ಉಂಬಳ



      ಸಣ್ಣಕಿದ್ದಾಗ ಕಂಡಿದ್ದಷ್ಟೇ ಭಯಂಕರ ಮಳೆಗಾಲವದು. ಮನೆಗೂ ತೋಟಕ್ಕೂ ಮಧ್ಯದ ಹಳ್ಳ ದಾಟಲು ಕಟ್ಟಿಕೊಂಡಿದ್ದ ಬ್ರಿಜ್ಜು ತೇಲಿಹೋಗುವಷ್ಟು ಮಳೆ ಬಂದಿತ್ತು ಅಂದ್ರೆ ಭಯಂಕರ ಅಂತಲೇ ಉದ್ಗಾರ ಹೊರಬರೋದು. ಅಂಥ ಭರ್ಜರಿ ಮಳೆಗಾಲದ ದಿನ ಮಂಜು ನಮ್ಮನೆಯತ್ತ ಬರುತ್ತಿದ್ದುದು ಟಾರಸಿಯ ಮೇಲೆ ಆರಾಮು ಕುರ್ಚಿ ಹಾಕಿ ಕುಂತಿದ್ದ ನಂಗೆ ಕಂಡಿತು. ದೂರದಿಂದಲೇ, ಬರುತ್ತಿರುವ ಮನುಷ್ಯ ಮಂಜು ಎಂದು ಗುರುತು ಹಿಡಿಯಬಲ್ಲ ರೂಪು ಅವನದ್ದು. ಮೊಣಕಾಲನ್ನು ಹೌದೋ ಅಲ್ಲವೋ ಎನ್ನುವಷ್ಟು ಮಾತ್ರ ಮಡಚಿ ನಡೆಯುವ ನಡಿಗೆಯ ಶೈಲಿಯೂ ಅವನಿಗಷ್ಟೇ ಒಲಿದ ಕಲೆಯಂತೆ ಅನಿಸೋದುಂಟು. ಉದ್ದ ದಂಟಿನ ಕಮಲಕಡ್ಡಿ ಕೊಡೆಯನ್ನು ಅದೆಲ್ಲಿಂದ ಹುಡುಕಿ ಕೊಂಡುಕೊಳ್ಳುತ್ತಾನೋ ಗೊತ್ತಿಲ್ಲ, ಬಟನ್ ಛತ್ರಿಗಳ ಕಾಲದಲ್ಲಿ ನನ್ನಂಥವರಿಗೆ nostalgia ಹುಟ್ಟಿಸುವಷ್ಟು ಟಿಪಿಕಲ್ ಆಸಾಮಿ ಈ ಮಂಜು.
ಇಂಥ ಮಳೆಯಲ್ಲಿ ಹೊಳೆ ಹೆಂಗೆ ದಾಟಿದನೋ ಎಂಬ ಕುತೂಹಲದ ಸಂತಿಗೇ ಈಗ ಬರೋ ಅರ್ಜೆಂಟು ಏನಿತ್ತು ಅನ್ನೋ ಪ್ರಶ್ನೆಯೊಂದು ಮೂಡಿತ್ತು. ನಮ್ಮನೆಯತ್ತ ಬಂದವನ ನಡುಗೆ ನಿಧಾನವಾಗಿತ್ತು. ನಮ್ಮನೆಯತ್ತ ತಿರುಗುವ ಕಾಲುಹಾದಿಯಲ್ಲಿ ಮೂರೋ- ನಾಲ್ಕೋ ಹೆಜ್ಜೆಯಿಟ್ಟವ ದಾರಿ ಬದಲಿಸಿಬಿಟ್ಟ! ಬಹುಶಃ ನನ್ನನ್ನು ಗಮನಿಸಲಿಲ್ಲವೇನೋ. ಸ್ಟ್ಯಾಂಡು ಹುಗಿಯುತ್ತದೆಂದು ಬೈಕನ್ನು ಶೆಡ್‌ನಲ್ಲಿ ಇಡದೇ ಅಂಗಳದೊಳಕ್ಕೆ ತಂದು ಇಟ್ಟಿದ್ದೆ. ಬಹುಶಃ ಬೈಕು ಕಾಣದೇ ನಾನು ಮನೆಯಲ್ಲಿಲ್ಲ ಅಂದುಕೊಂಡು ಹೊಂಟನೇನೋ ಎಂದು, "ಕಡಿಗೋ ಮಂಜು, ಭಾರಿ ಅಪ್ರೂಪ" ಅಂತ ಮಳೆಯ ಸದ್ದಿಗೂ ದೊಡ್ಡಕೆ ಹೇಳಿದಾಗ ತಲೆಯೆತ್ತಿ ನೋಡಿದ. ಯಾವತ್ತೂ ಹಿಂಗೆ ಮಾತಾಡಿಸಿದಾಗ ಅವನ ಉತ್ತರಕ್ಕಿಂತ ಮೊದಲು ನಗುವೊಂದು ಬರೋದು ರೂಢಿ. ನಾಚಿಕೆಯದ್ದೋ, ಆತ್ಮೀಯತೆಯದ್ದೋ, ಮುಜುಗರದ್ದೋ ಅಂತ ಗುರುತು ಹಿಡಿಯಲು ಕಷ್ಟವೇ ಅನ್ನುವಂಥ ನಗುವದು. ಆ ನಗುವಿನ ಗುರುತು ಸಿಗುವುದರೊಳಗೆ ಅವನ ಮರಾಠಿ ಶೈಲಿಯ ಕನ್ನಡದ ಉತ್ತರ ಬರೋದುಂಟು. ಆದರೆ ಇವತ್ತು ಸ್ವಲ್ಪ ತಡವಾಗಿ, ಸ್ವಲ್ಪ‌ ಜಾಸ್ತಿ ವೇಗವಾಗಿ, "ಇಲ್ಲೇ ಮಾಬ್ಲನ ಮನಿಗೆ ಹೋಗ್ಬತ್ತೆ, ಆಕಾಶ ಎಂತಕ್ಕೋ ಕರ್ದಿದಾ" ಅಂದ. "ಸರಿ, ವಾಪಸ್ ಬರ್ತಾ ಬಂದೋಗು" ಅಂತ ಕೂಗಿದ್ದನ್ನು ಅವ ಕೇಳಿಸಿಕೊಂಡನೋ ಇಲ್ಲವೋ, ಕೈ ಬೀಸಿ ದಾರಿ ಹಿಡಿದು ಹೊಂಟ.
       ನನಗೆ ಮಂಜು ಹೇಗೆ ಪರಿಚಿತ ಅನ್ನೋದನ್ನ ಯಥಾವತ್ತು ಹೇಳಬೇಕಿದ್ರೆ ಇಪ್ಪತ್ತೈದು ವರ್ಷಗಳ ಹಿಂದೆ ಹೋಗಬೇಕು. ಇಂಥದೇ ಮಳೆಗಾಲದ ಹೊತ್ತಲ್ಲಿ ನಮ್ಮಿಬ್ಬರನ್ನೂ ನಮ್ಮ ಪಾಲಕರು ಮೆರವಣಿಗೆಯ ಕಿ.ಪ್ರಾ.ಶಾಲೆಗೆ ನೂಕುವಾಗ ಇಬ್ಬರೂ ಭರ್ಜರಿ ಗಲಾಟೆ ಮಾಡಿದ್ದೆವೆಂಬ ಅಸ್ಪಷ್ಟ ನೆನಪಿನಿಂದ ಮಂಜುವಿನ ಪರಿಚಯ ಶುರು. ಬಿಳೀ ಅಂಗಿ, ಖಾಖಿ ಚಡ್ಡಿ ಹಾಗೂ ರಾಜಕಾರಣಿಗಳ ಬಿಳೀ ಟೋಪಿ ಆಗಿನ ಶಾಲಾಮಕ್ಕಳ ಯುನಿಫಾರಮ್ಮು. ನನ್ನ ಅಣ್ಣ, ಮತ್ತೊಬ್ಬಳು ನನ್ನದೇ ಪ್ರಾಯದ ಅಕ್ಕ ಈ ಇಬ್ಬರನ್ನು ಬಿಟ್ಟರೆ ಜಗತ್ತಿನ ಯಾವ ಮನುಷ್ಯ ಜೀವಿಯೊಂದಿಗೂ ಆತ್ಮೀಯತೆ ಇರದಿದ್ದ ಕಾಲದಲ್ಲಿ (ಅಪ್ಪ-ಅಮ್ಮನೊಟ್ಟಿಗೆ ಆತ್ಮೀಯತೆ ಇರಲಿಲ್ಲವೆಂದಲ್ಲ, ನನ್ನಿಷ್ಟದ ವಿರುದ್ಧವಾಗಿ ಜೈಲಿನಂಥ ಶಾಲೆಗೆ ನೂಕಿದ್ದರ ಪರಿಣಾಮವಾಗಿ ಆಗಿನ ತುರ್ತಕ್ಕೆ ಭಯಂಕರ ದ್ವೇಷದಂಥದ್ದೊಂದು ಭಾವವಿತ್ತು!) ಮಂಜು ಪರಿಚಿತನಾದ. ಶಾಲೆ ಎದುರಿಗಿದ್ದ ಮೆರವಣಿಗೆ ಗುಡ್ಡವನ್ನು ಮೊದಲು ಹತ್ತಿದ್ದು ಅವನ ಜೊತೆ. ಯಾವುದೋ ಬಾಲ್ಯದ ರೋಗದ ದೆಸೆಯಿಂದ ಆಗಾಗ ನನ್ನ ಮೂಗಿನಿಂದ ಒಸರುತ್ತಿದ್ದ ರಕ್ತ ಬಳಸಿ ನಮ್ಮಿಬ್ಬರ ಕೊಡೆಗಳಿಗೆ ವಿಳಾಸ ಹಾಕಿದ್ದಿದೆ. ಮೂರು ಮೈಲಿ ದೂರದ ಶಾಲೆಯ ಯಾತ್ರೆಗೆ ನಾವಿಬ್ಬರು ಜೊತೆಗಾರರು. ನಾಲ್ಕೂವರೆಗೆ ಶಾಲೆ ಬಿಟ್ಟರೆ ಹೆಣ್ಣುಮಕ್ಕಳ ಜೊತೆ ಜಗಳವಾಡಿ, ಜುಟ್ಟು ಎಳೆದು ಯಾರಿಗೂ ಗೊತ್ತಿರದ ಹಾದಿಯಲ್ಲಿ ಓಡಿಹೋಗುವುದು ನಮ್ಮ‌ ಬಾಲ್ಯದ ಸಾಮಾನ್ಯ ದಿನಚರಿ.
      ಹಿಂಗೆ ಬೆಟ್ಟದ ಹಾದಿಯಲ್ಲಿ ಹೋಗುವಾಗೆಲ್ಲ ನಮ್ಮ ಸಾಂಗತ್ಯಕ್ಕೆ ಸಿಗುವುದು ಉಂಬಳಗಳಷ್ಟೇ. ಮಲೆನಾಡ ಮಕ್ಕಳ ಮೊದಲ ಕುತೂಹಲ ಇದೇ ವಿಚಿತ್ರ ಜೀವಿಗಳು. ಬಾಯಿಯಿಲ್ಲ, ಕಚ್ಚುತ್ತವೆ. ರಬ್ಬರ್ ಅಲ್ಲ, ಹಿಗ್ಗುತ್ತವೆ. ಬ್ಲೇಡು ಹಿಡಿದು ಕೊಯ್ದರೂ ಸಾಯುವುದಿಲ್ಲ. ಮಳೆಗಾಲದಲ್ಲಿ ಕಾಲಿಟ್ಟಲ್ಲೆಲ್ಲ ಕಾಣುವ ಇವು ಬೇಸಿಗೆಯಲ್ಲಿ ಎಲ್ಲಿ ಮಾಯವಾಗುತ್ತವೆ? ಈಗೆಲ್ಲ ಕಾನ್ವೆಂಟಿನಲ್ಲಿ ಓದುವ ಮಕ್ಕಳನ್ನು ನೋಡಿ ಪಾಪ ಅನಿಸೋದು ಇದಕ್ಕೇ. ರಿಕ್ಷಾ, ಸ್ಕೂಲ್ ಬಸ್ಸುಗಳು ಶಾಲೆಗೆ ಹೊತ್ತೊಯ್ಯುತ್ತವೆ; ಅವೇ ಮನೆಗೆ ತಂದು ಬಿಡತ್ವೆ. ಕುತೂಹಲ ಅನ್ನೋ ಶಬ್ದಕ್ಕೆ ಅರ್ಥ ಹೇಳಲು ಮಾಸ್ತರುಗಳು ಹೆಣಗಾಡಬೇಕೇನೋ! ಪ್ರಕೃತಿಯೇ ಕಲಿಸುವ ಜೀವನ ಪಾಠಗಳಿಗೆ ತೆರೆದುಕೊಳ್ಳುವ ಬಾಲ್ಯದಲ್ಲಿ ಪರಿಚಿತನಾದ ಮಂಜು ಅದ್ಯಾಕೆ ಇವತ್ತು ಮನೆಗೆ ಬಂದಂತೆ ಮಾಡಿ ಬರದೇ ಹೋದ ಅನ್ನುವ ಕುತೂಹಲ ಉಂಬಳದ ರೂಪ ತಾಳಿತ್ತು.
ಆಕಾಶನ ಮನೆಗೆ ಹೋದವ ಬರುತ್ತಾನೇನೋ ಎಂದು ಮಧ್ಯಾಹ್ನದವರೆಗೂ ಕಾದೆ. ಬರಲಿಲ್ಲ. ಎಂಥದೋ ಕೆಲಸಕ್ಕೆ ಹೋಗಿರಬೇಕು ಅಂದುಕೊಂಡು ಆಫೀಸಿಗೆ ಹೊಂಟೆ.
ಮಂಜುವಿನ ಪರಿಚಯ ನಿಮಗೆ ಸರಿಯಾಗಿ ಆಗಿಲ್ಲವೇನೋ ಅನಿಸಿ ಅವನ ಬಗ್ಗೆ ಸ್ವಲ್ಪ ವಿವರಣೆ ಕೊಡೋಣವೆನಿಸಿದೆ. ನಾನು ಆಫೀಸಿಂದ ಬರೋದು, ಕತೆಯ ಉಳಿದ ಭಾಗ ಹೇಳೋದು ಸ್ವಲ್ಪ ಸಮಯ ತಗೊಳ್ಳೋದ್ರಿಂದ ಸದ್ಯದ ಸಮಯ ವ್ಯರ್ಥವಾಗ್ಬಾರ್ದು ಅಲ್ವೇ. ಮಂಜು ನನ್ನ ಸಹಪಾಠಿ ಅಂತ ಆಗಲೇ ಹೇಳಿಯಾಗಿದೆ. ಆದ್ರೆ ಎಂಟನೇ‌ ಇಯತ್ತೆ ಹೊತ್ತಿಗೇ ಶಾಲೆಯಲ್ಲಿ ಕಲಿಸೋದು ಜೀವನದ ಉಪಯೋಗಕ್ಕೆ ಬರೋದಲ್ಲ ಅನ್ನೋ ಸತ್ಯ ಅರಿವಾದವನಂತೆ ಶಾಲೆ ಬಿಟ್ಟ. ಅವನಪ್ಪ‌ ಒಳ್ಳೆ ಆಚಾರಿಯಾಗಿದ್ದ, ಅಪ್ಪನೊಟ್ಟಿಗೆ ಒಂದೆರಡು ವರ್ಷ ಕೆಲಸಕ್ಕೆ ಹೋದವ ಒಂದು ದಿನ ಊರು ಬಿಟ್ಟು ಮುಂಬೈನಲ್ಲಿದ್ದ ತನ್ನ ಅತ್ತೆ ಮನೆಗೆ ಹೋದವ ಏನು ಕೆಲಸ ಮಾಡಿದ್ನೋ, ಗೊತ್ತಿಲ್ಲ.  ಅಲ್ಲಿಂದ ವಾಪಾಸು ಬರೋ ಹೊತ್ತಿಗೆ ಅವನಪ್ಪ ಹಾಸಿಗೆ ಹಿಡಿದಿದ್ದ. ಪಾರ್ಶ್ವವಾಯುವೆಂದು ಡಾಕ್ಟರುಗಳು ಅವನ ರೋಗಕ್ಕೆ ಹೆಸರಿಟ್ಟಿದ್ದರು. ತೀರಾ ರಾತ್ರಿಶಾಲೆಯ ಅಕ್ಷರಾಭ್ಯಾಸ ಮಾಡಿದ್ದ ಮನೆಯವರೆಲ್ಲ ಅದು ಮಾಟಿಯೆಂದೂ, ಗೊಂಬೆಗೆ ಸೂಜಿ ಚುಚ್ವಿ ಹಾಸಿಗೆ ಹಿಡಿದಿದ್ದಾನೆಂದೂ ನಂಬಿದ್ದರು. ಅಷ್ಟೊತ್ತಿಗಾಗಲೇ ನಾನು ಡಿಗ್ರೀ ಕಲಿತು ಮನೆಯಲ್ಲಿದ್ದೆ. ಆಗಷ್ಟೇ ಮೊಬಾಯ್ಲು ಅನ್ನೋ ಅಸಡ್ಡಾಳ ಸಾಧನ ನನ್ನ ಕೈಗೆ ಬಂದಿತ್ತು. ಫೇಸ್ಬುಕ್ಕು ಅಷ್ಟೊತ್ತಿಗೆ ಎಲ್ಲರ ಮುಖ ತೋರಿಸುವಷ್ಟು ಬೆಳೆದಿತ್ತು. ಹಿಂಗೇ ಮೆರವಣಿಗೆ ಹೆಗಡೇರ ಮನೆಯ ದನಗಳನ್ನು ಬೆಟ್ಟಕ್ಕೆ ಹೊಡೆದುಕೊಂಡು ಮಂಜು ಬಂದಿದ್ದಾಗ ನಾನೂ ಸಿಗ್ನಲ್ಲು ಹುಡುಕುತ್ತಾ ಬೆಟ್ಟದಲ್ಲಿ ಕುಂತಿದ್ದೆ. ಆವತ್ತು ನಮ್ಮಿಬ್ಬರ ಪುನರ್ಮಿಲನ. ಅದಾಗಲೇ ಮುಂಬೈ ಬದಿಯ ಮರಾಠಿ ಶೈಲಿಯ ಕನ್ನಡ ಅವನಿಗೆ ರೂಢಿಯಾಗಿತ್ತು. ನೋಕಿಯಾ ಮೊಬಾಯ್ಲುಗಳು ಕೊಡೋ ಫೊಟೋದ ಸ್ಪಷ್ಟತೆ ಸ್ಯಾಮ್ಸಂಗು ಕೊಡೋದಿಲ್ಲ ಅಂತ ವಿವರಣೆ ಕೊಡುವಷ್ಟು ನಗರದ ಭಾಷೆ ಅವನಲ್ಲಿ ಒಗ್ಗಿತ್ತು. ಎಂಟನೆತ್ತಿಗೇ ಶಾಲೆ ಬಿಟ್ಟವ ಅವನ ಓರಿಗೆಯ, ಕೇರಿಯ ಮಕ್ಕಳಿಗಿಂತ ಒಳ್ಳೆ ಬದುಕು ಕಂಡ ಅನಿಸಿತ್ತು ಆವತ್ತು.
    ಅದಾಗಿ ವರ್ಷದೊಳಗೆ ಎಂಟಾಯ್ಜರ್ ಬೈಕನ್ನ ತಂದಿಟ್ಟುಕೊಂಡ. ಅವ ಮನೆಯಿಂದ ಹೊಂಟ‌ ಅನ್ನೋ ಸೂಚನೆ ಇಡೀ ಮೆರವಣಿಗೆ ಗ್ರಾಮಕ್ಕೆ‌ ಸಿಗುವಷ್ಟು ಸೌಂಡು ಅದಕ್ಕಿತ್ತು ಬಿಟ್ಟರೆ ಉಳಿದ ಕಾಗದ ಪತ್ರಗಳ ಅಸ್ತಿತ್ವ ಅನುಮಾನವೇ. ನಿಧಾನಕ್ಕೆ ಉದ್ದಾರವಾದವ ಮಂಜು. ಯಾವ ಚಟವಿಲ್ಲ, ವಿಪರೀತ ಅನ್ನುವಷ್ಟು ಮಾತಿಲ್ಲ. ಹಳ್ಳಿಗರ ಕಣ್ಣಿಗೆ ಜಂಟಲ್‌ಮ್ಯಾನು. ನನಗೂ ಅಸೂಯೆ ಮೂಡುವಷ್ಟು ಒಳ್ಳೆಯವನಾಗಿ ಬೆಳೆದಿದ್ದ.
     ಅದೊಂದು ಘಟನೆ ಆಗದಿದ್ದರೆ ಇವತ್ತಿಗೂ ಜನ ಅವನನ್ನ ಒಳ್ಳೆಯವನೆಂದೇ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿದ್ದರೇನೋ. ಅದು ಘಟನೆಯೋ, ಭಾನಗಡಿಯೋ ಎಂದು ಪಕ್ಕಾ ಹೇಳುವಷ್ಟು ನನಗೆ ಗೊತ್ತಿಲ್ಲ. ವೃತ್ತಿಯ ನಿಮಿತ್ತ ನಾನೂ ಊರು ಬಿಟ್ಟಿದ್ದೆ. ಸ್ವಲ್ಪ ಕಾಲ ಆಚಾರಿಯಾಗಿದ್ದ ಮಂಜು ಸ್ವಲ್ಪ ತಿಂಗಳು ಮೆಕ್ಯಾನಿಕ್ಕಾದ. ಆಮೇಲೆ ಕಂಪ್ಯೂಟರ್ ಹಾರ್ಡ್‌ವೇರ್ ರಿಪೇರಿ ಮಾಡುವವನಾದ. ಮತ್ತೆ ದನ ಮೇಯಿಸಿದ. ಯಾವತ್ತೋ‌ ಸಿಕ್ಕಾಗ ನಮ್ಮ‌ ಹಳೆ ಕುತೂಹಲಗಳಾದ ಎರಡುತಲೆ ಹಾವು, ಅಕ್ಕಿ ನುಂಗುವ ಪಾತ್ರೆ, ನಿಧಿ ಸಿಕ್ಕ ಚರಿಗೆ ಮೊದಲಾದವುಗಳು ಸತ್ಯವೆಂಬಂತೇ ಕತೆ ಹೇಳುತ್ತಿದ್ದ. ಯಾರಿಗೆ ತಾನೇ ಇಂಥ ಸುದ್ದಿಗಳು ಕುತೂಹಲ ಹುಟ್ಟಿಸುವುದಿಲ್ಲ?! ಅವನದ್ದೂ ಇಂಥ ಹುಚ್ಚು ಕುತೂಹಲಗಳೇ ಅಂತ ಸುಮ್ಮನಿದ್ದ ನನಗೆ ಬೆಂಗಳೂರಿನ ಪತ್ರಿಕೆಯೊಂದರ ಸುದ್ದಿ ಆಶ್ಚರ್ಯ ಮೂಡಿಸಿತ್ತು.
      ಈ ಮಹಾನುಭಾವ ತನ್ನ ಕುತೂಹಲಗಳಿಂದಲೇ ಜಿಂಕೆ ಚರ್ಮ, ಹುಲಿ ಚರ್ಮಗಳನ್ನು ಕಳ್ಳಸಾಗಾಣಿಕೆ ಮಾಡುವ ಗುಂಪಿನೊಂದಿಗೆ ಸಿಕ್ಕಿಬಿದ್ದಿದ್ದ. ಸಾಲದ್ದಕ್ಕೆ ನ್ಯೂಸ್ ಚಾನಲ್ ಒಂದು ಇವನ‌ ಮುಖವೂ ಕಾಣುವಂತೆ ರಹಸ್ಯ ಕಾರ್ಯಾಚರಣೆಯನ್ನೂ ಮಾಡಿ ಟೆಲಿಕಾಸ್ಟು ಮಾಡಿಬಿಟ್ಟಿತ್ತು. ಅದೆಂತ ಮಳ್ಳು ಮಾಡಿಕೊಂಡ ಈ ಮಂಗಸತ್ತವ ಅಂತ ಬೇಜಾರಾಗಿತ್ತು. ತಿಂಗಳುಗಟ್ಟಲೆ ಬೆಂಗಳೂರಿನ ಯಾವುದೋ ಜೈಲಲ್ಲಿದ್ದವ ಊರಿಗೆ ಬಂದ. ಯಾರು ಜಾಮೀನು ಕೊಟ್ಟರೋ, ಕೃತ್ಯದಲ್ಲಿ ಇವನ ಪಾಲ್ಗೊಳ್ಳುವಿಕೆ ಅಂಥ ದೊಡ್ಡದಲ್ಲ ಅನಿಸಿ ಬಿಟ್ಟು ಕಳಿಸಿದರೋ ಇದುವರೆಗೂ ಗೊತ್ತಿಲ್ಲ. ಆದರೆ ಊರ ಮಂದಿಗೆ ಮಾತ್ರ ಇವ ದೊಡ್ಡ ಸ್ಮಗ್ಲರ್ ಥರವೇ ಕಾಣುತ್ತಿದ್ದ. ಕೆಲಸಕ್ಕೆ ಕರೆಯುವುದು ತೀರಾ ಅಪರೂಪವಾಗಿತ್ತು. ಬೈಕನ್ನು ಮಾರಿದ್ದನಂತೆ. ಇದ್ದುದರಲ್ಲಿ ಸಮಾಧಾನ ಅಂದರೆ ಅವನ ತಮ್ಮನನ್ನು ಚೆನ್ನಾಗಿ ಓದಿಸುತ್ತಿದ್ದ. ಅವನೂ ಡಿಗ್ರೀ ಕಲಿಯುತ್ತಿದ್ದುದರಿಂದ ಭವಿಷ್ಯದ ಕುರಿತು ತೀರಾ ಚಿಂತೆ ಮಾಡುವ ಅವಶ್ಯಕತೆ ಇರಲಿಲ್ಲ.
       ಆಫೀಸಿಂದ ಬರಲು ರಾತ್ರಿ ಹನ್ನೆರಡು ಗಂಟೆಯಾಗಿತ್ತು. ಅಪ್ಪನ ಬಳಿ ಮಂಜು ಬಂದಿದ್ದನಾ ಅಂತ ಕೇಳುವವನಿದ್ದೆ, ಬೆಳಿಗ್ಗೆ ಕೇಳಿದರಾಯ್ತು ಅಂದುಕೊಂಡು‌ ತಿಂಡಿ ತಿಂದು ಮಲಗಿದವನಿಗೆ ಎಚ್ಚರಾಗಿದ್ದು ಬೆಳಿಗ್ಗೆ ಹನ್ನೊಂದಕ್ಕೆ. ನಾನು ಕೇಳೋದರೊಳಗೇ ಅಪ್ಪ ಮಂಜು ಬಂದಿದ್ದನೆಂದೂ, ಬೆಟ್ಟದ ಉಪ್ಪಾಗೆ ಮರಗಳನ್ನು ಈಬಾರಿ ಅವನೇ ಗುತ್ತಿಗೆಗೆ ತೆಗೆದುಕೊಂಡನೆಂದೂ ಹೇಳಿದ್ದ. ನಿನ್ನೆ ಬಂದಿದ್ದು ಇದಕ್ಕೇ ಆಗಿತ್ತೆಂದು ನಾನೂ ನಂಬಿದ್ದೆ.
       ಈ ಉಪ್ಪಾಗೆ ಕೂಡ ನಮ್ಮ‌ ಬಾಲ್ಯದ ಉಂಬಳವೇ. ಹುಳಿಸೊಪ್ಪೆಯೆಂದೇ ಅಡ್ಡ ಹೆಸರಿಟ್ಟುಕೊಂಡಿದ್ದ ಈ ಹಣ್ಣನ್ನ ಕೊಯ್ದು, ಸಿಗಿದು, ಬೀಜ ಬೇರ್ಪಡಿಸಿ, ಹೊಡತಲ ಮೇಲೆ ಹರಗಿ ಒಣಗಿಸೋ ತಿಂಗಳುಗಟ್ಟಲೆ ದೀರ್ಘ ಕೆಲಸಕ್ಕೆ ಪ್ರತಿಯಾಗಿ ಕೆ.ಜಿ.ಗೆ ಇಪ್ಪತ್ತು-ಮೂವತ್ತು ರೂ.ಗಳಂತೆ ಹಣ ಸಿಗುತ್ತಿತ್ತು. ಹಿಂದಿನ ವರ್ಷ ನೂರೈವತ್ತು ರೂಪಾಯಿಗಳಷ್ಟು ಶ್ರೀಮಂತವಾಗಿದ್ದ ಉಪ್ಪಾಗೆ ಈವರ್ಷ ಐವತ್ತಕ್ಕೆ ತನ್ನ ಮೌಲ್ಯವನ್ನು ಇಳಿಸಿಕೊಂಡಿತ್ತು. ಆದರೂ ಫಲ ಚೆನ್ನಾಗಿ ಬಂದಿದ್ದರಿಂದ ಒಂದು ಮರ ಏನಿಲ್ಲವೆಂದರೂ ನಾಲ್ಕೈದು ಸಾವಿರದಷ್ಟು ದುಡಿದುಕೊಡುತ್ತಿತ್ತು. ಮಜಾ ಎಂದರೆ ಹೊಡತಲಿನ ಮೇಲೆ ಉಪ್ಪಾಗೆ ಒಣಗುತ್ತಿದ್ದರೆ ತೋಟದಿಂದ ನಮ್ಮ ಕಾಲಿನ ಮೇಲೆ ಕುಂತು ರಕ್ತ ಹೀರುತ್ತಾ ಪ್ರವಾಸಕ್ಕೆ ಬರುತ್ತಿದ್ದ ಉಂಬಳಗಳು ಹೊಡತಲಿನ ಅಡಿಯ ಬೆಂಕಿಯಲ್ಲಿ ಉರಿದು ಸಾಯುತ್ತಿದ್ದವು. ಮಂಜುವಿನ ಬದುಕು ಹೊಡತಲಿನ ಉಪ್ಪರಿಗೆಯನ್ನೂ ಕಂಡಿತ್ತು. ಬೆಂಕಿಯ ಉರಿಯನ್ನೂ ಕಂಡಿತ್ತು. ಉಂಬಳದಷ್ಟೇ ಕುತೂಹಲಕಾರಿ, ಉಪ್ಪಾಗೆಯ ದರದಷ್ಟೇ ಏರಿಳತದ ಬದುಕನ್ನ ಅದೆಂಗೆ ಸಂಭಾಳಿಸಿದನೋ ಗೊತ್ತಿಲ್ಲ.
ಅರೆ, ಏಕ್ದಂ ಅವನನ್ನು ಭೂತಕಾಲಕ್ಕೆ ನೂಕಿಬಿಟ್ಟೆನಾ? ಪೂರ್ತಿ ಕತೆಯನ್ನು ಹೇಳದೇ ಹಿಂಗೆ ಮಾಡಿದ್ದು ತಪ್ಪೆಂದು ಬಯ್ಯೋದರೊಳಗೆ ಕತೆಯನ್ನು ಮುಗಿಸಿದರೆ ಚೆಂದ.
        ಮಂಜುವಿನ ಅಪ್ಪ ಮಳೆಗಾಲದ ಒಂದು ದಿನ ಹೋದ. ಇದ್ದಬಿದ್ದ ದುಡ್ಡನ್ನೆಲ್ಲ ಒಟ್ಟು ಹಾಕಿ ಸಂಸ್ಕಾರ ಮಾಡಿದ್ದಾಯ್ತು. ತಮ್ಮ ಪದವೀಧರನಾಗಿ ಊರುಬಿಟ್ಟವ ಸದ್ಯ ಬರಲಿಲ್ಲ. ಎಂಥದೇ ಕೇಸು ಆದರೂ ಮಂಜುವಿನ ವಿಚಾರಣೆಗೆ ಪೊಲೀಸರು ಬರಹತ್ತಿದರು. ಮೆರವಣಿಗೆ ಹೆಗಡೇರ ಮನೆಯ ತೋಟಕ್ಕೆ ಎರಡನೇ ಬಾರಿ ಮದ್ದು ಹೊಡೆಯಲು ಹೋಗಿದ್ದಾಗ ಹಿಂಗೇ ಬಂದ ಪೊಲೀಸರು ಹೆಗಡೇರ ಮಾತನ್ನೂ ಕೇಳದೇ ಮಂಜುವನ್ನು ಒಯ್ದರಂತೆ. ಯಾವುದೋ ಕಾಡುಕೋಣವನ್ನು ಹೊಡೆದ ಕೇಸಂತೆ. ಹದಿನೈದಿಪ್ಪತ್ತು ದಿನಗಳ ನಂತರ ಜಾಮೀನಿನ ಮೇಲೆ ಬಂದಾಗ ಅಮ್ಮ ಬೈದಳಂತಲೂ ಸುದ್ದಿಯಿದೆ. ಪೊಲೀಸರು ಸಿಕ್ಕಾಪಟ್ಟೆ ಕಾಟ ಕೊಟ್ಟರಂತಲೂ ಸುದ್ದಿಯಿದೆ. ಹೊಡತಲ ಮೇಲೆ ಒಣಗುತ್ತಿದ್ದ ಉಪ್ಪಾಗೆಯ ಹಂಗೂ ಬೇಡವೆಂಬಂತೆ ಒಂದು ದಿನ ಮೆರವಣಿಗೆ ಗುಡ್ಡದಾಚೆಗಿನ ಕರಿಕಾನಿನ ಒಳಹೊಕ್ಕವ ಮತ್ತೆ ಬರಲಿಲ್ಲ. ಎರಡು ದಿನ ಸುತ್ತಲೂ ಹುಡುಕಿದರೂ ಪತ್ತೆಯಿಲ್ಲ. ಹುಲಿ, ದೈತ್ಯ ಮಂಗಗಳು, ಕರಡಿ ಇತ್ಯಾದಿಗಳು ಇವೆಯೆಂದು ನಂಬಲಾದ ಕರಿಕಾನಿನೊಳಕ್ಕೆ ಯಾರೂ ಹೊಕ್ಕುವ ಧೈರ್ಯ ಮಾಡಲಿಲ್ಲ. ಮೊನ್ನೆ ದಾಲ್ಚಿನ್ನಿ ಮೊಗ್ಗು ಕೊಯ್ಯಲೆಂದು ಕರಿಕಾನಿಗೆ ಹೋಗಿದ್ದ ಮಾದೇವನಿಗೆ ಉಪ್ಪಾಗೆ ಮರವೊಂದರ ರೆಂಬೆ ಮೇಲೆ ಬೇತಾಳದಂತೆ ಮಲಗಿದ್ದ ಅಸ್ಥಿಪಂಜರ ಕಂಡಿತೆಂದೂ, ಅದು ಮಂಜುವಿನದ್ದೇ ಇರಬಹುದೆಂದೂ ಕಳೆದೊಂದು ವರ್ಷದಿಂದ ನಂಬಲಾಗಿದೆ. ಅವ ಮತ್ತೆ ಮುಂಬೈ ಬದಿಗೆ ಹೋಗಿದ್ದಾನೆಂದು ನಂಬಿದವರು ಅವನಮ್ಮ ಭಾಗಿ ಮತ್ತು ನಾನು ಮಾತ್ರವೇನೋ.

Comments

ಬಹಳ ದುಃಖದ ಸಂಗತಿ.. ಅಮಾಯಕರನ್ನ, ಮುಗ್ಧರನ್ನ ಹಣದಾಸೆಗೆ ಪಟ್ಟಣಿಗರು ಅಲ್ಲೋಲ ಕಲ್ಲೋಲ ಮಾಡಿದ್ದಕ್ಕೆ ನನ್ನ ಧಿಕ್ಕಾರವಿದೆ. (*ಪಟ್ಟಣಿಗರೇ ಮೂಲ ಆ ಕೇಸಲ್ಲಿ ಅಂತ ಪಕ್ಕಾ ಆಗಿರುವುದರಿಂದ ಹೇಳ್ದೆ)
ಬದುಕು ಎಲ್ಲ ದಾರಿಗಳಲ್ಲೂ ಆಯ್ಕೆಯಿಡುತ್ತದೆ. ಯಾವ ದಾರಿಯೂ ತಪ್ಪಲ್ಲ, ಸರಿಯಲ್ಲ. ಸಾಂದರ್ಭಿಕವಾಗಿ ಎಲ್ಲವೂ ತಪ್ಪಾಗಬಹುದು, ಸರಿಯೂ ಆಗಬಹುದು. ಮುಗ್ಧತೆ ಅಸಹಾಯಕತೆಯ ಪ್ರತಿಬಿಂಬ.

Popular posts from this blog

ಒಂದು ಭಾನುವಾರದ ಕತೆ

ವಿದಾಯ...

ಜಮೀನು, ಕೊಡದಲ್ಲ