕೆ ಯಾವ ತ್ಯಾಗ ಮಾಡಿದ್ದೇವೆಂದು ಅರಿಯಲು.

ಕಡಿಮೆ ಕೂಲಿಯ ಕೃಷಿ ಉದ್ಯೋಗ (ಕೃಷಿ ಉದ್ಯೋಗವೇ ಹೊರತು ಜಾಗತಿಕ ಸೇವೆಯಲ್ಲ!) ಭಾರತದಲ್ಲಿ ತನ್ನ ಮಹತ್ವವನ್ನು ಕಳೆದುಕೊಂಡು, ನಿರ್ಲಕ್ಷ್ಯಕ್ಕೊಳಗಾಗಿ ಸಬ್ಸಿಡಿ ಹೊಂದಿದ, ಉತ್ತೇಜಿತ ಕೃಷಿ ಪದ್ಧತಿಗಳ ಬೆಂಬಲವುಳ್ಳ ಜಾಗತಿಕ ಕೃಷಿ ರಂಗದ ಜೊತೆ ಪೈಪೋಟಿ ಮಾಡಬೇಕಾದ ಸ್ಥಿತಿ ಬಂದೊದಗಿದೆ. ಈಗ ಬಂದಿರುವ ಹೊಸ ಕೃಷಿ ಮಸೂದೆಗಳು ಕೃಷಿಗೆ ಉತ್ತೇಜನ ನೀಡುವಂತೆ ಮೇಲ್ನೋಟಕ್ಕೆ ಕಂಡರೂ ಅದೇ ಮುಕ್ತ ಮಾರುಕಟ್ಟೆ, ದರದ ಮೇಲಿನ ಸರ್ಕಾರದ ಹತೋಟಿ ಹಿಂತೆಗೆತ, ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡುವುದು ಉಳಿದ ಉದ್ದಿಮೆಗಳ ಮೇಲಿನ ನಿಯೋಲಿಬರಲಿಸಂ ಹೇರಿಕೆಯ ಉತ್ಪನ್ನವನ್ನೇ ನೀಡಿದರೆ (ಮರಳಿ ಹಳ್ಳಿಗೆ ವಲಸೆಯೆಂಬ ನಿರೀಕ್ಷೆಯೂ ಇದೆ) ಭಾರತದ ಉದ್ಯಮ ವಲಯ ಈ ಹಿಂದೆ ಎಂದೂ ಕಾಣದ ಏರಿಳಿತಗಳನ್ನು ಕಾಣಬಹುದು. ಆದರೆ ಶೀಘ್ರ ಪರಿಣಾಮ (ಋಣಾತ್ಮಕ ಅಥವಾ ಧನಾತ್ಮಕ) ನಿರೀಕ್ಷೆ ಸಾಧ್ಯವಿಲ್ಲದ ಕಾರಣ ಇನ್ನೂ ಹತ್ತಿಪ್ಪತ್ತು ವರ್ಷ ಎಡ-ಬಲಗಳ ಚರ್ಚೆ, ಕೆಸರೆರಚಾಟಕ್ಕಂತೂ ಅವಕಾಶವಿದೆ.

ಮತ್ತೆ ವಿಷಯಾಂತರ ಮಾಡಿದ್ದಕ್ಕೆ ಕ್ಷಮೆಯಿರಲಿ! ಉದ್ದಿಮೆಗಳಲ್ಲಿ ನಿಯೋಲಿಬರಲಿಸಂ ಅಳವಡಿಕೆಯ ನಂತರ ಭಾರತದ ಮಧ್ಯಮ ವರ್ಗದ ಹಿಗ್ಗುವಿಕೆ ಕಾಣಿಸಿಕೊಂಡಿದೆ. ನಗರಗಳ ಜನಸಾಂದ್ರತೆ ಹೆಚ್ಚಿದೆ. ಹಾಗೆಯೇ ಬಡತನದ ಮಾನದಂಡಗಳೂ ವಿಚಲಿತಗೊಂಡು ಎಷ್ಟು ದುಡಿದರೆ ಬಡತನವಲ್ಲ ಎಂಬ ಲೆಕ್ಕಾಚಾರ ಸಿಗದಂತಾಗಿದೆ. ಮುಕ್ತಮಾರುಕಟ್ಟೆ ನಿರ್ಮಿಸಿದ ಕೊಳ್ಳುಬಾಕತನಕ್ಕೆ ಮಲೆನಾಡ ಮನೆಗಳಲ್ಲಿ ರೆಫ್ರಿಜರೇಟರ್ ಬಂದಿರುವುದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಪೇಟೆ ಸೇರಿದ ಯುವಪೀಳಿಗೆ ವಾರಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಬಂದು ಸರಕು ತಂದಿಟ್ಟರೆ ಹಾಳಾಗಬಾರದಲ್ಲ! ಪರಿಸ್ಥಿತಿಯ ನಿರ್ಮಾಣ ಮತ್ತು ಪರಿಹಾರ ಎರಡೂ ಒಂದೇ ವ್ಯವಸ್ಥೆ ನೀಡುತ್ತಿದ್ದರೆ ಲಾಭ ಯಾರಿಗೆ? ನೀವೇ ಯೋಚಿಸಿ.

ನಿಯೋಲಿಬರಲಿಸಂ ಬಂದ ಮೇಲೆ ಭಾರತೀಯ ಮಧ್ಯಮ ವರ್ಗ ಇನ್ನೂ ಹೆಚ್ಚಿನ ಅವಕಾಶಗಳಿಗೆ ಬಾಯ್ದೆರೆದು ಕಾಯುತ್ತಿದ್ದರೆ ಅವುಗಳ ಪೂರೈಕೆಯ ಭರವಸೆಗಳು ಸರ್ಕಾರಗಳ ಸೃಷ್ಟಿಗೆ ಕಾರಣವಾಗುತ್ತಿವೆ. ಹಳ್ಳಿಗಳಿಗೆ ನಗರಗಳ ಅವಶ್ಯಕ ಮೂಲಸೌಕರ್ಯಗಳು ಬೇಕೆಂಬ ಬಯಕೆ ಮೂಡುತ್ತಿವೆ. ಆದರೆ ಅವುಗಳ ಪೂರೈಕೆಗೆ ಸರ್ಕಾರದ ಬಳಿ ಬಂಡವಾಳವಿದೆಯೇ? ಗೊತ್ತಿಲ್ಲ. ನಗರಗಳು ಬೆಳೆದು ಹಳ್ಳಿಗಳನ್ನು ನುಂಗುವ ಮುನ್ನ ಹಳ್ಳಿಗಳು ನಗರಗಳ ವಸತಿಗಳಿಲ್ಲದ ಪ್ರತಿಕೃತಿಗಳಾಗಿ ಬದಲಾಗಬಹುದೆ? ಗೊತ್ತಿಲ್ಲ. ಅವಕಾಶಗಳು ಎಲ್ಲೆಡೆ ಡಟ್ಟವಾಗಿದ್ದರೂ ದೇಶಾದ್ಯಂತ ಎಲ್ಲರಲ್ಲೂ ಕಾಣಿಸಿಕೊಂಡಿರುವ ನಾಗರಿಕ ಗೀಳು ಹಳ್ಳಿಗಳನ್ನು ಮತ್ತಷ್ಟು ಅನಾಥಗೊಳಿಸುವ ಸಾಧ್ಯತೆ ಸ್ಪಷ್ಟ.

   
   


Comments

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ